ಬಿಜೆಪಿ ಪಕ್ಷದ ಚುನಾವಣಾ ಚಿಹ್ನೆಯನ್ನು ಬರೆಯಿರಿ, ರಾಷ್ಟ್ರ ನಿರ್ಮಾಣದಲ್ಲಿ ನೆಹರೂರವರ ನಾಲ್ಕು ಮಿತಿಗಳನ್ನು ಹೆಸರಿಸಿ? ಈ ಪ್ರಶ್ನೆಗಳು ಬಿಜೆಪಿ ಅಥವಾ ಆರ್‌ಎಸ್‌ಎಸ್ ವರ್ಕಶಾಪ್‌ನಲ್ಲಿ ಕೇಳಿಬಂದವು ಅಲ್ಲ. ಬದಲಿಗೆ ಮಣಿಪುರದ ದ್ವಿತೀಯ ಪಿಯುಸಿ ಪೊಲಿಟಿಕಲ್ ಸೈನ್ಸ್ ಪ್ರಶ್ನೆಪತ್ರಿಕೆಯಲ್ಲಿರುವವು ಎಂದರೆ ನೀವು ನಂಬಲೇಬೇಕು.
ಹೌದು ಹೀಗೊಂದು ದೊಡ್ಡ ರಾದ್ಧಾಂತ ಮಣಿಪುರ ರಾಜ್ಯದಲ್ಲಿ ಉದ್ಭವಿಸಿದೆ. ಅಲ್ಲಿನ ದ್ವಿತೀಯ ಪಿ.ಯು.ಸಿಯ ಪ್ರಶ್ನೆ ಪತ್ರಿಕೆಯೊಂದು ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದ್ದು, ಅಲ್ಲಿನ ಹಲವು ಪ್ರಶ್ನೆಗಳು ನೆಹರೂವನ್ನು ತೆಗಳಲು, ಬಿಜೆಪಿಯನ್ನು ಹೊಗಳಲು ಬಳಕೆಯಾಗಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿವೆ.
ಪ್ರಾದೇಶಿಕ ಅಸ್ಮಿತೆಯು ರಾಷ್ಟ್ರದ ಏಕತೆಗೆ ಹೇಗೆ ಸವಾಲಾಗಬಹುದು ವಿವರಿಸಿ ಎಂಬಂತಹ ಪ್ರಶ್ನೆಗಳು ಪ್ರಶ್ನೆ ಪತ್ರಿಕೆಯಲ್ಲಿ ತೂರಿಕೊಂಡ ಕಾರಣ ಇದು ಪಕ್ಕಾ ರಾಜಕೀಯ ಉದ್ದೇಶದಿಂದ ರಚಿಸಲಾಗಿದೆ ಎಂಬ ಆರೋಪ ದೊಡ್ಡ ಮಟ್ಟದಲ್ಲಿ ಕೇಳಿಬಂದಿದೆ.
ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಈ ಕುರಿತು ಮಣಿಪುರದ ಹಲವು ವಿರೋಧ ಪಕ್ಷದ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿ ವರದಿ ಪ್ರಕಟಿಸಿದೆ. ಅದರಂತೆ, “ಅಂತಹ ಪ್ರಶ್ನೆಗಳು ವಿದ್ಯಾರ್ಥಿಗಳಲ್ಲಿ ಒಂದು ನಿರ್ದಿಷ್ಟ ರೀತಿಯ ರಾಜಕೀಯ ಮನಸ್ಥಿತಿಯನ್ನು ಹುಟ್ಟುಹಾಕುವ ಪ್ರಯತ್ನವಾಗಿವೆ” ಎಂದು ಕಾಂಗ್ರೆಸ್ ಶಾಸಕ ಮತ್ತು ಮಣಿಪುರ ಪಿಸಿಸಿ ವಕ್ತಾರ ಖಾಯ್ ಜಾಯ್ಕಿಶನ್ ಆರೋಪಿಸಿದ್ದಾರೆ.
ಶಿಕ್ಷಣವನ್ನು ರಾಜಕೀಯಗೊಳಿಸುವ ಕ್ರಿಯೆ: ಕಾಂಗ್ರೆಸ್ ನಾಯಕ
ಕೌನ್ಸಿಲ್ ಆಫ್ ಹೈಯರ್ ಸೆಕೆಂಡರಿ ಎಜುಕೇಶನ್ ಮಣಿಪುರ (ಕೋಹೆಸ್ಸೆಮ್) ಅಧ್ಯಕ್ಷ ಎಲ್ ಮಹೇಂದ್ರ ಸಿಂಗ್ ಅವರು “ಈ ವಿಷಯದ ಬಗ್ಗೆ ಪರೀಕ್ಷಾ ನಿಯಂತ್ರಕರೊಂದಿಗೆ ಮಾತನಾಡಿದ್ದೇನೆ ಮತ್ತು ಪ್ರಶ್ನೆಗಳನ್ನು ‘ಪಾರ್ಟಿ ಸಿಸ್ಟಮ್ ಇನ್ ಇಂಡಿಯಾ’ ಅಧ್ಯಾಯದಿಂದ ಹೊಂದಿಸಲಾಗಿದೆ ಎಂದು ತಿಳಿಸಲಾಯಿತು, ಇದು ಒಂದು ಶಿಕ್ಷಣವನ್ನು ರಾಜಕೀಯಗೊಳಿಸುವ ಕ್ರಿಯೆ” ಎಂದು ಹೇಳಿದ್ದಾರೆ.
ಸಿಪಿಐ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯ ಮತ್ತು ಮಾಜಿ ಶಾಸಕ ಮೊಯಿರಾಂಗ್ಥೆಮ್ ನಾರಾ, “ಅಂತಹ ಪ್ರಶ್ನೆಗಳನ್ನು ಹೊಂದಿಸುವ ವಿಧಾನವು ರಾಜಕೀಯ ಸಂಬಂಧವನ್ನು ಮಾತ್ರ ಸೂಚಿಸುತ್ತದೆ” ಎಂದು ಹೇಳಿದ್ದಾರೆ.
ಇನ್ನು ಬಹಳಷ್ಟು ಜನ ತಮ್ಮ ರಾಜಕೀಯ ಅಜೆಂಡಾವನ್ನು ಮಕ್ಕಳ ಮೇಲೆ ಹೇರಲು ಶಿಕ್ಷಣ ವ್ಯವಸ್ಥೆಯನ್ನು ಬಳಸಿಕೊಳ್ಳುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರಿಯಾದುದ್ದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಮಣಿಪುರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಎನ್ ನಿಂಬಸ್ ಸಿಂಗ್, “ರಾಷ್ಟ್ರ ನಿರ್ಮಾಣದಲ್ಲಿ ನೆಹರುರವರ ನಾಲ್ಕು ಮಿತಿಗಳನ್ನು ಹೆಸರಿಸಿ? ಎಂಬುದು ಅವರು ದೇಶದ ಮೊದಲ ಪ್ರಧಾನ ಮಂತ್ರಿಯಾಗಿದ್ದರಿಂದ ಸಂಬಂಧಿತ ಪ್ರಶ್ನೆಯಾಗಿದೆ. ಭಾರತವನ್ನು ನಿರ್ಮಿಸುವಲ್ಲಿ ನೆಹರೂ ಪಾತ್ರವಹಿಸಿದ್ದರಿಂದ, ಅವರ ನಾಯಕತ್ವದಲ್ಲಿ ವ್ಯವಸ್ಥೆಯಲ್ಲಿ ಸಕಾರಾತ್ಮಕ ಮತ್ತು ನಕರಾತ್ಮಕ ಅಂಶಗಳು ಇದ್ದಿರಬಹುದು” ಎಂದು ಸಮರ್ಥಿಸಿಕೊಂಡಿದ್ದಾರೆ.