ಜಮ್ಮು-ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರು ‘ದಿ ವೈರ್’ ನಡೆಸಿದ ಸಂದರ್ಶನದಲ್ಲಿ ಕರಣ್ ಥಾಪರ್ ಪ್ರಶ್ನೆಗಳಿಗೆ ನೀಡಿರುವ ಮಾಹಿತಿ ಇಡೀ ಭಾರತವನ್ನೇ ದಂಗು ಬಡಿಸಿದೆ. ಹೌದು, ಭಾರತದ ಯೋಧರು ಫುಲ್ವಾಮ ಬಳಿ ಉಗ್ರರ ದಾಳಿಗೆ ಹತರಾಗಿದ್ದರು. ಭಾರತೀಯರ ನೆಮ್ಮದಿಗಾಗಿ ಹಗಲೂರಾತ್ರಿ ಗಡಿಗಳಲ್ಲಿ ಚಳಿ, ಮಳೆ, ಗಾಳಿ, ಬಿಸಿಲೆನ್ನದೆ ದುಡಿಯುವ 40 ಯೋಧರ ದೇಹದ ಭಾಗಗಳೂ ಸಿಗದಂತೆ ಸೂಸೈಡ್ ಬಾಂಬರ್ ಉಗ್ರನೊಬ್ಬ ಆಸ್ಪೋಟಿಸಿದ್ದನು. ಕುಟುಂಬದವರಿಗೆ ತಮ್ಮ ಮನೆ ಮಗನ ಮುಖ ನೋಡಲೂ ಆಗಲಿಲ್ಲ. ಆ ಪಾಪಿ ಉಗ್ರ ಸ್ಪೋಟಕ ಬಾಂಬ್ ಅನ್ನು ಯೋಧರ ಹತ್ತಿರದವರೆಗೂ ಹೇಗೆ ತಂದನು? ಆ ಸ್ಪೋಟಕಗಳನ್ನು ಎಲ್ಲಿಂದ, ಹೇಗೆ ತಂದನು? ಎಂಬ ಪ್ರಶ್ನೆಗಳನ್ನು ಕೇಳಿದವರನ್ನು ದೇಶದ್ರೋಹಿಗಳೆಂದರು. ಇರಲಿ ಅದೆಲ್ಲವನ್ನೂ ಮರೆತುಬಿಡೋಣ. ಆ 40 ಯೋಧರ ಪ್ರಾಣ ಹಾಗೂ ಆ ಕುಟುಂಬಗಳ ಕಣ್ಣೀರ ಮುಂದೆ ನಮ್ಮನ್ನು ನಿಂದಿಸಿದ್ದು ಯಾವ ಲೆಕ್ಕ?
ಗವರ್ನರ್ ಸತ್ಯಪಾಲ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಬಿಜೆಪಿ ಸರ್ಕಾರದ ಮೇಲೆ ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಅವುಗಳನ್ನೊಮ್ಮೆ ನೋಡೋಣ.
1. ಪುಲ್ವಾಮ ದಾಳಿ ನಡೆದ ದಿನ ಅಂದರೆ ಫೆಬ್ರವರಿ 14, 2019 ಕ್ಕೂ ಮುಂಚೆ ಜಮ್ಮು-ಕಾಶ್ಮೀರದ ಹಳ್ಳಿಗಳಲ್ಲಿ ರಸ್ತೆಯ ಮೇಲೆ ಸುಮಾರು 10 ರಿಂದ 12 ದಿನಗಳವರೆಗೆ 300 ಕೆ.ಜಿ. ಆರ್.ಡಿ.ಎಕ್ಸ್ ಬಾಂಬ್ ಅನ್ನು ಇರಿಸಿಕೊಂಡು ಉಗ್ರ ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದನು.
2. ಪುಲ್ವಾಮ ಮಾರ್ಗವಾಗಿ ರಸ್ತೆಯ ಮೂಲಕ ಪ್ರಯಾಣ ಬೆಳೆಸಿದ್ದ ಯೋಧರ ತಂಡವು ಮೊದಲು ಮೋದಿಯವರ ಸರ್ಕಾರವನ್ನು ಗೃಹ ಇಲಾಖೆಯ ಮೂಲಕ ಸಂಪರ್ಕಿಸಿ ಸ್ಥಳಾಂತರಕ್ಕಾಗಿ ‘5 ವಿಮಾನಗಳನ್ನು’ ನೀಡಬೇಕೆಂದು ಕೇಳಿಕೊಂಡಿತ್ತು. ಅಷ್ಟೂ ಯೋಧರನ್ನು ಸ್ಥಳಾಂತರಿಸಲು 5 ಹೆಲಿಕಾಪ್ಟರ್‌ಗಳು ಸಾಕಾಗಿದ್ದವು. ಆದರೆ ದುರಂತವೆಂದರೆ ರಾಜನಾಥ್ ಸಿಂಗ್ ನೇತೃತ್ವದ ಗೃಹ ಇಲಾಖೆಯು ಹೆಲಿಕಾಪ್ಟರ್ ನೀಡಲು ನಿರಾಕರಿಸಿತು. ಇದರ ಪರಿಣಾಮದಿಂದಾಗಿ ಪುಲ್ವಾಮ ರಸ್ತೆಯಲ್ಲಿ 40 ಯೋಧರು ಬರುವಂತಾಯಿತು.
3. ಯೋಧರು ಸಂಚರಿಸುತ್ತಿದ್ದ ಆ ಪುಲ್ವಾಮ ರಸ್ತೆಯಲ್ಲಿ 8 ರಿಂದ 10 ಲಿಂಕ್ ರಸ್ತೆಗಳಿವೆ. ಯೋಧರು ಪಯಣಿಸುವಾಗ ಈ ಲಿಂಕ್ ರಸ್ತೆಗಳಲ್ಲಿ ಸಂಚರಿಸುವ ವಾಹನಗಳನ್ನು ತಡೆಗಟ್ಟಿ ನಿಲ್ಲಿಸುವ ಅಥವಾ ತಪಾಸಣೆ ಮಾಡುವ ವ್ಯವಸ್ಥೆ ಸಹಜವಾಗಿ ಇರುತ್ತದೆ. ಆದರೆ ದಾಳಿ ನಡೆದ ದಿನದಂದು ಲಿಂಕ್ ರಸ್ತೆಗಳ ಬಳಿ ತಪಾಸಣೆ ನಡೆಸುವ ಒಬ್ಬರೂ ಇರಲಿಲ್ಲ. ಅಷ್ಟೂ ಲಿಂಕ್ ರಸ್ತೆಗಳು ಮುಕ್ತವಾಗಿದ್ದವು.
4. ಈ ವಿಷಯವನ್ನು ತಿಳಿಸಲು ಅಂದಿನ ಜಮ್ಮು-ಕಾಶ್ಮೀರ್ ಗವರ್ನರ್ ಆಗಿದ್ದ ಸತ್ಯಪಾಲ್ ಮಲಿಕ್ ಪ್ರಧಾನಿ ಮೋದಿಯವರಿಗೆ ಕರೆ ಮಾಡಿದಾಗ ಪ್ರಧಾನಿಗಳು ಉತ್ತರಖಂಡದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್‌ನಲ್ಲಿ ಡಿಸ್ಕವರಿ ಚಾನಲ್‌ನ ‘ಮ್ಯಾನ್ ವರ್ಸಸ್ ವೈಲ್ಡ್’ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಫುಲ್ವಾಮಾ ಧಾಳಿ ಅಪರಾಹ್ನ 3:15 ರ ಸುಮಾರಿಗೆ ನಡೆದಿತ್ತು. ಮೋದಿಯವರು ರಾತ್ರಿ ಸುಮಾರು 7:00 ಗಂಟೆಗೆ ಸಂಪರ್ಕಕ್ಕೆ ಬಂದು ವಿಚಾರಿಸಿದರು. ಆಗ ಸತ್ಯಪಾಲ್ ಮಲಿಕ್, ‘ಇದೆಲ್ಲವೂ ನಮ್ಮ ಸರ್ಕಾರದ ಕರ್ತವ್ಯ ಲೋಪದಿಂದ ಆಗಿದೆ. ಗುಪ್ತಚರ ಇಲಾಖೆ, ಗೃಹ ಇಲಾಖೆಯ ವೈಫಲ್ಯದಿಂದ ಈ ಅನಾಹುತ ಸಂಭವಿಸಿದೆ’ ಎಂದು ಹೇಳಿದಾಗ ಪ್ರಧಾನಿ ಮೋದಿಯವರು ‘ಈ ವಿಷಯದ ಬಗ್ಗೆ ತುಟಿ ಬಿಚ್ಚಬೇಡ’ ಎಂದು ಅವರಿಗೆ ಹೇಳಿದರಂತೆ.
5. ಮೋದಿ ಸರ್ಕಾರ ಇದನ್ನು ಮುಚ್ಚಿಟ್ಟಿದ್ದಕ್ಕೆ ಬೇರೆಯದೇ ಕಾರಣವಿರುತ್ತದೆ ಎಂದ ಮಲಿಕ್ ಯಾವುದಕ್ಕೆಂದು ನೇರವಾಗಿ ಬಾಯಿಬಿಟ್ಟಿಲ್ಲ. ಆದರೆ ಆಗ 2019 ರ ಲೋಕಸಭಾ ಚುನಾವಣೆ ಇತ್ತೆಂಬುದನ್ನು ಎಲ್ಲರಿಗೂ ಗೊತ್ತಿರುವ ವಿಷಯ.
6. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಬಳಿಯೂ ಇದರ ಬಗ್ಗೆ ಮಲಿಕ್ ಪ್ರಸ್ತಾಪ ಮಾಡಿದಾಗ ‘ಇದರ ಬಗ್ಗೆ ಮಾತಾಡಬೇಡ, ನಾವಲ್ಲಿಗೆ ಬಂದು ಸರಿಯಾದ ನಿರೂಪಣೆ ನೀಡುತ್ತೇವೆ’ ಎಂದಿದ್ದರಂತೆ.
ಈ ಮೇಲಿನ ಸತ್ಯಪಾಲ್ ಮಲಿಕ್ ನೀಡಿರುವ ಮಾಹಿತಿಯನ್ನು ಕೇಳಿಸಿಕೊಂಡವರಿಗೆ ಎದೆ ಜಲ್ಲೆನ್ನದೇ ಇರಲಾರದು. ಇವು ಹಾದಿ ಬೀದಿಯಲ್ಲಿ ಗಾಳಿ ಸುದ್ಧಿಗಳನ್ನು ಹರಡುವ ಪುಡಾರಿಯ ಮಾತುಗಳಲ್ಲ. ಮೋದಿಯವರ ಸರ್ಕಾರವೇ ನೇಮಿಸಿದ್ದ ಜಮ್ಮು-ಕಾಶ್ಮೀರದ ಅಂದಿನ ರಾಜ್ಯಪಾಲರ ಮಾತು. ಜಮ್ಮು-ಕಾಶ್ಮೀರದ 370 ರ ಸ್ಥಾನವನ್ನು ರದ್ದುಪಡಿಸಿದಾಗ ಇದೇ ರಾಜ್ಯಪಾಲರು ಅಲ್ಲಿದ್ದದ್ದು. ಅಲ್ಲದೆ ಅವರು ಬಿಜೆಪಿಯ ಹಿರಿಯ ಮುಖಂಡರು. ಹಾಗಾಗಿ ಈ ಆರೋಪಗಳನ್ನು ಅಷ್ಟು ಸುಲಭಕ್ಕೆ ತೆಗೆದು ಹಾಕುವಂತಿಲ್ಲ. ದುರಂತವೆಂದರೆ ಈ ‘ಬ್ರೇಕಿಂಗ್ ನ್ಯೂಸ್’ ಅನ್ನು ಯಾವ ಮುಖ್ಯವಾಹಿನಿಯ ಮಾಧ್ಯಮಗಳೂ ‘ಕನಿಷ್ಠಪಕ್ಷ ನ್ಯೂಸ್’ ಮಾಡುತ್ತಿಲ್ಲ. ಆದರೂ ಈ ವಿಚಾರ ಬೂದಿಯಲ್ಲಿ ಮುಚ್ಚಿ ಹೋಗುವಂತದ್ದಲ್ಲ.
ಭಾರತಾಂಬೆಯ ಬಗ್ಗೆ ಗೌರವ ಇರುವವರೆಲ್ಲರೂ ಯೋಧರ ಹೆಸರಿನಲ್ಲಿ ಗದ್ದುಗೆ ಹಿಡಿದ ಮೋದಿಯವರ ಸರ್ಕಾರವನ್ನು ಪ್ರಶ್ನೆ ಮಾಡಲೇ ಬೇಕಿದೆ. ಆಗ ಮಾತ್ರ ಭಾರತಾಂಬೆಯ ಮಕ್ಕಳಾಗಿ ಉಳಿಯಬಹುದಾಗಿದೆ. ಪ್ರಶ್ನೆ ಮಾಡಲು ಹಿಂಜರಿಯುವವರು ಪಾಕಿಸ್ತಾನಕ್ಕೆ ಹೋಗಬಹುದಾಗಿದೆ. ಆ 40 ಜೀವಗಳ ಆತ್ಮಗಳಿಗೆ ಶಾಂತಿ ಸಿಗಬೇಕೆಂದರೆ 300 ಕೆ.ಜಿ ಬಾಂಬ್ ಹೊತ್ತು ವಾರಗಟ್ಟಲೆ ಅಲೆದಾಡಿದ ಉಗ್ರನನ್ನು ತಪಾಸಣೆ ಮಾಡದೆ ತೆಪ್ಪಗಿದ್ದ ದೇಶದ್ರೋಹಿಗಳಿಗೆ ಶಿಕ್ಷೆಯಾಗಬೇಕು. ಆ 40 ಕುಟುಂಬಗಳ ಕಣ್ಣೀರಿಗೂ ಬೆಲೆ ಇದೆಯೆಂದಾದರೆ ಫುಲ್ವಾಮ ಲಿಂಕ್ ರಸ್ತೆಯನ್ನು ಮುಕ್ತವಾಗಿಟ್ಟ ದೇಶದ್ರೋಹಿಗಳಿಗೆ ಶಿಕ್ಷೆಯಾಗಬೇಕು. ಆ 40 ಜೀವಗಳ ನೆನೆದು ಕಣ್ಣೀರಾದ ಭಾರತಾಂಬೆಯ ಮಕ್ಕಳಿಗೆ ಸಮಾಧಾನವಾಗಬೇಕಾದರೆ ಹೆಲಿಕಾಪ್ಟರ್ ಕೊಡದ ಗೃಹ ಇಲಾಖೆಯ ಸಚಿವ ಮತ್ತು ಸಿಬ್ಬಂದಿಗಳಿಗೆ ಶಿಕ್ಷೆಯಾಗಬೇಕು. ಇದೆಲ್ಲಕ್ಕೂ ಮೊದಲು ಸತ್ಯಪಾಲ್ ಮಲಿಕ್ ಮಾಡಿರುವ ಆರೋಪಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಕ್ರಿಯಿಸಬೇಕು. ತಮ್ಮ ಸರ್ಕಾರದ ಯಾವ ತಪ್ಪೂ ಇಲ್ಲವೆಂದು ಹೇಳಿದರೆ ಸಾಲದು, ವಿರೋಧ ಪಕ್ಷದ ಸದಸ್ಯರು ಹಾಗೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿ ನೇಮಿಸಿ ಪುಲ್ವಾಮ ದಾಳಿಯ ತನಿಖೆ ಮಾಡಿಸಬೇಕು.
ಇದನ್ನೂ ಓದಿ: ಅದಾನಿ ಹಗರಣವು ಸಾಮಾನ್ಯ ಜನರನ್ನು ತಲುಪಿದರೆ ಬಿಜೆಪಿ ಕೆಟ್ಟದಾಗಿ ಸೋಲಲಿದೆ: ಸತ್ಯಪಾಲ್ ಮಲಿಕ್


