Homeಕರ್ನಾಟಕಮುಷ್ಕರ ವಾಪಸ್‌ ಪಡೆದ ಸರ್ಕಾರಿ ನೌಕರರ ಸಂಘ; ಎನ್‌‌ಪಿಎಸ್‌ ಹೋರಾಟಗಾರರ ವಿರೋಧ

ಮುಷ್ಕರ ವಾಪಸ್‌ ಪಡೆದ ಸರ್ಕಾರಿ ನೌಕರರ ಸಂಘ; ಎನ್‌‌ಪಿಎಸ್‌ ಹೋರಾಟಗಾರರ ವಿರೋಧ

ಸರ್ಕಾರಿ ನೌಕರರ ಸಂಘದ ನಿಲುವನ್ನು ಎನ್‌ಪಿಎಸ್‌ ನೌಕರರ ಸಂಘ ಕಟುವಾಗಿ ವಿರೋಧಿಸಿದೆ.

- Advertisement -
- Advertisement -

ರಾಜ್ಯ ಸರ್ಕಾರಿ ನೌಕರರ ವೇತನವನ್ನು ಶೇ. 17ರಷ್ಟು ಹೆಚ್ಚಳ ಮಾಡುವುದಾಗಿ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ವಾಪಸ್‌ ಪಡೆಯುತ್ತಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್‌ ಷಡಾಕ್ಷರಿ ತಿಳಿಸಿದ್ದಾರೆ. ಆದರೆ ಈ ನಿರ್ಧಾರದಿಂದ ನೌಕರರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿರುವ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಷಡಾಕ್ಷರಿ, “ನಾವು ಶೇ.40ರಷ್ಟು ವೇತನ ಹೆಚ್ಚಿಸಬೇಕು ಎಂಬ ಬೇಡಿಕೆ ಇಟ್ಟಿದ್ದೆವು. ಆದರೆ, ಸರ್ಕಾರ ತನ್ನ ಇತಿಮಿತಿಯಲ್ಲಿ ಶೇ.17ರಷ್ಟು ಹೆಚ್ಚಳ ಮಾಡಿರುವುದರಿಂದ ಮುಷ್ಕರವನ್ನು ಕೈಬಿಡಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದ್ದಾರೆ.

“ಹೊಸ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) ರದ್ಧತಿ ಕುರಿತು ಇತರೆ ರಾಜ್ಯಗಳಲ್ಲಿ ಯಾವ ರೀತಿ ನಿಯಮ ಅನುಸರಿಸಲಾಗಿದೆ, ಅದರ ಆರ್ಥಿಕ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಸರ್ಕಾರ ಸಮಿತಿಯೊಂದನ್ನು ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚನೆ ಮಾಡುವುದಾಗಿ ಭರವಸೆ ನೀಡಿದ್ದು, ಎರಡು ತಿಂಗಳು ಗುಡುವು ನೀಡಲಾಗಿದೆ. ಹಾಗಾಗಿ ಮುಖ್ಯಮಂತ್ರಿಗಳ ಭರವಸೆಗೆ ಒಪ್ಪಿದ್ದೇವೆ ಮತ್ತು ಜನಸಾಮಾನ್ಯರ ಹಿತದೃಷ್ಟಿಯಿಂದಲೂ ಮುಷ್ಕರ ಕೈಬಿಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ಕಾರಿ ನೌಕರರ ಸಂಘದ ನಿಲುವಿಗೆ ಎನ್‌ಪಿಎಸ್‌ ಹೋರಾಟಗಾರರ ವಿರೋಧ

ಸರ್ಕಾರಿ ನೌಕರರ ಸಂಘದ ನಿಲುವನ್ನು ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ್‌ ಟೀಕಿಸಿದ್ದಾರೆ. “ಇದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ರಾಜ್ಯದ ಆರು ಲಕ್ಷ ಸರ್ಕಾರಿ ನೌಕರರು ಮತ್ತು ಎನ್‌ಪಿಎಸ್‌ ನೌಕರರಿಗೆ ಮಾಡಿರುವ ನಂಬಿಕೆ ದ್ರೋಹ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಕನಿಷ್ಟ ಒಂದು ಬೇಡಿಕೆಯಾದರೂ ಖಡಾಖಂಡಿತವಾಗಿ ಈಡೇರಿಸಿಕೊಳ್ಳುವ ಮಟ್ಟಿಗೆ ಪಟ್ಟು ಹಿಡಿಯುತ್ತಾರೆ ಎಂದು ಭಾವಿಸಲಾಗಿದ್ದ ನೌಕರರಿಗೆ ಅನ್ಯಾಯ ಮಾಡಿದ್ದಾರೆ. ಶೇ.17ವೇತನ ಹೆಚ್ಚಳ ಮಾಡಿರುವುದನ್ನು ಒಪ್ಪಲಾಗುವುದಿಲ್ಲ. ಕನಿಷ್ಟ ಶೇ.30 ಆದರೂ ವೇತನವನ್ನು ಹೆಚ್ಚಿಸಬೇಕಿತ್ತು” ಎಂದಿದ್ದಾರೆ.

“ಎನ್‌ಪಿಎಸ್‌ ರದ್ದುಪಡಿಸುವ ಕುರಿತು ಸಮಿತಿ ರಚಿಸಿದ್ದೇವೆ ಎಂದಿದ್ದಾರೆ. ಆದರೆ, ಸರ್ಕಾರವೇ ರಚಿಸಿದ ಸಮಿತಿಗಳು ಹೇಗೆ ನೆಲ ಕಚ್ಚುತ್ತವೆ ಎಂಬುದನ್ನು ಈ ಹಿಂದೆ ನೋಡಿದ್ದೇವೆ. ಹಾಗಾಗಿ ಎನ್‌ಪಿಎಸ್‌ ನೌಕರರ ಸಂಘದ ಹೋರಾಟದ ಧ್ವನಿ ದೊಡ್ಡದಾಗಲಿದೆ, ನಮ್ಮ ತೀರ್ಮಾನದಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಸರ್ಕಾರ ಎನ್‌ಪಿಎಸ್‌ ನೌಕರರು ನೀಡಿದ್ದ ʼವೋಟ್‌ ಫಾರ್‌ ಒಪಿಎಸ್‌ʼ ಅವಕಾಶವನ್ನು ಕಳೆದುಕೊಂಡಿದೆ ಎಂದು ಸ್ಪಷ್ಟವಾಗಿ ಹೇಳುತ್ತೇನೆ” ಎಂದು ತಿಳಿಸಿದ್ದಾರೆ.

ಹೆಚ್ಚಳದ ನೆಪದಲ್ಲಿ ತೆರಿಗೆ ಭಾರ

’ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ’ದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ದಯಾನಂದ್ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ, “17% ಹೆಚ್ಚಿಸುವ ನಿರ್ಧಾರ ನೌಕರರ ಹಿತಾಸಕ್ತಿಯನ್ನು ಕಾಪಾಡುವುದಿಲ್ಲ. 1.04.2022ರಿಂದಲೇ 7ನೇ ವೇತನ ಆಯೋಗ ಜಾರಿ ಮಾಡಬೇಕಿತ್ತು. ನಾವು ಶೇ. 40ರಷ್ಟು ಹೆಚ್ಚಳವನ್ನು ಮಾಡಬೇಕೆಂದು ಒತ್ತಾಯಿಸಿದ್ದೆವು. ಆದರೆ ಈ 17%ರಷ್ಟು ಹೆಚ್ಚಳ ಮಾಡಿ ತೆರಿಗೆ ಭಾರ ಹೊರಿಸಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ತೆರಿಗೆಗೆ ಒಳಪಡದ ನೌಕರರು ಮುಂದಿನ ವರ್ಷದಿಂದ ತೆರಿಗೆ ವ್ಯಾಪ್ತಿಗೆ ಬರುತ್ತಾರೆ. ಉದಾಹರಣೆಗೆ ಸುಮಾರು 35 ಸಾವಿರ ರೂ. ಸಂಬಳ ತೆಗೆದುಕೊಳ್ಳುತ್ತಿರುವವರಿಗೆ ಆರು ಸಾವಿರ ರೂ. ಹೆಚ್ಚಾಗುತ್ತದೆ ಎಂದು ಭಾವಿಸೋಣ. ಹೀಗಾದಾಗ ಶೇ. 13ರಿಂದ 14 ಸಾವಿರ ಟ್ಯಾಕ್ಸ್‌ ಕಟ್ಟಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

“ಎನ್‌ಪಿಎಸ್‌ ವಿಚಾರವಾಗಿ ಕಮಿಟಿ ಮಾಡುವುದಾಗಿ ಹೇಳುತ್ತಿದ್ದಾರೆ. 2018ರಲ್ಲಿ ಮಾಡಿದ ಕಮಿಟಿ ಏನನ್ನೂ ತೀರ್ಮಾನ ಮಾಡಿಲ್ಲ. ಮತ್ತೆ ಕಮಿಟಿ ಮಾಡುವ ಪ್ರಸ್ತಾಪ ಬಂದಿದೆ. ಅಂದರೆ ನೌಕರರ ಪರವಾದ ಉದ್ದೇಶವೇ ಸರ್ಕಾರಕ್ಕೆ ಇಲ್ಲ ಎಂಬುದು ಸ್ಪಷ್ಟ” ಎಂದರು.

“ಜವಾಬ್ದಾರಿಯುತವಾದ ಸರ್ಕಾರ ಮೂಗಿನ ಮೇಲೆ ತುಪ್ಪ ಸವರುವ ಕೆಲಸ ಮಾಡಬಾರದು. ಸರ್ಕಾರದ ನಿರ್ಧಾರಕ್ಕೆ ಸರ್ಕಾರಿ ನೌಕರರ ಸಂಘ ಬದ್ಧವಾಗಿರುವಂತೆ ಕಾಣುತ್ತಿದೆ. ಹೀಗಾಗಿ ಹೋರಾಟವನ್ನು ವಾಪಸ್‌ ಪಡೆದಿದ್ದಾರೆ. ಷಡಾಕ್ಷರಿಯವರು ನಾಟಕ ಮಾಡಿದ್ದಾರೆಂದೇ ನಾವು ಭಾವಿಸುತ್ತೇವೆ” ಎಂದು ಹೇಳಿದರು.

“ನಾವು ಗಲಾಟೆ ಮಾಡಿದಂತೆ ವರ್ತಿಸುತ್ತೇವೆ, ನೀವು ಪರಿಹಾರ ನೀಡಿದಂತೆ ವರ್ತಿಸಿ ಎಂಬಂತಿದೆ ಈ ಪ್ರಹಸನ. ನೀವು ಕೊಟ್ಟಂತೆ ಮಾಡಿ, ನಾವು ಇಸ್ಕೊಂಡಂತೆ ಮಾಡುತ್ತೇವೆ ಎಂಬಂತೆ ಸರ್ಕಾರಿ ನೌಕರರ ಸಂಘ ವರ್ತಿಸಿದೆ. ಆರು ಸಾವಿರ ಹೆಚ್ಚಿಸಿ ಎರಡು ಪಟ್ಟು ತೆರಿಗೆ ವಸೂಲಿ ಮಾಡುವುದರಲ್ಲಿ ಅರ್ಥವಿದೆಯೇ?” ಎಂದು ಪ್ರಶ್ನಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...