Homeಕರ್ನಾಟಕವಿಶ್ಲೇಷಣೆ: ಜಾತಿಗಣತಿ ಜಾರಿಗೊಳಿಸುವ ಸಿಎಂ ನಿರ್ಧಾರ ಸ್ವಾಗತಾರ್ಹವೇಕೆ?

ವಿಶ್ಲೇಷಣೆ: ಜಾತಿಗಣತಿ ಜಾರಿಗೊಳಿಸುವ ಸಿಎಂ ನಿರ್ಧಾರ ಸ್ವಾಗತಾರ್ಹವೇಕೆ?

- Advertisement -
- Advertisement -

“ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ 2015ರ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆದಿರುವ ಕರ್ನಾಟಕ ರಾಜ್ಯದ ಜಾತಿಗಣತಿ ವರದಿಯನ್ನು ಸ್ವೀಕರಿಸಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

“ಹಲವು ಶತಮಾನಗಳಿಂದ ಅವಕಾಶ ವಂಚಿತರಾದವರಿಗೆ ಈಗ ಅವಕಾಶ ಒದಗಿಸುವ ಮೂಲಕ ಅಸಮಾನತೆಯನ್ನು ನಿವಾರಿಸಿ ಸಮಾನತೆಯನ್ನು ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಿಂದೆ ನಮ್ಮ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು 162 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಂಡಿತ್ತು. ಸಮೀಕ್ಷೆಯ ವರದಿಯನ್ನು ಸ್ವೀಕರಿಸಲು ಹಿಂದಿನ ಸರ್ಕಾರಗಳು ಹಿಂದೇಟು ಹಾಕಿದವು. ಇದೀಗ ನಮ್ಮ ಸರ್ಕಾರ ಈ ವರದಿಯನ್ನು ಸ್ವೀಕರಿಸಲಿದೆ. ವಸ್ತು ಸ್ಥಿತಿಯನ್ನು ಆಧರಿಸಿ, ಜನರಿಗೆ ಶಿಕ್ಷಣ, ಉದ್ಯೋಗ, ಉದ್ಯಮ ಹೀಗೆ ವಿವಿಧ ವಲಯಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಿದೆ” ಎಂದು ತಿಳಿಸಿದ್ದಾರೆ.

2021ರ ಆಗಸ್ಟ್‌ನಲ್ಲಿ ಸಿದ್ದರಾಮಯ್ಯನವರು ‘ಪ್ರಜಾವಾಣಿ’ಯಲ್ಲಿ ಬರೆದ ಲೇಖನದಲ್ಲಿ ಹೀಗೆ ಹೇಳಿದ್ದರು: “ಇದನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಸ್ವೀಕಾರ ಮಾಡಿ ಅದರ ಶಿಫಾರಸುಗಳನ್ನು ಜಾರಿಗೊಳಿಸಬೇಕೆಂಬುದು ನನ್ನ ಆಸೆಯಾಗಿತ್ತು, ಆದರೆ ಆ ಕಾಲದಲ್ಲಿ ಪೂರ್ಣಗೊಂಡಿರಲಿಲ್ಲ. ನನಗಿರುವ ಮಾಹಿತಿ ಪ್ರಕಾರ ಆಯೋಗ ಸಮೀಕ್ಷಾ ವರದಿಯನ್ನು ಪೂರ್ಣಗೊಳಿಸಿದ್ದು 2018ರ ಕೊನೆಯಲ್ಲಿ. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು. ಕಾಂತರಾಜ್ ಆಯೋಗ ವರದಿ ಸಲ್ಲಿಸಲು ಸಮಯವಕಾಶ ಕೋರಿ ಆಗಿನ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಪತ್ರ ಬರೆದರೂ ಅದಕ್ಕೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರವಾಗಿದ್ದ ಕಾರಣ ಅನಗತ್ಯ ಸಂಘರ್ಷ ಬೇಡವೆಂದು ನಾನು ಒತ್ತಾಯಿಸಲು ಹೋಗಲಿಲ್ಲ. ಕೊನೆಗೆ 2019ರ ಸೆಪ್ಟೆಂಬರ್‌ನಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಸಮಗ್ರ ವರದಿಯನ್ನು ಕಾಂತರಾಜ್ ಆಯೋಗ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲಿಸಿದೆ” ಎಂದು ತಿಳಿಸಿದ್ದರು.

“ಇಂತಹ ಸಮೀಕ್ಷೆಗಳು ಕೋಟ್ಯಂತರ ಜನತೆಯ ಸಾಮಾಜಿಕ,ಆರ್ಥಿಕ ಭವಿಷ್ಯವನ್ನು ನಿರ್ಧರಿಸುವ ವಿಷಯವಾಗಿರುವ ಕಾರಣ ಅವಸರದಿಂದ, ನಿರ್ಲಕ್ಷದಿಂದ ಮಾಡಲಾಗದು. ವಿಳಂಬವಾದರೂ ಈಗ ಪೂರ್ಣಗೊಂಡಿದೆ. ಈಗ ಕುಂಟುನೆಪಗಳನ್ನು ಮುಂದೊಡ್ಡಿ ಈ ಸಮೀಕ್ಷೆಯನ್ನು ತಿರಸ್ಕರಿಸಿದರೆ ಅದು ರಾಜ್ಯದ ಜನತೆಗೆ ಬಗೆವ ದ್ರೋಹವಾಗುತ್ತದೆ ಮಾತ್ರವಲ್ಲ ಒಂದು ಕೆಟ್ಟ ಪರಂಪರೆಗೆ ನಾಂದಿ ಹಾಡಿದಂತಾಗುತ್ತದೆ. ಕೆಲವು ಬಿಜೆಪಿ ನಾಯಕರು ಜಾತಿ ಸಮೀಕ್ಷೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದ್ದಾರೆ” ಎಂದಿದ್ದರು. ಈಗ ಸಿದ್ದರಾಮಯ್ಯನವರೇ ಸಿಎಂ ಆಗಿದ್ದು, ಜಾತಿಗಣತಿ ಜಾರಿಯ ಕುರಿತು ಮಾತನಾಡಿರುವುದು ಸ್ವಾಗತಾರ್ಹ. ಯಾರು ಎಷ್ಟೇ ವಿರೋಧಿಸಿದರೂ ಜಾತಿಜನಗಣತಿ ಇಂದಿನ ತುರ್ತು ಎಂಬುದು ಸದ್ಯದ ರಾಜಕೀಯ ವಿದ್ಯಮಾನಗಳು ಹೇಳುತ್ತಿವೆ. ಈ ನಿಟ್ಟಿನಲ್ಲಿ ಕೆಲವೊಂದು ವಿಚಾರಗಳನ್ನು ನೋಡಲೇಬೇಕಾಗುತ್ತದೆ.

ಜಾತಿಗಣತಿಯ ಹಿನ್ನೆಲೆ

ಸಾವಿರಾರು ಜಾತಿಗಳಿಂದ ಕೂಡಿರುವ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ 1931ರ ಜನಗಣತಿಯೊಂದಿಗೆ ಜಾತಿಗಣತಿಯೂ ನಡೆದಿತ್ತು. ಅದಾಗಿ 90 ವರ್ಷ ಕಳೆದರೂ ದೇಶಾದ್ಯಂತ ಜಾತಿ ಗಣತಿ ನಡೆದೇ ಇಲ್ಲ. 1991ರ ನಂತರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಬಿಸಿ ಮೀಸಲಾತಿ ಜಾರಿಯಾದ ನಂತರ ಜಾತಿಗಣತಿ ನಡೆಯಬೇಕೆಂದು ದೊಡ್ಡ ಒತ್ತಾಯಗಳು ಕೇಳಿಬಂದಿದ್ದರಿಂದ 2003-04ರಲ್ಲಿ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಜಾತಿಗಣತಿಯ ಪೈಲೆಟ್ ಪ್ರಾಜೆಕ್ಟ್ ನಡೆಸಲು 21.5 ಕೋಟಿ ರೂ ಬಿಡುಗಡೆ ಮಾಡಿತ್ತು. ಆಗ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿದ್ದರು. ಆಗ ಕರ್ನಾಟಕ ಸರ್ಕಾರ 1.5 ಕೋಟಿ ನೀಡಿತ್ತು. ಆದರೆ ಆಗಿನ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಅದು ನಡೆಯಲಿಲ್ಲ. ನಂತರ ಮನಮೋಹನ್ ಸಿಂಗ್ ನೇತೃತ್ವದಲ್ಲಿ 2011ರ ನಂತರ ಪ್ರತ್ಯೇಕವಾಗಿ ಜಾತಿಗಣತಿ ನಡೆಸಲು ಮುಂದಾದರೂ ಅದು ಕೂಡ ನಡೆಯದೇ ನೆನೆಗುದ್ದಿಗೆ ಬಿದ್ದಿತ್ತು. ಸಿದ್ದರಾಮಯ್ಯನವರ ಅವಧಿಯಲ್ಲಿ ಮತ್ತೆ ಜಾತಿಗಣತಿಯ ಪ್ರಸ್ತಾಪ ಬಂದಿತ್ತು.

ಜಾತಿಗಣತಿ ಏಕೆ ಬೇಕು?

1. “ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ರಾಜಕೀಯ ಕ್ಷೇತ್ರಕ್ಕೆ ಅನ್ವಯಿಸಲಾಗದು. ಇದಕ್ಕಾಗಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ವಿಶ್ವಾಸಾರ್ಹ ದತ್ತಾಂಶ ಆಧರಿಸಿದ ಮಾಹಿತಿಯನ್ನು ಮೂರು ಹಂತಗಳ ಪರಿಶೀಲನೆಗೊಡ್ಡಿ ಪ್ರತ್ಯೇಕ ರಾಜಕೀಯ ಮೀಸಲಾತಿಯನ್ನು ರೂಪಿಸಬೇಕು” ಎಂದು 2010ರಲ್ಲಿಯೇ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಆದೇಶ ನೀಡಿತ್ತು. ಅದೇ ಆದೇಶವನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸುತ್ತಾ ಬಂದಿದೆ.

ಹೀಗಾಗಿ ರಾಜ್ಯದಲ್ಲಿ ಸಿದ್ಧವಾಗಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಯನ್ನು ರೂಪಿಸಿ ಅದನ್ನು ಸುಪ್ರೀಮ್ ಕೋರ್ಟ್‌ಗೆ ಸಲ್ಲಿಸಿ ಅದರ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅವಕಾಶ ಪಡೆಯಬಹುದು.

ಸುಪ್ರೀಂ ಕೋರ್ಟ್ ಆದೇಶದ ನಂತರ ಮಹಾರಾಷ್ಟ್ರ ಸರ್ಕಾರ ಅವಸರದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಪಡೆದ ಮಧ್ಯಂತರ ವರದಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಿರಸ್ಕರಿಸಿತ್ತು. ವೈಜ್ಞಾನಿಕವಾಗಿ ಸಂಗ್ರಹಿಸಿದ ಅಂಕಿ-ಅಂಶಗಳನ್ನು ಸಂಗ್ರಹಿಸದ ಮಧ್ಯಂತರ ವರದಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಉಳಿದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಜಾತಿಜನಗಣತಿ ವರದಿಯು ಅತ್ಯಂತ ಸಮರ್ಪಕವಾಗಿದೆ, ವೈಜ್ಞಾನಿಕವೂ ಆಗಿದೆ ಎಂಬುದು ಸರ್ಕಾರದ ನಿಲುವು.

2. ಭಾರತದಲ್ಲಿ ದನಿಯೇ ಇಲ್ಲದ ಸಾವಿರಾರು ಸಣ್ಣ ಸಣ್ಣ ಸಂಖ್ಯೆಯಲ್ಲಿರುವ ಜಾತಿಗಳಿವೆ. ಸರ್ಕಾರದ ಯೋಜನೆಗಳು ನಿಜವಾಗಿಯೂ ಇವರನ್ನು ತಲುಪುತ್ತಿವೆಯೇ ಎಂಬ ಬಗ್ಗೆ ಗೊಂದಲಗಳಿವೆ. ದೊಡ್ಡ ಸಂಖ್ಯೆಯಲ್ಲಿರುವ ಜನರ ಸಮಸ್ಯೆಗಳು ಅವರ ಜಾತಿ ಕಾರಣಕ್ಕಾದರೂ ಸಮಾಜದಲ್ಲಿ ಚರ್ಚೆಗೆ ಬರುತ್ತಿವೆ. ಆದರೆ ಸಣ್ಣ ಸಂಖ್ಯೆಯ ಜಾತಿಗಳ ಕಥೆಯೇನು? ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳನ್ನು, ಆದಿವಾಸಿಗಳನ್ನು ನಾವು ಗುರುತಿಸಿದ್ದೇವೆಯೇ ಎಂಬ ಪ್ರಶ್ನೆ ಕೂಡ ಇದೆ. ಪ್ರಜಾಪ್ರಭುತ್ವ ರಾಷ್ಟ್ರವೊಂದು ತನ್ನ ನೀತಿ ನಿರೂಪಣೆಯಲ್ಲಿ ಇವರಿಗೆ ಸರಿಯಾದ ಪ್ರಾತಿನಿಧ್ಯ ನೀಡಬೇಕಾದರೆ ಅವರ ಗಣತಿ ಅಗತ್ಯವಿದೆ.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗಗಳ ಕೋಟಾದಲ್ಲಿದ್ದ ಮುಸ್ಲಿಮರ ಶೇ.4ರಷ್ಟು ಮೀಸಲಾತಿಯನ್ನು ರದ್ದು ಮಾಡಿ, ಅದನ್ನು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚುವ ನಿರ್ಧಾರ ಮಾಡಿತ್ತು. ಈ ಪ್ರಕರಣವೀಗ ಸುಪ್ರೀಂ ಅಂಗಳದಲ್ಲಿದೆ. ಕೋಮು ಆಧಾರಿತವಾಗಿ ಮಾಡಿದ ಈ ನಿರ್ಧಾರ ಸಂವಿಧಾನ ಬಾಹಿರ. ಆದರೆ ಮೀಸಲಾತಿ ಹೆಚ್ಚಳ ಮಾಡಬಾರದು ಎಂದೇನೂ ಇಲ್ಲ. ಅದಕ್ಕಾಗಿ ಮುಸ್ಲಿಮರ ಮೀಸಲಾತಿಯನ್ನು ರದ್ದು ಮಾಡುವ ಅಗತ್ಯವೂ ಇಲ್ಲ.

ಇದನ್ನೂ ಓದಿರಿ: ಜಾತಿಗಣತಿ ವರದಿ ಸ್ವೀಕರಿಸುತ್ತೇವೆ: ಸಿಎಂ ಸಿದ್ದರಾಮಯ್ಯ

ಬಹಳಷ್ಟು ರಾಜ್ಯಗಳಲ್ಲಿ ಹಲವಾರು ಜಾತಿಗಳು ತಮಗೂ ಮೀಸಲಾತಿ ಕಲ್ಪಿಸಬೇಕೆಂದು, ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ತೀವ್ರ ರೀತಿಯ ಹೋರಾಟಕ್ಕಿಳಿದಿವೆ. ಆದರೆ ಸುಪ್ರೀಂ ಕೋರ್ಟ್ 1992ರ ಇಂದ್ರಸಹಾನಿ ಪ್ರಕರಣದ ತೀರ್ಪಿನಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಇರಬಾರದು ಎಂಬ ಷರತ್ತನ್ನು ಹಾಕಿದೆ. ಜೊತೆಗೆ ವಿಶೇಷ ಸಂದರ್ಭದಲ್ಲಿ ಮಾತ್ರ ಈ ನಿಯಮವನ್ನು ಮೀರಬಹುದು ಎಂದು ಸುಪ್ರೀಂ ಹೇಳಿದೆ. ಈ ವಿಶೇಷ ಸಂದರ್ಭದ ಕಾರಣ ನೀಡಿ ಈಗಾಗಲೇ ದೇಶದ 9 ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಿರುವ ಉದಾಹರಣೆಗಳಿವೆ. ಆದರೆ ಕಳೆದ 90 ವರ್ಷಗಳಿಂದ ಜಾತಿಗಣತಿ ನಡೆಯದ, ನಿಖರವಾದ ಜಾತಿವಾರು ಡೇಟಾ ಇಲ್ಲದ ಕಾರಣ, ವಿಶೇಷ ಸಂದರ್ಭವನ್ನು ನಿರೂಪಿಸಿ ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಲು ಹಲವು ರಾಜ್ಯಗಳಿಗೆ ಇಂದಿಗೂ ಸಾಧ್ಯವಾಗಿಲ್ಲ. ಅಂದರೆ ’ನಮ್ಮ ರಾಜ್ಯಗಳಲ್ಲಿ ಹಲವು ಜಾತಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಮತ್ತು ಸಮಾಜದಲ್ಲಿ ಇವರ ಪ್ರಾತಿನಿಧ್ಯ ಅತಿ ಕಡಿಮೆ ಇದೆ ಎಂದು ತೋರಿಸಲು’ ರಾಜ್ಯಗಳಿಗೆ ಜಾತಿಗಣತಿ ಡೇಟಾ ಅತ್ಯಗತ್ಯವಾಗಿದೆ. ಹಾಗಾಗಿ ಜಾತಿಗಣತಿ ಅಗತ್ಯ. ಜಾತಿ ಜನಗಣತಿ ಬಿಡುಗಡೆಯಾದ್ದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹೆಚ್ಚಿಸಿರುವ ಮೀಸಲಾತಿಯನ್ನು ಉಳಿಸಿಕೊಂಡು, ಮುಸ್ಲಿಮರ ಮೀಸಲಾತಿಯನ್ನು ಮರುಸ್ಥಾಪಿಸಲು ಸಾಧ್ಯವಾಗುತ್ತದೆ. ಒಳಮೀಸಲಾತಿ ಜಾರಿ ವಿಚಾರದಲ್ಲಿ ಎದ್ದಿರುವ ಗೊಂದಲಗಳಿಗೂ ಈ ವರದಿ ಪರಿಹಾರವನ್ನು ನೀಡಬಹುದು. ಯಾವ ಜಾತಿ ಎಷ್ಟಿದೆ ಎಂಬುದು ತಿಳಿಯುವುದರಿಂದ ಒಳಮೀಸಲಾತಿಯಲ್ಲಿ ಆಗುವ ಲೋಪಗಳನ್ನು ಸರಿಪಡಿಸಬಹುದು.

3. ಈವರೆಗೆ ಆಗಿರುವ ಎಲ್ಲಾ ಮೀಸಲಾತಿಗಳು ಜಾತಿಗಳ ಸ್ಥಿತಿಗಳನ್ನು ಅವಲೋಕಿಸಿವೆ. ಸಮಿತಿಗಳು ನೀಡಿದ ಶಿಫಾರಸ್ಸುಗಳನ್ನು ಆಧರಿಸಿ ಆಗಿವೆ. ಆದರೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ‘ಆರ್ಥಿಕವಾಗಿ ಹಿಂದುಳಿದ ವರ್ಗಗಳಿವೆ ಮೀಸಲಾತಿ’ (ಇಡಬ್ಲ್ಯಎಸ್‌) ಜಾರಿಗೆ ಯಾವುದೇ ಆಯೋಗದ ಶಿಫಾರಸ್ಸು ಇಲ್ಲದಿರುವುದನ್ನು ಗಮನಿಸಹುದು. ಕರ್ನಾಟಕದಲ್ಲಿ ಶೇ. 4ರಷ್ಟೂ ಇಲ್ಲದ ಜಾತಿಗಳಿಗೆ ಇಡಬ್ಲ್ಯುಎಸ್‌ ಕೋಟಾ ನೀಡಲಾಗಿದೆ ಎಂಬ ಆಕ್ಷೇಪಗಳಿವೆ. ಯಾವ ಜಾತಿಯ ಸಂಖ್ಯೆ, ಎಷ್ಟಿದೆ ಎಂಬುದು ತಿಳಿಯಬೇಕಾದರೆ ಜಾತಿ ಜನಗಣತಿ ಅಗತ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...