ಇತ್ತೀಚೆಗೆ ಉತ್ತರ ಪ್ರದೇಶದ ಪತ್ರಕರ್ತರೊಬ್ಬರು ಚುನಾವಣಾ ಸಮಯದಲ್ಲಿ ನೀಡಿದ ಭರವಸೆಗಳ ಬಗ್ಗೆ ರಾಜ್ಯ ಸಚಿವರನ್ನು ಪ್ರಶ್ನಿಸಿದ್ದಕ್ಕೆ ಬಂಧನಕ್ಕೊಳಗಾಗಿದ್ದರು. ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಬುಧ್ ನಗರ ಗ್ರಾಮಕ್ಕೆ ಭೇಟಿ ನೀಡಿರುವ ಇಂಡಿಯನ್ ಎಕ್ಸ್‌ಪ್ರೆಸ್ ತಂಡವು ಅಲ್ಲಿನ ಸಮಸ್ಯೆಗಳ ಸರಮಾಲೆಯನ್ನು ವರದಿ ಮಾಡಿದೆ. ಬಹುಪಾಲು ಮನೆಗಳಲ್ಲಿ ಶೌಚಾಲಯಗಳಿಲ್ಲ, ಮುಖ್ಯ ರಸ್ತೆಗೆ ಸಂಪರ್ಕವಿಲ್ಲ, ಚರಂಡಿ ನೀರು ಬೀದಿಗೆ ಹರಿಯುತ್ತಿದೆ ಎಂಬ ಕರುಣಜನಕ ಸ್ಥಿತಿಯನ್ನು ಬಿಚ್ಚಿಟ್ಟಿದೆ.
80 ವರ್ಷದ ಶಿವದೇಯಿ ಎಂಬ ಹಿರಿಯ ಮಹಿಳೆಯನ್ನು ಎಕ್ಸ್‌ಪ್ರೆಸ್ ಪತ್ರಕರ್ತರು ಮಾತನಾಡಿಸಿದ್ದಾರೆ. “ನನ್ನ ಜೀವಿತಾವಧಿಯಲ್ಲಿ ಶೌಚಾಲಯ ಬಳಸುವ ಭರವಸೆಯನ್ನು ಹೊಂದಿಲ್ಲ. ಆದರೆ ಈ ವಯಸ್ಸಿನಲ್ಲಿ ಹಗಲು-ರಾತ್ರಿ ಬಯಲು ಶೌಚಾಲಯಕ್ಕೆ ಹೋಗುವುದು ತ್ರಾಸದಾಯಕ” ಎಂದಿದ್ದಾರೆ.
ಸುಮಾರು 1,000 ಜನರಿರುವ ಬುಧ್ ಗ್ರಾಮದಲ್ಲಿ ಅನೇಕ ಮನೆಗಳಲ್ಲಿ ಶೌಚಾಲಯವಿಲ್ಲ. ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ಬಂದಾಗ ರಸ್ತೆಗಳಲೆಲ್ಲ ನೀರು ತುಂಬಿಕೊಂಡು ನಡೆಯಲು ಆಗುವುದಿಲ್ಲ. ನಮ್ಮಂಥ ಹೀನ ಸ್ಥಿತಿ ಯಾರಿಗೂ ಬೇಡ ಅನ್ನುತ್ತಾರೆ 45 ವರ್ಷದ ಮತ್ತೊಬ್ಬ ನಿವಾಸಿ ಬಿರ್ಪಾಲ್ ಸಿಂಗ್.
“ನಮ್ಮಿಂದ ಮತ ಹಾಕಿಸಿಕೊಂಡವರು ಶಾಸಕರು, ಮಂತ್ರಿಗಳು, ಸಂಸದರಾಗಿದ್ದಾರೆ. ಆದರೆ ನಾವು ಇದ್ದ ಸ್ಥಳದಲ್ಲಿಯೇ ಉಳಿದಿದ್ದೇವೆ. ಬಯಲು ಶೌಚ ಮುಕ್ತ ಗ್ರಾಮಗಳು ಎಂದು ಭಾಷಣ ಮಾಡುತ್ತಾರೆ. ಆದರೆ ನಮ್ಮ ಕುಟುಂಬದ ಎಲ್ಲಾ 10 ಸದಸ್ಯರು ಶೌಚಕ್ಕೆ ಹೊಲಗಳನ್ನು ಬಳಸುತ್ತಿದ್ದೇವೆ ಎಂದಿದ್ದಾರೆ.
ಕಳೆದ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬುಧ್ ನಗರ & ಖಾಂಡ್ವಾ ಗ್ರಾಮಕ್ಕೆ ಮದುವೆ ಮಂಟಪ, ಸಾರ್ವಜನಿಕ ರಸ್ತೆ ಮತ್ತು ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮಾಡಿಕೊಡುವುದಾಗಿ ಹಾಲಿ ಆ ಕ್ಷೇತ್ರದ ಶಾಸಕರು ಮತ್ತು ಮಾಧ್ಯಮಿಕ ಶಿಕ್ಷಣ ರಾಜ್ಯ ಸಚಿವರಾದ ಗುಲಾಬ್ ದೇವಿಯವರು ಭರವಸೆ ನಿಡಿದ್ದರು. ಆದರೆ ಯಾವೊಂದು ಅಭಿವೃದ್ದಿ ಕೆಲಸವೂ ಆಗಿಲ್ಲ, ಕನಿಷ್ಠ ಮೂಲಭೂತ ಸೌಲಭ್ಯಗಳು ದೊರಕಿಲ್ಲ ಎಂದು ಸ್ಥಳೀಯ ಪತ್ರಕರ್ತ ಮತ್ತು ಯೂಟ್ಯೂಬರ್ ಸಂಜಯ್ ರಾಣಾ ಎಂಬುವವರು ಇತ್ತೀಚಿಗೆ ಸಚಿವರನ್ನು ಪ್ರಶ್ನಿಸಿದ್ದರು. ಅಷ್ಟಕ್ಕೆ ಅವರ ಮೇಲೆ “ನಕಲಿ” ಪತ್ರಕರ್ತ ಮತ್ತು ರಾಜ್ಯ ಸಚಿವರ ಕಾರ್ಯಕ್ರಮವೊಂದರಲ್ಲಿ ಸರ್ಕಾರಿ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಸ್ಥಳೀಯ ಬಿಜೆಪಿ ಮುಖಂಡ, ಬಿಜೆವೈಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶುಭಂ ರಾಘವ್ ಪೊಲೀಸ್ ದೂರು ದಾಖಲಿಸಿದ್ದರು. CrPC ಯ ಸೆಕ್ಷನ್ 151 ರ ಅಡಿಯಲ್ಲಿ ಪೊಲೀಸರು ರಾಣಾನನ್ನು ಬಂಧಿಸಿದ್ದರು. ಆನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಬಿಡುಗಡೆ ನಂತರ ಮಾತನಾಡಿದ ಪತ್ರಕರ್ತ ರಾಣಾ ಅವರು “ದೂರದಾರ ವ್ಯಕ್ತಿ ಬಗ್ಗೆ ನನಗೆ ಗೊತ್ತಿಲ್ಲ. ಅವರನ್ನು ನಾನು ಎಂದೂ ಭೇಟಿಯಾಗಿಲ್ಲ. ಆದರೆ ನಾನು ಏನೋ ಮಹಾ ಅಪರಾಧ ಮಾಡಿದ ಹಾಗೆ ನನ್ನ ಕೈಗೆ ಕೋಳ ಹಾಕಿ ಪೊಲೀಸರು ಮೆರವಣಿಗೆ ರಿತಿ ಕರೆದುಕೊಂಡು ಹೋದರು. 30 ಗಂಟೆಗಳ ಕಾಲ ನನ್ನನ್ನು ಬಂಧನದಲ್ಲಿಟ್ಟರು. ನಾನು ಸಚಿವರನ್ನು ಏನು ಪ್ರಶ್ನಿಸಿದ್ದೇನೆ ಎಂಬುದನ್ನು ವಿಡಿಯೋದಲ್ಲಿ ನೋಡಿ. ನಾವು ಅವರಿಗೆ ಮತ ಹಾಕಿದ್ದೇವೆ. ಹಾಗಾಗಿ ಅವರನ್ನು ಪ್ರಶ್ನಿಸುವ ಹಕ್ಕು ನಮಗಿದೆ” ಎಂದಿದ್ದಾರೆ.
ಈ ಕುರಿತು ಸಚಿವರಾದ ಗುಲಾಬ್ ದೇವಿಯವರನ್ನು ಇಂಡಿಯನ್ ಎಕ್ಸ್‌ಪ್ರೆಸ್ ಪ್ರಶ್ನಿಸಿದಾಗ, “ಶಾಸಕರು ಅನುದಾನದಿಂದ ಆ ಊರಿಗೆ ರಸ್ತೆ ಮಂಜೂರಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗುವುದು. ಜಿಲ್ಲಾ ಪಂಚಾಯ್ತಿಯಿಂದ ಒಳಚರಂಡಿ ವ್ಯವಸ್ಥೆ ಮತ್ತು ಶಾಲಾ ಆಟದ ಮೈದಾನ ವ್ಯವಸ್ಥೆ ಮಾಡಲಾಗುವುದು. ಶೌಚಾಲಯಗಳು ಎಷ್ಟಿವೆ ಎಂಬುದರ ಕುರಿತು ಸಮೀಕ್ಷೆ ನಡೆಸಲಾಗುವುದು” ಎಂದಿದ್ದಾರೆ.
ಇದನ್ನೂ ಓದಿ; ಉತ್ತರ ಪ್ರದೇಶ: ಚುನಾವಣಾ ಭರವಸೆಗಳ ಬಗ್ಗೆ ಸಚಿವರನ್ನು ಪ್ರಶ್ನಿಸಿದ ಯುಟ್ಯೂಬರ್ ಬಂಧನ


