’ಕೈಲಾಗದವರು ಮೈಪರಚಿಕೊಂಡರು’ ಎನ್ನುವ ಗಾದೆಮಾತು ಕರ್ನಾಟಕದಲ್ಲಿ ಪ್ರಚಲಿತದಲ್ಲಿದೆ. ಈ ಮಾತುಗಳು ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋತುಸುಣ್ಣಾಗಿರುವ ಬಿಜೆಪಿಯು ಕಾಂಗ್ರೆಸ್ಸಿನ ಗ್ಯಾರಂಟಿಗಳ ಬಗ್ಗೆ ಎತ್ತಿರುವ ಮಾತುಗಳಿಗೆ ಸಲ್ಲುತ್ತವೆ. ಮತದಾರರಿಗೆ ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿರುವ ಐದು ಗ್ಯಾರಂಟಿಗಳ ಬಗ್ಗೆ ಇಲ್ಲಸಲ್ಲದ ಪ್ರಶ್ನೆಗಳನ್ನು ಅದು ಎತ್ತುತ್ತಿದೆ. ಅವರು ಹೇಳಿಕೊಟ್ಟಿದ್ದನ್ನೇ ಜಪಿಸುವ ’ಗಿಣಿರಾಮ’ ಮಾಧ್ಯಮಗಳು ಕೂಡ ಗ್ಯಾರಂಟಿಗಳ ಬಗ್ಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮುಂತಾದವರನ್ನು ತಪ್ಪುತಪ್ಪಾಗಿ ಪ್ರಶ್ನೆ ಮಾಡುತ್ತಿವೆ. ವಾಸ್ತವವಾಗಿ ಪ್ರಶ್ನೆ ಕೇಳುವುದು ಬಿಜೆಪಿ ಸಂಸ್ಕೃತಿಯಲ್ಲ. ಏಕೆಂದರೆ ಆರ್‌ಎಸ್‌ಎಸ್ ನಾಯಕರಾಗಿದ್ದ ಎಂ.ಎಸ್. ಗೋಳ್ವಾಲ್ಕರ್ ಅವರು ಈ ಬಗ್ಗೆ ಹೀಗೆ ಹೇಳಿದ್ದಾರೆ: ’ನಾವು ಒಂದು ಸಂಘಟನೆಯೊಂದರ (ಆರ್‌ಎಸ್‌ಎಸ್/ಬಿಜೆಪಿ) ಭಾಗವೆಂದು ಹೇಳಿ ಅದರ ಶಿಸ್ತನ್ನು ಒಪ್ಪಿದಾಗ ಜೀವನದಲ್ಲಿ ಆಯ್ಕೆಗಳ ಪ್ರಶ್ನೆ ಇರುವುದಿಲ್ಲ. ಹೇಳಿದಂತೆ ಮಾಡಿ, ಕಬ್ಬಡ್ಡಿ ಆಡಲು ಹೇಳಿದರೆ ಕಬ್ಬಡ್ಡಿ ಆಡಿ. ಸಭೆ ನಡೆಸಬೇಕೆಂದು ಹೇಳಿದರೆ ಸಭೆ ನಡೆಸಿ- ಅವರಿಗೆ ವಿವೇಚನಾಶಕ್ತಿ ಬೇಕಾಗಿಯೇ ಇಲ್ಲ’.
ಇಂದು ಕೂಡ ಈ ಪರಂಪರೆಯಲ್ಲಿ ಬಂದವರು ಗ್ಯಾರಂಟಿಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದು, ಅವರು ಗಿಣಿಪಾಠ ಒಪ್ಪಿಸುತ್ತಿದ್ದಾರೆಯೇ ವಿನಾ ವಿವೇಚನಾಶೀಲರಾಗಿ ಮಾತನಾಡುತ್ತಿಲ್ಲ. ಐದು ಗ್ಯಾರಂಟಿಗಳಿಗೆ ಹಣ ಎಲ್ಲಿಂದ ತರುತ್ತೀರಿ? ಅದಕ್ಕೆ ಸಾಲ ಮಾಡುತ್ತೀರೇನು? ಸಾಲ ಮಾಡಿ ರಾಜ್ಯದ ಆರ್ಥಿಕಸ್ಥಿತಿಯನ್ನು ಹಾಳು ಮಾಡುತ್ತೀರೇನು? ಅವುಗಳನ್ನು ತಾವು ನಿಜವಾಗಿ ಅನುಷ್ಠಾನಗೊಳಿಸುತ್ತೀರೇನು? ಇಂತಹ ಪ್ರಶ್ನೆಗಳನ್ನು ನೈಜ ಉದ್ದೇಶಗಳನ್ನು ಹೊಂದಿರದೆ ಕೇಳುತ್ತಿರುವುದು ಸುಲಭಕ್ಕೇ ತಿಳಯುತ್ತದೆ.
ಸಾರ್ವಜನಿಕ ಹಣಕಾಸಿನ ಪ್ರಧಾನ-ಪ್ರಥಮ ನಿಯಮ
ಸಾರ್ವಜನಿಕ ಹಣಕಾಸು ಶಾಸ್ತ್ರದ ಮೊದಲನೆಯ ಪಾಠ ಇದು: ’ಖಾಸಗಿ (ನಮ್ಮ-ನಿಮ್ಮ) ಹಣಕಾಸು ವ್ಯವಹಾರದಲ್ಲಿ ಆದಾಯವು ವೆಚ್ಚವನ್ನು ನಿರ್ಧರಿಸಿದರೆ (ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ) ಸಾಮಾಜಿಕ (ಸರ್ಕಾರಿ) ಹಣಕಾಸಿನಲ್ಲಿ ವೆಚ್ಚವು ಆದಾಯವನ್ನು ನಿರ್ಧರಿಸುತ್ತದೆ’. ಸರ್ಕಾರಗಳು ತಮ್ಮ ಬಜೆಟ್ ಸಿದ್ಧಪಡಿಸುವುದಕ್ಕೂ ಮೊದಲು ಆರ್ಥಿಕತೆಗೆ ಬೇಕಾದ ಕಾರ್ಯಕ್ರಮಗಳೇನು, ಖರ್ಚು-ವೆಚ್ಚಗಳ ಅಂದಾಜೆಷ್ಟು, ಹೊಸ ಕಾರ್ಯಕ್ರಮಗಳು ಯಾವುವು ಎಂಬುದನ್ನು ಗಣನೆ ಮಾಡುತ್ತವೆ. ಹೀಗೆ ವೆಚ್ಚದ ವಿವರ ಸಿದ್ಧವಾದ ಮೇಲೆ ಅದಕ್ಕೆ ಹಣವನ್ನು ಎಲ್ಲಿ, ಹೇಗೆ, ಎಷ್ಟು ಸಂಘಟಿಸಬೇಕು-ಸಂಗ್ರಹಿಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತಿಸುತ್ತವೆ. ಇದು ಸಾರ್ವಜನಿಕ ಹಣಕಾಸಿನ ಪ್ರತಿ ವಿದ್ಯಾರ್ಥಿಗೂ ತಿಳಿದಿರುವ ಒಂದು ನಿಯಮ. ಕಾಂಗ್ರೆಸ್ 2023ರ ವಿಧಾನಸಭೆ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಅವು ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ ಎಂದಮೇಲೆ ಅದು ಅದಕ್ಕೆ ಬೇಕಾದ ಹಣಕಾಸಿನ ಮೂಲಗಳನ್ನು ರೂಪಿಸಿಕೊಳ್ಳುತ್ತದೆ-ಹುಡುಕಿಕೊಳ್ಳುತ್ತದೆ. ಇದಕ್ಕಾಗಿ ಸಾಲ ಮಾಡಬೇಕು ಎಂದಾದರೆ ಸಾಲವನ್ನು ಮಾಡುತ್ತದೆ. ತನ್ನ ವೆಚ್ಚದ ವಿನ್ಯಾಸವನ್ನು ಬದಲಾಯಿಸುತ್ತದೆ. ಉದಾ: ಹಿಂದಿನ ಬಜೆಟ್ಟುಗಳಲ್ಲಿ ಸರ್ಕಾರಗಳು ಕಾಶಿಯಾತ್ರೆಗೆ, ದೇವರ ಗುಡಿಕಟ್ಟಲು, ಮಠಗಳಿಗೆ, ಸ್ವಾಮಿಗಳಿಗೆ, ಯೋಗಿಗಳಿಗೆ ನೀಡುತ್ತಾ ಬಂದ ಹಣವನ್ನು ಈಗ ನಿಲ್ಲಿಸಬಹುದು. ಇಲ್ಲಿ ಉಳಿತಾಯವಾದ ಹಣವನ್ನು ಗ್ಯಾರಂಟಿಗಳ ಅನುಷ್ಠಾನಕ್ಕೆ ಬಳಸಿಕೊಳ್ಳಬಹುದು. ಕರ್ನಾಟಕ ಸಂಸ್ಕೃತಿ ಪ್ರಕಾರ ಜನರ ಜೀವನೋಪಾಯವು ಆರಾಧನೆ-ಆಧ್ಯಾತ್ಮಿಕತೆಗಿಂತ ಮುಖ್ಯ.
ಅನಗತ್ಯ ದುಂದುವೆಚ್ಚವನ್ನು ಅದು ಕಡಿಮೆ ಮಾಡಬಹುದು. ಉದಾ: ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೆ ಪ್ರಧಾನಮಂತ್ರಿ ಕಾರ್ಯಕ್ರಮಕ್ಕೆ ಸರ್ಕಾರ ಮಾಡಿವ ವೆಚ್ಚ ರೂ.25 ಕೋಟಿ. ಅವರ ಬೆಳಗಾವಿ ಭೇಟಿಗೆ ಮಾಡಿದ ವೆಚ್ಚ ರೂ 10 ಕೋಟಿ. ಬೆಂಗಳೂರಿನಲ್ಲಿನ ರೋಡ್‌ಶೋಗೆ ಮಾಡಿದ್ದು ಹತ್ತಾರು ಕೋಟಿ ಖರ್ಚು. ಇಂತಹ ಅನವಶ್ಯಕ ವೆಚ್ಚವನ್ನು ಉಳಿಸಿ ಕಾಂಗ್ರೆಸ್ ಗ್ಯಾರಂಟಿಗಳಗೆ ಹಣ ಸಂಗ್ರಹಿಸಿಕೊಳ್ಳಬಹುದು (ವಿವರಗಳಿಗೆ ನೋಡಿ: ದಿ ಹಿಂದು ಬ್ಯೂರೋ, ಮಾರ್ಚ್ 24, 2023, ವಿಜಯ ಕರ್ನಾಟಕ ಏಪ್ರಿಲ್ 08, 2023). ಕಾಂಟ್ರಾಕ್ಟ್ ಕಮಿಷನ್ನಿಗಾಗಿ ಸರಿಯಿರುವ ರಸ್ತೆಗಳನ್ನು ಮತ್ತೆ ದುರಸ್ತಿ ಮಾಡುವ ನಿರ್ಮಾಣ ಕಾಮಗಾರಿ, ನಗರದ ಸೌಂದರ್‍ಯೀಕರಣ, ಒಂದು ಬಸ್ ತಂಗುದಾಣಕ್ಕೆ ಪ್ರತಿಯಾಗಿ ಅಲ್ಲೇ ಪಕ್ಕಪಕ್ಕದಲ್ಲಿ ಎರಡು-ಮೂರನ್ನು ಕಟ್ಟುವುದು ಇತ್ಯಾದಿಗಳನ್ನು ತಡೆಯಬಹುದು. ಹೀಗೆ ವಿವಿಧ ರೀತಿಯಲ್ಲಿ ಹಣವನ್ನು ಗ್ಯಾರಂಟಿ ಕಾರ್ಯಯೋಜನೆಗಳಿಗಾಗಿ ಸರ್ಕಾರ ಸಂಗ್ರಹಿಸಿಕೊಳ್ಳಬಹುದು. ವಾಡಿಕೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣದ ಕೊರತೆಯಾಗದಂತೆ ಗ್ಯಾರಂಟಿಗಳನ್ನು ಜಾರಿಗೆ ತರಲು ಅದು ಪ್ರಯತ್ನಿಸಬಹುದು.
ಒಕ್ಕೂಟದಿಂದ ’ನ್ಯಾಯ’ ದೊರಕಿಸಿಕೊಳ್ಳುವುದು
ನಮ್ಮ ಸಂವಿಧಾನದ ಒಂದು ವ್ಯವಸ್ಥೆಯ ಪ್ರಕಾರ ಐದು ವರ್ಷಗಳಿಗೊಮ್ಮೆ ರಾಷ್ಟ್ರಪತಿ ನೇಮಿಸುವ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಒಕ್ಕೂಟ ಸರ್ಕಾರ ತನ್ನ ಒಟ್ಟು ತೆರಿಗೆ ರಾಶಿಯಿಂದ ಶೇ.41ರಷ್ಟನ್ನು ದೇಶದ ಎಲ್ಲ ರಾಜ್ಯಗಳಿಗೆ ಹಂಚಬೇಕು. ಇದಲ್ಲದೆ ಅನೇಕ ರೀತಿಯಲ್ಲಿ ಒಕ್ಕೂಟ ರಾಜ್ಯಗಳಿಗೆ ಹಣಕಾಸು ನೆರವು ನೀಡುತ್ತದೆ. ಇಲ್ಲಿ ಒಕ್ಕೂಟ ಸರ್ಕಾರವು ತನ್ನ ತೆರಿಗೆ ರಾಶಿಯಿಂದ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ ವರ್ಗಾವಣೆ ಮಾಡುತ್ತಿಲ್ಲ. ಒಕ್ಕೂಟ ಸರ್ಕಾರದ 2023-24ರ ಒಟ್ಟು ತೆರಿಗೆ ರಾಶಿ ರೂ. 33.61 ಲಕ್ಷ ಕೋಟಿ. ಇದರಲ್ಲಿ ಶೇ.41ರಷ್ಟನ್ನು, ಅಂದರೆ ರೂ. 13.78 ಲಕ್ಷ ಕೋಟಿ ವರ್ಗಾವಣೆ ಮಾಡಬೇಕಾಗಿತ್ತು; ವಾಸ್ತವವಾಗಿ 2023-24ರಲ್ಲಿ ಒಕ್ಕೂಟ ವರ್ಗಾವಣೆ ಮಾಡಿದ್ದು ರೂ.10.52 ಲಕ್ಷ ಕೋಟಿ (ಶೇ.31.30). ಇಲ್ಲಿ ನಷ್ಟ ರೂ.3.26 ಲಕ್ಷ ಕೋಟಿ. ಇದರಿಂದ ರಾಜ್ಯಕ್ಕೆ ನಷ್ಟವಾಗುತ್ತದೆ. ಈ ನಷ್ಟವನ್ನು ಒಕ್ಕೂಟ ತುಂಬಿಕೊಟ್ಟರೆ ರಾಜ್ಯವು ಅದನ್ನು ಗ್ಯಾರಂಟಿ ಅನುಷ್ಠಾನಕ್ಕೆ ಬಳಸಿಕೊಳ್ಳಬಹುದು.
ಇದನ್ನೂ ಓದಿ: ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ಹೇಳಿದ್ದೇನೆ: ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ’ ಹೇಳಿಕೆಗೆ ಎಂಬಿ ಪಾಟೀಲ್ ಸ್ಪಷ್ಟನೆ
ಒಕ್ಕೂಟದ ಬಜೆಟ್ ವರ್ಗಾವಣೆಯಲ್ಲಿ ರಾಜ್ಯಕ್ಕೆ ಅನ್ಯಾಯ
ರಾಜ್ಯ ಸರ್ಕಾರದ ಬಜೆಟ್ಟಿನ ನಾಲ್ಕು ಮೂಲಗಳೆಂದರೆ ಸ್ವಂತ ತೆರಿಗೆ ಮೂಲ, ತೆರಿಗೆಯೇತರ ಮೂಲ, ಒಕ್ಕೂಟದ ತೆರಿಗೆ ರಾಶಿಯಲ್ಲಿ ಪಾಲು ಮತ್ತು ಅನುದಾನ (ಗ್ರಾಂಟ್ಸ್ ಇನ್ ಏಡ್). ಮೊದಲ ಎರಡು ರಾಜ್ಯದ ಸ್ವಂತ ಹಣಕಾಸು ಮೂಲಗಳಾಗಿದ್ದರೆ ಕೊನೆಯ ಎರಡು ಒಕ್ಕೂಟದಿಂದ ವರ್ಗಾವಣೆಯಾಗುವ ಸಂಪನ್ಮೂಲ. ಇಲ್ಲಿ ಕಳೆದ 8-10 ವರ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ; ಒಕ್ಕೂಟ ಸರ್ಕಾರ 2017-18ರಲ್ಲಿ ರಾಜ್ಯಕ್ಕೆ ವರ್ಗಾಯಿಸಿದ್ದ ಹಣ ರೂ. 47145 ಕೋಟಿ. ಇದು ರಾಜ್ಯದ ಆ ವರ್ಷದ ಒಟ್ಟು ತೆರಿಗೆ ರಾಶಿಯ ಶೇ.32.27ರಷ್ಟಿತ್ತು. ಮುಂದೆ 2023-24ರಲ್ಲಿ ವರ್ಗಾಯಿಸಿದ ಮೊತ್ತ ರೂ.50257 ಕೋಟಿ. ಆ ವರ್ಷದ ರಾಜ್ಯದ ತೆರಿಗೆ ರಾಶಿಯಲ್ಲಿ ಇದರ ಪ್ರಮಾಣ ಶೇ.22.25. ಅಂದರೆ ಒಕ್ಕೂಟದ ವರ್ಗಾವಣೆಯ ಪ್ರಮಾಣ ಕಳೆದ ಏಳು ವರ್ಷಗಳಲ್ಲಿ ಶೇ.9.82ರಷ್ಟು ಕಡಿಮೆಯಾಗಿದೆ. ಆದರೆ ಒಕ್ಕೂಟದ ತೆರಿಗೆ ರಾಶಿ 2017-18ರಲ್ಲಿ ರೂ.21.42 ಲಕ್ಷ ಕೋಟಿಯಷ್ಟಿದ್ದು, 2023-24ರಲ್ಲಿ ಇದು ರೂ.45.03 ಲಕ್ಷ ಕೋಟಿಯಾಗಿದೆ. ಇಲ್ಲಿನ ಏರಿಕೆ ಪ್ರಮಾಣ ಶೇ.110.23. ಆದರೆ ರಾಜ್ಯಕ್ಕೆ ಒಕ್ಕೂಟ ಇದೇ ಅವಧಿಯಲ್ಲಿ ಮಾಡಿದ ವರ್ಗಾವಣೆ ಏರಿಕೆ ಕೇವಲ ಶೇ.6.6. ಒಕ್ಕೂಟವು ತಾನು ಅನುಭವಿಸುತ್ತಿರುವ ಸಮೃದ್ಧತೆಯನ್ನು ರಾಜ್ಯದ ಜೊತೆ ಹಂಚಿಕೊಳ್ಳುತ್ತಿಲ್ಲ. ಇದು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ. ಇದನ್ನು ಸರಿಪಡಿಸಿದರೆ ರಾಜ್ಯಕ್ಕೆ ಹೆಚ್ಚು ಹಣಕಾಸು ದೊರೆಯುತ್ತದೆ. ಇದರಿಂದ ರಾಜ್ಯದ ಅಭಿವೃದ್ಧಿ ವೆಚ್ಚವನ್ನು ಕಡಿತ ಮಾಡದೆ ಗ್ಯಾರಂಟಿಗಳನ್ನು ಜಾರಿಗೆ ತರಬಹುದು.
ಒಕ್ಕೂಟ ತತ್ವದ ಪಾಲನೆಗೆ ಒತ್ತಾಯ
ಇಡೀ ದಕ್ಷಿಣ ಭಾರತದ ಐದು ರಾಜ್ಯಗಳಿಗೆ ಒಕ್ಕೂಟ ಸರ್ಕಾರ ತೀವ್ರ ಅನ್ಯಾಯ ಮಾಡುತ್ತಿದೆ. ಇಡೀ ದೇಶದಲ್ಲಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳು ಕೇರಳ ಮತ್ತು ತಮಿಳುನಾಡು. ಸೌಜನ್ಯಕ್ಕಾದರೂ ಒಮ್ಮೆಯೂ ಪ್ರಧಾನಮಂತ್ರಿಯಾಗಲಿ ಅಥವಾ ವಿತ್ತ ಮಂತ್ರಿಯಾಗಲಿ ಸದರಿ ರಾಜ್ಯಗಳ ಸಾಧನೆಯನ್ನು ಅಭಿನಂದಿಸಲಿಲ್ಲ. ಬದಲಾಗಿ ಅವುಗಳನ್ನು ಹಂಗಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಅತ್ಯಂತ ಹಿಂದೆ ಬಿದ್ದಿರುವ, ಕಳಪೆ ಸಾಧನೆಯ ಗುಜರಾತ್, ಉತ್ತರ ಪ್ರದೇಶ ರಾಜ್ಯಗಳ ’ಅಭಿವೃದ್ಧಿ ಮಾದರಿ’ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ದಕ್ಷಿಣ ಭಾರತದ ಐದು ರಾಜ್ಯಗಳು ಕೂಡಿ ದೇಶದ 2020-21ರಲ್ಲಿ ಜಿಡಿಪಿಗೆ ನೀಡಿದ ಕಾಣಿಕೆ ಶೇ.33ಕ್ಕಿಂತ ಅಧಿಕವಿದೆ. ಆದರೆ ಜನಸಂಖ್ಯೆಯಲ್ಲಿ ಮತ್ತು ಭೌಗೋಳಿಕ ವಿಸ್ತೀರ್ಣದಲ್ಲಿ ದಕ್ಷಿಣ ಭಾರತಕ್ಕಿಂತ ದೊಡ್ಡದಿರುವ ಉತ್ತರ ಪ್ರದೇಶ, ಬಿಹಾರ್, ಜಾರ್ಖಂಡ್, ಛತ್ತೀಸ್‌ಗಡ, ರಾಜಸ್ತಾನ್ ರಾಜ್ಯಗಳು ದೇಶದ ಜಿಡಿಪಿಗೆ ನೀಡುತ್ತಿರುವ ಕಾಣಿಕೆ ಶೇ.20.09. ಈ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿ ದಕ್ಷಿಣ ಭಾರತದ ರಾಜ್ಯಗಳಿಗೆ ಒಕ್ಕೂಟ ಅನ್ಯಾಯ ಮಾಡುತ್ತಿದೆ. (ಅಭಿವೃದ್ಧಿಯಲ್ಲಿ ಹಿಂದಿರುವ ರಾಜ್ಯಗಳನ್ನು ಮೇಲೆತ್ತಲು ಹೆಚ್ಚಿನ ಅನುದಾನ ನೀಡಬೇಕಿದ್ದರೂ, ರಾಜಕೀಯ ಕಾರಣಗಳಿಗೆ ದಕ್ಷಿಣದ ರಾಜ್ಯಗಳನ್ನು ಕಡೆಗಣಿಸುವ-ಮೂಲೆಗುಂಪು ಮಾಡುವ ನಿಟ್ಟಿನಲ್ಲಿದು ನಡೆಯಬಾರದು.) ಕೇಂದ್ರ ಸರ್ಕಾರ ಒಕ್ಕೂಟ ತತ್ವವನ್ನು ಸರಿಯಾಗಿ ಪಾಲಿಸುತ್ತಿಲ್ಲ ಹಿಂದಿ ಭಾಷೆಯ ಹೇರಿಕೆ, ನೀಟ್ ಪರೀಕ್ಷೆ, ಸಿಇಟಿ ಪರೀಕ್ಷೆ ಮುಂತಾದವುಗಳ ಮೂಲಕ ರಾಜ್ಯಗಳ ಅಧಿಕಾರವನ್ನು ಒಕ್ಕೂಟ ಕಬಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವು ದಕ್ಷಿಣದ ಎಲ್ಲ ರಾಜ್ಯಗಳನ್ನೂ ಸಂಘಟಿಸಿ ಒಕ್ಕೂಟ ಸರ್ಕಾರದಿಂದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಬೇಕಾಗಿದೆ. ಒಕ್ಕೂಟ ತತ್ವದ ಪಾಲನೆ ಸಂವಿಧಾನಬದ್ಧವಾಗಿ ನಡೆದರೆ ಗ್ಯಾರಂಟಿಗಳನ್ನು ಜಾರಿಗೆ ತರುವುದು ಕರ್ನಾಟಕಕ್ಕೆ ಕಷ್ಟವಾಗಬಾರದು.
ಗ್ಯಾರಂಟಿಗಳನ್ನು ಜಾರಿಗೊಳಿಸುವಾಗ ರಾಜ್ಯ ಸರ್ಕಾರವು ’ಸಕಾರಾತ್ಮಕ ತಾರತಮ್ಯ’ ನೀತಿಯನ್ನು ಅನುಸರಿಸಬೇಕು. ಸಾಮಾಜಿಕ ನ್ಯಾಯಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಸಿದ್ಧರಾಮಯ್ಯ-ಡಿ.ಕೆ. ಶಿವಕುಮರ್ ಅವರು ಗ್ಯಾರಂಟಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಎಲ್ಲಾ ಕುಟುಂಬಗಳಿಗೆ 200 ಯುನಿಟ್ ವಿದ್ಯುತ್ತಿಗೆ ಬದಲಾಗಿ ಬಡಕುಟುಂಬಗಳು ಬಳಸುತ್ತಿರುವ 100 ಯುನಿಟ್ ಉಚಿತ ನೀಡುವುದು ಲೇಸು. ಗೃಹಲಕ್ಷ್ಮಿಯಲ್ಲಿ ರೂ.2000 ಎಲ್ಲ ಮನೆಯೊಡತಿಯರಿಗೆ ಅಗತ್ಯವಿಲ್ಲ. ಸಾರಿಗೆ ಪ್ರಯಾಣಕ್ಕೆ ಸಂಬಂಧಿಸಿದಂತೆ ನಗರ ಪ್ರದೇಶಕ್ಕೆ ಇದನ್ನು ಸೀಮಿತಗೊಳಿಸಿದರೆ ಸಾಕು. ಸಬ್ಸಿಡಿ ಕಾರ್ಯಕ್ರಮಗಳು ಯಾವಾಗಲೂ ಸಮಾಜದ ಎಲ್ಲರಿಗೂ ಇರುವುದಿಲ್ಲ. ಸಮಾಜದಲ್ಲಿ ಅಂಚಿನಲ್ಲಿರುವ ವಂಚಿತರಿಗೆ, ಬಡ ಕಾರ್ಮಿಕರಿಗೆ, ಭೂರಹಿತ ಕೂಲಿಕಾರರಿಗೆ, ಅಲ್ಪಸಂಖ್ಯಾತರಿಗೆ ಇವು ಹೆಚ್ಚು ದೊರೆಯಬೇಕು. ಈ ಗ್ಯಾರಂಟಿಗಳ ಮೇಲುಸ್ತುವಾರಿ ಸಮರ್ಪಕವಾಗಿ ನಡೆಯಬೇಕು. ಯಾವುದೇ ಬಗೆಯ ಸೋರಿಕೆಗೆ ಅವಕಾಶವಿರಬಾರದು.
ಗ್ಯಾರಂಟಿಗಳ ಆಡಳಿತ ನಿರ್ವಹಣೆ ದೊಡ್ಡ ಸಮಸ್ಯೆ
ಗ್ಯಾರಂಟಿಗಳಿಗೆ ಹಣಕಾಸನ್ನು ಸಂಘಟಿಸುವುದು ಕಷ್ಟವಲ್ಲ. ಅದರ ಶಿಸ್ತುಬದ್ಧ ಮತ್ತು ಪರಿಣಾಮಕಾರಿ ಅನುಷ್ಠಾನ ಮುಖ್ಯ. ನಮ್ಮ ರಾಜ್ಯದ ಆಡಳಿತ ವ್ಯವಸ್ಥೆಯನ್ನಯ ಹಾಳುಗೆಡವಲಾಗಿದೆ. ಇಲ್ಲಿ ಪ್ರಾದೇಶಿಕ ಆಯಾಮವನ್ನು ಕಾಂಗ್ರೆಸ್ ಪರಿಗಣಿಸಬೇಕಾಗಿತ್ತು. ಏಕೆಂದರೆ ಬಡತನ ಹಸಿವು, ನಿರುದ್ಯೋಗ, ಅಪೌಷ್ಠಿಕತೆ ಮುಂತಾದವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಮನಾಗಿಲ್ಲ. ನೀತಿ ಆಯೋಗದ ಪ್ರಕಾರ ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಬಹುಮುಖಿ ಬಡವರ ಪ್ರಮಾಣ ಶೇ.41 ರಷ್ಟಿದ್ದರೆ ಹಾಸನ ಜಿಲ್ಲೆಯಲ್ಲಿ ಇದು ಶೇ.6.6ರಷ್ಟಿದೆ. ಯಾದಗಿರಿ ಜಿಲ್ಲೆಯಲ್ಲಿನ 6 ತಿಂಗಳುಗಳಿಂದ 59 ತಿಂಗಳು ವಯೋಮಾನದ ಒಟ್ಟು ಮಕ್ಕಳಲ್ಲಿ ಶೇ.76ರಷ್ಟು ಅನಿಮಿಯ ಎದುರಿಸುತ್ತಿದ್ದಾರೆ. ಇಲ್ಲಿ ಯಾವ ಜಿಲ್ಲೆಗೆ ಗ್ಯಾರಂಟಿಗಳು ಹೆಚ್ಚು ದೊರೆಯಬೇಕು? ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದೆ ಇವುಗಳ ಅನುಷ್ಠಾನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ.

ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು


