ಆಪರೇಷನ್ ಕಮಲ: ಮಣಿಪುರದ ಶಾಸಕರನ್ನು ವಿಧಾನಸಭೆಗೆ ಪ್ರವೇಶಿಸದಂತೆ ಹೈಕೋರ್ಟ್ ತೀರ್ಪು

ಮಣಿಪುರದಲ್ಲಿ ನಡೆದಿದ್ದ ಆಪರೇಷನ್ ಕಮಲದಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದ ಏಳು ಶಾಸಕರನ್ನು ಇಂಫಾಲ್ ಶಾಸಕಾಂಗ ಸಭೆಗೆ ಪ್ರವೇಶಿಸುವುದನ್ನು ಮಣಿಪುರ ಹೈಕೋರ್ಟ್ ನಿರ್ಬಂಧಿಸಿದೆ.

ಮುಂದಿನ ಆದೇಶದವರೆಗೆ ಶಾಸಕರ ಪ್ರವೇಶವನ್ನು ತಡೆಯುವಂತೆ ನ್ಯಾಯಾಲಯವು ರಾಜ್ಯ ವಿಧಾನಸಭಾ ಸ್ಪೀಕರ್ ಯುನ್ನಮ್ ಖೇಮ್‌ಚಂದ್ ಅವರಿಗೆ ನಿರ್ದೇಶನ ನೀಡಿದೆ. ತೀರ್ಪು ಹಾಗೂ ಆದೇಶವನ್ನು ತನಗೆ ತಿಳಿಸಿದ ದಿನದಿಂದ ಮೂರು ತಿಂಗಳೊಳಗೆ ಸ್ಪೀಕರ್ ಅರ್ಜಿಗಳನ್ನು ನಿರ್ಧರಿಸಬೇಕಾಗಿತ್ತು ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು ತಮ್ಮ ಮುಂದೆ ಸಲ್ಲಿಸಿದ್ದ ಅರ್ಜಿಗಳನ್ನು ಸಮಂಜಸವಾದ ಸಮಯದೊಳಗೆ ನಿರ್ಧರಿಸಲು ಸ್ಪೀಕರ್ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

2017 ರಲ್ಲಿ ನಡೆದ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ 60 ಸದಸ್ಯ ಬಲವಿರುವ ವಿಧಾನ ಸಭೆಯಲ್ಲಿ ಕಾಂಗ್ರೆಸ್‌ 28 ಶಾಸಕರನ್ನು ಹೊಂದಿರುವ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸುಮಾರು ಎಂಟು ಕಾಂಗ್ರೆಸ್ ಶಾಸಕರು ನಂತರ ಪಕ್ಷವನ್ನು ತೊರೆದರು ಬಿಜೆಪಿ ಸೇರಿದ್ದರು. ಅಲ್ಲಿ ಬಿಜೆಪಿ 21 ಸ್ಥಾನಗಳನ್ನು ಗೆದ್ದಿತ್ತು.

ಬಿಜೆಪಿಯು ನ್ಯಾಷನಲ್ ಪೀಪಲ್ಸ್ ಪಾರ್ಟಿ ಹಾಗೂ ನಾಗಾ ಪೀಪಲ್ಸ್ ಫ್ರಂಟ್ ನಿಂದ ತಲಾ ನಾಲ್ಕು ಸ್ಥಾನಗಳು, ತೃಣಮೂಲ ಕಾಂಗ್ರೆಸ್‌ನಿಂದ ಒಂದು, ಲೋಕ ಜನ ಶಕ್ತಿ ಪಕ್ಷದಿಂದ ಒಂದು ಹಾಗೂ ಒಬ್ಬ ಪಕ್ಷೇತರ ಶಾಸಕನ ಬೆಂಬಲ ಪಡೆದು ಸರ್ಕಾರವನ್ನು ರಚಿಸಿತ್ತು.

ಮಣಿಪುರದ ಕಾಂಗ್ರೆಸ್ ವಕ್ತಾರ ನಿಂಗೊಂಬಮ್ ಬುಪೆಂಡಾ ಮೀಟೈ “ಸ್ಪೀಕರ್ ನ್ಯಾಯಮಂಡಳಿಯಲ್ಲಿ ಅವರ ವಿರುದ್ಧ ಬಾಕಿ ಇರುವ ಅನರ್ಹತೆ ಪ್ರಕರಣಗಳ ಅಂತಿಮ ವಿಲೇವಾರಿ ತನಕ ಮಣಿಪುರದ ವಿಧಾನಸಭೆಗೆ ಪ್ರವೇಶಿಸದಂತೆ ತಡೆದ ಮಣಿಪುರದ ಹೈಕೋರ್ಟ್ ನೀಡಿದ ತೀರ್ಪನ್ನು ನಾನು ಸ್ವಾಗತಿಸುತ್ತೇನೆ.” ಎಂದು ಹೇಳಿದ್ದಾರೆ.

“ಜೂನ್ 19 ರಂದು ಮಣಿಪುರದಿಂದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ನನಗೆ ಖಾತ್ರಿಯಿದೆ. ಮಣಿಪುರದಲ್ಲಿ ಶೀಘ್ರದಲ್ಲೇ ಕಾಂಗ್ರೆಸ್ ನೇತೃತ್ವದ ಹೊಸ ಸಮ್ಮಿಶ್ರ ಸರ್ಕಾರವನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ.” ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಮಣಿಪುರದ ಬಿಜೆಪಿ ನೇತೃತ್ವದ ಸರ್ಕಾರವು ಮಣಿಪುರ ನಾಗ ಪೀಪಲ್ ಫ್ರಂಟ್ ಇದರ ಅಧ್ಯಕ್ಷ ಅವಂಗ್ಬೋ ನಿವ್‌‌ಮೈ ಅವರನ್ನು ತನ್ನ ಮಂತ್ರಿ ಮಂಡಲಕ್ಕೆ ಸೇರಿಸುವ ಮೂಲಕ ಮಂತ್ರಿ ಪರಿಷತ್ತನ್ನು ವಿಸ್ತರಿಸಿತ್ತು.


ಓದಿ: ಬಿಜೆಪಿ ಪಕ್ಷದ ಚುನಾವಣಾ ಚಿಹ್ನೆಯನ್ನು ಬರೆಯಿರಿ. ಮಣಿಪುರ ಪ್ರಶ್ನೆಪತ್ರಿಕೆಗೆ ವ್ಯಾಪಕ ವಿರೋಧ


 

LEAVE A REPLY

Please enter your comment!
Please enter your name here