Homeಕರ್ನಾಟಕನಿಲ್ಲದ ‘ಟಿಪ್ಪು ನಿಜ ಕನಸುಗಳು’ ನಾಟಕ ಪ್ರದರ್ಶನ; ಸ್ವಾಮೀಜಿ ಮಾತಿಗೆ ಕವಡೆ ಕಿಮ್ಮತ್ತೂ ನೀಡದ ರಂಗಾಯಣ

ನಿಲ್ಲದ ‘ಟಿಪ್ಪು ನಿಜ ಕನಸುಗಳು’ ನಾಟಕ ಪ್ರದರ್ಶನ; ಸ್ವಾಮೀಜಿ ಮಾತಿಗೆ ಕವಡೆ ಕಿಮ್ಮತ್ತೂ ನೀಡದ ರಂಗಾಯಣ

ಟಿಪ್ಪುವನ್ನು ಕೊಂದಿದ್ದು ಉರಿಗೌಡ, ದೊಡ್ಡನಂಜೇಗೌಡ ಎಂಬ ನಕಲಿ ಇತಿಹಾಸವನ್ನು ಈ ನಾಟಕದಲ್ಲಿ ಸೇರಿಸಲಾಗಿದೆ

- Advertisement -
- Advertisement -

“ಉರಿಗೌಡ, ದೊಡ್ಡ ನಂಜೇಗೌಡ ಎಂಬ ಮಂಡ್ಯ ಒಕ್ಕಲಿಗರು ಟಿಪ್ಪು ಸುಲ್ತಾನರನ್ನು ಕೊಂದರು” ಎಂದು ನಕಲಿ ಇತಿಹಾಸವನ್ನು ಪ್ರತಿಪಾದಿಸುತ್ತಿರುವ ‘ಟಿಪ್ಪು ನಿಜ ಕನಸುಗಳು’ ನಾಟಕದ ಪ್ರದರ್ಶನವನ್ನು ಮೈಸೂರು ರಂಗಾಯಣ ಮುಂದುವರಿಸಿದೆ.

“ಕಲ್ಪಿತ ಪಾತ್ರಗಳನ್ನು ಇತಿಹಾಸ ಎನ್ನಲಾಗದು, ಈ ಕುರಿತು ಆಧಾರ ರಹಿತವಾಗಿ ಮಾತನಾಡುವುದು ಸಮುದಾಯಕ್ಕೆ ಮಾಡುವ ಅಪಚಾರ” ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಹೇಳಿಕೆ ನೀಡಿದ ಬಳಿಕವೂ ನಕಲಿ ಇತಿಹಾಸದ ಪ್ರದರ್ಶನವನ್ನು ರಂಗಾಯಣ ನಿಲ್ಲಿಸಿಲ್ಲ!

“ಸ್ವಾಮೀಜಿಯವರು ಮಾತುಕತೆ ನಡೆಸಿದ ಬಳಿಕ ಪ್ರತಿಕ್ರಿಯಿಸುತ್ತಿರುವ ಬಿಜೆಪಿ ನಾಯಕರು ಉರಿಗೌಡ, ನಂಜೇಗೌಡ ಕುರಿತು ಮಾತನಾಡುವುದನ್ನು ಹಾಗೂ ಸಿನಿಮಾ ಮಾಡುವುದನ್ನು ನಿಲ್ಲಿಸುತ್ತೇವೆ” ಎಂದು ಹೇಳುತ್ತಿದ್ದಾರೆ. ಆದರೆ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಬರೆದು ನಿರ್ದೇಶಿಸಿರುವ ‘ಟಿಪ್ಪು ನಿಜಕನಸುಗಳು’ ನಾಟಕ ಮಾತ್ರ ಸುಳ್ಳು ಇತಿಹಾಸವನ್ನೇ ಪ್ರತಿಪಾದಿಸುತ್ತಾ ಮುಂದುವರಿದಿದೆ. ಮಂಗಳವಾರ (ಮಾರ್ಚ್ 21) ಸಂಜೆ 6.30ಕ್ಕೆ ಮೈಸೂರು ರಂಗಾಯಣದ ಭೂಮಿಗೀತದಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

‘ನಾನುಗೌರಿ.ಕಾಂ’ ತಂಡವು ಮೈಸೂರು ರಂಗಾಯಣಕ್ಕೆ ಕರೆ ಮಾಡಿದಾಗ, “ಇಂದು ನಾಟಕ ಪ್ರದರ್ಶನವಿದೆ. ಟಿಕೆಟ್‌ ಸೋಲ್ಡ್‌ ಔಟ್‌ ಆಗಿ ಒಂದು ವಾರವೇ ಆಯ್ತು” ಎಂದು ರಂಗಾಯಣ ಸಿಬ್ಬಂದಿಯೊಬ್ಬರು ಖಚಿತಪಡಿಸಿದ್ದಾರೆ.

ನಾಟಕ ಪ್ರದರ್ಶನಗಳು ಮುಂದೆಯೂ ನಡೆಯುತ್ತದೆಯೇ ಎಂದು ಕೇಳಲು ಅಡ್ಡಂಡ ಕಾರ್ಯಪ್ಪ ಅವರಿಗೆ ಕರೆ ಮಾಡಲಾಗಿತ್ತು. ಆದರೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

ಮಾರ್ಚ್ 19ರಂದು 50ನೇ ಪ್ರದರ್ಶನವನ್ನೂ ನಾಟಕ ಕಂಡಿದೆ. ರಂಗವಿನ್ಯಾಸವನ್ನು ಶಶಿಧರ ಅಡಪ, ವಸ್ತ್ರಪರಿಕರ ವಿನ್ಯಾಸವನ್ನು ಪ್ರಮೋದ್ ಶಿಗ್ಗಾಂವ್, ಸಂಗೀತ ನಿರ್ದೇಶನವನ್ನು ಧನಂಜಯ ಆರ್‌.ಸಿ., ಸುಬ್ರಮಣ್ಯ ಮೈಸೂರು, ಬೆಳಕು ನಿರ್ವಹಣೆಯನ್ನು ಮಹೇಶ್ ಕಲ್ಲತ್ತಿ ಮಾಡಿದ್ದಾರೆ.

“ಮುನಿರತ್ನ ಅವರು ಉರಿಗೌಡ, ನಂಜೇಗೌಡ ಹೆಸರಲ್ಲಿ ಸಿನಿಮಾ ಮಾಡಲು ಹೊರಟಿದ್ದನ್ನು ಶ್ರೀಗಳು ತಡೆದಿದ್ದಾರೆ. ಆದರೆ ಉರಿಗೌಡ, ನಂಜೇಗೌಡರೇ ಟಿಪ್ಪುವನ್ನು ಕೊಂದಿದ್ದು ಎಂದು ಪ್ರತಿಪಾದಿಸುತ್ತಿರುವ ನಾಟಕ ಪ್ರದರ್ಶನವೂ ನಿಲ್ಲಬೇಕು” ಎಂಬ ಒತ್ತಾಯಗಳು ಕೇಳಿಬಂದಿವೆ.

ನಾಟಕ ನಿರ್ಬಂಧಕ್ಕೆ ಆಗ್ರಹ

ಆಧಾರ ರಹಿತವಾಗಿ ರಚಿತವಾಗಿರುವ ನಾಟಕ ಪ್ರದರ್ಶನವನ್ನು ನಿಲ್ಲಿಸಬೇಕು ಎಂಬ ಆಗ್ರಹಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಅನೇಕರು ಪೋಸ್ಟ್‌ಗಳನ್ನು ಹಾಕಿದ್ದಾರೆ.

ಹಿರಿಯ ಪತ್ರಕರ್ತರಾದ ಸನತ್‌ ಕುಮಾರ್‌ ಬೆಳಗಲಿಯವರು, “ಉರಿ, ನಂಜು ಕುರಿತ ಅಡ್ಡಾದಿಡ್ಡಿಯ ನಾಟಕವೂ ರದ್ದಾಗಲಿ. ಆದಿ ಚುಂಚನಗಿರಿ ಶ್ರೀಗಳ ನಿಲುವು ಸರಕಾರಕ್ಕೂ ಮಾದರಿಯಾಗಲಿ. ಸರ್ಕಾರ ಮಾಡುವ ಕೆಲಸವನ್ನು ಅವರು ಮಾಡಿದ್ದಾರೆ. ಸಿ.ಎಂ.ಬೊಮ್ಮಾಯಿಯವರೇ ದಯವಿಟ್ಟು ರಂಗಾಯಣದ ದುರ್ಬಳಕೆ ಯನ್ನು ನಿರ್ಬಂಧಿಸಿ” ಎಂದು ಒತ್ತಾಯಿಸಿದ್ದಾರೆ.

ಲೇಖಕ ನಾಗೇಗೌಡ ಕೀಲಾರ ಅವರು ಪೋಸ್ಟ್ ಮಾಡಿದ್ದು, “ಒಕ್ಕಲಿಗ ಸಂಘದ ಅಧ್ಯಕ್ಷರು ಅಡ್ಡಂಡ ಕಾರ್ಯಪ್ಪ ಅವರನ್ನು ತಮ್ಮ ಆಫೀಸ್‌ಗೆ ಕರೆಸಿ ಒಂದು ಒಳ್ಳೆಯ ಪಂದಿಕರಿ ಊಟ ಹಾಕಿಸಿ ಟಿಪ್ಪುವಿನ ನಿಜ ಕನಸುಗಳು ನಾಟಕ ಆಡಿಸೋದು ನಿಲ್ಲಿಸಪ್ಪ ಅಂತ ಪ್ರೀತಿಯಿಂದ ಬುದ್ಧಿವಾದ ಹೇಳಬೇಕು. ಹಂಗೂ ನಾಟಕ ಆಡಬೇಕು ಅಂತ ಇದ್ದರೆ ಉರಿಗೌಡ ಮತ್ತು ನಂಜೇಗೌಡ ಅನ್ನುವ ಕಪೋಲಕಲ್ಪಿತ ಪಾತ್ರಗಳನ್ನು ಡ್ರಾಪ್ ಮಾಡಿ ನಾಟಕ ಆಡಿಸಿ ಅಂತ ಸ್ಟ್ರಾಂಗ್ ಆಗಿ ಹೇಳಬೇಕು” ಎಂದಿದ್ದಾರೆ.

ಸಿಪಿಐಎಂ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡರು ಪ್ರತಿಕ್ರಿಯಿಸಿ, “ಉರೀಗೌಡ – ನಂಜೇಗೌಡ ಸಿನಿಮಾ ರದ್ದಾಗುವುದಾದರೆ, ಉರಿ – ನಂಜು ಪಾತ್ರವಿರುವ ಅಡ್ಡಂಡ ಕಾರ್ಯಪ್ಪನವರ ಟಿಪ್ಪುವಿನ ಕುರಿತ ವಿಕೃತ ನಾಟಕವೂ ರದ್ದಾಗಬೇಕಲ್ಲವೆ?” ಎಂದು ಪ್ರಶ್ನಿಸಿದ್ದಾರೆ.

ಉರಿಗೌಡ, ನಂಜೇಗೌಡ ವಿವಾದದ ಕುರಿತು ಶ್ರಿಗಳು ಹೇಳಿದ್ದೇನು?

“ದೇಜಗೌ ಅವರು ಸಂಪಾದನೆ ಮಾಡಿರುವ ‘ಸುವರ್ಣ ಮಂಡ್ಯ’ ಕೃತಿಯಲ್ಲಿನ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಹ.ಕ.ರಾಜೇಗೌಡರು ಬರೆದಿದ್ದಾರೆ. ಒಂದೊಂದು ವಿಚಾರಗಳು ಒಂದೊಂದು ಕೃತಿಯಲ್ಲಿ ಸಾಮಾನ್ಯವಾಗಿ ಬಂದಿರುತ್ತವೆ. ಹ.ಕ.ರಾಜೇಗೌಡರು ಬರೆದಿರುವುದರಲ್ಲಿ ನೇರವಾಗಿ ಟಿಪ್ಪು ಮತ್ತು ಉರಿಗೌಡ, ನಂಜೇಗೌಡರ ವಿಚಾರ ಪ್ರಸ್ತಾಪವಾಗಿಲ್ಲ.”

“ಇದುವರೆಗೆ ಗೊಂದಲಗಳು ಉಂಟಾಗಿವೆ. ಯುವಕರ ಅಮೂಲ್ಯವಾದ ಸಮಯವನ್ನು ವಿನಾಕಾರಣವಾದ ಚರ್ಚೆಯ ಮೂಲಕ ಹಾಳು ಮಾಡಬಾರದು. ಆಧುನಿಕ ಜಗತ್ತಿಗೆ ಸರಿಯಾದ ಮಾಹಿತಿಯನ್ನು ಕೊಡದೆ ದಾರಿ ತಪ್ಪಿಸುವ ಕೆಲಸ ಆಗಬಾರದು.”

“ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿರುವವರಿಗೆ ತಿಳಿಹೇಳಲಾಗಿದೆ. ಸಿ.ಟಿ.ರವಿ ಇರಬಹುದು, ಅಶ್ವತ್ಥ ನಾರಾಯಣ ಇರಬಹುದು, ಗೋಪಾಲಯ್ಯ ಇರಬಹುದು. ಇವರೆಲ್ಲರಿಗೂ ಇತಿಹಾಸದ ಹಿನ್ನೆಲೆಯನ್ನು ಸರಿಯಾಗಿ ಮನದಟ್ಟು ಮಾಡಿಕೊಟ್ಟಿದ್ದರಿಂದ ಸುಮ್ಮನಾಗುತ್ತಾರೆಂದು ಭಾವಿಸುತ್ತೇನೆ.”

“ಕಲ್ಪನೆ ಮಾಡಿಕೊಂಡು ಬರೆಯುವಂತಹದ್ದು ಕಾದಂಬರಿಯಾಗುತ್ತದೆ. ಶಾಸನಗಳು ಮತ್ತು ಇತಿಹಾಸದ ಹಿನ್ನೆಲೆಯಲ್ಲಿ ಬರೆದಿರುವಂತಹದ್ದು ಮುಂದಿನ ಪೀಳಿಗೆಗೆ ಒಂದಿಷ್ಟು ಶಕ್ತಿಯಾಗುತ್ತದೆ. ಅಂಥಹದ್ದು ಯಾವುದು ಕೂಡ ಇಲ್ಲಿಯವರೆಗೂ ಕಂಡುಬಂದಿಲ್ಲ. ಹೀಗಾಗಿ ಇಂತಹ ಹೇಳಿಕೆಗಳ ಮೂಲಕ ಯುವಕರಲ್ಲಿ, ಸಮಕಾಲೀನ ಜಗತ್ತಿನಲ್ಲಿ ಗೊಂದಲ ಸೃಷ್ಟಿ ಮಾಡಿ ಶಕ್ತಿಯನ್ನು ಹಾಳು ಮಾಡಬಾರದು, ಸಮುದಾಯಕ್ಕೆ ಧಕ್ಕೆಯನ್ನು ಉಂಟುಮಾಡಬಾರದು.”

“ಮುನಿರತ್ನ ಅವರು ನಮ್ಮಲ್ಲಿ ಮಾತನಾಡಿದ್ದಾರೆ. ‘ಯಾರಿಗೂ ಕೂಡ ನೋವುಂಟು ಮಾಡುವ ಉದ್ದೇಶ ನಮಗೆ ಇಲ್ಲ, ಅಂತಹ ಕೆಲಸ ಮಾಡುವುದಿಲ್ಲ’ ಎಂಬ ಮಾತು ಕೊಟ್ಟು ಹೋಗಿದ್ದಾರೆ. ಐತಿಹಾಸಿಕ ಹಿನ್ನೆಲೆಯ ಸ್ಪಷ್ಟತೆ ಇರುವ ಕಾಲಘಟ್ಟದಲ್ಲಿ, ಸಮುದಾಯವನ್ನು ಪ್ರತಿನಿಧಿಸುವಂತಹ ಇಬ್ಬರು ವ್ಯಕ್ತಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಸೂಚ್ಯವಲ್ಲ, ಸೂಕ್ತವೂ ಅಲ್ಲ ಅಂತ ಅವರಿಗೆ ಹೇಳಿದ್ದೇವೆ.”

“ಸಾಕಷ್ಟು ದಿನಗಳಿಂದ ಗೊಂದಲಗಳು ಸೃಷ್ಟಿಯಾಗಿವೆ. ಇದಕ್ಕೆ ಸಂಬಂಧಪಟ್ಟಂತೆ ಮೊನ್ನೆ ಒಂದು ಪೋಸ್ಟರ್‌ ಕೂಡ ನೋಡಿದೆ. ರಾಜಕಾರಣಿ, ಮಂತ್ರಿ ಹಾಗೂ ನಿರ್ಮಾಪಕರೂ ಆಗಿರುವಂತಹ ಮುನಿರತ್ನ ಅವರು ಉರಿಗೌಡ, ನಂಜೇಗೌಡರ ಸಿನಿಮಾ ಮಾಡುತ್ತೇನೆ ಎಂದಿದ್ದರು. ಸರಿಯಾಗಿ ಸಂಶೋಧನೆಯಾಗದೆ ಎಲ್ಲಿ ಬೇಕಾದರೂ ಅಲ್ಲಿ ಮಾತನಾಡುವುದು ಸೂಕ್ತವಲ್ಲ.”

ಇತಿಹಾಸವನ್ನು ಅರಿತವರು ಇತಿಹಾಸ ಸೃಷ್ಟಿಸಲು ಸಾಧ್ಯ. ಇತಿಹಾಸ ಅರಿಯುವುದು ಎಂದರೆ- ಆಯಾ ಕಾಲದಲ್ಲಿದ್ದ ವ್ಯಕ್ತಿಗಳಿಗೆ ಪೂರಕವಾಗಿ ಬೇಕಾದ ಶಿಲಾಶಾಸನಗಳು, ತಾಳೆಗರಿಗಳು ಇರಬಹುದು ಅಥವಾ ಅಂದಿನ ಸಮಕಾಲೀನರು ಬರೆದ ಚರಿತ್ರೆಗಳು ಇರಬಹುದು. ಇಷ್ಟು ಸಿಗದೆ ಬರೆದದ್ದು ಗೊಂದಲ ಮತ್ತು ಅನುಮಾನಕ್ಕೆ ಕಾರಣವಾಗುತ್ತದೆ.

ಉರಿಗೌಡ, ನಂಜೇಗೌಡರ ಬಗೆಗೆ ಇತಿಹಾಸವನ್ನು ಸಾರುವಂತಹ ಶಾಸನಗಳು ಸಿಕ್ಕದ್ದೇಯಾದರೆ  ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಒದಗಿಸಬಹುದು. ಅವುಗಳನ್ನು ನಂತರದಲ್ಲಿ ಕ್ರೂಢೀಕರಿಸಿ ಸಂಶೋಧನೆ ಮಾಡಲಾಗುವುದು. ಶಾಸನ ತಜ್ಞರು, ಸಂಶೋಧಕರು ನಮ್ಮಲ್ಲಿ ಇದ್ದಾರೆ. ತಂತ್ರಜ್ಞಾನವೂ ಇದೆ. ಸಂಶೋಧಕರೂ ಇದ್ದಾರೆ. ತಂದುಕೊಟ್ಟ ಮಾಹಿತಿಯನ್ನು ಇವರೆಲ್ಲರ ಮೂಲಕ ಓರೆಗೆ ಹಚ್ಚಲಾಗುತ್ತದೆ. ಆದರೆ ಪ್ರಸ್ತುತ ನಡೆಯುತ್ತಿರುವಂತಹದ್ದು ಗೊಂದಲಕ್ಕೆ ಮತ್ತು ಒಂದು ಸಮುದಾಯದ ಭಾವನೆಗೆ ಧಕ್ಕೆ ತರುವ ಕೆಲಸವಾಗಿದೆ.

-ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರು
(ಮಾಧ್ಯಮಗಳು ಮಾಡಿರುವ ವಿಡಿಯೊ ವರದಿಯ ಸಂಕ್ಷಿಪ್ತ ಸಾರಾಂಶ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. Swamiji has time. Let him read the freedom movement of history & facts. Let him teach the people of Karnataka too. We welcome such initiatives.
    Thank u sir.

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...