ಉತ್ತರ ಪ್ರದೇಶದ ಜಲೌನ್‌ನಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 21 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ಸಾರ್ವಜನಿಕವಾಗಿ ಸೋಮವಾರ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ವಿದ್ಯಾರ್ಥಿನಿ ರೋಶನಿ ಅಹಿರ್ವಾರ್ ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಇಬ್ಬರು ದಾಳಿಕೋರರನ್ನು ರಾಜ್ ಅಹಿರ್ವಾರ್ ಅಲಿಯಾಸ್ ಆತಿಶ್ ಮತ್ತು ರೋಹಿತ್ ಅಲಿಯಾಸ್ ಗೋವಿಂದ ಎಂದು ಪೊಲೀಸರು ಗುರುತಿಸಿದ್ದಾರೆ.
ರೋಶ್ನಿ ಅಹಿರ್ವಾರ್ ಅವರ ಪೋಷಕರು ನೀಡಿದ ದೂರಿನಲ್ಲಿ ರಾಜ್ ಅಹಿರ್ವಾರ್ ಎಂದು ಹೆಸರಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಇರಾಜ್ ರಾಜಾ ತಿಳಿಸಿದ್ದಾರೆ. ಆತನನ್ನು ಬಂಧಿಸಲಾಗಿದ್ದು, ರೋಹಿತ್ ತಲೆಮರೆಸಿಕೊಂಡಿದ್ದಾನೆ.
“ಆಕೆಯೊಂದಿಗೆ ರಿಲೇಷನ್‌ಶಿಪ್‌ನಲ್ಲಿದ್ದೆ. ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಯುವತಿಯು ಸಂಬಂಧವನ್ನು ಕಳೆದುಕೊಂಡಿದ್ದಳು” ಎಂದು ರಾಜಾ ಅಹಿರ್ವಾರ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
“ಅವನು ಮತ್ತೆ ಯುವತಿಯೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿದ್ದನು. ಆದರೆ ಆಕೆ ನಿರಾಕರಿಸಿದಳು. ಆರೋಪಿಗಳು ಕೋಪಗೊಂಡಿದ್ದು, ಈ ಸಂಚು ರೂಪಿಸಿ ಆಕೆಯನ್ನು ಕೊಂದಿದ್ದಾರೆ” ಎಂದು ವರದಿಯಾಗಿದೆ.
ಅಹಿರ್ವಾರ್ ತನ್ನ ಮೋಟರ್‌ಸೈಕಲ್‌ನ ನಂಬರ್ ಪ್ಲೇಟ್ ಅನ್ನು ಮೋಟರ್‌ನ ಕೆಳಗೆ ಬಚ್ಚಿಟ್ಟು, ಗುರುತನ್ನು ಮರೆಮಾಡಲು ತನ್ನ ಬಟ್ಟೆಗಳನ್ನು ಬೆಟ್ವಾ ನದಿಯಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಕ್ಷಿಗಳನ್ನು ಸಂಗ್ರಹಿಸಲು ರಾಜ್ ಅಹಿರ್ವಾರ್‌ನನ್ನು ಪೊಲೀಸರು ಕರೆದೊಯ್ದಾಗ, ಆತ ಇನ್ಸ್‌ಪೆಕ್ಟರ್‌ನ ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಪ್ರತಿಯಾಗಿ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಇದರ ಜೊತೆಗೆ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ ಎಂದು ಹಲವರು ಆರೋಪಿಸಿದ್ದಾರೆ.
ಇದನ್ನೂ ಓದಿರಿ: ಯುಪಿ ಸರ್ಕಾರದ ಬಯಕೆಯಂತೆ ಗ್ಯಾಂಗ್‌ಸ್ಟರ್ ಅತೀಕ್, ಅಶ್ರಫ್ ಶೂಟೌಟ್: ಟ್ವೀಟ್ ಮಾಡಿ, ಡಿಲೀಟ್ ಮಾಡಿದ ಬಿಜೆಪಿ ಸಂಸದ
ಈ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ ಕೂಡ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಟೀಕಿಸಿದೆ. “ಗೋದಿ ಮಾಧ್ಯಮಳೆಂಬ ತೋಳುಗಳು ಮತ್ತು ಬಿಜೆಪಿಯವರು ಈ ಸಾವನ್ನು ಸಂಭ್ರಮಿಸುತ್ತಾರೆಯೇ?” ಎಂದು ಪ್ರಶ್ನಿಸಿದೆ.
ಶನಿವಾರ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಾಜಿ ಸಂಸದ ಅತೀಕ್ ಅಹ್ಮದ್ ಹತ್ಯೆಯನ್ನು ರಾಷ್ಟ್ರೀಯ ಜನತಾ ದಳ ಉಲ್ಲೇಖಿಸಿದೆ. ಗ್ಯಾಂಗ್‌ಸ್ಟರ್-ರಾಜಕಾರಣಿ ಅತೀಕ್ ಮತ್ತು ಅವರ ಸಹೋದರ ಅಶ್ರಫ್ ಅವರು ಪೊಲೀಸರ ಜೊತೆಯಲ್ಲಿದ್ದಾಗಲೇ ಗುಂಡಿಗೆ ತುತ್ತಾಗಿದ್ದರು. ಪತ್ರಕರ್ತರೂ ಸ್ಥಳದಲ್ಲಿ ಹಾಜರಿದ್ದರು. ಹತ್ಯೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವೇ ದಿನಗಳಲ್ಲಿ ಮತ್ತೊಂದು ಇಂತಹದ್ದೇ ಘಟನೆ ಯುಪಿಯಲ್ಲಿ ವರದಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ ಎಂಬ ಕಟು ಟೀಕೆಗಳು ವ್ಯಕ್ತವಾಗುತ್ತಿವೆ.
ಅತೀಕ್ ಪ್ರಕರಣದ ಬಳಿಕ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ವಿಚಾರವಾಗಿ ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ಭಾರೀ ಚರ್ಚೆ ನಡೆಯುತ್ತಿದೆ.


