Homeಚಳವಳಿಕೃಷಿ ಶ್ರಮಿಕರ ಬೆವರನ್ನು ಅವಮಾನಿಸುವ ಮಾತುಗಳು ಬೇಡ - ಅವರ ಮಾತು ಆಲಿಸಿ

ಕೃಷಿ ಶ್ರಮಿಕರ ಬೆವರನ್ನು ಅವಮಾನಿಸುವ ಮಾತುಗಳು ಬೇಡ – ಅವರ ಮಾತು ಆಲಿಸಿ

ಉದ್ಯೋಗ ಸೃಷ್ಟಿಯಲ್ಲಿ ಈಗಲೂ ಕೃಷಿ ಕ್ಷೇತ್ರದ್ದೆ ಸಿಂಹಪಾಲು. ಇಂದಿಗೂ ದೇಶದ ಉದ್ಯೋಗ ಸೃಷ್ಟಿಯಲ್ಲಿ ಕೃಷಿ ಕ್ಷೇತ್ರದ ಪಾಲು ಶೇ.53ರಷ್ಟು.

- Advertisement -

‘ಪ್ರಧಾನಿ ನರೇಂದ್ರ ಮೋದಿ ಸೇವಿಸುತ್ತಿರುವ ರೊಟ್ಟಿ ರೈತರು ತಮ್ಮ ಹೊಲಗಳಲ್ಲಿ ಬೆಳೆದ ಧಾನ್ಯದಿಂದ ತಯಾರಿಸಿದ್ದು ಎಂದು ಹೇಳಿ’. ಇದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತದ ಮೂರು ಮಸೂದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಎಪ್ಪತ್ತು ವರ್ಷದ ದೇವ್‍ಸಿಂಗ್ ನೀಡಿರುವ ಎಚ್ಚರಿಕೆ. ಕಳೆದ ಹಲವು ವರ್ಷಗಳಿಂದ ಮನ್‍ಕಿ ಬಾತ್ ಕೇಳಿದ್ದು ಸಾಕು, ಇನ್ನು ರೈತರ ಮಾತನ್ನು ಪ್ರಧಾನಿಗಳು ಆಲಿಸಬೇಕೆಂದು ಆಕ್ರೋಶಭರಿತರಾಗಿ ಹೇಳಿದ್ದಾರೆ. ದೇವ್‍ಸಿಂಗ್ ಅವರ ಪತ್ನಿ, ಸೇರಿದಂತೆ ಇಡೀ ಕುಟುಂಬ ಪ್ರತಿಭಟನೆಯಲ್ಲಿ ಪಾಲ್ಗೊಂಡಿದೆ. ದೇವ್‍ಸಿಂಗ್ ಅವರ ಆರೋಗ್ಯಕ್ಕೆ ಏನಾದರೂ ತೊಂದರೆಯಾದೀತು ಎಂಬುದು ಅವರ ಮನೆಯವರ ಆತಂಕ. ಆದರೆ ದೇವ್‍ಸಿಂಗ್ ಮಾತ್ರ ನನಗೆ ಏನಾದರೂ ಸರಿಯೇ ನಮ್ಮ ಮಕ್ಕಳ ಭವಿಷ್ಯ ಉಳಿಸುವುದು ನನ್ನ ಜವಾಬ್ದಾರಿ ಎಂದು ಹಗಲು ರಾತ್ರಿ ಈ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಕೇವಲ ಒಂದು ಕುಟುಂಬದ ಪ್ರಶ್ನೆ ಅಲ್ಲ. ದೇಶದ ವಿವಿಧ ರಾಜ್ಯಗಳ ಎರಡು ಲಕ್ಷ ರೈತರು ದೆಹಲಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಉದ್ಯಮಿಯೊಬ್ಬ ಕಚ್ಚಾ ಉತ್ಪನ್ನಗಳನ್ನು ಖರೀದಿಸುತ್ತಾನೆ. ಸಿದ್ಧ ಉತ್ಪನ್ನಗಳನ್ನು ತಯಾರಿಸಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಾನೆ. ಅದೇ ರೀತಿ ರೈತನೊಬ್ಬ ತನಗೆ ಬೇಕಾದ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳನ್ನು ಖರೀದಿಸುತ್ತಾನೆ ಬೆಳೆದ ಫಸಲನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಿಸುತ್ತಾನೆ. ಇಲ್ಲಿ ಮೇಲ್ನೋಟಕ್ಕೆ ಇಬ್ಬರೂ ಒಂದೇ ರೀತಿ ಕಾಣಿಸುತ್ತಾರೆ. ಆದರೆ ಇಲ್ಲಿರುವ ವ್ಯತ್ಯಾಸವನ್ನು ಗಮನಿಸಬೇಕು. ಅದೆಂದರೆ ಉದ್ಯಮಿ ವ್ಯಾಪಾರ ಮಾಡುತ್ತಾನೆ ಕೃಷಿಕ ಕರ್ತವ್ಯ ನಿರ್ವಹಿಸುತ್ತಾನೆ. ಈ ವ್ಯತ್ಯಾಸವನ್ನು ಅರಿಯದಿದ್ದರೆ ಜಗತ್ತು ನಾಶವಾಗುತ್ತೆ. ಈ ಆಯಾಮದಲ್ಲಿ ನಾವು ರೈತರ ಪ್ರತಿಭಟನೆಯನ್ನು ನೋಡುವ ಅಗತ್ಯವಿದೆ.

ರೈತರು ಭಯೋತ್ಪಾದಕರು, ಈ ರೈತರ ಪ್ರತಿಭಟನೆಗೆ ಖಲಿಸ್ತಾನ್ ಬೆಂಬಲವಿದೆ, ಕಮ್ಯೂನಿಸ್ಟರು ಮತ್ತು ಕಾಂಗ್ರೆಸ್‍ನವರು ಪ್ರೇರೇಪಣೆ ನೀಡುತ್ತಿದ್ದಾರೆ ಎಂದು ಹೇಳುವುದು ಸುಲಭ. ಅಂತವರು ಕೃಷಿಕನ ಹೃದಯದಲ್ಲಿ ಕೂತು ಮಾತನಾಡಿದರೆ ಅರಿವಿಗೆ ಬರುತ್ತೆ ಕೃಷಿ ಮತ್ತು ಕೃಷಿಕ ಅಂದರೆ ಏನು ಅಂತ. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವವರು ದೇಶಕ್ಕೆ ಅನ್ನವನ್ನಷ್ಟೆ ನೀಡುತ್ತಿಲ್ಲ. ಆ ರೈತರ ಕುಟುಂಬಗಳಲ್ಲಿ ಜನಿಸಿದ ಹಲವಾರು ಯುವಕರು ಗಡಿಯಲ್ಲಿ ಈ ದೇಶದ ರಕ್ಷಣೆಗಾಗಿ ಪ್ರಾಣ ಕೊಟ್ಟಿದ್ದಾರೆ ಎಂಬುದನ್ನು ಅರಿಯಬೇಕು. ಅಪ್ಪ ಅಮ್ಮ ಹೊಲ, ತೋಟಗಳಲ್ಲಿ ದುಡಿಯುತ್ತಿದ್ದರೆ ಅವರ ಮಕ್ಕಳು ದೇಶ ರಕ್ಷಣೆಗಾಗಿ ಸೇನೆಯಲ್ಲಿ ದುಡಿಯುತ್ತಿದ್ದಾರೆ. ಮುಂಬೈನ ದಲಾಲ್ ಸ್ಟ್ರೀಟ್, ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಶ್ರಮಿಕರ ಬೆವರನ್ನು ಕದಿಯುವವರ ನಾಲಿಗೆಗಳು ಮಾತ್ರ ಹೀಗೆ ಒದರಲು ಸಾಧ್ಯ.

ಅರ್ಥಶಾಸ್ತ್ರ ವ್ಯಾಖ್ಯಾನದ ಅನುಸಾರ ಕೃಷಿ ಪ್ರಾಥಮಿಕ ವಲಯ, ತಯಾರಿಕಾ ಕ್ಷೇತ್ರ ದ್ವಿತೀಯ ಮತ್ತು ಸೇವಾ ಕ್ಷೇತ್ರ ತೃತೀಯ ವಲಯ. ತೃತೀಯ ವಲಯ ಇಲ್ಲದಿದ್ದರೂ ದ್ವಿತೀಯ ವಲಯ ಉಳಿಯಬಲ್ಲದು. ದ್ವಿತೀಯ ವಲಯ ಇಲ್ಲದಿದ್ದರೂ ಪ್ರಾಥಮಿಕ ವಲಯ ಉಳಿಯಬಲ್ಲದು. ಆದರೆ ಪ್ರಾಥಮಿಕ ವಲಯ ಇಲ್ಲದಿದ್ದರೆ ಉಳಿದ ಯಾವ ವಲಯಗಳೂ ಉಳಿಯಲು ಸಾಧ್ಯವಿಲ್ಲ. ಹೀಗಾಗಿಯೇ ಕೃಷಿಗೆ ಪ್ರಾಥಮಿಕ ವಲಯದ ಮಾನ್ಯತೆ ನೀಡಿರುವುದು. ಸದ್ಯ ದ್ವಿತೀಯ ಮತ್ತು ತೃತೀಯ ವಲಯವನ್ನು ಕಾರ್ಪೊರೆಟ್‍ಗಳು ಆಕ್ರಮಿಸಿದ್ದಾರೆ. ಇನ್ನು ಉಳಿದಿರುವುದು ಪ್ರಾಥಮಿಕ ವಲಯ. ಅದನ್ನೂ ಆಕ್ರಮಿಸಿದರೆ ಮತ್ತೆ ಉಳಿಯುವುದು ಬೇರೇನೂ ಇಲ್ಲ. ಇಂತಹ ಹುನ್ನಾರವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ. ಭಾರತ ಇಂದು ಆಹಾರ ಧಾನ್ಯಗಳು, ಸಕ್ಕರೆ ಮತ್ತು ಹಾಲು ಉತ್ಪಾದನೆಯಲ್ಲಿ ಸ್ವಾವಲಂಬನೆ ಸ್ಥಾಪಿಸಿದೆ. ಇದರಿಂದ ಪ್ರತಿ ವ್ಯಕ್ತಿಯ ಸಂವಿಧಾನಬದ್ಧವಾದ ಆಹಾರದ ಹಕ್ಕು ಜೀವಂತವಾಗಿದೆ. ಒಂದು ವೇಳೆ ಕೃಷಿ ಕ್ಷೇತ್ರ ಕಾರ್ಪೊರೇಟ್‍ಗಳ ಹಿಡಿತಕ್ಕೆ ಸಿಲುಕಿದರೆ ಆಹಾರದ ಹಕ್ಕು ಉಳಿಯುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ರೈತರ ಇಂದಿನ ಪ್ರತಿಭಟನೆಯನ್ನು ನೋಡುವ ಅಗತ್ಯತೆ ಇದೆ.

ದೇಶದ ಜಿಡಿಪಿಗೆ ಸೇವಾ ಕ್ಷೇತ್ರದ ಕೊಡುಗೆಗೆ ಹೋಲಿಸಿದರೆ ಕೃಷಿ ಕ್ಷೇತ್ರದ ಕೊಡುಗೆ ಕಡಿಮೆ. ಆದರೆ ಉದ್ಯೋಗ ಸೃಷ್ಟಿಯಲ್ಲಿ ಈಗಲೂ ಕೃಷಿ ಕ್ಷೇತ್ರದ್ದೆ ಸಿಂಹಪಾಲು. ಇಂದಿಗೂ ದೇಶದ ಉದ್ಯೋಗ ಸೃಷ್ಟಿಯಲ್ಲಿ ಕೃಷಿ ಕ್ಷೇತ್ರದ ಪಾಲು ಶೇ.53ರಷ್ಟು. ಉಳಿದಿದ್ದರಲ್ಲಿ ತಯಾರಿಕೆ ಮತ್ತು ಸೇವಾಕ್ಷೇತ್ರಗಳು ಹಂಚಿಕೊಂಡಿವೆ. ಇಂತಹ ಕ್ಷೇತ್ರವನ್ನು ಕಾರ್ಪೊರೆಟ್‍ಗಳ ಹಿಡಿತಕ್ಕೆ ನೀಡುವುದರಿಂದ ಯುವಕರು ನಿರುದ್ಯೋಗಿಗಳಾಗುವುದರೊಂದಿಗೆ ಆಹಾರದ ಹಕ್ಕು ಇಲ್ಲವಾಗಿ ಅರಾಜಕತೆ ಸೃಷ್ಟಿಯಾಗಲಿದೆ ಎಂಬ ಎಚ್ಚರಿಕೆ ಕೇಂದ್ರ ಸರ್ಕಾರಕ್ಕೆ ಇರಬೇಕಾಗಿದೆ. ಈ ನಾಗರಿಕತೆ ಯಾವುದರ ಆಧಾರದಲ್ಲಿ ಇಲ್ಲಿವರೆಗೂ ವಿಕಾಸವಾಗುತ್ತಾ ಬಂದಿದೆಯೋ ಆ ವ್ಯವಸ್ಥೆಯೇ ನಾಶವಾಗುತ್ತದೆ.

ಪ್ರತಿಭಟನೆ ನಡೆಸುವುದು ಈ ದೇಶದ ಪ್ರತಿಯೊಬ್ಬರಿಗೂ ನಮ್ಮ ಸಂವಿಧಾನ ನೀಡಿರುವ ಹಕ್ಕು. ಸಂವಿಧಾನ ಕರಡನ್ನು ಸಮರ್ಪಿಸಿದ ಸಂವಿಧಾನ ದಿನವಾದ ನ.26ರಂದೇ ರೈತರ ಮೇಲೆ ಲಾಠಿ ಚಾರ್ಜ್ ಮಾಡಿ, ಜಲಫಿರಂಗಿಗಳು, ಟಿಯರ್‌ಗ್ಯಾಸ್‍ಗಳನ್ನು ಬಳಸಿರುವುದು ಕನಿಷ್ಠ ನಾಚಿಕೆಯೂ ಇಲ್ಲದವರು ಎಸಗುವ ಕೃತ್ಯವಲ್ಲದೆ ಮತ್ತೇನೂ ಅಲ್ಲ. ಭಟಿಂಡಾದ ಕೃಷಿ ಮಹಿಳೆ ಹರಿಂದರ್ ಭಾನು ಈ ಪ್ರತಿಭಟನೆಯಲ್ಲಿ ಹತ್ತು ಸಾವಿರ ಕೃಷಿ ಮಹಿಳೆಯರನ್ನು ಮುನ್ನಡೆಸುತ್ತಿದ್ದಾಳೆ. ಈ ಮೂರೂ ಮಸೂದೆಗೆ ಅನುಷ್ಠಾನಕ್ಕೆ ಬಂದರೆ ಕೃಷಿಕರು ಅವರ ಮನೆಗಳಲ್ಲಿ ರೊಟ್ಟಿ ಮಾಡುವುದನ್ನೇ ನಿಲ್ಲಿಸಬೇಕಾಗುತ್ತದೆ ಎಂದು ತಮ್ಮ ಅಂತರಾಳದ ನೋವನ್ನು ಹೊರಗೆಡಹಿದ್ದಾರೆ. ಕೃಷಿ ಎಂದೂ ಬಿಸಿನೆಸ್ ಅಲ್ಲ ಅದೊಂದು ಧರ್ಮ ಮತ್ತು ಕರ್ತವ್ಯ. ತಾನೂ ಉಂಡು ಮತ್ತೊಬ್ಬರಿಗೂ ಉಣಬಡಿಸುವುದೇ ಆ ಧರ್ಮ. ನವಿಲು ಮತ್ತು ಗಿಣಿಗಳನ್ನು ಸಾಕಿದಂತಲ್ಲ.

ದೇಶದ ರೈತರ ಪರಿಸ್ಥಿತಿ ಎಷ್ಟೊಂದು ಗಂಭೀರವಾಗಿದೆ ಎಂಬುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರದ ಅಂಕಿಅಂಶಗಳತ್ತ ನೋಟ ಹರಿಸಿದರೆ ಅರಿವಿಗೆ ಬರಲಿದೆ. 1995ರಿಂದ ಇಲ್ಲಿವರೆಗೂ ದೇಶದಲ್ಲಿ 2,96,438 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ದೇಶದಲ್ಲಿ ದಾಖಲಾಗಿರುವ ಒಟ್ಟಾರೆ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಇದರ ಪ್ರಮಾಣ ಶೇ.11.2. ಈ ಪೈಕಿ ಮಹಾರಾಷ್ಟ್ರದಲ್ಲಿ ಮಾತ್ರವೇ 60,750 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಳಿದಂತೆ ಉತ್ತರ ಪ್ರದೇಶ, ಹರಿಯಾಣ, ಛತ್ತೀಸ್‍ಗಡ, ಆಂದ್ರ, ತೆಲಂಗಾಣ, ಒಡಿಸಾ ಮತ್ತಿತರ ರಾಜ್ಯಗಳ ರೈತರು ಈ ಹಾದಿ ಹಿಡಿದಿದ್ದಾರೆ. ಅತಿಹೆಚ್ಚು ಆತ್ಮಹತ್ಯೆ ಸಂಭವಿಸಿರುವ ರಾಜ್ಯಗಳಲ್ಲಿ ಕೃಷಿಗೆ ಹೆಚ್ಚಿನ ಬಂಡವಾಳ ಹೂಡಿಕೆ ಮಾಡದಿರುವುದು ಮತ್ತು ಕೃಷಿ ಮಾರುಕಟ್ಟೆಗಳಲ್ಲಿ ಖಾಸಗಿ ಭಾಗವಹಿಸುವಿಕೆಗೆ ಹೆಚ್ಚು ಅವಕಾಶ ನೀಡಿದ್ದು ಕಾರಣವಾಗಿದೆ.

ಈಗ ಪ್ರತಿಭಟನೆಯಲ್ಲಿ ತೊಡಗಿರುವುದು ಹರಿಯಾಣ ಮತ್ತು ಪಂಜಾಬ್ ರೈತರು ಮಾತ್ರವಲ್ಲ. ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಕರ್ನಾಟಕ, ರಾಜಸ್ತಾನ, ಮಧ್ಯಪ್ರದೇಶ, ಆಂಧ್ರ, ತೆಲಂಗಾಣ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ರೈತರು ಭಾಗವಹಿಸಿದ್ದಾರೆ. ಅವರು ವಾರ, ಹದಿನೈದು ದಿನ, ತಿಂಗಳಿಗೆ ಸಾಕಾಗುವಷ್ಟು ದವಸಧಾನ್ಯಗಳನ್ನೂ ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ಪ್ರತಿಭಟನೆಗೆ ಬಂದು ಸೇರುವ ರೈತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬೇರೆ ಪ್ರತಿಭಟನೆಗಳಾದರೆ ದಾರಿ ತಪ್ಪಿಸಲು ನೂರು ಪಿತೂರಿಗಳನ್ನು ಮಾಡಬಹುದು. ಆದರೆ ದೇಶದ ಬೆನ್ನೆಲುಬು ರೈತರು ಬೀದಿಗಿಳಿದಿದ್ದಾರೆ.

  • ಮುರಳಿಕೃಷ್ಣ ಜಿ ಆರ್

ಹಿರಿಯ ಪತ್ರಕರ್ತ, ಅಂಕಣಕಾರ. ಗ್ರಾಮೀಣ ಆರ್ಥಿಕತೆ ಮತ್ತು ಮೈಕ್ರೋ ಎಕಾನಾಮಿಕ್ಸ್ ಸಂಬಂಧಿಸಿ ಅಂಕಣಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಕೃಷಿಕರು


ಇದನ್ನೂ ಓದಿ: ಇದು ರೈತರು ಮತ್ತು ಕೇಂದ್ರದ ನಡುವಿನ ಸಂಘರ್ಷ: ಪಂಜಾಬ್ ಮುಖ್ಯಮಂತ್ರಿ
ಮುರಳಿಕೃಷ್ಣ ಜಿ ಆರ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಫ್ಯಾಕ್ಟ್‌‌ಚೆಕ್‌: ವಿದ್ಯಾರ್ಥಿನಿ ಸಾವಿನ ಬಗ್ಗೆ ಸುಳ್ಳು ಬರೆದು ಕೋಮುದ್ವೇಷ ಹರಡುತ್ತಿರುವ ‘ಪೋಸ್ಟ್‌ ಕಾರ್ಡ್’! | Naanu Gauri

ಫ್ಯಾಕ್ಟ್‌‌ಚೆಕ್‌: ವಿದ್ಯಾರ್ಥಿನಿ ಸಾವಿನ ಬಗ್ಗೆ ಸುಳ್ಳು ಬರೆದು ಕೋಮುದ್ವೇಷ ಹರಡುತ್ತಿರುವ ‘ಪೋಸ್ಟ್‌ ಕಾರ್ಡ್’!

0
ಬಿಜೆಪಿ ಪರವಾಗಿ ಪ್ರೊಪಗಾಂಡ ಸೃಷ್ಟಿಸುವ ಮತ್ತು ಫೇಕ್‌‌ ಫ್ಯಾಕ್ಟರಿ ಎಂದೇ ಕುಖ್ಯಾತಿ ಹೊಂದಿರುವ ‘ಪೋಸ್ಟ್‌ಕಾರ್ಡ್ ಕನ್ನಡ’ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಇತ್ತೀಚೆಗೆ ಮೃತಪಟ್ಟ ಲಾವಣ್ಯ ಎಂಬ ವಿದ್ಯಾರ್ಥಿನಿಯ ಸಾವನ್ನು ಕೋಮುದ್ವೇಷಕ್ಕೆ ಬಳಸಿಕೊಳ್ಳುತ್ತಿದೆ. ವಿದ್ಯಾರ್ಥಿನಿಯ ಸಾವನ್ನು...
Wordpress Social Share Plugin powered by Ultimatelysocial