ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷ ನಿನ್ನೆ (ಮಂಗಳವಾರ) ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಹಲವು ಹಿರಿಯರನ್ನು ಕೈಬಿಟಿರುವ ಬಿಜೆಪಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಲ್ಲಿ ರೌಡಿ ಶೀಟರ್‌ಗೆ ಟಿಕೆಟ್ ನೀಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರ ಎದುರು ರೌಡಿ ಶೀಟರ್ ಮಣಿಕಂಠ ರಾಠೋಡಗೆ ಬಿಜೆಪಿಯು ಟಿಕೆಟ್ ನೀಡಿದೆ. ಇತ್ತೀಚೆಗೆ ಯಾದಗಿರಿ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ರಾಠೋಡ ಅವರನ್ನು ಕಣಕ್ಕಿಳಿಸಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.
ಯಾದಗಿರಿ, ವಿಜಯಪುರ, ಕಲಬುರಗಿ ಮೂರು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಬಿಜೆಪಿ ಮುಖಂಡ ಮಣಿಕಂಠ ರಾಥೋಡನನ್ನು ಒಂದು ವರ್ಷಗಳ ಕಾಲ ಗಡಿಪಾರು ಮಾಡಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ. ಎಸ್. ರವಿಕುಮಾರ ಆದೇಶ ಹೊರಡಿಸಿದ್ದರು. ಇದಕ್ಕೆ ಮಣಿಕಂಠ, ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು.
ಇದನ್ನೂ ಓದಿ: ಟಿಕೆಟ್ ಘೋಷಣೆ ಬೆನ್ನಲ್ಲೇ ಬಿಜೆಪಿಯ ಮೊದಲ ವಿಕೆಟ್ ಔಟ್: ಪಕ್ಷಕ್ಕೆ ಲಕ್ಷ್ಮಣ ಸವದಿ ರಾಜೀನಾಮೆ
ಅಕ್ರಮ ಪಡಿತರ ಅಕ್ಕಿ ಸಾಗಾಟ, ಜೀವ ಬೆದರಿಕೆ ಹಾಕಿರೋದು ಸೇರಿದಂತೆ 8 ಜಿಲ್ಲೆಯ ಹಲವಡೆ ವಿವಿಧ ಪ್ರಕರಣಗಳನ್ನು ಮಣಿಕಂಠ ರಾಥೋಡ ಎದುರಿಸುತ್ತಿದ್ದಾನೆ. ಕೋರ್ಟ್‌ನಲ್ಲಿ ಜಾಮೀನು ಪಡೆದು ಹೊರ ಬಂದ ನಂತರವೂ ಮತ್ತೆ ಹಳೆ ಕಾಯಕ ಮುಂದುವರೆಸಿದ್ದ ಇವರನ್ನು ಗಡಿಪಾರು ಮಾಡಬೇಕೆಂದು ಹಲವು ದಿನಗಳಿಂದ ಸಂಘಟನೆಗಳು ಆಗ್ರಹಿಸಿದ್ದವು. ಇತ್ತೀಚೆಗೆ ಎಡಿಜಿಪಿ ಅಲೋಕ ಕುಮಾರ ಕಲಬುರಗಿ ನಗರಕ್ಕೆ ಆಗಮಿಸಿದಾಗ ದಲಿತ ಸಂಘಟನೆ ಮುಖಂಡರು ಮಣಿಕಂಠ ರಾಥೋಡನನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರು.
ಚಿತ್ತಾಪುರ ಕ್ಷೇತ್ರದಲ್ಲಿ ವಿಧಾನಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ, ಮುಖಂಡರಾದ ಅರವಿಂದ ಚವ್ಹಾಣ, ಮಾಜಿ ಶಾಸಕ ದಿ. ವಾಲ್ಮೀಕಿ ನಾಯಕ್ ಪುತ್ರ ವಿಠಲ ನಾಯಕ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಎಲ್ಲರನ್ನು ಕಡೆಗಣಿಸಿ ರೌಡಿಶೀಟರ್‌ವೊಬ್ಬನಿಗೆ ಬಿಜೆಪಿ ಟಿಕೆಟ್ ನೀಡಿದೆ.


