Homeಮುಖಪುಟಮಣಿಪುರ ಹಿಂಸಾಚಾರ: ಅಗತ್ಯ ವಸ್ತುಗಳ ಬೆಲೆ ಮುಗಿಲೆತ್ತರ!

ಮಣಿಪುರ ಹಿಂಸಾಚಾರ: ಅಗತ್ಯ ವಸ್ತುಗಳ ಬೆಲೆ ಮುಗಿಲೆತ್ತರ!

ಎಲ್‌ಪಿಜಿ ಸಿಲಿಂಡರ್‌ ಬೆಲೆ ರೂ. 2,000ಕ್ಕಿಂತ ಹೆಚ್ಚಿದ್ದರೆ, ಪೆಟ್ರೋಲ್ ಬೆಲೆ ರೂ. 250 ಆಗಿದೆ

- Advertisement -
- Advertisement -

ಮಣಿಪುರದಲ್ಲಿ ಎಸ್‌ಟಿ ಮೀಸಲಾತಿ ವಿಚಾರ ಸಂಬಂಧ ಕುಕಿಗಳು ಮತ್ತು ಮೈಥೇಯಿ ಸಮುದಾಯಗಳ ನಡುವೆ ಭುಗಿಲೆದ್ದಿರುವ ಸಂಘರ್ಷವು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿ ಪರಿಣಮಿಸಿದೆ.

ರಾಜ್ಯದ ಹಲವೆಡೆ ನಿರಂತರ ಕರ್ಫ್ಯೂ ಮುಂದುವರಿಕೆ ಆಗುತ್ತಿರುವುದರಿಂದ ಅಡುಗೆ ಅನಿಲ ಮತ್ತು ಪೆಟ್ರೋಲ್‌ನಂತಹ ಅತ್ಯಗತ್ಯ ಸರಕುಗಳು ಸುಲಭವಾಗಿ ಲಭ್ಯವಾಗುತ್ತಿಲ್ಲ. ಕಾಳಸಂತೆಕೋರರು ಸನ್ನಿವೇಶದ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದು ರಾಜ್ಯದ ಜನತೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಎಲ್‌ಪಿಜಿ ಸಿಲಿಂಡರ್‌ನ ಬೆಲೆ 2,000 ರೂ.ಗಿಂತ ಹೆಚ್ಚಿದ್ದರೆ, ಕಾಳಸಂತೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 250 ರೂ. ಏರಿಕೆ ಮಾಡಲಾಗಿದೆ.

ಅದೇ ರೀತಿ ಅಕ್ಕಿ, ಆಲೂಗಡ್ಡೆ, ಈರುಳ್ಳಿ ಮತ್ತು ಇತರ ತರಕಾರಿಗಳಂತಹ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ.

ಇಂಫಾಲ್ ಕಣಿವೆಯ ನಿವಾಸಿ ಶ್ಯಾಮಕುಮಾರ್ ಅಯೆಕ್ಪಾಕ್ ‘ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ಪ್ರತಿಕ್ರಿಯಿಸಿ, “ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಪರದಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

“ಇಲ್ಲಿನ ಜನರು ಈಗಾಗಲೇ ಹಿಂಸಾಚಾರದಿಂದ ಜರ್ಜರಿತರಾಗಿದ್ದಾರೆ. ಕರ್ಫ್ಯೂ ಈಗ ಜನರ ಸಂಕಷ್ಟವನ್ನು ಹೆಚ್ಚಿಸಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಏನೂ ಸುಲಭವಾಗಿ ಲಭ್ಯವಾಗುತ್ತಿಲ್ಲ. ಪೆಟ್ರೋಲ್ ಬಂಕ್‌ಗಳನ್ನು ಮುಚ್ಚಲಾಗಿದೆ. ಇದು ಕಾಳಸಂತೆಕೋರರಿಗೆ ಅವಕಾಶ ಒದಗಿಸಿದೆ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವುದು ಸೇರಿದಂತೆ ತುರ್ತು ಸೇವೆಗಳಿಗೆ ಪೆಟ್ರೋಲ್ ಅಗತ್ಯವಾಗಿದೆ. ಕಾಳಸಂತೆಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 250 ರೂ. ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದ್ದಾರೆ.

ಮತ್ತೊಬ್ಬ ನಿವಾಸಿ ಸರೋಜ್ ಸಿಂಗ್ ಮಾತನಾಡಿ, “ಬಹುತೇಕ ವಿವಿಧ ತಳಿಯ ಅಕ್ಕಿಯ ಬೆಲೆ ಶೇ.50ರಷ್ಟು ಏರಿಕೆಯಾಗಿದೆ. ಅಂಗಡಿಗಳು ಮುಚ್ಚಿರುವುದರಿಂದ ಜನರಿಗೆ ಏನೂ ಸಿಗುತ್ತಿಲ್ಲ. ಅವರು ಅಗತ್ಯ ವಸ್ತುಗಳನ್ನು ಕಾಳಸಂತೆಯಿಂದ ಖರೀದಿಸುವುದು ಅನಿವಾರ್ಯವಾಗಿದೆ” ಎಂದು ವಿಷಾದಿಸಿದ್ದಾರೆ.

“ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗಿದೆ. ಮದುವೆಗಳನ್ನು ಏರ್ಪಡಿಸಿಕೊಂಡಿರುವ ಕುಟುಂಬಗಳು ಭಾರೀ ಬೆಲೆ ತೆರಬೇಕಾಗಿದೆ” ಎಂದು ವಿವರಿಸಿದ್ದಾರೆ.

ಇದನ್ನೂ ಓದಿರಿ: ಮಣಿಪುರ; ಮತ್ತೆ ಉದ್ವಿಗ್ನತೆ, ಗುಂಡಿನ ದಾಳಿಗೆ ವ್ಯಕ್ತಿ ಬಲಿ

ಇಂಫಾಲ್‌ನ ಹೋಟೆಲ್‌ನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅಸ್ಸಾಂನ ಸುಬೀರ್ ದಾಸ್, “ಪ್ರತಿಯೊಂದು ವಸ್ತುವಿನ ಬೆಲೆ ಗಣನೀಯವಾಗಿ ಹೆಚ್ಚಾಗಿದೆ” ಎಂದಿದ್ದಾರೆ.

“ಒಂದು ಪ್ಲೇಟ್ ಬ್ರಾಯ್ಲರ್ ಮೊಟ್ಟೆ ಈಗ 260 ರಿಂದ 300 ರೂ.ವರೆಗೆ ಏರಿಕೆಯಾಗಿದೆ. ಹಿಂಸಾಚಾರ ಭುಗಿಲೇಳುವ ಮೊದಲು ಒಂದು ಪ್ಲೇಟ್‌ ಮೊಟ್ಟೆ 200 ರೂ.ಗೆ ಮಾರಾಟವಾಗುತ್ತಿತ್ತು. ಬ್ರಾಯ್ಲರ್ ಉಂಡು ಕೋಳಿ ಕೆಜಿಗೆ 200 ರೂ.ನಿಂದ 300 ರೂ.ಗೆ ಏರಿಕೆಯಾಗಿದೆ. ಆಲೂಗಡ್ಡೆ ಕೆಜಿಗೆ ರೂ. 20 ಇತ್ತು. ಈಗ ಕೆಜಿಗೆ 40 ರೂ. ಆಗಿದೆ. ಅದೇ ರೀತಿ ಈರುಳ್ಳಿ ಬೆಲೆ ಕೆಜಿಗೆ 30 ರೂ.ನಿಂದ 50-60 ರೂ.ಗೆ ಏರಿದೆ, ತರಕಾರಿಗಳು ಕೂಡ ದುಬಾರಿಯಾಗಿದೆ” ಎಂದು ದಾಸ್‌ ಆತಂಕ ವ್ಯಕ್ತಪಡಿಸಿದ್ದಾರೆ.

“ನಾಗಾ ಹಿಲ್ಸ್‌ನಲ್ಲಿ ಯಾವುದೇ ಕರ್ಫ್ಯೂ ಇಲ್ಲ. ಆದರೆ ಅಗತ್ಯ ವಸ್ತುಗಳ ಬೆಲೆಗಳು ಅಲ್ಲಿಯೂ ಏರಿಕೆ ಕಂಡಿವೆ. ನಮ್ಮ ಉಖ್ರುಲ್ ಜಿಲ್ಲೆಯಲ್ಲಿ ಪ್ರತಿ ಅಗತ್ಯ ವಸ್ತುಗಳ ಬೆಲೆ ಶೇ.10-20ರಷ್ಟು ಹೆಚ್ಚಾಗಿದೆ” ಎಂದು ನಾಗಾ ಮುಖಂಡ ಮಂಗ್ಯಾಂಗ್ ರಾಮನ್ ತಿಳಿಸಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಬಿಜೆಪಿಯ12 ಸಭೆ: ದಾಖಲೆ ಕೇಳಿದ ಕಾಂಗ್ರೆಸ್

0
ಬಿಜೆಪಿ ಚೀನಾದೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದ್ದು, 2008 ರಿಂದ ಬಿಜೆಪಿ ನಾಯಕರು ಮತ್ತು ಚೀನಾದ ಅಧಿಕಾರಿಗಳ ನಡುವೆ 12 ಉನ್ನತ ಮಟ್ಟದ ಸಭೆಗಳು ನಡೆದಿವೆ ಎಂದು ಆರೋಪಿಸಿದೆ....