Homeಕರ್ನಾಟಕಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷರ ವಿರುದ್ಧ ಬಿಜೆಪಿ ಮುಖಂಡ ರಮೇಶ್‌ ದೂರು; ಶಾಂತಾರಾಮ್ ಪ್ರತಿಕ್ರಿಯೆ

ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷರ ವಿರುದ್ಧ ಬಿಜೆಪಿ ಮುಖಂಡ ರಮೇಶ್‌ ದೂರು; ಶಾಂತಾರಾಮ್ ಪ್ರತಿಕ್ರಿಯೆ

- Advertisement -
- Advertisement -

ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶಾಂತಾರಾಮ್ ಅವರ ವಿರುದ್ಧ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್‌.ಆರ್‌.ರಮೇಶ್ ಅವರು ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕೆ (ಸಕ್ಕರೆ) ಇಲಾಖೆ ಅಧೀನ ಕಾರ್ಯದರ್ಶಿಯೂ ಆಗಿರುವ ಶಾಂತಾರಾಮ್‌, ಒಪಿಎಸ್‌ (ಹಳೆಯ ಪಿಂಚಣಿ ಯೋಜನೆ) ಜಾರಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ‘ವೋಟ್‌ ಫಾರ್‌ ಒಪಿಎಸ್‌’ ಅಭಿಯಾನದಲ್ಲಿ ಸಕ್ರಿಯವಾಗಿದ್ದಾರೆ.

“ನಿರ್ದಿಷ್ಟ ರಾಜಕೀಯ ಪಕ್ಷಗಳ ಪರವಾಗಿ ಮತದಾನ ಮಾಡುವಂತೆ ಪ್ರೇರೇಪಿಸುವ ಹೇಳಿಕೆ ನೀಡಿ, ಚುನಾವಣಾ ನೀತಿ ನಿಯಮಗಳನ್ನು ಉಲ್ಲಂಘಿಸಿರುವ ಶಾಂತಾರಾಮ್‌ ಅವರನ್ನು ಅಮಾನತುಗೊಳಿಸಿ ಶಿಸ್ತುಕ್ರಮ ಕೈಗೊಳ್ಳಬೇಕು” ಎಂದು ಎನ್‌.ಆರ್‌.ರಮೇಶ್ ಒತ್ತಾಯಿಸಿದ್ದಾರೆ.

“ಕರ್ನಾಟಕದಲ್ಲಿ ಪ್ರಸ್ತುತ ಚುನಾವಣಾ ಪ್ರಕ್ರಿಯೆಗಳು ಚಾಲನೆಯಲ್ಲಿವೆ. ಚುನಾವಣಾ ನೀತಿ ನಿಯಮಗಳಿಗೆ ವಿರುದ್ಧವಾಗಿ ಶಾಂತರಾಮ್‌ ಅವರು ತಮ್ಮ ಲೆಟರ್‌ ಹೆಡ್‌ನಲ್ಲಿ ಹೇಳಿಕೆಗಳನ್ನು ದಾಖಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ, ಶಾಸಕಾಂಗಕ್ಕೆ ಇರುವ ಸಾಂವಿಧಾನಿಕ ಹಕ್ಕುಗಳನ್ನು ಶಾಂತಾರಾಮ್ ಪ್ರಶ್ನಿಸುವ ಜೊತೆಗೆ ಸಹೋದ್ಯೋಗಿಗಳನ್ನು ಪ್ರೇರೇಪಿಸುತ್ತಿದ್ದಾರೆ. ನಿರ್ದಿಷ್ಟ ಪಕ್ಷದ ಪರ ಮತ ಚಲಾಯಿಸುವಂತೆ ಹೇಳಿಕೆ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಶಾಂತಾರಾಮ್ ಅವರ ನಡವಳಿಕೆಯು ಪ್ರಜಾಪ್ರತಿನಿಧ್ಯ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಸರ್ಕಾರಿ ನೌಕರರು ಮುಂಬರುವ ವಿಧಾನಸಭಾ ಚುನಾವಣೆಯ ಕರ್ತವ್ಯಕ್ಕೆ ನೇಮಕಗೊಳ್ಳಲಿದ್ದು, ಶಾಂತಾರಾಮ ಅವರ ಪ್ರಚೋದಿತ ಹೇಳಿಕೆಗಳಿಂದ ಚುನಾವಣಾ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶಾಂತಾರಾಮ್ ಅವರನ್ನು ಕೂಡಲೇ ಅಮಾನತು ಮಾಡಿ ಶಿಸ್ತುಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ಕೋರಲಾಗಿದೆ.

ಶಾಂತಾರಾಮ್ ಪ್ರತಿಕ್ರಿಯೆ

ಬಿಜೆಪಿ ಮುಖಂಡ ರಮೇಶ್ ಅವರು ನೀಡಿರುವ ದೂರಿಗೆ ಸಂಬಂಧಿಸಿದಂತೆ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿರುವ ಶಾಂತಾರಾಮ್‌, “ರಮೇಶ್ ಅವರ ಮೇಲೆ ಗೌರವವಿದೆ. ಭ್ರಷ್ಟಾಚಾರದ ವಿರುದ್ಧ ಜನಪರವಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಅವರಾಗಿದ್ದಾರೆ. ನೌಕರರಿಗೆ ಪಿಂಚಣಿ ಇಲ್ಲವಾದರೆ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂಬುದನ್ನು ಅವರು ಗಮನಿಸಬೇಕಿದೆ. ಅವರು ನಡೆಸುತ್ತಿರುವ ಹೋರಾಟದ ಭಾಗವಾಗಿಯೇ ನಾವು ಕೂಡ ನಡೆಯುತ್ತಿದ್ದೇವೆ” ಎಂದರು.

“ಸರ್ಕಾರಿ ನೌಕರರ ವಿಷಯದ ಕುರಿತು ಇವರಿಗೆ ಯಾರೋ ತಪ್ಪು ಸಂದೇಶ ನೀಡಿದಂತಿದೆ. ಎನ್‌ಪಿಎಸ್‌ (ಹೊಸ ಪಿಂಚಣಿ ಯೋಜನೆ) ರದ್ದುಗೊಳಿಸಿ, ಒಪಿಎಸ್‌ (ಹಳೆಯ ಪಿಂಚಣಿ ಯೋಜನೆ) ಜಾರಿಗೊಳಿಸಿ ಎಂದು ಕಳೆದ ಎಂಟು ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದೇವೆ. ನಿವೃತ್ತಿಯಾದವರಿಗೆ ಒಂದು ಬದುಕು ಕಟ್ಟಿಕೊಡಿ ಎಂದು ಕೇಳುತ್ತಿದ್ದೇವೆ. ನಾವು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುತ್ತಿಲ್ಲ. ಸರ್ಕಾರಿ ನೌಕರರಾದ ನಮಗೆ ನಮ್ಮ ಜವಾಬ್ದಾರಿಗಳು ತಿಳಿದಿವೆ” ಎಂದು ಸ್ಪಷ್ಟಪಡಿಸಿದರು.

“‘ವೋಟ್‌ ಫಾರ್‌ ಒಪಿಎಸ್‌’ ಎಂಬ ಅಭಿಯಾನವು ರಾಷ್ಟ್ರೀಯ ಕಾರ್ಯಕ್ರಮದ ಭಾಗವಾಗಿದೆ. ಅದನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುತ್ತಿದ್ದೇವೆ. ಸರ್ಕಾರಿ ನೌಕರರಿಗೆ ರಮೇಶ್ ಅವರ ಮೇಲೆ ಗೌರವವಿದೆ. ಅದನ್ನು ಹಾಳು ಮಾಡಿಸಬೇಕೆಂದು ಅವರಿಂದ ಈ ರೀತಿ ದೂರನ್ನು ಯಾರೋ ಕೊಡಿಸಿದ್ದಾರೆ. ಯಾರೋ ಮಿಸ್‌‌ಲೀಡ್‌ ಮಾಡಿದ್ದಾರೆ” ಎಂದು ತಿಳಿಸಿದರು.

“ನಮ್ಮ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ವೋಟ್‌ ಫಾರ್‌ ಒಪಿಎಸ್‌ ಹೋರಾಟಕ್ಕೆ ರಮೇಶ್ ಸೇರಿದಂತೆ ಎಲ್ಲರ ಸಹಕಾರ ಬೇಕಿದೆ. ಎನ್‌ಪಿಎಸ್‌ ಹೋರಾಟದ ಹಿನ್ನೆಲೆಯೇನು ಎಂಬುದು ರಮೇಶ್‌ ಅವರಿಗೆ ತಿಳಿದಿಲ್ಲ ಅನಿಸುತ್ತಿದೆ” ಎಂದು ವಿಷಾದಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...