HomeUncategorizedದಣಿವರಿಯದ ಹೋರಾಟಗಾರನಿಗೆ ಒಂದು ಸಲಾಮ್: ನ್ಯಾ. ಹೆಚ್.ಎನ್ ನಾಗಮೋಹನ್‌ದಾಸ್

ದಣಿವರಿಯದ ಹೋರಾಟಗಾರನಿಗೆ ಒಂದು ಸಲಾಮ್: ನ್ಯಾ. ಹೆಚ್.ಎನ್ ನಾಗಮೋಹನ್‌ದಾಸ್

- Advertisement -
- Advertisement -

ಶ್ರೀಯುತ ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿಯವರು 1940ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಸೆಂಟ್ರಲ್ ಕಾಲೇಜಿನಿಂದ ಬಿಎಸ್‌ಸಿ ಪದವಿಯನ್ನು ಪಡೆದು ಶಿಕ್ಷಕರಾಗಿ ಕೆಲಸ ಮಾಡತೊಡಗಿದರು. ಗಾಂಧೀಜಿಯವರ My Early Life’ ಕೃತಿಯನ್ನು ಓದಿ ಪ್ರಭಾವಿತರಾಗಿ ಕೈಯಲ್ಲಿದ್ದ ಕೆಲಸವನ್ನು ಮತ್ತು ಕೈತುಂಬ ಬರುತ್ತಿದ್ದ ಸಂಬಳವನ್ನು ತೊರೆದು ಚಲೇಜಾವ್ ಚಳವಳಿಯಲ್ಲಿ ಧುಮುಕಿದರು. ನಂತರ ಸ್ವಾತಂತ್ರ್ಯ ಹೋರಾಟದ ಪೂರ್ಣಾವಧಿ ಕಾರ್ಯಕರ್ತರಾಗಿ ತೊಡಗಿಸಿಕೊಂಡರು.

ಶ್ರೀ ದೊರೆಸ್ವಾಮಿಯವರು ಮತ್ತು ನನ್ನ ತಂದೆ ಹೆಬ್ಬಣಿ ನಾಗಪ್ಪನವರು ಸ್ವಾತಂತ್ರ್ಯ ಚಳವಳಿಯಲ್ಲಿ ಭುಜಕ್ಕೆ ಭುಜ ಕೊಟ್ಟು ಹೋರಾಡಿದ ಸಂಗಾತಿಗಳು. ಅನೇಕ ಕಷ್ಟ ಕಾರ್ಪಣ್ಯಗಳನ್ನು ಮತ್ತು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಒಟ್ಟಿಗೆ ಒಂದು ವರ್ಷಕಾಲ ಜೈಲುವಾಸ ಅನುಭವಿಸಿದವರು. ಇಂತಹ ಲಕ್ಷಾಂತರ ಸ್ವಾತಂತ್ರ್ಯ ಹೋರಾಟದ ಸೇನಾನಿಗಳ ತ್ಯಾಗ ಬಲಿದಾನಗಳಿಂದಲೇ ನಮಗೆ 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಲಭಿಸಿತು ಎಂಬುದನ್ನು ಮತ್ತೆ ಮತ್ತೆ ನೆನೆಯಬೇಕಿದೆ.

ಅಂದು ಇಡೀ ದೇಶದ ಜನ ಸ್ವಾತಂತ್ರ್ಯ ಬಂದದ್ದನ್ನು ಸಂಭ್ರಮಿಸಿದರು. ಆದರೆ ಮಹಾತ್ಮಗಾಂಧಿಯವರು ಈ ಸಂಭ್ರಮದಲ್ಲಿ ಭಾಗವಹಿಸಲಿಲ್ಲ. ಯಾಕೆ ಭಾಗವಹಿಸಲಿಲ್ಲ ಎಂದು ಕೇಳಿದಾಗ ಗಾಂಧಿಯವರ ಉತ್ತರ ಹೀಗಿತ್ತು: “ನನ್ನ ಜೀವನದಲ್ಲಿ ನಾನು ಎರಡು ಕನಸುಗಳನ್ನು ಕಟ್ಟಿಕೊಂಡಿರುವೆ. ಒಂದು ಭಾರತ ದೇಶ ಬ್ರಿಟಿಷರ ಸಂಕೋಲೆಗಳಿಂದ ವಿಮೋಚನೆಯಾಗಬೇಕು. ಎರಡನೆಯದು ಭಾರತ ದೇಶದ ಜನರು ಹಸಿವಿನಿಂದ, ಬಡತನದಿಂದ ಮತ್ತು ಎಲ್ಲ ರೀತಿಯ ಅಸಮಾನತೆಯಿಂದ ಮತ್ತು ಅಸ್ಪೃಶ್ಯತೆಯಿಂದ ವಿಮೋಚನೆಯಾಗಬೇಕು. ಇಂದು ಭಾರತ ದೇಶ ಬ್ರಿಟಿಷರ ದಾಸ್ಯದಿಂದ ವಿಮೋಚನೆಯಾಗಿ ನನ್ನ ಮೊದಲೇ ಕನಸು ನನಸಾಗಿದೆ. ಆದರೆ ನನ್ನ ಎರಡನೆ ಕನಸು ನನಸಾಗದೆ ನಾನು ಹೇಗೆ ಸಂಭ್ರಮಿಸಲಿ”.

ಸ್ವಾತಂತ್ರ್ಯ ಬಂದನಂತರ ದೊರೆಸ್ವಾಮಿಯವರ ಸಂಗಾತಿಗಳು ಶಾಸಕರಾಗಿ, ಸಂಸದರಾಗಿ, ಮಂತ್ರಿಗಳಾಗಿ ಅಧಿಕಾರವನ್ನು ಪಡೆದರು. ಆದರೆ ದೊರೆಸ್ವಾಮಿಯವರು ಅಧಿಕಾರಕ್ಕೆ ಆಸೆ ಪಡಲಿಲ್ಲ, ಯಾವುದೇ ಪದವಿಗೆ ನೇಮಕಾತಿಯನ್ನು ಬಯಸಲಿಲ್ಲ, ಚುನಾವಣಾ ರಾಜಕಾರಣದಿಂದ ದೂರ ಉಳಿದರು. ಮಹಾತ್ಮ ಗಾಂಧೀಜಿಯವರ ಎರಡನೇ ಕನಸನ್ನು ನನಸು ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡರು.
ಪತ್ರಕರ್ತರಾಗಿ ಜನಸಾಮಾನ್ಯರ ಜಾಗೃತಿಯನ್ನು ಹೆಚ್ಚಿಸುವ ಕೆಲಸ ಮಾಡಿದರು. ಪುಸ್ತಕ ಮಾರಾಟದಿಂದ ಬರುವ ಸ್ಪಲ್ಪ ಸಂಪಾದನೆಯಿಂದ ಸರಳ ಸಾಂಸಾರಿಕ ಬದುಕನ್ನು ನಡೆಸಿ ಸಮಾಜಕ್ಕೆ ಮಾದರಿಯಾದರು. ಸರ್ವೋದಯ ಚಳವಳಿಯ ಕಾರ್ಯಕರ್ತರಾಗಿ ಹಳ್ಳಿ ಸುತ್ತಿ ಬಡವರ ಸಮಸ್ಯೆಗಳಿಗೆ ಸ್ಪಂದಿಸಿದರು.

ನನ್ನ ಬಾಲ್ಯದಲ್ಲಿ ದೊರೆಸ್ವಾಮಿಯವರು ನಮ್ಮ ಹಳ್ಳಿ ಹೆಬ್ಬಣಿಗೆ ಬಂದು ಸರ್ವೋದಯ ದಿನಾಚರಣೆಯಲ್ಲಿ ಭಾಗವಹಿಸಿದ್ದು ನನಗೆ ನೆನಪಿದೆ. ಬಂದಾಗೆಲ್ಲ ಒಂದೆರಡು ದಿವಸ ನಮ್ಮ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ದೊರೆಸ್ವಾಮಿ, ನನ್ನ ತಂದೆ ಮತ್ತು ಇತರರು ಗಂಟೆಗಟ್ಟಲೆ ಹಲವಾರು ವಿಚಾರಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಕಡೆಯವರೆಗೂ ದೊರೆಸ್ವಾಮಿಯವರು ನಮ್ಮ ಕುಟುಂಬದ ಎಲ್ಲರಿಗೂ ಅತ್ಮೀಯರಾಗಿದ್ದರು.

ನಾನು ಬೆಂಗಳೂರಿನಲ್ಲಿ 1977ರಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದೆ. ಕಳೆದ ನಾಲ್ಕು ದಶಕಗಳ ಕಾಲ ದೊರೆಸ್ವಾಮಿಯವರ ಜೊತೆ ಅನೇಕ ಸಭೆ, ಸಮಾರಂಭ, ವಿಚಾರಸಂಕೀರ್ಣ, ಚರ್ಚೆ, ಸಂವಾದದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ನನಗೆ ಲಭ್ಯವಾಗಿತ್ತು. ಅನೇಕ ಹೋರಾಟ, ಪ್ರತಿಭಟನೆ ಮತ್ತು ಧರಣಿಗಳಲ್ಲಿ ದೊರೆಸ್ವಾಮಿಯವರ ಜೊತೆ ಭಾಗವಹಿಸುವ ಭಾಗ್ಯ ನನಗೆ ದಕ್ಕಿತ್ತು. ಪ್ರತಿ ಸಂದರ್ಭದಲ್ಲೂ ಸಿಂಹದಂತೆ ಘರ್ಜಿಸುತ್ತಿದ್ದರು. ಭ್ರಷ್ಟರ, ಭೂಗಳ್ಳರ, ಕೋಮುವಾದಿಗಳ ವಿರುದ್ಧ ಸಿಡಿದೆದ್ದರು. ಯಾವುದೇ ಜನಸಮುದಾಯಕ್ಕೆ ಅನ್ಯಾಯವಾಗಿದೆಯಂದರೆ ಅಲ್ಲಿ ದೊರೆಸ್ವಾಮಿಯವರು ಪ್ರತ್ಯಕ್ಷವಾಗುತ್ತಿದ್ದರು. ತಮ್ಮ 104 ಪ್ರಾಯದಲ್ಲಿಯೂ ದಿನನಿತ್ಯ ನಡೆಯುತ್ತಿರುವ ಜನಪರ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು. ಸೆಪ್ಟೆಂಬರ್ 2020ರಂದು ನಡೆದ ರೈತ, ದಲಿತ, ಕಾರ್ಮಿಕರ ಪ್ರತಿಭಟನಾ ಸಭೆಯಲ್ಲಿ ನಾನು ಮತ್ತು ದೊರೆಸ್ವಾಮಿಯವರು ಒಟ್ಟಿಗೆ ಭಾಗವಹಿಸಿದ್ದೆವು. ಅದು ನಾವಿಬ್ಬರೂ ಒಟ್ಟಿಗೆ ಭಾಗವಹಿಸಿದ್ದ ಕೊನೆಯ ಸಭೆ. ಅಂದು ಸಹ ದೊರೆಸ್ವಾಮಿಯವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದ ಕೃಷಿ ಕಾಯ್ದೆಗಳನ್ನು ಕ್ರಮವಾಗಿ ಟೀಕಿಸಿ, ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕೆಂದು ಅಗ್ರಹಿಸಿದರು.

2011ರಲ್ಲಿ ನನ್ನ ಮಗಳ ಮದುವೆ ನಿಶ್ಚಯವಾಯಿತು. ನನ್ನ ತಂದೆ ಬಹಳ ವರ್ಷಗಳ ಹಿಂದೆ ತೀರಿಕೊಂಡಿದ್ದರು. ತಂದೆಗೆ ಸಮಾನರಾದಂತಹ ದೊರೆಸ್ವಾಮಿಯವರ ಮನೆಗೆ ಹೋಗಿ ಒಂದು ಜೊತೆ ಖಾದಿ ಬಟ್ಟೆ ಕೊಟ್ಟು ಮದುವೆಗೆ ಬರಬೇಕೆಂದು ವಿನಂತಿಸಿಕೊಂಡೆವು. ನಮ್ಮ ಆಹ್ವಾನವನ್ನು ಮನ್ನಿಸಿ ಸಂತೋಷದಿಂದ ಮದುವೆಗೆ ಬಂದು ನೂತನ ದಂಪತಿಗಳನ್ನು ಆಶೀರ್ವದಿಸಿ ನನ್ನ ಇಡೀ ಕುಟುಂಬವನ್ನು ಸಂತೋಷಪಡಿಸಿದ್ದನ್ನು ಹೇಗೆ ಮರೆಯಲಿ.

ಕೇಂದ್ರ ಸರ್ಕಾರ ಮಹಾತ್ಮ ಗಾಂಧೀಜಿಯವರ ನೆನಪಿನಲ್ಲಿ ಒಂದು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿದೆ. ಅದೇ ರೀತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ’ಮಹಾತ್ಮಗಾಂಧಿ ಶಾಂತಿ ಪ್ರಶಸ್ತಿ’ಯನ್ನು ಸ್ಥಾಪಿಸಿದೆ. ದೇಶದ ಬೇರೆ ಯಾವ ರಾಜ್ಯದಲ್ಲೂ ಇಂತಹ ಪ್ರಶಸ್ತಿ ಸ್ಥಾಪನೆಯಾಗಿಲ್ಲ. 2017ನೇ ಸಾಲಿನ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಅವಕಾಶ ನನಗೆ ಲಭಿಸಿತು. ಆಯ್ಕೆ ಸಮಿತಿ ಸರ್ವಾನುಮತದಿಂದ ದೊರೆಸ್ವಾಮಿಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರು ಮಾತನಾಡುತ್ತ ಈ ರೀತಿ ಹೇಳಿದರು: ’ಶ್ರೀ ದೊರೆಸ್ವಾಮಿಯವರು ನನ್ನನ್ನು ಮತ್ತು ನಮ್ಮ ಸರ್ಕಾರವನ್ನು ಅನೇಕ ಬಾರಿ ಟೀಕಿಸಿ ಸಂದಿಗ್ಧ ಪರಿಸ್ಥಿತಿಗೆ ತಳ್ಳಿದರು. ಅದರೂ ಹಿರಿಯರಾದ ದೊರೆಸ್ವಾಮಿಯವರ ಟೀಕೆಗಳನ್ನು ಬದ್ಧವಾದವುವೆಂದೇ ಸ್ವೀಕಾರ ಮಾಡಿದೆವು. ಪ್ರಶಸ್ತಿಗೆ ದೊರೆಸ್ವಾಮಿಯವರ ಆಯ್ಕೆ ಸರ್ವಸಮ್ಮತವಾಗಿದೆ”. ಈ ರೀತಿ ದೊರೆಸ್ವಾಮಿಯವರು ಅಜಾತಶತ್ರುವಾಗಿ ಜೀವಿಸಿದವರು.

ತುಂಬು ಜೀವನವನ್ನು ಆರ್ಥಪೂರ್ಣವಾಗಿ ಕಳೆದ ದೊರೆಸ್ವಾಮಿಯವರು ಒಬ್ಬ ವ್ಯಕ್ತಿಯಾಗಿ ಉಳಿಯದೆ ಒಂದು ಶಕ್ತಿಯಾಗಿ, ಒಂದು ಸಂಸ್ಥೆಯಾಗಿ ಮತ್ತು ಒಂದು ಚಳವಳಿಯಾಗಿ ರೂಪುಗೊಂಡರು. ನುಡಿದಂತೆ ನಡೆದರು, ನಡೆದಂತೆ ಬಾಳಿದರು, ಬಾಳಿದಂತೆ ಬರೆದರು. ಇಂದಿನ-ಮುಂದಿನ ಯುವ ಪೀಳಿಗೆಗೆ ದೊರೆಸ್ವಾಮಿಯವರು ಸ್ಪೂರ್ತಿಯ ಚಿಲುಮೆಯಾಗಲೆಂದು ಆಶಿಸೋಣ.

ದೊರೆಸ್ವಾಮಿಯವರ ನಿಧನದಿಂದ ಭಾರತ ದೇಶ ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಸಾಮಾಜಿಕ
ನ್ಯಾಯ ಚಳವಳಿಯ ವೀರ ಯೋಧನನ್ನು ಕಳೆದುಕೊಂಡಿದೆ. ಅವರು ನಡೆದುಹೋದ
ದಾರಿಯಲ್ಲಿ ನಾವೂ ಒಂದಷ್ಟು ದೂರ ನಡೆದು ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳೋಣ.

“ನೀವು ಬಿದ್ದ ಮರವಲ್ಲ; ಬಿತ್ತಿದ ಬೀಜಗಳು. ನಿಮ್ಮಿಂದ ಸಾವಿರ ಹೂಗಳು ಅರಳಲಿ”

ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್‌ದಾಸ್
ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು, ಕರ್ನಾಟಕದಾದ್ಯಂತ ‘ಸಂವಿಧಾನ ಓದು’ ಕಾರ್ಯಕ್ರಮಗಳನ್ನು ಮುನ್ನಡೆಸಿದವರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...