Homeಮುಖಪುಟಪುಲ್ವಾಮಾ ದಾಳಿ ಕುರಿತ ಸತ್ಯಪಾಲ್ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯೆ

ಪುಲ್ವಾಮಾ ದಾಳಿ ಕುರಿತ ಸತ್ಯಪಾಲ್ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯೆ

- Advertisement -
- Advertisement -

ಫೆಬ್ರವರಿ 14, 2019ರಂದು ನಡೆದ ಪುಲ್ವಾಮಾ ದಾಳಿಯ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮಾಡಿರುವ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಪ್ರತಿಕ್ರಿಯಿಸಿದೆ.

ಮೋದಿ ಸರ್ಕಾರವು ‘ಹಿಂದುತ್ವದ ಅಜೆಂಡಾವನ್ನು ಮುಂದಿಡಲು’ ಘಟನೆಯನ್ನು ಬಳಸಿಕೊಂಡಿದೆ ಎಂಬ ಅಂಶ ಇದರಿಂದ ಸಾಬೀತಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಏಪ್ರಿಲ್ 16 ರಂದು ತಿಳಿಸಿದೆ.

ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪತ್ರಿಕಾ ಪ್ರಕಟಣೆ ನೀಡಿದ್ದು, “ಪುಲ್ವಾಮ ಘಟನೆಯ ಕುರಿತ ಪಾಕಿಸ್ತಾನದ ನಿಲುವನ್ನು ಮಲಿಕ್ ಅವರ ಹೇಳಿಕೆಗಳು ಸಮರ್ಥಿಸಿವೆ” ಎಂದು ಅಭಿಪ್ರಾಯಪಟ್ಟಿದೆ.

“ಭಾರತೀಯ ನಾಯಕತ್ವವು ಪಾಕಿಸ್ತಾನದ ಭಯೋತ್ಪಾದನೆ ಎಂಬ ಹುಸಿ ನಿರೂಪಣೆಯ ಮೂಲಕ ಮತ್ತು ಹಿಂದುತ್ವದ ಅಜೆಂಡಾವನ್ನು ಸ್ಪಷ್ಟವಾಗಿ ಹೇಗೆ ತಮ್ಮ ದೇಶೀಯ ಲಾಭಕ್ಕಾಗಿ ಬಳಸಿಕೊಂಡಿದೆ ಎಂಬುದನ್ನು ಸತ್ಯಪಾಲ್ ಹೇಳಿಕೆ ತೋರಿಸಿದೆ” ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

“ವ್ಯಾಪಕವಾಗಿ ಪ್ರಸಾರವಾದ ಸಂದರ್ಶನದಲ್ಲಿ ಮಲಿಕ್ ಅವರು ಪುಲ್ವಾಮ ದಾಳಿಯ ಕುರಿತು ಹೇಳಿದ್ದಾರೆ. ದಾಳಿಯಲ್ಲಿ ಮಡಿದ ಸಿಆರ್‌ಪಿಎಫ್ ಸಿಬ್ಬಂದಿಗೆ ಭದ್ರತೆಯನ್ನು ಖಾತರಿಪಡಿಸುವಲ್ಲಿ ಸರ್ಕಾರದ ವೈಫಲ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ”.

‘ದಿ ವೈರ್‌’ ಜಾಲತಾಣದ ಖ್ಯಾತ ಪತ್ರಕರ್ತ ಕರಣ್ ಥಾಪರ್ ಅವರು ನಡೆಸಿದ ಸಂದರ್ಶನದಲ್ಲಿ ಸತ್ಯಪಾಲ್‌ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು.

ಮೋದಿ ಸರ್ಕಾರದ ಅಸಮರ್ಥತೆಯಿಂದ 2019ರ ಫೆಬ್ರವರಿಯಲ್ಲಿ ಪುಲ್ವಾಮ ದಾಳಿ ನಡೆದು 40 ಭಾರತೀಯ ಸೈನಿಕರು ಹುತಾತ್ಮರಾಗಬೇಕಾಯಿತು ಎಂದು ಸತ್ಯಪಾಲ್ ಮಲಿಕ್ ಸ್ಫೋಟಕ ಹೇಳಿಕೆ ನೀಡಿದ್ದರು.

“ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯು ಭಾರತೀಯ ಗುಪ್ತಚರ ಇಲಾಖೆಯ ಬಹುದೊಡ್ಡ ವೈಫಲ್ಯ ಮತ್ತು ನಿರ್ದಿಷ್ಟವಾಗಿ ಗೃಹ ಸಚಿವಾಲಯದ ಅಸಮರ್ಥತೆಯ ಪರಿಣಾಮವಾಗಿದೆ. ಆಗ ರಾಜನಾಥ್ ಸಿಂಗ್ ಗೃಹ ಸಚಿವರಾಗಿದ್ದರು. ಸಿಆರ್‌ಪಿಎಫ್ ತನ್ನ ಜವಾನರನ್ನು ಸಾಗಿಸಲು ವಿಮಾನವನ್ನು ಕೇಳಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಅದನ್ನು ನಿರಾಕರಿಸಿತು” ಎಂದು ಮಲಿಕ್ ದೂರಿದ್ದಾರೆ.

ಸತ್ಯ ಪಾಲ್ ಮಲಿಕ್ ಪುಲ್ವಾಮ ದಾಳಿ ನಡೆದಾಗ ಮತ್ತು ಆರ್ಟಿಕಲ್ 370 ಅನ್ನು ಕಿತ್ತು ಹಾಕಿದ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದರು. ನಂತರ ಗೋವಾದ ರಾಜ್ಯಪಾಲರಾಗಿದ್ದ ಅವರು, ಆನಂತರ 2022ರವರೆಗೆ ಮೇಘಾಲಯದ ರಾಜ್ಯಪಾಲರಾಗಿದ್ದರು. ಮೋದಿ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದಾಗ ಅದನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದರು. ಅಲ್ಲದೇ ಆರ್‌ಎಸ್‌ಎಸ್‌ ಭಾರೀ ಭ್ರಷ್ಟಾಚಾರ ನಡೆಸುತ್ತದೆ ಎಂದು ಆರೋಪಿಸಿದ್ದರು.

ದಾಳಿ ನಡೆದ ದಿನ ಸಂಜೆಯೇ ಪ್ರಧಾನಿ ಮೋದಿಯವರಿಗೆ ಈ ವೈಫಲ್ಯಗಳ ಬಗ್ಗೆ ತಿಳಿಸಿದೆ. ನಮ್ಮ ತಪ್ಪಿನಿಂದಾಗಿ 40 ಸೈನಿಕರು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ವಿವರಿಸಿದೆ. ಆದರೆ ಅವರು ಯಾರಿಗೂ ಹೇಳಬೇಡಿ, ಸುಮ್ಮನಿದ್ದುಬಿಡಿ ಎಂದರು.

ಇದನ್ನೂ ಓದಿರಿ: ಪುಲ್ವಾಮ ದಾಳಿ ಸಂದರ್ಭದಲ್ಲಿ ಮೋದಿ ಸರ್ಕಾರದ ಅಸಮರ್ಥತೆಯಿಂದ ಸೈನಿಕರನ್ನು ಉಳಿಸಿಕೊಳ್ಳಲಾಗಲಿಲ್ಲ: ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರ ಗಂಭೀರ ಆರೋಪ

“ಎನ್‌ಎಸ್‌ಎ ಅಜಿತ್ ದೋವಲ್ ಕೂಡ ನನ್ನ ಬಾಯಿ ಮುಚ್ಚಿಸಿದರು. ಆಗ ನನಗೆ ತಕ್ಷಣವೇ ಅರ್ಥವಾಯಿತು, ಅವರ ಉದ್ದೇಶ ಪಾಕಿಸ್ತಾನದ ಮೇಲೆ ದೋಷಾರೋಪ ಮಾಡಿ ಚುನಾವಣೆಯಲ್ಲಿ ಸರ್ಕಾರ ಮತ್ತು ಬಿಜೆಪಿಗೆ ಲಾಭ ಪಡೆಯುವುದಾಗಿತ್ತು” ಎಂದು ಸತ್ಯಪಾಲ್ ಮಲಿಕ್ ಸಂದರ್ಶನದಲ್ಲಿ ಹೇಳಿದ್ದಾರೆ.

ಪುಲ್ವಾಮಾ ಘಟನೆಯಲ್ಲಿ 300 ಕೆಜಿ ಆರ್‌ಡಿಎಕ್ಸ್ ಸ್ಫೋಟಕಗಳನ್ನು ಹೊತ್ತ ಕಾರು ಪಾಕಿಸ್ತಾನದಿಂದ ಬಂದಿದ್ದು, ಜಮ್ಮು ಮತ್ತು ಕಾಶ್ಮೀರದ ರಸ್ತೆಗಳು ಮತ್ತು ಹಳ್ಳಿಗಳಲ್ಲಿ 10-15 ದಿನಗಳ ಕಾಲ ಯಾರಿಗೂ ಗೊತ್ತಾಗದಂತೆ ಮತ್ತು ಯಾರಿಗೂ ತಿಳಿಯದಂತೆ ಸಂಚರಿಸುತ್ತಿತ್ತು ಎಂದರೆ ಇದು ಗಂಭೀರ ಗುಪ್ತಚರ ವೈಫಲ್ಯ ಅಲ್ಲವೇ ಎಂದಿದ್ದಾರೆ.

ಭ್ರಷ್ಟಾಚಾರದ ವಿಷಯಕ ಕುರಿತು ಮಾತನಾಡಿದ ಅವರು, “ಹೈಡ್ರೋ ಎಲೆಕ್ಟ್ರಿಕ್ ಯೋಜನೆ ಮತ್ತು ರಿಲಯೆನ್ಸ್ ಇನ್ಸೂರೆನ್ಸ್ ಯೋಜನೆಗೆ ಅನುಮತಿ ಪಡೆಯಲು ಬಿಜೆಪಿ ಆರ್‌ಎಸ್‌ಎಸ್‌ ಮುಖಂಡ ರಾಮ್ ಮಾಧವ್ ಬಂದಿದ್ದರು. ಆ ಯೋಜನೆಗಳಿಗೆ ಸಹಿ ಹಾಕಿದ್ದರೆ ನನಗೆ 300 ಕೋಟಿ ಸಿಗುತ್ತದೆ ಎಂದು ಜನ ಮಾತನಾಡುತ್ತಿದ್ದರು. ಆದರೆ ನಾನು ಆ ತಪ್ಪು ಕೆಲಸ ಮಾಡಲಿಲ್ಲ. ರಾಮ್ ಮಾಧವ್ ಎಷ್ಟೇ ಪ್ರಯತ್ನ ಪಟ್ಟರೂ ನಾನು ಆ ಯೋಜನೆಗಳನ್ನು ಜಾರಿಗೊಳಿಸಲಿಲ್ಲ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...