Homeಮುಖಪುಟವೈಯಕ್ತಿಕ ಸಿಬ್ಬಂದಿಯನ್ನು ಸ್ಥಾಯಿಸಮಿತಿಗೆ ನೇಮಿಸಿದ ಧನಕರ್‌; ‘ಕಾನೂನುಬಾಹಿರ’ ಎಂದ ಪ್ರತಿಪಕ್ಷಗಳು

ವೈಯಕ್ತಿಕ ಸಿಬ್ಬಂದಿಯನ್ನು ಸ್ಥಾಯಿಸಮಿತಿಗೆ ನೇಮಿಸಿದ ಧನಕರ್‌; ‘ಕಾನೂನುಬಾಹಿರ’ ಎಂದ ಪ್ರತಿಪಕ್ಷಗಳು

- Advertisement -
- Advertisement -

ರಾಜ್ಯಸಭಾ ಅಧ್ಯಕ್ಷ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಮ್ಮ ಕಚೇರಿಯಲ್ಲಿರುವ ಎಂಟು ಅಧಿಕಾರಿಗಳನ್ನು ಸಂಸತ್ತಿನ ಮೇಲ್ಮನೆಯ ವ್ಯಾಪ್ತಿಯಲ್ಲಿರುವ ವಿವಿಧ ಸ್ಥಾಯಿ ಸಮಿತಿಗಳು ಮತ್ತು ಇತರ ಸಂಸದೀಯ ಸಮಿತಿಗಳಿಗೆ ನೇಮಕ ಮಾಡಿ ವಿವಾದ ಸೃಷ್ಟಿಸಿದ್ದಾರೆ.

ಜಗದೀಪ್ ಧನಕರ್ ಅವರು ತಮ್ಮ ಕಚೇರಿಯ ಸಿಬ್ಬಂದಿಗಳನ್ನು 12 ಸಂಸದೀಯ ಸ್ಥಾಯಿ ಸಮಿತಿಗಳು ಮತ್ತು ಎಂಟು ಇಲಾಖಾ ಸ್ಥಾಯಿ ಸಮಿತಿಗಳಿಗೆ  ನೇಮಿಸಿರುವ ನಿರ್ಧಾರವನ್ನು ಟೀಕಾಕಾರರು ಮತ್ತು ವಿರೋಧ ಪಕ್ಷದ ನಾಯಕರು ಪ್ರಶ್ನಿಸಿದ್ದಾರೆ. ಇದು ‘ಸಾಂಸ್ಥಿಕ ವಿಧ್ವಂಸಕತೆ’ ಮತ್ತು ‘ಕಾನೂನುಬಾಹಿರ’ ಎಂದು ಬಣ್ಣಿಸಿದ್ದಾರೆ.

ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದ್ದು, ಜಗದೀಪ್ ಧನಕರ್ ಅವರ ಕಚೇರಿಯ ಸಿಬ್ಬಂದಿಗಳಾದ, ವಿಶೇಷ ಕರ್ತವ್ಯದ ಅಧಿಕಾರಿ (OSD) ರಾಜೇಶ್ ಎನ್ ನಾಯಕ್, ಖಾಸಗಿ ಕಾರ್ಯದರ್ಶಿ (PS) ಸುಜೀತ್ ಕುಮಾರ್, ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಸಂಜಯ್ ವರ್ಮಾ ಮತ್ತು OSD ಅಭ್ಯುದಯ್ ಸಿಂಗ್ ಶೇಖಾವತ್, ಅವರ OSDಗಳಾದ ಅಖಿಲ್ ಚೌಧರಿ, ದಿನೇಶ್ ಡಿ, ಕೌಸ್ತುಭ್ ಸುಧಾಕರ್ ಭಲೇಕರ್ ಮತ್ತು PS ಅದಿತಿ ಚೌಧರಿ ಅವರನ್ನು ರಾಜ್ಯಸಭಾ ಅಧ್ಯಕ್ಷರ ಕಚೇರಿಯಿಂದ ಸ್ಥಾಯಿ ಸಮಿತಿಗಳಿಗೆ ನೇಮಕ ಮಾಡಲಾಗಿದೆ.

2021ರಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಟ್ವೀಟ್ ಮಾಡಿದ್ದು ಈಗ ಮುನ್ನೆಲೆಗೆ ಬಂದಿದೆ. ”ಜಗದೀಪ್ ಧನಕರ್ ಅವರ ಕುಟುಂಬದ ಸದಸ್ಯರೆಲ್ಲರನ್ನು ಬಂಗಾಳ ರಾಜಭವನದಲ್ಲಿ ವಿಶೇಷ ಕರ್ತವ್ಯ ಅಥವಾ ಒಎಸ್‌ಡಿಗಳನ್ನಾಗಿ ನೇಮಿಸಲಾಗಿದೆ” ಎಂದು ಅವರು ದೂರಿದ್ದರು. ಆಗ ಜಗದೀಪ್ ಧನಕರ್ ಅವರು ಬಂಗಾಳದ ರಾಜ್ಯಪಾಲರಾಗಿದ್ದರು.

“ಇಂತಹ ಕ್ರಮವು ಈ ಹಿಂದೆ ಯಾವತ್ತೂ ಘಟಿಸಿರಲಿಲ್ಲ” ಎಂದು ಹೆಸರು ಹೇಳಲಿಚ್ಛಿಸದ ರಾಜ್ಯಸಭಾ ಸಂಸದರೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಇದೇ ಆರೋಪವನ್ನು ಮಾಡಿ ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್ ಅವರೂ ಟ್ವೀಟ್‌ ಮಾಡಿದ್ದಾರೆ.

”ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸ್ಥಾಯಿ ಸಮಿತಿಗಳಲ್ಲಿ ತಮ್ಮ ಸಿಬ್ಬಂದಿಯನ್ನು ನೇಮಿಸುತ್ತಾರೆ.
ಹೌದು ಇದು ಅಭೂತಪೂರ್ವ (ಹಿಂದೆಂದೂ ಘಟಿಸಿರಲಿಲ್ಲ). ಆದರೆ ನೀಡಿರುವ ವಿವರಣೆಯೂ ಸೂಕ್ತವಾಗಿಲ್ಲ. ಅಸ್ತಿತ್ವದಲ್ಲಿರುವ ರಾಜ್ಯಸಭೆಯ ಸೆಕ್ರೆಟರಿಯಟ್‌ ಸಿಬ್ಬಂದಿಯ ಮೇಲೆ ಅಧ್ಯಕ್ಷರಿಗಿರುವ ವಿಶ್ವಾಸದ ಕೊರತೆಯನ್ನು ಇದು ತೋರಿಸುವುದಿಲ್ಲವೇ?” ಎಂದು ದಿಗ್ವಿಜಯ ಸಿಂಗ್ ಪ್ರಶ್ನೆ ಮಾಡಿದ್ದಾರೆ.

ಖ್ಯಾತ ವಕೀಲರಾದ ಪ್ರಶಾಂತ್ ಭೂಷಣ್ ಅವರು ಟ್ವೀಟ್‌ ಮಾಡಿದ್ದು, “ಇದು ಕಾನೂನುಬಾಹಿರ ಕ್ರಮ” ಎಂದು ಕರೆದಿದ್ದಾರೆ. “ಮಂಗಳವಾರ ರಾಜ್ಯಸಭಾ ಸೆಕ್ರೆಟರಿಯೇಟ್ ಬಿಡುಗಡೆ ಮಾಡಿದ ಆದೇಶದ ಪ್ರಕಾರ ರಾಜ್ಯಸಭಾ ವ್ಯಾಪ್ತಿಯಲ್ಲಿ ಬರುವ 20 ಸಮಿತಿಗಳಿಗೆ ಉಪಾಧ್ಯಕ್ಷ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರ ವೈಯಕ್ತಿಕ ಸಿಬ್ಬಂದಿಯ 8 ಸದಸ್ಯರನ್ನು ನೇಮಿಸಲಾಗಿದೆ. ಇದು ನಮಗೆ ಅಚ್ಚರಿ ಮೂಡಿಸಿದೆ” ಎಂದು ಟೀಕಿಸಿದ್ದಾರೆ. ಸಂಪೂರ್ಣವಾಗಿ ಅಕ್ರಮ ಮತ್ತು ಅಧಿಕಾರ ದುರುಪಯೋಗ ಧನಕರ್‌ ಅವರಿಂದ ನಡೆದಿದೆ ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್‌ನ ಲೋಕಸಭಾ ಸಂಸದ ಮನೀಶ್ ತಿವಾರಿ ಅವರು ಪ್ರತಿಕ್ರಿಯಿಸಿ, “ಉಪರಾಷ್ಟ್ರಪತಿಯವರು ಕೌನ್ಸಿಲ್ ಆಫ್ ಸ್ಟೇಟ್ಸ್ ಎಕ್ಸ್-ಆಫಿಶಿಯೋ ಅಧ್ಯಕ್ಷರಾಗಿದ್ದಾರೆ. ಸಂಸದೀಯ ಸ್ಥಾಯಿ ಸಮಿತಿಗಳಲ್ಲಿ ಅವರು ವೈಯಕ್ತಿಕ ಸಿಬ್ಬಂದಿಯನ್ನು ಹೇಗೆ ನೇಮಿಸಲು ಸಾಧ್ಯ? ಇದು ಸಾಂಸ್ಥಿಕ ವಿಧ್ವಂಸಕತೆಗೆ ಸಮಾನವಾಗುವುದಿಲ್ಲವೇ?” ಎಂದು ಪ್ರಶ್ನೆ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read