Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿಕ್ಕಮಗಳೂರು: ಕೋಮು ಕಾರ್ಮೋಡದ ನಡುವೆ ಮೂಡಿದ "ರವಿ"ಗೆ ಗ್ರಹಣ?!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಿಕ್ಕಮಗಳೂರು: ಕೋಮು ಕಾರ್ಮೋಡದ ನಡುವೆ ಮೂಡಿದ “ರವಿ”ಗೆ ಗ್ರಹಣ?!

- Advertisement -
- Advertisement -

ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಚಿಕ್ಕಮಗಳೂರು ಜಿಲ್ಲೆ ಕಾಫಿ ಘಮಲಿನ ಸೀಮೆ; ಮಲೆನಾಡು,ಅರೆ ಮಲೆನಾಡು ಮತ್ತು ಬಯಲು ಸೀಮೆಯ ವಿಭಿನ್ನ ಭೌಗೋಳಿಕ ಗುಣ-ಸ್ವಭಾವದ ಜಿಲ್ಲೆಯಲ್ಲಿ ಬಹುಭಾಗ ಸಮೃದ್ಧ ಮಲೆನಾಡು. ಸಹ್ಯಾದ್ರಿಯ ಜೀವವೈವಿಧ್ಯದ ದಟ್ಟ ನಿತ್ಯಹರಿದ್ವರ್ಣ ಕಾಡು, ಶೋಲಾ ಹುಲ್ಲುಗಾವಲು, ಜೀವನದಿಗಳಾದ ತುಂಗೆ-ಭದ್ರೆಯರು, ಗಗನ ಚುಂಬಿ ಗಿರಿ-ಶಿಖರಗಳು, ಪರ್ವತಶ್ರೇಣಿಯ ಮೇಲೆ ತೇಲಾಡುವ ಬೆಳ್ಳಿ ಮೋಡಗಳ ಹಿಂಡು, ಹಳ್ಳ-ಕೊಳ್ಳ-ಜಲಪಾತಗಳ ಚಿಕ್ಕಮಗಳೂರು ಜಿಲ್ಲೆ ಪ್ರಾಕೃತಿಕ ಸೊಬಗು-ಸಂಪತ್ತಿನ ರಮ್ಯತಾಣ! ಮತ್ತೊಂದೆಡೆ ಪ್ರವಾಸೋದ್ಯಮದ ಹೆಸರಲ್ಲಿ ನಡೆದಿರುವ ಹಪಾಹಪಿಯ ಲಾಭಬಡುಕ ವ್ಯಾಪಾರಿ ದಂಧೆಗಳಿಂದ ಚಿಕ್ಕಮಗಳೂರಿನ ಸುತ್ತಲಿನ ಅರಣ್ಯ ಅವ್ಯಾಹತವಾಗಿ ನಾಶವಾಗುತ್ತಿದೆ, ಪರಿಸರ ಕಲುಷಿತವಾಗುತ್ತಿದೆ ಎಂಬ ಆತಂಕವೂ ಎದುರಾಗಿದೆ.

ಪ್ರವಾಸಿಗರ ಹಾಟ್ ಫೇವರಿಟ್ ಚಿಕ್ಕಮಗಳೂರು ಜಿಲ್ಲೆ ಹಿಂದುತ್ವದ ಹಾಟೆಸ್ಟ್ ಜೋನ್! ಚಿಕ್ಕಮಗಳೂರು ಹೊರನೋಟಕ್ಕೆ ಎಷ್ಟು ಸುಂದರವಾಗಿ ಕಾಣಿಸುತ್ತಿದೆಯೋ ಒಳಗೆ ಅಷ್ಟೇ ವಿಕಾರದ ಧರ್ಮಕಾರಣ, ಜಾತಿ ಪ್ರತಿಷ್ಠೆ, ಜಮೀನ್ದಾರಿ ಗೌಡಿಕೆ, ತಳ ಸಮುದಾಯವನ್ನು ಹಿಂಡಿ ಹಿಪ್ಪೆಮಾಡುವ ಸಾಮಾಜಿಕ ವ್ಯವಸ್ಥೆ ಮತ್ತು ಆರ್ಥಿಕ ಬಿಕ್ಕಟ್ಟಿನಂಥ ಅನಿಷ್ಠಗಳನ್ನು ಅಡಗಿಸಿಕೊಂಡಿದೆ. ಈ ಎಲ್ಲಾ ವಿಕಾರಗಳ ಜೊತೆಗೆ ಒಂದು ಮಟ್ಟದ ಸಹಬಾಳ್ವೆ ಸಾಧಿಸಿಕೊಂಡಿದ್ದ ಈ ತಂಪು ಪ್ರದೇಶ 1990ರ ದಶಕದ ಅಂತ್ಯ ಮತ್ತು 2000ದ ದಶಕದಾರಂಭದ ಸಂಧಿ ಕಾಲದಲ್ಲಿ ಭುಗಿಲೆದ್ದ ಸಂಘಪರಿವಾರ ಪ್ರಣೀತ ದತ್ತಗಿರಿ-ಬಾಬಾಬುಡನ್‌ಗಿರಿ ವಿವಾದ ಬಳಿಕದ ಭಯ-ಗುಮಾನಿಯಲ್ಲಿ ದಿನ ಕಳೆಯುತ್ತಿದೆ; ಅಧಿಕಾರ ರಾಜಕಾರಣಕ್ಕೆ ಅಮಾಯಕರ ಜೀವ-ಜೀವನವನ್ನ ಆಪೋಶನ ಪಡೆಯುವ ಹಿಂದುತ್ವದ ಅಂಡರ್ ಕರೆಂಟ್ ಜಿಲ್ಲೆಯಾದ್ಯಂತ ಸದಾ ಪ್ರವಹಿಸುತ್ತಲೇ ಇರುತ್ತದೆ ಎಂದು ಪ್ರಜ್ಞಾವಂತರು ಕಳವಳಿಸುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯ ದುರಂತವೆಂದರೆ, ದತ್ತ ಪೀಠ-ಬಾಬಾಬುಡನ್ ದರ್ಗಾದ ಜ್ವಲಂತ “ಸಮಸ್ಯೆ” ಸೃಷ್ಟಿಸಿ ಎಂಪಿ-ಎಮ್ಮೆಲ್ಲೆ, ರಾಜ್ಯ-ಕೇಂದ್ರದ ಮಂತ್ರಿ-ಮಾಂಡಲೀಕರಾದವರ ಅಧಿಕಾರ-ಅಂತಸ್ತಿನ ಗ್ರಾಫು ಒಂದೇ ಸಮನೆ ಏರುಮುಖದಲ್ಲಿ ವೃದ್ಧಿಸುತ್ತಿದೆಯೆ ಹೊರತು ಧರ್ಮದ ಮಂಕುಬೂದಿಗೆ ಮರುಳಾಗಿ ಕಮಲಕ್ಕೆ ಕಣ್ಣುಮುಚ್ಚಿ ಓಟು ಹಾಕಿದವರಿಗೆ ಪೈಸೆ ಪ್ರಯೋಜನವಾಗಲಿಲ್ಲ. ಅಭಿವೃದ್ದಿ-ಪ್ರಗತಿ ಎಂಬುದು ಜಿಲ್ಲೆಗೆ ಮರೀಚಿಕೆಯಂತಾಗಿದೆ. ಧರ್ಮ ದಂಗಲ್ ಮೂಲಕ ರಾಜ್ಯ-ರಾಷ್ಟ್ರದ ಕೇಸರಿ ರಾಜಕಾರಣದಲ್ಲಿ ಮುಂಚೂಣಿ ಮುಟ್ಟಿದವರಿಂದಲೂ ಕನಿಷ್ಟ ಮೂಲಸೌಕರ್ಯವನ್ನೂ ಜನಸಾಮಾನ್ಯರಿಗೆ ಒದಗಿಸಲಾಗದಿರುವುದು ನಾಚಿಕೆಗೇಡು; ಬರಿ ಧರ್ಮಕಾರಣದಲ್ಲಿ ಕಾಲಕಳೆಯುತ್ತ ಜಿಲ್ಲೆ ಪ್ರಗತಿಯ ದಿಸೆಯಲ್ಲಿ ಎಡವಲು ಕಾರಣರಾಗಿರುವ ಪಟ್ಟಭದ್ರರನ್ನು ಈ ಚುನಾವಣೆಯಲ್ಲಿ ಮನೆಗೆಟ್ಟಬೇಕಾಗಿದೆ ಎಂಬ ಆಕ್ರೋಶದ ಮಾತುಗಳೀಗ ಜಿಲ್ಲೆಯಲ್ಲಿ ಮಾರ್ದನಿಸುತ್ತಿದೆ!

ಇತಿಹಾಸ-ಸಮಾಜ-ಸಂಸ್ಕೃತಿ

ಚಿಕ್ಕಮಗಳೂರು-ಹೆಸರಿನ ವ್ಯುತ್ಪತ್ತಿಯ ಕುರಿತು ಸ್ವಾರಸ್ಯಕರ ತರ್ಕವೊಂದಿದೆ. ಚಿಕ್ಕಮಗಳೂರು ಎಂದರೆ ಚಿಕ್ಕ-ಮಗಳ-ಊರು ಎಂದರ್ಥ. ಈ ಪಟ್ಟಣವನ್ನು ಸುಪ್ರಸಿದ್ಧ ಸಖರಾಯ ಪಟ್ಟಣದ ದೊರೆ ರುಕ್ಮಾಂಗದ ತನ್ನ ಚಿಕ್ಕ ಮಗಳ ಮದುವೆ ಸಂದರ್ಭದಲ್ಲಿ ಬಳುವಳಿಯಾಗಿ ಕೊಟ್ಟಿದ್ದರಿಂದ ಈ ಹೆಸರು ಬಂತೆನ್ನಲಾಗಿದೆ. ಕೆಲವು ಶಾಸನಗಳಲ್ಲಿ ಚಿಕ್ಕಮಗಳೂರು-ಕಿರಿಯ ಮುಗುಲಿ ಮತ್ತು ಕೇವಲ ಐದು ಕಿ.ಮೀ. ದೂರದಲ್ಲಿರುವ ಹಿರೇಮಗಳೂರು-ಪಿರಿಯ ಮುಗುಲಿ ಎಂದು ಕರೆಯಲ್ಪಡುತಿತ್ತೆಂಬ ಉಲ್ಲೇಖವಿದೆ. ಹಿರೇಮಗಳೂರಿನ ಪರಶುರಾಮ ದೇವಸ್ಥಾನದ ಮಾಳಿಗೆಯ ಕಲ್ಲಿನ ಮೇಲೆ ಕೆತ್ತಿರುವ 8-9ನೇ ಶತಮಾನದ ಶಾಸನ ಹಿರೇಮಗಳೂರು ಗಂಗರ ಆಳ್ವಿಕೆಯಲ್ಲಿ “ಹಿರೇಮುಗುಳಿಯಗ್ರಹಾರ” ಎಂದಾಗಿತ್ತೆಂದು ಸ್ಪಷ್ಟಪಡಿಸುತ್ತದೆ. ಕ್ರಿ.ಶ.1140ರ ಶಾಸನ-ಕೋಟೆಯ ಕಂದಕದ ಗೋಡೆಯ ಪಕ್ಕದ ವೀರಗಲ್ಲು-ಕಿರಿಯ ಮುಗುಳಿಯನ್ನು ಚಿಕ್ಕಮುಗುಳಿ ಎಂದು ಗುರುತಿಸಲಾಗುತಿತ್ತೆಂದು ಹೇಳುತ್ತದೆ; ಪಕ್ಕದಲ್ಲೇ ಇರುವ ಕ್ರಿ.ಶ.1205ರ ವೀರಗಲ್ಲು ಕಿರಿಯಮುಗುಳಿಯ ಕಟ್ಟಿನ ಕಾಳಗವನ್ನು ಉಲ್ಲೇಖಿಸುತ್ತ ಚಿಕ್ಕಮುಗುಳಿ ಮತ್ತು ಕಿರಿಯ ಮುಗುಳಿ ಹೆಸರುಗಳು ಪರ್ಯಾಯವಾಗಿ ಬಳಕೆಯಲ್ಲಿದ್ದದ್ದನ್ನು ವಿವರಿಸುತ್ತದೆ.

ಹೊಯ್ಸಳ ಸಾಮ್ರಾಜ್ಯ ತನ್ನ ಆರಂಭದ ದಿನಗಳನ್ನು ಕಳೆದ “ಸೊಸೆಯೂರು” ಈಗಿನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ “ಅಂಗಡಿ” ಗ್ರಾಮವೆಂಬುದಕ್ಕೆ ಇತಿಹಾಸದ ಆಧಾರವಿದೆ. ಸೊಸೆಯೂರು ಕಾಲಕ್ರಮೇಣ ಹೊಯ್ಸಳರ ರಾಜಧಾನಿ “ಶಶಕಪುರ”ವಾಗಿ ಬದಲಾಗಿತ್ತು. ಹೊಯ್ಸಳ ಶಬ್ದದ ಮೂಲದ ಬಗ್ಗೆ ದಂತಕತೆಯೊಂದಿದೆ. ಶಶಕಪುರ ಅಥವಾ ಅಂಗಡಿ ಗ್ರಾಮದ ವಾಸಂತಿದೇವಿ ಗುಡಿಯಲ್ಲಿ ಸದಾತ್ತಾಚಾರ್ಯರು ಶಿಷ್ಯರಿಗೆ ಪಾಠ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಹುಲಿಯೊಂದು ಪ್ರತ್ಯಕ್ಷವಾಗುತ್ತದೆ; ಶಿಷ್ಯರ ಮೇಲೆರಗಲು ಹುಲಿ ಹವಣಿಸುತ್ತಿದ್ದಂತೆಯೆ ಸದಾತ್ತಾಚಾರ್ಯರು ಧೀರ ಶಿಷ್ಯ ಸಳನಿಗೆ “ಹೊಯ್ಸಳ” ಎಂದು ಆಜ್ಞಾಪಿಸಿದರಂತೆ! ಹೊಯ್ಸಳ ಎಂದರೆ “ಹೊಡೆಯೋ ಸಳ” ಎಂದರ್ಥ ಎನ್ನಲಾಗಿದೆ. ಸಳ ವೀರಾವೇಷದಿಂದ ಹುಲಿಯೊಂದಿಗೆ ಸೆಣಸಾಡಿ ಅದನ್ನು ಕೊಂದುಹಾಕಿದನಂತೆ. ಇದು ಹೊಯ್ಸಳ ಶಬ್ದದ ಹಿನ್ನೆಲೆ ಎನ್ನಲಾಗುತ್ತಿದ್ದು, 1117ರ ವಿಷ್ಣುವರ್ಧನನ ಶಾಸನದಲ್ಲಿ ಈ ಕತೆ ಮೊದಲು ಕಂಡುಬಂತು. ಈಗ ಚಿಕ್ಕಮಗಳೂರಿನ ಅವಿಭಾಜ್ಯ ಅಂಗವಾಗಿರುವ ಹಿರೇಮಗಳೂರಿನ ಕ್ರಿ.ಶ.2-3ನೇ ಶತಮಾನದ ಯೂಪ ಸ್ತಂಭ ಶಾಸನ ಈ ಪ್ರದೇಶ ಶಾತವಾಹನರ ಪಾರುಪತ್ಯದಲ್ಲಿತ್ತು ಎಂಬುದನ್ನು ಖಾತ್ರಿಪಡಿಸುತ್ತದೆ.

ಆನಂತರ ಗಂಗ, ನೊಳಂಬ, ಆಳುಪ, ಸಾಂತರ, ತರ್ಯಲ್ಲ, ಸೇನವಾರ, ಚೋಳ, ಚಾಲುಕ್ಯ, ಹೊಯ್ಸಳ, ಸೇವುಣ, ವಿಜಯನಗರ, ಬೇಲೂರು ನಾಯಕರು, ಮೈಸೂರು ಒಡೆಯರು ಮುಂತಾದ ರಾಜಮನೆತನದ ಸುಪರ್ದಿಯಲ್ಲಿತ್ತು ಎಂದು ಹಲವು ಶಾಸನಗಳಿಂದ ತಿಳಿದುಬರುತ್ತದೆ. ಅಂಗಡಿ ಗ್ರಾಮದ ವಾಸಂತಿ ದೇವಾಲಯ, ಹಲವು ಬಸದಿ-ಜಿನಾಲಯ, ವೈಷ್ಣವ ಮತ್ತು ಶೈವ ಪಂಥದ ದೇಗುಲಗಳು ಹೊಯ್ಸಳರ ಮೊದಲ ರಾಜಧಾನಿಯ ವೈಭವ ಸಾರುತ್ತವೆ; ತರೀಕೆರೆ ತಾಲೂಕಿನ ಅಮೃತಪುರದಲ್ಲಿ ಹೊಯ್ಸಳ ದೊರೆ ವೀರ ಬಲ್ಲಾಳ ನಿರ್ಮಿಸಿದ ಅಮೃತೇಶ್ವರ ದೇವಾಲಯವಿದೆ.

ಅಪ್ಪಟ ಮಲೆನಾಡಿನ ಮಣ್ಣಿನ ಸೊಗಡಿನ ಚಿಕ್ಕಮಗಳೂರು ಕನ್ನಡ ಸಾಂಸ್ಕೃತಿಕ ನೆಲ. ನಾಮಾಂಕಿತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಮೂಡಿಗೆರೆಯಲ್ಲಿ ಸಾಹಿತ್ಯ ಮತ್ತು ಕಾಫಿ ಕೃಷಿ ಮಾಡಿಕೊಂಡಿದ್ದರು. ಉರ್ದು, ಕೊಂಕಣಿ, ಅಸ್ಸಾಮಿ, ಮಲಯಾಳಂ, ತಮಿಳು, ಲಂಬಾಣಿ, ತುಳು ಮುಂತಾದ ಭಾಷೆಗಳು ಜಿಲ್ಲೆಯಲ್ಲಿ ಕೇಳಿಬರುತ್ತವೆಯಾದರೂ ಮುಖ್ಯವಾಗಿ ಸಂವಹನ ನಡೆಯುವದು ಕನ್ನಡದಲ್ಲಿ. ಜಿಲ್ಲೆಯ ಸಾಮಾಜಿಕ-ರಾಜಕೀಯ-ಆರ್ಥಿಕ ವಲಯದಲ್ಲಿ ದಾಸ ಒಕ್ಕಲಿಗರ ಪ್ರಭಾವ ಜಾಸ್ತಿ. ಕಡಿಮೆ ಸಂಬಳಕ್ಕೆ ಕಾಫಿ, ಅಡಿಕೆ ತೋಟಗಳಲ್ಲಿ ಕೂಲಿ ಮಾಡುವ ಆಸ್ಸಾಮಿಗಳ ವಲಸೆ ಹೆಚ್ಚಾಗುತ್ತಿದೆ. ಕಾಫಿ ಪ್ಲಾಂಟೇಷನ್ ಕೆಲಸಕ್ಕೆಂದು ಬಂದಿದ್ದ ತಮಿಳು ಕಾರ್ಮಿಕರು ಈಗಲೂ ಇದ್ದಾರೆ; ಮಲೆಯಾಳಿ ಕಾರ್ಮಿಕರು ಕಡಿಮೆಯಾಗಿದ್ದಾರೆ. ಕಾಫಿ ತೋಟದಲ್ಲಿ ದುಡಿಯುವ ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿದ್ದರಿಂದ 1990ರ ದಶಕದಲ್ಲಿ ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆ ಪ್ರಬಲವಾಗಿತ್ತು; ಜನಾನುರಾಗಿ ಕಾರ್ಮಿಕ ಹೋರಾಟಗಾರ ಬಿ.ಕೆ.ಸುಂದರೇಶ್ ಕಮ್ಯುನಿಸ್ಟ್ (ಸಿಪಿಐ) ಪಾರ್ಟಿಯನ್ನು ಬೇರುಮಟ್ಟದಿಂದ ಕಟ್ಟಿದ್ದರು. ಅವರ ಸಾವಿನ ನಂತರ ಸಿಪಿಐ-ಕಾರ್ಮಿಕ ಸಂಘಟನೆ ದುರ್ಬಲವಾದ್ದರಿಂದ ದತ್ತ-ಬಾಬಾಬುಡನ್‌ಗಿರಿಯಂಥ ಮತೀಯ ವಿವಾದದ ಹೀರೋಗಳು ವಿಜೃಂಭಣೆಗೆ ಅನುಕೂಲವಾಯಿತೆಂಬ ವಿಶ್ಲೇಷಣೆಗಳು ಜಿಲ್ಲೆಯಲ್ಲಿದೆ.

ದೀಪಾವಳಿ ಹೊತ್ತಲ್ಲಿ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಅನೇಕ ಆಚರಣೆ, ಸಂಪ್ರದಾಯ, ನಂಬಿಕೆಗಳಿವೆ. ಇದರಲ್ಲಿ ಮಲ್ಲೇನಹಳ್ಳಿ ಬಳಿಯ ದೇವೀರಮ್ಮ ಬೆಟ್ಟದಲ್ಲಿ ನಡೆಯುವ ಆಚರಣೆ ವಿಶೇಷವಾಗಿದೆ. ದೀಪಾವಳಿಯ ಮುಂಚಿನ ಮಧ್ಯರಾತ್ರಿಯಿಂದಲೇ ಸ್ಥಳೀಯರು ಮತ್ತು ರಾಜ್ಯದ ಬೇರೆಡೆಯಿಂದ ಬಂದ ಅಪಾರ ಭಕ್ತಾದಿಗಳು ಕಡಿದಾದ ಅಂಕುಡೊಂಕಿನ ದಾರಿಯಲ್ಲಿ ರಾತ್ರಿಯಿಂದ ಬೆಟ್ಟವೇರಲು ಶುರುಮಾಡುತ್ತಾರೆ. ಬೆಳಿಗ್ಗೆ ಪೂಜೆಯಾದರೆ ರಾತ್ರಿ ದೀಪ ಹಚ್ಚಲಾಗುತ್ತದೆ. ಈ ದೀಪ ಹಚ್ಚಿದ ನಂತರವೇ ಮನೆ-ಮನೆಗಳಲ್ಲಿ ದೀಪ ಬೆಳಗುವ ಪದ್ಧತಿ ಅನೂಚಾನಾಗಿ ನಡೆದುಬಂದಿದೆ. ಮೈಸೂರು ಅರಸರೂ ಈ ಸಂಪ್ರದಾಯ ಪಾಲಿಸುತ್ತಿದ್ದರೆನ್ನಲಾಗಿದೆ. ದೀಪಾವಳಿ ಹೊತ್ತಿನ ಅಂಟಿಕೆ-ಪಿಂಟಿಕೆ (ಹಬ್ಬಾಡೋದು), ಡೊಳ್ಳು ಕುಣಿತ, ಕರಡಿ ಕುಣಿತ, ಕೊರಗ ವೇಷ, ಹುಲಿ ವೇಷ, ಯಕ್ಷಗಾನ ಸಂಪ್ರದಾಯ ಜನಜೀವನದೊಂದಿಗೆ ಅವಿನಾಸಂಬಂಧ ಹೊಂದಿದೆ. ಜನಪದ ಕ್ರೀಡೆಗಳಾದ ಚಿನ್ನಿ-ದಾಂಡು, ಕಬಡ್ಡಿ, ಖೋಖೋ ಆಟಗಳನ್ನು ಕ್ರಿಕೆಟ್ ಕಬಳಿಸಿದೆ. ಹರ್ತಿಕೆರೆ ಶ್ರೀರಂಗನಾಥ ಸ್ವಾಮಿ ಮತ್ತು ದುರ್ಗಮ್ಮ ಜಾತ್ರೆ ಮತ್ತು ಬಾಬಾಬುಡನ್ ಉರೂಸ್‌ನಂಥ ಹಲವು ಭಾವೈಕ್ಯತೆಯ ಜಾತ್ರೆ, ಉರುಸ್, ಪೇಸ್ತಗಳು ಜಿಲ್ಲೆಯಲ್ಲಿ ನಡೆಯುತ್ತದೆ.

ಪಶ್ಚಿಮಘಟ್ಟದ ಪರ್ವತ ಶ್ರೇಣಿಯ ದಟ್ಟ ಶೋಲಾ ಕಾಡುಗಳ ಅತ್ಯುನ್ನತ ಬಹುಬೆಟ್ಟಗಳ ವಿಹಂಗಮ ನೋಟ, ಅನೇಕ ಜಲಪಾತ ಮತ್ತ ಹೋಮ್ ಸ್ಟೇ-ರೆಸಾರ್ಟ್‌ಗಳು ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ಸೆಳೆವ ಮನಮೋಹಕ ಪ್ರಕೃತಿ ತಾಣ! ಕರ್ನಾಟಕದ ಅತಿ ಎತ್ತರದ ಗಿರಿ (1,955 ಮೀ.) ಎನಿಸಿರುವ ಚಂದ್ರದ್ರೋಣ ಪರ್ವತ ಶ್ರೇಣಿಯ “ಮುಳ್ಳಯ್ಯನ ಗಿರಿ” ಚಿಕ್ಕಮಗಳೂರಿನಲ್ಲಿದೆ. ತರೀಕೆರೆಯ ಲಿಂಗದಹಳ್ಳಿ ಬಳಿಯ 1,424 ಮೀ. ಎತ್ತರದ ಕೆಮ್ಮಣ್ಣುಗುಂಡಿ ಚಂದ್ರದ್ರೋಣ ಪರ್ವತ ಶ್ರೇಣಿಯ ಮತ್ತೊಂದು ಸುಂದರ ಗಿರಿಧಾಮ. ಕುದುರೆಮುಖದಲ್ಲಿ ಕುದುರೆಯ ಮುಖ ಹೋಲುವ 1,864.3 ಮೀ. ಎತ್ತರದ ಗಿರಿಯಿದೆ; ಒಂದಕ್ಕೊಂದು ಹೊಂದಿಕೊಂಡಿರುವ ವಿಶಾಲವಾದ ಪರ್ವತಗಳು, ಆಳವಾದ ಪ್ರಪಾತದ ಕುದುರೆಮುಖ ಪರ್ವತ ಶ್ರೇಣಿಯಲ್ಲಿ ರಾಷ್ಟ್ರೀಯ ಉದ್ಯಾನವನವಿದೆ. ಈ ವನ್ಯಜೀವಿ ರಕ್ಷಿತ ಪ್ರದೇಶ ಜಾಗತಿಕ ಮಟ್ಟದ ಹುಲಿ ಸಂರಕ್ಷಣಾ ಆದ್ಯತಾವಲಯದಲ್ಲಿದೆ. 495 ಚದರ ವ್ಯಾಪ್ತಿಯ ಭದ್ರಾ ವನ್ಯಜೀವಿ ಅಭಯಾರಣ್ಯ ಮತ್ತು ಹುಲಿ ಯೋಜನೆ ಮೀಸಲು ಪ್ರದೇಶ ಬೆಟ್ಟದಿಂದ ತುಂಬಿದೆ; ಇಲ್ಲಿ ನಾನಾ ಪ್ರಭೇದದ ಪಕ್ಷಿಗಳು ಕಂಡುಬರುತ್ತವೆ. ಜಿಲ್ಲೆಯಲ್ಲಿ ಮಾಣಿಕ್ಯಧಾರಾ, ಹೆಬ್ಬೆ, ಸಿರಿಮನೆ, ದಬ್‌ದಬೆಯೇ ಮುಂತಾದ ಹತ್ತಾರು ಆಕರ್ಷಕ ಜಲಪಾತಗಳಿವೆ.

ಪ್ರಾಚೀನಕಾಲದಿಂದ ಪ್ರಸಿದ್ಧವಾಗಿರುವ-ಹಿಂದು-ಮುಸ್ಲಿಮರು ಸಮಾನವಾಗಿ ಆರಾಧಿಸುವ ಇನಾಮ್ ದತ್ತಾತ್ರೇಯ ಪೀಠ ಚಿಕ್ಕಮಗಳೂರಲ್ಲಿದೆ. 1,895 ಮೀ. ಎತ್ತರದ ಬಾಬಾಬುಡನ್‌ಗಿರಿ/ದತ್ತಗಿರಿಯ ಹಳದಿ-ಕೆಂಪುಮಿಶ್ರಿತ ಜೇಡಿಮಣ್ಣಿನ ಗುಹೆಯಲ್ಲಿ ಹಿಂದುಗಳ ಗುರು ದತ್ತಾತ್ರೇಯ ಮತ್ತು ಮುಸ್ಲಿಮರ ಹಜರತ್ ದಾದಾ ಹಯಾತ್ ಮೀರ್ ಖಲಂದರ್ ವಾಸವಾಗಿದ್ದರೆಂದು ನಂಬಲಾಗುತ್ತಿದೆ.

ಇಲ್ಲಿ ಜರುಗುವ ವಾರ್ಷಿಕ ಜಾತ್ರೆ-ಉರೂಸ್‌ಗೆ ಹಿಂದು-ಮುಸ್ಲಿಮರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಕ್ರಿ.ಶ.9ನೇ ಶತಮಾನದಲ್ಲಿ ಶಂಕರಾಚಾರ್ಯ ಸ್ಥಾಪಿಸಿದ ನಾಲ್ಕು ಅದ್ವೈತ ಮಠಗಳಲ್ಲಿ ಮೊದಲನೆಯದು ಶೃಂಗೇರಿ ಶಾರದಾ ಮಠವೆನ್ನಲಾಗಿದೆ. ತುಂಗಾ ನದಿ ತಟದಲ್ಲಿರುವ ಧಾರ್ಮಿಕ ಪ್ರಾಮುಖ್ಯತೆಯ ಶೃಂಗೇರಿಯ ವಿದ್ಯಾಶಂಕರ ದೇವಾಲಯವನ್ನು ಕಟ್ಟಲು ಹೊಯ್ಸಳರು ಆರಂಭಿಸಿದರೆ, ವಿಜಯನಗರ ಸಾಮ್ರಾಜ್ಯದವರು ಪೂರ್ಣಗೊಳಿಸಿದರೆಂಬ ಉಲ್ಲೇಖ ಇತಿಹಾಸದಲ್ಲಿದೆ. ಈ ದೇಗುಲದ ಸುತ್ತಲೂ ಇರುವ 12 ಕಂಬಗಳ ಮೇಲೆ ತಿಂಗಳಿಗೊಂದರಂತೆ ಸೂರ್‍ಯ ರಶ್ಮಿ ಬೀಳುವುದು ವಿಶೇಷವಾಗಿದೆ.

ಪಂಚತೀರ್ಥವೆಂದು ಕರೆಯಲ್ಪಡುವ ಐದು ಕೆರೆಗಳ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಅಪಾರ ಸಂಖ್ಯೆಯಲ್ಲಿ ಆಸ್ತಿಕರನ್ನು ಸೆಳೆವ ಧಾರ್ಮಿಕ ತಾಣವಾಗಿದೆ. ರಾಜ್ಯದ ಪ್ರಮುಖ ಜಿನಾಲಯಗಳಲ್ಲಿ ಒಂದಾಗಿರುವ ಜ್ವಾಲಾಮಾಲಿನಿ ದೇವಾಲಯ ನರಸಿಂಹರಾಜಪುರ ತಾಲೂಕಿನ ಸಿಂಹಗದ್ದಯಲ್ಲಿದೆ. ದೇಶ-ವಿದೇಶಗಳಿಂದ ದೊಡ್ಡ ಸಂಖ್ಯೆಯಲ್ಲಿ ಜೈನ ಅನುಯಾಯಿಗಳನ್ನು ಸೆಳೆಯುವ ಈ ದೇಗುಲ 15-16ನೇ ಶತಮಾನದ್ದು.

ಕಾಫಿ-ಅಡಿಕೆ ಆರ್ಥಿಕತೆ

ಚಿಕ್ಕಮಗಳೂರು ಕೃಷಿ-ತೋಟಗಾರಿಕೆ ಪ್ರಧಾನ ಜಿಲ್ಲೆ; ಕೈಗಾರಿಕೆ-ಉದ್ಯಮ ದೊಡ್ಡಮಟ್ಟದಲ್ಲಿ ಇಲ್ಲಿಲ್ಲ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನ ಮತ್ತು ವಹಿವಾಟನ್ನು ಇಡೀ ಜಿಲ್ಲೆಯ ಆರ್ಥಿಕತೆ ಅವಲಂಬಿಸಿದೆ. ಅತಿಹೆಚ್ಚು ಬೆಳೆಯುವ ಕಾಫಿ, ಅಡಿಕೆ ಮತ್ತು ಕರಿಮೆಣಸು ಜಿಲ್ಲೆಯ ಆರ್ಥಿಕ ಜೀವನಾಡಿಗಳು; ಈ ಬೆಳೆಗಳು ಕೈಕೊಟ್ಟರೆ ಜಿಲ್ಲೆಗೆ ಗರಬಡಿದಂತಾಗುತ್ತದೆ. ಮಲೆನಾಡಿನಲ್ಲಿ ಕಾಫಿ, ಚಹಾ, ಅಡಿಕೆ, ಕರಿಮೆಣಸು, ಏಲಕ್ಕಿ, ಬಾಳೆ, ಕಬ್ಬು, ತಂಬಾಕು ಬೆಳೆದರೆ, ಬಯಲು ಪ್ರದೇಶ ಮತ್ತು ಅರೆಮಲೆನಾಡಲ್ಲಿ ಭತ್ತ, ರಾಗಿ, ಜೋಳ, ಮೆಕ್ಕೆ ಜೋಳ, ಶೇಂಗಾ, ಹುರುಳಿ, ಕಡಲೆ, ಹತ್ತಿ ಮುಂತಾದವನ್ನು ಹಂಗಾಮಿಗೆ ತಕ್ಕಂತೆ ಬೆಳೆಯಲಾಗುತ್ತದೆ. ಹೂವು ಮತ್ತು ತರಕಾರಿ ಬೆಳೆದು ಒಂದಿಷ್ಟು ಕುಟುಂಬಗಳು ಬದುಕು ಕಟ್ಟಿಕೊಂಡಿವೆ; ಜಿಲ್ಲೆಯ ತರಕಾರಿ-ಹೂವು ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಗುತ್ತದೆ. ನದಿ-ಹೊಳೆ-ಝರಿ-ಜಲಪಾತಗಳ ಮಲೆನಾಡಿನಲ್ಲಿ ನೀರಿಗೆ ತೊಂದರೆಯಿಲ್ಲ;ಅರೆ ಮಲೆನಾಡು-ಬಯಲು ಭಾಗದ ರೈತರು ಮಳೆ, ಕೆರೆ, ಬೋರ್‌ವೆಲ್ ಮತ್ತು ನೀರಾವರಿ ನಂಬಿಕೊಂಡಿದ್ದಾರೆ.

ಚಿಕ್ಕಮಗಳೂರು ಕಾಫಿ ನಾಡೆಂದೇ ಚಿರಪರಿಚಿತ. ಕ್ರಿ.ಶ. 1670ರಲ್ಲಿ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಈಗ ಬಾಬಾಬುಡನ್‌ಗಿರಿ ಅಥವಾ ದತ್ತಗಿರಿ ಎನ್ನಲಾಗುವ ಚಂದ್ರದ್ರೋಣ ಪರ್ವತ ಪ್ರದೇಶದಲ್ಲಿ ಕಾಫಿ ಬೆಳೆಯಲಾಯಿತು! ಕಾಫಿ ಭಾರತದಲ್ಲಿ ಪರಿಚಯವಾದ ಕುರಿತು ಒಂದು ದಂತಕತೆಯಿದೆ. ಬಾಬಾಬುಡನ್ ಎಂಬ ಫಕೀರ ಮೆಕ್ಕಾ ತೀರ್ಥಯಾತ್ರೆಗೆ ಹೊರಟಿದ್ದಾಗ ಯೆಮೆನ್‌ನ ವೋಕಾ ಬಂದರಿನಲ್ಲಿ ಕಾಫಿಯ ಬಗ್ಗೆ ತಿಳಿಯುತ್ತದೆ. ಬಾಬಾಬುಡನ್ ಏಳು ಕಾಫಿ ಬೀಜಗಳನ್ನು ಹೊಕ್ಕಳಿನ ಸುತ್ತ ಅಡಗಿಸಿಟ್ಟುಕೊಂಡು ಅರೇಬಿಯಾದಿಂದ ಹೊರತಂದರಂತೆ. ಚಿಕ್ಕಮಗಳೂರಿಗೆ ಬಾಬಾಬುಡನ್ ಮರಳಿದಾಗ ಇಲ್ಲಿಯ ಚಂದ್ರದ್ರೋಣ ಪರ್ವತ ಪ್ರದೇಶದಲ್ಲಿ ಆ ಕಾಫಿ ಬೀಜಗಳನ್ನು ನೆಟ್ಟರಂತೆ. ಕಾಫಿ ಬೆಳೆಗೆ ಹೇಳಿಮಾಡಿಸಿದಂತ ತಂಪು ಹವಾಮಾನದ ಚಿಕ್ಕಮಗಳೂರಲ್ಲಿ ಈ ಕೃಷಿ ಹುಲುಸಾಗಿ ಹಬ್ಬಿತಂತೆ; ಆ ಬಳಿಕ ಜಿಲ್ಲೆ, ರಾಜ್ಯದ ಗಡಿ ದಾಟಿ ಕಾಫಿ ವ್ಯವಸಾಯ ಭಾರತದ ಹಲವೆಡೆ ವ್ಯಾಪಿಸಿತೆನ್ನಲಾಗುತ್ತಿದೆ.

ಜಿಲ್ಲೆಯ ಒಂದು ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಕಾಫಿ ತೋಟಗಳಿವೆ; ಕಾಫಿಯಲ್ಲಿ ಎರಡು ತಳಿಗಳಿದ್ದು, ಬೆಟ್ಟದ ಬುಡದಲ್ಲಿ ರೋಬಸ್ಟ್ ಮತ್ತು ಬೆಟ್ಟದ ಮೇಲೆ ಅರೇಬಿಕಾ ತಳಿ ಬೆಳೆಯಲಾಗುತ್ತದೆ. ಕಾಫಿ ಉತ್ಪಾದನೆ, ಗುಣಮಟ್ಟ ಸುಧಾರಣೆ, ಸಂಶೋಧನೆ, ಮಾರುಕಟ್ಟೆ ವ್ಯವಸ್ಥೆ ಮುಂತಾದ ಕಾಫಿ ಕೃಷಿಗೆ ಸಂಬಂಧಿಸಿದ ಚಟುವಟಿಕೆ ನಿಭಾಯಿಸುವ, ಮೇಲ್ವಿಚಾರಣೆ ನಡೆಸುವ ಕೇಂದ್ರ ಕಾಫಿ ಬೋರ್ಡ್ ಇಲ್ಲಿದೆ. ಸುಮಾರು 120 ಎಕರೆ ಪ್ರದೇಶದಲ್ಲಿರುವ ಕಾಫಿ ಸಂಶೋಧನಾ ಕೇಂದ್ರ- “ಕಾಫಿ ಎಕ್ಸ್‌ಪೆರಿಮೆಂಟಲ್ ಸ್ಟೇಷನ್”- 1925ರಲ್ಲೆ ಡಾ.ಲೆಸ್ಲಿ ಸಿ.ಕೋಮಲ್ ನೇತೃತ್ವದಲ್ಲಿ ಆರಂಭವಾಯಿತು. ಈಗ ಕಾಫಿಗಿಂತ ಹೆಚ್ಚು ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಾರುಕಟ್ಟೆಯಲ್ಲಿ ದುಡ್ಡು ಕಂಡಿದ್ದೇ ಅಡಿಕೆ ತೋಟಗಾರಿಕೆಯಿಂದ ಎಂದು ಅನುಭವಿ ಕೃಷಿಕರು ಹೇಳುತ್ತಾರೆ. ಆದರೆ ಕಾಫಿ ಹಾಗು ಅಡಿಕೆ ವ್ಯವಸಾಯ ಮತ್ತು ಮಾರುಕಟ್ಟೆ 25-100 ಎಕರೆ ತೋಟವಿರುವ ಬಲಾಢ್ಯರ ಹಿಡಿತಕ್ಕೆ ಒಳಗಾಗುತ್ತಿದೆ ಎಂಬ ಆತಂಕದಲ್ಲಿ ಅಸಹಾಯಕ-ಬಡ ರೈತರಿದ್ದಾರೆ.

ನೂರಾರು ಎಕರೆ ಕಾಫಿ-ಅಡಿಕೆ ತೋಟವಿದ್ದವರೂ ನಿರ್ವಹಣೆ ಸಾಧ್ಯವಾಗದೆ ಕಾಫಿ-ಅಡಿಕೆ ಉದುರುತ್ತಿದ್ದರೂ ಹಲವರು ಸರಕಾರಿ ಭೂಮಿ ಒತ್ತುವರಿ ಮಾಡುತ್ತಿದ್ದಾರೆ; ಇತ್ತ ವಸತಿ-ಜೀವನ ನಿರ್ವಹಣೆಗಾಗಿ ತೋಟಗಾರಿಕೆಗಾಗಿ ಅರಣ್ಯ ಭೂಮಿಯಲ್ಲಿ ಕೃಷಿ ಮಾಡುವ ಬಡವರನ್ನು ಅರಣ್ಯಾಧಿಕಾರಿಗಳು ನಿರ್ದಯವಾಗಿ ಹಿಂಸಾತ್ಮಕ ಕಾರ್ಯಾಚರಣೆಯಿಂದ ಒಕ್ಕಲೆಬ್ಬಿಸಿ ಬೀದಿಪಾಲು ಮಾಡುತ್ತಿದ್ದಾರೆ. ಬಲಾಢ್ಯರ ಅಕ್ರಮ ಒತ್ತುವರಿ ಖುಲ್ಲಾಪಡಿಸಿ ಬಡವರಿಗೆ ಹಂಚುವಂತೆ ಜಿಲ್ಲೆಯಲ್ಲಿ ಕೂಗೆದ್ದರೂ ಆಳುವ ಮಂದಿ ಜಾಣ ಕಿವುಡು ಪ್ರದರ್ಶಿಸುತ್ತಿದ್ದಾರೆಂಬ ಮಾತು ಕೇಳಿಬರುತ್ತಿದೆ. ಜಿಲ್ಲೆಯ ರೈತರ ಸಮಸ್ಯೆ-ಸಂಕಷ್ಟ ಹೇಳತೀರದು; ಮಲೆನಾಡಿನ ತೋಟಗಾರಿಕೆಗೆ ನಿರಂತರವಾಗಿ ಅಂಟುತ್ತಿರುವ ಕೊಳೆ ರೋಗ, ಎಲೆ ಚುಕ್ಕಿ ರೋಗ ಕಾಫಿ ಗಿಡ, ಅಡಿಕೆ ಮರ, ಕರಿಮೆಣಸಿನ ಬಳ್ಳಿಗಳನ್ನು ಕೊಂದು ತೋಟಗಳನ್ನು ಬರಡುಮಾಡುತ್ತಿದ್ದರೆ, ಬಯಲು-ಅರೆ ಬಯಲು ಸೀಮೆಯಲ್ಲಿ ನೀರಾವರಿ ಮತ್ತು ಕೃಷಿ ಉತ್ಪನ್ನಕ್ಕೆ ಯೋಗ್ಯ ಬೆಲೆ ಸಿಗದಾಗಿದೆ. ಮಧ್ಯವರ್ತಿಗಳು ರೈತರ ಅಸಹಾಯಕತೆ ಬಳಸಿಕೊಂಡು ಶೋಷಿಸುತ್ತಿದ್ದಾರೆ. ಇದ್ಯಾವುದೂ ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಶಾಸಕ-ಸಂಸದರು ಆರಾಮವಾಗಿದ್ದಾರೆ; ರೈತರಿಗೆ ನೆರವಾಗುವ ನೆಪದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ನಡೆಸಿ ಅಧಿಕಾರಸ್ಥರು ಸ್ವಾಹಾ ಮಾಡುತ್ತಿದ್ದಾರೆ ಎಂದು ರೈತರು ಅಲವತ್ತುಕೊಳ್ಳುತ್ತಾರೆ.

ರೈತರಲ್ಲಿ ಧೈರ್ಯ ತುಂಬುವ ಅಥವಾ ಕೃಷಿ ಉನ್ನತೀಕರಣದ ಯಾವ ಪ್ರಯತ್ನವೂ ಆಳುವವರಿಂದ ಆಗುತ್ತಿಲ್ಲ. ಅಡಿಕೆ ಕ್ಯಾನ್ಸರ್‌ಕಾರಕ ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ; ಅಡಿಕೆ ಬ್ಯಾನ್ ಮಾಡುವ ಹವಣಿಕೆಯಲ್ಲಿ ಕಾಂಗ್ರೆಸ್ ಇದೆ ಎಂದು ಹುಯಿಲೆಬ್ಬಿಸಿ 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಅಡಿಕೆ ತೋಟಗಾರಿಕೆಯ ಚಿಕ್ಕಮಗಳೂರಲ್ಲಿ ದಂಡಿಯಾಗಿ ಓಟು ಎತ್ತಿದ್ದ ಸ್ಥಳೀಯ ಸಂಸದೆ-ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಮತ್ತು ಶಾಸಕ-ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯಿಂದ ಅಡಿಕೆಯನ್ನು “ಡೇಂಜರ್ ಝೋನ್”ನಿಂದ ಹೊರತರಲಾಗಿಲ್ಲ; ಬಿಜೆಪಿ ಸರಕಾರದ ಆರೋಗ್ಯ ಇಲಾಖೆಯ ಎರಡು ಮಂತ್ರಿಗಳು ಎರಡೆರಡು ಬಾರಿ ಪಾರ್ಲಿಮೆಂಟಿನಲ್ಲೇ ಅಡಿಕೆ ಆರೋಗ್ಯಕ್ಕೆ ಹಾನಿಕಾರಿ ಎಂದು ಹೇಳಿಕೆ ಕೊಟ್ಟರೂ ಸುಮ್ಮನಿದ್ದಾರೆ ಎಂದು ಕೃಷಿಕರು ಆಕ್ರೋಶದಿಂದ ಹೇಳುತ್ತಾರೆ!

ಇದನ್ನೂ ಓದಿ: ಉತ್ತರ ಕನ್ನಡ: ಬಿಜೆಪಿಯಲ್ಲಿ ’ಸಂಘಿ’ ಆಪರೇಷನ್; ರಣತಂತ್ರವಿಲ್ಲದ ಕಾಂಗ್ರೆಸ್!

ರಾಜಕೀಯ ಇಚ್ಛಾಶಕ್ತಿಯಿಲ್ಲದ ಶಾಸಕ, ಸಂಸದ, ಮಂತ್ರಿಗಳಿಂದಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೈಗಾರಿಕರಣ, ಔದ್ಯೋಗೀಕರಣ ಸಾಧ್ಯವಾಗುತ್ತಿಲ್ಲ; ಕಲಿತ ಯುವಕ-ಯುವತಿಯರು ಅನ್ನ ಅರಸುತ್ತ ದೊಡ್ಡ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದರೆ, ಅಸಹಾಯಕ ಮಂದಿ ಉಳ್ಳವರ ತೋಟ-ಹೊಲಗಳಲ್ಲಿ ಜೀತವಲ್ಲದ ಜೀತ ಮಾಡಬೇಕಾಗಿದೆ. ಕಮ್ಮಿ ಕೂಲಿಗೆ ಆಸ್ಸಾಂ ಕಡೆಯಿಂದ ಕಾರ್ಮಿಕರು ಬರುತ್ತಿರುವುದರಿಂದ ಸ್ಥಳೀಯರಿಗೆ ಕೆಲಸ ಸಿಗದಾಗಿದೆ. ಹಣವಂತ ಕಾಫಿ ಪ್ಲಾಂಟ್‌ಗಳ “ಬಡ್ಡಿ ಮಾಫಿಯಾ”ಕ್ಕೆ ಕಾರ್ಮಿಕರು ಹೈರಾಣಾಗಿ ಹೋಗಿದ್ದಾರೆ. ಬಹು ಹೆಕ್ಟೇರ್ ಕಾಫಿ-ಅಡಿಕೆ ದೊರೆಗಳು ನಿರ್ಗತಿಕ ಕೂಲಿಗಳಿಗೆ ಬಡ್ಡಿಗೆ ಸಾಲ ಕೊಡುತ್ತಾರೆ; ಅದನ್ನು ತೀರಿಸಲು ಅರ್ಧ ಕೂಲಿ ಸಂಬಳಕ್ಕೆ ದುಡಿಯಬೇಕು. ಬಡ್ಡಿ ಬೆಳೆಯುತ್ತಿರುವುದರಿಂದ ಈ ಸಾಲ ತೀರುವುದೇ ಇಲ್ಲ! “ಜೀತ” ಮಗಿಯುವುದಿಲ್ಲ! ಮತ್ತೊಂದೆಡೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಂಥ ಮೈಕ್ರೋ ಫೈನಾನ್ಸ್‌ಗಳ ಹಾವಳಿ; ಹೀಗೆ ಕಾರ್ಮಿಕರು, ಕೂಲಿಗಳು ಹಗಲಿರುಳು ಗೇಯ್ದರೂ ಸಾಲ ಚುಕ್ತಾ ಆಗುತ್ತಿಲ್ಲ; ಹೊಟ್ಟೆ ತುಂಬ ಗಂಜಿ ಸಿಗುತ್ತಿಲ್ಲ. ದೈಹಿಕ ಶ್ರಮದಿಂದ ಕಾರ್ಮಿಕರು ನಿತ್ರಾಣರಾಗುತ್ತಿದ್ದಾರೆಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳುತ್ತಾರೆ.

ಉಳ್ಳವರು ಸೃಷ್ಟಿಸಿರುವ ಕೃತಕ ಆರ್ಥಿಕ ಬಿಕ್ಕಟ್ಟು ಮಲೆನಾಡಲ್ಲಿ ಉಲ್ಬಣಗೊಳ್ಳುತ್ತಿದೆ ಎಂಬ ಆತಂಕದ ಮಾತು ಕೇಳಿಬರುತ್ತಿದೆ. ಕುದುರೆಮುಖ ಕಬ್ಬಿಣ ಅದಿರು ಕಂಪನಿಯೂ ಮುಚ್ಚಿದೆ. ತರೀಕೆರೆಯಲ್ಲಿರುವ ಬಿಇಎಂಎಲ್‌ನ ಉಕ್ಕಿನ ಅಚ್ಚು ತಯಾರಿಸುವ ಕಾರ್ಖಾನೆಯಲ್ಲಿರುವುದು ಸೀಮಿತ ಉದ್ಯೋಗಾವಕಾಶ. ಜಿಲ್ಲೆಯಲ್ಲಿರುವ “ದೊಡ್ಡ” ಕೈಗಾರಿಕೆಗಳೆಂದರೆ ಅಡಿಕೆ ಹಾಳೆಯ ಲೋಟ-ಪ್ಲೇಟು, ಮೇಣದ ಬತ್ತಿ ತಯಾರಿಕೆ! ಕಾಡಿನಂಚಿನ ಆದಿವಾಸಿಗಳು ಬಿಳಲು ಚಾಪೆ, ಮುಂಡಗರ ಚಾಪೆ, ವಾಟೆ ತಟ್ಟಿ, ಬೆತ್ತದ ಬುಟ್ಟಿ-ಮೊರ ಮುಂತಾದ ಹೆಣಿಗೆ ಕಸುಬು ಮಾಡುತ್ತಿದ್ದರು. ಈಗ ಅತಿರೇಕದ ಅರಣ್ಯ ಕಾಯ್ದೆಗಳು ಅರಣ್ಯವಾಸಿಗಳ ಕೈಗಳನ್ನು ಕಟ್ಟಿಹಾಕಿವೆ ಎಂದು ಜನಪೀಡಕ ಅರಣ್ಯ ಕಾನೂನುಗಳ ವಿರುದ್ಧದ ಹೋರಾಟಗಾರರೊಬ್ಬರು ’ನ್ಯಾಯಪಥ’ಕ್ಕೆ ತಿಳಿಸಿದರು.

ಕ್ಷೇತ್ರ ಸೂತ್ರ

’ಸರ್ವರಿಗೂ ಸಮ ಪಾಲು; ಸರ್ವರಿಗೂ ಸಮ ಬಾಳು’ ಸಿದ್ಧಾಂತದ ಸಮಾಜವಾದಿ ಪಕ್ಷ, ಶ್ರಮಿಕ ವರ್ಗದ ಪಕ್ಷಪಾತಿ ಕಮ್ಯುನಿಸ್ಟ್ (ಸಿಪಿಐ) ಪಾರ್ಟಿಯ ಭದ್ರ ಬೇರುಗಳು ಇಳಿದಿದ್ದ ಚಿಕ್ಕಮಗಳೂರು ಯಾವುದೇ ತಕರಾರಿಲ್ಲದೆ ಸತತ ಮೂರು ಬಾರಿ ಅಲ್ಪಸಂಖ್ಯಾತ ಮುಸ್ಲಿಮ್ ಎಮ್ಮೆಲ್ಲೆಯನ್ನು ಆಯ್ಕೆ ಮಾಡಿಕೊಂಡುಬಂದಿದ್ದ ವಿಧಾನಸಭಾ ಕ್ಷೇತ್ರ. 1978ರಿಂದ 1999ರ ತನಕ ಕಾಂಗ್ರೆಸ್ ಹಾಗೂ ಜನತಾ ಪರಿವಾರದ ಜಿದ್ದಾಜಿದ್ದಿಯ ಆಖಾಡವಾಗಿತ್ತು. ಯಾವಾಗ ವಿಭಜಕ ರಾಜಕಾರಣಕ್ಕಾಗಿ ದತ್ತಗಿರಿ-ಬಾಬಾಬುಡನ್‌ಗಿರಿ ಧರ್ಮಯುದ್ಧವನ್ನು ಹುಟ್ಟುಹಾಕಲಾಯಿತೋ ಆಗಿನಿಂದ ಚಿಕ್ಕಮಗಳೂರು ಹಿಂದುತ್ವದ ರಣರಂಗವಾಗಿ ಮಾರ್ಪಾಡಾಯಿತು. ಬಿಜೆಪಿಯ ಹಿಂದುತ್ವದ ಪ್ರಖರ ಮುಖವಾಣಿಯಂತಿರುವ ಸಿ.ಟಿ.ರವಿ ನಿರಂತರ ನಾಲ್ಕು ಸಲ ಶಾಸಕನಾದರು. ಹೊರಜಗತ್ತಿಗೆ ಚಿಕ್ಕಮಗಳೂರು ಕೇಸರಿ ಭದ್ರಕೋಟೆ ಎಂಬಂತೆ ಭ್ರಮೆ ಮೂಡಿಸಲಾಯಿತು. ಆದರೆ ಕಳೆದ ಮೂರು ಚುನಾವಣೆಯ ಅಂಕಿ-ಅಂಶಗಳು ಚಿಕ್ಕಮಗಳೂರಿನ ಶೇಕಡಾ 60ಕ್ಕಿಂತ ಹೆಚ್ಚು ಮಂದಿಗೆ ಹಿಂದುತ್ವ ರಾಜಕಾರಣ ಬೇಡವಾಗಿದೆ ಎಂಬುದನ್ನು ಬಿಂಬಿಸುತ್ತದೆ; ಹಿಂದಿನ ಮೂರು ಚುನಾವಣೆಯಲ್ಲಿ ಬಿಜೆಪಿಯ ಸಿ.ಟಿ.ರವಿ ಪಡೆದ ಮತಗಳಿಗಿಂತ ಎದುರಾಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಡೆದ ಒಟ್ಟೂ ಮತಗಳು ಹೆಚ್ಚಿರುವುದು ಈ ತರ್ಕವನ್ನು ಸಮರ್ಥಿಸುವಂತಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಗಾಯತ್ರಿ ಶಾಂತೇಗೌಡ

ಚಿಕ್ಕಮಗಳೂರಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ಪರಿಸರ ನಿಂತನೀರಿನ ಬಗ್ಗಡದಂತಾಗಿದೆ. ಪ್ರಗತಿಗೆ ಅಡ್ಡಿಯಾಗಿರುವ ಧರ್ಮೋನ್ಮಾದ ಸಾಕಾಗಿದೆ; ಬದಲಾವಣೆಯ ತುಡಿತ ಮತದಾರರಲ್ಲಿ ಮೂಡಿದೆ; ಹಿಂದುಳಿದಿರುವಿಕೆ ಮತ್ತು ಕೋಮು ದಂಗೆಯ ಭಯದ ಬದುಕು ಮತದಾರರ ಕಣ್ಣು ತೆರೆಸಿದೆ ಎಂದು ಹಿರಿಯ ಪತ್ರಕರ್ತರೊಬ್ಬರು ’ನ್ಯಾಯಪಥ’ದೊಂದಿಗೆ ಮಾತಾಡುತ್ತ ತಿಳಿಸಿದರು. ಅಭಿವೃದ್ಧಿ ಕಡೆಗಣಿಸಿ ಸ್ವಜೀರ್ಣೋದ್ಧಾರ ಮಾಡಿಕೊಳ್ಳುತ್ತ ಧರ್ಮಕಾರಣದ ಮೂಲಕ ಮತದಾರರನ್ನು ಯಾಮಾರಿಸಿ ಗೆಲ್ಲುತ್ತಿದ್ದವರ ಅಸಲಿಯತ್ತು ಚಿಕ್ಕಮಗಳೂರಿನ ಮಂದಿಗೆ ಈಗ ಅರ್ಥವಾಗಿದೆ ಎಂಬುದನ್ನು ಕ್ಷೇತ್ರದ ಮೂಲೆಮೂಲೆಯಲ್ಲಿ ನಡೆದಿರುವ ಚರ್ಚೆಗಳು ಮನದಟ್ಟು ಮಾಡುತ್ತವೆ.

ಚಿಕ್ಕಮಗಳೂರು ಅಸೆಂಬ್ಲಿ ಕ್ಷೇತ್ರದ ಭೌಗೋಳಿಕ ಪರಿಧಿ 2007ರ ಡಿಲಿಮಿಟೇಷನ್‌ನಲ್ಲಿ ಬದಲಾಗಿದೆ. ಜಿಲ್ಲೆಯ ಬೀರೂರು ಕ್ಷೇತ್ರ ರದ್ದುಮಾಡಿ ಆ ವ್ಯಾಪ್ತಿಯಲ್ಲಿದ್ದ ಎರಡು ಹೋಬಳಿಗಳನ್ನು ಚಿಕ್ಕಮಗಳೂರು ಕ್ಷೇತ್ರಕ್ಕೆ ಸೇರಿಸಲಾಗಿದೆ. ಒಟ್ಟು 2,16,389 ಮತದಾರರಿರುವ ಕ್ಷೇತ್ರದಲ್ಲಿ ಎಸ್‌ಸಿ,ಎಸ್ಟಿ-45,000, ಲಿಂಗಾಯತರು-38,000, ಮುಸ್ಲಿಮರು-35,000, ಕುರುಬರು-30,000, ಒಕ್ಕಲಿಗರು-24,000, ಇತರೆ-40,000 ಮತದಾರರು ಇರಬಹುದೆಂದು ಅಂದಾಜಿಸಲಾಗಿದೆ. ಕಳೆದ ನಾಲ್ಕು ಚುನಾಚಣೆಯಲ್ಲಿ ಧರ್ಮಸೂತ್ರದ ಸಮರ ನಡೆದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಸಲ ಕ್ಯಾಸ್ಟ್ ಕೆಮಿಸ್ಟ್ರಿ ವರ್ಕ್‌ಔಟ್ ಆಗಲಿದೆ ಎನ್ನಲಾಗುತ್ತಿದೆ.

ಚುನಾವಣೆ ಚಿತ್ರಗಳು

ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್.ಎಚ್.ತಿಮ್ಮ ಬೋವಿ ಪಕ್ಷೇತರ ಅಭ್ಯರ್ಥಿ ಜಿ.ಪುಟ್ಟಸ್ವಾಮಿಯವರನ್ನು 10,259 ಮತಗಳಿಂದ ಸೋಲಿಸಿ ಶಾಸನಸಭೆಗೆ ಪ್ರವೇಶ ಪಡೆದರು. 1962ರಲ್ಲಿ ಕಾಂಗ್ರೆಸ್‌ನ ಬಿ.ಎಲ್.ಸುಬ್ಬಮ್ಮ ಪ್ರಜಾ ಸೋಷಲಿಸ್ಟ್ ಪಕ್ಷದ ಸಿ.ಎಂ.ಎಸ್.ಶಾಸ್ತ್ರಿಯವರನ್ನು 3,339 ಮತಗಳಿಂದ ಮಣಿಸಿದರು. ಆದರೆ 1969 ಚುನಾವಣಾ ಆಖಾಡದಲ್ಲಿ ಪಿಎಸ್‌ಪಿಯ ಶಾಸ್ತ್ರಿ 2,389 ಮತಗಳಿಂದ ಶಾಸಕಿ ಸುಬ್ಬಮ್ಮರನ್ನು ಹಿಮ್ಮೆಟ್ಟಿಸಿದರು. 1972ರಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದ ಕ್ರಿಶ್ಚಿಯನ್ ಸಮುದಾಯದ ಇವಾ ಇ.ವಾಜ್ ಸಂಸ್ಥಾ ಕಾಂಗ್ರೆಸ್ ಎದುರಾಳಿ ಸಿ.ಆರ್.ಶಿವಾನಂದ್‌ರನ್ನು 13,760 ಮತಗಳಿಂದ ಸೋಲಿಸಿದರು. ಕೇಂದ್ರ ಸರಕಾರದ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟುಬಂದಿದ್ದ ವಾಜ್ ಅರಸು ಸಂಪುಟದಲ್ಲಿ ಆಹಾರ ಸಚಿವರೂ ಆಗಿದ್ದರು.

1978ರ ಚುನಾವಣಾ ಕಣದಲ್ಲಿ ಜನತಾ ಪಕ್ಷ ಕಾಂಗ್ರೆಸ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಬೆಳೆದಿತ್ತಾದರೂ ಆ ಪಕ್ಷದ ಹುರಿಯಾಳು ಮಾಜಿ ಶಾಸಕಿ ಸುಬ್ಬಮ್ಮರಿಗೆ 18,102 ಮತವಷ್ಟೇ ಪಡೆಯಲು ಸಾಧ್ಯವಾಯಿತು. 26,113 ಮತ ಗಳಿಸಿದ ಕಾಂಗ್ರೆಸ್(ಐ)ನ ಸಿ.ಎ.ಚಂದ್ರೇಗೌಡ ಗೆಲುವು ಕಂಡರು. 1983ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ರಾಜ್ಯಾದ್ಯಂತ ಜೋರಾಗಿ ಬೀಸಿದ ಕಾಂಗ್ರೆಸ್ ವಿರೋಧಿ ಗಾಳಿಯಲ್ಲಿ ಜನತಾ ಪಕ್ಷದ ಎಚ್.ಎ. ನಾರಾಯಣಗೌಡ ಶಾಸಕರಾಗಿ ಆಯ್ಕೆಯಾದರು. ಕಾಂಗ್ರೆಸ್ ಎದುರಾಳಿ ಹಿರಿಯಣ್ಣ ಗೌಡ 9,032 ಮತದಿಂದ ಸೋಲು ಅಭವಿಸಬೇಕಾಯಿತು. ರಾಮೃಷ್ಣ ಹೆಗಡೆ ಸರಕಾರದಲ್ಲಿ ನಾರಾಯಣ ಗೌಡರು ಕೆಲಕಾಲ ಮಂತ್ರಿಯೂ ಆಗಿದ್ದರು.

1985ರ ಇಲೆಕ್ಷನ್ ಬರುವಾಗ ಮಂತ್ರಿ ನಾರಾಯಣ ಗೌಡರ ನಿಷ್ಠುರ ಸ್ವಭಾವದಿಂದಾಗಿ ಜನತಾ ಪಾರ್ಟಿಯಲ್ಲಿ ವಿರೋಧ ಶುರುವಾಗಿತ್ತು. ಕಾಂಗ್ರೆಸ್ ಟಿಕೆಟ್‌ಗೆ ವಿಫಲ ಪ್ರಯತ್ನ ನಡೆಸಿದ್ದ ಐ.ಬಿ.ಶಂಕರ್ ಬಂಡೆದ್ದು ಆಖಾಡಕ್ಕೆ ಧುಮುಕಿದ್ದರು. ನಗರ ಸಭೆಯ ಮಾಜಿ ಅಧ್ಯಕ್ಷ ಸಿ.ಆರ್.ಸಗೀರ್ ಅಹಮ್ಮದ್‌ರನ್ನು ಕಾಂಗ್ರೆಸ್ ಹುರಿಯಾಳಾಗಿಸಿತು. ತ್ರಿಕೋನ ಕಾಳಗದಲ್ಲಿ ಪಕ್ಷೇತರ ಶಂಕರ್ ಸಮೀಪದ ಪ್ರತಿಸ್ಫರ್ಧಿ ಸಗೀರ್ ಅಹಮ್ಮದ್‌ರನ್ನು 3,350 ಮತದಿಂದ ಸೋಲಿಸಿದರು. 1989ರಲ್ಲಿ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಎಸ್.ವಿ.ಮಂಜುನಾಥ್ ಜನತಾ ಪಕ್ಷದ ಟಿಕೆಟ್ ಸಿಗದ ಸಿಟ್ಟಿನಲ್ಲಿ ಜನತಾ ಪಕ್ಷ(ಜೆಪಿ) ಅಭ್ಯರ್ಥಿಯಾದರು; ಮಾಜಿ ಮಂತ್ರಿ ನಾರಾಯಣ ಗೌಡ ಜನತಾ ದಳದಿಂದ ಕಣಕ್ಕಿಳಿದಿದ್ದರು. ಈ ಬಾರಿಯೂ ತ್ರಿಕೋನ ಕದನ ಕುತೂಹಲ ಏರ್‍ಪಟ್ಟಿತ್ತು. ಅಂತಿಮವಾಗಿ ಕಾಂಗ್ರೆಸ್‌ನ ಸಗೀರ್ ಅಹಮ್ಮದ್ ಸಮೀಪದ ಪ್ರತಿಸ್ಫರ್ಧಿ ಮಂಜುನಾಥ್‌ರನ್ನು 11,202 ಮತದಿಂದ ಮಣಿಸಿ ಅಸೆಂಬ್ಲಿ ಪ್ರವೇಶಿಸಿದರು. ವೀರಪ್ಪ ಮೊಯ್ಲಿ ಸರಕಾರದಲ್ಲಿ ಸಗೀರ್ ಸಣ್ಣ ಕೈಗಾರಿಕಾ ಸಚಿವರಾಗಿದ್ದರು.

ಬಿ.ಎಲ್ ಶಂಕರ್

1994ರಲ್ಲಿ ಕಾಂಗ್ರೆಸ್‌ನ ಸಗೀರ್ ಅಹಮ್ಮದ್, ಸಿಪಿಐ ಹುರಿಯಾಳಾಗಿದ್ದ ಪ್ರಭಾವಿ ಕಾರ್ಮಿಕ ಮುಂದಾಳು ಬಿ.ಕೆ.ಸುಂದರೇಶ್ ಮತ್ತು ಜನತಾದಳದಿಂದ ಸ್ಪರ್ಧೆಗಿಳಿದಿದ್ದ ಮಾಜಿ ಎಮ್ಮೆಲ್ಲೆ ಐ.ಬಿ.ಶಂಕರ್ ಮಧ್ಯೆ ಕತ್ತುಕತ್ತಿನ ಹೋರಾಟ ಏರ್‍ಪಟ್ಟಿತ್ತು. ಸಗೀರ್ ಅಹಮ್ಮದ್ ಸಣ್ಣ ಅಂತರದಿಂದ (982) ಸುಂದರೇಶ್‌ರನ್ನು ಸೋಲಿಸಿ ಎರಡನೆ ಬಾರಿಗೆ ಶಾಸಕರಾದರು. ಆ ಚುನಾವಣೆಯಲ್ಲಿ 15,098 ಓಟು ಗಿಟ್ಟಿಸಿದ್ದ ಬಿಜೆಪಿ ಚಿಗುರುತ್ತಿರುವ ಮುನ್ಸೂಚನೆ ಕೊಟ್ಟಿತ್ತು. 1999ರ ಚುನಾವಣೆಯಲ್ಲಿ ಇಂದಿನ ಬಿಜೆಪಿಯ “ಪ್ರತಿಷಿತ್ಠ” ಧರ್ಮಕಾರಣಿ ಸಿ.ಟಿ.ರವಿ ಕೇಸರಿ ಪಕ್ಷದ ಕ್ಯಾಂಡಿಡೇಟಾಗಿದ್ದರು. ಕಾಂಗ್ರೆಸ್‌ನ ಸಗೀರ್ ಅಹಮ್ಮದ್ ಮತ್ತು ರವಿ ನಡುನೆ ನೇರ-ನಿಕಟ ಜಿದ್ದಾಜಿದ್ದಿಯಾಯಿತು! ಗೆಲುವಿನ ಹತ್ತಿರಕ್ಕೆ ಬಂದಿದ್ದ ರವಿ 982 ಮತದಿಂದ ಮುಗ್ಗರಿಸಿದರು. ಗೆದ್ದ ಸಗೀರ್ ಎಸ್.ಎಂ.ಕೃಷ್ಣ ಸರಕಾರದಲ್ಲಿ ಆಯಕಟ್ಟಿನ ಸಾರಿಗೆ ಮತ್ತು ವಸತಿ ಮಂತ್ರಿಗಿರಿ ನಿಭಾಯಿಸಿದರು.

ಕೇಸರಿ ರವಿ ಉದಯ

1999ರಲ್ಲಿ ತೀರಾ ಸಣ್ಣ ಅಂತರದಲ್ಲಿ ಸೋತಿದ್ದ ರವಿಯ ಕೇಸರಿ “ವರ್ಚಸ್ಸು” ಆ ನಂತರ ಚಿಕ್ಕಮಗಳೂರಲ್ಲಿ ಬಿರುಸುಗೊಂಡ ಬಾಬಾಬುಡನ್-ದತ್ತ ಗಿರಿ ಕೋಮು ತಕರಾರು-ತಂಟೆಯಲ್ಲಿ ಒಂದೇ ಸಮನೆ ಜೋರಾಯಿತು! ಸೋತ ಕ್ಷಣದಿಂದಲೆ ರವಿ ಕಾಷಾಯ ತೊಟ್ಟು ಹಿಂದುತ್ವದ ತಂಡದೊಂದಿಗೆ ಆಗಾಗ ಬಾಬಾಬುಡನ್‌ಗಿರಿ ಬೆಟ್ಟ ಹತ್ತಿ-ಇಳಿದು ಮುಂದಿನ ಚುನಾವಣೆಗೆ “ತಯಾರಿ” ನಡೆಸಿದ್ದರು. ಶುದ್ಧ ಹಿಂದುತ್ವವನ್ನಷ್ಟೇ ಮುಂದಿಟ್ಟು 2004ರ ಅಸೆಂಬ್ಲಿ ಚುನಾವಣೆಯಲ್ಲಿ ಸೆಣಸಾಡಿದ ರವಿಗೆ 24,873 ಮತದಂತರದ ಗೆಲುವು ಪ್ರಾಪ್ತವಾಯಿತು. ಕಾಂಗ್ರೆಸ್ ಎದುರಾಳಿ ಮುಸ್ಲಿಂ ಸಮುದಾಯದವರಾದ್ದರಿಂದ ಧ್ರುವೀಕರಣ ಸಾಧಿಸಿಕೊಂಡಿದ್ದ ರವಿಗೆ ಧರ್ಮ ಹೋರಾಟ ಸುಲಭವಾಯಿತು; ಸತತ ಮೂರು ಬಾರಿ ಗೆದ್ದಿದ್ದ ಕಾಂಗ್ರೆಸ್‌ನ ಸಗೀರ್ ಅಹಮ್ಮದ್‌ರಿಗೆ ಆಂಟಿ ಇನ್‌ಕಂಬೆನ್ಸ್ ಬೆನ್ನುಬಿದ್ದಿತ್ತು; ಮುಸ್ಲಿಮರಲ್ಲಿನ ಬಣ ಬಡಿದಾಟವೂ ಸಗೀರ್‌ಗೆ ಮುಳುವಾಯಿತೆಂಬ ಮಾತು ಇಂದಿಗೂ ಕ್ಷೇತ್ರದಲ್ಲಿ ಪ್ರಚಲಿತದಲ್ಲಿದೆ.

ರವಿ 2008ರಲ್ಲಿ ಪುನರಾಯ್ಕೆ ಆದರಾದರೂ ಎದುರಾಳಿಗಳಾದ ಜೆಡಿಎಸ್‌ನ ಎಸ್.ಎಲ್.ಭೋಜೇಗೌಡ (33,831) ಮತ್ತು ಕಾಂಗ್ರೆಸ್‌ನ ಕೆ.ಬಿ.ಮಲ್ಲಿಕಾರ್ಜುನ(29,015) ಪಡೆದ ಒಟ್ಟು ಓಟು ರವಿ ಗಿಟ್ಟಿಸಿದ್ದಕ್ಕಿಂತ ಜಾಸ್ತಿಯಿತ್ತು. ಅಲ್ಲಿಗೆ ರವಿ ಹಿಂದುತ್ವದ ಮುಂದಾಳೆ ಹೊರತು ಚಿಕ್ಕಮಗಳೂರಿನ ಜನ ಮೆಚ್ಚಿದ ನಾಯಕನಲ್ಲ ಎಂಬುದು ಸಾಬೀತಾಯಿತು; ಈ ಲಾಜಿಕ್ ಸಂಘಿ ಪಾಳೆಯಕ್ಕೂ ಮನದಟ್ಟಾಗುವಂಥ ಫಲಿತಾಂಶ 2013 ಮತ್ತು 2018ರ ಚುನಾವಣೆಯಲ್ಲಿ ಹೊರಬಿದ್ದಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಯಡಿಯೂರಪ್ಪ ಭಿನ್ನಮತದಲ್ಲಿ ಜರ್ಜರಿತರಾಗಿದ್ದ ಸಂದರ್ಭದಲ್ಲಿ ಸಚಿವ ಸ್ಥಾನ ಪಡೆದುಕೊಂಡಿದ್ದ ರವಿ 2013ರಲ್ಲಿ 58,683 ಮತ ಪಡೆದರೆ, ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ಮತ್ತು ಜೆಡಿಎಸ್‌ನ ಎಸ್.ಎಲ್.ಧರ್ಮೇಗೌಡ ಪಡೆದ ಮತಗಳು 72,608! 2018ರಲ್ಲೂ ಇಂಥದ್ದೆ ತಿಣುಕಾಟದ “ದಿಗ್ವಿಜಯ” ಕೇಸರಿ ರವಿಯವರದೆಂಬ ಚರ್ಚೆ ಚಿಕ್ಕಮಗಳೂರಿನ ರಾಜಕೀಯ ಕಟ್ಟೆಯಲ್ಲಿದೆ. ಈ ಅವಧಿಯಲ್ಲಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರಕಾರದಲ್ಲಿ ಮಂತ್ರಿಯಾಗಿದ್ದ ರವಿ ಉಗ್ರ ಹಿಂದುತ್ವ ಪರಿವಾರದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂಥ ಎತ್ತರಕ್ಕೇರುತ್ತ ಹೋದಂತೆ ಚಿಕ್ಕಮಗಳೂರ ಕ್ಷೇತ್ರ ಮಾತ್ರ ಹಿಂದುಳಿದಿರುವಿಕೆಯಲ್ಲಿ ಕೆಳಕೆಳಕ್ಕೆ ಕುಸಿಯಹತ್ತಿತು ಎಂಬ ಮಾತು ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ.

ಕ್ಷೇತ್ರದ ಕತೆ-ವ್ಯಥೆ

ಹಿಂದುತ್ವದ ಬೆಂಕಿ ಚೆಂಡು, ಬಿಜೆಪಿಯ ರಾಷ್ಟ್ರಮಟ್ಟದ ನೇತಾರ, ಸಿಎಂ ಮೆಟೇರಿಯಲ್ ಎಂದೆಲ್ಲ ಗುರುತಿಸಲ್ಪಡುವ ಸಿ.ಟಿ.ರವಿ ಕಳೆದ ನಾಲ್ಕು ಅವಧಿಯಿಂದ ಪ್ರತಿನಿಧಿಸುತ್ತಿರುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಒಂದುಸುತ್ತು ಹೊಡೆದರೆ ಕಳೆದ ಇಪ್ಪತ್ತು ವರ್ಷದಲ್ಲಾದ “ಅಭಿವೃದ್ಧಿ” ದರ್ಶನವಾಗುತ್ತದೆ. ಕುಡಿಯುವ ನೀರು, ರಸ್ತೆ, ಸಾರಿಗೆ, ಚರಂಡಿ, ವಸತಿ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆಯಂಥ ಮೂಲ ಸೌಕರ್ಯಗಳಿಗೆ ಜನರು ಪರದಾಡುತ್ತಿದ್ದಾರೆ. ಗುಡ್ಡಗಾಡು ಹಳ್ಳಿಗಳ ಪಾಡಂತೂ ಹೇಳತೀರದು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿಗ್ಗಾವಿ-ಸವಣೂರು: ಸಾಮ್ರಾಜ್ಯ ಉಳಿಸಿಕೊಳ್ಳುವರಾ ಸಿಎಂ ಬೊಮ್ಮಾಯಿ?!

ಕ್ಷೇತ್ರದ ಜ್ವಲಂತ ಸಮಸ್ಯೆಯೆಂದರೆ ವಸತಿ ಮತ್ತು ಅರಣ್ಯ ಒತ್ತುವರಿ. ಬಡ ಮತ್ತು ಮಧ್ಯಮ ವರ್ಗ ಸೂರಿಲ್ಲದೆ ಕಂಗೆಟ್ಟಿದೆ; ವಸತಿ-ಜೀವನೋಪಾಯ ಕೃಷಿಗೆಂದು ಅರಣ್ಯ ಅತಿಕ್ರಮಿಸಿಕೊಂಡಿರುವ ಮಂದಿಗೆ ಜನವಿರೋಧಿ ಅರಣ್ಯ ಕಾನೂನಿನ ಅಂಕುಶದಿಂದ ಇರಿಯಲಾಗುತ್ತಿದೆ. ಕಾಡಿನಂಚಿನ ಮಂದಿ ಅರಣ್ಯ ಸಿಬ್ಬಂದಿಗಳ ದಾಳಿಗೆ ದಿಕ್ಕೆಟ್ಟು ಹೋಗಿದ್ದಾರೆ.ಸರಕಾರಿ ಜಾಗದಲ್ಲಿ ಅನಾದಿಕಾಲದಿಂದ ಇರುವವರಿಗೆ ಹಕ್ಕುಪತ್ರ ಸಿಗುತ್ತಿಲ್ಲ. ಹಣವಂತರು-ವಶೀಲಿಬಾಜಿಯವರು ರಾತ್ರಿ ಬೆಳಗಾಗುವುದರಲ್ಲಿ ಕಾಡು ಕಡಿದು ಹೋಮ್ ಸ್ಟೇ, ಜಂಗಲ್ ರೆಸಾರ್ಟ್‌ಗಳನ್ನು ತೆರೆಯುತ್ತಿದ್ದಾರೆ; ಕಾಫಿತೋಟ-ಅಡಿಕೆ ತೋಟ ವಿಸ್ತರಿಸುತ್ತಿದ್ದಾರೆ. ಹೋಮ್ ಸ್ಟೇ-ರೆಸಾರ್ಟ್ ಹಾವಳಿ ಮಿತಿಮೀರಿದೆ.

ಆರೋಗ್ಯ ಸಮಸ್ಯೆ-ಅಪಘಾತವಾದರೆ ಹಾಸನ, ಶಿವಮೊಗ್ಗ ಅಥವಾ ಮಂಗಳೂರು ಆಸ್ಪತ್ರೆ ತೋರಿಸ್ತಾರೆ; ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ನಡೆಯುತ್ತಿದೆ; ಮಳೆ ಹಾನಿಯ ಪರಿಹಾರವಿನ್ನೂ ರೈತಾಪಿ ವರ್ಗಕ್ಕೆ ಸಿಕ್ಕಿಲ್ಲ ಎಂದು ಜನರು ಕ್ಷೇತ್ರದ ದಯನೀಯ ಸ್ಥಿತಿ-ಗತಿ ವಿವರಿಸುತ್ತಾರೆ.

ಈ ವರ್ಷ ಆರಂಭವಾಗಿರುವ ಮೆಡಿಕಲ್ ಕಾಲೇಜೊಂದು ಬಿಟ್ಟರೆ ಶಾಸಕ ರವಿಯ ವಿಶೇಷ ಕಾಳಜಿಯಿಂದ ಯಾವ ಯೋಜನೆಯೂ ಬಂದಿಲ್ಲ; ಕ್ಷೇತ್ರದ ಎಲ್ಲ ಕಾಮಗಾರಿ ಮಾಡುವುದು ಶಾಸಕ ರವಿಯ ಭಾವ ಸುದರ್ಶನ್ ಅಥವಾ ಅವರ ಗುಂಪಿನವರು. ಕಲ್ಲು ಗಣಿಗಾರಿಕೆ-ಕ್ರಷರ್ ವ್ಯವಹಾರ ಮಾಡುವವರು ಶಾಸಕರ ಕಡೆಯವರೆ ಎಂಬ ಆರೋಪವಿದೆ.

ಕೆಎಂಎಫ್ ಹಾಲಿನ ಡೈರಿ, ಸರಕಾರಿ ಇಂಜಿನಿಯರಿಂಗ್ ಕಾಲೇಜು, ನೀರಾವರಿ ಯೋಜನೆ ಅವಶ್ಯವಾಗಿ ಬೇಕಾಗಿದೆ. ನಗರದ ನಡುವಿನ ಕೆರೆಗಳ ಹೂಳೆತ್ತದೆ ಜನರಿಗೆ ತೊಂದರೆಯಾಗುತ್ತಿದೆ. ಚಿಕ್ಕಮಗಳೂರು-ಹಾಸನ ರೈಲು ಮಾರ್ಗ ಬೇಡಿಕೆ ತುಂಬ ಹಳೆಯದು. ಇವುಗಳ ಬಗ್ಗೆ ಶಾಸಕ-ಸಂಸದರಿಗೆ ಗಮನವೇ ಇಲ್ಲ; ಶಾಸಕ-ಸಂಸದರ ವೈಮನಸ್ಸಿಂದ ಕ್ಷೇತ್ರ ಅಭಿವೃದ್ದಿ ಕುಂಠಿತವಾಗಿದೆ. ಕೇಂದ್ರದಲ್ಲಿ ಮಂತ್ರಿಯಾಗಿರುವ ಸಂಸದೆ ಶೋಭಾ ಕರಂದ್ಲಾಜೆ ಅಪರೂಪದ ಅತಿಥಿಯಂತಾಗಿದ್ದಾರೆ ಎಂದು ಜನರು ಹೇಳುತ್ತಾರೆ.

ಯುದ್ಧ ಸನ್ನದ್ಧ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕದನ ಕುತೂಹಲ ದಿನಗಳೆದಂತೆ ಹೆಚ್ಚಾಗುತ್ತಿದೆ. ಕಳೆದೆರಡು ದಶಕದಿಂದ ಧರ್ಮ-ದೇವರ ಹೆಸರಲ್ಲಿ ಪಟ್ಟಭದ್ರರು ಬೇಳೆ ಬೇಯಿಸಿಕೊಳ್ಳುತ್ತ ಕ್ಷೇತ್ರದ ಪ್ರಗತಿಗೆ ಶಾಪವಾಗಿರುವುದು ಈ ಬಾರಿಯ ಚುನಾವಣಾ ವಿಷಯವಾಗುವ ಸೂಚನೆ ಗೋಚರಿಸುತ್ತಿದೆ. ಸಾಮಾನ್ಯ ರೈತ ಕುಟುಂಬದ ಶಾಸಕ ಸಿ.ಟಿ.ರವಿಯ ಹಾಲಿ ಅಧಿಕಾರ-ಆಸ್ತಿ-ಅಂತಸ್ತಿನ ಬಗ್ಗೆ ಕ್ಷೇತ್ರದ ಮೂಲೆಮೂಲೆಯಲ್ಲಿ ರೋಚಕ ಚರ್ಚೆಗಳಾಗುತ್ತಿದೆ. ಶಾಸಕರು ಜನಸಾಮಾನ್ಯರಿಗೆ ಸ್ಪಂದಿಸುವುದಿಲ್ಲ; ಧರ್ಮ ಮತ್ತು ದುಡ್ಡು ಎರಡೇ ಅವರ ಆದ್ಯತೆ ಎಂಬ ಆರೋಪ ಸಾಮಾನ್ಯವಾಗಿದೆ. ರವಿ ಮತ್ತೆ ಕೇಸರಿ ಪಾರ್ಟಿಯ ಕ್ಯಾಂಡಿಡೇಟ್ ಆಗುವುದರಲ್ಲಿ ಅನುಮಾನವಿಲ್ಲ. ಇಪ್ಪತ್ತು ವರ್ಷದಿಂದ ರವಿಯ ಹೆಗಲಿಗೆಹೆಗಲು ಕೊಡುತ್ತು ಬಂದಿದ್ದ ಒಡನಾಡಿ ಎಚ್.ಡಿ.ತಮ್ಮಯ್ಯ ತಿರುಗಿಬಿದ್ದು ಟಿಕೆಟ್ ಕೇಳಿದ್ದರಾದರೂ ಅದು ಸಾಧ್ಯವಿಲ್ಲ ಎಂದಾಗ ಕಾಂಗ್ರೆಸ್ ಸೇರಿ ಸೆಡ್ಡುಹೊಡೆದು ನಿಂತಿದ್ದಾರೆ. ಸದ್ಯದ ಟ್ರೆಂಡ್‌ನ್ನು ಸೂಕ್ಷ್ಮವಾಗಿ ಗಮನಿಸಿದರೆ ಚಿಕ್ಕಮಗಳೂರಿನ ಮತದಾರರು ಬದಲಾವಣೆ ಬಯಸಿದ್ದಾರೆಂಬುದು ಪಕ್ಕಾ ಆಗುತ್ತದೆ.

ಕಾಂಗ್ರೆಸ್ ಪಾಳೆಯದಿಂದ 2013ರಲ್ಲಿ ಪ್ರಬಲ ಪೈಪೋಟಿ ಕೊಟ್ಟಿದ್ದ ಕೆ.ಎಸ್ ಶಾಂತೇಗೌಡ ಅವರ ಪತ್ನಿ ಗಾಯತ್ರಿ ಶಾಂತೇಗೌಡ, ಕಳೆದ ಬಾರಿ ಜೆಡಿಎಸ್‌ನಿಂದ ಸ್ಫರ್ಧಿಸಿ ಗಣನೀಯ ಮತ ಪಡೆದಿದ್ದ ಟೊಮೇಟೋ ಹರೀಶ್ ಯಾನೆ ಬಿ.ಎಚ್.ಹರೀಶ್ ಮತ್ತು ಕೆಲವು ದಿನದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಜಿಲ್ಲೆಯ ದಾಸ ಒಕ್ಕಲಿಗ ಸಮುದಾಯದ ವರ್ಚಸ್ವಿ ಮುಂದಾಳು ಮಾಜಿ ಸಂಸದ-ಮಾಜಿ ಮಂತ್ರಿ ಬಿ.ಎಲ್.ಶಂಕರ್ ನಂಬಿ ಬಿಜೆಪಿ ಬಿಟ್ಟು ಬಂದಿರುವ ಸ್ಥಳೀಯ ನಗರಸಭೆಯ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ ಹೆಸರು ಕೇಳಿಬರುತ್ತಿದೆ. ಬಹುತೇಕ ತಮ್ಮಯ್ಯನವರಿಗೆ ಕಾಂಗ್ರೆಸ್ ಟಿಕೆಟ್ ಖಾತ್ರಿ ಎನ್ನಲಾಗುತ್ತಿದೆ. ರವಿ ಜತೆಗಿದ್ದು ಅವರ ಪಟ್ಟುಗಳನ್ನೆಲ್ಲ ಕರಗತ ಮಾಡಿಕೊಂಡಿರುವ ತಮ್ಮಯ್ಯ ಕ್ಷೇತ್ರದ ಪ್ರಥಮ ಬಹುಸಂಖ್ಯಾತ ಲಿಂಗಾಯತ ಸಮುದಾಯದವರು. ಸ್ವಜಾತಿ ಲಿಂಗಾಯತರ ಒಲವು ಪಡೆದಿರುವ ತಮ್ಮಯ್ಯ ಹಳೆಯ ಗೆಳೆಯನ “ರಹಸ್ಯ”ಗಳನ್ನು ಒಂದೊಂದಾಗಿ ಬಯಲು ಮಾಡುತ್ತಿದ್ದಾರೆ.

ಯಡಿಯೂರಪ್ಪರ ಪದಚ್ಯುತಿಯಲ್ಲಿ ರವಿ “ಆಟ”ವೂ ಅಡಗಿದೆ ಎಂದು ಕೆರಳಿರುವ ಲಿಂಗಾಯತರು ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ; ಈಚೆಗೆ ರವಿ ತನ್ನ ತೋಟದ ಮನೆಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಯಡಿಯೂರಪ್ಪರನ್ನು ಕತ್ತೆಗೆ ಹೋಲಿಸಿದರೆಂಬ ಗುಟ್ಟು ಬಹಿರಂಗವಾಗಿ ಲಿಂಗಾಯತರ ಸಿಟ್ಟಿನ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿನ ಜಾತಿ ಲೆಕ್ಕಾಚಾರವೂ ತಮ್ಮಯ್ಯ ಪರವಾಗಿದೆ. ಸಿದ್ದರಾಮಯ್ಯರ ದೆಸೆಯಿಂದ ದ್ವಿತೀಯ ಮತ್ತು ತೃತೀಯ ಬಹುಸಂಖ್ಯಾತರಾದ ಮುಸಲ್ಮಾನ-ಕುರುಬ ಮತಗಳು ಬರುತ್ತದೆ; ಜತೆಗೆ ಲಿಂಗಾಯತ ಮತ್ತು ಕಾಂಗ್ರೆಸ್ ಓಟ್‌ಬ್ಯಾಂಕ್ ಸೇರಿದರೆ ತಮ್ಮಯ್ಯ ದಾರಿ ಸಲೀಸು. ಹಿಂದುತ್ವ ಡಲ್ಲಾಗಿದೆಯಾದರು ಎಸ್‌ಡಿಪಿಐ ಹಾಗು ಬಿಎಸ್‌ಪಿ ಆತಂಕ ಕಾಂಗ್ರೆಸ್‌ಗಿದೆ ಎಂದು ರಾಜಕೀಯ ಪಂಡಿತರು ಸಾಧ್ಯಾಸಾಧ್ಯತೆ ವಿಶ್ಲೇಷಿಸುತ್ತಾರೆ. ಸಂಘಿ ಸೂರ್ಯನಿಗೆ ಇನ್ನೆರಡು ತಿಂಗಳಲ್ಲಿ ಗ್ರಹಣ ಹಿಡಿಯಲಿದೆಯೆ? ಎಂಬ ಚರ್ಚೆ ಚಿಕ್ಕಮಗಳೂರಿನ ರಾಜಕೀಯ ಕಟ್ಟೆಯಲ್ಲಿ ನಡೆದಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

‘ಸತ್ಯ ಆದಷ್ಟು ಬೇಗ ಹೊರಬರಲಿದೆ..’; ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ

0
ದೇಶದಾದ್ಯಂತ ಭಾರೀ ಸುದ್ದಿಯಾಗಿರುವ, ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಲೈಂಗಿಕ ಹಗರಣದ ಪ್ರಮುಖ ಆರೋಪಿ, ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಸಂಸದ, ಎನ್‌ಡಿಎ ಎಂಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮೊದಲ ಬಾರಿಗೆ ಪ್ರತಿಕ್ರಿಯೆ...