ಜೇವರ್ಗಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳರವರು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿರವರಿಗೆ ಜೇವರ್ಗಿ ಬಿಜೆಪಿ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ತಮ್ಮ ಬೆಂಬಲಿಗರು, ಅಭಿಮಾನಿಗಳ ಸಭೆ ನಡೆಸಿದ ದೊಡ್ಡಪ್ಪಗೌಡ ಪಾಟೀಲ ಬಿಜೆಪಿ ತೊರೆಯುವ ನಿರ್ಧಾರ ಘೋಷಿಸಿದ್ದು, ಬೇರೆ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ.
2008 ರ ಚುನಾವಣೆಯಲ್ಲಿ ಮಾಜಿ ಸಿಎಂ ಧರ್ಮಸಿಂಗ್‌ರವರನ್ನು ಮಣಿಸಿದ್ದ ದೊಡ್ಡಪ್ಪಗೌಡ ಪಾಟೀಲರು ನಂತರ ಎರಡು ಚುನಾವಣೆಗಳಲ್ಲಿ ಅವರ ಪುತ್ರ ಅಜಯ್ ಸಿಂಗ್ ವಿರುದ್ಧ ಸೋಲು ಕಂಡಿದ್ದರು.
“ನಾನು ನಿತ್ಯ ಕ್ಷೇತ್ರದ ಜನರ ಕೆಲಸ ಮಾಡಿದ್ದೇನೆಯೇ ಹೊರತು ಕಳ್ಳತನ, ಕೆಟ್ಟದ್ದು ಮಾಡಿಲ್ಲ. ಆದರೂ ಅಸೂಯೆಯಿಂದ ಕೆಲವರು ನನಗೆ ಟಿಕೆಟ್ ತಪ್ಪಿಸಿದ್ದಾರೆ. ಈ ಕಾರಣಕ್ಕಾಗಿಯೇ ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ” ಎಂದರು.
ದೊಡ್ಡಪ್ಪಗೌಡ ಅವರು ತಾಯಿ ಮಲ್ಲಮ್ಮಗೌಡತಿ ಶಿವಲಿಂಗಪ್ಪಗೌಡ ನರಿಬೋಳ ಮಾತನಾಡಿ, “ನನ್ನ ಮಗನನ್ನು ನಿಮ್ಮ ಊಡಿಯಲ್ಲಿ ಹಾಕಿದ್ದೇನೆ. ಬೆಳೆಸುವ ಜವಾಬ್ದಾರಿ ತಾಲ್ಲೂಕಿನ ಜನರ ಮೇಲೆ ಇದೆ. ನಮ್ಮ ಕುಟುಂಬಕ್ಕೆ ಮೋಸ ಮಾಡಿದವರಿಗೆ ನೀವೇ ಉತ್ತರ ಕೊಡಬೇಕು” ಎಂದರು.
ಜೇವರ್ಗಿಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹಾಗಾಗಿ ದೊಡ್ಡಪ್ಪಗೌಡ ಪಾಟೀಲ್‌ರವರು ಜೆಡಿಎಸ್ ಸೇರುವ ಸಾಧ್ಯತೆ ಇದೆ.
ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಲಕ್ಷ್ಮಣ್ ಸವದಿ ಬಿಜೆಪಿ ತೊರೆದಿದ್ದಾರೆ. ಜಗದೀಶ್ ಶೆಟ್ಟರ್ ಬಂಡಾಯ ಸ್ಪರ್ಧೆ ಸುಳಿವು ನೀಡಿದ್ದಾರೆ. ಗೂಳಿಹಟ್ಟಿ ಶೇಖರ್ ಬಂಡಾಯ ಅಭ್ಯರ್ಥಿಯಾಗುವುದಾಗಿ ಘೋಷಿಸಿದ್ದಾರೆ. ಸುಳ್ಯ ಕ್ಷೇತ್ರದ ಶಾಸಕರೂ ಆಗಿರುವ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರಿಗೆ ಟಿಕೆಟ್ ಸಿಗದಿರುವ ಕಾರಣಕ್ಕೆ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಉಡುಪಿ ಟಿಕೆಟ್ ಸಿಗದ ರಘುಪತಿ ಭಟ್ ಕಣ್ಣೀರು ಹಾಕಿದ್ದಾರೆ. ನಿನ್ನೆಯೇ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ತುಮಕೂರು ನಗರದ ಸೊಗಡು ಶಿವಣ್ಣ ಬಿಜೆಪಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಕುಣಿಗಲ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮುದ್ದಹನುಮೇಗೌಡ ಮತ್ತು ರಾಜೇಶ್ ಗೌಡ ಕೂಡ ಬಂಡಾಯದ ಬಾವುಟ ಹಾರಿಸಿದ್ದಾರೆ. ಅವರ ಪಟ್ಟಿಗೆ ದೊಡ್ಡಪ್ಪಗೌಡ ಪಾಟೀಲ್ ಸೇರಿಕೊಂಡಿದ್ದಾರೆ.
ಇದನ್ನೂ ಓದಿ; ತುಮಕೂರು: ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ತೊರೆಯಲು ಸೊಗಡು ಶಿವಣ್ಣ ನಿರ್ಧಾರ


