ಇಂಫಾಲ್‌ನ ಪಶ್ಚಿಮ ಜಿಲ್ಲೆಯಲ್ಲಿ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿದ ನಂತರ ಮತ್ತೆ ಸೋಮವಾರ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದ್ದಾರೆ.
ನ್ಯೂ ಚೆಕ್ಕಾನ್ ಮಾರುಕಟ್ಟೆ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೊಸ ಹಿಂಸಾಚಾರವು ನಡೆದಿದೆ. ಈ ಪ್ರದೇಶದಲ್ಲಿ ಕುಕಿಗಳು, ಮೈತಿಗಳು ಮತ್ತು ಇತರ ಜನಾಂಗೀಯ ಗುಂಪುಗಳು ನೆಲೆಸುತ್ತಾರೆ.
ಸೋಮವಾರ ಬೆಳಿಗ್ಗೆ, ಕರ್ಫ್ಯೂ ಸಡಿಲಗೊಂಡಿದ್ದರಿಂದ, ಮಾಜಿ ಶಾಸಕರ ನೇತೃತ್ವದ ತಂಡ ಬಂದೂಕುಗಳೊಂದಿಗೆ ಶಸ್ತ್ರಸಜ್ಜಿತವಾಗಿ ಬಂದು ವ್ಯಾಪಾರಸ್ಥರಿಗೆ ತಮ್ಮ ಅಂಗಡಿಗಳನ್ನು ಮುಚ್ಚುವಂತೆ ಹೇಳದ್ದಾರೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
”ಮಾಜಿ ಶಾಸಕರೊಬ್ಬರು ಈ ಪಿತೂರಿಯಲ್ಲಿ ಭಾಗಿಯಾಗಿರುವುದು ಅತ್ಯಂತ ದುರದೃಷ್ಟಕರ. ಸಿಂಗಲ್ ಬ್ಯಾರೆಲ್ ಬಂದೂಕುಗಳನ್ನು ಹೊತ್ತ ಇಬ್ಬರು ಶಸ್ತ್ರಸಜ್ಜಿತ ಸಿಬ್ಬಂದಿ ಮಾರಾಟಗಾರರನ್ನು ಬೆದರಿಸಿ ಪ್ರದೇಶವನ್ನು ಖಾಲಿ ಮಾಡುವಂತೆ ಕೇಳಿಕೊಂಡರು. ಈ ಇಬ್ಬರನ್ನು ಮತ್ತು ಮಾಜಿ ಶಾಸಕರನ್ನು ವ್ಯಾಪಾರಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ” ಎಂದು ಮುಖ್ಯಮಂತ್ರಿ ಹೇಳಿದರು.
”ಈ ಪ್ರದೇಶದಲ್ಲಿ ಚರ್ಚ್ ಕಾಂಪೌಂಡ್ ಒಳಗೆ ಮನೆಗಳು ಇವೆ, ಹಿಂದೆ ಹಿಂಸಾಚಾರ ನಡೆದಾಗ ಅಲ್ಲಿದ್ದವರು ಮನೆ ಬಿಟ್ಟು ಸ್ಥಳಾಂತರಗೊಂಡಿದ್ದಾರೆ. ಇಲ್ಲಿ ಸೇನೆಯನ್ನು ನಿಯೋಜಿಸಲಾಗಿದ್ದರೂ, ಮನೆಗಳಿಗೆ ಬೆಂಕಿ ಹಚ್ಚಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
”ಕೆಲವು ಕಡೆಗಳಲ್ಲಿ ಹಿಂಸಾಚಾರದ ಘಟನೆಗಳು ಕಡಿಮೆಯಾಗಿವೆ. ಇತ್ತೀಚೆಗೆ ಯಾವುದೇ ದೊಡ್ಡ ಮಟ್ಟದ ಹಿಂಸಾಚಾರ ಅಥವಾ ಜೀವಹಾನಿಯಾಗಿಲ್ಲ. ರಾಜ್ಯದಲ್ಲಿ ಈಗಾಗಲೇ ಸೇನೆ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಒಂದುವೇಳೆ ಅಹಿತಕರ ಘಟನೆಗಳು ನಡೆದರೆ, ಈ ಸ್ಥಳಗಳಿಗೆ ತಲುಪಿ, ಹಿಂಸಾಚಾರವನ್ನು ನಿಯಂತ್ರಣಕ್ಕೆ ತರುತ್ತವೆ” ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಪರಿಶಿಷ್ಟ ಪಂಗಡಕ್ಕೆ ಮೈತಿ ಸಮುದಾಯ ಸೇರಿಸುವ ವಿಚಾರ; ಮಣಿಪುರ ಹೈಕೋರ್ಟ್ ಆದೇಶ ವಾಸ್ತವವಾಗಿ ತಪ್ಪು ಎಂದ ಸುಪ್ರೀಂ
ಸೋಮವಾರ ನಡೆದ ಘಟನೆಯಿಂದ ಕರ್ಫ್ಯೂ ಸಡಿಲಿಕೆಯ ಸಮಯವನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಕ್ಕೆ ರಾಜ್ಯ ಸರ್ಕಾರವು ಇಳಿಸಿದೆ. ಮೊದಲು ವಿಶ್ರಾಂತಿ ಅವಧಿಯು ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಇತ್ತು.
ಭಾನುವಾರ ರಾತ್ರಿ ನಡೆದ ಮತ್ತೊಂದು ಘಟನೆಯಲ್ಲಿ ಇಂಫಾಲ್ ಪಶ್ಚಿಮದಲ್ಲಿ ಮೂವರು ಗಾಯಗೊಂಡಿದ್ದಾರೆ. ”ಡಬಲ್ ಬ್ಯಾರೆಲ್ ಗನ್‌ಗಳೊಂದಿಗೆ ಸುತ್ತಾಡುತ್ತಿರುವವರನ್ನು ಪೊಲೀಸರು ಬಂಧಿಸಿದ್ದಾರೆ” ಎಂದು ಸಿಂಗ್ ಹೇಳಿದರು.
ಕಳೆದ 10 ದಿನಗಳಲ್ಲಿ ಮಣಿಪುರದಲ್ಲಿ ಪರಿಸ್ಥಿತಿ ಹೆಚ್ಚಾಗಿ ಶಾಂತಿಯುತವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು ಮತ್ತು ನಿವಾಸಿಗಳು ಶಾಂತವಾಗಿರಲು ಮತ್ತು ಸಹಜತೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡಲು ಒತ್ತಾಯಿಸಿದರು.
ಭಾನುವಾರ, ಮಣಿಪುರ ಗೃಹ ಇಲಾಖೆಯು, ಸಾಮಾಜಿಕ ಮಾಧ್ಯಮವನ್ನು ದ್ವೇಷ ಭಾಷಣಕ್ಕಾಗಿ ಬಳಸಬಹುದೆಂಬ ಆತಂಕವನ್ನು ಉಲ್ಲೇಖಿಸಿ, ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಮೇ 26 ರವರೆಗೆ ವಿಸ್ತರಿಸಿತು.
ಘಟನೆಯ ಹಿನ್ನೆಲೆ
ಮೇ 3 ರಂದು ಮಣಿಪುರ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಮೇ 3 ರಂದು ನಡೆದ ಪ್ರತಿಭಟನೆಯು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸಲು ಮೈತಿ ಸಮುದಾಯದ ಅರ್ಜಿಗಳನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.
ಮೈತಿ ಸಮುದಾಯ ರಾಜ್ಯದ ಜನಸಂಖ್ಯೆಯ 60% ರಷ್ಟಿದೆ ಮತ್ತು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ಕೇಂದ್ರೀಕೃತವಾಗಿದೆ. ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಿ ಪ್ರಜೆಗಳಿಂದ ದೊಡ್ಡ ಪ್ರಮಾಣದ ಅಕ್ರಮ ವಲಸೆಯಿಂದಾಗಿ ತೊಂದರೆಗಳನ್ನು ಎದುರಿಸುತ್ತಿದೆ ಎಂದು ಸಮುದಾಯವು ಹೇಳಿಕೊಂಡಿದೆ. ಕಾನೂನಿನ ಪ್ರಕಾರ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆಸಲು ಮೈತಿ ಸಮುದಾಯಗಳಿಗೆ ಅವಕಾಶವಿಲ್ಲ.
ಮತ್ತೊಂದೆಡೆ, ಮೈತಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ನೀಡಿದರೆ ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ ಎಂದು ಕೆಲವು ಬುಡಕಟ್ಟು ಸಮುದಾಯದವರು ಭಯಪಡುತ್ತಾರೆ.
ಮೇ 3ರಂದು ಮಣಿಪುರದ ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟವು, ಬಹುಸಂಖ್ಯಾತ ಮೈತಿ ಸಮುದಾಯವನ್ನು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು ವಿರೋಧಿಸಿ ಸಾವಿರಾರು ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಆ ಬಳಿಕ ಈಶಾನ್ಯ ರಾಜ್ಯದಲ್ಲಿ ಮೊದಲು ಹಿಂಸಾಚಾರ ಪ್ರಾರಂಭವಾಯಿತು.
ಈ ಪ್ರತಿಭಟನಾಕಾರರಲ್ಲಿ ಮಣಿಪುರದ ದೊಡ್ಡ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಕುಕಿಗಳು ಸೇರಿದ್ದಾರೆ. ಅವರು ರಾಜ್ಯ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಈ ಹಿಂದೆ ನಡೆದ ಘರ್ಷಣೆಯಲ್ಲಿ ಕನಿಷ್ಠ 73 ಜನರು ಸಾವನ್ನಪ್ಪಿದ್ದಾರೆ ಮತ್ತು 35,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.


