ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ‘ಖಲಿಸ್ತಾನಿಗಳು’ ಮತ್ತು ರಾಷ್ಟ್ರ ವಿರೋಧಿಗಳು ಎಂದು ಲೇಬಲ್ ಮಾಡದಂತೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮಾಧ್ಯಮಗಳಿಗೆ ಸಲಹೆ ನೀಡಿದೆ.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ, ಯಾವುದೇ ಭಿನ್ನಾಭಿಪ್ರಾಯವನ್ನು ಅವಹೇಳನ ಮಾಡುವಂತಹ ನಿರೂಪಣೆಗೆ ಸಹಕರಿಸಬಾರದು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರೈತ ಪ್ರತಿಭಟನಾಕಾರರನ್ನು, ಅದರಲ್ಲೂ ಹೆಚ್ಚಾಗಿ ಪಂಜಾಬ್‌ನ ಸಿಖ್ ಸಮುದಾಯದ ರೈತರನ್ನು ಪ್ರತ್ಯೇಕತಾವಾದಿಗಳಾದ ಖಲಿಸ್ತಾನಿಗಳು ಮತ್ತು ರಾಷ್ಟ್ರ ವಿರೋಧಿಗಳು ಎಂದು ಸುದ್ದಿ ವಾಹಿನಿಗಳು ಸೇರಿದಂತೆ ಕೆಲವು ಮಾಧ್ಯಮಗಳು ಹೇಳುತ್ತಿವೆ. ಈ ಹಿನ್ನೆಲೆಯಲ್ಲಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಇಂದು ಮಾಧ್ಯಮಗಳಿಗೆ ಸಲಹೆ ನೀಡಿದೆ.
ಇದನ್ನೂ ಓದಿ: ಅರ್ನಾಬ್ ಬಂಧನ ಖಂಡಿಸಿ ಟ್ರೋಲ್‌ಗೊಳಗಾದ ಬೆಂಗಳೂರು ಎಡಿಟರ್ಸ್ ಗಿಲ್ಡ್!
The Editors Guild of India has issued a Media Advisory on the news coverage of the ongoing farmers' protests in the national capital. pic.twitter.com/wwuKTWwW0h
— Editors Guild of India (@IndEditorsGuild) December 4, 2020
ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತ ಸುದ್ದಿ ಪ್ರಸಾರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಂಪಾದಕರ ಸಂಘ, ಯಾವುದೇ ಸಾಕ್ಷಿಗಳು ಮತ್ತು ಪುರಾವೆಗಳಿಲ್ಲದೆ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿರುವವರನ್ನು ಕೆಲವು ಮಾಧ್ಯಮಗಳು ಅವರನ್ನು ‘ಖಲಿಸ್ತಾನಿಗಳು’, ‘ರಾಷ್ಟ್ರ ವಿರೋಧಿಗಳು’ ಎಂಬ ಪದ ಬಳಸುತ್ತಿವೆ ಎಂದಿದೆ.
“ಇಂತಹ ಪದ ಬಳಕೆ ಮತ್ತು ವಿವರಣೆ ಜವಾಬ್ದಾರಿಯುತ ಮತ್ತು ನೈತಿಕ ಪತ್ರಿಕೋದ್ಯಮದ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಇಂತಹ ಕ್ರಮಗಳು ಮಾಧ್ಯಮದ ವಿಶ್ವಾಸಾರ್ಹತೆಗೆ ಧಕ್ಕೆಯುಂಟುಮಾಡುತ್ತವೆ” ಎಂದು ಹೇಳಿದೆ.
ಇದನ್ನೂ ಓದಿ: ಮುನ್ಸೂಚನೆಯಿಲ್ಲದೆ ’ಕಾಶ್ಮೀರ ಟೈಮ್ಸ್’ ಕಚೇರಿಗೆ ಸೀಲ್- ಎಡಿಟರ್ಸ್ ಗಿಲ್ಡ್ ಖಂಡನೆ
ರೈತರ ಪ್ರತಿಭಟನೆಯನ್ನು ವರದಿ ಮಾಡುವವರು “ಸಾಂವಿಧಾನಿಕ ಹಕ್ಕುಗಳ ಮೂಲಕ ಪ್ರತಿಭಟನೆ ಮಾಡುವವರ ವಿರುದ್ಧ ಪಕ್ಷಪಾತ ಮಾಡದೇ, ನ್ಯಾಯಯುತ, ವಸ್ತುನಿಷ್ಠವಾಗಿ ವರದಿ ಮಾಡಬೇಕು ಎಂದು ಮಾಧ್ಯಮ ಸಂಸ್ಥೆಗಳಿಗೆ ಸಲಹೆ ನೀಡಿದೆ.
ಪ್ರತಿಭಟನೆ ಶುರುವಾಗಿ ಇಷ್ಟು ದಿನಗಳಾದ ಮೇಲೆ, ಅದರಲ್ಲೂ ಮಾಧ್ಯಮಗಳು ರೈತರನ್ನು ಖಲಿಸ್ತಾನಿಗಳು, ರಾಷ್ಟ್ರ ವಿರೋಧಿಗಳು ಎಂದೆಲ್ಲಾ ಕರೆದ ಮೇಲೆ ಇಂತಹ ಸಲಹೆಯ ಅವಶ್ಯಕತೆ ಇರಲಿಲ್ಲ ಎಂದು ಎಡಿಟರ್ಸ್ ಗಿಲ್ಡ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ.
You come in like police at the end of the movie..no use.
— Prathyusha (@chinna_purugu) December 4, 2020
ಹಲವು ಮಂದಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಟ್ವಿಟ್ ಅನ್ನು ರಿಟ್ವಿಟ್ ಮಾಡಿ, “ನೀವು ಚಲನಚಿತ್ರಗಳಲ್ಲಿ ಎಲ್ಲಾ ಮುಗಿದ ಮೇಲೆ ಬರುವ ಪೊಲೀಸರಂತೆ, ಯಾವುದೇ ಪ್ರಯೋಜನ ಇಲ್ಲ” ಎಂದಿದ್ದಾರೆ.
ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು “ಮಾಧ್ಯಮಗಳಿಗೆ ಸಲಹೆ ನೀಡಿದ್ದು ಸಾಕು, ಇನ್ನಾದರೂ ಶಿಕ್ಷೆ ನೀಡಿ” ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಕಾಲೆಳೆದಿದ್ದಾರೆ.
ಕೆಲವು ಮಾಧ್ಯಮಗಳು ರೈತರ ಪ್ರತಿಭಟನೆ ಶುರುವಾದಾಗಿನಿಂದಲೂ, ರೈತರನ್ನು ಖಲಿಸ್ತಾನಿಗಳು ಎಂದು ಬಿಂಬಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಪಂಜಾಬ್, ರಾಜಸ್ತಾನ ಮೂಲದ ರೈತರು ಹೆಚ್ಚಾಗಿ ಕಂಡು ಬರುತ್ತಿರುವುದು ಇದಕ್ಕೆ ಕಾರಣ. ಇಷ್ಟೇ ಅಲ್ಲದೇ ರೈತ ಪ್ರತಿಭಟನೆಯಲ್ಲಿ ಇರುವವರು ರೈತರಲ್ಲ, ಅವರು ಬಡವರಲ್ಲ, ಪೊಲೀಸರನ್ನು ರೈತರೇ ಹೊಡೆಯುತ್ತಿದ್ದಾರೆ ಎಂಬಂತಹ ನಕಲಿ ಸುದ್ದಿಗಳನ್ನು ಪ್ರಚುರ ಪಡಿಸುತ್ತಿದ್ದಾರೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳದೇ, ಕೆವಲ ಸಲಹೆ ನಿಡಲು ಮಾತ್ರ ಸೀಮಿತವಾಗಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮೇಲೆ ಸಾಮಾಜಿಕ ಹೋರಾಟಗಾರರು, ರೈತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ರೈತರ ಪರವಾಗಿ ನಿಲ್ಲುವುದನ್ನೇ ರಾಜಕಾರಣವೆನ್ನುವುದಾದರೆ, ಹೌದು ನಾವು ತಪ್ಪಿತಸ್ಥರೇ..!
