Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ತರೀಕೆರೆ: ಅಭಿವೃದ್ಧಿಗಿಂತ ಜಾತಿ ಪ್ರತಿಷ್ಠೆಯ ಕಣದಲ್ಲಿ ಗೆಲುವು ಕಮಲಕ್ಕೋ? ಕೈಗೋ?

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ತರೀಕೆರೆ: ಅಭಿವೃದ್ಧಿಗಿಂತ ಜಾತಿ ಪ್ರತಿಷ್ಠೆಯ ಕಣದಲ್ಲಿ ಗೆಲುವು ಕಮಲಕ್ಕೋ? ಕೈಗೋ?

- Advertisement -
- Advertisement -

ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಪ್ರತಿಷ್ಠೆಯ ಅಖಾಡವೆಂದೇ ಗುರುತಿಸಲ್ಪಟ್ಟಿರುವ ತರೀಕೆರೆ-ಅಜ್ಜಂಪುರ ವಿಧಾನಸಭಾ ಸಮರಾಂಗಣದ ಈ ಬಾರಿಯ ’ಹಣಾ’ಹಣಿ ದಿನಕ್ಕೊಂದು ಹೊಸ ಆಯಾಮ ಪಡೆಯುತ್ತ ದೊಡ್ಡಮಟ್ಟದ ಕುತೂಹಲ ಕೆರಳಿಸುತ್ತಿದೆ. ತರೀಕೆರೆಯಲ್ಲಿ ಲಾಗಾಯ್ತಿನಿಂದ ಅಭಿವೃದ್ಧಿ-ಪ್ರಗತಿಯ ಹಂಗಿಲ್ಲದ ಜಾತಿಯ ಜಿದ್ದಾಜಿದ್ದಿ ನಡೆದುಬಂದಿದೆ. ಕ್ಷೇತ್ರದಲ್ಲಿ ದಲಿತರು ಬಹುಸಂಖ್ಯಾತರಾದರೂ ಮೊದಲ ಚುನಾವಣೆಯಿಂದಲೂ ಸ್ಪರ್ಧಾಕಣ ಮಾತ್ರ ಪ್ರಬಲ ಲಿಂಗಾಯತ ಮತ್ತು ಕುರುಬ ಸಮುದಾಯದ ಜಾತಿ “ದೊಡ್ಡಸ್ತಿಕೆ” ಸುತ್ತ ಹದಗೊಳ್ಳುತ್ತಿದೆ. 1957ರಲ್ಲಿ ರಚಿತವಾದ ಈ ಕ್ಷೇತ್ರದಲ್ಲಿ ಎಮ್ಮೆಲ್ಲೆಯಾದವರೆಲ್ಲ ಲಿಂಗಾಯತ ಇಲ್ಲವೆ ಕುರುಬ ಜನಾಂಗದವರು. ಈ ಬಾರಿಯೂ ’ಸಾಂಪ್ರದಾಯಿಕ’ ಕಾದಾಟ ಏರ್‍ಪಡುವ ಸಕಲ ಸೂಚನೆಗಳು ಗೋಚರಿಸುತ್ತಿದೆ. ತರೀಕೆರೆಯ ಜಾತಿ ನಶೆ ಅದೆಷ್ಟು ಜೋರಾಗಿದೆಯೆಂದರೆ, ಸಮಸ್ಯೆಗಳ ಸಂಕಟ ಮತ್ತು ನಾಯಕರೆನಿಸಿಕೊಂಡವರ ನಯವಂಚನೆಯ ನೋವನ್ನೆಲ್ಲ ಮರೆಸಿ ವ್ಯಕ್ತಿ ಪ್ರತಿಷ್ಠೆಯ ಹಮ್ಮು ಮೆರೆಸುತ್ತಿದೆ ಅದು ಎಂದು ಪ್ರಜ್ಞಾವಂತರು ಹೇಳುತ್ತಾರೆ.

ಬಿಜೆಪಿಯ ಒಂದು ವರ್ಗದ ಅಪಸ್ವರದ ನಡುವೆಯೂ ಹಾಲಿ ಶಾಸಕ ಡಿ.ಎಸ್.ಸುರೇಶ್ ತಾನೇ ಕಮಲ ಕಲಿಯೆಂದು ಪ್ರಚಾರದ ಓಡಾಟ ಶುರು ಹಚ್ಚಿಕೊಂಡಿದ್ದಾರೆ; ಯಡಿಯೂರಪ್ಪರ ಕೆಜೆಪಿ ಪೂರ್ವಾಶ್ರಮದ ಸುರೇಶ್ ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್ ಕೊಡಿಯೆಂದು ವಿರೋಧಿ ಬಣ ಹೈಕಮಾಂಡ್ ಮುಂದೆ ನಿವೇದನೆ ಮಂಡಿಸಿದೆ. ಶಾಶಕ ಸುರೇಶ್‌ಗೆ ಬಿಜೆಪಿ ಟಿಕೆಟ್ ಕೊಡುವುದಿಲ್ಲವೆಂದಾದರೆ ತನಗೆ ಛಾನ್ಸ್ ಕೊಡಿಯೆಂದು ಶಾಸಕರ ಒಡನಾಡಿ-ಜಿಪಂ ಮಾಜಿ ಉಪಾಧ್ಯಕ್ಷ ಆನಂದಪ್ಪ ಬೇಡಿಕೆಯಿಟ್ಟಿದ್ದಾರೆ. ಆದರೆ ಸುರೇಶ್‌ರಷ್ಟು ಸ್ವಜಾತಿ ಲಿಂಗಾಯತರ ಸಂಪರ್ಕ ಸಾಧಿಸಿರುವವರು ಮತ್ತು ಖರ್ಚು ಮಾಡಲು ಶಕ್ತಿಯಿರುವ ಆರ್ಥಿಕ ಸ್ಥಿತಿವಂತರು ಸ್ಥಳೀಯ ಬಿಜೆಪಿಯಲ್ಲಿಲ್ಲ; ಜತೆಗೆ ಯಡಿಯೂರಪ್ಪರ ಕೃಪಾಶೀರ್ವಾದವೂ ಇರುವುದರಿಂದ ಸುರೇಶ್‌ಗೆ ಕೇಸರಿ ಟಿಕೆಟ್ ಪಕ್ಕಾ ಎನ್ನಲಾಗುತ್ತಿದೆ.

ಇತ್ತ ಸಿದ್ದು-ಡಿಕೆಶಿ ಬಣಗಳ ಕಸರತ್ತಿನಲ್ಲಿ ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಶಾಸಕರಾಗಿದ್ದರೂ ಟಿಕೆಟ್ ದೊರೆಯದೆ ಬಂಡೆದ್ದು ಸ್ಪರ್ಧಿಸಿದ್ದ ಜಿ.ಎಚ್.ಶ್ರೀನಿವಾಸ್ ಮತ್ತು ಬಿಜೆಪಿ-ಜೆಡಿಎಸ್ ಸುತ್ತಾಡಿ ಹತಾಶರಾಗಿ ಪಕ್ಷೇತರರಾಗಿ ಕಣಕ್ಕೆ ಧುಮುಕಿದ್ದ ಗೋಪಿಕೃಷ್ಣ ಈಗ ಕಾಂಗ್ರೆಸ್ ಟಿಕೆಟ್‌ಗೆ ಬಿರುಸಿನ ಕಸರತ್ತು ನಡೆಸಿದ್ದಾರೆ. ಶ್ರೀನಿವಾಸ್ ಸಿದ್ದುರನ್ನು ನಂಬಿಕೊಂಡಿದ್ದರೆ, ಗೋಪಿಕೃಷ್ಣ ಡಿಕೆಶಿ ತನ್ನ ಕೈಬಿಡಲಾರರೆಂದು ಭಾವಿಸಿದ್ದಾರೆ. ಶ್ರೀನಿವಾಸ್‌ಗೆ ಕ್ಷೇತ್ರದ ಎರಡನೇ ಬಹುಸಂಖ್ಯಾತ ಕುರುಬ ಸಮುದಾಯದ ಬಲವಿದೆ. ಗೋಪಿಕೃಷ್ಣ ಕ್ಷೇತ್ರದಲ್ಲಿ ಕೇವಲ ಎರಡೂವರೆ ಸಾವಿರದಷ್ಟಿರುವ ಮಡಿವಾಳ ಸಮುದಾಯದವರು. ಆದರೆ ಧನ ಬಲ ಜಾಸ್ತಿ. ಕಾಂಗ್ರೆಸ್ ಅಭ್ಯರ್ಥಿಗಳ ಎರಡನೆ ಪಟ್ಟಿಯಲ್ಲೂ ತರೀಕೆರೆ ಸಮಸ್ಯೆ ಪರಿಹಾರವಾಗಿಲ್ಲ. ಸಿದ್ದು-ಡಿಕೆಶಿ ಮೇಲಾಟದಲ್ಲಿ ಯಾರ ಕೈ ಮೇಲಾಗಿ ಯಾರಿಗೆ ಕಾಂಗ್ರೆಸ್ ಕಲಿಯಾಗುವ ಅವಕಾಶ ಸಿಗಬಹುದೆಂಬ ಕಾತರ-ಕುತೂಹಲದ ಚರ್ಚೆ ಕ್ಷೇತ್ರದಲ್ಲಿ ಜೋರಾಗಿದೆ.

ಬಿಜೆಪಿ ಲಿಂಗಾಯತ ವರ್ಗಕ್ಕೆ ಟಿಕೆಟ್ ಕೊಡುವುದರಿಂದ ಕುರುಬ ಸಮುದಾಯದವರಿಗೆ ಕಾಂಗ್ರೆಸ್ ಅವಕಾಶ ಕೊಟ್ಟರಷ್ಟೆ ಹೋರಾಟ ಸುಲಭ; ರಣಕಣದ ಆಯ-ಆಕಾರ ರೂಪುಗೊಂಡಿರುವುದೇ ಈ ಕುರುಬ-ಲಿಂಗಾಯತ ಜಿದ್ದಾಜಿದ್ದಿ ಸೂತ್ರ-ಸಮೀಕರಣದ ಆಧಾರದ ಮೇಲೆ; ಗೋಪಿಕೃಷ್ಣರದ್ದು ಕೇವಲ ಹಣದ ಆರ್ಭಟವೆ ಹೊರತು ಬಿಜೆಪಿಯ ಬಹುಸಂಖ್ಯಾತ ಲಿಂಗಾಯತ ಎದುರಾಳಿಯನ್ನು ಎದುರಿಸುವ ಸಾಮರ್ಥ್ಯವಿಲ್ಲ ಎಂಬ ಚರ್ಚೆ ಕಾಂಗ್ರೆಸ್ ಟಿಕೆಟ್ ಕಮಿಟಿಯಲ್ಲಿ ನಡೆದಿದೆ ಎನ್ನಲಾಗುತ್ತಿದೆ. ತರೀಕೆರೆ ಅಖಾಡ ಹದಗೊಂಡಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕಾಂಗ್ರೆಸ್‌ನ ಇಬ್ಬರು ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ಶ್ರೀನಿವಾಸ್ ಮತ್ತು ಗೋಪಿಕೃಷ್ಣರಲ್ಲಿ ಯಾರೇ ಅಧಿಕೃತ ಹುರಿಯಾಳಾದರೂ ಇನ್ನೊಬ್ಬರು ಬಂಡಾಯದ ಬಾವುಟ ಹಾರಿಸುವುದು ನಿಸ್ಸಂಶಯ; ಬಿಜೆಪಿ-ಕಾಂಗ್ರೆಸ್‌ನಲ್ಲಿ ಯಾವ ಪಕ್ಷ ಗೆದ್ದರೂ ಫೋಟೋ ಫಿನಿಶ್ ಫಲಿತಾಂಶ ಗ್ಯಾರಂಟಿ ಎಂದು ’ಕ್ಷೇತ್ರಾಯಣ’ ಬಲ್ಲವರು ಹೇಳುತ್ತಾರೆ.

ಕ್ಷೇತ್ರದ ಆಯ-ಆಕಾರ

ಕುಲದೀಪ್ ಸಿಂಗ್ ಸಮಿತಿಯ ಶಿಫಾರಸ್ಸಿನಂತೆ 2007ರಲ್ಲಾದ ಅಸೆಂಬ್ಲಿ ಕ್ಷೇತ್ರಗಳ ಪುನರ್‌ರಚನೆ ಪ್ರಕ್ರಿಯೆಯಲ್ಲಿ ತರೀಕೆರೆ ಕ್ಷೇತ್ರದ ಚಹರೆ ಕೊಂಚ ಬದಲಾಗಿದೆ. ಅಜ್ಜಂಪುರ ತಾಲೂಕು, ಲಿಂಗದಳ್ಳಿ, ಅಮೃತಾಪುರ, ಲಕ್ಕವಳ್ಳಿ ಮತ್ತು ಕಸಬಾ ಹೋಬಳಿಗಳನ್ನು ಸೇರಿಸಿ ಕ್ಷೇತ್ರ ರಚಿಸಲಾಗಿದೆ. 2019ರಲ್ಲಿ ಅಜ್ಜಂಪುರ ಪ್ರತ್ಯೇಕ ತಾಲೂಕಾಗಿದೆ. ತರೀಕೆರೆ ಕ್ಷೇತ್ರದಲ್ಲಿರುವ ಒಟ್ಟು 1,88,000 ಮತದಾರರ ಪೈಕಿ ಎಸ್‌ಸಿ-ಎಸ್ಟಿ-60,000, ಲಿಂಗಾಯತ-50,000, ಕುರುಬ-20,000, ಮುಸ್ಲಿಮ್-14,000, ಉಪ್ಪಾರ-11,000, ದೇವಾಂಗ-9,000, ಒಕ್ಕಲಿಗ-5,000 ಮತ್ತು ಈಡಿಗ, ವಾಲ್ಮೀಕಿ, ಸವಿತಾ ಸಮಾಜ, ಕ್ರಿಶ್ಚಿಯನ್, ತಮಿಳರು, ಗಾಣಿಗ ಮತ್ತು ಬ್ರಾಹ್ಮಣರೆ ಮುಂತಾದ ಸಣ್ಣ ಸಂಖ್ಯೆಯ ಜಾತಿ ಮತದಾರರು-19,000 ಇರುವ ಅಂದಾಜಿನ ಲೆಕ್ಕಾಚಾರವಿದೆ. ಕಾಂಗ್ರೆಸ್ ಮತ್ತು ಜನತಾ ಪರಿವಾರದ ಮುಖಾಮುಖಿ ಕದನ ಕುತೂಹಲದ ಸಮರಾಂಗಣವಾಗಿದ್ದ ತರೀಕೆರೆಯಲ್ಲಿ 2004ರ ಚುನಾವಣೆ ಹೊತ್ತಿನಿಂದ ಬಿಜೆಪಿ ಪ್ರಬಲವಾಗಿದೆ. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದು, ಬಿಜೆಪಿ ಕಾಂಗ್ರೆಸ್‌ಗೆ ಸೆಡ್ಡುಹೊಡೆದು ನಿಂತಿದೆ. ಬಿಜೆಪಿ ಮೇಲೆ ಯಡಿಯೂರಪ್ಪ ಹಿಡಿತ ಸಾಧಿಸಿ ರಾಜ್ಯ ಲಿಂಗಾಯತ ಸಮುದಾಯದ ನಾಯಕಾಗ್ರೇಸರಾದ ನಂತರದ ಸ್ಥಿತ್ಯಂತರವಿದು. ತರೀಕೆರೆಯಲ್ಲಾಗಿರುವ ಒಟ್ಟು 14 ಚುನಾವಣೆಯಲ್ಲಿ ಲಿಂಗಾಯತರ ವಿವಿಧ ಪಂಗಡದವರೇ 10 ಸಾರಿ ಶಾಸಕನಾಗಿದ್ದಾರೆ. ನಾಲ್ಕು ಬಾರಿಯಷ್ಟೇ ಕುರುಬ ಜಾತಿಯವರಿಗೆ ಎಮ್ಮೆಲ್ಲೆಗಿರಿ ದಕ್ಕಿದೆ. ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ ತರೀಕೆರೆ ಮೇಲೆ ಲಿಂಗಾಯತ ಪ್ರಭುತ್ವದ ಹಿಡಿತವೇ ಹೆಚ್ಚೆಂಬುದು ಮನದಟ್ಟಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಡೂರು: ಲಿಂಗಾಯತ-ಕುರುಬ ಸಮುದಾಯಗಳ ಮೇಲಾಟದ ಅಖಾಡದಲ್ಲಿ ಕೈ-ಕಮಲ ಕದನ ಕುತೂಹಲ!

“ತರೀಕೆರೆ” ಹೆಸರಿನ ವ್ಯುತ್ಪತ್ತಿ ಹಿಂದೆ, ಅನಾದಿಕಾಲದಲ್ಲಿ ಇಲ್ಲಿದ್ದ ಅನೇಕ ಕೆರೆಗಳ ಇತಿಹಾಸ ಅಡಗಿದೆ; ಈ ಕೆರೆಗಳೆ ತರೀಕೆರೆ ಹೆಸರಿನ ಮೂಲವೆಂದು ತರ್ಕಿಸಲಾಗುತ್ತಿದೆ. ಕೃಷಿ ಪ್ರಧಾನ ಆರ್ಥಿಕತೆಯ ತರೀಕೆರೆ ಬಯಲು ಸೀಮೆ-ಮಲೆನಾಡುಗಳ ಅಪೂರ್ವ ಸಂಗಮ. ತರೀಕೆರೆಯಿಂದಲೇ ಮಲೆನಾಡು ಆರಂಭವಾಗುವುದರಿಂದ ಇದನ್ನು ’ಮಲೆನಾಡಿನ ಹೆಬ್ಬಾಗಿಲು’ ಎನ್ನಲಾಗುತ್ತಿದೆ. ತರೀಕೆರೆ ಮಲೆನಾಡಾದರೆ, ಅಜ್ಜಂಪುರ ಮೈದಾನ ಪ್ರದೇಶ. ಹಿಂದೆ ಈ ಅರೆ ಮಲೆನಾಡು ಸೀಮೆ ಪ್ರಧಾನವಾಗಿ ಅಕ್ಕಿ ಉತ್ಪಾದನಾ ಕೇಂದ್ರವಾಗಿತ್ತು. ಈಗ ತರೀಕೆರೆ ಭಾಗದಲ್ಲಿ ಅಡಿಕೆ ವಾಣಿಜ್ಯ ಬೆಳೆಯಾದರೆ, ಅಜ್ಜಂಪುರ ಕಡೆಯಲ್ಲಿ ಈರುಳ್ಳಿ, ಕೊತ್ತಂಬರಿ ಆರ್ಥಿಕ ಫಸಲುಗಳಾಗಿವೆ. ಯುವ ಪೀಳಿಗೆಗೆ ಕೆಲಸ ಕೊಡುವಂಥ ಕೈಗಾರಿಕೆಗಳು ಇಲ್ಲಿಲ್ಲ. ಇದ್ದ ಬೆಮೆಲ್‌ನ ವಿಜ್ಞಾನ್ ಇಂಡಸ್ಟ್ರೀಸ್ ಬಾಗಿಲೆಳೆದುಕೊಂಡಿದೆ.

ಚಿಕ್ಕಮಗಳೂರು ಜಿಲ್ಲಾ ಕೇಂದ್ರವಾದರೂ ಶಿವಮೊಗ್ಗ-ಭದ್ರಾವತಿ ಹತ್ತಿರದಲ್ಲಿದೆ. ಹಾಗಾಗಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಮಂದಿಯ ವಹಿವಾಟು-ಸಂಪರ್ಕ ಶಿವಮೊಗ್ಗ-ಭದ್ರಾವತಿ ಪಟ್ಟಣಗಳಲ್ಲೇ ಜಾಸ್ತಿ. ಕ್ಷೇತ್ರದ ಸಾಮಾಜಿಕ, ರಾಜಕೀಯ, ಆರ್ಥಿಕ ಮುಂತಾದ ಸಕಲ ವಲಯದಲ್ಲಿ ಮೇಲ್ವರ್ಗದ ಲಿಂಗಾಯತರದೆ ಏಕಸ್ವಾಮ್ಯ; ಕೆಲವೆಡೆ ಕುರುಬ ಸಮುದಾಯ ಪೈಪೋಟಿ ಕೊಡುತ್ತಿದೆ. ಕೆಮ್ಮಣ್ಣುಗುಂಡಿ ಗಿರಿಧಾಮ, ಭದ್ರಾ ವನ್ಯಜೀವಿ ಅಭಯಾರಣ್ಯ, ಕಲ್ಲತ್ತಿ ಜಲಪಾತ, ಭದ್ರಾ ಜಲಾಶಯ, ಹೆಬ್ಬೆ ಜಲಪಾತ, ಅಮೃತಪುರದಲ್ಲಿ ಹೊಯ್ಸಳರ ಎರಡನೇ ವೀರ ಬಲ್ಲಾಳ ದೊರೆಯ ದಂಡನಾಯಕ ಅಮೃತ ನಿರ್ಮಿಸಿದ ಶಿಲ್ಪ ಕಲಾ ವೈಭವದ ಅತ್ಯದ್ಭುತ ಮಾದರಿಯಂತಿರುವ ಅಮೃತೇಶ್ವರ ದೇಗುಲ ಮತ್ತು ಅಜ್ಜಂಪುರದ ಅಪರೂಪದ ಅಮೃತ ಮಹಲ್ ರಾಸು ತಳಿಯಂಥ ವೈಶಿಷ್ಟ್ಯಗಳಿಂದ ತರೀಕೆರೆ-ಅಜ್ಮಂಪುರ ಕಳೆಕಟ್ಟಿದೆ.

ಚುನಾವಣಾ ಚಮತ್ಕಾರಗಳು

ಸಮಾಜವಾದಿ ಸಿದ್ಧಾಂತದ ಪ್ರಭಾವಳಿಯ ನೆಲೆಯಾಗಿದ್ದ ತರೀಕೆರೆ ಸ್ವಾತಂತ್ರ್ಯಾನಂತರದ ಮೊದಲ ಚುನಾವಣೆಯಲ್ಲಿ ಆಚೀಚೆಯ ಕ್ಷೇತ್ರಗಳಲ್ಲಿ ಹಂಚಿಹೋಗಿತ್ತು. ತರೀಕೆರೆ ಸ್ವತಂತ್ರ ಕ್ಷೇತ್ರವಾಗಿದ್ದು ಎರಡನೇ ಪ್ರಧಾನ ಚುನಾವಣೆಯ (1957) ಹೊತ್ತಿಗೆ. ಕುರುಬ ಸಮುದಾಯದ ಟಿ.ಆರ್.ಪರಮೇಶ್ವರಯ್ಯ ತರೀಕೆರೆಯ ಪ್ರಥಮ ಎಮ್ಮೆಲ್ಲೆ. ಕಾಂಗ್ರೆಸ್ಸಿಗರಾದ ಪರಮೇಶ್ವರಯ್ಯ ಪಕ್ಷೇತರ ಎದುರಾಳಿ ಚಂದ್ರಶೇಖರಪ್ಪರನ್ನು 3,392 ಮತದಂತರದಿಂದ ಮಣಿಸಿ ಶಾಸನಸಭೆಗೆ ಪ್ರವೇಶ ಪಡೆದರು. 1962ರಲ್ಲೂ ಪರಮೇಶ್ವರಯ್ಯ ಮತ್ತೊಮ್ಮೆ ಎಮ್ಮೆಲ್ಲೆಯಾದರೂ, ಅದು ಅವರ ತಿಣುಕಾಟದ ಗೆಲುವಾಗಿತ್ತು. ಪ್ರಜಾ ಸೋಷಲಿಸ್ಟ್ ಪಾರ್ಟಿಯ (ಪಿಎಸ್‌ಪಿ) ಹಂಜಿ ಶಿವಣ್ಣರ ಪ್ರಬಲ ದಾಳಿಗೆ ಹೈರಾಣಾದ ಪರಮೇಶ್ವರಯ್ಯ ಅಂತೂಇಂತೂ 367 ಮತಗಳಿಂದ ಬಚಾವಾಗಿದ್ದರು.

ಎಚ್.ಆರ್.ರಾಜು

ಲಿಂಗಾಯತ ಜಾತಿಯವರಾದ ಶಿವಣ್ಣ 1967ರಲ್ಲಿ ಪಿಎಸ್‌ಪಿ ಬಾವುಟವನ್ನು ತರೀಕೆರೆಯಲ್ಲಿ ಹಾರಿಸುವುದರಲ್ಲಿ ಯಶಸ್ವಿಯಾದರು; ಕಾಂಗ್ರೆಸ್‌ನ ಶಾಸಕ ಪರಮೇಶ್ವರಯ್ಯನವರನ್ನು 9,846 ಮತಗಳ ದೊಡ್ಡ ಅಂತರದಲ್ಲಿ ಸೋಲಿಸಿ, ಮಾಜಿ ಮಾಡಿ ತಾವು ಹಾಲಿ ಶಾಸಕನಾದರು. 1969ರಲ್ಲಿ ಕಾಂಗ್ರೆಸ್ ಸೇರಿದ ಪಿಎಸ್‌ಪಿ ಶಾಸಕರ ತಂಡದಲ್ಲಿ ಶಿವಣ್ಣ ಸಹ ಇದ್ದರೆಂದು ಅಂದಿನ ರಾಜಕೀಯ ಸ್ಥಿತ್ಯಂತರ ಬಲ್ಲವರು ಹೇಳುತ್ತಾರೆ. 1972ರ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಶಿವಣ್ಣ ಸಂಸ್ಥಾ ಕಾಂಗ್ರೆಸ್‌ನ ಎಚ್.ಆರ್.ಬಸವರಾಜು ಅವರನ್ನು 5,738 ಮತದಿಂದ ಮಣಿಸಿದರು. 1978ರಲ್ಲಿ ಜನತಾ ಪಕ್ಷದಿಂದ ಅಖಾಡಕ್ಕಿಳಿದಿದ್ದ ಬಸವರಾಜುಗೆ ಎರಡನೆ ಪ್ರಯತ್ನದಲ್ಲೂ ಗೆಲ್ಲಲಾಗಲಿಲ್ಲ; ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಲಿಂಗಾಯತರ ಮುಖಂಡ ಎಚ್.ಎಂ.ಮಲ್ಲಿಕಾರ್ಜುನಪ್ಪ 7,538 ಮತಗಳ ಅಂತರದಿಂದ ಶಾಸಕನಾಗಿ ಚುನಾಯಿತರಾದರು.

1983ರಲ್ಲಿ ರಾಜ್ಯಾದ್ಯಂತ ಬೀಸಿದ ಕಾಂಗ್ರೆಸ್ ವಿರೋಧಿ ಗಾಳಿಯಲ್ಲೂ, ಲೋಕಲ್ ಲಿಂಗಾಯತ ಪ್ರಾಬಲ್ಯದ ರಾಜಕಾರಣದ ತಂತ್ರಗಾರಿಕೆಯಿಂದ ತರೀಕೆರೆಯಲ್ಲಿ ಆ ಪಕ್ಷ ಬಚಾವಾಗಿತ್ತು ಎಂದು ಅಂದಿನ ರೋಚಕ ಮೇಲಾಟ ಕಂಡವರು ಹೇಳುತ್ತಾರೆ. ಕಾಂಗ್ರೆಸ್ ಲಿಂಗಾಯತ ಸಮುದಾಯದ ಎಚ್.ಆರ್.ರಾಜುಗೆ ಟಿಕೆಟ್ ಕೊಟ್ಟಿತ್ತು; ಜನತಾ ಪಕ್ಷದ ಹುರಿಯಾಳು ಕುರುಬ ಜಾತಿಯ ಶಿವಶಂಕರಪ್ಪನವರಾಗಿದ್ದರು. ರಾಜು ಭರ್ಜರಿ 16,707 ಮತದಿಂದ ಗೆಲುವು ಕಂಡರು. 1985ರಲ್ಲಿ ಕಾಂಗ್ರೆಸ್ ಮತ್ತು ಜನತಾ ಪಕ್ಷಗಳೆರಡೂ ಲಿಂಗಾಯತ ಸಮುದಾಯಕ್ಕೆ ಮಣೆಹಾಕಿದವು. ಆ ಸಂದರ್ಭದಲ್ಲಿ ಹೆಗಡೆ ಲಿಂಗಾಯತರ ಅಚ್ಚುಮೆಚ್ಚಿನ ಮುಂದಾಳಾಗಿ ಅವತರಿಸಿದ್ದರಿಂದ ಜನತಾ ಪಕ್ಷದ ಅಭ್ಯರ್ಥಿ ಬಿ.ಆರ್.ನೀಲಕಂಠಪ್ಪನವರಿಗೆ ಕಾಂಗ್ರೆಸ್‌ನ ನೊಣಬ ಲಿಂಗಾಯತ ಸಮುದಾಯದ ಎಸ್.ಎಂ.ನಾಗರಾಜ್‌ರನ್ನು 6,770 ಮತದಿಂದ ಮಣಿಸಲು ಸುಲಭ ಸಾಧ್ಯವಾಯಿತೆಂಬ ತರ್ಕ ಇವತ್ತಿಗೂ ಕ್ಷೇತ್ರದಲ್ಲಿದೆ. 1989ರ ಚುನಾವಣೆ ವೇಳೆಗೆ ಹೆಗಡೆ ವರ್ಚಸ್ಸು ಕುಂದಿತ್ತು; ಕಾಂಗ್ರೆಸ್‌ನ ವೀರೇಂದ್ರ ಪಾಟೀಲ್ ಲಿಂಗಾಯತರ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದ್ದರು. ಜನತಾ ಪಕ್ಷದಿಂದ ಕಣಕ್ಕಿಳಿದಿದ್ದ ಶಾಸಕ ನೀಲಕಂಠಪ್ಪರಿಗೆ 1983ರಲ್ಲಿ ಎಮ್ಮೆಲ್ಲೆಯಾಗಿದ್ದ ರಾಜು ಕಾಂಗ್ರೆಸ್ ಕ್ಯಾಂಡಿಡೇಟಾಗಿ ಮುಖಾಮುಖಿಯಾದರು. ಲಿಂಗಾಯತರ ಮೇಲೆ ಹಿಡಿತ ಸಾಧಿಸಿದ್ದ ರಾಜು 18,423 ಮತದಿಂದ ಗೆದ್ದು ಕೆಲಕಾಲ ಮಂತ್ರಿಯೂ ಆಗಿದ್ದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮೂಡಿಗೆರೆ: ಒಕ್ಕಲಿಗರ ಮರ್ಜಿಯ ಮೀಸಲು ಕ್ಷೇತ್ರದಲ್ಲಿ ಮೂರೂ ಮುಖ್ಯ ಪಕ್ಷಗಳಲ್ಲಿ ಬಂಡಾಯದ ಬಾವುಟ!

1994ರಲ್ಲಿ ಲಿಂಗಾಯತರಲ್ಲೇ ಕಾಳಗ ನಡೆಯಿತು. ಕಾಂಗ್ರೆಸ್‌ನ ರಾಜು, ಜನತಾ ದಳದ ನೀಲಕಂಠಪ್ಪ ಮತ್ತು ಪಕ್ಷೇತರ ನಾಗರಾಜು ನಡುವೆ ಹೋರಾಟವಾಯಿತು. ಪಕ್ಷೇತರ ನಾಗರಾಜು ನಿಕಟ ಪ್ರತಿಸ್ಪರ್ಧಿ ಜನತಾ ದಳದ ನೀಲಕಂಠಪ್ಪರನ್ನು ಕೇವಲ 557 ಮತದಿಂದ ಸೋಲಿಸಿ ಶಾಸಕರಾದರು. 1999ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಎಮ್ಮೆಲ್ಲೆ ನೀಲಕಂಠಪ್ಪ ನಿಕಟ ಪ್ರತಿಸ್ಪರ್ಧಿ ಜೆಡಿಯು ಹುರಿಯಾಳು ನಾಗರಾಜುರನ್ನು 22,435 ಮತದಿಂದ ಹಿಮ್ಮೆಟ್ಟಿಸಿದರು. ಲಿಂಗಾಯತ ಓಟ್ ಬ್ಯಾಂಕ್ 2004ರಲ್ಲಿ ಬಿಜೆಪಿಯ ಓಂಕಾರಪ್ಪ ಮತ್ತು ಜೆಡಿಎಸ್‌ನ ನಾಗರಾಜು ನಡುವೆ ಹಂಚಿಹೋಯಿತು. ಸ್ವಜಾತಿ ಕುರುಬ ಮತ್ತು ಮುಸ್ಲಿಮ್ ಮತ ಏಕಗಂಟಿನಲ್ಲಿ ಪಡೆದ ಕಾಂಗ್ರೆಸ್ ಕ್ಯಾಂಡಿಡೇಟ್ ಶಿವಶಂಕರಪ್ಪ ಬಿಜೆಪಿಯ ಓಂಕಾರಪ್ಪನವರನ್ನು 19,674 ಮತದಿಂದ ಮಣಿಸಿದರು.

ಸುರೇಶ್ ಸದ್ದು

2008ರ ಚುನಾವಣೆ ವೇಳೆಯಲ್ಲಿ ಯಡಿಯೂರಪ್ಪರಿಗೆ ಕುಮಾರಸ್ವಾಮಿ ಸಿಎಂ ಪಟ್ಟ ಬಿಟ್ಟುಕೊಡದೆ ಮೋಸ ಮಾಡಿದರೆಂಬ ಹಿನ್ನೆಲೆಯಲ್ಲಿ ರಾಜ್ಯದ ಲಿಂಗಾಯತ ಸಮುದಾಯ ಆಕ್ರೋಶಗೊಂಡ್ದಿರ ಪರಿಣಾಮ ತರೀಕೆರೆಯಲ್ಲೂ ಕಂಡಿತ್ತು. ಕಾಂಗ್ರೆಸ್‌ನ ತಾಲೂಕು ಪಂಚಾಯತ್ ಸದಸ್ಯರಾಗಿದ್ದ ಶ್ರೀಮಂತ ಅಡಿಕೆ ತೋಟಗಾರ ಡಿ.ಎಸ್.ಸುರೇಶ್ ಯಡಿಯೂರಪ್ಪರ ನಿಷ್ಠರಾಗಿ ಆ ಹೊತ್ತಿಗೆ ಸ್ಥಳೀಯ ಬಿಜೆಪಿಯಲ್ಲಿ ಮುಂಚೂಣಿಗೆ ಬಂದಿದ್ದರು. ಕಳೆದ ಬಾರಿ ಸೋತಿದ್ದ ಓಂಕಾರಪ್ಪರಿಗಿಂತ ಹೆಚ್ಚು ಸ್ವಜಾತಿ ಜನ ಬಲ ಮತ್ತು ಧನಬಲವಿದ್ದ ಸಾದರ ಲಿಂಗಾಯತ ಒಳಪಂಗಡದ ಸುರೇಶ್‌ಗೆ ಯಡಿಯೂರಪ್ಪ ಕೇಸರಿ ಟಿಕೆಟ್ ದಯಪಾಲಿಸಿದರು. ಯಡಿಯೂರಪ್ಪರ ಬಗೆಗಿದ್ದ “ಸಿಂಪಥಿ”ಯನ್ನು ಸಮರ್ಥವಾಗಿ ಬಳಸಿಕೊಂಡ ಸುರೇಶ್ ಕಾಂಗ್ರೆಸ್ ಎದುರಾಳಿ-ಕುರುಬ ಸಮುದಾಯದ-ಶಿವಶಂಕಪ್ಪರನ್ನು 18,419 ಮತದಿಂದ ಹಿಮ್ಮೆಟ್ಟಿಸಿದರು ಎಂಬ ಮಾತು ಈಗಲೂ ತರೀಕೆರೆಯ ರಾಜಕೀಯ ಕಟ್ಟೆಯಲ್ಲಿ ಕೇಳಿಬರುತ್ತದೆ.

ಎಚ್.ಎಂ. ಗೋಪಿಕೃಷ್ಣ

2013ರಲ್ಲಿ ಕಾಂಗ್ರೆಸ್‌ನ ಜಿ.ಎಚ್.ಶ್ರೀನಿವಾಸ್, ಕೆಜೆಪಿಯ ಸುರೇಶ್ ಮತ್ತು ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ಮಧ್ಯೆ ರೋಚಕ ಕತ್ತುಕತ್ತಿನ ತ್ರಿಕೋನ ಕಾಳಗ ಏರ್‍ಪಟ್ಟಿತ್ತು. ಸಿ.ಟಿ.ರವಿಯನ್ನು ನಂಬಿಕೊಂಡಿದ್ದ ಗೋಪಿಕೃಷ್ಣ ಬಿಜೆಪಿ ಟಿಕೆಟ್ ಸಿಗದೆ ಬಂಡೆದ್ದು ಸರಿಸುಮಾರು ರನ್ನರ್ ಅಪ್ ಅಭ್ಯರ್ಥಿಯಷ್ಟೇ ಮತ ಗಳಿಸಿದ್ದರು. ಬಿಜೆಪಿ ಓಟ್ ಬ್ಯಾಂಕ್‌ನಲ್ಲಿ ಎರಡು ಪಾಲಾಗಿದ್ದರಿಂದ ಕಾಂಗ್ರೆಸ್‌ಗೆ ಅನುಕೂಲವಾಯಿತು. ಕುರುಬ ಜಾತಿಯ ಕಾಂಗ್ರೆಸ್ಸಿಗ ಶ್ರೀನಿವಾಸ್ ಕೆಜೆಪಿಯ ಸರೇಶ್‌ರನ್ನು 899 ಮತದಿಂದ ಸೋಲಿಸಿ ಶಾಸಕನಾದರು. 2018ರ ಚುನಾವಣೆ ಎದುರಾಗುವ ಹೊತ್ತಿಗೆ ಶಾಸಕ ಶ್ರೀನಿವಾಸ್‌ಗೆ ಸ್ವಪಕ್ಷ ಕಾಂಗ್ರೆಸ್‌ನಲ್ಲಿಯೇ ವಿರೋಧ ವ್ಯಕ್ತವಾಗತೊಡಗಿತ್ತು. ಗೋಪಿಕೃಷ್ಣ ಜೆಡಿಎಸ್ ಸೇರಿದ್ದರು. ಶ್ರೀನಿವಾಸ್ ಶತ್ರು ಪಾಳಯ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗದಂತೆ ಯಶಸ್ವಿ ಕಾರ್ಯಾಚರಣೆ ಮಾಡಿತು. ಮಾಜಿ ಶಾಸಕ ನಾಗರಾಜು ಅವರನ್ನು ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಲಾಯಿತು. ಗೋಪಿಕೃಷ್ಣರಿಗೆ ಜೆಡಿಎಸ್ ಅವಕಾಶ ಕೊಡಲಿಲ್ಲ. ಶ್ರೀನಿವಾಸ್ ಮತ್ತು ಗೋಪಿಕೃಷ್ಣ ರೆಬೆಲ್ ಆದರು. ಮತ್ತೆ ಮೂರು ಹಳೆಯ ಶತ್ರುಗಳ ನಡುವೆ ನಿಕಟ-ನೇರ “ಹಣಾ”ಹಣಿ ನಡೆಯಿತು. ಸ್ವಜಾತಿಯ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್‌ರ ಒಳ ಸಹಕಾರದಿಂದ ಬಿಜೆಪಿಯ ಸುರೇಶ್ ಬಂಡಾಯ ಕಾಂಗ್ರೆಸ್ ಕ್ಯಾಂಡಿಡೇಟ್ ಶ್ರೀನಿವಾಸರನ್ನು 11,687 ಮತಗಳಿಂದ ಪರಾಭವಗೊಳಿಸಿದರು ಎಂಬ ಮಾತು ಈಗಲೂ ಕ್ಷೇತ್ರದಲ್ಲಿ ಕೇಳಿಬರುತ್ತದೆ.

ಅಭಿವೃದ್ಧಿ ಗೌಣ; ಜಾತಿಯೇ ಮುಖ್ಯ ಚುನಾವಣ ವಿಷಯ!

ತರೀಕೆರೆ ಕ್ಷೇತ್ರದಲ್ಲಿ ಈ ಬಾರಿಯೂ ಅಭಿವೃದ್ಧಿ-ಪ್ರಗತಿ ಅಥವಾ ಸಮಷ್ಠಿ ಹಿತದ ಪ್ರಣಾಳಿಕೆ ಮೇಲೆ ಚುನಾವಣಾ ಸಮರ ನಡೆಯುವ ಯಾವ ಸೂಚನೆಯೂ ಗೋಚರಿಸುತ್ತಿಲ್ಲ. ಹಳೆಯ ಜಾತಿ-ಹಣದ ಅಸ್ತ್ರಗಳಿಗೆ ಸಾಣೆ ಹಿಡಿಯಲಾಗುತ್ತಿದೆ. ಮೂಲ ಸೌಕರ್ಯ ಕೊರತೆ, ಪ್ರವಾಸೋದ್ಯಮ ಅಭಿವೃದ್ದಿಯಾಗದಿರುವುದು, ಕುಡಿಯುವ ನೀರಿಗೆ ತತ್ವಾರ, ಅಪೂರ್ಣ ನೀರಾವರಿ, ಕೃಷಿ ಉನ್ನತೀಕರಣ-ಔದ್ಯೋಗೀಕರಣ ಆಗದಿರುವುದು, ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷ ತರೀಕೆರೆ-ಅಜ್ಜಂಪುರದ ತೀರದ ಸಮಸ್ಯೆಗಳು. ಕ್ಷೇತ್ರದಲ್ಲಿ ಒಂದಿಷ್ಟು ರಸ್ತೆಗಳಾಗಿರುವುದು ಬಿಟ್ಟರೆ ಜನರ ಬದುಕನ್ನು ಹೆಚ್ಚು ಹಸನಾಗಿಸುವಂಥ ಕೆಲಸ-ಕಾಮಗಾರಿ ಆಗಿಲ್ಲ. ಆಗಿರುವ ರಸ್ತೆ ಫಾರ್ಟಿ ಪರ್ಸೆಂಟ್ ಕಮಿಷನ್ ಹಾವಳಿಯಿಂದ ಕಳಪೆಯಾಗಿದೆ. ರಸ್ತೆ ನಿರ್ಮಾಣದಲ್ಲಿಯೂ ಜಾತಿ ಆಧಾರವಾಗಿರುವ ಆರೋಪಗಳಿವೆ. ಶಾಸಕ ಸುರೇಶ್ ತಮ್ಮ ಹಿಂಬಾಕರಿಗಷ್ಟೆ ಸರಕಾರಿ ಕಾಮಗಾರಿ ದಕ್ಕುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿಯ ಭಿನ್ನಮತೀಯರೇ ಪಿಸುಗುಡುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿಕ್ಕಮಗಳೂರು: ಕೋಮು ಕಾರ್ಮೋಡದ ನಡುವೆ ಮೂಡಿದ “ರವಿ”ಗೆ ಗ್ರಹಣ?!

ಗ್ರಾಮೀಣ ಭಾಗದಲ್ಲಂತೂ ಕನಿಷ್ಠ ಮೂಲ ಸೌಕರ್ಯಕ್ಕಾಗಿ ಜನರು ಪರಿತಪಿಸುತ್ತಿದ್ದಾರೆ. ಭದ್ರಾ ಜಲಾಶಯದ ತಟದಲ್ಲಿದ್ದರೂ ಕ್ಷೇತ್ರದ ಬಹುತೇಕ ಎಲ್ಲೆಡೆ ವಾರಕ್ಕೊಮ್ಮೆ ಕುಡಿಯುವ ನೀರು ಬರುತ್ತದೆ. 248 ಹಳ್ಳಿಗಳ ಪೈಕಿ 140ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ. ಕೃಷಿಗೆ ನೀರಾವರಿ ಯೋಜನೆ ರೂಪಿಸಲಾಗಿದೆಯೆಂದು ಶಾಸಕರು ಹೇಳುತ್ತಿದ್ದರೂ ಗಡಿರಂಗಾಪುರದಂಥ ಹಲವು ಹಳ್ಳಿಗಳಿಗಿನ್ನೂ ನೀರಾವರಿ ಸೌಲಭ್ಯ ಸಿಕ್ಕಿಲ್ಲ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಂಥ ತೀರಾ ಅವಶ್ಯ ಕಾಮಗಾರಿಗಳ ಬಗೆಗೂ ಶಾಸಕರು ಬದ್ಧತೆ ತೋರಿಸುತ್ತಿಲ್ಲ. ಟ್ರಾಫಿಕ್ ಸಮಸ್ಯೆಯಿಂದ ತರೀಕಕೆರೆ ಜನರು ತತ್ತರಿಸುತ್ತಿದ್ದಾರೆ. ಹಳ್ಳಿಗಳ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರು ಮತ್ತು ಅಗತ್ಯ ಸಿಬ್ಬಂದಿ ಕೊರತೆಯಿಂದ ಅವು ಇದ್ದೂ ಇಲ್ಲದಂತಾಗಿವೆ. ಪ್ರತ್ಯೇಕ ತಾಲೂಕಾಗಿ ನಾಲ್ಕು ವರ್ಷ ಕಳೆದರೂ ಅಜ್ಜಂಪುರಕ್ಕೆ ಬೇಕಾದ ಸೌಲಭ್ಯ-ಸೌಕರ್ಯ ಕ್ರೋಢೀಕರಣವಾಗಿಲ್ಲ. ಕ್ಷೇತ್ರದಲ್ಲಿ ಒಂದೇಒಂದು ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಲಿಂಗದಲಳ್ಳಿ ಹಾಗು ಕಸಬಾ ಹೋಬಳಿಗಳಲ್ಲಿ ಕಾಡಾನೆ ಹಿಂಡಿನ ಹಾವಳಿ ವಿಪರೀತವಾಗಿದೆ. ಶಾಸಕರು ಜನರ ಬೇಕು-ಬೇಡಗಳಿಗೆ ಸ್ಪಂದಿಸುತ್ತಿಲ್ಲ; ಜನಸಾಮಾನ್ಯರ ಕೈಗೆಟುಕುವುದಿಲ್ಲ ಎಂಬ ಆರೋಪ-ಅಸಮಾಧಾನ ತರೀಕೆರೆ-ಅಜ್ಜಂಪುರ ತಾಲೂಕುಗಳಲ್ಲಿ ಮಡುಗಟ್ಟಿದೆ.

ಇಷ್ಟೆಲ್ಲ ಋಣಾತ್ಮಕ ಅಂಶಗಳು, ಬಿಜೆಪಿಯೊಳಗಿನ ಆಂತರಿಕ ಬಿಕ್ಕಟ್ಟು ಮತ್ತು ಆಡಳತ ವಿರೋಧಿ ಅಲೆಯಲ್ಲಿ ಸಿಲುಕಿದ್ದರೂ ’ಹಣಾ’ಹಣಿಗೆ ಅಣಿಯಾಗಿರುವ ಶಾಸಕ ಸುರೇಶ್ ಸೋಲುತ್ತಾರೆಂದು ಹೇಳಲಾಗದು; ಎಮ್ಮೆಲ್ಲೆ ಸುರೇಶ್‌ಗಿಂತ ಕಾಂಗ್ರೆಸ್‌ನ ಮಾಜಿ ಶಾಸಕ ಶ್ರೀನಿವಾಸ್ ಬೆಟರ್ ಎಂಬ ಭಾವನೆ ಜನರಲ್ಲಿದ್ದರೂ ಗೆದ್ದೇಬಿಡುತ್ತಾರೆನ್ನುವುದೂ ಕಷ್ಟವೇ. ಧರ್ಮಕಾರಣದ ಸೋಂಕಿಲ್ಲದ ತರೀಕೆರೆ ರಣಾಂಗಣದಲ್ಲಿ ಅಭ್ಯರ್ಥಿಗಳ ಗುಣಾವಗುಣ ಅಥವಾ ಮತದಾರರ ಕಷ್ಟ-ಸುಖ ಗೌಣವಾಗಿ ಜಾತಿ ಜಿದ್ದಾಜಿದ್ದಿ ಜೋರಾಗುವುದರಿಂದ ನೆಕ್ ಟು ನೆಕ್ ಕಾದಾಟವಾಗಿ ಕಾಂಗ್ರೆಸ್-ಬಿಜೆಪಿಯಲ್ಲಿ ಯಾರು ಬೇಕಿದ್ದರೂ ಮೇಲ್ಗೈ ಸಾಧಿಸಬಹುದು. ಯಾರೇ ಗೆಲುವಿನ ನಗೆ ಬೀರಿದರೂ ಅದರಲ್ಲಿ ತಿಣುಕಾಟ-ದಣಿವಿನ ಛಾಯೆಯಿರುತ್ತದೆ; ಆ ಗೆಲುವಿನಲ್ಲಿ “ಬದುಕಿದೆಯಾ ಬಡ ಜೀವವೆ” ಎಂಬ ಭಾವವಿರುತ್ತದೆ ಎಂದು ಕ್ಷೇತ್ರದ ನಾಡಿಮಿಡಿತ ಬಲ್ಲ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...