ರಾಜ್ಯದಲ್ಲಿ ಗಮನ ಸೆಳೆಯುತ್ತಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಕನಕಪುರವೂ ಒಂದು. ವರ್ಷದ ಹಿಂದೆಯೇ ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಇಲ್ಲಿಂದ ಪಾದಯಾತ್ರೆ ಆರಂಭಿಸಿತ್ತು. ಈಗ ಕಾಂಗ್ರೆಸ್‌ನ ಒಕ್ಕಲಿಗ ಮುಖಂಡ ಡಿ.ಕೆ ಶಿವಕುಮಾರ್ ಎದುರು ಬಿಜೆಪಿಯು ಒಕ್ಕಲಿಗ ಅಭ್ಯರ್ಥಿ ಆರ್. ಅಶೋಕ್‌ರವರನ್ನು ಕಣಕ್ಕಿಳಿಸಿದೆ. ಇಂತಹ ಸಂದರ್ಭದಲ್ಲಿ ಕನಕಪುರದ ರಾಜಕೀಯ ಸ್ಥಿತಿಗತಿ ಕುರಿತು ತಿಳಿಯೋಣ.
ಈ ಹಿಂದೆ ದೇಶದ ಅತಿದೊಡ್ಡ ಲೋಕಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿದ್ದ ಕನಕಪುರ 2008ರಲ್ಲಿ ಮರು ವಿಂಗಡಣೆಯಿಂದಾಗಿ ಲೋಕಸಭಾ ಸ್ಥಾನ ಕಳೆದುಕೊಂಡು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಒಳಪಟ್ಟಿತು. ಅದೇ ಸಮಯದಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರವು ಸಹ ತನ್ನ ಅಸ್ತಿತ್ವ ಕಳೆದುಕೊಂಡು ಕನಕಪುರ ಮತ್ತು ಚನ್ನಪಟ್ಟಣ ಅಸೆಂಬ್ಲಿ ಕ್ಷೇತ್ರಗಳೊಂದಿಗೆ ಸೇರಲ್ಪಟ್ಟಿತ್ತು. ಹಾಗಾಗಿ ನಾವೀಗ ಕನಕಪುರ ಕ್ಷೇತ್ರದ ಕುರಿತು ಬರೆಯಲು ಹೊರಟರೆ ಅಲ್ಲಿ ಸಾತನೂರು ಕ್ಷೇತ್ರದ ಉಲ್ಲೇಖವು ಮಹತ್ವ ಪಡೆದುಕೊಳ್ಳುತ್ತದೆ. ಅದೇ ರೀತಿ ಕನಕಪುರ ಲೋಕಸಭಾ ಕ್ಷೇತ್ರದ್ದೂ ಸಹ.
ಸಾಮಾಜಿಕ ಸ್ಥಾನಮಾನ
ಡಿ.ಎಂ ನಂಜುಡಪ್ಪನವರು ವರದಿ ನೀಡಿದಾಗ ಅತಿ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿ ಕನಕಪುರ ಕೊನೆಯ ಸ್ಥಾನದಲ್ಲಿದ್ದು, ಅತಿ ಹಿಂದುಳಿದ ತಾಲೂಕಾಗಿತ್ತು. ಗುಡ್ಡಗಾಡು ಮತ್ತು ಬಯಲು ಸೀಮೆಯ ಇಲ್ಲಿ ಒಣ ಬೇಸಾಯವೇ ಪ್ರಮುಖ ಕಸುಬಾಗಿತ್ತು. ನಂತರ ಸುವರ್ಣಮುಖಿ ಮತ್ತು ವೃಷಭಾವತಿ ನದಿಗೆ ಹಾರೋಬೆಲೆ ಅಣೆಕಟ್ಟು ನಿರ್ಮಾಣವಾದುದ್ದು ಹಾಗೂ ಕೆಲವು ಯೋಜನೆಗಳ ಮೂಲಕ ಅಂತರ್ಜಲ ಮರುಪೂರಣ ಮಾಡಿದ ನಂತರವಷ್ಟೆ ಇಲ್ಲಿ ಒಂದಷ್ಟು ರೈತರು ರೇಷ್ಮೆ ಸೇರಿ ಇತರ ಬೆಳೆ ಬೆಳೆದು ಮುಂದೆ ಬರಲು ಸಾಧ್ಯವಾಯಿತು. ದೊಡ್ಡದೊಡ್ಡ ಬೆಟ್ಟಗಳನ್ನು ಕಡಿದು, ಕಲ್ಲು ಗಣಿಗಾರಿಕೆ ಮಾಡಿ, ಗ್ರಾನೈಟ್ ಮಾಡಿ ಹಣ ಮಾಡಿದವರು ಬಹುತೇಕರಿದ್ದಾರೆ. ಹಾಗಾಗಿ ಇದು ಈಗ ಹಿಂದುಳಿದ ತಾಲ್ಲೂಕಿನ ಹಣೆಪಟ್ಟೆ ಕಳೆದುಕೊಂಡಿದೆ. ಆದರೆ ಇಂದಿಗೂ ನೆತ್ತಿಯ ಮೇಲೆ ನೆಟ್ಟಗಿನ ಸೂರಿಲ್ಲದ, ರಸ್ತೆಗಳಿಲ್ಲದ ಸಾವಿರಾರು ಕುಟುಂಬಗಳು ಕೂಲಿ ನಾಲಿ ಮಾಡಿ ದಿನದೂಡುತ್ತಿದ್ದಾರೆ. ಗಣನೀಯ ಸಂಖ್ಯೆಯಲ್ಲಿರುವ ಇರುಳಿಗ ಆದಿವಾಸಿ ಸಮುದಾಯಗಳು ಅರಣ್ಯದಿಂದ ಹೊರದಬ್ಬಿಸಿಕೊಂಡು ನೆಲೆ ಇಲ್ಲದೆ ಪರದಾಡುತ್ತಿದ್ದಾರೆ. ಆದರೆ ಅಳಿವಿನಂಚಿನಲ್ಲಿರುವ ಆದಿವಾಸಿ ಇರುಳಿಗ ಜನರ ಗೋಳು ಕೇಳುವವರಿಲ್ಲ॒
ಒಕ್ಕಲಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಕನಕಪುರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ ನಂತರದ ಸ್ಥಾನದಲ್ಲಿದೆ. ಲಿಂಗಾಯತರು, ಮುಸ್ಲಿಮರು, ಇತರೆ ಹಿಂದುಳಿದ ಸಮುದಾಯಗಳು ಚಿಕ್ಕಚಿಕ್ಕ ಪಾಕೆಟ್‌ನಲ್ಲಿವೆ. ಒಕ್ಕಲಿಗ ಮತಗಳೇ ಕ್ಷೇತ್ರದ ನಿರ್ಣಾಯಕ ಮತಗಳಾಗಿವೆ.
ರಾಜಕೀಯ ಇತಿಹಾಸ
1957ರ ಆರಂಭದ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಇಲ್ಲಿ ಎಂ ಲಿಂಗೇಗೌಡರು ಜಯಗಳಿಸಿದ್ದರು. ನಂತರದ ವರ್ಷ ಎಸ್ ಕರಿಯಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಆನಂತರದ ವರ್ಷಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯದ ಕ್ಷೇತ್ರವಾಗಿದ್ದ ಕನಕಪುರ 1983ರಲ್ಲಿ ಪಿ.ಜಿ.ಆರ್ ಸಿಂಧ್ಯಾರವರು ಮುನ್ನಲೆಗೆ ಬಂದ ನಂತರ ಅವರ ಭದ್ರ ನೆಲೆಯಾಯಿತು. ಅವರು ಅಲ್ಲಿಂದ ಸತತವಾಗಿ ಆರು ಬಾರಿ ಆಯ್ಕೆಯಾಗಿದ್ದಾರೆ. ಜನತಾ ಪಕ್ಷ, ಜೆಡಿಯು ಮತ್ತು ಜೆಡಿಎಸ್ ಪಕ್ಷದಿಂದ ತಲಾ ಎರೆಡೆರಡು ಬಾರಿ ಸ್ಪರ್ಧಿಸಿ ಜಯ ಗಳಿಸಿದ ದಾಖಲೆ ಅವರದು.
ಹಣಬಲ, ಜಾತಿಬಲ ಮೀರಿದ ನಾಯಕ ಸಿಂಧ್ಯಾ
ಮರಾಠ ಸಮುದಾಯದ ಸಿಂಧ್ಯಾರವರು ಒಕ್ಕಲಿಗ ಬಾಹುಳ್ಯದ ಕನಕಪುರ ಕ್ಷೇತ್ರದಲ್ಲಿ ಸತತವಾಗಿ 6 ಬಾರಿ ಗೆಲ್ಲುವುದು ಸಾಮಾನ್ಯದ ವಿಚಾರವಲ್ಲ. ಅದಕ್ಕೆ ಮುಖ್ಯ ಕಾರಣ ಅವರು ಜನರೊಟ್ಟಿಗೆ ಇಟ್ಟುಕೊಂಡಿದ್ದ ನಿಕಟ ಸಂಪರ್ಕವಾಗಿತ್ತು. ರಸ್ತೆ, ನೀರಾವರಿಯಂತಹ ಕಣ್ಣಿಗೆ ಕಾಣುವ ಅಭಿವೃದ್ದಿ ಕೆಲಸಗಳನ್ನು ಮಾಡುವಲ್ಲಿ ಅವರು ಹಿಂದೆ ಬಿದ್ದರೂ ಸಹ, ಜನರ ವಯಕ್ತಿಕ ಕೆಲಸಗಳನ್ನು ಮುತುವರ್ಜಿಯಿಂದ ಮಾಡುತ್ತಿದ್ದರು. ಯಾವುದೇ ಕೆಲಸಗಳಿಗಾಗಿ ತಮ್ಮ ಮನೆಗೆ ಬರುವ ಪ್ರತಿಯೊಬ್ಬರ ಹೆಸರು ನೆನಪಿಟ್ಟುಕೊಂಡು ಅವರು ಕೆಲಸ ಆಗುವವರೆಗೂ ಶ್ರಮಿಸುತ್ತಿದ್ದರು ಎಂದು ಅವರ ಬಗ್ಗೆ ಜನರು ಹೇಳುತ್ತಾರೆ.
ದೇವೇಗೌಡರು ಸಿಎಂ ಆಗಿದ್ದಾಗ ಸಿಂಧ್ಯಾರವರು ಗೃಹಮಂತ್ರಿಯಾಗಿದ್ದರು. ಆಗ ಅವರು ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಬೆಂಗಳೂರಿನಲ್ಲಿ ಅಧಿಕಾರಿಗಳು ಮತ್ತು ಜನರ ಬೃಹತ್ ಸಭೆ ಏರ್ಪಡಿಸಿದ್ದರು. ಜನರು ನೇರವಾಗಿ ಅಧಿಕಾರಿಗಳ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ತದನಂತರ ಆ ಕೆಲಸಗಳು ಆಗಿದ್ದಾವೆಯೇ ಎಂದು ಫಾಲೋಅಪ್ ಮಾಡುತ್ತಿದ್ದರು. ಅವರ ಮನೆಗೆ ಸಮಸ್ಯೆ ಹೇಳಿಕೊಳ್ಳಲು ಬಂದವರಿಗೆ ಊಟ, ತಿಂಡಿ ಬಸ್‌ಚಾರ್ಜ್‌ಗೆಂದು ದುಡ್ಡುಕೊಟ್ಟು ಕಳಿಸುತ್ತಿದ್ದರು. ಹಾಗಾಗಿಯೇ ಜನ ಅವರನ್ನು 6 ಬಾರಿ ಗೆಲ್ಲಿಸಿದರು ಎನ್ನುತ್ತಾರೆ ಕ್ಷೇತ್ರದ ಜನ.
2008ರಲ್ಲಿ ಕನಕಪುರದಲ್ಲಿ ಸಿಂಧ್ಯಾರವರು ಕಣಕ್ಕಿಳಿಯಲಿಲ್ಲ. ಆದರೆ 2013ರಲ್ಲಿ ಜೆಡಿಎಸ್‌ನಿಂದ ಮತ್ತೆ ಸ್ಪರ್ಧಿಸಿದರೂ ಮತದಾರರು ಅವರ ಕೈ ಹಿಡಿಯಲಿಲ್ಲ. ತದ ನಂತರ ಬಿಎಸ್‌ಪಿ ಸೇರಿದ ಅವರು ಅಲ್ಲಿಯೂ ನೆಲೆ ನಿಲ್ಲಲಿಲ್ಲ. ಸುತ್ತಿ ಬಳಸಿ ಕೊನೆಗೆ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಡಿ.ಕೆ.ಶಿ ಎಂಟ್ರಿ
ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿಆರಂಭದಲ್ಲಿ ಇಲ್ಲಿ ಎಚ್ ಪುಟ್ಟದಾಸ ಎಂಬುವವರು ಸ್ವಂತತ್ರ ಅಭ್ಯರ್ಥಿಯಾಗಿ ಜಯಗಳಿಸಿ ನಂತರ ಕಾಂಗ್ರೆಸ್ ಸೇರಿ ಮತ್ತೊಮ್ಮೆ ಆಯ್ಕೆಯಾಗಿದ್ದರು. ನಂತರದ ಎರಡು ಚುನಾವಣೆಗಳಲ್ಲಿ ಜನತಾ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದರು. ಹೀಗಿರುವಾಗ 1985ರಲ್ಲಿ ಈ ಕ್ಷೇತ್ರಕ್ಕೆ ಎಚ್.ಡಿ ದೇವೇಗೌಡರ ರಂಗಪ್ರವೇಶವಾಯಿತು. ಜನತಾ ಪಕ್ಷದಿಂದ ದೇವೇಗೌಡರು ಆ ವರ್ಷ ನಡೆದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರೆ, ಅವರ ವಿರುದ್ಧ 23 ವರ್ಷದ ಯುವಕ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋಲನಪ್ಪಿದರು. ತದನಂತರ 1989ರಿಂದ 2004ರ ಚುನಾವಣೆಯವರೆಗೂ ಸತತ ನಾಲ್ಕು ಬಾರಿ ಡಿ.ಕೆಶಿ ಜಯಗಳಿಸಿದ್ದಾರೆ.
ಡಿಕೆಶಿ ವರ್ಸಸ್ ದೇವೇಗೌಡರ ಕುಟುಂಬ
1999 ರ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದ ಎಚ್.ಡಿ ಕುಮಾರಸ್ವಾಮಿಯವರಿಗೆ ಡಿ.ಕೆ.ಶಿ ಸೋಲಿನ ರುಚಿ ತೋರಿಸಿದ್ದರು. ಆದರೆ 2002 ರಲ್ಲಿ ನಡೆದ ಕನಕಪುರ ಲೋಕಸಭಾ ಉಪಚುನಾವಣೆಯಲ್ಲಿ ಅದೇ ಡಿ.ಕೆ.ಶಿ ದೇವೇಗೌಡರ ವಿರುದ್ದ ಸೋಲನಪ್ಪಿದರು. ಅದನ್ನು ಸವಾಲಾಗಿ ಸ್ವೀಕರಿಸಿ 2004ರ ಲೋಕಸಭಾ ಚುನಾವಣೆಯಲ್ಲಿ ಕನಕಪುರದಿಂದ ಎಚ್.ಡಿ ದೇವೇಗೌಡರ ಎದುರು ತೇಜಸ್ವಿನಿ ಗೌಡ ಎಂಬುವವರನ್ನು ಕಣಕ್ಕಿಳಿಸಿ ಜಯಗಳಿಸುವಂತೆ ಮಾಡಿದ್ದರು. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅತಂತ್ರ ವಿಧಾನಸಭಾ ಫಲಿತಾಂಶ ಬಂದಾಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಏರ್ಪಟ್ಟಿತು. ಆದರೆ ಡಿ.ಕೆ ಶಿವಕುಮಾರ್‌ರವರಿಗೆ ಯಾವುದೇ ಸಚಿವ ಸ್ಥಾನ ನೀಡಿರಲಿಲ್ಲ! ಹಾಗಾಗಿಯೇ ಡಿ.ಕೆ ಶಿವಕುಮಾರ್ ಅಭದ್ರತೆಯ ಕಾರಣಕ್ಕೂ ಸಹ ಸದ್ಯ ಕನಕಪುರದಲ್ಲಿ ವಿರೋಧಿಗಳಿಲ್ಲದ ಹಾಗೆ ನೋಡಿಕೊಂಡಿದ್ದಾರೆ.
ಸಾತನೂರು ಕ್ಷೇತ್ರದಲ್ಲಿದ್ದ ಡಿ.ಕೆ ಶಿವಕುಮಾರ್ ಮರುವಿಂಗಡಣೆಯ ನಂತರ 2008ರಿಂದ ಕನಕಪುರಕ್ಕೆ ಬಂದು ಹ್ಯಾಟ್ರಿಕ್ ಜಯಗಳಿಸುವುದಲ್ಲದೆ ತಮ್ಮ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುತ್ತ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. 2008ರಲ್ಲಿ ಅವರು ಜೆಡಿಎಸ್‌ನ ಡಿ.ಎಂ ವಿಶ್ವನಾಥ್ ಎದುರು 7,179 ಮತಗಳ ಅಂತರದ ಪ್ರಯಾಸದ ಜಯಗಳಿಸಿದರು. ಆದರೆ 10 ವರ್ಷಗಳ ನಂತರ 2018ರಲ್ಲಿ ಅದೇ ಜೆಡಿಎಸ್‌ನ ನಾರಾಯಣಗೌಡರ ಎದುರು 79,909 ಮತಗಳ ಬೃಹತ್ ಅಂತರದ ಜಯ ದಾಖಲಿಸಿದರು. ವಿರೋಧಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು, ಅವರು ಬರದಿದ್ದರೆ ನಿರ್ನಾಮ ಮಾಡುವುದು ಡಿ.ಕೆ ಸಹೋದರರ ರಾಜಕೀಯ ಎಂಬ ಆರೋಪವೂ ಅವರ ಮೇಲಿದೆ.
ವಿರೋಧಿಗಳಿಲ್ಲದ ಡಿ.ಕೆ ಸಹೋದರರ ಅಡ್ಡ
ಡಿ.ಕೆ.ಶಿಗೆ ಪೈಪೋಟಿ ನೀಡುತ್ತಿದ್ದ ಪಿ.ಜಿ.ಆರ್ ಸಿಂಧ್ಯಾರವರು ಕೊನೆಗೆ ಕಾಂಗ್ರೆಸ್ ಸೇರಬೇಕಾಯಿತು. ಎಚ್.ಕೆ ಶ್ರೀಕಂಠು ಎಂಬವವರು MSCನಲ್ಲಿ ಚಿನ್ನದ ಪದಕ ಗೆದ್ದಿದ್ದ ಪ್ರಗತಿಪರ ರೈತರಾಗಿದ್ದರು. ಡಿ.ಕೆ ಸಹೋದರರು ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪಗಳಿದ್ದ ಸಮಯದಲ್ಲಿಯೇ ಅವರು ಕಾಂಗ್ರೆಸ್ ಸೇರಿದರು. ಇನ್ನು ತೋಟಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಕೀರಣಗೆರೆ ಜಗದೀಶ್ ಎಂಬುವವರು ಕೀರಣಗೆರೆಯಲ್ಲಿ ದೊಡ್ಡ ರೇಷ್ಮೆ ಹುಳು ಸಾಕಾಣಿಕೆ ಕೇಂದ್ರ ನಡೆಸುತ್ತಿದ್ದಾರೆ. ನೂರಾರು ಜನರಿಗೆ ಉದ್ಯೋಗ ನೀಡಿರುವ ಅವರು ಆರಂಭದಲ್ಲಿ ಡಿ.ಕೆ ಸಹೋದರರ ವಿರುದ್ಧವಿದ್ದವರು ನಂತರ ಅವರು ಕೂಡ ಕಾಂಗ್ರೆಸ್ ಸೇರಿದ್ದಾರೆ. ಇಲ್ಲಿಯವರೆಗೆ ಜೆಡಿಎಸ್‌ನಲ್ಲಿದ್ದ ಬಾಲನರಸಿಂಹೇಗೌಡರು ಕಾಂಗ್ರೆಸ್ ಸೇರಿದ್ದಾರೆ. ಅಲ್ಲಿಗೆ ಡಿ.ಕೆ ಸಹೋದರರಿಗೆ ಪ್ರಬಲ ವಿರೋಧವೇ ಇಲ್ಲದ ಕ್ಷೇತ್ರವಾಗಿದೆ ಕನಕಪುರ.
ಡಿ.ಕೆ ಶಿವಕುಮಾರ್ ಕೆ.ಪಿ.ಸಿ.ಸಿ ಅಧ್ಯಕ್ಷರಾದ ನಂತರ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸಿಎಂ ಆಗುವ ಬಯಕೆಯಲ್ಲಿ ಇಡೀ ರಾಜ್ಯ ಸುತ್ತುತ್ತಿದ್ದಾರೆ. ಹಾಗಾಗಿ ಇಡೀ ಕನಕಪುರದ ರಾಜಕೀಯ ಉಸ್ತುವಾರಿ ನೋಡಿಕೊಳ್ಳುವುದು ಸಹೋದರ, ಸಂಸದರಾದ ಡಿ.ಕೆ ಸುರೇಶ್. ಸಾಕಷ್ಟು ಬೆಂಬಲಿಗ ಪಡೆಯನ್ನು ಹೊಂದಿರುವ ಡಿ.ಕೆ ಸುರೇಶ್ ಅವರಿಗಾಗಿ ನೀರಿನಂತೆ ಹಣ ಖರ್ಚು ಮಾಡುತ್ತಾರೆ ಎನ್ನಲಾಗುತ್ತಿದೆ. ಕ್ಷೇತ್ರದ ಕಲ್ಲು ಗಣಿಗಾರಿಕೆಯ ಮೇಲೆ ಹಿಡಿತ ಹೊಂದಿದ್ದರಿಂದಲೇ ಭಾರೀ ಶ್ರೀಮಂತರಾಗಲು ಕಾರಣವಾಗಿದೆ. ಹಣ, ಅಧಿಕಾರ ಹೊಂದಿರುವ ಇವರನ್ನು ಪ್ರಶ್ನಿಸುವವರೆ ಇಲ್ಲವಾಗಿದೆ ಎನ್ನುವುದು ಸಾಮಾನ್ಯ ಆರೋಪ.
ಕ್ಷೇತ್ರದ ಕೆಲಸಗಳ ಬಗ್ಗೆ ಹಿಡಿತ ಹೊಂದಿರುವ ಡಿ.ಕೆ ಸುರೇಶ್ ಯಾವುದೇ ಅಭಿವೃದ್ಧಿ ಕುರಿತ ಸಭೆಯಲ್ಲಿ ಭಾಗವಹಿಸುವ ಮುನ್ನ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು ಹೋಗುತ್ತಾರೆ. ಕೆಲಸ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಮುಂದಿನ ಸಭೆಯಲ್ಲಿಯೂ ಅದನ್ನು ನೆನಪಿಟ್ಟುಕೊಂಡು ಫಾಲೋಅಪ್ ಮಾಡುತ್ತಾರೆ ಎಂಬ ಮೆಚ್ಚುಗೆಯ ಮಾತುಗಳ ಸಹ ಕೇಳಿಬರುತ್ತವೆ. ಆದರೆ ಜನರಿಗೆ ಗೌರವ ಕೊಡುವುದಿಲ್ಲ, ಭಯದಲ್ಲಿಟ್ಟಿರುತ್ತಾರೆ ಎಂಬ ಆರೋಪವೂ ಜೊತೆಗಿರುತ್ತವೆ.
ವಿಡಿಯೋ ನೋಡಿ
ಜೆಡಿಎಸ್ ಪರಿಸ್ಥಿತಿ – ಕ್ಷೇತ್ರಕ್ಕೆ ಕಾಲಿಡದ ಎಚ್.ಡಿ.ಕೆ
ರಾಮನಗರ ಜಿಲ್ಲೆಯ ಮನೆ ಮಗ ಎಂದು ಹೇಳಿಕೊಳ್ಳುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಚನ್ನಪಟ್ಟಣ, ರಾಮನಗರ, ಮಾಗಡಿಯಲ್ಲಿ ಹಿಡಿತ ಹೊಂದಿದ್ದರೂ ಕನಕಪುರದ ಕಡೆ ಮಾತ್ರ ಹೆಚ್ಚಾಗಿ ತಲೆ ಹಾಕುವುದಿಲ್ಲ. ಅಷ್ಟು ಮಾತ್ರವಲ್ಲದೆ ಚುನಾವಣೆ ಸಮಯದಲ್ಲಿ ಡಿ.ಕೆ ಶಿವಕುಮಾರ್‌ರವರಿಗೆ ಸಹಾಯ ಮಾಡಲು ಅವರ ಎದುರು ’ಡಮ್ಮಿ’ ಕ್ಯಾಂಡಿಡೇಟ್ ಹಾಕುತ್ತಾರೆ. ಅದಕ್ಕೆ ಪ್ರತಿಯಾಗಿ ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಡಿ.ಕೆ ಶಿವಕುಮಾರ್ ಕಾಲಿಡುವುದಿಲ್ಲ, ಇಬ್ಬರದು ಹೊಂದಾಣಿಕೆಯ ರಾಜಕಾರಣ ಎಂಬ ಆರೋಪ ದಟ್ಟವಾಗಿದೆ.
ಈ ಬಾರಿ ನಾಗರಾಜು ಎಂಬ ಅಭ್ಯರ್ಥಿಗೆ ಜೆಡಿಎಸ್ ಟಿಕೆಟ್ ನೀಡಿದೆ. ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿರುವ ಅವರು ಈ ಹಿಂದೆ ಕನಕಪುರ ಪುರಸಭೆ ಇದ್ದಾಗ ಅಧ್ಯಕ್ಷರಾಗಿದ್ದರು. ಆನಂತರ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಒಂದಷ್ಟು ಗ್ರಾ.ಪಂ ಮತ್ತು ಜಿ.ಪಂನಲ್ಲಿ ಜೆಡಿಎಸ್ ಗೆಲ್ಲುತ್ತದೆ. 40-50 ಸಾವಿರ ಸಾಂಪ್ರದಾಯಿಕ ಜೆಡಿಎಸ್ ಮತಗಳಿವೆ. ಆದರೂ ಪ್ರಬಲ ಅಭ್ಯರ್ಥಿ ಇಲ್ಲದ ಕಾರಣಕ್ಕೆ ಇತ್ತೀಚಿನ ದಿನಗಳ ಅಸೆಂಬ್ಲಿ ಚುನಾವಣೆಯಲ್ಲಿ ಗೆಲ್ಲುವುದಿರಲಿ ಪೈಪೋಟಿ ಸಹ ನೀಡಲು ಆಗದ ಪರಿಸ್ಥಿತಿ ಜೆಡಿಎಸ್‌ನದು.
ಏಸು ಪ್ರತಿಮೆ ವಿವಾದ ಮತ್ತು ಬಿಜೆಪಿ
ಕನಕಪುರ ನಗರಸಭೆಯಲ್ಲಿ ಒಂದು ಸ್ಥಾನ ಗೆದ್ದಿರುವುದು ಬಿಟ್ಟರೆ ಈ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ಅಸ್ತಿತ್ವವಿಲ್ಲ. 31 ಕ್ಷೇತ್ರಗಳ ನಗರಸಭೆಯಲ್ಲಿ 26 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಪಾರಮ್ಯ ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಂದಿನಿ ಗೌಡ ಕೇವಲ 6,273 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು.
ಎರಡು ವರ್ಷಗಳ ಹಿಂದೆ ಹಾರೋಬೆಲೆ ಬಳಿಯ ಕಪಾಲ ಬೆಟ್ಟದಲ್ಲಿ ಅಲ್ಲಿನ ಕ್ರಿಶ್ಚಿಯನ್ನರು ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಮುಂದಾದಾಗ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿ ಅನೇಕ ಬಿಜೆಪಿಗರು ಕಪಾಲಬೆಟ್ಟವು ಇದಕ್ಕೂ ಮುಂಚೆ ಮುನೇಶ್ವರ ಬೆಟ್ಟವಾಗಿತ್ತೆಂದು ಗುಲ್ಲೆಬ್ಬಿಸಿ ಅದನ್ನು ವಿವಾದಗ್ರಸ್ತವಾಗಿಸಲು ಯತ್ನಿಸಿದರು. ಒಂದಷ್ಟು ಪ್ರತಿಭಟನೆ ನಡೆಸಿ ಗಲಾಟೆ ಮಾಡಲು ಯತ್ನಿಸಿದರು. ಆದರೆ ಅಲ್ಲಿನ ಜನ ಅದಕ್ಕೆ ಸೊಪ್ಪು ಹಾಕಲಿಲ್ಲ. ಇನ್ನು ಪುನೀತ್ ಕೆರೆಹಳ್ಳಿ ಎಂಬ ವಸೂಲಿಗಾರನೊಬ್ಬ ದನ ಸಾಗಿಸುತ್ತಿದ್ದಾರೆ ಎಂದು ಮಂಡ್ಯದ ಇದ್ರೀಶ್ ಪಾಶ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಇದೆಲ್ಲವೂ ಬಿಜೆಪಿಗೆ ವಿರುದ್ಧವಾದ ವಾತಾವರಣ ಸೃಷ್ಟಿಸಿದೆ.
ಇಂತಹ ಸಂದರ್ಭದಲ್ಲಿ ಇಲ್ಲಿಗೆ ಆರ್.ಅಶೋಕ್‌ರವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಮಾತ್ರವಲ್ಲದೇ ಪದ್ಮನಾಭನಗರದಲ್ಲಿಯೂ ಅವರಿಗೆ ಟಿಕೆಟ್ ನೀಡಿದೆ. ಆ ಮೂಲಕ ಆರ್.ಅಶೋಕ್ ಡಿ.ಕೆ ಶಿವಕುಮಾರ್ ಎದುರು ಗೆಲ್ಲಲಾರರು ಎಂಬ ಸಂದೇಶವನ್ನು ಸ್ವತಃ ಬಿಜೆಪಿಯೇ ಸಾರಿದೆ. ಪಕ್ಷ ಸಂಘಟನೆ, ಕಾರ್ಯಕರ್ತರು ಯಾವುದು ಇಲ್ಲದ ಸಾಂಕೇತಿಕ ಸ್ಪರ್ಧೆ ಬಿಜೆಪಿಯದ್ದಾಗಿದೆ. ಆದರೆ ಪ್ರತಿ ಬೂತ್ ಮಟ್ಟದಲ್ಲಿ ಪ್ರಬಲ ಹಿಡಿತ ಸಾಧಿಸಿರುವ ಡಿ.ಕೆ ಶಿವಕುಮಾರ್ ಕಳೆದ ಚುನಾವಣೆಯಲ್ಲಿ 70,000ಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆದ್ದಿರುವ ದಾಖಲೆ ಹೊಂದಿದ್ದಾರೆ. ಡಿ.ಕೆ.ಶಿ ವಿರೋಧಿಗಳ ಒಂದಷ್ಟು ಮತಗಳನ್ನು ಅಶೋಕ್ ಪಡೆದುಕೊಳ್ಳಬಲ್ಲರೆ ಹೊರತು ಬೇರೆ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕನಕಪುರ ಕ್ಷೇತ್ರ ಡಿ.ಕೆ ಶಿವಕುಮಾರ್‌ರವರಿಗೆ ಸುಲಭ ತುತ್ತಾಗಲಿದೆ.
ಇದನ್ನೂ ಓದಿ: ತುಮಕೂರು ನಗರ: ಬಿಜೆಪಿಯಲ್ಲಿ ಬಂಡಾಯ – ಕಾಂಗ್ರೆಸ್, ಜೆಡಿಎಸ್‌ಗೆ ಜಯದ ಅವಕಾಶ


