Homeಮುಖಪುಟತುಮಕೂರು: ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ತೊರೆಯಲು ಸೊಗಡು ಶಿವಣ್ಣ ನಿರ್ಧಾರ

ತುಮಕೂರು: ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ತೊರೆಯಲು ಸೊಗಡು ಶಿವಣ್ಣ ನಿರ್ಧಾರ

- Advertisement -
- Advertisement -

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದತೆ ಬಿಜೆಪಿಯಲ್ಲಿ ಬಂಡಾಯದ ಬಿರುಗಾಳಿ ಎದ್ದಿದೆ. ಪಕ್ಷ ತೊರೆಯುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಅವರ ಸಾಲಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಕೂಡ ಸೇರಿಕೊಂಡಿದ್ದಾರೆ.

ತುಮಕೂರು ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಕಳೆದ ಒಂದು ತಿಂಗಳಿನಿಂದಲೇ ಜೋಳಿಗೆ ಹಿಡಿದು ಪ್ರಚಾರ ಆರಂಭಿಸಿದ್ದರು. ಆದರೆ ಅವರ ಬದಲು ಸಂಸದ ಬಸವರಾಜುರವರ ಪುತ್ರ, ಹಾಲಿ ಶಾಸಕ ಜ್ಯೋತಿಗಣೇಶ್‌ಗೆ ಬಿಜೆಪಿ ಮಣೆ ಹಾಕಿದೆ. ಇದರಿಂದ ಬಂಡಾಯವೆದ್ದಿರುವ ಸೊಗಡು ಶಿವಣ್ಣ ಬಿಜೆಪಿ ತೊರೆಯುವುದಾಗಿ ಘೋಷಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ರಾಜೀನಾಮೆ ನೀಡುವುದು ಸತ್ಯ. ನೂರಕ್ಕೆ ನೂರು ಶೇಕಡಾ ನಾಳೆ ರಾಜೀನಾಮೆ ಕೊಡ್ತೀನಿ. ಚುನಾವಣೆಗೆ ಜೋಳಿಗೆ ಹಾಕಿಕೊಂಡು ನಿಂತುಕೊಳ್ಳುತ್ತೇನೆ. ನಮ್ಮ ಕ್ಷೇತ್ರದ ಮತದಾರ ದೇವರ ಸತ್ಯ ಮಾಡಿ ಹೇಳುತ್ತಿದ್ದೇನೆ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ” ಎಂದು ಘೋಷಿಸಿದ್ದಾರೆ.

ನನಗೆ ಇವತ್ತು ರಾತ್ರಿಯವರೆಗೆ ಸಮಯ ಬೇಕು. ಏಕೆಂದರೆ ಬಿಜೆಪಿ ಪಕ್ಷದ ಬಾವುಟಗಳು ನನ್ನ ಮನೆಯಲ್ಲಿವೆ. ನಾನು ಕೊನೆಯವರೆಗೂ ಅದಕ್ಕೆ ಗೌರವ ಕೊಡಬೇಕು. ಹೀಗಾಗಿ ಅವುಗಳನ್ನ ಬೇರೆ ಕಡೆಗೆ ಶಿಫ್ಟ್ ಮಾಡಬೇಕಿದೆ. ಅದಾದ ನಂತರ ರಾಜೀನಾಮೆ ಘೋಷಿಸುತ್ತೇನೆ ಎಂದಿದ್ದಾರೆ.

ಸಂಘಪರಿವಾರದ ಹಿನ್ನಲೆಯ ಬಿಜೆಪಿ ಅಭ್ಯರ್ಥಿ ಸೊಗಡು ಶಿವಣ್ಣ 1994ರಲ್ಲಿ ಕಾಂಗ್ರೆಸ್‌ನ ಎಸ್.ಶಫಿ ಅಹಮದ್‌ರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ 1999 ಮತ್ತು 2004ರಲ್ಲಿಯೂ ಸಹ ಕಾಂಗ್ರೆಸ್‌ನ ಎಸ್.ಶಫಿ ಅಹಮದ್‌ರ ಎದುರು ಗೆದ್ದು ಹ್ಯಾಟ್ರಿಕ್ ಸಾಧಿಸಿದರು. 2007ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ತೋಟಗಾರಿಕೆ ಇಲಾಖೆ ಸಚಿವರಾಗಿದ್ದರು. ಅಲ್ಲದೆ 2008ರಲ್ಲಿ ಕಾಂಗ್ರೆಸ್‌ನ ಡಾ. ರಫಿಕ್ ಅಹ್ಮದ್ ವಿರುದ್ಧ ಕೇವಲ 1,949 ಮತಗಳ ಅಂತರದಿಂದ ಗೆದ್ದು ಸತತ ನಾಲ್ಕನೇ ಬಾರಿಗೆ ಶಾಸಕರೆನಿಸಿಕೊಂಡರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಪರಿಸರ ಖಾತೆ ಸಚಿವರಾಗಿದ್ದರು.

2013ರ ಚುನಾವಣೆ ವೇಳೆಗೆ ಬಿಜೆಪಿ ಇಬ್ಭಾಗವಾಗಿತ್ತು. ಬಿಜೆಪಿಯಿಂದ ಸೊಗಡು ಶಿವಣ್ಣ ಸ್ಪರ್ಧಿಸಿದರೆ, ಯಡಿಯೂರಪ್ಪನವರ ಕೆಜೆಪಿಯಿಂದ ಇಂಜಿನಿಯರ್ ಜಿ.ಬಿ.ಜ್ಯೋತಿ ಗಣೇಶ್ ಕಣಕ್ಕಿಳಿದಿದ್ದರು. ಇವರಿಬ್ಬರ ನಡುವಿನ ಮತ ವಿಭಜನೆಯ ಲಾಭ ಪಡೆದ ಕಾಂಗ್ರೆಸ್‌ನ ಡಾ. ರಫಿಕ್ ಅಹ್ಮದ್ ಕೇವಲ 3,608 ಮತಗಳಿಂದ ಗೆದ್ದು ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದರು. 2018ರ ವೇಳೆಗೆ ಬಿಜೆಪಿಯೊಂದಿಗೆ ಕೆಜೆಪಿ ವಿಲೀನಗೊಂಡಿತ್ತು. ಆಗ ಸೊಗಡು ಶಿವಣ್ಣನವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಯಡಿಯೂರಪ್ಪ ಬಣದ ಜಿ.ಬಿ.ಜ್ಯೋತಿಗಣೇಶ್ ಬಿಜೆಪಿ ಅಭ್ಯರ್ಥಿಯಾದರು.

2018ರಲ್ಲಿ ಪಕ್ಷದ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಸ್ಪರ್ಧಿಸಲಿಲ್ಲ. ಆದರೆ ಈ ಬಾರಿ ಸ್ಪರ್ಧಿಸಿಯೇ ತೀರುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಶಿವಣ್ಣನವರ ಹಿಂದೆ ಆರ್‌ಎಸ್‌ಎಸ್ ಇದ್ದು, ಅವರು ಈಗಾಗಲೇ ವೋಟು ಕೊಡಿ, ನೋಟು ಕೊಡಿ ಎಂದು ಜೋಳಿಗೆ ಹಿಡಿದು ಪ್ರಚಾರ ಆರಂಭಿಸಿದ್ದಾರೆ.

ಇನ್ನು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಂಸದ ಮುದ್ದಹನುಮೇಗೌಡರು ಸಹ ಬಂಡಾಯದ ಸುಳಿವು ನೀಡಿದ್ದಾರೆ. ಕುಣಿಗಲ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತಮ್ಮ ತೋಟದ ಮನೆಯಲ್ಲಿ ಬೆಂಬಲಿಗರ ಸಭೆ ನಡೆಸಿದ್ದಾರೆ. ಕುಣಿಗಲ್‌ನಲ್ಲಿ ಕೃಷ್ಣಕುಮಾರ್‌ರವರಿಗೆ ಟಿಕೆಟ್ ಘೋಷಿಸಿದ ಹಿನ್ನೆಲೆಯಲ್ಲಿ ಮತ್ತೊರ್ವ ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜೇಶ್ ಗೌಡ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಲಕ್ಷ್ಮಣ್ ಸವದಿ ಬಿಜೆಪಿ ತೊರೆದಿದ್ದಾರೆ. ಜಗದೀಶ್ ಶೆಟ್ಟರ್ ಬಂಡಾಯ ಸ್ಪರ್ಧೆ ಸುಳಿವು ನೀಡಿದ್ದಾರೆ. ಗೂಳಿಹಟ್ಟಿ ಶೇಖರ್ ಬಂಡಾಯ ಅಭ್ಯರ್ಥಿಯಾಗುವುದಾಗಿ ಘೋಷಿಸಿದ್ದಾರೆ. ಸುಳ್ಯ ಕ್ಷೇತ್ರದ ಶಾಸಕರೂ ಆಗಿರುವ ಮೀನುಗಾರಿಕಾ ಸಚಿವ ಎಸ್‌.ಅಂಗಾರ ಅವರಿಗೆ ಟಿಕೆಟ್ ಸಿಗದಿರುವ ಕಾರಣಕ್ಕೆ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಉಡುಪಿ ಟಿಕೆಟ್ ಸಿಗದ ರಘುಪತಿ ಭಟ್ ಕಣ್ಣೀರು ಹಾಕಿದ್ದಾರೆ. ನಿನ್ನೆಯೇ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಈಗ ಸೊಗಡು ಶಿವಣ್ಣ ಏನು ಮಾಡುತ್ತಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ: ತುಮಕೂರು ನಗರ: ಹೊಸ ಮುಖಕ್ಕೆ ಮನ್ನಣೆ ನೀಡಿದ ಕಾಂಗ್ರೆಸ್ – ಬಿಜೆಪಿಯಲ್ಲಿ ಒಳಬೇಗುದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read