Homeಮುಖಪುಟ8 ಜನ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ: ಇಲ್ಲಿದೆ ಪಟ್ಟಿ

8 ಜನ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ: ಇಲ್ಲಿದೆ ಪಟ್ಟಿ

- Advertisement -
- Advertisement -

ಮೇ 10 ರಂದು ನಡೆಯಲಿರುವ ಕರ್ನಾಟಕದ ಚುನಾವಣೆಗೆ ಭಾರಿ ಕಸರತ್ತು ನಡೆಸಿದ ಬಿಜೆಪಿ ಕೊನೆಗೂ 189 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಸುಮಾರು 20 ರಿಂದ 30 ಹಾಲಿ ಶಾಸಕರಿಗೆ ಕೋಕ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಮೊದಲ ಪಟ್ಟಿಯಲ್ಲಿ ಕೇವಲ 8 ಜನ ಹಾಲಿ ಶಾಸಕರಿಗೆ ಮಾತ್ರ ಟಿಕೆಟ್ ಸಿಕ್ಕಿಲ್ಲ. ಅವರ ಪಟ್ಟಿ ಕೆಳಗಿನಂತಿದೆ.

ಪುತ್ತೂರು- ಸಂಜೀವ ಮಠಂದೂರು

2013 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಶಕುಂತಲಾ ಶೆಟ್ಟಿಯವರ ಎದುರು 4,289 ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಅವರು 2018 ರಲ್ಲಿ ಅದೇ ಶಕುಂತಲಾ ಶೆಟ್ಟಿಯವರನ್ನು 19,477 ಮತಗಳ ಅಂತರದಲ್ಲಿ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. ಅವರಿಗೆ ಈಗ ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಅವರ ಬದಲಿಗೆ ಆಶಾ ತಿಮ್ಮಪ್ಪ ಎಂಬ ಹೊಸ ಮುಖಕ್ಕೆ ಮಣೆ ಹಾಕಿದೆ. ಕಾಂಗ್ರೆಸ್ ಇಲ್ಲಿ ಇನ್ನೂ ಟಿಕೆಟ್ ಘೋಷಿಸಿಲ್ಲ.

ಸುಳ್ಯ – ಎಸ್. ಅಂಗಾರ

1989 ರಲ್ಲಿ ಸುಳ್ಯ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಕಾಂಗ್ರೆಸ್‌ನ ಕೆ.ಕುಶಲರವರ ಎದುರು ಸೋತಿದ್ದ ಎಸ್ ಅಂಗಾರರವರು ತದನಂತರದ ಆರು ಚುನಾವಣೆಗಳಲ್ಲಿ ಸತತವಾಗಿ ಜಯ ಗಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಾ.ಬಿ.ರಘುರವರ ವಿರುದ್ದ 26,068 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೂ ಬಿಜೆಪಿ ಸರ್ಕಾರ ಬಂದ ನಂತರ ಅವರನ್ನು ಮಂತ್ರಿ ಮಾಡಿರಲಿಲ್ಲ. ಈಗ ಅವರ ಬದಲಿಗೆ ಭಾಗೀರಥಿ ಮುರುಲ್ಯ ಎಂಬುವವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪನವರಾಗಿದ್ದಾರೆ.

ಉಡುಪಿ – ರಘುಪತಿ ಭಟ್

ಉಡುಪಿಯಲ್ಲಿ ರಘುಪತಿ ಭಟ್ 2004, 2008 ಮತ್ತು 2018 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್‌ರವರನ್ನು 12,044 ಮತಗಳ ಅಂತರದಲ್ಲಿ ಸೋಲಿಸಿದ್ದರು. ಆನಂತರ ಪ್ರಮೋದ್ ಮಧ್ವರಾಜ್‌ ಸಹ ಬಿಜೆಪಿ ಸೇರಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಬ್ಬರಿಗೂ ಟಿಕೆಟ್ ನಿರಾಕರಿಸಿರುವ ಬಿಜೆಪಿ ಯಶ್‌ಪಾಲ್ ಸುವರ್ಣ ಎಂಬುವವರಿಗೆ ಟಿಕೆಟ್ ನೀಡಿದೆ. ಅವರು ಹಿಜಾಬ್ ವಿರೋಧಿ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು. ಪ್ರಸಾದರಾಜ್ ಕಂಚನ್‌ರವರು ಇಲ್ಲಿಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ಕಾಪು – ಲಾಲಾಜಿ ಮೆಂಡನ್

ಕಾಪುವಿನಲ್ಲಿ 1994-1999 ರ ಚುನಾವಣೆಗಳಲ್ಲಿ ಬಿಜೆಪಿಯಿಂದ ಸೋಲು ಕಂಡಿದ್ದ ಲಾಲಾಜಿ ಮೆಂಡನ್ ಆನಂತರ 2004, 2008 ಮತ್ತು 2018 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿನಯ್‌ ಕುಮಾರ್ ಸೊರಕೆ ವಿರುದ್ಧ 11,917 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು. ಈಗ ಅವರ ಬದಲಿಗೆ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಾಂಗ್ರೆಸ್ ಇಲ್ಲಿ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ.

ಶಿರಹಟ್ಟಿ – ರಾಮಪ್ಪ ಲಮಾಣಿ

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಶಿರಹಟ್ಟಿಯಲ್ಲಿ ರಾಮಪ್ಪ ಲಮಾಣಿಯವರು 2008 ಮತ್ತು 2018 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ರಾಮಕೃಷ್ಣ ದೊಡ್ಮನಿ ವಿರುದ್ಧ 29,993 ಮತಗಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಈಗ ಅವರ ಬದಲಿಗೆ ಡಾ.ಚಂದ್ರು ಲಮಾಣಿಯವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಾಂಗ್ರೆಸ್ ಇನ್ನೂ ಅಭ್ಯರ್ಥಿ ಅಂತಿಮಗೊಳಿಸಿಲ್ಲ.

ರಾಮದುರ್ಗ – ಮಹದೇವಪ್ಪ ಯಾದವಾಡ

ಮಹದೇವಪ್ಪ ಯಾದವಾಡರವರು ರಾಮದುರ್ಗದಲ್ಲಿ 1999 ರಲ್ಲಿ ಸೋಲು ಕಂಡಿದ್ದರು. ಆನಂತರ 2004 ಮತ್ತು 2018 ರಲ್ಲಿ ಗೆಲುವು ದಾಖಲಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಅಶೋಕ್ ಮಹದೇವಪ್ಪ ಪಟ್ಟಣ್ ವಿರುದ್ಧ 2,875 ಮತಗಳ ಅಂತರದಲ್ಲಿ ಜಯ ಕಂಡಿದ್ದರು. ಈಗ ಅವರ ಬದಲಿಗೆ ಬಿಜೆಪಿಯು ಚಿಕ್ಕರೇವಣ್ಣನವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ ಸೋತ ಅಭ್ಯರ್ಥಿ ಮಾಜಿ ಶಾಸಕ ಅಶೋಕ್ ಮಹದೇವಪ್ಪ ಪಟ್ಟಣ್ ರವರಿಗೆ ಟಿಕೆಟ್ ನೀಡಿದೆ.

ಬೆಳಗಾವಿ ಉತ್ತರ – ಅನಿಲ್ ಎಸ್ ಬೆನಕೆ

2018 ರಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಅನಿಲ್ ಎಸ್ ಬೆನಕೆ ಕಾಂಗ್ರೆಸ್‌ನ ಫೈರೋಜ್ ನೂರುದ್ದೀನ್ ಸೇಠ್‌ರವರನ್ನು 17,267 ಮತಗಳ ಅಂತರದಲ್ಲಿ ಸೋಲಿಸಿದ್ದರು. ಆದರೆ ಈ ಬಾರಿ ಅವರ ಬದಲಿಗೆ ಬಿಜೆಪಿ ಡಾ.ರವಿ ಪಾಟೀಲ್‌ಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಇನ್ನೂ ಅಭ್ಯರ್ಥಿ ಅಂತಿಮಗೊಳಿಸಿಲ್ಲ.

ಹೊಸದುರ್ಗ – ಗೂಳಿಹಟ್ಟಿ ಶೇಖರ್

ಗೂಳಿಹಟ್ಟಿ ಶೇಖರ್ ಹೊಸದುರ್ಗದಲ್ಲಿ 2008 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡರೆ 2013 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. 2018 ರಲ್ಲಿ ಬಿಜೆಪಿ ಸೇರಿ ಕಾಂಗ್ರೆಸ್‌ನ ಬಿ.ಜಿ ಗೋವಿಂದಪ್ಪನವರ ಎದುರು 25,992 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈಗ ಅವರ ಬದಲಿಗೆ ಎಸ್.ಲಿಂಗಮೂರ್ತಿಯವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಬಿ.ಜಿ ಗೋವಿಂದಪ್ಪನವರಿಗೆ ಮತ್ತೆ ಟಿಕೆಟ್ ನೀಡಿದೆ.

ಇನ್ನು ಬಿ.ಎಸ್ ಯಡಿಯೂರಪ್ಪನವರು ಶಿಕಾರಿಪುರದಲ್ಲಿ ಸ್ಪರ್ಧಿಸುತ್ತಿಲ್ಲ. ಹಾಗಾಗಿ ಅವರ ಬದಲಿಗೆ ಅವರ ಪುತ್ರ ವಿಜಯೇಂದ್ರರಿಗೆ ಟಿಕೆಟ್ ಸಿಕ್ಕರೆ, ವಿಜಯನಗರದಲ್ಲಿ ಆನಂದ್ ಸಿಂಗ್ ಬದಲಿಗೆ ಅವರ ಪುತ್ರ ಸಿದ್ಧಾರ್ಥ್ ಸಿಂಗ್‌ಗೆ ಬಿಜೆಪಿ ಟಿಕೆಟ್ ಲಭಿಸಿದೆ.

ಇದನ್ನೂ ಓದಿ: ಟಿಕೆಟ್ ಘೋಷಣೆ ಬೆನ್ನಲ್ಲೇ ಬಿಜೆಪಿಯ ಮೊದಲ ವಿಕೆಟ್ ಔಟ್: ಪಕ್ಷಕ್ಕೆ ಲಕ್ಷ್ಮಣ ಸವದಿ ರಾಜೀನಾಮೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳದಲ್ಲಿ ತೀವ್ರಗೊಳ್ಳಲಿರುವ ಮಳೆ; ಆರೇಂಜ್-ಯೆಲ್ಲೋ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

0
ಮುಂದಿನ ಕೆಲವು ದಿನಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ ಭಾರತೀಯ ಹವಾಮಾನ ಇಲಾಖೆ ಗುರುವಾರ ಕೇರಳದ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮೇ 18 ರಂದು ಪಾಲಕ್ಕಾಡ್ ಮತ್ತು ಮಲಪ್ಪುರಂ, ಮೇ 19 ರಂದು...