“ಬಿಜೆಪಿಯ ಸಂಸ್ಥಾಪಕ ಸದಸ್ಯ, ಬಲಪಂಥೀಯ ಪ್ರಖರ ಪತ್ರಕರ್ತ, ಆರ್‌ಎಸ್‌ಎಸ್‌ನ ಆರ್ಗನೈಸರ್ ಸಂಪಾದಕರಾಗಿದ್ದ ‘ಕೇವಲ್ ರಾಮ್ ರತನ್ ಕುಮಾರ್ ಮಲ್ಕಾನಿ’ (ಕೆ.ಆರ್.ಮಲ್ಕಾನಿ) ಅವರು ಟಿಪ್ಪು ಸುಲ್ತಾನ್‌ರನ್ನು ಮುಕ್ತವಾಗಿ ಹೊಗಳಿದ್ದರು” ಎಂದು ಮ್ಯಾಗಸ್ಸೆ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಸ್ಮರಿಸಿದ್ದಾರೆ.
‘ಡೆಕ್ಕನ್ ಹೆರಾಲ್ಡ್’ ಮತ್ತು ‘ಪ್ರಜಾವಾಣಿ’ಯಲ್ಲಿ ಬುಧವಾರ (ಜೂನ್ 7) ಪ್ರಕಟವಾಗಿರುವ ಸಾಯಿನಾಥ್ ಅವರ ಲೇಖನವು ಹಲವು ಮಹತ್ತರವಾದ ವಿಚಾರಗಳನ್ನು ಒಳಗೊಂಡಿದೆ. ಟಿಪ್ಪು ಕುರಿತು ಬಿಜೆಪಿಯವರು ಸೃಷ್ಟಿಸಿರುವ ಗೊಂದಲಗಳಿಗೆ ‘ಮಲ್ಕಾನಿ’ ಅವರ ಮಾತುಗಳ ಮೂಲಕ ಪ್ರತಿಕ್ರಿಯಿಸುವ ಪ್ರಯತ್ನವನ್ನು ಈ ಲೇಖನ ಮಾಡಿದೆ. ಕೆ.ಆರ್.ಮಲ್ಕಾನಿಯವರ ಹಿನ್ನಲೆ, ಆರ್‌ಎಸ್‌ಎಸ್ ಮತ್ತು ಬಿಜೆಪಿಗಾಗಿ ಅವರು ಸಲ್ಲಿಸಿರುವ ಸೇವೆಯನ್ನು ಉಲ್ಲೇಖಿಸಲಾಗಿದೆ.
‘ದಿ ಗ್ರೇಟ್‌ನೆಸ್ ಆಫ್ ಟಿಪ್ಪು ಸುಲ್ತಾನ್’ ಎಂಬ ಶೀರ್ಷಿಕೆಯಲ್ಲಿ ‘ಡೆಕ್ಕನ್ ಹೆರಾಲ್ಡ್’ನಲ್ಲಿಯೂ, ‘ಟಿಪ್ಪು ಹಿರಿಮೆಗೆ ಮಸಿ ಬಳಿಯಲು ಸಾಧ್ಯವೆ?’ ಎಂಬ ತಲೆಬರೆಹದಲ್ಲಿ ‘ಪ್ರಜಾವಾಣಿ’ಯಲ್ಲಿಯೂ ಲೇಖನ ಪ್ರಕಟವಾಗಿದೆ.
ಮಲ್ಕಾನಿ ಅವರು ಟಿಪ್ಪುವನ್ನು ಹೇಗೆಲ್ಲ ಬಣ್ಣಿಸಿದ್ದರು ಎಂಬುದನ್ನು ಸಾಯಿನಾಥ್ ವಿಸ್ತೃತವಾಗಿ ಚರ್ಚಿಸಿದ್ದಾರೆ. ಮಲ್ಕಾನಿಯವರ ‘ಇಂಡಿಯಾ ಫಸ್ಟ್’ ಕೃತಿಯಲ್ಲಿ ದಾಖಲಾಗಿರುವ ಸಾಲುಗಳನ್ನು ಸಾಕ್ಷಿಯಾಗಿ ಒದಗಿಸಿದ್ದಾರೆ.
“ಅಕ್ಬರ್, ದಾರಾ ಶಿಕೋ ಹಾಗೂ ಟಿಪ್ಪು ಸುಲ್ತಾನ್‌ನಂತಹವರು ಹೀರೊಗಳೆಂದು ಪರಿಗಣಿಸಲ್ಪಡಬೇಕೇ ವಿನಾ ಖಳನಾಯಕರಾಗಿ ಅಲ್ಲ ಎನ್ನುವುದು ನನ್ನ ಅಭಿಪ್ರಾಯ. ಟಿಪ್ಪುವಿನ ಬಗ್ಗೆ ಹೆಚ್ಚೆಚ್ಚು ಓದಿದಷ್ಟೂ ನನಗೆ ಆತನ ವ್ಯಕ್ತಿತ್ವದ ಹಿರಿಮೆ ಮನವರಿಕೆಯಾಗಿದೆ. … (ಟಿಪ್ಪು ಸುಲ್ತಾನ್) ಮಾತ್ರವೇ ಬ್ರಿಟಿಷರ ವಿರುದ್ಧ ಹೋರಾಡುತ್ತಾ ಮಡಿದ ರಾಜಕುಮಾರ” ಎಂದು ಮಲ್ಕಾನಿಯವರು ಬರೆದಿರುವುದನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.
ಮುಂದುವರಿದು, “ಬ್ರಿಟಿಷರ ವಿರುದ್ಧ ಹೋರಾಡುವುದಷ್ಟಕ್ಕೇ ಟಿಪ್ಪು ತೃಪ್ತನಾಗಲಿಲ್ಲ, ಶಂಕಿತರಿಗೆ ಚಿತ್ರಹಿಂಸೆ ನೀಡುವುದನ್ನೂ ಸಾರ್ವಜನಿಕ ಕೆಲಸಗಳಿಗೆ ಜನರನ್ನು ಬಲವಂತವಾಗಿ ಕೂಲಿಗಳನ್ನಾಗಿ ಬಳಸಿಕೊಳ್ಳುವುದನ್ನೂ ವಿರೋಧಿಸಿದ್ದ. ಈತ ಪಾನ ನಿಷೇಧವನ್ನು ಜಾರಿಗೆ ತಂದ. ಮರಗಳನ್ನು ಕಡಿಯುವುದನ್ನು ವಿರೋಧಿಸಿದ. ಪ್ರತಿ ನಾಲ್ಕು ಮೈಲಿಗೆ ಒಂದು ಶಾಲೆಯನ್ನು ತೆರೆಯಲು ಯತ್ನಿಸಿದ. ಯಾವಾಗ ಶಸ್ತ್ರ ಉತ್ಪಾದನಾ ಕಾರ್ಖಾನೆಯಿಂದ ಕಾವೇರಿ ನದಿ ಕಲುಷಿತವಾಗುತ್ತಿದೆ ಎಂದು ಗೊತ್ತಾಯಿತೋ ತಕ್ಷಣ ಆತ ಆ ಕಾರ್ಖಾನೆಯನ್ನೇ ಸ್ಥಳಾಂತರಿಸಿದ. ಪರಿಸರವಾದಿಗಳಿಗೆ ಮಾದರಿ ಎನ್ನಬಹುದಾದ ರಾಜನೊಬ್ಬ ಅವನೊಳಗಿದ್ದ. ಭಾರತದ ರಾಜರುಗಳ ಪೈಕಿ ಟಿಪ್ಪು ಮಾತ್ರವೇ ವಿಶ್ವದೃಷ್ಟಿ ಉಳ್ಳವನಾಗಿದ್ದ. ಟಿಪ್ಪುವಿನ ಮರಣದಿಂದಾಗಿ ಭಾರತದ ಸ್ವಾತಂತ್ರ್ಯ ಒಂದೂವರೆ ಶತಮಾನದಷ್ಟು ಮುಂದೆ ಹೋಯಿತು… ಆತ ಬಯಸಿದ್ದರೆ, ಹಿಂದಿನ ಕೆಲ ಅರಸರಂತೆ, ಬ್ರಿಟಿಷರ ಅಡಿಯಾಳಾಗಿ ತನ್ನ ಅರಸುತನವನ್ನು ಉಳಿಸಿಕೊಳ್ಳಬಹುದಾಗಿತ್ತು. ಅಂದು ಅವನು ಹಾಗೆ ಮಾಡಿದ್ದೇ ಆಗಿದ್ದಲ್ಲಿ, ಇಂದು ಆತನ ಮರಿ, ಗಿರಿಮಕ್ಕಳು ಕೊಲ್ಕೊತ್ತಾದ ರಸ್ತೆಗಳಲ್ಲಿ ಸೈಕಲ್ ರಿಕ್ಷಾ ತುಳಿಯುತ್ತಾ ಬದುಕು ಸವೆಸಬೇಕಾದ ಅನಿವಾರ್ಯ ಸ್ಥಿತಿಗೆ ಸಿಲುಕುತ್ತಿರಲಿಲ್ಲ. ಗೌರವ ಕಳೆದುಕೊಂಡು ಬದುಕುವುದಕ್ಕಿಂತಲೂ ಸಾವು ಆತನ ಆಯ್ಕೆಯಾಗಿತ್ತು”- ಹೀಗೆ ಮಲ್ಕಾನಿಯವರು ಬಣ್ಣಿಸಿರುವುದಾಗಿ ಸಾಯಿನಾಥ್ ಬರೆದಿದ್ದಾರೆ.
ಮಲ್ಕಾನಿ ಅವರು ಟಿಪ್ಪು ಬಗ್ಗೆ ಬರೆದ ಲೇಖನವನ್ನು ಒಳಗೊಂಡ ಪುಸ್ತಕಕ್ಕೆ ಹಿಂದುತ್ವದ ಹೀರೊ ಎಲ್.ಕೆ.ಅಡ್ವಾಣಿ ಅವರೇ ಮುನ್ನುಡಿ ಬರೆದಿದ್ದರು. ಭಾರತದ ಉಪಪ್ರಧಾನಿಯಾಗಿದ್ದ ಅಡ್ವಾಣಿ ಅವರು ಮಲ್ಕಾನಿ ಅವರನ್ನು ‘ಮಹಾನ್ ಪತ್ರಕರ್ತ’ ಎಂದೇ ಬಣ್ಣಿಸುತ್ತಿದ್ದರು. ಆರ್‌ಎಸ್ಎಸ್ ಸಹ ಎಲ್ಲಿಯೂ ಮಲ್ಕಾನಿ ಅವರನ್ನು ನಿರಾಕರಿಸಿಲ್ಲ ಎಂದು ಸಾಯಿನಾಥ್ ಅಭಿಪ್ರಾಯಪಟ್ಟಿದ್ದಾರೆ.
ಮಲ್ಕಾನಿಯವರ ಹಿನ್ನೆಲೆಯ ಕುರಿತು ಬರೆಯುತ್ತಾ, “ಅವರು ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಬಿಜೆಪಿಯ ಉಪಾಧ್ಯಕ್ಷರಾಗಿ ಹಲವಾರು ವರ್ಷ ಕಾರ್ಯನಿರ್ವಹಿಸಿದ್ದರು. ಆರ್‌ಎಸ್ಎಸ್‌ನ ಅತಿಮುಖ್ಯ ಚಿಂತಕರಲ್ಲಿ ಒಬ್ಬರಾಗಿದ್ದರು. ಆ ಸಂಘಟನೆಯ ಮಾಧ್ಯಮ ವ್ಯಕ್ತಿಯೂ ಆಗಿದ್ದರು. 1940ರ ದಶಕದಲ್ಲಿ ‘ದಿ ಹಿಂದೂಸ್ಥಾನ್ ಟೈಮ್ಸ್’ನಲ್ಲಿ ಕೆಲಕಾಲ ಕೆಲಸ ಮಾಡಿದ್ದರು (ಅದೇ ಸಮಯದಲ್ಲಿ ‘ಆರ್ಗನೈಸರ್’ ವಾರಪತ್ರಿಕೆಗೂ ಬರೆಯುತ್ತಿದ್ದರು). ಆನಂತರದಲ್ಲಿ ಅವರು ಪೂರ್ಣಾವಧಿಗೆ ಹಿಂದುತ್ವದ ತೆಕ್ಕೆಗೆ ಬಂದರು. ಆರ್‌ಎಸ್ಎಸ್‌ನ ದನಿಯಾಗಿದ್ದ ‘ಆರ್ಗನೈಸರ್’ಗೆ ಸುಮಾರು 35 ವರ್ಷದಷ್ಟು ದೀರ್ಘಕಾಲ ಸಂಪಾದಕರಾಗಿದ್ದು ಇವರೊಬ್ಬರೇ. ‘ಆರ್ಗನೈಸರ್’ನ ಹಿಂದಿ ಆವೃತ್ತಿ ‘ಪಾಂಚಜನ್ಯ’ದ ಸಂಪಾದಕರಾಗಿಯೂ ಕೆಲಸ ಮಾಡಿದ್ದರು” ಎಂದು ವಿವರಿಸಿದ್ದಾರೆ.
ಇದನ್ನೂ ಓದಿರಿ: ಟಿಪ್ಪು v/s ಸಾವರ್ಕರ್ ಎಂಬುದಕ್ಕೆ ನನ್ನ ಒಪ್ಪಿಗೆ ಇಲ್ಲ: ಯಡಿಯೂರಪ್ಪ
“ಪುದುಚೇರಿಯ ಲೆಫ್ಟಿನೆಂಟ್ ಗರ್ವನರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ 2003ರಲ್ಲಿ ನಿಧನರಾದ ಮಲ್ಕಾನಿ ಅವರು ಸ್ಪಷ್ಟ ಚಿಂತನೆ ಮತ್ತು ನೇರ ನುಡಿಯ ವ್ಯಕ್ತಿತ್ವದವರು. ಟಿಪ್ಪು, ಭಗತ್ ಸಿಂಗ್, ಹಿಜಾಬ್ ಹಾಗೂ ಮತ್ತಿತರ ವಿಷಯವಾಗಿ ಕರ್ನಾಟಕದಲ್ಲಿ ಅನಗತ್ಯ ಗಲಭೆಗಳನ್ನು ಸೃಷ್ಟಿಸಿದ ಗುಂಪಿನಂತಲ್ಲ” ಎಂದು ಬಣ್ಣಿಸಿದ್ದಾರೆ.
“ಮಲ್ಕಾನಿಯವರ ಈ ಆರ್‌ಎಸ್ಎಸ್ ಹೆಗ್ಗುರುತಿನ ಜೊತೆ ಬಿ.ಸಿ.ನಾಗೇಶ್ ಅವರನ್ನು ಹೋಲಿಸಿ ನೋಡಿದರೆ ಅವರು (ಬಿ.ಸಿ.ನಾಗೇಶ್) ತೀರಾ ಕೃಶವಾಗಿ ತೋರುತ್ತಾರೆ” ಎಂದು ಕುಟುಕಿರುವ ಸಾಯಿನಾಥ್, ನಾಗೇಶ್ ಅವರು ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಟಿಪ್ಪು ಸುಲ್ತಾನ್, ಭಗತ್ ಸಿಂಗ್ ಕುರಿತ ಪಠ್ಯವನ್ನು ಕಿತ್ತು ಹಾಕಿದ್ದನ್ನು ಟೀಕಿಸಿದ್ದಾರೆ.
(‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ಪೂರ್ಣ ಲೇಖನವನ್ನು ಓದಲು ‘ಇಲ್ಲಿ’ ಕ್ಲಿಕ್ ಮಾಡಿರಿ)


