Homeಮುಖಪುಟ2020ರ ದೆಹಲಿ ದಂಗೆಗಳು: ಇಂದಿಗೂ ಕಾಡುತ್ತಿರುವ ಪ್ರಶ್ನೆಗಳು

2020ರ ದೆಹಲಿ ದಂಗೆಗಳು: ಇಂದಿಗೂ ಕಾಡುತ್ತಿರುವ ಪ್ರಶ್ನೆಗಳು

- Advertisement -
- Advertisement -

1984ರಲ್ಲಿ ಸಿಖ್ಖರ ಮಾರಣಹೋಮದ ನಂತರ ಒಂದು ವರದಿ ಬಿಡುಗಡೆಯಾಗಿತ್ತು. ಮಾನವ ಹಕ್ಕುಗಳ ಸಂಘಟನೆಗಳಾದ ಪೀಪಲ್ಸ್ ಯುನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಮತ್ತು ಪೀಪಲ್ಸ್ ಯುನಿಯನ್ ಫಾರ್ ಡೆಮಕ್ರಟಿಕ್ ರೈಟ್ಸ್ (ಪಿಯುಡಿಆರ್)ಗಳ ಜಂಟಿ ಪ್ರಯತ್ನದಿಂದ ಬಿಡುಗಡೆಯಾದ ಈ ವರದಿಯು ದೆಹಲಿಯಲ್ಲಿ ಆದ ಮಾರಣಹೋಮದ ವಾಸ್ತವವನ್ನು ದೇಶದ ಮುಂದಿಟ್ಟಿತ್ತು; ಆದರೆ, ಅದನ್ನು ಅಂದು ಆಡಳಿತದಲ್ಲಿದ್ದ ಶಕ್ತಿಗಳು ಮುಚ್ಚಿಹಾಕಲು ಪ್ರಯತ್ನಿಸಿದ್ದವು. ಕುಲದೀಪ್ ನಯ್ಯರ್, ರಜನಿ ಕೋಠಾರಿ ಹಾಗೂ ಗೋವಿಂದಾ ಮುಖೋಟಿ ಮುಂತಾದ ನಾಗರಿಕರು ರಿಸ್ಕ್ ತೆಗೆದುಕೊಂಡು, ಹಿಂಸೆಗೆ ಬಲಿಯಾದ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿದ್ದರು ಹಾಗೂ ಈ ಹಿಂಸಾಚಾರಕ್ಕೆ ಕಾರಣವಾದ ಜನರನ್ನು ಹೆಸರಿಸಿದ್ದರು. ಈ ಐತಿಹಾಸಿಕ ದಾಖಲೆಯ ಕಾರಣದಿಂದ ಇಂದಿಗೂ ಆ ಸಮಯದ ದೊಡ್ಡದೊಡ್ಡ ನಾಯಕರನ್ನು ಮಾರಣಹೋಮದ ಅಪರಾಧಿ ಎಂದು ಪರಿಗಣಿಸಲು ಸಾಧ್ಯವಾತ್ತಿದೆ. ಯಾವ ಸತ್ಯವನ್ನು ಕೋರ್ಟು ಕಚೇರಿಗಳು ಹಾಗೂ ನ್ಯಾಯಾಂಗದ ಆಯೋಗಗಳಿಗೆ ಹೇಳಲು ಸಾಧ್ಯವಾಗಲಿಲ್ಲವೋ, ನಾಗರಿಕರಿಂದಲೇ ರಚಿಸಲಾದ ಈ ವರದಿಯು ಅದನ್ನು ದೇಶದ ಮುಂದಿಟ್ಟಿತು.

ಅದೇ ಪರಂಪರೆಯಲ್ಲಿ ಇತ್ತೀಚಿಗೆ ಇನ್ನೊಂದು ವರದಿಯನ್ನು ಸಾರ್ವಜನಿಕಗೊಳಿಸಲಾಗಿದೆ. ಈ ವರದಿಯ ವಿಷಯ; 2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಆದ ಗಲಭೆಗಳು. ಈ ಗಲಭೆಗಳನ್ನು 1984ರ ವ್ಯಾಪಕ ಮಾರಣಹೋಮದೊದೊಂದಿಗೆ ಹೋಲಿಕೆ ಮಾಡಲು ಆಗುವುದಿಲ್ಲ. ಈ ಬಾರಿ ಹಿಂಸಾಚಾರ ಹಿಂದೂ ಮತ್ತು ಮುಸ್ಲಿಂ ಇಬ್ಬರ ಕಡೆಯಿಂದಲೂ ಆಗಿತ್ತು. ಹಿಂಸಾಚಾರದಲ್ಲಿ ಪ್ರಾಣ ತೆತ್ತವರಲ್ಲಿ ಎರಡೂ ಸಮುದಾಯವದರಿದ್ದರು. ವಾಸ್ತವವೇನೆಂದರೆ ಸರಕಾರಿ ಅಫಿಡವಿಟ್‌ಗಳ ಪ್ರಕಾರ, ಈ ಗಲಭೆಗಳಲ್ಲಿ ಮೃತಪಟ್ಟ 53 ವ್ಯಕ್ತಿಗಳಲ್ಲಿ 40 ಜನ ಮುಸ್ಲಿಮರಿದ್ದರು, ಗಾಯಗೊಂಡವರಲ್ಲಿ ಹೆಚ್ಚಿನವರು ಹಾಗೂ ಮನೆ ಮತ್ತು ಅಂಗಡಿಗಳು ಹಾನಿಗೊಳಗಾಗಿ ಸಮಸ್ಯೆ ಅನುಭವಿಸಿದವರಲ್ಲಿ ಮುಕ್ಕಾಲು ಭಾಗ ಜನರು ಮುಸಲ್ಮಾರಾಗಿದ್ದರು. ಅಂದರೆ ಹಿಂಸೆಯು ಹೆಚ್ಚುಕಡಿಮೆ ಏಕಪಕ್ಷೀಯವಾಗುತ್ತು. ವಿಪರ್ಯಾಸವೇನೆಂದರೆ, ಈ ಹಿಂಸೆಯ ಆರೋಪದಲ್ಲಿ ಬಂಧಿತರಾದ ಜನರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಮುಸ್ಲಿಮರಾಗಿದ್ದಾರೆ.

ದೆಹಲಿ ಗಲಭೆಗಳ ಬಗ್ಗೆ ಈ ಸತ್ಯವನ್ನು ದೇಶದ ಮುಂದಿಡುತ್ತ ಇತ್ತೀಚಿಗೆ ಒಂದು ವರದಿಯನ್ನು ಪ್ರಕಟಿಸಲಾಗಿದೆ. ದೇಶದ ಮಾಜಿ ಆಡಳಿತ ಅಧಿಕಾರಗಳ ಸಂಘಟನೆಯಾದ ಕಾನ್ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್‌ನಿಂದ ಪ್ರಾಯೋಜಿಸಲಾದ ಈ ಸ್ವತಂತ್ರ ವರದಿಯನ್ನು ದೇಶದ ಹೆಸರಾಂತ ಮಾಜಿ ನ್ಯಾಯಾಧೀಶರು ಬರೆದಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಮದನ್ ಲೋಕುರ್, ದೆಹಲಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎ.ಪಿ. ಶಾ, ದೆಹಲಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಆರ್ ಎಸ್ ಸೋಧಿ, ಪಟ್ನಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಅಂಜನಾ ಪ್ರಕಾಶ್ ಹಾಗೂ ದೇಶದ ಮಾಜಿ ಗೃಹ ಸಚಿವ ಜಿ ಕೆ ಪಿಳ್ಳೈ ಅವರುಗಳು ಬರೆದ ‘ಅನ್‌ಸರ್ಟನ್ ಟೈಮ್ಸ್: ಅ ಸಿಟಿಜನ್ ಕಮಿಟಿ ರಿಪೋರ್ಟ್ ಆನ್ ದ ನಾರ್ತ್ ಈಸ್ಟ್ ದೆಹಲಿ ವಾಯಲೆನ್ಸ್ 2020’ ಎಂಬ ಈ ವರದಿಯು ಈ ಗಲಭೆಗಳ ಸತ್ಯವನ್ನು ನಿಷ್ಪಕ್ಷಪಾತದಿಂದ ತನಿಖೆ ನಡೆಸಿ ದೇಶದ ಮುಂದೆ ಇರಿಸಿದೆ.

ದೆಹಲಿಯಲ್ಲಿ ಆದ ಹಿಂಸಾಚಾರದ ಮೊದಲಿನ ಮತ್ತು ನಂತರದ ಎಲ್ಲಾ ಘಟನಾಕ್ರಮಗಳನ್ನು ಸೂಕ್ಷ್ಮವಾಗಿ ತೆರೆದಿಟ್ಟಿರುವ ಈ ವರದಿಯು ನಮ್ಮ ಎದುರಿಗೆ ಹಲವು ಕಷ್ಟಕರವಾದ ಪ್ರಶ್ನೆಗಳನ್ನು ಇಡುತ್ತದೆ. ಮೊಟ್ಟಮೊದಲನೆಯದಾಗಿ, ಈ ವರದಿಯು ದೆಹಲಿಯಲ್ಲಿ ಆದ ಹಿಂಸಾಚಾರವು ಯಾವುದೇ ಒಂದು ಕಾಕತಾಳೀಯ ಅಥವಾ ಆಕಸ್ಮಿಕವಾದ ದುರ್ಘಟನೆ ಅಲ್ಲ ಎಂಬುದನ್ನು ಸ್ಪಷ್ಟಗೊಳಿಸುತ್ತದೆ. ದೀರ್ಘ ಕಾಲದಿಂದ ದ್ವೇಷದ ಹಿನ್ನೆಲೆಯನ್ನು ಸೃಷ್ಟಿಗೊಳಿಸಲಾಗುತ್ತಿತ್ತು. ಪೌರತ್ವ ಕಾಯಿದೆಯ ತಿದ್ದುಪಡಿಯ ವಿರುದ್ಧ ನಡೆದ ಆಂದೋಲನದ ಸಮಯದಲ್ಲಿ ಮುಖಂಡರು, ಟಿವಿ ಚಾನಲ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳು ಬಹಿರಂಗವಾಗಿ ಮುಸ್ಲಿಮರ ವಿರುದ್ಧ ದ್ವೇಷವನ್ನು ಪ್ರಚಾರ ಮಾಡಿದವು ಹಾಗೂ ಶಾಹೀನ್ ಬಾಗ್‌ನಂತಹ ಪ್ರತಿಭಟನೆಯ ಪ್ರದರ್ಶನಗಳನ್ನು ರಾಷ್ಟ್ರ ವಿರೋಧಿ ಎಂದು ಬಿಂಬಿಸಿದವು ಎಂದು ಈ ವರದಿಯು ಹೇಳುತ್ತದೆ. ಬಿಜೆಪಿಯ ನಾಯಕರು ದೆಹಲಿಯ ಚುನಾವಣೆಯ ಸಮಯದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದರು, ಅದರಿಂದ ಹಿಂಸೆಯ ವಾತಾವರಣ ಸೃಷ್ಟಿಯಾಯಿತು. ಪ್ರಶ್ನೆ ಏನೆಂದರೆ, ಈ ಎಲ್ಲ ಮಾಹಿತಿ ಲಭ್ಯವಿದ್ದರೂ, ಪೊಲೀಸ್, ಆಡಳಿತ, ಚುನಾವಣಾ ಆಯೋಗ ಮತ್ತು ಮಾಧ್ಯಮಗಳನ್ನು ನಿಯಂತ್ರಿಸುವ ಸಂಸ್ಥೆಗಳು ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಏಕೆ ಕೈಗೊಳ್ಳಲಿಲ್ಲ?

ಜಹಾಂಗೀರ್‌‌‌ಪುರಿ ಗಲಭೆ: 45 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ದೆಹಲಿ ಪೊಲೀಸ್‌‌ | Naanu Gauri

ಎರಡನೆಯ ಪ್ರಶ್ನೆ, ದೆಹಲಿ ಪೊಲೀಸರ ಪಾತ್ರದ ಬಗ್ಗೆ. ಹಿಂಸೆಯ ಎಲ್ಲಾ ಮುನ್ಸೂಚನೆಗಳು ಕಂಡುಬಂದಿದ್ದರೂ ಹಾಗೂ ಇದಕ್ಕೆ ಸಂಬಂಧಿಸಿದ ಗುಪ್ತಚರ ವರದಿ ತಮಗೆ ಸಿಕ್ಕಿದ್ದರೂ, ದೆಹಲಿಯ ಪೊಲೀಸ್ ಈ ಗಲಭೆಗಳನ್ನು ತಡೆಯುವ ಪರಿಣಾಮಕಾರಿ ವ್ಯವಸ್ಥೆ ಏಕೆ ಮಾಡಲಿಲ್ಲ? ಗಲಭೆಗಳು ಶುರುವಾದ ನಂತರವೂ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಬಲವನ್ನು ಏಕೆ ನಿಯೋಜಿಸಲಿಲ್ಲ? ಕರ್ಫ್ಯೂ ವಿಧಿಸುವುದಕ್ಕೆ ಎರಡು ದಿನಗಳ ತಡ ಏಕೆ ಆಯಿತು? ಹಿಂಸಾಚಾರದ ಸಮಯದಲ್ಲಿ ಅನೇಕ ಜಾಗಗಳಲ್ಲಿ ಗಲಭೆಕೋರರ ಜೊತೆಗೆ ಪೊಲೀಸರು ಏಕೆ ಕಾಣಿಸಿಕೊಂಡಿದ್ದರು?

ಮೂರನೆಯ ಪ್ರಶ್ನೆ, ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರವನ್ನು ಕಟಕಟೆಯಲ್ಲಿ ತಂದು ನಿಲ್ಲಿಸುತ್ತದೆ. ಹಿಂಸೆಯಲ್ಲಿ ಬಲಿಯಾದ ಜನರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಮತ್ತು ತಕ್ಷಣದಲ್ಲಿ ಪರಿಹಾರ ನೀಡುವುದರಲ್ಲಿ ನಿರ್ಲಕ್ಷೆ ತೋರಿದ್ದು ಏಕೆ? ತಮ್ಮ ಮನೆಗಳಿಂದ ಹೊರದೂಡಲಾದ ಜನರಿಗಾಗಿ ನಿರ್ಮಿಸಲಾದ ರಿಲೀಫ್ ಕ್ಯಾಂಪ್‌ಗಳನ್ನು ಅಷ್ಟು ತುರಾತುರಿಯಲ್ಲಿ ಏಕೆ ಮುಚ್ಚಲಾಯಿತು? ಹಿಂಸಾಚಾರಕ್ಕೆ ಮತ್ತು ಬೆಂಕಿಕೆ ಬಲಿಯಾದ ಜನರಿಗೆ ಪರಿಹಾರ ನೀಡುವುದರಲ್ಲಿ ರೆಡ್ ಟೇಪಿಸಂ ಅಂದರೆ ಅಷ್ಟು ಸಾಂಸ್ಥಿಕ ವಿಳಂಬ ಆದದ್ದು ಏಕೆ?

ನಾಲ್ಕನೆಯ ಪ್ರಶ್ನೆ ನಮ್ಮ ನ್ಯಾಯ ವ್ಯವಸ್ಥೆಯ ಬಗ್ಗೆ ಚಿಂತಿಸುವಂತೆ ಮಾಡುತ್ತದೆ. ದೆಹಲಿಯ ಗಲಭೆಗಳ ನಂತರ 756 ಎಫ್‌ಐಆರ್‌ಗಳನ್ನು ದಾಖಲಿಸಲಾಯಿತು. ಈ ಎಲ್ಲಾ ಎಫ್‌ಐಆರ್‌ಗಳನ್ನು ಹಾಗೂ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ನಮ್ಮ ನ್ಯಾಯ ವ್ಯವಸ್ಥೆಯ ಬಗ್ಗೆ ಈ ವರದಿಯು ನೀಡುವ ಚಿತ್ರಣವು ಹೆಚ್ಚಿನ ಭರವಸೆಯನ್ನು ಹುಟ್ಟುಹಾಕುವಂತಿಲ್ಲ. ವರದಿಯಲ್ಲಿ ಉಲ್ಲೇಖಿಸಿಲಾದ ಸಾಕ್ಷ್ಯಗಳಿಂದ ಸ್ಪಷ್ಟವಾಗುವುದೇನೆಂದರೆ, ಎಲ್ಲೆಲ್ಲಿ ಹಿಂಸಾಚಾರದಿಂದ ಮುಸ್ಲಿಮರು ಬಲಿಯಾಗಿದ್ದಾರೋ, ಅಲ್ಲಿ ದೆಹಲಿ ಪೊಲೀಸ್ ಮತ್ತು ಸರಕಾರಿ ಪ್ರಾಸಿಕ್ಯೂಷನ್ ಕಡೆಯವರು ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಹಾಗೂ ನ್ಯಾಯಾಲಯದಲ್ಲಿ ಸಾಬೀತುಪಡಿಸಲಾಗಂತಹ ಪ್ರಕರಣಗಳನ್ನು ಸೃಷ್ಟಿಸಿದ್ದಾರೆ. ಆದರೆ ಎಲ್ಲಿ ಪೌರತ್ವ ಕಾಯಿದೆ ತಿದ್ದುಪಡಿಯ ವಿರೋಧಿಗಳ ವಿರುದ್ಧ ಆರೋಪವಿದೆಯೋ, ಅಲ್ಲಿ ಪೊಲೀಸರು ತಾವೇ ಖುದ್ದಾಗಿ ಮುಂದೆ ಬಂದು ಕಪೋಲಪಲ್ಪಿತ ಸಾಕ್ಷ್ಯಾಧಾರಗಳನ್ನು ಮತ್ತು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ ಹಾಗೂ ನ್ಯಾಯಾಲಯವನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ನ್ಯಾಯಾಂಗವು ಈ ವಿಷಯದ ಮೇಲೆ ದೆಹಲಿ ಪೊಲೀಸರ ಮೇಲೆ ಅತ್ಯಂತ ಕಟುವಾದ ಟೀಕೆಗಳನ್ನು ಮಾಡಿದೆ. ವಿಶೇಷವಾಗಿ, ದೆಹಲಿ ಗಲಭೆಗಳನ್ನು ಪೌರತ್ವ ಕಾಯಿದೆ ತಿದ್ದುಪಡಿಯ ವಿರೋಧಿಗಳ ಪಿತೂರಿ ಎಂದು ಹೇಳುವ ಪ್ರಕರಣಗಳ ಪರಿಶೀಲನೆ ಮಾಡುವಾಗ ಈ ವರದಿಯು, ಇಂತಹ ಸಮಯದಲ್ಲಿ ದಾಖಲಿಸಿರುವ ಪ್ರಕರಣ ನಕಲಿ ಎಂದು ಸ್ಪಷ್ಟವಾಗಿ ತೋರುತ್ತಿದೆ ಎಂಬ ತೀರ್ಮಾನಕ್ಕೆ ಬಂದಿದೆ. ಗಮನಿಸಬೇಕಾದ ವಿಷಯವೇನೆಂದರೆ, ಈ ಪ್ರಕರಣದ ನ್ಯಾಯಾಲಯ ವಿಚಾರಣೆ ಇನ್ನೂ ನಡೆಯುತ್ತಿದೆ ಹಾಗೂ ಈ ಪ್ರಕರಣದ ಅಡಿಯಲ್ಲಿ ಅನೇಕ ಸಾಮಾಜಿಕ ಕಾರ್ಯಕರ್ತರನ್ನು ಮತ್ತು ಹೋರಾಟಗಾರರನ್ನು ಜಾಮೀನು ಕೂಡ ಸಿಗದ ಯುಎಪಿಎ ನಂತಹ ಕಾಯಿದೆಯ ಅಡಿಯಲ್ಲಿ ಜೈಲಿನಲ್ಲಿ ಇರಿಸಲಾಗಿದೆ.

ಈ ನಾಲ್ಕು ಪ್ರಶ್ನೆಗಳ ಹಿಂದೆ ಅಡಗಿರುವ ದೊಡ್ಡ ಪ್ರಶ್ನೆ ಏನೆಂದರೆ, ದೇಶದ ರಾಜಧಾನಿಯಲ್ಲಿ ಸರಕಾರದ ಮೂಗಿನ ಕೆಳಗೆ ಆದ ಈ ನಾಚಿಕೆಗೇಡಿನ ಹಿಂಸಾಚಾರದ ಸತ್ಯವನ್ನು 1984ರಂತೆಯೇ ಯಾವುದೋ ಒಂದು ಸರಕಾರೇತರ ಸಂಸ್ಥೆಯ ತನಿಖೆ ನಡೆಸಿ ಮುಂದಿಡಬೇಕಾಗಿ ಬಂದಿದೆಯೆಂದರೆ, ಈ ದೇಶದಲ್ಲಿ ಕಾನೂನಿನ ಆಳ್ವಿಕೆ ಇನ್ನೂ ಇದೆಯೇ?

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...