Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಡೂರು: ಲಿಂಗಾಯತ-ಕುರುಬ ಸಮುದಾಯಗಳ ಮೇಲಾಟದ ಅಖಾಡದಲ್ಲಿ ಕೈ-ಕಮಲ ಕದನ ಕುತೂಹಲ!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಡೂರು: ಲಿಂಗಾಯತ-ಕುರುಬ ಸಮುದಾಯಗಳ ಮೇಲಾಟದ ಅಖಾಡದಲ್ಲಿ ಕೈ-ಕಮಲ ಕದನ ಕುತೂಹಲ!

- Advertisement -
- Advertisement -

ಪಶ್ಚಿಮ ಘಟ್ಟಗಳ ಮಳೆ-ನೆರಳು ಪ್ರದೇಶದಲ್ಲಿ ನೆಲೆಗೊಂಡಿರುವ ಕಡೂರು-ಬೀರೂರು ಅರೆಮಲೆನಾಡು ಸೀಮೆ; ಬಯಲು ಮತ್ತು ಮಲೆ ಸಮಾನಾಂತರವಾಗಿ ಹಬ್ಬಿರುವ ತೆಂಗು-ಕಂಗುಗಳ ತೋಟ ಪಟ್ಟಿ ಮತ್ತು ಹಸಿರು ಗುಡ್ಡ-ಬೆಟ್ಟಗಳಿಂದ ಕಂಗೊಳಿಸುವ ಪ್ರಾಕೃತಿಕ ಚೆಲುವಿನ ತಾಣ; ಈ ಒಣ ಭೂಮಿಯಲ್ಲಿ ವೇದ ಮತ್ತು ಅವತಿ ನದಿಗಳು ಸಂಗಮಿಸಿ ’ವೇದಾವತಿ’ ನದಿಯಾಗಿ ಹರಿಯುತ್ತದೆ. ಇಂದಿನ ಅಜ್ಜಂಪುರ ಹಿಂದೆ ತಾಲ್ಲೂಕು ಕೇಂದ್ರವಾಗಿತ್ತು. ಮೈಸೂರು ರಾಜ್ಯದಲ್ಲಿ ’ಕಡೂರು’ ಜಿಲ್ಲಾ ಕೇಂದ್ರವಾಗಿತ್ತು. 1947ರ ತನಕವೂ ಚಿಕ್ಕಮಗಳೂರು ಜಿಲ್ಲೆಯನ್ನು ಕಡೂರು ಜಿಲ್ಲೆಯಂತಲೇ ಕರೆಯಲಾಗುತ್ತಿತ್ತು. ಅನಾದಿಕಾಲದಲ್ಲಿ ಕಡೂರಿನ ಸುತ್ತಮುತ್ತ ಅಪಾರ ಕಡವೆಗಳು ಇದ್ದವಂತೆ. ಹಾಗಾಗಿ ಊರನ್ನು ಕಡವೆ ಊರು ಎಂದು ಗುರುತಿಸಲಾಗುತ್ತಿತ್ತಂತೆ. ಕಾಲಕ್ರಮೇಣ ಅದು ’ಕಡವೆಯೂರು’ ಎಂದು ಕರೆಯಲ್ಪಟ್ಟಿತು. ಬಳಿಕ ರೂಢಿಯಲ್ಲಿ “ಕಡೂರು” ಎಂದಾಯಿತೆಂದು ಸ್ಥಳನಾಮ ಪುರಾಣ ಹೇಳುತ್ತದೆ.

ಕಡೂರು ತಾಲೂಕು ಬರಪೀಡಿತ ಪ್ರದೇಶ; ಮಳೆ ಬಂದರಷ್ಟೆ ಬದುಕು. ನೀರಾವರಿ ಯೋಜನೆ ಮರೀಚಿಕೆಯಂತಾಗಿದೆ. ಕೃಷಿ ಮತ್ತು ಕೃಷಿ ಕೂಲಿಯೇ ಪ್ರಧಾನವಾದ ಕಡೂರು-ಬೀರೂರಿನ ರೈತರು ತೆಂಗು, ಅಡಿಕೆ, ಹತ್ತಿ, ರಾಗಿ, ಭತ್ತ, ಈರುಳ್ಳಿ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ತಾಲೂಕಿನ ಮಲೆನಾಡಿನ ಭಾಗದ ಆರ್ಥಿಕತೆ ತೆಂಗು-ಅಡಿಕೆ ಉತ್ಪಾದನೆ ಮತ್ತು ವಹಿವಾಟನ್ನು ಅವಲಂಬಿಸಿದೆ; ಬಯಲು ನಾಡಲ್ಲಿ ಜೋಳ, ರಾಗಿ ಆರ್ಥಿಕ ಜೀವನಾಡಿ. ಕೆರೆ, ಚೆಕ್‌ಡ್ಯಾಮ್ ಮತ್ತು ಬೋರ್‌ವೆಲ್‌ಗಳು ಕೃಷಿಗೆ ಆಧಾರ. ಕೈಗಾರಿಕೆಗಳು ಇಲ್ಲಿಲ್ಲ. ರೈತಾಪಿ, ಕೃಷಿ ಕೂಲಿ ಮತ್ತು ಒಂದಿಷ್ಟು ಕುಲಕಸುಬುಗಳೇ ಜೀವನಾಧಾರ. “ಮಾಯದಂತ ಮಳೆ ಬಂತಣ್ಣ; ಮದಗದ ಕೆರೆಗೆ” ಎಂಬ ಸುಪ್ರಸಿದ್ಧ ಜಾನಪದ ಹಾಡಿನ ಹುಟ್ಟಿಗೆ ಸ್ಫೂರ್ತಿಯಾದ “ಮದಗದ ಕೆರೆ” ಕಡೂರಿನಲ್ಲಿದೆ. ಎಂಥ ಬರಗಾಲದಲ್ಲೂ ಈ ಕೆರೆ ಬತ್ತುವುದಿಲ್ಲ ಎಂಬ ನಂಬಿಕೆಯಿದೆ. ಲಂಬಾಣಿ ಸಮುದಾಯದ ’ಗೋಧಿ ಹಬ್ಬ’ ವಿಶಿಷ್ಟವಾಗಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಈ ಉತ್ಸವ ಒಂಭತ್ತು ದಿನಗಳ ಕಾಲ ನಡೆಯುತ್ತದೆ. ಜೈಮಿನಿ ಭಾರತ ಬರೆದ ಮಹಾಕವಿ ಲಕ್ಷ್ಮೀಶ ಜನಿಸಿದ್ದು ಕಡೂರಿನ ದೇವನೂರು ಗ್ರಾಮದಲ್ಲಿ.

ಕ್ಷೇತ್ರದ ಚಹರೆ

ದಲಿತರು, ಅಲೆಮಾರಿಗಳು, ಗೊಲ್ಲ ಮತ್ತು ಉಪ್ಪಾರರಂಥ ಶೋಷಿತ ಸಮುದಾಯದ ಜನಸಂಖ್ಯೆ ಗಣನೀಯವಾಗಿರುವ ಕಡೂರು-ಬೀರೂರು ವಿಧಾನಸಭಾ ಕ್ಷೇತ್ರದ ಸಾಮಾಜಿಕ, ರಾಜಕೀಯ, ಆರ್ಥಿಕ ಮುಂತಾದ ಆಯಕಟ್ಟಿನ ವಲಯಗಳಲ್ಲಿ ಪ್ರಬಲ ಲಿಂಗಾಯತರದೇ ಪಾರುಪತ್ಯ; ಕಡೂರು ಕಡೆ ಕುರುಬ ಸಮುದಾಯದ ಏಕಸ್ವಾಮ್ಯವಾದರೆ, ಬೀರೂರು ಭಾಗದಲ್ಲಿ ಲಿಂಗಾಯತರ ಗೌಡಿಕೆ ಅನೂಚಾನಾಗಿ ನಡೆದಿದೆ ಎನ್ನಲಾಗುತ್ತಿದೆ. ಕಡೂರು, ಬೀರೂರಲ್ಲಿ ಕೈಗಾರಿಕೆ ಸ್ಥಾಪನೆಯಾದರೆ, ವ್ಯಾಪಾರ-ಉದ್ಯಮ ಬೆಳೆದರೆ ತಳಸಮುದಾಯದ ಮಂದಿ ಸ್ವತಂತ್ರವಾಗಿ ತಮ್ಮ ತೋಟ-ಗದ್ದೆಗಳ ಅಗ್ಗದ ಕೂಲಿಗೆ ಆಳುಗಳಾಗಿ ಸಿಗುವುದು ದುಸ್ತರವಾಗುತ್ತದೆಂಬ ದೂ(ದು)ರಾಲೋಚನೆಯಿಂದ ಮೇಲ್ವರ್ಗದ ಬಲಾಢ್ಯ ಭೂಮಾಲಿಕರು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆಂಬ ಮಾತು ಕೇಳಿಬರುತ್ತಿದೆ. ಈ ತೋಟೋದ್ಯಮಿಗಳ ಯಜಮಾನಿಕೆಗೆ ಅನಿವಾರ್ಯವಾಗಿ ಒಗ್ಗಿಕೊಂಡಿರುವ ಅಸಹಾಯಕ ಮಂದಿ ತಮ್ಮೂರಲ್ಲಿ ಕೂಲಿಯಿಲ್ಲದಿದ್ದಾಗ ಜಿಲ್ಲೆಯ ಮಲೆನಾಡಿನತ್ತ ಗುಳೆ ಹೋಗುತ್ತಾರೆ.

ಮದಗದ ಕೆರೆ

ಲಾಗಾಯ್ತಿನಿಂದಲೂ ಕಡೂರು ಲಿಂಗಾಯತ ಮತ್ತು ಕುರುಬ ಜಾತಿ ಪ್ರತಿಷ್ಠೆಯ ಪೈಪೋಟಿ ಅಖಾಡ. 1957ರಿಂದ 2018ರವರೆಗಿನ- ಒಂದು ಉಪ ಚುನಾವಣೆಯೂ ಸೇರಿದಂತೆ- ನಡೆದ ಒಟ್ಟು 15 ಮತ ಸಮರದಲ್ಲಿ ಬ್ರಾಹ್ಮಣ ಸಮುದಾಯದ ವೈ.ಎಸ್.ವಿ.ದತ್ತ ಒಬ್ಬರನ್ನು ಬಿಟ್ಟರೆ ಶಾಸಕರಾದವರೆಲ್ಲ ಒಂದೋ ಲಿಂಗಾಯತ ಜಾತಿಯವರು ಇಲ್ಲವೆ ಕುರುಬ ಸಮುದಾಯಕ್ಕೆ ಸೇರಿದವರು. ಆರಂಭದಲ್ಲಿ ಸಮ ಸಮಾಜ ನಿರ್ಮಾಣ ಧ್ಯೇಯ-ಧೋರಣೆಯ ಸಮಾಜವಾದಿಗಳ ಕರ್ಮಭೂಮಿಯಾಗಿದ್ದ ಕಡೂರಿನಲ್ಲಿ 2010ರ ಉಪ ಚುನಾವಣೆಯವರೆಗೆ ಬಿಜೆಪಿಗೆ ಕೇಸರಿ ಪತಾಕೆ ಹಾರಿಸಲು ಸಾಧ್ಯವಾಗಿರಲಿಲ್ಲ. ಚಿಕ್ಕಮಗಳೂರಿನ ದತ್ತ ಪೀಠ ವಿವಾದದ “ಪ್ರಖರತೆ”ಯಲ್ಲಿ ಜಿಲ್ಲೆಯಾದ್ಯಂತ ಕಮಲ ಅರಳಿದರೂ ಕಡೂರಲ್ಲಿ ಮಾತ್ರ ಮುದುಡಿಕೊಂಡೇ ಬಿದ್ದಿತ್ತು.

ಯಡಿಯೂರಪ್ಪ ಸಿಎಂ ಕ್ಯಾಂಡಿಡೇಟಾಗಿ ಬಿಜೆಪಿಯಲ್ಲಿ ಪ್ರವರ್ಧಮಾನಕ್ಕೆ ಬಂದಾಗಲೂ ಅವರ ಲಿಂಗಾಯತ “ಪ್ರಜ್ಞೆ”ಯ ದಾಳವನ್ನು ಕಡೂರಿನಲ್ಲಿ ಉರುಳಿಸಲಾಗಲಿಲ್ಲ. ಲಿಂಗಾಯತರಲ್ಲಿನ ಐದಾರು ಒಳ ಪಂಗಡಗಳನ್ನು ಒಗ್ಗೂಡಿಸಲು ಯಡಿಯೂರಪ್ಪ ಮತ್ತು ಹಿಂದುತ್ವಕ್ಕೆ ಸಾಧ್ಯವಾಗಲಿಲ್ಲ; ಜಿಲ್ಲೆಯ ಮಲೆನಾಡನ್ನು ಧರ್ಮಕಾರಣ ಆವಾಹಿಸಿದ್ದರೆ, ಬಯಲು ಸೀಮೆಯ ಕಡೂರಲ್ಲಿ ಮಾತ್ರ ಜಾತಿ ಪ್ರತಿಷ್ಠೆಯ ಜಿದ್ದಾಜಿದ್ದಿ ಬಿರುಸಾಗಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಕಾಂಗ್ರೆಸ್ ಮತ್ತು ಜನತಾ ಪರಿವಾರದ ಮುಖಾಮುಖಿ ಕಾಳಗದ ಈ ಕ್ಷೇತ್ರದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೂ ಒದ್ದಾಡವ ಪರಿಸ್ಥಿತಿಯಿತ್ತು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2010ರಲ್ಲಿ ಜರುಗಿದ ಉಪ ಚುನಾವಣೆಯಲ್ಲಿ ಬಿಜೆಪಿ ಅಚಾನಕ್ ಗೆಲುವು ಸಾಧಿಸಿತು. ಜನತಾ ಪರಿವಾರ ಮತ್ತು ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಶಾಸಕರಾಗಿದ್ದ ಕೆ.ಎಂ.ಕೃಷ್ಣಮೂರ್ತಿ ನಿಧನದ ನಂತರ ಕುರುಬ ಸಮುದಾಯದಲ್ಲಿ ಸಮರ್ಥ ನಾಯಕತ್ವದ ನಿರ್ವಾತ ಕಂಡುಬಂದಿದ್ದರಿಂದ, ಆ ಸಮುದಾಯದ ಒಂದು ವರ್ಗ ಬಿಜೆಪಿ ಕಡೆ ವಾಲಿದ್ದೇ ಉಪ-ಸಮರದ ಗೆಲುವಿಗೆ ಕಾರಣ ಎನ್ನಲಾಗುತ್ತಿದೆ.

ಕಡೂರು ಮಾಜಿ ಪ್ರಧಾನಿ ದೇವೇಗೌಡ ಪ್ರತಿನಿಧಿಸಿದ್ದ, ಈಗ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಸಂಸದನಾಗಿರುವ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಹಾಗಾಗಿ ದೇವೇಗೌಡರ ಕುಟುಂಬಕ್ಕೆ ಕಡೂರಲ್ಲಿ ಅಸ್ತಿತ್ವ ತೋರಿಸಬೇಕಾದ ಅನಿವಾರ್ಯತೆಯಿದೆ. ಆದರೆ ಜೆಡಿಎಸ್ ಗೆಲ್ಲುವ ಮಟ್ಟದಲ್ಲಿಲ್ಲ. 2019ರ ಪಾರ್ಲಿಮೆಂಟ್ ಇಲೆಕ್ಷನ್‌ನಲ್ಲಿ ಜೆಡಿಎಸ್ ಗೆದ್ದಿದೆಯಾದರೂ ಕಡೂರಲ್ಲಿ ಬಿಜೆಪಿ ಹೆಚ್ಚು ಓಟು ಗಿಟ್ಟಿಸಿದೆ. ಇಲ್ಲಿ ಒಕ್ಕಲಿಗರ ಮತ ಕಡಿಮೆಯಿರುವುದರಿಂದ ಜೆಡಿಎಸ್ ಪ್ರಭಾವ ಅಷ್ಟಕ್ಕಷ್ಟೆ ಎನ್ನಲಾಗುತ್ತಿದೆ. ಜನಾನುರಾಗಿಯೆಂದೇ ಜನಪ್ರಿಯರಾಗಿರುವ ಮಾಜಿ ಶಾಸಕ ವೈ.ಎಸ್.ವಿ.ದತ್ತ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿರುವುದರಿಂದ ಜೆಡಿಎಸ್ ಇನ್ನಷ್ಟು ದುರ್ಬಲವಾಗಿದೆ. ಕಳೆದ ಚುನಾವಣೆಯಲ್ಲಿ ’ಹಣಾ’ಹಣಿಯಿಂದ ಗೆದ್ದ ಬೆಳ್ಳಿ ಪ್ರಕಾಶ್ ಯಾನೆ ಕೆ.ಎಸ್.ಪ್ರಕಾಶ್ ಶಾಸಕನಾದ ದಿನದಿಂದ ಸ್ವಜಾತಿ ಲಿಂಗಾಯತರ ಒಳ ಪಂಗಡಗಳನ್ನು ಓಲೈಸುವ ತಂತ್ರಗಳನ್ನು ಪ್ರಯೋಗಿಸುತ್ತಿರವುದರಿಂದ ಕೇಸರಿ ಬಾವುಟಗಳು ಹಳ್ಳಿಗಳಲ್ಲಿ ಹಾರಾಡುತ್ತಿವೆ; ಕುರುಬರ ಬಾಹುಳ್ಯದ ಕಡೂರಲ್ಲೀಗ ಮಾಸ್ ಲೀಡರ್ ಸಿದ್ದರಾಮಯ್ಯರ ನಾಮಬಲದಿಂದ ಕಾಂಗ್ರೆಸ್ ಬಲಿಷ್ಠವಾಗಿದೆ ಎಂಬ ಮಾತು ಕೇಳಿಬರುತ್ತದೆ.

ಕಡೂರು ಕ್ಷೇತ್ರದಲ್ಲಿ ಪಿಎಸ್‌ಪಿ ಒಂದು ಬಾರಿ, ಪಕ್ಷೇತರರು ಮತ್ತು ಬಿಜೆಪಿ ತಲಾ ಎರಡು ಬಾರಿ, ಕಾಂಗ್ರೆಸ್ ಮತ್ತು ಜನತಾ ಪರಿವಾರ ತಲಾ ಐದು ಸಲ ಗೆಲುವು ಕಂಡಿವೆ. 2007ರಲ್ಲಾದ ಅಸೆಂಬ್ಲಿ ಕ್ಷೇತ್ರಗಳ ಪುನರ್‌ವಿಂಗಡಣೆಯಲ್ಲಿ ಬೀರೂರು ಕ್ಷೇತ್ರ ರದ್ದುಮಾಡಿ ಅದನ್ನು ಕಡೂರು ಪರಿಧಿಯಲ್ಲಿ ತರಲಾಗಿದೆ; ಕಡೂರಲ್ಲಿದ್ದ ಎರಡು ಹೋಬಳಿಗಳನ್ನು ಚಿಕ್ಕಮಗಳೂರು ಕ್ಷೇತ್ರಕ್ಕೆ ಜೋಡಿಸಲಾಗಿದೆ. ಕಡೂರು ಕ್ಷೇತ್ರದಲ್ಲಿ ಒಟ್ಟು ಅಂದಾಜು 2,04,865 ಮತದಾರರಿದ್ದಾರೆ. ಇದರಲ್ಲಿ ಲಿಂಗಾಯತ-45,000, ಕುರುಬ-40,000, ಎಸ್‌ಸಿ,ಎಸ್‌ಟಿ-40,000, ಮುಸ್ಲಿಮ್-17,000, ತೆಲುಗು ಗೌಡ+ಒಕ್ಕಲಿಗ-22,000, ಉಪ್ಪಾರ-16,000, ಗೊಲ್ಲ, ಅಲೆಮಾರಿ, ವೈಶ್ಯ ಮುಂತಾದ ಜಾತಿಸಮುದಾಯಗಳ ಮತಗಳಿರುವ ಅಂದಾಜಿದೆ.

ಚುನಾವಣಾ ಪುರಾಣ

ಮೊದಲ ಚುನಾವಣೆಯಲ್ಲಿ (1957) ಕಾಂಗ್ರೆಸ್ ಪಕ್ಷದ ಡಿ.ಎಚ್.ರುದ್ರಪ್ಪ ಮತ್ತು ಪ್ರಜಾ ಸೋಷಲಿಸ್ಟ್ಟ್ ಪಾರ್ಟಿಯ (ಪಿಎಸ್‌ಪಿ) ಜಿ.ಮರುಳಪ್ಪ ನಡುವೆ ನಿಕಟ ಹೋರಾಟ ನಡೆಯಿತು. ಲಿಂಗಾಯತ ಸಮುದಾಯದ ರುದ್ರಪ್ಪ 1,538 ಮತದಿಂದ ಗೆಲುವು ಕಂಡರು. 1962ರಲ್ಲಿ ಪಕ್ಷೇತರರಾಗಿ ಅಖಾಡಕ್ಕೆ ಇಳಿದಿದ್ದ ಸೋಷಲಿಸ್ಟ ಪಕ್ಷದ ಮರುಳಪ್ಪ ಕಾಂಗ್ರೆಸ್ ಶಾಸಕ ರುದ್ರಪ್ಪರನ್ನು 11,407 ಮತಗಳ ಆಗಾಧ ಅಂತರದಲ್ಲಿ ಮಣಿಸಿದರು. 1967ರಲ್ಲಿ ಕುರುಬ ಸಮುದಾಯದ ಕೆ.ಎಂ.ತಮ್ಮಯ್ಯ 18,663 ಮತ ಪಡೆದು ಪಿಎಸ್‌ಪಿ ಎಮ್ಮೆಲ್ಲೆಯಾಗಿ ಆಯ್ಕೆಯಾದರು. ಕಾಂಗ್ರೆಸ್‌ನ ವೈ.ಎಂ.ಗಂಗಾಧರಪ್ಪ 5,840 ಮತದಿಂದ ಸೋಲು ಅನುಭವಿಸುವಂತಾಯಿತು. ಕುರುಬ ಸಮಾಜದ ಕೆ.ಆರ್.ಹೊನ್ನಪ್ಪ ಮತ್ತು ಕೆ.ಎಂ.ತಮ್ಮಯ್ಯ 1972ರಲ್ಲಿ ಮುಖಾಮುಖಿಯಾದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ಧ ಸಮಾಜವಾದಿ ಮುಂದಾಳು-ಶಾಸಕ ತಮ್ಮಯ್ಯರನ್ನು 5,427 ಮತದಿಂದ ಕಾಂಗ್ರೆಸ್‌ನ ಹೊನ್ನಪ್ಪ ಹಿಮ್ಮೆಟ್ಟಿಸಿದರು.

ಕೆ.ಎಂ.ಕೃಷ್ಣಮೂರ್ತಿ

1978ರಲ್ಲಿ ಇಂದಿರಾ ಗಾಂಧಿಯ ಸರ್ವಾಧಿಕಾರದ ವಿರುದ್ಧ ಹಲವು ಪಕ್ಷದವರು ಸೇರಿಕೊಂಡು ರಚಿಸಿದ್ದ ಸಂಯುಕ್ತ ಜನತಾ ಪಕ್ಷದಿಂದ ಕಣಕ್ಕಿಳಿದಿದ್ದ ಸಮಾಜವಾದಿ-ಮಾಜಿ ಶಾಸಕ ತಮ್ಮಯ್ಯ 5,491 ಮತದಿಂದ ಕಾಂಗೈನ ಕೆ.ಟಿ.ಮುದಿಯಪ್ಪರನ್ನು ಮಣಿಸಿ ಎರಡನೆ ಬಾರಿ ಶಾಸಕರೆನಿಸಿಕೊಂಡರು. 1983ರಲ್ಲಿ ಕಾಂಗ್ರೆಸ್‌ನ ಎನ್.ಕೆ.ಹುಚ್ಚಪ್ಪ ಮತ್ತು ಪಕ್ಷೇತರ ಹುರಿಯಾಳುಗಳಾದ ಕೆ.ಎಂ.ಕೃಷ್ಣಮೂರ್ತಿ (ಕೆಎಂಕೆ) ಮತ್ತು ಪಿ.ಬಿ.ಓಂಕಾರಮೂರ್ತಿ ನಡುವೆ ನಿಕಟ ತ್ರಿಕೋನ ಕಾಳಗ ನಡೆಯಿತು. ಲಿಂಗಾಯತ ಸಮುದಾಯದ ಹುಚ್ಚಪ್ಪ ಹತ್ತಿರದ ಪ್ರತಿಸ್ಪರ್ಧಿ ಕುರುಬ ಸಮಾಜದ ಕೃಷ್ಣಮೂರ್ತಿಯವರನ್ನು 1,660 ಮತಗಳಿಂದ ಸೋಲಿಸಿದರು. 1985ರ ಆಖಾಡದಲ್ಲಿ ಲಿಂಗಾಯತ ಮತ್ತು ಕುರುಬ ಜಾತಿ ಪ್ರತಿಷ್ಠೆ ಕ್ಲೈಮ್ಯಾಕ್ಸ್ ತಲುಪಿತ್ತು. ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದ ಲಿಂಗಾಯತ ಜಾತಿಯ ಪಿ.ಬಿ.ಓಂಕಾರಮೂರ್ತಿ ಮತ್ತು ಜನತಾ ಪಾರ್ಟಿ ಹುರಿಯಾಳಾಗಿದ್ದ ಕುರುಬ ಸಮಾಜದ ಕೆ.ಎಂ.ಕೃಷ್ಣಮೂರ್ತಿ ನಡುವೆ ಕತ್ತುಕತ್ತಿನ ಕಾಳಗ ಏರ್‍ಪಟ್ಟಿತ್ತು. ಲಿಂಗಾಯತರ ಒಳ ಪಂಗಡಗಳು ವೈಮನಸ್ಸು ಮರೆತು ಒಂದಾಗಿ ಓಂಕಾರಮೂರ್ತಿಗೆ ಬೆಂಬಲಿಸಿದರು. ಜನತಾ ಪಕ್ಷದ ಪರ ರಾಜ್ಯದಾದ್ಯಂತ ಇದ್ದ ಒಲವು ಮತ್ತು ಕ್ಷೇತ್ರದ ದ್ವಿತೀಯ ಬಹುಸಂಖ್ಯಾತರಾದ ಕುರುಬರ ಅಖಂಡ ಬೆಂಬಲದಿಂದ ಕೃಷ್ಣಮೂರ್ತಿಯವರೂ ಪ್ರಬಲ ಎದುರಾಳಿಯಾಗಿ ಹೊರಹೊಮ್ಮಿದ್ದರು. ಈ ತುರುಸಿನ ಜಿದ್ದಾಜಿದ್ದಿಯಲ್ಲಿ ಓಂಕಾರಮೂರ್ತಿ ಕೇವಲ 123 ಮತಗಳಿಂದ ಗೆದ್ದು ಶಾಸಕರಾದರು.

ಸೋತ ಜನತಾ ಪಾರ್ಟಿಯ ಕೃಷ್ಣಮೂರ್ತಿ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿ ಕ್ಷೇತ್ರದಲ್ಲಿ ವರ್ಚಸ್ಸು ವೃದ್ಧಿಸಿಕೊಂಡರು. ಆದರೆ 1989ರಲ್ಲೂ ಕೃಷ್ಣಮೂರ್ತಿಯವರಿಗೆ ಗೆಲ್ಲಲಾಗಲಿಲ್ಲ. ಲಿಂಗಾಯತ ಸಮುದಾಯದ ಕಾಂಗ್ರೆಸ್ ಕ್ಯಾಂಡಿಡೇಟ್ ಎಂ.ವೀರಭದ್ರಪ್ಪ 9,765 ಮತದಂತರದಿಂದ ಕೃಷ್ಣಮೂರ್ತಿಯವರನ್ನು ಮಣಿಸಿದರು. ಆನಂತರ ಕೃಷ್ಣಮೂರ್ತಿ ನಿರಂತರ ನಾಲ್ಕು ಬಾರಿ ಶಾಸಕರಾಗಿ ಚುನಾಯಿತರಾದರು; ಸದಾ ಜನರ ನಡುವೆಯಿರುತ್ತಿದ್ದ ಕೃಷ್ಣಮೂರ್ತಿ 1994ರಲ್ಲಿ ಜನತಾ ದಳದ ಅಭ್ಯರ್ಥಿಯಾಗಿ ಕಾಂಗ್ರೆಸ್ ಎಮ್ಮೆಲ್ಲೆ ವೀರಭದ್ರಪ್ಪರನ್ನು ಭರ್ಜರಿ 31,256 ಮತದಿಂದ ಹಿಮ್ಮೆಟ್ಟಿಸಿ ಮೊದಲ ಬಾರಿ ಅಸೆಂಬ್ಲಿ ಪ್ರವೇಶ ಪಡೆದರು. ಜನತಾ ಪರಿವಾರಕ್ಕೆ ಗಟ್ಟಿ ನೆಲೆಯಿಲ್ಲದ ಕಡೂರಲ್ಲಿ ಸ್ವಂತ ವರ್ಚಸ್ಸಿನಿಂದಲೇ ಗೆಲ್ಲುತ್ತಿದ್ದ ಕೃಷ್ಣಮೂರ್ತಿ 1999ರಲ್ಲಿ ಪಕ್ಷೇತರ ಉಮೇದುವಾರ ಮರುಳಸಿದ್ಧಪ್ಪರನ್ನು 4,805 ಮತದಿಂದ ಸೋಲಿಸಿದರು. ಅದೇ ಮರುಸಳಸಿದ್ಧಪ್ಪ 2004ರಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗಿ ಜೆಡಿಎಸ್‌ನ ಕೃಷ್ಣಮೂರ್ತಿಯವರಿಗೆ ಮುಖಾಮುಖಿಯಾದರು. 7,289 ಮತಗಳ ಅಂತರದಿಂದ ಕೃಷ್ಣಮೂರ್ತಿ ಗೆಲುವು ಕಂಡರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮೂಡಿಗೆರೆ: ಒಕ್ಕಲಿಗರ ಮರ್ಜಿಯ ಮೀಸಲು ಕ್ಷೇತ್ರದಲ್ಲಿ ಮೂರೂ ಮುಖ್ಯ ಪಕ್ಷಗಳಲ್ಲಿ ಬಂಡಾಯದ ಬಾವುಟ!

ಸಿದ್ದರಾಮಯ್ಯ ಜನತಾ ದಳ ಬಿಟ್ಟು ಕಾಂಗ್ರೆಸ್ ಸೇರಿದಾಗ ಹಿಂಬಾಲಿಸಿದ ಕೃಷ್ಣಮೂರ್ತಿ 2008ರಲ್ಲಿ ಆ ಪಕ್ಷದ ಹುರಿಯಾಳಾದರು. ಅದು ರೋಚಕ ತ್ರಿಕೋನ ಕಾಳಗ. ಕಾಂಗ್ರಸ್‌ನ ಕೃಷ್ಣಮೂರ್ತಿ, ಜೆಡಿಎಸ್‌ನ ವೈ.ಎಸ್.ವಿ.ದತ್ತ ಮತ್ತು ಬಿಜೆಪಿಯ ಡಾ.ವೈ.ಸಿ.ವಿಶ್ವನಾಥ್ ಮಧ್ಯೆ ಕತ್ತುಕತ್ತಿನ ಹೋರಾಟ ನಡೆಯಿತು. ಕೃಷ್ಣಮೂರ್ತಿ ನಿಟಕ ಪ್ರತಿಸ್ಪರ್ಧಿ ಜೆಡಿಎಸ್‌ನ ದತ್ತರನ್ನು 3,411 ಮತಗಳಿಂದ ಮಣಿಸಿದರು. ಕೃಷ್ಣಮೂರ್ತಿಯವರ ನಿಧನದಿಂದ 2010ರಲ್ಲಿ ಎದುರಾದ ಉಪಚುನಾವಣೆಯಲ್ಲಿ ಬಿಜೆಪಿಯ ಡಾ.ವಿಶ್ವನಾಥ್ ಜೆಡಿಎಸ್‌ನ ದತ್ತರನ್ನು 13,897 ಮತದಿಂದ ಸೋಲಿಸಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕೇಸರಿ ಬಾವುಟ ಹಾರಿಸಿದರು. ಅಂದು ಯಡಿಯೂರಪ್ಪ ಸಿಎಂ ಆಗಿದ್ದರಿಂದ ಆಡಳಿತಾರೂಢ ಬಿಜೆಪಿಯ ಆಡಳಿತ ಯಂತ್ರಾಂಗವನ್ನು ಬಳಸಿ- ಹಣವನ್ನು ಯಥೇಚ್ಛವಾಗಿ ಹರಿಸಿ ಗೆದ್ದರೆಂಬ ಆರೋಪ ಇವತ್ತಿಗೂ ಕ್ಷೇತ್ರದಲ್ಲಿ ಪ್ರಚಲಿತದಲ್ಲಿದೆ.

ವೈ.ಎಸ್.ವಿ.ದತ್ತ

ಎರಡು ಬಾರಿ ಸೋತರೂ ಜನರ ನಡುವೆ ಓಡಾಡಿಕೊಂಡಿದ್ದ ಸರಳ-ಸಜ್ಜನ ದತ್ತ 2013ರ ರಣಾಂಗಣದಲ್ಲಿ ಕೆಜೆಪಿಯ ಬೆಳ್ಳಿ ಪ್ರಕಾಶ್‌ರನ್ನು 42,433 ಮತಗಳ ಆಗಾಧ ಅಂತರದಿಂದ ಹಿಮ್ಮೆಟ್ಟಿಸಿ ದಿಗ್ವಿಜಯ ಸಾಧಿಸಿದರು. 2018ರಲ್ಲಿ ಲಿಂಗಾಯತ ನಾಯಕಾಗ್ರೇಸ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆಂಬ ಪ್ರತಿಷ್ಠೆ ಕ್ಷೇತ್ರದ ಲಿಂಗಾಯತರ ವಿವಿಧ ಒಳಪಂಗಡಗಳನ್ನು ಒಂದಾಗಿಸಿತ್ತು; ಬಿಜೆಪಿಯ ಬೆಳ್ಳಿ ಪ್ರಕಾಶ್ ಹಣ ಹರಿಸಿ, ಧರ್ಮಸ್ಥಳ ದೇವರ ಮೇಲೆ ಆಣೆ ಹಾಕಿಸಿ ಓಟು ಖರೀದಿಸಿದರೆಂಬ ಆರೋಪ ಕೇಳಿಬಂದಿತ್ತು. ಜತೆಗೆ ಸ್ವಪಕ್ಷದ ಧರ್ಮೇಗೌಡ-ಭೋಜೇಗೌಡ ಸೋದರರಿಗೂ ದತ್ತ ಗೆಲ್ಲುವುದು ಬೇಕಾಗಿರಲಿಲ್ಲ ಎನ್ನಲಾಗಿದೆ. ಈ ಜಾತಿ ರಾಜಕಾರಣದ ಮೇಲಾಟದಲ್ಲಿ ತಮ್ಮ ಸ್ವ ಬ್ರಾಹ್ಮಣ ಸಮುದಾಯದ ಕೇವಲ ಒಂದು ಸಾವಿರ ಮತಗಳೂ ಇಲ್ಲದ ಜೆಡಿಎಸ್‌ನ ದತ್ತ 15,372 ಮತದಿಂದ ಸೋತುಹೋದರು. ಆದರೆ ದತ್ತ ಮತ್ತು ಕಾಂಗ್ರೆಸ್ ಉಮೇದುವಾರ ಕೆ.ಎಸ್.ಆನಂದ್ ಪಡೆದ ಮತಗಳು ಗೆದ್ದ ಪ್ರಕಾಶ್ ಪಡೆದ ಮತಗಳಿಗಿಂತ ಜಾಸ್ತಿಯಿರುವುದು ಕ್ಷೇತ್ರದಲ್ಲಿ ಬಿಜೆಪಿಗೆ ಗಟ್ಟಿ ನೆಲೆಯಿಲ್ಲ ಎಂಬುದನ್ನು ಬಿಂಬಿಸುವಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಡೂರು-ಬೀರೂರಿನ ಬೇಕುಬೇಡ

ಹತ್ತಿರತ್ತಿರ ಐದು ನೂರು ಹಳ್ಳಿಗಳಿರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಂದಿಷ್ಟು ರಸ್ತೆಗಳಾಗಿರುವುದು ಬಿಟ್ಟರೆ ಶಾಸಕರ ಶ್ರಮದಿಂದ ಜನಜೀವನ ಮಟ್ಟ ಸುಧಾರಣೆಗೆ ನೆರವಾಗುವಂಥ ಒಂದೇಒಂದು ಯೋಜನೆ ಬಂದಿರುವುದು ಕಾಣಿಸದು. ಟಾರು, ಸೂರು ಮತ್ತು ನೀರು ಒದಗಿಸುವ ಭರವಸೆಯಿಂದ ಶಾಸಕನಾದ ಬೆಳ್ಳಿ ಪ್ರಕಾಶ್ ಭರ್ಜರಿ ಫಂಡು ತಂದು ಬರೀ ಟಾರು (ರಸ್ತೆ) ಕಾಮಗಾರಿಗೆ ಹೆಚ್ಚು ಆಸಕ್ತಿ ವಹಿಸಿದ್ದಾರೆ; ಈ ಟಾರು ಕಾಮಗಾರಿಯಲ್ಲಿ ಅಧಿಕಾರಸ್ಥರಿಗೆ ಫಾಯ್ದೆ ಜಾಸ್ತಿ. ಶಾಸಕರ ಆಪ್ತ ಕೂಟದ ಕೆಲವೇ ಗುತ್ತಿಗೆದಾರರು ಸರಕಾರಿ ಕಂಟ್ರಾಕ್ಟ್ ಮಾಡುತ್ತಿದ್ದಾರೆ; ಕಾಮಗಾರಿ ಗುಣಮಟ್ಟವು ಅಷ್ಟಕ್ಕಷ್ಟೇ ಎಂಬ ಆರೋಪಗಳು ಒಂದೆಡೆಯಾದರೆ, ಮತ್ತೊಂದೆಡೆ ಸೂರು ಮತ್ತು ನೀರಿನ ಬೇಗೆಯನ್ನು ಶಾಸಕರು ನಿವಾರಿಸಿಲ್ಲ ಎಂಬ ಬೇಸರದ ಭಾವನೆ ಕ್ಷೇತ್ರದ ಹಲವು ಹಳ್ಳಿಗಳಲ್ಲಿದೆ. ಕನಿಷ್ಠ ಮೂಲ ಸೌಕರ್ಯಗಳಿಲ್ಲದ ಹಳ್ಳಿಗಳ ಗೋಳಂತೂ ಹೇಳತೀರದು; ಮೂಲಸೌಕರ್ಯಗಳನ್ನು ಕಾಣದ ಲಕ್ಷ್ಮೀಪುರ ಗ್ರಾಮಸ್ಥರು ಆಳುವವರ ಅವಜ್ಞೆಗೆ ರೋಸತ್ತು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಕ್ಷೇತ್ರದ ಪ್ರಮುಖ ಬೇಡಿಕೆ ಪೂರ್ಣ ಪ್ರಮಾಣದ ಶಾಶ್ವತ ಭದ್ರಾ ನೀರಾವರಿ ಯೋಜನೆ ಅನುಷ್ಠಾನ. ಬರ ಮತ್ತು ಬಂಜರು ಭೂಮಿಯ ಕಡೂರು-ಬೀರೂರು ರೈತರು ದಶಕಗಳಿಂದ ಭದ್ರಾ ನೀರಾವರಿ ಯೋಜನೆಯ ಕನಸು ಕಾಣುತ್ತಿದ್ದಾರೆ. 2010ರಲ್ಲಿ ಶಾಸಕರಾಗಿದ್ದ ಡಾ.ವಿಶ್ವನಾಥ್ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಮಂಜೂರಿ ಮಾಡಿಸಿದ್ದರು. ಇದರಿಂದ 32 ಹಳ್ಳಿಗಳ ಕೆರೆ ಮರುಪೂರಣವಾಗಿ ನೀರಾವರಿ ಸೌಲಭ್ಯ ಸಿಕ್ಕಿದ್ದು ಬಿಟ್ಟರೆ ಆ ನಾಲೆಗಳ ಕೆಲಸ ಮುಂದಕ್ಕೆ ಹೋಗಿಲ್ಲ. ಕೆಎಂಕೆ ಶಾಸಕರಾಗಿದ್ದಾಗ ಭದ್ರಾ ಆಣೆಕಟ್ಟೆಯಿಂದ ಕಡೂರು ಮತ್ತು ಕೆಲವು ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸಲಾಗಿತ್ತು. ಉಳಿದ ಹಳ್ಳಿಗರು ಇವತ್ತಿಗೂ ಬೋರ್‌ವೆಲ್ ಮತ್ತು ಕೆರೆಗಳನ್ನೇ ನೆಚ್ಚಿಕೊಂಡಿದ್ದಾರೆ. ಭದ್ರಾ ನೀರಾವರಿ ನಾಲೆ ಮತ್ತು ಹೈವೆಗಾಗಿ ಭೂಮಿ ಕಳೆದುಕೊಂಡವರು ಸಮರ್ಪಕ ಪರಿಹಾರ ಸಿಗದೆ ಕೋರ್ಟು-ಕಚೇರಿ ಅಲೆಯುತ್ತಿದ್ದಾರೆ. ನಿರಾಶ್ರಿತರ ನಿವೇಶನ ಸಮಸ್ಯೆ ಜ್ವಲಂತವಾಗಿದೆ. ಬಗರ್ ಹುಕುಮ್ ಸಾಗುವಳಿ ಹಕ್ಕುಪತ್ರ, ಮನೆ-ನಿವೇಶನ ಮಂಜೂರಿಯಾಗದೆ ಅಸಹಾಯಕ ಮಂದಿ ಒದ್ದಾಡುತ್ತಿದ್ದಾರೆ. ಮಳೆಗಾಲದಲ್ಲಿ ಬಿದ್ದ ಮನೆಗಳ ಕುಟುಂಬದವರಿಗಿನ್ನೂ ಪರಿಹಾರ ಸಿಕ್ಕಿಲ್ಲ. ಇದ್ಯಾವುದೂ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಶಾಸಕರು “ಟಾರ್ ಪ್ರಗತಿ”ಯಲ್ಲಿ ನಿರತರಾಗಿದ್ದಾರೆಂದು ಜನರು ಆಕ್ರೋಶದಿಂದ ಹೇಳುತ್ತಾರೆ.

ಡಾ.ವೈ.ಸಿ ವಿಶ್ವನಾಥ್

ಕಡೂರಲ್ಲಿ ತೆಂಗು ಪ್ರಮುಖ ಬೆಳೆ. ಆದರೆ ತೆಂಗಿಗೆ, ಕಾಫಿ ಮತ್ತು ಅಡಿಕೆಗೆ ಸಿಗುವಷ್ಟು ಮಹತ್ವ ಸರಕಾರದಿಂದ ಸಿಗುತ್ತಿಲ್ಲವೆಂಬ ಅಸಮಾಧಾನ ತೆಂಗು ಬೆಳೆಗಾರರಲ್ಲಿದೆ. ಕೊಬ್ಬರಿ ಖರೀದಿ ಕೇಂದ್ರಗಳಿವೆಯಾದರೂ ಎಪಿಎಂಸಿಯಲ್ಲಿ ಮಧ್ಯವರ್ತಿ ಹಾವಳಿ ತಪ್ಪಿಲ್ಲ; ನುಸಿ ರೋಗದಿಂದ ತೆಂಗಿನ ಇಳುವರಿ ಕಮ್ಮಿಯಾಗುತ್ತಿದೆ. ಜೋಳ, ರಾಗಿಗೂ ಸಮರ್ಪಕ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಕೃಷಿ ಉನ್ನತೀಕರಣ ಮತ್ತು ಕೈಗಾರಿಕೀಕರಣ ಆಗಬೇಕಾಗಿದೆ. ತುಮಕೂರಿನಲ್ಲಿರುವ ವಿಮಾನ ಬಿಡಿಭಾಗ ತಯಾರಿಕಾ ಘಟಕ ಮೊದಲು ಮಂಜೂರಾಗಿದ್ದು ಕಡೂರಿಗೆ. ಆದರೆ ಅದು ಶಾಸಕರಾಗಿದ್ದವರ ಉದಾಸೀನದಿಂದ ಕೈತಪ್ಪಿತು. ಬೀರೂರಿಗೆ ಬರುತ್ತಿದ್ದ ರೈಲ್ವೆ ವರ್ಕ್ ಶಾಪ್, ಆಸ್ಪತ್ರೆಯೇ ಮುಂತಾದ ರೈಲು ಯೋಜನೆಗಳಿಂದ ಕೆಳವರ್ಗದವರಿಗೆ ಅನುಕೂಲವಾಗಿ, ತಮ್ಮ ಅಂಕೆಗೆ ಸಿಗಲಾರರೆಂದು ಮೇಲ್ವರ್ಗದ ಜಮೀನ್ದಾರಿ ಮಾಫಿಯಾ ರಹಸ್ಯವಾಗಿ ತಡೆಯೊಡ್ಡಿತೆನ್ನಲಾಗುತ್ತಿದೆ. ಕಡೂರಿಗೊಂದು ಇಂಜಿನಿಯರಿಂಗ್ ಕಾಲೇಜು ಅವಶ್ಯವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರೋರ್ವರು ’ನ್ಯಾಯಪಥ’ಕ್ಕೆ ಹೇಳಿದರು.

ಜಿದ್ದಾಜಿದ್ದಿಯ ರಣಕಣ!

ರಣೋತ್ಸಾಹ ಏರುತ್ತಿರುವ ಕಡೂರು-ಬೀರೂರು ಸಮರಾಂಗಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ-ನಿಕಟ ಪೈಪೋಟಿ ಏರ್‍ಪಡುವ ಸಕಲ ಸಾಧ್ಯತೆಗಳೂ ಗೋಚರಿಸುತ್ತಿದೆ. ಜೆಡಿಎಸ್ ಇಲ್ಲಿ ಆಟಕ್ಕುಂಟು; ಲೆಕ್ಕಕ್ಕಿಲ್ಲ. ಗೆಲ್ಲಲಾಗದಿದ್ದರೂ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ವೈ.ಎಸ್.ವಿ.ದತ್ತ ಸ್ಪರ್ಧೆಗಿಳಿದರೆ ಸೋಲಿಸಿ ಸೇಡು ತೀರಿಸಿಕೊಳ್ಳುವ ಹಠ ಸಂಸದ ಪ್ರಜ್ವಲ್ ಮತ್ತವರ ಚಿಕ್ಕಪ್ಪ-ಮಾಜಿ ಸಿಎಂ-ಕುಮಾರಸ್ವಾಮಿಯದು ಎನ್ನಲಾಗಿದೆ. ಜೆಡಿಎಸ್ ಬೆಂಗಳೂರು ಮೂಲದ ಸಿ.ಎಂ.ಧನಂಜಯ್‌ರನ್ನು ಅಭ್ಯರ್ಥಿಯೆಂದು ಘೋಷಿಸಿದೆ. ಸಿದ್ದರಾಮಯ್ಯರ ಸಿಎಂ ಪರ್ವದಲ್ಲಿ ನಿಗಮವೊಂದರ ಅಧ್ಯಕ್ಷರಾಗಿದ್ದ ಧನಂಜಯ್ ದುಡ್ಡಿನ ಬಲದಲ್ಲಿ ಚುನಾವಣೆ ನಡೆಸುವ ಪ್ಲಾನ್‌ನಲ್ಲಿದ್ದಾರೆ. ಆದರೆ ಕ್ಷೇತ್ರದ ಹೊರಗಿನವರಾದ ಧನಂಜಯ್‌ರನ್ನು ಸ್ವಜಾತಿ ಕುರುಬ ಸಮುದಾಯದವರೇ ನಂಬುತ್ತಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿಕ್ಕಮಗಳೂರು: ಕೋಮು ಕಾರ್ಮೋಡದ ನಡುವೆ ಮೂಡಿದ “ರವಿ”ಗೆ ಗ್ರಹಣ?!

“ಬೆಳ್ಳಿ” ಪ್ರಕಾಶ್ ಎಂದು ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಶಾಸಕ-ಅಪೆಕ್ಸ್ ಬ್ಯಾಂಕ್ ಚೇರ್‌ಮನ್. ಕೆ.ಎಸ್.ಪ್ರಕಾಶ್ ಈ ಬಾರಿ ಬಿಜೆಪಿ ಕದನ ಕಲಿಯಾಗುವುದು ಪಕ್ಕಾ ಆಗಿದೆ. ಕಡೂರಲ್ಲಿ ಬೆಳ್ಳಿ ಮೋಟರ್‍ಸ್ ಹೆಸರಿನ ಹೀರೋ ಹೊಂಡಾ ಶೋ ರೂಮ್ ನಡೆಸುತ್ತಿದ್ದ ಪ್ರಕಾಶ್ ಹೆಸರಿಗೆ “ಬೆಳ್ಳಿ” ಅಂಟಿಕೊಂಡಿದೆ. ಆದರೆ ಪ್ರಕಾಶ್ ಜಿಪಂ.ಸದಸ್ಯರಾಗಿದ್ದಾಗ ಅಥವಾ ಅವರ ಮಡದಿ ಜಿಪಂ ಅಧ್ಯಕ್ಷೆಯಾಗಿದ್ದಾಗ ಅಥವಾ ಈ ಐದು ವರ್ಷ ಎಮ್ಮೆಲ್ಲೆಯಾಗಿದ್ದಾಗ ಕ್ಷೇತ್ರದ ಪಾಲಿಗೆ ಬೆಳ್ಳಿ, ಬಂಗಾರ ಸಿಗುವುದಿರಲಿ ಕನಿಷ್ಠ ಕಂಚೂ ಸಿಗಲಿಲ್ಲವೆಂಬ ಚರ್ಚೆಗಳೀಗ ಕಡೂರು-ಬೀರೂರು ರಾಜಕೀಯ ಕಟ್ಟೆಯಲ್ಲಿ ನಡೆದಿದೆ.

ಸಿ.ಎಂ.ಧನಂಜಯ್‌

ಶಾಸಕರು ಜನರಿಗೆ ಜರೂರ್ ಇದ್ದಾಗ ಕೈಗೆಟುಕುವುದಿಲ್ಲ; ತಾಲೂಕಿನ ಸರಕಾರಿ ಕಚೇರಿಗಳು ಲೇವಾದೇವಿ ಅಡ್ಡೆಗಳಂತಾಗಿವೆ. ಕೋವಿಡ್ ಕಿಟ್ ಪೂರೈಸಿದ ಗುತ್ತಿಗೆದಾರನೊಬ್ಬ ತನಗೆ ತಾಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿಲ್ ಕೊಡದೆ ಸತಾಯಿಸುತ್ತಿದ್ದಾರೆ; ದಯಾಮರಣಕ್ಕೆ ಒಪ್ಪಿಗೆ ಕೊಡಿಯೆಂದು ರಾಷ್ಟ್ರಪತಿಗಳಿಗೆ ಪತ್ರಬರೆದದ್ದು ದೊಡ್ಡ ಸುದ್ದಿಯಾಗಿತ್ತು. ಆ ಬಳಿಕ ಈ ಸಿಇಒ ಮತ್ತು ಬೇರೆಬೇರೆ ಪ್ರಕರಣದಲ್ಲಿ ನಾಲ್ಕೈದು ಅಧಿಕಾರಿಗಳು ಅಮಾನತ್ತಾಗಿದ್ದಾರೆ. ಇದೆಲ್ಲ ಫಾರ್‍ಟಿ ಪರ್ಸೆಂಟ್ ಕಮಿಷನ್ ಮಹಿಮೆಯೆಂಬ ಆರೋಪದ ಅಳಲು ಕ್ಷೇತ್ರದಲ್ಲಿ ಮಾಮೂಲಾಗಿಹೋಗಿದೆ.

ಕಡೂರು ತಾಲೂಕಲ್ಲಿ ಮಡುಗಟ್ಟಿರುವ ಭ್ರಷ್ಟಾಚಾರದಿಂದ ಜನಸಾಮಾನ್ಯರಷ್ಟೇ ಅಲ್ಲ, ಬಿಜೆಪಿಗರೂ ರೋಸತ್ತು ಹೋಗಿದ್ದಾರೆ. ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ; ಶಾಸಕರು ಬೀರೂರು ಭಾಗವನ್ನು ನಿರ್ಲಕ್ಷಿಸಿದ್ದಾರೆ ಎಂಬ ಆಕ್ರೋಶ ಮೂಲ ಬಿಜೆಪಿಗರಲ್ಲಿದೆ. ಇಷ್ಟೆಲ್ಲ ಋಣಾತ್ಮಕ ಪರಿಸ್ಥಿತಿಯಿದ್ದರೂ ಅದೆಲ್ಲವನ್ನು ಮೆಟ್ಟಿನಿಂತು ಗೆಲ್ಲುವ ’ಹಣಾ’ಹಣಿ ಸ್ಕೆಚ್‌ಅನ್ನು ಶಾಸಕರು ಹಾಕಿದ್ದಾರೆ; ಆದರೆ ಮಾಜಿ ಎಮ್ಮೆಲ್ಲೆ ದತ್ತ ಕಾಂಗ್ರೆಸ್ ಕ್ಯಾಂಡಿಡೇಟಾದರೆ ಬೆಳ್ಳಿ ಪ್ರಕಾಶ್‌ಗೆ ಗೆಲುವು ಸುಲಭವಲ್ಲ ಎಂಬ ಮಾತು ಕೇಳಿಬರುತ್ತಿದೆ.

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಕಡೂರಿಗೆ ಅಭ್ಯರ್ಥಿಯನ್ನು ಘೋಷಿಸಲಾಗಿರಲಿಲ್ಲ. ಸಿದ್ದು ಸಪೋರ್ಟ್‌ನಿಂದ ಕಾಂಗ್ರೆಸ್ ಸೇರಿರುವ ದತ್ತರನ್ನು ಅಭ್ಯರ್ಥಿಯನ್ನಾಗಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಮನಸ್ಸಿಲ್ಲ ಎಂದೇ ವಿಶ್ಲೇಷಿಸಲಾಗಿತ್ತು. ಡಿಕೆಶಿ ಕಾಂಗ್ರೆಸ್ಸಿಗೆ ಹೊರೆಯೆಂದು ಇತ್ತೀಚಿಗೆ ದತ್ತ ಹೇಳಿದ್ದಾರೆನ್ನಲಾದ ಆಡಿಯೋ ಒಂದು ಸದ್ದುಮಾಡಿತ್ತು. ಕಳೆದ ಬಾರಿ ಕಾಂಗ್ರೆಸ್ ಹುರಿಯಾಳಾಗಿ ಸರಿಸುಮಾರು ದತ್ತರಷ್ಟೆ ಮತ (46,142) ಪಡೆದಿದ್ದ ಕುರುಬ ಸಮುದಾಯದ ರಿಯಲ್ ಎಸ್ಟೇಟ್ ಧನವಂತ ಕೆ.ಎಸ್.ಆನಂದ್ ಪರ ಡಿಕೆಶಿ ನಿಂತಿದ್ದರು. ಎಂಟು ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್‌ನಲ್ಲಿದ್ದರೂ ಮೇಲಾಟವಿರುವುದು ಸಿದ್ದು ನಿಷ್ಠ ದತ್ತ ಮತ್ತು ಡಿಕೆಶಿ ಅನುಯಾಯಿ ಆನಂದ್ ಮಧ್ಯೆ ಮಾತ್ರ. ಈಗ ಏಪ್ರಿಲ್ ಆರರಂದು ಕಾಂಗ್ರೆಸ್ ಬಿಡುಗಡೆ ಮಾಡಿರುವ ಎರಡನೇ ಪಟ್ಟಿಯಲ್ಲಿ ದತ್ತ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಆನಂದ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ಷೇತ್ರದ ನಾಡಿಮಿಡಿತ ಗೊತ್ತಿರುವ ದತ್ತ ಯಾವುದೇ ಹಮ್ಮುಬಿಮ್ಮಿಲ್ಲದೆ ಜನಸಾಮಾನ್ಯರ ಬೇಕು-ಬೇಡಗಳಿಗೆ ಸ್ಪಂದಿಸುವ ಅಪರೂಪದ ನಾಯಕ. ಇದೇ ಅವರ ಸಾಮರ್ಥ್ಯ ಮತ್ತು ದೌರ್ಬಲ್ಯ. ದತ್ತ ಕಾಂಗ್ರೆಸ್ ಕುದುರೆಯಾಗಿದ್ದರೆ ಸಣ್ಣ ಮತದಂತರದಿಂದ ಗೆಲುವಿನ ಗೆರೆ ದಾಟುತ್ತಿದ್ದರು; ಆದರೆ ಈಗ ಆನಂದ್‌ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುತ್ತಿದ್ದು ಬಿಜೆಪಿಯ ಬೆಳ್ಳಿ ಪ್ರಕಾಶ್ ಪರ ಫೋಟೋ ಫಿನಿಶ್ ಫಲಿತಾಂಶ ಬರಬಹುದು ಎನ್ನಲಾಗುತ್ತಿದೆ. ಆದರೆ ಸಿದ್ದರಾಮಯ್ಯನವರು ತಾವು ಬೆಂಬಲಿಸಿದ ಅಭ್ಯರ್ಥಿಗೆ ಟಿಕೆಟ್ ಸಿಗದೆ ಇದ್ದ ಬಗ್ಗೆ ಹೆಚ್ಚು ನಿರಾಶೆ ಹೊಂದದೆ, ಆನಂದ್ ಪರವಾಗಿ ಪ್ರಚಾರ ಮಾಡಿ, ಕುರುಬ ಸಮುದಾಯದ ಮತಗಳು ಇಡಿಯಾಗಿ ಕಾಂಗ್ರೆಸ್ ಕಡೆಗೆ ತಿರುಗಿದರೆ, ಆನಂದ್ ಮೊದಲ ಬಾರಿಗೆ ಶಾಸಕರಾಗುವ ಕನಸು ನನಸಾಗುವುದು ಕಷ್ಟವೇನಲ್ಲ ಎಂಬ ಮಾತೂ ಚಾಲ್ತಿಯಲ್ಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...