HomeUncategorizedಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆ.ಆರ್ ಪೇಟೆ: ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸಚಿವ ನಾರಾಯಣಗೌಡ...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆ.ಆರ್ ಪೇಟೆ: ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸಚಿವ ನಾರಾಯಣಗೌಡ ಪಕ್ಷಾಂತರಕ್ಕೆ ಸಜ್ಜು?

- Advertisement -
- Advertisement -

ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರವು ಮಂಡ್ಯದಿಂದ ದೂರ ಇರುವ ಕಾರಣಕ್ಕೂ, ಹೊಳೆನರಸೀಪುರ-ಚನ್ನರಾಯಪಟ್ಟಣ ಕ್ಷೇತ್ರಗಳಿಗೆ ಹೊಂದಿಕೊಂಡಿರುವ ಕಾರಣಕ್ಕೂ ಇಲ್ಲಿನ ರಾಜಕಾರಣದ ಮೇಲೆ ದೇವೇಗೌಡರ ಕುಟುಂಬ ಹಿಡಿತ ಹೊಂದಿದೆ. ಇಲ್ಲಿಯೇ ಬಿಜೆಪಿ ಪಕ್ಷವು  2019ರ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ತನ್ನ ಖಾತೆ ತೆರೆದಿದೆ. ಈ ಬಾರಿ ಏನಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿದ್ದರೂ ಸಹ ಕ್ಷೇತ್ರದಲ್ಲಿ ಮೂರು ಪ್ರಮುಖ ಪಕ್ಷಗಳಲ್ಲಿ ಅಸ್ಥಿರತೆ ಮನೆ ಮಾಡಿದೆ. ಆ ಕುರಿತ ಚುನಾವಣಾ ಪೂರ್ವ ವಿಶ್ಲೇಷಣೆ ಇಲ್ಲಿದೆ.

ರಾಜಕೀಯ ಇತಿಹಾಸ
1952ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಸ್.ಎಂ ಲಿಂಗಪ್ಪನವರು ಕೆ.ಎಲ್ ನಂಜಪ್ಪ ನಾಡಿಗ್‌ರವರ ಎದುರು ಗೆದ್ದರು. 1957ರಲ್ಲಿ ಎಂ.ಕೆ ಬೊಮ್ಮೇಗೌಡರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿ ಎನ್.ನಂಜೇಗೌಡರ ಎದುರು ಜಯಕಂಡರು. 1962ರಲ್ಲಿ ಎನ್.ನಂಜೇಗೌಡರು ಮತ್ತೆ ಕಣಕ್ಕಿಳಿದು ಕಾಂಗ್ರೆಸ್‌ನ ಎಂ.ಕೆ ಬೊಮ್ಮೇಗೌಡರ ಎದುರು 2196 ಮತಗಳ ಅಂತರದಿಂದ ಗೆದ್ದು ಶಾಸಕರಾದರು.

1967ರಲ್ಲಿ ಕಾಂಗ್ರೆಸ್ ಎಸ್.ಎಂ ಲಿಂಗಪ್ಪನವರಿಗೆ ಟಿಕೆಟ್ ನೀಡಿತು. ಇದರಿಂದ ಅಸಮಾಧಾನಗೊಂಡ ಎಂ.ಕೆ ಬೊಮ್ಮೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯ ಸಾಧಿಸಿದರು. 1972ರಲ್ಲಿ ಕಾಂಗ್ರೆಸ್‌ನ ಎಸ್.ಎಂ ಲಿಂಗಪ್ಪನವರು ಎಂ.ಕೆ ಬೊಮ್ಮೇಗೌಡರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾದರು. 1978ರ ಚುನಾವಣೆ ವೇಳೆಗೆ ಜನತಾಪಕ್ಷ ಸೇರಿದ್ದ ಎಸ್.ಎಂ ಲಿಂಗಪ್ಪನವರು ಇಂದಿರಾ ಕಾಂಗ್ರೆಸ್ ಪಕ್ಷದ ಉಜ್ಜನಿ ಲಿಂಗೇಶ್ವರರ ಎದುರು ಗೆಲುವು ಸಾಧಿಸಿ ಮೂರನೇ ಬಾರಿಗೆ ಶಾಸಕರೆನಿಸಿಕೊಂಡರು.

1983ರಲ್ಲಿ ಸರಳ ಸಜ್ಜನಿಕೆಯ ರಾಜಕಾರಣಿ ಎನಿಸಿಕೊಂಡಿದ್ದ ವಕೀಲರಾದ ಕೊತ್ತಮಾರನಹಳ್ಳಿ ಕೃಷ್ಣರವರು ಜನತಾಪಕ್ಷದಿಂದ ಚುನಾವಣೆಗೆ ಧುಮುಕುತ್ತಾರೆ. ಆದರೆ ಅವರು ಕಾಂಗ್ರೆಸ್ ಪಕ್ಷದ ಬಳ್ಳೇಕೆರೆ ಪುಟ್ಟಸ್ವಾಮಿಗೌಡರ ಎದುರು ಸೋಲು ಕಾಣುತ್ತರೆ. 1985ರ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿದ ಕೃಷ್ಣರವರು ಪುಟ್ಟಸ್ವಾಮಿಗೌಡರನ್ನು ಮಣಿಸಿ ಮೊದಲ ಬಾರಿಗೆ ಶಾಸಕರಾಗುತ್ತಾರೆ.

1989ರಲ್ಲಿ ಚುನಾವಣೆ ಎದುರಾದಾಗ ಜನತಾ ಪಕ್ಷ ಇಬ್ಭಾಗವಾಗಿರುತ್ತದೆ. ಇಲ್ಲಿಯವರೆಗೆ ಒಕ್ಕಲಿಗರೆ ಪ್ರಮುಖ ಅಭ್ಯರ್ಥಿಗಳಾಗುತ್ತಿದ್ದ ಕೆ.ಆರ್ ಪೇಟೆಯಲ್ಲಿ ಮೊದಲ ಬಾರಿಗೆ ಕುರುಬ ಸಮುದಾಯದ ಕೆ.ಎನ್ ಕೆಂಗೇಗೌಡರು ಜನತಾಪಕ್ಷದಿಂದ ಕಣಕ್ಕಿಳಿಯುತ್ತಾರೆ. ಕೃಷ್ಣರವರು ಜನತಾದಳದಿಂದ ಸ್ಪರ್ಧಿಸುತ್ತಾರೆ. ಇವರಿಬ್ಬರ ನಡುವೆ ಮತ ವಿಭಜನೆಯಾದ ಕಾರಣದಿಂದ ಕಾಂಗ್ರೆಸ್‌ನಿಂದ ಸ್ಫರ್ಧಿಸಿದ್ದ ಪುಟ್ಟಸ್ವಾಮಿಗೌಡರು ಗೆಲುವು ಸಾಧಿಸಿ ಎರಡನೇ ಬಾರಿಗೆ ಶಾಸಕರೆನಿಸಿಕೊಳ್ಳುತ್ತಾರೆ.

1994ರಲ್ಲಿ ಜನತಾ ಪರಿವಾರ ಒಂದಾಗಿ ಜನತಾದಳದಿಂದ ಕೃಷ್ಣರವರು ಅಭ್ಯರ್ಥಿಯಾಗುತ್ತಾರೆ. ಅಸಮಾಧಾನಗೊಂಡ ಕೆ.ಎನ್ ಕೆಂಗೇಗೌಡರು ಬಿಜೆಪಿಯಿಂದ ಕಣಕ್ಕಿಳಿಯುತ್ತಾರೆ. ಕಾಂಗ್ರೆಸ್ ಪಕ್ಷವು ಹಾಲಿ ಶಾಸಕರನ್ನು ಕೈಬಿಟ್ಟು ಕೆ.ಬಿ ಚಂದ್ರಶೇಖರ್‌ರವರಿಗೆ ಟಿಕೆಟ್ ನೀಡುತ್ತದೆ. ಈ ಮೂವರ ಸ್ಪರ್ಧೆಯಲ್ಲಿ ಕೃಷ್ಣರವರು 37056 ಮತಗಳ ಭಾರೀ ಅಂತರದಲ್ಲಿ ಗೆದ್ದು ಎರಡನೇ ಬಾರಿಗೆ ಶಾಸಕರಾಗುತ್ತಾರೆ. ಆದರೆ 1996ರಲ್ಲಿ ಕೃಷ್ಣರವರು ಮಂಡ್ಯ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಕಾರಣಕ್ಕೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಹಾಗಾಗಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎ.ಬಿ ಜವರಪ್ಪ, ಜನತಾದಳದಿಂದ ಜವರಾಯಿಗೌಡ, ಬಂಡಾಯ ಅಭ್ಯರ್ಥಿಯಾಗಿ ಬಿ.ಪ್ರಕಾಶ್, ರೈತ ಸಂಘದಿಂದ ಕೆ.ಆರ್ ಜಯರಾಂ ಕಣಕ್ಕಿಳಿಯುತ್ತಾರೆ. ಎಲ್ಲರ ನಡುವೆ ಮತ ಹಂಚಿಹೋಗಿ ಪಕ್ಷೇತರ ಅಭ್ಯರ್ಥಿ ಬಿ.ಪ್ರಕಾಶ್‌ರವರು ಗೆಲುವು ಸಾಧಿಸುತ್ತಾರೆ.

ಇದನ್ನೂ ಓದಿ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವವರಾರು? ಇಲ್ಲಿದೆ ಪೂರ್ಣ ಸಮೀಕ್ಷೆ

1999ರ ಚುನಾವಣೆಯಲ್ಲಿ ಹಾಲಿ ಶಾಸಕ ಬಿ.ಪ್ರಕಾಶ್ ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯುತ್ತಾರೆ. ಜೆಡಿಎಸ್ ಪಕ್ಷವು ಬಿ.ಎಲ್ ದೇವರಾಜುರವರಿಗೆ ಟಿಕೆಟ್ ನೀಡುತ್ತದೆ. ಕಾಂಗ್ರೆಸ್ ಪಕ್ಷದಿಂದ ಕೆ.ಬಿ ಚಂದ್ರಶೇಖರ್ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ. 2004ರಲ್ಲಿಯೂ ಕೆ.ಬಿ ಚಂದ್ರಶೇಖರ್ ಮರು ಆಯ್ಕೆ ಬಯಸಿ ಕಣಕ್ಕಿಳಿಯುತ್ತಾರೆ. ಕೃಷ್ಣರವರು ರಾಜ್ಯ ರಾಜಕಾರಣಕ್ಕೆ ಮರಳಿ ಜೆಡಿಎಸ್ ಅಭ್ಯರ್ಥಿಯಾಗುತ್ತಾರೆ. ಪ್ರಕಾಶ್ ಮತ್ತೆ ಪಕ್ಷೇತರ ಅಭ್ಯರ್ಥಿಯಾಗುತ್ತಾರೆ. ಈ ಬಾರಿ ಕೃಷ್ಣರವರು ಗೆಲುವು ಸಾಧಿಸುತ್ತಾರೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ವಿಧಾನಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ’ಸ್ಪೀಕರ್ ಕೃಷ್ಣ’ ಎಂದು ಹೆಸರು ಪಡೆಯುತ್ತಾರೆ.

2008ರಲ್ಲಿ ಕೃಷ್ಣರವರು ಮರು ಆಯ್ಕೆ ಬಯಸಿ ಜೆಡಿಎಸ್‌ನಿಂದ ಕಣಕ್ಕಿಳಿಯುತ್ತಾರೆ. ಟಿಕೆಟ್ ಸಿಗದ ಪ್ರಕಾಶ್‌ರವರು ಬಿಜೆಪಿಯಿಂದ ಸ್ಪರ್ಧಿಸುತ್ತಾರೆ. ಕಾಂಗ್ರೆಸ್ ಕೆ.ಬಿ ಚಂದ್ರಶೇಖರ್‌ರವರಿಗೆ ಟಿಕೆಟ್ ನೀಡುತ್ತದೆ. ಮುಂಬೈನಿಂದ ಬಂದ ಉದ್ಯಮಿ ಕೆ.ಸಿ ನಾರಾಯಣಗೌಡ ಬಿಎಸ್‌ಪಿಯಿಂದ ಚುನಾವಣೆಗೆ ನಿಲ್ಲುತ್ತಾರೆ. ಈ ಚುನಾವಣೆಯಲ್ಲಿ ಕೆ.ಬಿ ಚಂದ್ರಶೇಖರ್ 3,056 ಮತಗಳ ಅಂತರದಿಂದ ಗೆದ್ದು ಎರಡನೇ ಬಾರಿಗೆ ಶಾಸಕರಾಗುತ್ತಾರೆ. ಕೆ.ಬಿ ಚಂದ್ರಶೇಖರ್ 48,558 ಮತಗಳನ್ನು ಪಡೆದರೆ, ಕೃಷ್ಣರವರು 45,500 ಮತಗಳನ್ನು ಪಡೆಯುತ್ತಾರೆ. ಬಿ.ಪ್ರಕಾಶ್‌ರವರು 27,131 ಮತಗಳನ್ನು ಪಡೆದರೆ ನಾರಾಯಣಗೌಡರು 10,218 ಮತಗಳನ್ನು ಪಡೆಯುತ್ತಾರೆ.

2013ರ ಚುನಾವಣೆಯಲ್ಲಿ ಕೆ.ಬಿ ಚಂದ್ರಶೇಖರ್ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆ. ಕೆ.ಸಿ ನಾರಾಯಣಗೌಡರು ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಇದರಿಂದ ಸಿಟ್ಟಿಗೆದ್ದ ಕೃಷ್ಣರವರು ಪಕ್ಷೇತರ ಅಭ್ಯರ್ಥಿಯಾಗುತ್ತಾರೆ. ಮೂವರ ನಡುವಿನ ಕದನದಲ್ಲಿ ಕೆ.ಸಿ ನಾರಾಯಣಗೌಡರು 9,243 ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಶಾಸಕರಾಗುತ್ತಾರೆ. ಅವರು 56,784 ಮತಗಳನ್ನು ಪಡೆದರೆ, ಕೆ.ಬಿ ಚಂದ್ರಶೇಖರ್ 47,541 ಮತ ಗಳಿಸುತ್ತಾರೆ. ಕೃಷ್ಣರವರಿಗೆ 37,764 ಮತಗಳು ಲಭಿಸುತ್ತವೆ.

2018ರ ಚುನಾವಣೆಗೆ ಮತ್ತೆ ಕೆ.ಸಿ ನಾರಾಯಣಗೌಡರು ಜೆಡಿಎಸ್ ಅಭ್ಯರ್ಥಿಯಾಗುತ್ತಾರೆ. ಕಾಂಗ್ರೆಸ್ ಕೆ.ಬಿ ಚಂದ್ರಶೇಖರ್‌ಗೆ ಟಿಕೆಟ್ ನೀಡುತ್ತದೆ. 88,016 ಮತಗಳನ್ನು ಪಡೆಯುವ ನಾರಾಯಣಗೌಡರು ಮತ್ತೊಮ್ಮೆ ಗೆದ್ದು ಬರುತ್ತಾರೆ. ಕೆ.ಬಿ ಚಂದ್ರಶೇಖರ್ 70,879 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ ಬಿ.ಸಿ ಮಂಜು ಕೇವಲ 9,819 ಮತಗಳಿಗೆ ಸೀಮಿತರಾಗುತ್ತಾರೆ. ಆದರೆ ಕೆ.ಸಿ ನಾರಾಯಣಗೌಡರು ಆಪರೇಷನ್ ಕಮಲದ ಬಲೆಗೆ ಬೀಳುತ್ತಾರೆ. ಹಾಗಾಗಿ 2019ರಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗುತ್ತಾರೆ. ಜೆಡಿಎಸ್‌ನಿಂದ ಬಿ.ಎಲ್ ದೇವರಾಜುರವರು ಅಭ್ಯರ್ಥಿಯಾಗುತ್ತಾರೆ. ಕಾಂಗ್ರೆಸ್ ಮತ್ತೆ ಕೆ.ಬಿ ಚಂದ್ರಶೇಖರ್‌ರವರಿಗೆ ಟಿಕೆಟ್ ನೀಡುತ್ತದೆ. ಬಿಜೆಪಿ ಸರ್ಕಾರದ ಮಂತ್ರಿಗಳು ಕ್ಷೇತ್ರದಲ್ಲಿ ಬೀಡುಬಿಡುತ್ತಾರೆ. ರಾಜ್ಯದ ನಾನಾ ಭಾಗಗಳಿಂದ ಆರ್‌ಎಸ್‌ಎಸ್ ಕಾರ್ಯಕರ್ತರು ಆಗಮಿಸಿ ಕ್ಷೇತ್ರದ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಾರೆ. ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷ ದುಡ್ಡಿನ ಹೊಳೆಯನ್ನು ಹರಿಸಿದ ಪರಿಣಾಮ ನಾರಾಯಣಗೌಡರು 9,731 ಮತಗಳ ಅಂತರದಿಂದ ಮೂರನೇ ಬಾರಿಗೆ ಗೆದ್ದು ಬರುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯುತ್ತದೆ. ನಾರಾಯಣಗೌಡರು ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವರಾಗುತ್ತಾರೆ.

ನಾರಾಯಣಗೌಡರು 66,094 ಮತಗಳನ್ನು ಪಡೆದರೆ, ಜೆಡಿಎಸ್‌ನ ಬಿ.ಎಲ್ ದೇವರಾಜುರವರು 56,363 ಮತಗಳನ್ನು ಪಡೆಯುತ್ತಾರೆ. ಕೆ.ಬಿ ಚಂದ್ರಶೇಖರ್ 41,665 ಸಾವಿರ ಮತಗಳಿಗೆ ಕುಸಿಯುತ್ತಾರೆ.

ಅಂದಾಜು ಜಾತಿವಾರು ಮತಗಳು

ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕುರುಬ ಸಮುದಾಯ ಎರಡನೇ ಸ್ಥಾನ ಪಡೆದಿದೆ. ಪ.ಜಾ ಮತಗಳು ಗಣನೀಯ ಸಂಖ್ಯೆಯಲ್ಲಿವೆ. ಇಲ್ಲಿಯವರೆಗೂ ಶಾಸಕರಾದವರೆಲ್ಲ ಒಕ್ಕಲಿಗ ಸಮುದಾಯದವರೇ ಆಗಿದ್ದಾರೆ.

ಒಟ್ಟು ಮತದಾರರು: 2,20,000; ಒಕ್ಕಲಿಗರು: 90,000, ಕುರುಬರು: 35,000, ಪರಿಶಿಷ್ಟ ಜಾತಿ: 34,000, ಲಿಂಗಾಯತ: 15,000, ಮುಸ್ಲಿಂ: 15,000, ಇತರೆ: 31,000

ಹಾಲಿ ಪರಿಸ್ಥಿತಿ

ಎರಡು ಅವಧಿಗೆ ಮೂರು ಬಾರಿ ಶಾಸಕರಾಗಿರುವ, ಹಾಲಿ ಕ್ರೀಡಾ ಮತ್ತು ಯುವಜನ ಸಬಲೀಕರಣ ಹಾಗೂ ಕಾರ್ಯಕ್ರಮ ಸಂಯೋಜನೆ ಸಾಂಖ್ಯಿಕ ಇಲಾಖೆ ಸಚಿವರೂ ಆಗಿರುವ ಕೆ.ಸಿ ನಾರಾಯಣಗೌಡರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಪೌರಾಡಳಿತ ಸಚಿವರಾಗಿದ್ದರೂ ಸಹ ಕೆ.ಆರ್ ಪೇಟೆ ನಗರದ, ಕ್ಷೇತ್ರದ ಅಭಿವೃದ್ದಿಗೆ ಕಿಂಚಿತ್ತೂ ಗಮನ ವಹಿಸಿಲ್ಲ ಎಂಬ ಆರೋಪ ದಟ್ಟವಾಗಿ ಕೇಳಿಬರುತ್ತಿದೆ.

ರಸ್ತೆಗಳನ್ನು ಮಾಡಿಸಿಲ್ಲ, ಆಶ್ರಯ ಮನೆಗಳನ್ನು ನಿರ್ಮಿಸಿಕೊಟ್ಟಿಲ್ಲ, ಒಳಚರಂಡಿ ವ್ಯವಸ್ಥೆ ಸರಿ ಮಾಡಿಸಿಲ್ಲ, ಚಿರತೆ ಹಾವಳಿ ತಡೆಗೆ ಸ್ಪಂದಿಸಿಲ್ಲ, ಅತಿವೃಷ್ಟಿ ನಿರ್ವಹಣೆಗೆ ತಲೆ ಕೆಡಿಸಿಕೊಂಡಿಲ್ಲ, ಸದಾ ಬೆಂಗಳೂರಿನಲ್ಲಿ ವಾಸಿಸುತ್ತಾ ಜನರ ಕೈಗೆ ಸಿಗುತ್ತಿಲ್ಲ, ಸ್ಟೇಡಿಯಂ ಒಳಗೆ ಒಳಾಂಗಣಾ ಕ್ರೀಡಾಂಗಣ ನಿರ್ಮಿಸಿ ಸ್ಟೇಡಿಯಂ ಇಲ್ಲದಂತೆ ಮಾಡಿದರು ಇತ್ಯಾದಿ ದೂರುಗಳು ಅವರ ಮೇಲಿವೆ.

ಹೇಮಾವತಿ ಹಗರಣದಲ್ಲಿ ಲೂಟಿ ಹೊಡೆದ ಹಣದಲ್ಲಿ ಉಪಚುನಾವಣೆ ಗೆದ್ದ ಆರೋಪ!
1,012 ಕೋಟಿ ರೂ ವೆಚ್ಚದ ಹೇಮಾವತಿ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿಯಲ್ಲಿ ಸುಮಾರು 500 ಕೋಟಿಗೂ ಹೆಚ್ಚಿನ ಹಣ ಗುಳುಂ ಮಾಡಲಾಗಿದೆ. ಏಕೆಂದರೆ ಕಾಮಗಾರಿ ಮುಗಿದ ಒಂದೇ ವರ್ಷದಲ್ಲಿ ನಾಲೆಗಳು ದುರಸ್ತಿಗೆ ಬಂದಿವೆ!. ಈ ಕಾಮಗಾರಿಗೆ 253 ಕೋಟಿ ರೂಪಾಯಿಯ ಬಾಬ್ತಿನ ಗ್ರ್ಯಾವೆಲ್ ಮಣ್ಣು ತಂದಿರುವುದಾಗಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಆದರೆ ಒಂದು ಹಿಡಿ ಮಣ್ಣನ್ನೂ ತರದೇ ಹಣವನ್ನು ತಿಂದು ತೇಗಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಚೌಡಹಳ್ಳಿ ಎಂಬ ಹಳ್ಳಿಯೇ ಇಲ್ಲ. ಆದರೂ ಚೌಡಹಳ್ಳಿ ಹೆಸರಿನಲ್ಲಿ ನಾಲ್ಕು ಸರ್ವೇ ನಂಬರ್‌ಗಳನ್ನು ಸೃಷ್ಟಿಸಿ, ಅಲ್ಲಿಂದ ಮಣ್ಣು ತಂದ ಲೆಕ್ಕ ತೋರಿಸಿ ಹಣ ಕಬಳಿಸಲಾಗಿದೆ. ಗುತ್ತಿಗೆದಾರರು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿ ನಡೆಸಿರುವ ಈ ಭ್ರಷ್ಟಾಚಾರದ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಈ ಆರೋಪ ಶಾಸಕ-ಸಚಿವ ಕೆ.ಸಿ ನಾರಾಯಣಗೌಡರ ಮೇಲೂ ಇದೆ.

ಅಲ್ಲದೆ ನಾಲೆಯ ಬದಿಗಳಲ್ಲಿ ನೀರು ಹರಿದು ಹೋಗಲು ಚರಂಡಿ ನಿರ್ಮಿಸಿದ್ದೇವೆಂದು, ಹುಲ್ಲು ಹಾಸು ಹಾಕಿದ್ದೇವೆಂದು ಮತ್ತು ಬೆಂಚ್‌ಮಾರ್ಕ್ ಕಲ್ಲುಗಳನ್ನು ಹಾಕಿದ್ದೇವೆಂದು ಸುಳ್ಳು ಹೇಳಿ ಯಾವುದೇ ಕೆಲಸ ಮಾಡದೇ 64 ಕೋಟಿ ರೂ ಬಾಚಲಾಗಿದೆ. ಇದೆಲ್ಲವೂ ನಡೆದಿದ್ದು 2019ರ ಜುಲೈನಿಂದ 2020ರ ಜುಲೈವರೆಗೆ. ಅಂದರೆ ಕೊರೊನಾ ಸಾಂಕ್ರಾಮಿಕ ಇದ್ದ ಲಾಕ್‌ಡೌನ್ ಕಾಲದಲ್ಲಿ! ಕಾಮಗಾರಿ ಮಾಡಿದ್ದೇವೆಂದು ನಕಲಿ ದಾಖಲೆ ಸೃಷ್ಟಿಸಿ ಹಣ ತಿಂದಿದ್ದಾರೆ. ಇದೇ ಹಣವನ್ನು 2019ರ ಡಿಸೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ನೀರಿನಂತೆ ಹರಿಸಿ ನಾರಾಯಣಗೌಡರು ಗೆದ್ದಿದ್ದಾರೆ ಎಂದು ರೈತಸಂಘದ ಕಾರ್ಯಕರ್ತರು ಆರೋಪಿಸುತ್ತಾರೆ.
ಆಪ್ತರಿಗಷ್ಟೇ ಕಾಮಗಾರಿಗಳ ಗುತ್ತಿಗೆ ನೀಡುತ್ತಾರೆ, ಎಲ್ಲದಕ್ಕೂ ಕಮಿಷನ್ ತೆಗೆದುಕೊಳ್ಳುತ್ತಾರೆ, ಪತ್ನಿ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದಾರೆ, ಸರ್ಕಾರಿ ಜಮೀನನ್ನು ನೂರಾರು ವರ್ಷಗಳಿಗೆ ಲೀಸ್‌ಗೆ ಪಡೆದಿದ್ದಾರೆ ಎಂಬುದು ಅವರ ಮೇಲಿರುವ ಆರೋಪ.

ಇದನ್ನೂ ಓದಿ : ಹೈದರಾಬಾದ್ ವಿವಿ ಚುನಾವಣೆ: ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್‌ನ ದಲಿತ ವಿದ್ಯಾರ್ಥಿ ಅಧ್ಯಕ್ಷರಾಗಿ ಆಯ್ಕೆ

ಚುನಾವಣೆ ಹತ್ತಿರ ಬಂದಂತೆ ನಾರಾಯಣಗೌಡರು 4ನೇ ಹಂತದ ಕುಡಿಯುವ ನೀರು, ಕೆರೆ ಅಭಿವೃದ್ದಿ, ಏತ ನೀರಾವರಿ, ಜಲಜೀವನ್ ಮಿಷನ್ ಮತ್ತು ರಸ್ತೆ ಕಾಮಗಾರಿಯಂತಹ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಅವರ ಆಪ್ತರು ಹೇಳುತ್ತಾರೆ. ಆದರೂ ನಿರೀಕ್ಷೆಗೆ ತಕ್ಕಷ್ಟು ಕೆಲಸಗಳಾಗಿಲ್ಲ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಇನ್ನು ಮೂಲ ಬಿಜೆಪಿಗರು ನಾರಾಯಣಗೌಡರನ್ನು ತಮ್ಮ ಮುಖಂಡರೆಂದು ಒಪ್ಪಿಕೊಳ್ಳುತ್ತಿಲ್ಲ. ಹಾಗಾಗಿ ಅವರು ಈ ಬಾರಿ ಬಿಜೆಪಿಯಿಂದ ನಿಂತರೆ ಗೆಲ್ಲುವುದಿಲ್ಲ ಎಂಬುದನ್ನು ಅರಿತು ಕಾಂಗ್ರೆಸ್ ಪಕ್ಷ ಸೇರಲು ತಯಾರಿ ನಡೆಸಿದ್ದಾರೆ ಎಂಬು ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ಜೆಡಿಎಸ್ ಪರಿಸ್ಥಿತಿ
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವು ಪ್ರಬಲ ಹಿಡಿತ ಹೊಂದಿದೆ. ಕೆ.ಆರ್ ಪೇಟೆ ಕ್ಷೇತ್ರದಲ್ಲಿ ದೇವೇಗೌಡರ ಕುಟುಂಬದ ಪ್ರಭಾವವೂ ಹೆಚ್ಚಿದೆ. ಆದರೂ ಇಲ್ಲಿ ಟಿಕೆಟ್ ಹಂಚಿಕೆ ಎಂಬುದು ಯಾವಾಗಲೂ ತಲೆನೋವಿನ ವಿಷಯವಾಗಿರುತ್ತದೆ. ಇಬ್ಬರಿಗೆ ಬಿ ಫಾರಂ ನೀಡುವ ಗೊಂದಲ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಷ್ಟೆಲ್ಲದರ ನಡುವೆಯೂ 2019ರ ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲಬೇಕಾಯಿತು. ಇದಕ್ಕೆ ದೇವೇಗೌಡರ ಕುಟುಂಬದ ಮಿತಿಮೀರಿದ ಹಸ್ತಕ್ಷೇಪವೇ ಕಾರಣ ಎಂದು ಜನ ಮಾತನಾಡುತ್ತಾರೆ.

ಇನ್ನು ಈ ಚುನಾವಣೆಗೆ ಬರುವುದಾದರೆ ಉದ್ಯಮಿ ಮಾಜಿ ಜಿ.ಪಂ ಸದಸ್ಯ, ಮನ್‌ಮುಲ್ ನಿರ್ದೇಶಕ ಹೆಚ್.ಟಿ ಮಂಜುರವರಿಗೆ ಜೆಡಿಎಸ್ ಪಕ್ಷ ಟಿಕೆಟ್ ಘೋಷಿಸಿದೆ. ಆ ಬೆನ್ನಲ್ಲೆ ನಾಲ್ಕೈದು ಜನ ಟಿಕೆಟ್ ಆಕಾಂಕ್ಷಿತರು ಬಂಡಾಯದ ಬಾವುಟ ಹಾರಿಸಿದ್ದಾರೆ. ತನಗೆ ಟಿಕೆಟ್ ಬೇಕೆಂದು ಕಳೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಜಿ.ಪಂ ಸದಸ್ಯ ಬಿ.ಎಲ್ ದೇವರಾಜು ಪಟ್ಟು ಹಿಡಿದಿದ್ದಾರೆ. ಜೊತೆಗೆ ಬಸ್ ಸಂತೋಷ್, ಬಸ್ ಕೃಷ್ಣೇಗೌಡ, ರಾಜಹುಲಿ ದಿನೇಶ್ ಕೂಡ ಟಿಕೆಟ್ ಕೇಳುತ್ತಿದ್ದಾರೆ. ಬಂಡಾಯ ಶಮನಕ್ಕೆ ದಳಪತಿಗಳು ಮುಂದಾಗಿದ್ದಾರೆ. ಇನ್ನು ಕೊನೆ ಕ್ಷಣಕ್ಕೆ ಟಿಕೆಟ್ ಬದಲಾಗುತ್ತದೆ, ಹೆಚ್.ಡಿ ರೇವಣ್ಣ ಅಥವಾ ಭವಾನಿ ರೇವಣ್ಣ ಜೆಡಿಎಸ್ ಅಭ್ಯರ್ಥಿಗಳಾಗುತ್ತಾರೆ ಎಂಬ ಮಾತುಗಳು ಸಹ ಹರಿದಾಡುತ್ತಿವೆ. ಆದರೆ ಅದನ್ನು ಜೆಡಿಎಸ್ ಕಾರ್ಯಕರ್ತರು ನಿರಾಕರಿಸುತ್ತಾರೆ.

ಕಾಂಗ್ರೆಸ್ ನಡೆಯೇನು?
ಕಾಂಗ್ರೆಸ್ ಪಕ್ಷವು ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಸೋತರೂ ಸಹ ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳ ದಂಡೇ ನೆರೆದಿದೆ. ಅಧಿಕೃತವಾಗಿ 6 ಜನ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು ಮತ್ತಿಬ್ಬರು ಅರ್ಜಿ ಸಲ್ಲಿಸದೇ ಲಾಬಿ ಮಾಡುತ್ತಿದ್ದಾರೆ. ಸತತ ಮೂರು ಬಾರಿ ಸೋತಿದ್ದ ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ತನಗೆ ಚುನಾವಣೆ ಸಾಕು ಎಂಬ ಮಾತುಗಳನ್ನು ಆಡುತ್ತಿದ್ದವರು ಮತ್ತೀಗ ಸಕ್ರಿಯರಾಗಿದ್ದು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಉದ್ಯಮಿ ವಿಜಯ್ ರಾಮೇಗೌಡ, ಮಾಜಿ ಶಾಸಕ ಬಿ.ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಎಂ.ಡಿ ಕೃಷ್ಣಮೂರ್ತಿ ಮತ್ತು ಕುರುಬ ಸಮುದಾಯದ ಬಿ.ನಾಗೇಂದ್ರ ಕುಮಾರ್ ಅರ್ಜಿ ಸಲ್ಲಿಸಿದ ಇತರರಾಗಿದ್ದಾರೆ.

ಹೆದ್ದಾರಿ ಟೋಲ್ ಸಂಗ್ರಹಣೆ ಉಸ್ತುವಾರಿ ಕಂಪನಿ ನಡೆಸುವ ವಿಜಯ್ ರಾಮೇಗೌಡರು ಸಮಾಜ ಸೇವೆ ಕೆಲಸಗಳಲ್ಲಿ ನಿರತವಾಗಿದ್ದು, ಈಗಾಗಲೇ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಕೆ.ಸಿ ನಾರಾಯಣಗೌಡರಿಗೆ ಹಣಬಲದಲ್ಲಿ ಸೆಡ್ಡು ಹೊಡೆಯುವ ಸಾಮರ್ಥ್ಯವಿರುವುದರಿಂದ ಇವರಿಗೆ ಕಾಂಗ್ರೆಸ್ ಟಿಕೆಟ್ ಸಿಗಬಹುದು ಎನ್ನಲಾಗಿದೆ. ಇನ್ನು ಆರ್‌ಟಿಓ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕುರುಬ ಸಮುದಾಯದ ಮಲ್ಲಿಕಾರ್ಜುನ್‌ರವರು ಸಹ ಸಮಾಜ ಸೇವೆಗೆ ಇಳಿದಿದ್ದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಒಬ್ಬ ಒಬಿಸಿ ಅಭ್ಯರ್ಥಿಗೆ ಟಿಕೆಟ್ ಕೊಡಬೇಕೆಂಬ ಕಾಂಗ್ರೆಸ್ ತೀರ್ಮಾನದಂತೆ ತಮಗೇ ಟಿಕೆಟ್ ದೊರೆಯಬಹುದೆಂದು ಮಲ್ಲಿಕಾರ್ಜುನ್ ಮತ್ತು ನಾಗೇಂದ್ರ ಕುಮಾರ್ ಆಶಾವಾದ ಹೊಂದಿದ್ದಾರೆ.

ಮತ್ತೆ ಚುನಾವಣಾ ಕಣಕ್ಕೆ ರೈತಸಂಘ
1996ರ ಉಪ ಚುನಾವಣೆಯಲ್ಲಿ ರೈತ ಮುಖಂಡರಾದ ಕೆ.ಆರ್ ಜಯರಾಂರವರು ಸ್ಪರ್ಧಿಸಿದ್ದು ಬಿಟ್ಟರೆ ಮತ್ತೆ ರೈತ ಸಂಘ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ ಈ ಬಾರಿ ರೈತ ನಾಯಕಿ ನಂದಿನಿ ಜಯರಾಂರವರು ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಕ್ಷೇತ್ರದಲ್ಲಿ ರೈತ ಸಂಘ ಪ್ರಬಲವಾಗಿದ್ದು ತನ್ನದೇ ಆದ ಒಂದಷ್ಟು ಮತಗಳನ್ನು ಹೊಂದಿದೆ.

ಬಿಎಸ್‌ಪಿ ಪಕ್ಷದಿಂದ ಬಸ್ತಿ ಪ್ರದೀಪ್‌ರವರು ಅಭ್ಯರ್ಥಿಯಾಗುವ ಬಯಕೆಯಲ್ಲಿದ್ದು, ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದಾರೆ. ಚಂದನ್‌ಗೌಡ ಎಂಬ ಯೂಟ್ಯೂಬರ್ ಸಹ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿಕೊಂಡು ಪ್ರತಿ ದಿನ ಕ್ಷೇತ್ರದ ಒಂದೊಂದು ಗ್ರಾಮಗಳಿಗೆ ಭೇಟಿ ಕೊಡುತ್ತಿದ್ದಾರೆ. ನಾನು ಚುನಾವಣೆಯಲ್ಲಿ ಹಣ, ಹೆಂಡ ಹಂಚೊಲ್ಲ, ಅಭಿವೃದ್ದಿ ಕೆಲಸ ಮಾಡುತ್ತೇನೆ ನನಗೆ ಮತ ಹಾಕಿ ಎಂದು ಮನವಿ ಮಾಡುತ್ತಿದ್ದಾರೆ.

ನಾರಾಯಣಗೌಡ ಕಾಂಗ್ರೆಸ್ ಸೇರುವರೆ?
ಕ್ಷೇತ್ರದಲ್ಲಿ ತನ್ನ ಕುರಿತು ಹಬ್ಬಿರುವ ವಿರೋಧಿ ಅಲೆಯಿಂದಾಗಿ ಸಚಿವ ನಾರಾಯಣಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಅವರು ನನಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಬೇಡ, ಶಿವಮೊಗ್ಗವೇ ಇರಲಿ ಎಂದು ಸ್ಪಷ್ಟಪಡಿಸಿರುವುದು ಬಿಜೆಪಿ ಬಿಡುತ್ತಾರೆ ಎನ್ನುವುದಕ್ಕೆ ಪುಷ್ಠಿ ಕೊಡುವಂತಿದೆ. ಆಡಳಿತ ವಿರೋಧಿ ಅಲೆ ಇರುವ ಸಂದರ್ಭದಲ್ಲಿ ಸಾಕಷ್ಟು ಕಾರ್ಯಕರ್ತರಿಲ್ಲದ ಬಿಜೆಪಿಯಿಂದ ನಿಂತು ಗೆಲ್ಲುವುದು ಕಷ್ಟ ಎಂಬುದು ಅವರ ಅರಿವಿಗೆ ಬಂದಿದೆ. ಉಪಚುನಾವಣೆಯಲ್ಲಿ ಇಡೀ ಮಂತ್ರಿಮಂಡಲ ಅವರ ಪರ ಪ್ರಚಾರಕ್ಕಿಳಿದಿತ್ತು. ಆದರೆ ಈಗಿನ ಚುನಾವಣೆಗೆ ಅವರ್‍ಯಾರು ಬರುವುದಿಲ್ಲ. ಕಾಂಗ್ರೆಸ್ ಸೇರಿದರೆ, ಸದ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಅಲೆ ಇರುವುದರಿಂದ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಮತ್ತು ಕುರುಬ ಸಮುದಾಯ ಸೇರಿದಂತೆ ಒಬಿಸಿ ಮತಗಳು ತನ್ನನ್ನು ಗೆಲುವಿನ ದಡ ಸೇರಿಸುತ್ತವೆ ಎಂದು ಅವರು ನಂಬಿದ್ದಾರೆ. ಬಿಎಸ್‌ಪಿ, ಜೆಡಿಎಸ್ ಮತ್ತು ಬಿಜೆಪಿ ನೋಡಿರುವ ಅವರು ಕೊನೆ ಆಟವಾಗಿ ಕಾಂಗ್ರೆಸ್‌ನತ್ತ ಆಸೆ ಇಟ್ಟುಕೊಂಡಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಈಗಾಗಲೇ ಟಿಕೆಟ್‌ಗಾಗಿ ಪೈಪೋಟಿಯಿದ್ದು, ನಾರಾಯಣಗೌಡರನ್ನು ಸೇರಿಸಿಕೊಂಡರೆ ಬಂಡಾಯ ಮತ್ತು ಒಳೇಟು ಕೊಡುವ ಸಾಧ್ಯತೆಗಳಿವೆ.

ಒಟ್ಟಿನಲ್ಲಿ ಕೆ.ಆರ್ ಪೇಟೆ ಕ್ಷೇತ್ರವು ರಾಜಕೀಯ ಅನಿಶ್ಚಿತತೆಗಳ ಗೂಡಾಗಿ ಪರಿವರ್ತನೆಯಾಗಿದೆ. ಇಲ್ಲಿ ಯಾವ ಸಮಯದಲ್ಲಿ ಏನಾದರೂ ಆಗಬಹುದಾಗಿದೆ. ಕಾಂಗ್ರೆಸ್ ಟಿಕೆಟ್ ಘೋಷಣೆಯಗುತ್ತಿದ್ದಂತೆ ಮತ್ತು ಚುನಾವಣೆ ಹತ್ತಿರಬಂದಂತೆ ಸಾಕಷ್ಟು ಪಕ್ಷಾಂತರ ಪರ್ವ ನಡೆಯುವ ಸಂಭವವಿದೆ. ನಾರಾಯಣಗೌಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಫೈಟ್ ನಡೆಯುತ್ತದೆ. ಆಗ ಬಿಜೆಪಿ ಮೂಲೆಗುಂಪಾಗುತ್ತದೆ. ಇಲ್ಲ ಅವರು ಬಿಜೆಪಿಯಲ್ಲಿಯೇ ಉಳಿದರೆ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಇಷ್ಟೆಲ್ಲ ಅನಿಶ್ಚಿತತೆಗಳ ನಡುವೆ ಕ್ಷೇತ್ರದ ಜೆಡಿಎಸ್ ಘೋಷಿತ ಅಭ್ಯರ್ಥಿಯಾದ ಹೆಚ್.ಟಿ ಮಂಜುರವರು ಪ್ರಚಾರದಲ್ಲಿ ನಿರತರಾಗಿದ್ದಾರೆ.

ಮುತ್ತುರಾಜು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024: ರಾಹುಲ್ ಗಾಂಧಿ ಸ್ಪರ್ಧೆಗೆ ಒತ್ತಾಯಿಸಿ ಅಮೇಠಿ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ

0
ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಇಲ್ಲಿನ ಪಕ್ಷದ ಜಿಲ್ಲಾ ಸಮಿತಿ ಕಚೇರಿ ಎದುರು ಧರಣಿ ನಡೆಸಿ, ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಬೇಕು...