Homeಮುಖಪುಟಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯ ಪುತ್ರನಿಗೆ ಬಿಜೆಪಿ ಟಿಕೆಟ್‌ ನೀಡಿರುವುದನ್ನು ಸಮರ್ಥಿಸಿಕೊಂಡ ನಿರ್ಮಲಾ ಸೀತಾರಾಮನ್‌

ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯ ಪುತ್ರನಿಗೆ ಬಿಜೆಪಿ ಟಿಕೆಟ್‌ ನೀಡಿರುವುದನ್ನು ಸಮರ್ಥಿಸಿಕೊಂಡ ನಿರ್ಮಲಾ ಸೀತಾರಾಮನ್‌

- Advertisement -
- Advertisement -

ಕುಸ್ತಿ ಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಪುತ್ರ ಕರಣ್ ಸಿಂಗ್‌ಗೆ ಕೈಸರ್ ಗಂಜ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಿರುವ ಬಿಜೆಪಿಯ ನಿರ್ಧಾರವನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಸಮರ್ಥಿಸಿಕೊಂಡಿದ್ದಾರೆ.

ಪುಣೆಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌,  ಕೆಲವರ ತಂದೆ, ತಾಯಿ ಅಥವಾ ಚಿಕ್ಕಪ್ಪನ ಮೇಲೆ ಗಂಭೀರ ಅಪರಾಧಗಳ ಆರೋಪವಿದ್ದರೂ ಅವರಿಗೆ ಟಿಕೆಟ್‌ ನೀಡಲಾಗಿದೆ. ಎಲ್ಲಾ ಪಕ್ಷಗಳು ಅದನ್ನು ಮಾಡುತ್ತವೆ. ಶಿಕ್ಷೆಗೊಳಗಾದವರ ಮಕ್ಕಳಿಗೂ ಟಿಕೆಟ್ ಸಿಗುತ್ತದೆ. ಇಲ್ಲಿ ಬ್ರಿಜ್ ಭೂಷಣ್ ವಿರುದ್ಧ ಇನ್ನೂ ಏನೂ ಸಾಬೀತಾಗಿಲ್ಲ. ಮತ್ತೇಗೆ ಅವರನ್ನು ತಪ್ಪಿತಸ್ಥ ಎಂದು ಹೇಳುವುದು ಎಂದು ಪ್ರಶ್ನಿಸಿದ್ದಾರೆ.

ಕರಣ್ ಸಿಂಗ್‌ಗೆ ಕೈಸರ್ ಗಂಜ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಿರುವ ಬಿಜೆಪಿಯ ನಿರ್ಧಾರವನ್ನು  ಭಾರತೀಯ ಕುಸ್ತಿಪಟುಗಳು ಟೀಕಿಸಿದ್ದರು, ವಿಶೇಷವಾಗಿ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರು ಕರಣ್ ಅವರನ್ನು ಕಣಕ್ಕಿಳಿಸುವ ಬಿಜೆಪಿ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

ಸಾಕ್ಷಿ ಮಲಿಕ್ ಈ ಬಗ್ಗೆ ಪ್ರತಿಕ್ರಿಯಿಸಿ, ಭಾರತದ ಹೆಣ್ಣುಮಕ್ಕಳು ಸೋತಿದ್ದಾರೆ, ಬ್ರಿಜ್ ಭೂಷಣ್ ಗೆದ್ದಿದ್ದಾರೆ ಎಂದು ಹೇಳಿದ್ದರು. ನಾವೆಲ್ಲರೂ ನಮ್ಮ ವೃತ್ತಿಜೀವನವನ್ನು ಪಣಕ್ಕಿಟ್ಟಿದ್ದೇವೆ, ಬೀದಿಯಲ್ಲಿ ದಿನಗಳನ್ನು ಕಳೆದಿದ್ದೇವೆ. ಬ್ರಿಜ್ ಭೂಷಣ್ ಅವರನ್ನು ಇನ್ನೂ ಬಂಧಿಸಿಲ್ಲ. ನಾವು ಕೇಳಿದ್ದು ನ್ಯಾಯ ಮಾತ್ರ. ಆದರೆ ಬಂಧಿಸುವುದು ಬಿಡಿ, ಅವರ ಮಗನಿಗೆ ಟಿಕೆಟ್ ಸಿಕ್ಕಿದ್ದು ಅದು ಭಾರತದ ಕೋಟ್ಯಂತರ ಹೆಣ್ಣುಮಕ್ಕಳ ಉತ್ಸಾಹವನ್ನು ಛಿದ್ರಗೊಳಿಸಿದೆ, ಅವರ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಒಬ್ಬ ವ್ಯಕ್ತಿಯ ಮುಂದೆ ಸರ್ಕಾರ ಏಕೆ ದುರ್ಬಲವಾಗಿದೆ? ನಿಮಗೆ ಬೇಕಾಗಿರುವುದು ಭಗವಾನ್ ರಾಮನ ಹೆಸರಿನಲ್ಲಿ ಮತಗಳು, ಅವರ ನೀತಿಗಳನ್ನು ಅನುಸರಿಸುವ ಬಗ್ಗೆ ನಿಮ್ಮ ನಿಲುವು ಏನು? ಎಂದು ಪ್ರಶ್ನಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ಖ್ಯಾತ ಕುಸ್ತಿಪಟು ಬಜರಂಗ್ ಪುನಿಯ, ಬಿಜೆಪಿ ಮಹಿಳೆಯರ ಸುರಕ್ಷತೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗೂ ಪರಿವಾರವಾದ ಅಥವಾ ವಂಶಪಾರಂಪರ್ಯ ರಾಜಕಾರಣ ಆಡಳಿತಾರೂಢ ಬಿಜೆಪಿಯಲ್ಲೂ ಬೇರೂರಿದೆ ಎಂದು ಹೇಳಿದ್ದರು.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಲು, ಬೆದರಿಸಲು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥರಾಗಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಸಾಕ್ಷಿ ಮಲಿಕ್‌, ವಿನೇಶ್ ಫೋಗಟ್, ಬಜರಂಗ್ ಪುನಿಯ ಮುಂಚೂಣಿಯಲ್ಲಿದ್ದರು.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಗಂಭೀರವಾದ ಲೈಂಗಿಕ ದೌರ್ಜನ್ಯದ ಆರೋಪವಿದೆ. ಆದ್ದರಿಂದ ಕಳೆದ ಕೆಲವು ತಿಂಗಳುಗಳಿಂದ ಯುಪಿಯ ಕೈಸರ್‌ಗಂಜ್ ಕ್ಷೇತ್ರಕ್ಕೆ ಬಿಜೆಪಿಯ ಈ ಬಾರಿಯ ಆಯ್ಕೆ ಯಾರೆಂಬುದರ ಬಗ್ಗೆ ಚರ್ಚೆ ನಡೆದಿತ್ತು. ಈ ಕ್ಷೇತ್ರದಲ್ಲಿ ಬ್ರಿಜ್ ಭೂಷಣ್ ಸಾಕಷ್ಟು ಪ್ರಭಾವ ಹೊಂದಿರುವ ಹಿನ್ನೆಲೆ ಬಿಜೆಪಿ ಈ ಭಾರಿ ಅವರ ಪುತ್ರನಿಗೆ ಟಿಕೆಟ್‌ ನೀಡಿದೆ ಎನ್ನಲಾಗಿದೆ.

ಅಪ್ರಾಪ್ತೆ ಸೇರಿ ಕನಿಷ್ಠ ಆರು ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅಪ್ರಾಪ್ತೆಯ ಕುಟುಂಬವು ಹಿಂದೆ ಸರಿಯುವಂತೆ ಒತ್ತಡ ಹಾಕಿದ ಕಾರಣ ಆಕೆ ದೂರನ್ನು ಹಿಂಪಡೆದಿದ್ದಳು. ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಎರಡು ಎಫ್‌ಐಆರ್‌ಗಳು ಕನಿಷ್ಠ 15 ಲೈಂಗಿಕ ಕಿರುಕುಳದ ಬಗ್ಗೆ ಹೇಳುತ್ತದೆ. ಅದರಲ್ಲಿ ಅನುಚಿತ ಸ್ಪರ್ಶ, ಬೆದರಿಕೆ ಆರೋಪ ಸೇರಿದೆ. ಆದರೆ ಈ ಎಲ್ಲಾ ಆರೋಪಗಳನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ನಿರಾಕರಿಸಿದ್ದಾರೆ.

ಬ್ರಿಜ್ ಭೂಷಣ್ ಪ್ರಕರಣದಲ್ಲಿ ಬಿಜೆಪಿಯು ಲೈಂಗಿಕ ದೌರ್ಜನ್ಯ ಆರೋಪಿಯ ಬೆಂಬಲಕ್ಕೆ ನಿಂತಿರುವುದು ಆರಂಭದಿಂದಲೂ ಕಂಡು ಬಂದಿತ್ತು, ಗಂಭೀರ ಆರೋಪಗಳ ಹೊರತಾಗಿಯೂ  ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಸ್ಥಾನದಿಂದ ಬ್ರಿಜ್‌ ಭೂಷಣ್‌ಗೆ ಕೆಳಗಿಳಿಸದೆ ಕೇಂದ್ರ ಸರಕಾರ ಮೌನ ತಾಳಿತ್ತು. ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಸ್ತಿಪಟುಗಳು ದೆಹಲಿಯಲ್ಲಿ ಪ್ರತಿಭಟನೆ ಮಾಡುವಾಗ ಪೊಲೀಸರ ಮೂಲಕ ಕುಸ್ತಿಪಟುಗಳ ಮೇಲೆ ಬಲಪ್ರಯೋಗ ನಡೆಸಲಾಗಿತ್ತು. ಪಟ್ಟು ಬಿಡದೆ ಕುಸ್ತಿಪಟುಗಳು ತಮ್ಮ ಹೋರಾಟವನ್ನು ನಡೆಸಿದ ಕಾರಣ ಕೊನೆಗೆ ಬೇರೆ ಹಾದಿಯಿಲ್ಲದೆ ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಸ್ಥಾನದಿಂದ ಬ್ರಿಜ್ ಭೂಷಣ್‌ಗೆ ಕೆಳಗಿಳಿಸಲಾಗಿತ್ತು.

ಇದನ್ನು ಓದಿ: ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ‘ಸೋನ್ ಪಾಪ್ಡಿ’ಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...