Homeಕರ್ನಾಟಕಉತ್ತರ ಕನ್ನಡ: ಬಿಜೆಪಿಯಲ್ಲಿ ’ಸಂಘಿ’ ಆಪರೇಷನ್; ರಣತಂತ್ರವಿಲ್ಲದ ಕಾಂಗ್ರೆಸ್!

ಉತ್ತರ ಕನ್ನಡ: ಬಿಜೆಪಿಯಲ್ಲಿ ’ಸಂಘಿ’ ಆಪರೇಷನ್; ರಣತಂತ್ರವಿಲ್ಲದ ಕಾಂಗ್ರೆಸ್!

- Advertisement -
- Advertisement -

ಚುನಾವಣೆ ಸಮೀಪಿಸುತ್ತಿರುವಂತೆ ಉತ್ತರ ಕನ್ನಡದ ಬಿಜೆಪಿ ರಾಜಕಾರಣ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿದೆ. ಸಂಘ ಸರದಾರರಿಗೆ ಭಯ-ಭಕ್ತಿಯಿಂದ ನಡೆದುಕೊಳ್ಳುವ ವಿಧೇಯರನ್ನು ಮಾತ್ರ ಈ ಬಾರಿ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ ಗಂಭೀರ ಕಾರ್ಯಾಚರಣೆಗೆ ಆರೆಸ್ಸೆಸ್ ಸೂತ್ರಧಾರರು ಮುಂದಾಗಿದ್ದಾರೆ. ಎಮ್ಮೆಲ್ಲೆ ಆಗುವ ಏಕೈಕ ಆಸೆಯಿಂದ ಬಿಜೆಪಿಗೆ ವಲಸೆ ಬಂದವರನ್ನು ಚುನಾವಣಾ ಪ್ರಚಾರದ ಚಾಕರಿಗಷ್ಟೆ ಬಳಸಿಕೊಳ್ಳುವ ತಂತ್ರಗಾರಿಕೆಯನ್ನು ಹೆಣೆಯಲಾಗಿದೆ. ಸಚಿವ ಶಿವರಾಮ ಹೆಬ್ಬಾರ್ ಪ್ರತಿನಿಧಿಸುತ್ತಿರುವ ಘಟ್ಟದ ಮೇಲಿನ ಯಲ್ಲಾಪುರ ಮತ್ತು ಕರಾವಳಿಯ ಕಾರವಾರ, ಕುಮಟಾ ಮತ್ತು ಭಟ್ಕಳದಲ್ಲಿ ಒರಿಜಿನಲ್ ಸಂಘಿಗಳು ಅಥವಾ ಹಿಂದುತ್ವದ ತತ್ವಾದರ್ಶಗಳನ್ನು ಕಾಯಾ-ವಾಚಾ-ಮನಸಾ ಮೈಗೂಡಿಸಿಕೊಂಡಿರುವ ’ಪರಿವರ್ತಿತ’ರಿಗಷ್ಟೆ ಕೇಸರಿ ಟಿಕೆಟ್ ಕೊಡಲಾಗುತ್ತದೆ ಎಂಬ ಊಹಾಪೋಹದ ಚರ್ಚೆ ಹಲವು ತಿಂಗಳುಗಳಿಂದ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ನಡೆದಿತ್ತು. ಅದೀಗ ಒಂದೊಂದಾಗಿ ನಿಜವಾಗುವ ಸಂಕೇತಗಳು ಬಿಜೆಪಿ ಬಿಡಾರದಿಂದ ಬಿತ್ತರವಾಗಲಾರಂಭಿಸಿವೆ.

ಕಳೆದೊಂದು ವಾರದಿಂದ ಜಿಲ್ಲೆಯ ಬಿಜೆಪಿ ವಲಯದಿಂದ ಹೊರಬರುತ್ತಿರುವ ಬಾತ್ಮಿಗಳು ಹಲವು; ಕುಮಟಾ ಶಾಸಕ ದಿನಕರ ಶೆಟ್ಟಿಗೆ ಈ ಸಲ ಟಿಕೆಟ್ ಕೊಡಲು ಸಂಘಿ ಸರದಾರರು ಸುತಾರಾಮ್ ಸಿದ್ಧರಿಲ್ಲ; ಹಿಂದು ಜಾಗರಣಾ ವೇದಿಕೆ ತುಂಬಾ ಆಸಕ್ತಿಯಿಂದ ಜಿಲ್ಲೆಯ ಬಹುಸಂಖ್ಯಾತ ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ವಿದ್ಯಾವಂತ ತರುಣನೋರ್ವನನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂಬ ಸಂದೇಶವನ್ನು ಸಾರಲಾಗುತ್ತಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಜೆಡಿಎಸ್ ಬಿಟ್ಟು ಯಡಿಯೂರಪ್ಪ ಹಿಂಬಾಲಕನಾಗಿ ಗುರುತಿಸಿಕೊಂಡಿದ್ದ ಶಾಸಕ ದಿನಕರ ಶೆಟ್ಟಿ ಬಿಜೆಪಿ ಹುರಿಯಾಳಾಗಿದ್ದರು. ಹಿಂದೊಮ್ಮೆ ಕೇವಲ 20 ಮತಗಳ ಅಂತರದಿಂದ ಜೆಡಿಎಸ್ ಎಮ್ಮೆಲ್ಲೆಯಾಗಿದ್ದ ಶೆಟ್ಟಿ ಚುನಾವಣಾ ಚಾಂಪಿಯನ್ ಎಂದೇ ಕ್ಷೇತ್ರದಲ್ಲಿ ಹೆಸರುವಾಸಿ. ಶೆಟ್ಟರ ರಣತಂತ್ರಗಾರಿಕೆ, ಅಂದಿನ ಶಾಸಕಿ ಶಾರದಾ ಶೆಟ್ಟಿ ಮತ್ತವರ ಪುತ್ರನ ಮೇಲಿದ್ದ ವ್ಯಾಪಕ ಅಸಮಾಧಾನ ಮತ್ತು 2018ರ ಚುನಾವಣೆ ಹೊಸ್ತಿಲಲ್ಲಿ ಹೊನ್ನಾವರದ ಕೆರೆಯೊಂದರಲ್ಲಿ ಮುಳುಗಿ ಅಸುನೀಗಿದ್ದ ಮೀನುಗಾರರ ಹುಡುಗ ಪರೇಶ್ ಮೇಸ್ತನ ಸಾವನ್ನು ಸಂಘ ಪರಿವಾರ ಚುನಾವಣಾ ವಿಷಯವಾಗಿ ಮಾಡಿಕೊಂಡಿದ್ದರಿಂದ ಬಿಜೆಪಿ ಭರ್ಜರಿ 32,750 ಮತಗಳ ಅಂತರದಲ್ಲಿ ಗೆಲುವು ಕಂಡಿತ್ತು. ಆದರೆ ಪರೇಶ್ ಪ್ರಕರಣ ಬಳಸಿಕೊಂಡರೂ ಸೋತ ಉಳಿದೆಲ್ಲ ಅಭ್ಯರ್ಥಿಗಳು ಪಡೆದ ಒಟ್ಟೂ ಮತ ಬಿಜೆಪಿಗಿಂತಲೂ ಜಾಸ್ತಿ ಇತ್ತೆಂಬುದು ಕರಾವಳಿಯಲ್ಲಿ ಹಿಂದುತ್ವಕ್ಕೆ ಶೇಕಡಾ ಐವತ್ತರಷ್ಟೂ ಜನ ಬೆಂಬಲವಿಲ್ಲ ಎಂಬುದನ್ನು ಸಾಬೀತುಪಡಿಸುವಂತಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆ.ಆರ್ ಪೇಟೆ: ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸಚಿವ ನಾರಾಯಣಗೌಡ ಪಕ್ಷಾಂತರಕ್ಕೆ ಸಜ್ಜು?

ಗೆದ್ದ ಮರುದಿನದಿಂದಲೇ ಶಾಸಕ ಶೆಟ್ಟಿ ಮತ್ತು ಸ್ಥಳೀಯ ಸಂಘದ ’ಯಜಮಾನ’ರ ನಡುವೆ ಕಂದಕ ನಿರ್ಮಾಣವಾಯಿತು. ಶೆಟ್ಟಿ ಮತ್ತು ಸಂಸದ ಅನಂತಕುಮಾರ್ ಹೆಗಡೆ ಸಂಬಂಧ ಹಳಸಿತು; ಉತ್ತರ ಕನ್ನಡ ಸಂಘ-ಬಿಜೆಪಿ ಪರಿವಾರದ ’ಕಲ್ಲಡ್ಕ’ ಎಂದೇ ಜನಜನಿತವಾಗಿರುವ ಕುಮಟಾದ ಮಾಜಿ ಕಾರ್ಪೊರೇಷನ್ ಬ್ಯಾಂಕ್ ನೌಕರ ಹನುಮಂತ ಶಾನಭಾಗ್ ಹಾಗು ಶಾಸಕ ಶೆಟ್ಟಿ ಮಧ್ಯೆ ಶೀತಲ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇತ್ತು. ವಲಸಿಗ ದಿನಕರ ಶೆಟ್ಟಿ ಮತ್ತು ಮೂಲ ಬಿಜೆಪಿಗರ ಮೇಲಾಟ ಕುಮಟಾ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಹೊತ್ತಲ್ಲಿ ಮಿತಿಮೀರಿಹೋಯಿತು ಎಂದು ಬಿಜೆಪಿ ಕಾರ್ಯಕರ್ತರಷ್ಟೆ ಅಲ್ಲ, ಶಾಸಕ ಶೆಟ್ಟರ ಅನುಯಾಯಿಗಳೂ ಹೇಳುತ್ತಾರೆ.

ಬಹುಕಾಲದಿಂದ ಕುಮಟಾದ ಆರೆಸ್ಸೆಸ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಗೌಡ ಸಾರಸ್ವತ ಬ್ರಾಹ್ಮಣ (ಕೊಂಕಣಿ) ಸಮುದಾಯದ ಬಾಳೇರಿ ಕುಟುಂಬದ ಅನುರಾಧಾ ಬಾಳೇರಿಯವರನ್ನು ಪುರಸಭೆ ಅಧ್ಯಕ್ಷೆ ಮಾಡುವ ಯೋಚನೆ ಸಂಘ ಪರಿವಾರದ್ದಾಗಿತ್ತು. ಆದರೆ ಶಾಸಕ ಶೆಟ್ಟರಿಗೆ ತಮ್ಮನ್ನು ಜೆಡಿಎಸ್‌ನಿಂದ ಹಿಂಬಾಲಿಸಿದ್ದ ಮೋಹಿನಿ ಗೌಡರನ್ನು ಅಧ್ಯಕ್ಷ ಪೀಠದಲ್ಲಿ ಪ್ರತಿಷ್ಠಾಪಿಸುವ ಇರಾದೆಯಿತ್ತು. ಸ್ಥಳೀಯ ಆರೆಸ್ಸೆಸ್ ಸರ್ವೋಚ್ಚ ನಾಯಕ ಹನುಮಂತ ಶಾನಭಾಗರ ವಿನಂತಿಗೂ ಶಾಸಕ ಶೆಟ್ಟಿ ಸೊಪ್ಪುಹಾಕಲಿಲ್ಲ. ಬುಡಕಟ್ಟು ಹಾಲಕ್ಕಿಗಳಿಗೆ ಅವಕಾಶದ ಅಸ್ತ್ರ ಮುಂದಿಟ್ಟು ಶಾಸಕ ಶೆಟ್ಟಿ ಸಂಘಿ ಸರದಾರರನ್ನು ಕಟ್ಟಿಹಾಕಿದರು. ಮೋಹಿನಿ ಗೌಡ ಅಧ್ಯಕ್ಷೆಯಾದರು.

ಅಂದೇ ಸಂಘಿ ಶ್ರೇಷ್ಠರು ದಿನಕರ ಶಟ್ಟಿಗೆ 2023ರ ಅಸೆಂಬ್ಲಿ ಚುನಾವಣೆ ವೇಳೆಗೆ ಗೇಟ್ ಪಾಸ್ ಕೊಡುವ ಪ್ರತಿಜ್ಞೆ ಮಾಡಿದ್ದರು; ಮುನ್ಸಿಪಾಲಿಟಿ ಅಧ್ಯಕ್ಷತೆಯನ್ನು ಹಾಲಕ್ಕಿ ಜನಾಂಗಕ್ಕೆ ಕೊಡಬೇಕೆಂದು ಶಾಸಕ ದಿನಕರ್ ಹೇಳುವುದಾದರೆ ಹಾಲಕ್ಕಿ ಬುಡಕಟ್ಟಿಗೆ ಸೇರಿದವರನ್ನು ನಾವು ಯಾಕೆ ಶಾಸಕರನ್ನಾಗಿ ಮಾಡಬಾರದು? ದಿನಕರ್ ಶೆಟ್ಟಿ ಬಂಡೆದ್ದು ಸ್ಪರ್ಧಿಸಿದರೂ ಅವರನ್ನು ಸೋಲಿಸಲು ಕ್ಷೇತ್ರದ ಬಹುಸಂಖ್ಯಾತ ಮತದಾರ ಸಮೂಹದ ಹಾಲಕ್ಕಿ ಕ್ಯಾಂಡಿಡೇಟೆ ಸಮರ್ಥ; ಪಕ್ಕದ ಕಾರವಾದಲ್ಲೂ ಹೆಚ್ಚಿರುವ ಹಾಲಕ್ಕಿ ಒಕ್ಕಲು ಸಮುದಾಯದಿಂದ ಪಕ್ಷಕ್ಕೆ ಲಾಭವೆಂದು ಹೈಕಮಾಂಡಿಗೂ ಮನವರಿಕೆ ಮಾಡಿಕೊಡಲು ಇದರಿಂದ ಅನುಕೂಲವಾಗುತ್ತದೆ ಎಂಬ ಚರ್ಚೆ ಸಮಾರು ಎರಡು ವರ್ಷದ ಹಿಂದಿನ ರಹಸ್ಯ ಸಂಘಿ ಬೈಠಕ್‌ನಲ್ಲಿ ಆಗಿತ್ತೆಂದು ಬಿಜೆಪಿ ಮೂಲಗಳು ಪಿಸುಗುಡುತ್ತವೆ.

ಆರಸ್ಸೆಸ್ ಸೇಡಿನ ಜತೆಗೆ ಮತ್ತೊಂದು ಅಂಶ ದಿನಕರ್ ಶೆಟ್ಟಿಯವರಿಗೆ ಮುಳುವಾಯಿತೆನ್ನಲಾಗುತ್ತಿದೆ. ಕಳೆದ ಎರಡೂವರೆ ವರ್ಷದಿಂದ “ಶಾಸಕರು ತಮ್ಮ ಸಂಪನ್ಮೂಲಗಳನ್ನು ಇನ್ನಿಲ್ಲದಂತೆ ವೃದ್ಧಿಸಿಕೊಳ್ಳುತ್ತಿದ್ದಾರೆ. ಇದರಿಂದ ಕ್ಷೇತ್ರದ ಜನರು ರೋಸತ್ತುಹೋಗಿದ್ದಾರೆ” ಎಂಬುದು ಕುಮಟಾ-ಹೊನ್ನಾವರದಲ್ಲಿ ಮನೆ ಮಾತಾಗಿತ್ತು; ನಲ್ವತ್ತು ಪರ್ಸೆಂಟ್ ಹೊಡೆತಕ್ಕೆ ಕ್ಷೇತ್ರ ತತ್ತರಿಸಿಹೋಗಿತ್ತು. ಈ ಆಡಳಿತ ವಿರೋಧಿ ಅಲೆಯಲ್ಲಿ (2023ರಲ್ಲಿ) ದಿನಕರ್ ಶೆಟ್ಟಿ ಕೊಚ್ಚಿಹೋಗುತ್ತಾರೆ ಎಂಬ ಆತಂಕ ಬಿಜೆಪಿ ಹೈಕಮಾಂಡ್‌ಗೆ ಶುರುವಾಗಿತ್ತು. ಇತ್ತೀಚೆಗೆ ಸಂಘಿ ಅಂಗಸಂಸ್ಥೆಗಳು ಮತ್ತು ಬಿಜೆಪಿ ಮಾಡಿಸಿದ ಪ್ರತ್ಯೇಕ ಸರ್ವೆಗಳು ದಿನಕರ್ ಶೆಟ್ಟಿ ವಿರುದ್ಧದ ಜನಾಕ್ರೋಶ ಬಲವಾಗಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿವೆ ಎಂಬ ಮಾತು ಕೇಳಿಬರುತ್ತಿದೆ.

ಇದಕ್ಕೆ ಸಮಾನಾಂತರವಾಗಿ ಹಿಂದು ಜಾಗರಣಾ ವೇದಿಕೆಯ ಕಟ್ಟಾಳು ಜಗದೀಶ್ ಕಾರಂತ್ ಮತ್ತು ಸ್ಥಳೀಯ ಆರೆಸ್ಸೆಸ್ ನೀತಿ ನಿರೂಪಕ ಹನುಮಂತ್ ಶಾನಭಾಗ್ ಮುಂತಾದ ಹಿಂದುತ್ವದ ಹಿರೇಮಣಿಗಳು ಕುಮಟಾದ ಹಾಲಕ್ಕಿ ಒಕ್ಕಲು ಸಮುದಾಯದ ಶಿಕ್ಷಿತ ಯುವಕ ಡಾ.ಶ್ರೀಧರ್ ಗೌಡ ಉಪ್ಪಿನಗಣಪತಿಗೆ ಗಾಳಹಾಕಿದ್ದರು! ಮತ್ತೊಂದೆಡೆ ಒಕ್ಕಲಿಗರ ಆದಿಚುಂಚನಗಿರಿ ಮಠವೂ ಕುಮಟಾ ಅಥವಾ ಕಾರವಾರದಲ್ಲಿ ಹಾಲಕ್ಕಿಗಳಿಗೆ ಯಾವುದಾದರೂ ರಾಷ್ಟ್ರೀಯ ಪಕ್ಷದಿಂದ ಟಿಕಟ್ ಕೊಡಿಸಿ ತಮ್ಮ ಸಮುದಾಯದ ಎಮ್ಮೆಲ್ಲೆ ಕೋಟಾ ಹೆಚ್ಚಿಸಿಕೊಳ್ಳುವ ಸ್ಕೆಚ್ ಹಾಕಿತ್ತೆನ್ನಲಾಗುತ್ತಿದೆ. ಆದಿಚುಂಚನಗಿರಿ ಮಠಕ್ಕು ’ಸಹ್ಯವಾಗಿದ್ದು ಇದೇ ಡಾ.ಶ್ರೀಧರ್ ಗೌಡ. ಜಾತ್ಯತೀತ ತತ್ವಾದರ್ಶಕ್ಕಿಂತ ಕರಾವಳಿಯಲ್ಲಿ ಹಿಂದುತ್ವದ ಅಲೆಯೇರಿ ಹೊರಟಿರುವ ಬಿಜೆಪಿಯತ್ತ ಡಾ.ಗೌಡರ ಚಿತ್ತವಿತ್ತೆಂಬುದು ಸದ್ಯದ ರಾಜಕೀಯ ’ಆಟ’ದಿಂದ ಸ್ಪಷ್ಟವಾಗುತ್ತದೆ.

ಡಾ.ಗೌಡ ಪ್ರೈಮರಿ ಸ್ಕೂಲ್ ಶಿಕ್ಷಕ; ಹಾಲಕ್ಕಿ ಸಮುದಾಯದಲ್ಲಿ ಒಂದು ಬೆರಳೆಣಿಕೆಯಷ್ಟೂ ಇಲ್ಲದ ಪಿಎಚ್‌ಡಿ ಪಡೆದ ಸಾಹಿತಿ; ದಿನಕರ್ ಶೆಟ್ಟಿ ಜೆಡಿಎಸ್ ಶಾಸಕರಾಗಿದ್ದಾಗ ಅವರ ಆಪ್ತ ಕಾರ್ಯದರ್ಶಿಯಾಗಿದ್ದವರು. ರಾಜಕೀಯ ವರಸೆಗಳನ್ನು ಶಾಸಕರ ಗರಡಿಯಲ್ಲಿ ಕರಗತ ಮಾಡಿಕೊಂಡವರು. ದಿನಕರ್ ಶೆಟ್ಟಿ ಹಾಲಕ್ಕಿ ಒಕ್ಕಲು ಓಟುಗಳಿಗಾಗಿ ನೆಚ್ಚಿಕೊಂಡಿದ್ದು ಸದ್ರಿ ಶ್ರೀಧರ್ ಗೌಡರನ್ನೇ! ಆದಿಚುಂಚನಗಿರಿ ಮಠ ಕುಮಟಾದಲ್ಲಿ ಕಟ್ಟಿಸಿರುವ ಸಭಾಭವನದ ಉಸ್ತುವಾರಿಯಾಗಿ ಮಠದ ಪೀಠದ ನಿಕಟ ಸಂಪರ್ಕ ಸಾಧಿಸಿರುವ ಡಾ.ಗೌಡ ಸರಿಯಾದ ಹುರಿಯಾಳೆಂಬ ಲೆಕ್ಕಾಚಾರ ಬಿಜೆಪಿ-ಸಂಘಿ ದೊಡ್ಡವರದಾಗಿತ್ತು ಎನ್ನಲಾಗಿದೆ. ಇದೇ ಫೆಬ್ರವರಿ ಅಂತ್ಯದಲ್ಲಿ ಸ್ವಯಂನಿವೃತ್ತಿಗೆ ಸರಕಾರಿ ಅನುಮತಿ ಸಿಗುವಂತೆ ಅರ್ಜಿ ಹಾಕಿರುವ ಡಾ.ಗೌಡರ ನಡೆ ಶಾಸಕ ಶೆಟ್ಟರಲ್ಲಿ ಆತಂಕ ಮೂಡಿಸಿದೆ; ಇನ್ನೂ ಹನ್ನೊಂದು ವರ್ಷ ಶಿಕ್ಷಕ ವೃತ್ತಿ ಅವಧಿ ಇರುವಾಗ, ಅದರಲ್ಲೂ ಕೆಲವೇ ತಿಂಗಳುಗಳಲ್ಲಿ ೭ನೇ ವೇತನ ಆಯೋಗದ ಸೌಲಭ್ಯ ಸಿಗುವ ಸಾಧ್ಯತೆಯಿರುವಾಗ ಅದನ್ನೆಲ್ಲ ಬದಿಗೊತ್ತಿ ಡಾ.ಗೌಡರು ಸ್ವಯಂನಿವೃತ್ತಿಗೆ ಮುಂದಾಗಿರುವುದು ಎಮ್ಮೆಲ್ಲೆ ಆಗುವ ತಯಾರಿ ಎಂದೇ ವಿಶ್ಲೇಷಿಸಲಾಗುತ್ತಿದೆ. ಸಂಘಿ ಸರದಾರರಿಂದ ಕೇಸರಿ ಟಿಕೆಟ್‌ನ ಖಚಿತ ಭರವಸೆ ಸಿಕ್ಕ ನಂತರವೇ ಡಾ.ಗೌಡ ನೌಕರಿ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆಂಬ ಮಾತುಗಳು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಶತ್ರು-ಎಂಬುದು ಹಳೆಯ ರಾಜಕೀಯ ನಾಣ್ನುಡಿ. ಡಾ.ಶ್ರೀಧರ್ ಗೌಡ ಬಿಜೆಪಿಯ ಕಪ್ಪುಕುದುರೆಯಾಗುವುದು ಹೆಚ್ಚುಕಮ್ಮಿ ಪಕ್ಕಾ ಆಗಿದ್ದರೂ ಎದುರಾಳಿ ಕಾಂಗ್ರೆಸ್ ಗೆಲ್ಲುವ ರಣತಂತ್ರ ಹೆಣೆಯಲು ವಿಫಲವಾಗಿದೆ; ಮಾಜಿ ಶಾಸಕಿ ಶಾರದಾ ಶೆಟ್ಟಿ ಸಹಿತ ಕಾಂಗ್ರೆಸ್ ಹುರಿಯಾಳಾಗಲು ಒಟ್ಟು 13 ಮಂದಿ ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ. ಇವರಲ್ಲಿ ಒಬ್ಬರಿಗೂ ಗೆಲ್ಲುವ ತಾಕತ್ತಿಲ್ಲ ಎನ್ನುವ ಗುಸುಗುಸು ಕ್ಷೇತ್ರದಲ್ಲಿದೆ. ಹಿರಿಯ ಮುಖಂಡರಾದ ಡಿಕೆಶಿ, ದೇಶಪಾಂಡೆ, ಹರಿಪ್ರಸಾದ್, ಮಾರ್ಗರೆಟ್ ಆಳ್ವ ತಮ್ಮ ಬಲಕ್ಕಿದ್ದಾರೆಂದು ಟಿಕೆಟ್ ಆಕಾಂಕ್ಷಿಗಳು ಹೇಳಿಕೊಳ್ಳುತ್ತಿದ್ದಾರೆ. ವಯೋಸಹಜವಾಗಿ ನಡೆದಾಡುವುದಕ್ಕೂ ಕಷ್ಟವಾಗಿರುವ ಮಾಜಿ ಕೇಂದ್ರ ಮಂತ್ರಿ-ಮಾಜಿ ರಾಜ್ಯಪಾಲೆ ಆಳ್ವ ಜಿಲ್ಲೆಯಲ್ಲಿ ಸುತ್ತಾಡುತ್ತಿದ್ದಾರೆ. ಶಿರಸಿ ಅಸೆಂಬ್ಲಿ ಟಿಕೆಟ್ ಆಸೆಯಲ್ಲಿ ಕ್ಷೇತ್ರದಲ್ಲಿ ಸುತ್ತುತಿದ್ದ ಆಳ್ವ ಅವರ ಮಗ-ಮಾಜಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ದಿಢೀರ್ ಮನಸ್ಸು ಬದಲಿಸಿ ಕುಮಟಾ ಅಭ್ಯರ್ಥಿಯಾಗುವ ಪ್ರಯತ್ನ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ನಿವೇದಿತ್ ಅಪರಿಚಿತ; ಹಿಂದುತ್ವದ ಪ್ರಯೋಗ ಶಾಲೆಯಂತಿರುವ ಕುಮಟಾದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ನಿವೇದಿತ್ ನಿಂತರೆ ಠೇವಣಿಯೂ ಇರಲಾರದು; ಬಹುಸಂಖ್ಯಾತ ಹಾಲಕ್ಕಿಗಳ ಬಿಜೆಪಿ ಅಭ್ಯರ್ಥಿಯನ್ನು ಎದುರಿಸುವ ಯಾವ ತಂತ್ರಗಾರಿಕೆಯೂ ಅಥವಾ ಅನುಭವವೂ ನಿವೇದಿತ್‌ಗೆ ಇಲ್ಲ ಎಂದು ಆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಅಲವತ್ತುಕೊಳ್ಳುತ್ತಾರೆ.

PC : The Economic Times (ಮಾರ್ಗರೆಟ್ ಆಳ್ವ)

ಇದನ್ನೂ ಓದಿ: ‘ನಾನಲ್ಲ, ನೀವೇ ಅವರ ಟಾರ್ಗೆಟ್’: ದೆಹಲಿ ಸಿಎಂ ಕೇಜ್ರಿವಾಲ್‌ಗೆ ಸಿಸೋಡಿಯಾ ಪತ್ರ

ಕಾಂಗ್ರೆಸ್ ಮೂಲಗಳು ಹೇಳುವ ಪ್ರಕಾರ ಆಳ್ವ ಮತ್ತು ಮಾಜಿ ಶಾಸಕಿ ಶಾರದಾ ಶೆಟ್ಟಿ ಸಂಬಂಧ ಹಳಸಿದೆ; ಶಾರದಾ ಶೆಟ್ಟಿಯವರಿಗೆ ಕೊಕ್ ಕೊಟ್ಟು ಕರುಳ ಕುಡಿಗೆ ಕುಮಟೆಯ ಟಿಕೆಟ್ ಕೊಡಿಸಲು ಆಳ್ವ ಶತಾಯಗತಾಯ ಹೋರಾಡುತ್ತಿದ್ದಾರೆ. ಶಾರದಾ ಶೆಟ್ಟಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯನ್ನು ನಂಬಿಕೊಂಡದ್ದಾರೆ. ಆದರೆ ಈ ಇಬ್ಬರಿಗೂ ಗೆಲ್ಲುವ ವರ್ಚಸ್ಸಿಲ್ಲ; ಹಿರಿಯ ಕಾಂಗ್ರೆಸ್ಸಿಗರು ಪುತ್ರವಾತ್ಸಲ್ಯ, ಒಣ ಪ್ರತಿಷ್ಠೆಯಿಂದಾಗಿ ಗೆಲ್ಲುವ ಯೋಗ್ಯತೆಯವರನ್ನು ಹಿಮ್ಮೆಟ್ಟಿಸುತ್ತಿದ್ದಾರೆ. ಬಿಜೆಪಿ ಬಹುಸಂಖ್ಯಾತ ಹಾಲಕ್ಕಿ ಬುಡಕಟ್ಟಿಗೆ ಟಿಕೆಟ್ ಕೊಡಲು ನಿರ್ಧಾರ ಮಾಡುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಅದೇ ಸಮುದಾಯದ ಪರಿಚಿತ ಮಹಿಳೆ-ಜಿಪಂ ಮಾಜಿ ಅಧ್ಯಕ್ಷೆ ಗಾಯತ್ರಿ ಗೌಡರಿಗೆ ಟಿಕೆಟ್ ಘೋಷಿಸಬೇಕಿತ್ತು; ಈಗಲೂ ಸಮಯ ಮಿಂಚಿಲ್ಲ; ಬಿಜೆಪಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಾಗುವ ಹವ್ಯಕ ಬ್ರಾಹ್ಮಣ ವರ್ಗದ-ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮೊಮ್ಮಗ ಡಾ.ಶಶಿಭೂಷಣ ಹೆಗಡೆಯವರನ್ನು ಜೆಡಿಎಸ್‌ನಿಂದ ಸೆಳೆದು ನಿಲ್ಲಿಸಿದರೆ ಗೆಲ್ಲುವ ಅವಕಾಶವಿದೆ. ಇದಾಗದಿದ್ದರೆ ಕುಮಟಾ-ಹೊನ್ನಾವರದ ಬಿಜೆಪಿ ಯುದ್ಧ ತಂತ್ರಜ್ಞರಾದ ಕೊಂಕಣಿಗರನ್ನು ಸಂದಿಗ್ಧಕ್ಕೆ ಸಿಲುಕಿಸಲು ಆ ಸಮುದಾಯದವರೇ ಆದ ದೇಶಪಾಂಡೆ ಮಗ ಪ್ರಶಾಂತ್ ದೇಶಪಾಂಡೆಗೆ ಚುನಾವಣಾ ಯಾಗದ ಕುದುರೆಯಾಗಿಬಿಡುವ ಬದ್ಧತೆ ತೋರಿಸಬೇಕು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಪಕ್ಷವನ್ನು ಗೆಲ್ಲಿಸುವ ಛಲದ ಹೋರಾಟವನ್ನು ದೇಶಪಾಂಡೆ ಮಾಡಿದ ನಿದರ್ಶನವೇ ಇಲ್ಲ. ಎದುರಾಳಿ ಪಡೆಯೊಂದಿಗಿನ ದೇಶಪಾಂಡೆಯವರ ಮ್ಯಾಚ್ ಫಿಕ್ಸಿಂಗ್‌ನಿಂದ ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಬಡವಾಗಿದೆ ಎಂಬ ಆರೋಪ ತುಂಬ ಹಳೆಯದು. ಈಚೆಗೆ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಮಾಡಿಸಿರುವ ಸರ್ವೆಯಲ್ಲಿ ದೇಶಪಾಂಡೆ ಬಿಜೆಪಿಗರಿಗೆ ರಹಸ್ಯವಾಗಿ ನೆರವಾಗುತ್ತಿರುವುದರಿಂದ ಉತ್ತರ ಕನ್ನಡದ ಹಲವು ಕ್ಷೇತ್ರದಲ್ಲಿ ಕಾಂಗ್ರೆಸ್ ಕೈಗೆ ಬಂದಿರುವ ತುತ್ತು ಬಾಯಿಗೆ ಬರದಂತಾಗಲಿದೆ ಎಂಬುದನ್ನು ವಿವರಿಸಿದೆ ಎನ್ನಲಾಗುತ್ತಿದೆ. ಜೆಡಿಎಸ್‌ನಿಂದ ಸ್ಪರ್ಧಿಸುವ ಸೂರಜ್ ನಾಯ್ಕ್ ಕಳೆದ ಬಾರಿಯಂತೆ ಈ ಸಲವೂ ಸ್ವಜಾತಿ ನಾಮಧಾರಿಗಳ ಮತಗಳನ್ನು ಸಾರಾಸಗಟಾಗಿ ಬಾಚುವುದರಿಂದ ಕಾಂಗ್ರೆಸ್ ಆ ಸಮುದಾಯದ ಅಭ್ಯರ್ಥಿಯನ್ನು ಹಾಕಿದರೆ ಪ್ರಯೋಜನವಿಲ್ಲ; ಕಾಂಗ್ರೆಸ್‌ಗೆ ಇರುವುದು ಎರಡೇ ಆಯ್ಕೆ; ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸಣ್ಣ ಅಂತರದಲ್ಲಿ ಸೋತಿರುವ ಹವ್ಯಕ ಬ್ರಾಹ್ಮಣ ಜಾತಿಯ ಶಶಿಭೂಷಣ ಹೆಗಡೆ ಅಥವಾ ಸ್ಥಳೀಯ ಸ್ವಜಾತಿ ಕೊಂಕಣಿಗರ ಮೇಲೆ ಪ್ರಭಾವ ಹೊಂದಿರುವ ಹಳೆ ಹುಲಿ ದೇಶಪಾಂಡೆ ಸುಪುತ್ರ ಪ್ರಶಾಂತ್ ದೇಶಪಾಂಡೆ. ಹಾಗಂತ ಕಾಂಗ್ರೆಸ್ಸಿಗರೆ ಹೇಳುತ್ತಾರೆ.

ಶುದ್ಧೋದನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...