270 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಒಡಿಶಾ ರೈಲು ಅಪಘಾತದ ಬಗ್ಗೆ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಭಾನುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಭಾರತ ಸರ್ಕಾರ, ರೈಲ್ವೆ ಸಚಿವರು ಮತ್ತು ಪ್ರಧಾನಿಯ ಸಂಪೂರ್ಣ ವೈಫಲ್ಯ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ” ಎಂದು ಪ್ರತಿಪಾದಿಸಿದ್ದಾರೆ. ರೈಲ್ವೇ ಸುರಕ್ಷತೆಯು ತಮ್ಮ ಆದ್ಯತೆಯಾಗಿದೆ ಎಂದು ಹೇಳಿಕೊಳ್ಳುತ್ತದೆ ಆದರೆ ಅಂತಹ ದೊಡ್ಡ ಅಪಘಾತದ ನಂತರವೂ ಅವರು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಂಡಿಲ್ಲ” ಎಂದು ಕೇಂದ್ರ ಬಿಜೆಪಿ ವಿರುದ್ಧ ಹರಿಹಾಯ್ದರು.
”ಇದು ರಾಜಕೀಯಕ್ಕೆ ಅವಕಾಶವಾಗಬಾರದು, ಕೇಂದ್ರ ಸರ್ಕಾರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಅದೊಂದು ದೊಡ್ಡ ಅಪಘಾತ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
”ಕೇಂದ್ರವು ಕುಸ್ತಿಪಟುಗಳ ಸಮಸ್ಯೆಯ ಯಾವುದೇ ತನಿಖೆಯನ್ನು ಮಾಡಿಲ್ಲ, ಹಾಗಾಗಿ ಅವರು ಏನು ಮಾಡುತ್ತಾರೆಂದು ನನಗೆ ತಿಳಿದಿಲ್ಲ. ಕಾಲವೇ ಉತ್ತರಿಸುತ್ತದೆ. ಆದರೆ ಅಲ್ಲಿಯವರೆಗೆ ಯಾರಾದರೂ ಜವಾಬ್ದಾರಿ ತೆಗೆದುಕೊಳ್ಳಬೇಕು… ಇಂತಹ ದೊಡ್ಡ ಘಟನೆ ನಡೆದಿದೆ, ಪ್ರಧಾನಿ ಮೋದಿ ಪತ್ರಿಕಾಗೋಷ್ಠಿ ನಡೆಸಬೇಕಿತ್ತು” ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಏಕೆ ತಮ್ಮ ಹುದ್ದೆಯನ್ನು ತ್ಯಜಿಸಬೇಕು?: 9 ಕಾರಣಗಳನ್ನು ಕೊಟ್ಟ ಸುರ್ಜೆವಾಲಾ
ಇತ್ತೀಚಿನ ವರದಿಗಳ ಪ್ರಕಾರ, ಒಡಿಶಾದ ಬಾಲಸೋರ್ ಬಳಿಯ ಬಹನಾಗ ರೈಲು ನಿಲ್ದಾಣದ ಬಳಿ ಮೂರು ರೈಲುಗಳು ಹಳಿ ತಪ್ಪಿದ ಪರಿಣಾಮ ಭಾರೀ ಅಪಘಾತ ಸಂಭವಿಸಿದೆ. ಟ್ರೈನ್‌ಗಳು ಡಿಕ್ಕಿ ಹೊಡೆದ ಪರಿಣಾಮ ರೈಲಿನ 3 ಸ್ಲೀಪರ್ ಕೋಚ್‌ಗಳನ್ನ ಹೊರತುಪಡಿಸಿ ಉಳಿದ 18 ಬೋಗಿಗಳು ಹಳಿ ತಪ್ಪಿ ಮತ್ತೊಂದು ಹಳಿಯ ಮೇಲೆ ಬಿದ್ದಿವೆ.
ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹೌರಾಗೆ ತೆರಳುತ್ತಿದ್ದಾಗ ಹಲವಾರು ಬೋಗಿಗಳು ಹಳಿತಪ್ಪಿ ಪಕ್ಕದ ಹಳಿಗಳ ಮೇಲೆ ಬಿದ್ದವು.
ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಚೆನ್ನೈಗೆ ತೆರಳುತ್ತಿದ್ದಾಗ, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಹಳಿತಪ್ಪಿದ ಕೋಚ್‌ಗಳಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ 275 ಜನರು ಸಾವನ್ನಪ್ಪಿದ್ದಾರೆ ಮತ್ತು 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಈ ಅಪಘಾತಕ್ಕೆ ಕಾರಣ ಏನು?
ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಬಹನಾಗ ನಿಲ್ದಾಣದಲ್ಲಿ’ಸ್ಟಾಪ್’ ಇರಲಿಲ್ಲ. ಹೀಗಾಗಿ ಗಂಟೆಗೆ 127 ಕಿ.ಮೀ. ವೇಗದಲ್ಲಿ ಬರುತ್ತಿದ್ದ ರೈಲಿಗೆ ಗ್ರೀನ್ ಸಿಗ್ನಲ್ ನೀಡಲಾಯಿತು. ಆದರೆ, ಈ ವೇಳೆ ಈಗಾಗಲೇ ಗೂಡ್ಸ್ ರೈಲು ನಿಂತಿರುವ ಹಳಿಯ ಮೇಲೆ ರೈಲು ಚಲಿಸಿದೆ. ಹೀಗಾಗಿ ನಿಂತಿದ್ದ ಗೂಡ್ಸ್ ರೈಲಿಗೆ ‘ಕೋರಮಂಡಲ್ ಎಕ್ಸ್‌ಪ್ರೆಸ್’ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಗೂಡ್ಸ್ ರೈಲಿನ ಬೋಗಿಯ ಮೇಲೆ ಹತ್ತಿದರೆ, ಅದರ 13 ಬೋಗಿಗಳು ಹಳಿ ತಪ್ಪಿ ಚಲ್ಲಾಪಿಲ್ಲಿಯಾಗಿ ಉರುಳಿ ಬಿದ್ದಿವೆ.
ಹಳಿ ತಪ್ಪಿದ ಬೋಗಿಗಳಲ್ಲಿ ಹಲವು ಬೋಗಿಗಳು ಪಕ್ಕದ ಹಳಿಯ ಮೇಲೂ ಉರುಳಿ ಬಿದ್ದಿವೆ. ಇದಾಗಿ ನಾಲ್ಕೇ ನಿಮಿಷದೊಳಗೆ ‘ಹೌರಾ-ಯಶವಂತಪುರ’ ರೈಲು ಸಹ ಅದೇ ನಿಲ್ದಾಣಕ್ಕೆ ಬಂದಿದೆ. ಪಕ್ಕದ ಹಳಿಯಿಂದ ಉರುಳಿ ಬಿದ್ದಿದ್ದ ಅಪಘಾತಗೊಂಡ ರೈಲಿನ ಬೋಗಿಗಳಿಗೆ ಹೌರಾ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಇದರಿಂದ ಆ ರೈಲಿನ 3 ಬೋಗಿಗಳೂ ಉರುಳಿ ಬಿದ್ದಿವೆ.


