ಹಿಂದುತ್ವದ ಸುಳ್ಳುಗಳ ಬಗ್ಗೆ ಪೋಸ್ಟ್ ಮಾಡಿದ್ದಕ್ಕೆ ಶೇಷಾದ್ರಿಪುರಂ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ನಟ ಚೇತನ್‌ಗೆ ನಗರದ 32ನೇ ಎಸಿಎಂಎಂ ನ್ಯಾಯಾಯಲ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ, ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು ಎಂಬುದು ಸುಳ್ಳು ಎಂದು ಪೋಸ್ಟ್ ಹಾಕಿದ್ದಕ್ಕೆ ನಟ ಚೇತನ್‌ರವರ ವಿರುದ್ಧ ಶಿವಕುಮಾರ್ ಎಂಬುವವರು ದೂರು ನೀಡಿದ್ದರು. ಆ ಆಧಾರದಲ್ಲಿ ಚೇತನ್ ಮೇಲೆ ಐಪಿಸಿ ಸೆಕ್ಷನ್ 295A, 505B ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
“ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ.
ಸಾವರ್ಕರ್ ಹೇಳಿಕೆ : ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ‘ರಾಷ್ಟ್ರ’ ಪ್ರಾರಂಭವಾಯಿತು -> ಇದು ಒಂದು ಸುಳ್ಳು
1992 ರಲ್ಲಿ : ಬಾಬರಿ ಮಸೀದಿ ‘ರಾಮನ ಜನ್ಮಭೂಮಿ’ –> ಇದು ಒಂದು ಸುಳ್ಳು
ಈಗ 2023 ರಲ್ಲಿ : ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು’ -> ಇದು ಕೂಡ ಒಂದು ಸುಳ್ಳು
ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು `ಸತ್ಯವೇ ಸಮಾನತೆ” ಎಂದು ಚೇತನ್ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದರು.
ಮತ್ತೊಂದು ಪೋಸ್ಟ್‌ನಲ್ಲಿ “ಉರಿಗೌಡ ಮತ್ತು ನಂಜೇಗೌಡರ ಸೃಷ್ಟಿ ಮತ್ತು ಚಿತ್ರಣವನ್ನು ಒಕ್ಕಲಿಗರ ಸಂಘ ವಿರೋಧಿಸುತ್ತದೆ. 2 ಕಾರಣಗಳು : 1. ಸ್ವಾತಂತ್ರ್ಯ ಹೋರಾಟಗಾರನನ್ನು (ಟಿಪ್ಪು) ಕೊಂದ ಖಳನಾಯಕರಾಗಲು ಬಯಸುವುದಿಲ್ಲ; 2. ಒಕ್ಕಲಿಗರು ಮತ್ತು ಮುಸ್ಲಿಮರ ನಡುವೆ ವೈಮನಸ್ಸು ಸೃಷ್ಟಿಸಲು ಬಯಸುವುದಿಲ್ಲ
ಒಕ್ಕಲಿಗ ಲಾಬಿಗಳು ಜಾತಿ ಆಧಾರಿತ ವೋಟ್ ಬ್ಯಾಂಕ್ ಅನ್ನು ಹಿಂದುತ್ವಕ್ಕೆ ಕಳೆದುಕೊಳ್ಳಲು ಬಯಸದಿರುವುದು ಚುನಾವಣಾದಲ್ಲಿ ಕೂಡ ಒಂದು ಮುಖ್ಯ ಕಾರಣವಾಗಿದೆ” ಎಂದು ಚೇತನ್ ಬರೆದಿದ್ದರು.
ಮೂರನೇಯದಾಗಿ, “20 ಮಾರ್ಚ್ 1927 ರಲ್ಲಿ, ಬಾಬಾಸಾಹೇಬ್ ಮತ್ತು ಸಾವಿರಾರು ದಲಿತರು ಮಹಾಡ್ ನಗರದ ಚೌಡರ್ ಕೆರೆಯಲ್ಲಿ ನೀರು ಕುಡಿದರು. ಅಸ್ಪೃಶ್ಯರು ಬ್ರಾಹ್ಮಣ್ಯದ ಅಡಿಯಲ್ಲಿ ಸಾರ್ವಜನಿಕವಾಗಿ ನೀರಿನಿಂದ ವಂಚಿತರಾಗುವುದನ್ನು ಅವರೆಲ್ಲರು ವಿರೋಧಿಸಿದರು
2023 ಕರ್ನಾಟಕದಲ್ಲಿ, ನಾವು ಮಹಾಡ್ ಸತ್ಯಾಗ್ರಹದಲ್ಲಿ ಪ್ರದರ್ಶಿಸಿದ ಸೈದ್ಧಾಂತಿಕ ಸಮಾನತೆಯು, ನಮ್ಮ ಅತ್ಯಂತ ಹಿಂದುಳಿದವರ ಬಗ್ಗೆ ಕಾಳಜಿ, ಮತ್ತು ನಿಸ್ವಾರ್ಥ ಧೈರ್ಯವನ್ನು ನಾವು ಪುನರಾವರ್ತಿಸಬೇಕು” ಎಂಬ ಪೋಸ್ಟ್ ಹಾಕಿದ್ದರು.
ಈ ಮೂರು ಪೋಸ್ಟ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಲಾಗಿದೆ. 2022ರ ಫೆಬ್ರವರಿಯಲ್ಲಿಯೂ ಸಹ ಹೈಕೋರ್ಟ್ ನ್ಯಾಯಾಧೀಶರ ತೀರ್ಪಿನ ಕುರಿತು ವರ್ಷಗಳ ಹಿಂದೆ ಚೇತನ್ ಟ್ವೀಟ್ ಮಾಡಿದ್ದಾರೆ ಎಂಬ ಪ್ರಕರಣದಲ್ಲಿ ಚೇತನ್‌ರವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಉರಿಗೌಡ – ನಂಜೇಗೌಡ ಸುಳ್ಳು ಎಂದ ನಟ ಚೇತನ್ ಬಂಧನ: ವ್ಯಾಪಕ ಆಕ್ರೋಶ


