ಕಾಂಗ್ರೆಸ್ ನಾಯಕ, ವಯನಾಡ್ ಸಂಸದ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಸ್ಥಾನ ಅನರ್ಹಗೊಳಿಸಿರುವುದಕ್ಕೆ ಕಾಂಗ್ರೆಸ್ ಕಿಡಿಕಾರಿದೆ. ಲೋಕಸಭಾ ಸೆಕ್ರಟೇರಿಯಟ್‌ರವರ ಕ್ರಮವನ್ನು ಉಗ್ರವಾಗಿ ಖಂಡಿಸಿರುವ ಕಾಂಗ್ರೆಸ್ ಮತ್ತು ಪ್ರತಿಪಕ್ಷದ ನಾಯಕರು ಪ್ರಜಾಪ್ರಭುತ್ವ ಸತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕಂಡರೆ ಅತ್ಯಂತ ಭಯ. ಹಾಗಾಗಿ ಬಿಜೆಪಿಯವರು ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸಿದರು. ಸತ್ಯ ಹೇಳುವವರನ್ನು ಸದನದಲ್ಲಿ ಇಟ್ಟುಕೊಳ್ಳಲು ಅವರು ಬಯಸುವುದಿಲ್ಲ ಆದರೆ ನಾವು ಸತ್ಯವನ್ನೇ ಮಾತನಾಡುತ್ತೇವೆ. ಜೆಪಿಸಿಗೆ ಬೇಡಿಕೆ ಇಡುತ್ತೇವೆ, ಪ್ರಜಾಪ್ರಭುತ್ವ ಉಳಿಸಲು ಅಗತ್ಯಬಿದ್ದರೆ ಜೈಲಿಗೆ ಹೋಗುತ್ತೇವೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
“ಈ ಕ್ರಮದಿಂದ ನಾವು ಹೆದರುವುದಿಲ್ಲ ಮತ್ತು ಮೌನವಾಗುವುದಿಲ್ಲ. ಪ್ರಧಾನಮಂತ್ರಿ-ಸಂಯೋಜಿತ ಅದಾನಿ ಮಹಾಮೆಗಾ ಹಗರಣಕ್ಕೆ JPC ತನಿಖೆ ನಡೆಸುವುದರ ಬದಲು ರಾಹುಲ್ ಗಾಂಧಿಯವರ ಸಂಸತ್ ಸ್ಥಾನ ಅನರ್ಹಗೊಳಿಸಲಾಗಿದೆ. ಈ ಹೋರಾಟವನ್ನು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಎದುರಿಸುತ್ತೇವೆ. ಭಾರತೀಯ ಪ್ರಜಾಪ್ರಭುತ್ವ ಓಂ ಶಾಂತಿ” ಎಂದು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.
“ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಹೇಳುವ ಸತ್ಯವನ್ನು ಎದುರಿಸಲಾಗದ ನರೇಂದ್ರ ಮೋದಿ ಸರ್ಕಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ತನ್ನ ಹೇಡಿತನವನ್ನು ಜಾಹೀರುಗೊಳಿಸಿದೆ. ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದೊಂದು ಕರಾಳ ದಿನ. ಭಾರತೀಯ ಜನತಾ ಪಕ್ಷದ ಪಾಪದ ಕೊಡ ತುಂಬಿದೆ. ತನ್ನ ನಾಶದ ಶವದಪೆಟ್ಟಿಗೆಗೆ ತಾನೇ ಕೊನೆಯ ಮೊಳೆ ಬಡಿದಿದೆ. ಈ ಫ್ಯಾಸಿಸ್ಟ್ ನಡವಳಿಕೆಗೆ ಹೆದರುವ, ಹಿಂಜರಿಯುವ ಪ್ರಶ್ನೆಯೇ ಇಲ್ಲ. ಈ ಅನ್ಯಾಯದ ವಿರುದ್ಧ ನ್ಯಾಯಾಲಯ ಮತ್ತು ಬೀದಿಗಳಲ್ಲಿ ಹೋರಾಟ ಮಾಡುತ್ತೇವೆ” ಎಂದು ಕರ್ನಾಟಕದ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರು ಅದಾನಿ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ದಿನದಿಂದ ಅವರ ಧ್ವನಿಯನ್ನು ಅಡಗಿಸುವ ಷಡ್ಯಂತ್ರವನ್ನು ಪ್ರಾರಂಭಿಸಲಾಯಿತು. ಅವರಿಗೆ ಎಂದಿಗೂ ಮಾತನಾಡಲು ಅವಕಾಶ ನೀಡಲಿಲ್ಲ, ಇದು ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ವಾಧಿಕಾರಿ ಧೋರಣೆಯ ಸ್ಪಷ್ಟ ನಿದರ್ಶನವಾಗಿದೆ ಎಂದು ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ.
“ನ್ಯಾಯಾಲಯದ ತೀರ್ಪಿನ 24 ಗಂಟೆಗಳ ಒಳಗೆ ಮತ್ತು ಮೇಲ್ಮನವಿ ಪ್ರಕ್ರಿಯೆಯಲ್ಲಿದೆ ಎಂದು ತಿಳಿದಿದ್ದಾಗಲೂ ಇಷ್ಟು ಬೇಗ ಈ ಕ್ರಮ ತೆಗೆದುಕೊಂಡಿರುವುದರಿಮದ ನಾನು ದಿಗ್ಭ್ರಮೆಗೊಂಡಿದ್ದೇನೆ. ಇದು ಕೈಗವಸುಗಳನ್ನು ಮುಚ್ಚಿದ ರಾಜಕೀಯ ಮತ್ತು ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಕೆಟ್ಟದ್ದನ್ನು ಸೂಚಿಸುತ್ತದೆ” ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.
“ಪ್ರಧಾನಿ ಮೋದಿಯವರ ನವ ಭಾರತದಲ್ಲಿ, ವಿರೋಧ ಪಕ್ಷದ ನಾಯಕರು ಬಿಜೆಪಿಯ ಪ್ರಧಾನ ಗುರಿಯಾಗಿದ್ದಾರೆ! ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಬಿಜೆಪಿ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಂಡರೆ, ವಿರೋಧ ಪಕ್ಷದ ನಾಯಕರನ್ನು ಅವರ ಮಾತಿಗಾಗಿ ಅನರ್ಹಗೊಳಿಸಲಾಗಿದೆ. ಇಂದು ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ಹೊಸ ಕುಸಿತಕ್ಕೆ ನಾವು ಸಾಕ್ಷಿಯಾಗಿದ್ದೇವೆ” ಎಂದು ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
In PM Modi’s New India, Opposition leaders have become the prime target of BJP!
While BJP leaders with criminal antecedents are inducted into the cabinet, Opposition leaders are disqualified for their speeches.
Today, we have witnessed a new low for our constitutional democracy
— Mamata Banerjee (@MamataOfficial) March 24, 2023
“ರಾಹುಲ್ ಗಾಂಧಿ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗಿದೆ. ನಮ್ಮ ದೇಶದಲ್ಲಿ ಕಳ್ಳನನ್ನು ಕಳ್ಳ ಎಂದು ಕರೆಯುವುದು ಅಪರಾಧವಾಗಿಬಿಟ್ಟಿದೆ. ಕಳ್ಳರು ಮತ್ತು ಲೂಟಿಕೋರರು ಇನ್ನೂ ಮುಕ್ತರಾಗಿದ್ದಾರೆ ಮತ್ತು ರಾಹುಲ್ ಗಾಂಧಿಗೆ ಶಿಕ್ಷೆಯಾಗಿದೆ. ಇದು ಪ್ರಜಾಪ್ರಭುತ್ವದ ನೇರ ಕೊಲೆ. ಎಲ್ಲಾ ಸರ್ಕಾರಿ ವ್ಯವಸ್ಥೆಗಳು ಒತ್ತಡದಲ್ಲಿವೆ. ಇದು ಸರ್ವಾಧಿಕಾರದ ಅಂತ್ಯದ ಆರಂಭ. ಹೋರಾಟವೇ ನಮ್ಮೆಲ್ಲದರ ದಾರಿಯಾಗಿದೆ” ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
“ನೀವು ರಾಹುಲ್ ಗಾಂಧಿಯವರನ್ನು ಸಂಸತ್ ಸ್ಥಾನದಿಂದ ತೆಗೆದುಹಾಕಬಹುದು ಆದರೆ ಕೋಟ್ಯಂತರ ಭಾರತೀಯರು ಹೃದಯದಲ್ಲಿ ನೀಡಿರುವ ಸ್ಥಾನದಿಂದ ತೆಗೆದುಹಾಕುವುದು ಅಸಾಧ್ಯ. ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಧೋರಣೆಗೆ ನನ್ನ ಧಿಕ್ಕಾರ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ; ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಸ್ಥಾನ ಅನರ್ಹಗೊಳಿಸಿದ ಲೋಕಸಭಾ ಸೆಕ್ರೆಟರಿಯೇಟ್


