ಷೇರು ಮಾರುಕಟ್ಟೆ ಚೇತರಿಸಿಕೊಂಡಿದೆ. ಅರ್ಥವ್ಯವಸ್ಥೆ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇ.6.1ರಷ್ಟು ಬೆಳವಣಿಗೆ ಕಂಡಿದೆ. ಇದರಿಂದಾಗಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆಯು ಶೇ.7.2ರಷ್ಟಂತಾಗುತ್ತದೆ. ಭಾರತದಲ್ಲಿ ಕಡುಬಡತನ 2011-19ರ ಅವಧಿಯಲ್ಲಿ ಶೇ.12.3ರಷ್ಟು ಇಳಿಕೆಯಾಗಿದೆ. 2011ರಲ್ಲಿ ಶೇಕಡ 22.5ರಷ್ಟಿದ್ದ ಕಡುಬಡವರ ಸಂಖ್ಯೆ 2019ರಲ್ಲಿ ಶೇಕಡ 10.2ಕ್ಕೆ ಕುಸಿದಿದೆ ಎಂದು ವಿಶ್ವಬ್ಯಾಂಕ್ ಸಂಶೋಧನಾ ವರದಿ ತಿಳಿಸಿತ್ತು. ಇದರೊಂದಿಗೆ ಹಳ್ಳಿಹಳ್ಳಿಗೂ ವಿದ್ಯುತ್ ದೀಪ ಬಂದಿದೆ. ಮೊಬೈಲ್ ಸಂಪರ್ಕ ಹೆಚ್ಚಿನ ಜನರಿಗೆ ರೀಚ್ ಆಗಿದೆ. ರಸ್ತೆ, ನದಿ ಜೋಡಣೆಗೂ ಹಣ ನೀಡಲಾಗಿದೆ. ಇನ್ನೇನು ಬುಲೆಟ್ ರೈಲು ಬರಲಿದೆ. ಹವಾನಿಯಂತ್ರಿತ ಮೆಟ್ರೋ ಅಡ್ಡಾಡುತ್ತಿದೆ. ದೊಡ್ಡದೊಡ್ಡ ಮಾಲ್‌ಗಳು, ಅಂತಾರಾಷ್ಟ್ರೀಯ ದರ್ಜೆಯ ಬೂಟ್ಸು-ಬಟ್ಟೆ ಮಳಿಗೆಗಳು ಹರಡಿಕೊಂಡಿವೆ. ಐ.ಟಿ. ಎಂಬ ಎ.ಸಿ.ಯುಳ್ಳ ಗಗನದೆತ್ತರ ಕಟ್ಟಡಗಳಿವೆ.
ಹಾಗಾದರೆ, ನಮ್ಮ ದೇಶದಲ್ಲಿ ಬಡವರು ಇಲ್ಲವೇ? ರೋಗರುಜಿನ, ಹಸಿವು, ಅಪೌಷ್ಟಿಕತೆ, ಅಸ್ಪೃಶ್ಯತೆ, ಸ್ವಜನಪಕ್ಷಪಾತಗಳಿಂದ ಮುಕ್ತರಾಗಿದ್ದೇವೆಯೇ? ಎಂಬ ಮಿಲಿಯನ್ ಡಾಲರ್ ಪ್ರಶ್ನೆ ನಿಮ್ಮಲ್ಲಿ ಎದ್ದಿರಬಹುದು.
ಅದು ಕೊಚ್ಚಿಯ ವರಪ್ಪುಳ ಗ್ರಾಮ. ಇಲ್ಲಿ ಗಂಡನಿಂದ ದೂರವಾಗಿರುವ ಮಹಿಳೆ ಬಾಡಿಗೆ ಕಟ್ಟಲಾಗದೆ, ರಸ್ತೆ ಬದಿಯಲ್ಲೇ ಗುಡಿಸಲು ನಿರ್ಮಿಸಿ ವಾಸಿಸುತ್ತಿದ್ದರು. ಈಕೆಯ ಇಬ್ಬರು ಹಿರಿಯ ಮಕ್ಕಳು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಮಗಳು ನರರೋಗದಿಂದ ಬಳಲುತ್ತಿದ್ದರು. ಇದಕ್ಕಾಗಿ ಮಕ್ಕಳ ವೈದ್ಯಕೀಯ ಚಿಕಿತ್ಸೆ ಹಾಗೂ ಸಾಲ ತೀರಿಸಲು ‘ಹೃದಯ ಸೇರಿ ಎಲ್ಲ ಅಂಗಾಂಗಗಳು ಮಾರಾಟಕ್ಕಿವೆ’ ಎಂಬ ಫಲಕವನ್ನು ಗುಡಿಸಲ ಮುಂದೆ ಹಾಕಿಕೊಂಡಿದ್ದರು. ಕೊರೊನಾ ಕಾಡುವ ಕಾಲದಲ್ಲಿ ಭಿಕ್ಷಾಟನೆ ಮಾಡುವ ಮಕ್ಕಳು, ರಾಮನಗರ ಜಿಲ್ಲಾ ಕ್ರೀಡಾಂಗಣದ ಬಳಿ ಸಾರ್ವಜನಿಕರು ಕುಡಿದು ಬಿಸಾಡಿದ್ದ ಎಳನೀರು ಕಾಯಿಯ ತಿರುಳನ್ನು ತಿಂದು ಹಸಿವು ನೀಗಿಸಿಕೊಂಡಿದ್ದವು. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಸಂಜಯ್ ಆಲಿಯಾಸ್ ಅಸ್ಸಾಮಿ ಎಂಬಾತ 20 ರೂಪಾಯಿ ಸಾಲ ಮರಳಿಸಲಾಗದಿದ್ದರಿಂದ ತನ್ನೊಂದಿಗೆ ಚಿಂದಿ ಆಯುತ್ತಿದ್ದ ದೀಪಕ್, ಹೇಮಂತ್, ಮಾದೇಶ್ ಅವರಿಂದಲೇ ಕೊಲೆಯಾಗಿದ್ದ. ಇದೇ ರೀತಿ ಎಲ್.ಆರ್.ನಗರದ ಪರಮೇಶ್, ಅಬ್ದುಲ್ ಎಂಬಾತನಿಗೆ ಸೇದಲು ಬೀಡಿ ಕೊಡಲಾಗದ್ದಕ್ಕೆ ಜೀವಬಿಟ್ಟಿದ್ದ. ಸಂತಾನಭಾಗ್ಯವಿಲ್ಲದ ದಂಪತಿಗಳಿಗೆ ಬಡವರ 28 ಮಕ್ಕಳನ್ನು ಮಾರಾಟ ಮಾಡಿ ರಂಜನಾ ಹಾಗೂ ದೇವಿ ಸೇರಿದಂತೆ 5 ಜನರ ತಂಡ ಸೆರೆಸಿಕ್ಕಿತ್ತು. ಉಮೇಶ್ ಕತ್ತಿ ಅವರು ಆಹಾರ ಸಚಿವರಾಗಿದ್ದಾಗ, ರೈತನೊಬ್ಬ ಕೇಂದ್ರ ಸರ್ಕಾರ ಘೋಷಿಸಿರುವ 5 ಕೆ.ಜಿ. ಅಕ್ಕಿ ವಿತರಣೆ ಕುರಿತು ಚರ್ಚಿಸುವಾಗ, ಉಪವಾಸ ಇರೋದಾ? ಸತ್ತು ಹೋಗೋದಾ? ಎಂಬ ಪ್ರಶ್ನೆ ಎತ್ತಿದ್ದ. ಆಗ ಸಚಿವರಾಗಿದ್ದ ಕತ್ತಿ ಅವರು ಸತ್ತು ಹೋಗೋದು ಒಳ್ಳೇದು; ಅದಕ್ಕಿಂತ ಮೊದ್ಲು ಅಕ್ಕಿ ಮಾರೋ ದಂಧೆ ಬಂದ್ ಮಾಡ್ರಿ; ಈಗ ಇಡ್ರಿ ಫೋನ್; ಮತ್ತೆ ಕಾಲ್ ಮಾಡಬ್ಯಾಡ್ರಿ ಎಂದಿದ್ದರು. ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟಗಾನಾಳು ಗ್ರಾಮದಲ್ಲಿ ಸ್ಮಶಾನಕ್ಕೆ ಸರ್ಕಾರಿ ಜಾಗ ಇಲ್ಲದೆ ರಸ್ತೆ ಬದಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತಿತ್ತು. ಇವೆಲ್ಲದಕ್ಕೂ ವ್ಯತಿರಿಕ್ತ ಎಂಬಂತೆ 2021ರಲ್ಲಿ ಕೊರೊನಾ ಪೀಡಿಸುವಾಗ ಬ್ರಿಟನ್ ಸರ್ಕಾರ ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಿ, ಒಳಬರುವ ವಿಮಾನಗಳಿಗೆ 4 ದಿನಗಳ ಗಡುವು ನೀಡಿತ್ತು. 4 ದಿನದಲ್ಲಿ ನಮ್ಮ ದೇಶ ಬಿಡಲು ಉಳ್ಳವರು ತಲಾ 1 ಕೋಟಿ ಕೊಟ್ಟು ‘ಬೊಂಬಾರ್ಡಿಯರ್ ಗ್ಲೋಬಲ್ 6000’ ವಿಮಾನ ಸೇರಿ 8 ವಿಮಾನಗಳ ಮೂಲಕ ಬ್ರಿಟನ್ ಸೇರಿಕೊಂಡಿದ್ದರು.
ಇದರ ನಡುವೆ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅನುಸರಿಸುತ್ತಿರುವ ಗ್ಯಾರಂಟಿ ಸೂತ್ರದಿಂದಾಗಿ ಆರ್ಥಿಕತೆಗೆ ಪೆಟ್ಟು ಬೀಳಲಿದ್ದು, ದೇಶ ದಿವಾಳಿಯಾಗಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಇದೇ ಹೊತ್ತಿನಲ್ಲಿ ’ನಾನು ಸಹ 200 ಯುನಿಟ್‌ವರೆಗಿನ ವಿದ್ಯುತ್ ಬಿಲ್ ಕಟ್ಟುವುದಿಲ್ಲ; ನೀವೂ ಕಟ್ಟಬೇಡಿ. ಯಾರು ಫ್ಯೂಸ್ ತೆಗೆಯಲು ಬರುತ್ತಾರೋ ನೋಡೋಣ’ ಎಂದು ಮಾಜಿ ಉಪ ಮುಖ್ಯಮಂತ್ರಿ ಅಶೋಕ್ ಜನತೆಗೆ ಕರೆ ನೀಡಿದ್ದಾರೆ.
ನಿಮಗೀಗ ಕಾಡುತ್ತಿರಬಹುದು ‘ಬಡತನ’ ಎಂದರೇನು? ಹಾಗೆಯೇ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ‘ಗ್ಯಾರಂಟಿ’ಗಳ ಅಗತ್ಯತೆಯ ಅನಿವಾರ್ಯತೆಯ ಬಗ್ಗೆಯೂ ಅರಿಯಬೇಕಾದದ್ದು ಮತ ಕೊಟ್ಟ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.
ನಮ್ಮ ದೇಶದಲ್ಲಿ ವಿಶಿಷ್ಟ ಎಂಬಂತೆ ಆದರೆ ಮುಖ್ಯವಾಗಿ ದುರಂತೆ ಎಂಬಂತೆ ಜನ್ಮ ತಳೆದ ‘ಜಾತಿ’ಯೇ ‘ಸಾಮಾಜಿಕ ಅಸಮಾನತೆ’ಗೆ ಪ್ರಮುಖ ಕಾರಣವಾಯಿತು. ಮುಖ್ಯವಾಗಿ ದೇಶದ ಅಭ್ಯುದಯಕ್ಕೆ ಮಾರಕವಾಗಿ ಹೊರಹೊಮ್ಮಿತು. ಇದರಿಂದ ‘ಆರ್ಥಿಕ ಅಸಮಾನತೆ’ ದೇಶದ ಉದ್ದಗಲ ಬಳ್ಳಿಯಂತೆ ಹಬ್ಬಿ, ಬಡವ-ಬಲ್ಲಿಗ ವರ್ಗವನ್ನು ಹುಟ್ಟುಹಾಕಿತು. ಹೀಗಾಗಿಯೇ 21ನೇ ಶತಮಾನದಲ್ಲಿಯೂ ನಾವು ಎದುರಿಸುತ್ತಿರುವ ಅತ್ಯಂತ ಅಮಾನವೀಯ ಸವಾಲು ‘ಬಡತನ’ ಆಗಿದೆ.
‘ಬಡತನ’ ಸಮೃದ್ಧಿ ಎಲ್ಲೆಡೆ ಒಂದು ಪ್ರಮುಖ ಸವಾಲಾಗಿದೆ. ನಮ್ಮ ದೇಶವಾಸಿಗಳು ಎದುರಿಸುತ್ತಿರುವ ಮಹಾವಂಚನೆಯಾಗಿದ್ದು, ‘ಯಾತನೆ’ಯುಂಟಾಗುವ ಸಂಕಷ್ಟವನ್ನು ಅನುಭವಿಸುವಂತೆ ಮಾಡಿದೆ. ‘ಸಾಮಾಜಿಕ ಅಸಮಾನತೆ’ ಹೋಗದೆ ಬಡತನ ನಿವಾರಣೆ ಸಾಧ್ಯವೇ ಇಲ್ಲ. ಕನ್ಯಾಕುಮಾರಿಯಿಂದ, ಕಾಶ್ಮೀರದವರೆಗೂ ‘ಬಡತನ’ ತಾಂಡವವಾಡುತ್ತಿದೆ. 1990ರಿಂದಾಚೆಗಿನ ‘ಜಾಗತಿಕ ಬಡತನ’ದ ವಿಕಾಸ ಕುರಿತು ಬ್ರೂಕಿಂಗ್ಸ್ ಇನ್ಸ್‌ಟಿಟ್ಯೂಟ್ 2022ರಲ್ಲಿ ಸಂಶೋಧನಾ ಪ್ರಬಂಧ ಹೊರತಂದಿತ್ತು. ಇದರಂತೆ ಜಾಗತಿಕ ಬಡತನ ಕಳೆದ ಮೂರು ದಶಕಗಳಲ್ಲಿ ನಾಟಕೀಯವಾಗಿ ಇಳಿಕೆ ಕಂಡಿತು. 2015ರ ಹೊತ್ತಿನಲ್ಲಿ 729 ಮಿಲಿಯನ್ ಅಂದರೆ ಜನಸಂಖ್ಯೆಯ ಶೇ.10ರಷ್ಟು ಜನ ದಿನಕ್ಕೆ 1.90 ಅಮೆರಿಕನ್ ಡಾಲರ್‌ನಷ್ಟು ಗಳಿಸಿ ಬಡತನ ರೇಖೆಯಡಿಯಲ್ಲಿ ವಾಸಿಸುತ್ತಿದ್ದಾರೆ. 2012ರಿಂದ 2013ರಲ್ಲಿ ಜಾಗತಿಕ ಬಡತನದ ಸಂಖ್ಯೆಯಲ್ಲಿ 130 ಮಿಲಿಯನ್ ಜನರಷ್ಟು ಕಡಿಮೆಯಾಯಿತು. ದಿನಕ್ಕೆ 1.25 ಡಾಲರ್‌ಗಿಂತ ಕಡಿಮೆ ಆದಾಯ ಹೊಂದಿರುವ, ಅಧಿಕೃತ ಬಡತನ ರೇಖೆಯಂತೆ ಕೆಳಗಿರುವ ಜನಸಂಖ್ಯೆ ಸುಮಾರು 1.4 ಶತಕೋಟಿಯಷ್ಟಿದೆ ಎನ್ನುತ್ತದೆ ವಿಶ್ವ ಬ್ಯಾಂಕ್. ಸರಾಸರಿ 2.6 ಶತಕೋಟಿ ಜನರು ದಿನಕ್ಕೆ 2 ಡಾಲರ್‌ಗಿಂತ ಕಡಿಮೆ ಆದಾಯದಲ್ಲಿ ಬದುಕುತ್ತಿದ್ದಾರೆ.
ಇದನ್ನೂ ಓದಿ: ಜಾತಿ ದಬ್ಬಾಳಿಕೆ – ದೌರ್ಜನ್ಯಕ್ಕೆ ಕೊನೆಯೇ ಇಲ್ಲವೇ?: ಡಾ. ಎಂ. ಎಸ್. ಮಣಿ
ನಮ್ಮ 76 ವರ್ಷಗಳ ಸ್ವತಂತ್ರ ಭಾರತದಲ್ಲಿ ‘ಬಡತನ’ ನಿರ್ಮೂಲನೆ ಮರೀಚಿಕೆಯಾಗುಳಿದಿದೆ. ನಮ್ಮ ದೇಶದಲ್ಲಿ ‘ಬಡತನ’ಕ್ಕೆ ಶ್ರೇಣಿಕೃತ ವರ್ಗಗಳ ರಚನೆ ಕಾರಣವಾಗಿರುವುದು ಕಂಡುಬರುತ್ತದೆ. ಹಾಗೆಯೇ ಇವು ಜಾತಿ ಆಧಾರಿತ ವೃತ್ತಿಗಳಿಂದ ರೂಪಿತಗೊಂಡಿರುವುದು ಕಾಣಸಿಗುತ್ತದೆ. ಇಂತಹ ವ್ಯವಸ್ಥೆಯಲ್ಲಿ ಅದು ಹೇಗೆ ನಮ್ಮ ಆರ್ಥಿಕತೆ ಮತ್ತು ಪ್ರಗತಿ ಸಾಧನೆ ಸಾಧ್ಯ? ಇಂತಹ ಪರಿಸ್ಥಿತಿಯಲ್ಲಿ ‘ಬಡವ’ರಲ್ಲಿ ಭರವಸೆ ಮೂಡಿಸುವಂತಹ ‘ಗೃಹಜ್ಯೋತಿ’, ‘ಗೃಹಲಕ್ಷ್ಮಿ’, ‘ಅನ್ನಭಾಗ್ಯ’, ‘ಯುವನಿಧಿ’, ‘ಶಕ್ತಿ’ಯಂತಹ ಕಾರ್ಯಕ್ರಮಗಳು ‘ಬಡತನ’ದ ಹೊರೆ ಇಳಿಸಿದರೆ ಅದು ನಿಜಕ್ಕೂ ಶ್ಲಾಘನೀಯ ಕಾರ್ಯವಾದೀತು.
ಎರಡನೇ ವಿಶ್ವಯುದ್ಧದ ನಂತರ ‘ಅಭಿವೃದ್ಧಿ ಅರ್ಥಶಾಸ್ತ್ರ’ ಶಿಸ್ತಿನಿಂದ ಸಾಗಿತು. ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ರಾಜಕೀಯ ವಿಶ್ಲೇಷಕರು ‘ಬಡತನ’ ನಿವಾರಣೆಗಾಗಿ ಹಲವು ಮಾರ್ಗೋಪಾಯಗಳನ್ನು ಶೋಧಿಸಿದರು. ಇಂತಹ ಮಾರ್ಗದರ್ಶಕರಲ್ಲಿ ಸ್ವೀಡಿಷ್‌ನ ನೊಬೆಲ್ ಪ್ರಶಸ್ತಿ ಪುರಸ್ಕೃತ ಗುನ್ನಾರ್ ಮಿರ್ಡಾಲ್ ಕೂಡ ಒಬ್ಬರಾಗಿದ್ದಾರೆ. ಇವರು 1968ರಲ್ಲಿ Asian Drama: An Inquiry into the Poverty of Nations ಎಂಬ ಮಹತ್ವದ ಕೃತಿಯನ್ನು ಕೊಟ್ಟಿದ್ದಾರೆ. ಇದರಲ್ಲಿ ‘ಬಡತನ’ಕ್ಕೆ ಆರ್ಥಿಕ ಮಾನದಂಡ ಒಂದನ್ನೇ ಮಾನದಂಡವನ್ನಾಗಿಟ್ಟುಕೊಂಡು ಶೋಧಿಸಬಾರದು; ಬದಲಾಗಿ ‘ಬಡತನ ಮತ್ತು ಜಾತಿಪದರ’ಗಳ ಸಂಬಂಧದೊಳಗೆ ಹೊಕ್ಕು ಅಧ್ಯಯನ ಮಾಡಬೇಕೆಂದಿದ್ದಾರೆ.
ದುರ್ದೈವ ಎಂದರೆ, ವಿಶ್ವಬ್ಯಾಂಕ್‌ನ ‘ರಚನಾತ್ಮಕ ಹೊಂದಾಣಿಕೆ ಕಾರ್ಯಕ್ರಮ’ ಬಡರಾಷ್ಟ್ರಗಳಲ್ಲಿ ಮಾತ್ರ ಜಾರಿಗೆ ಬಂತು. ಇದು ಬಡರಾಷ್ಟ್ರಗಳ ವಿಸ್ತೃತ ಸಾಮಾಜಿಕ-ಆರ್ಥಿಕ ರಚನೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಇದರ ಉದ್ದೇಶ ಹಿಂದೆ ಇದ್ದ ‘ಸಾಮಾಜಿಕ ರಚನೆ’ಯನ್ನು ಮಾರುಕಟ್ಟೆಗೆ ಅಣಿಗೊಳಿಸುವುದಾಗಿತ್ತು. ಇದರಿಂದ ಬಡರಾಷ್ಟ್ರಗಳ ಮೇಲೆ ‘ವ್ಯತಿರಿಕ್ತ ಪರಿಣಾಮ’ಗಳನ್ನು ಗಣನೆಗೆ ತೆಗೆದುಕೊಂಡಿಲ್ಲ.
‘ಬಡತನ’ ಎಂದರೆ ಎಲ್ಲಾ ಬಗೆಯ ಉತ್ತಮ ಜೀವನದಿಂದ ವಂಚಿತರಾಗುವುದೆಂದು ವಿಶ್ವ ಬ್ಯಾಂಕ್ ವ್ಯಾಖ್ಯಾನಿಸಿದೆ. ಅಂದರೆ ಬಡವರು ಕಡಿಮೆ ಆದಾಯದೊಂದಿಗೆ ಘನತೆಯಿಂದ ಬದುಕಲು ಆಗದೆ, ಮೂಲಭೂತ ಸೌಕರ್ಯ ಮತ್ತು ಸೇವೆಗಳಿಂದ ವಂಚಿತರಾದವರಾಗಿರುತ್ತಾರೆ. ಇಂತಹ ‘ಬಡತನ’ವನ್ನು ಹೊಡೆದೋಡಿಸಬೇಕೆಂದರೆ, ‘ನಿವ್ವಳ ದೇಶಿಯ ಉತ್ಪನ್ನ’ವನ್ನು ಹೆಚ್ಚಿಸಿಕೊಳ್ಳಬೇಕಿದೆ. ಇದಕ್ಕಾಗಿ ವಿಶ್ವ ಬ್ಯಾಂಕ್ ಸಲಹೆ ನೀಡಿರುವಂತೆ 3 ಪ್ರಮುಖ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅವು ‘ಅವಕಾಶಗಳನ್ನು ಉತ್ತೇಜಿಸಬೇಕು’, ‘ಸಬಲೀಕರಣವನ್ನು ಸುಲಭಗೊಳಿಸಬೇಕು’ ಜೊತೆಗೆ ‘ಸುರಕ್ಷತೆ’ಯನ್ನು ಹೆಚ್ಚಿಸಬೇಕು.
ಇನ್ನೂ ನೆರೆಯ ಅಫ್ಘಾನಿಸ್ತಾನ, ಪಾಕಿಸ್ತಾನ, ನೂಗಿಯಾ ಮತ್ತು ಉತ್ತರ ಕೊರಿಯಾದಲ್ಲಿ ‘ಬಡತನ’ ನಿರ್ಮೂಲನೆಗೊಳಿಸಲು ಸಾಧ್ಯವಾಗಿಲ್ಲ. ಇದೇ ರೀತಿ ಜಗತ್ತಿನ, ಹಲವು ಭಾಗಗಳಲ್ಲಿ ‘ಬಡತನ’ ಕಡಿಮೆಗೊಳಿಸುವ ಪ್ರಯತ್ನ ನಿರಾಶಾದಾಯಕ ಫಲಿತಾಂಶ ಕೊಟ್ಟಿದೆ. ದಕ್ಷಿಣ ಅಮೆರಿಕದಲ್ಲಿ ‘ಬಡತನ’ ತೀವ್ರವಾಗಿ ಕುಸಿತ ಕಂಡಿದ್ದರೂ, 2015ರಿಂದಾಚೆಗೆ ಏರಿಕೆ ಕಾಣುತ್ತಿದೆ.
ಇಲ್ಲಿ ‘ಬಡತನ’ವನ್ನು ಆರ್ಥಿಕ ವ್ಯಾಖ್ಯಾನಕ್ಕೆ ಮಾತ್ರ ಸೀಮಿತಗೊಳಿಸಿದರೆ, ಅದು ಒಂದು ಆಯಾಮದ ‘ಪರಿಕಲ್ಪನೆ’ ಮಾತ್ರವಾಗುತ್ತದೆ. ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರ ಸ್ಥಿತ್ಯಂತರದ ಹೆಜ್ಜೆಯಲ್ಲಿನ ಪರಿಕಲ್ಪನೆಯನ್ನು ಬಹು ಆಯಾಮದಲ್ಲೂ ಕಾಣಬೇಕಿದೆ. ‘ಬಡತನ’ ಎಂದರೆ ಅಗತ್ಯ ವಸ್ತುಗಳ ಅಲಭ್ಯತೆ ಅಥವಾ ವೈಯಕ್ತಿಕ ಅಗತ್ಯಗಳಿಗೆ ಆದಾಯದ ಕೊರತೆಯಾಗಿದೆ. ‘ಬಡತನ’ವು ಆರ್ಥಿಕ ಮತ್ತು ಸಾಮಾಜಿಕ ಅಂಶಗಳನ್ನು ಒಳಗೊಂಡಿದೆ. ಸೇನ್ ಅವರು ‘ಬಡತನ’ವನ್ನು ‘ಸಂಪೂರ್ಣ ಬಡತನ’ ಹಾಗೂ ‘ಸಾಪೇಕ್ಷ ಬಡತನ’ ಎಂದು ವರ್ಗೀಕರಿಸಿದ್ದಾರೆ. ಮೂಲಭೂತ ವೈಯಕ್ತಿಕ ಅಗತ್ಯಗಳನ್ನು ಖರೀದಿಸಲು ಅಗತ್ಯವಾದ ಸಾಧನಗಳ ಸಂಪೂರ್ಣ ಕೊರತೆಯೇ ‘ಸಂಪೂರ್ಣ ಬಡತನ’. ಸಾಪೇಕ್ಷ ಅಭಾವದೊಂದಿಗೆ ಸಂಬಂಧಿಸಿರುವುದೇ ‘ಸಾಪೇಕ್ಷ ಬಡತನ.’ ‘ಬಡತನ’ ಹಿಂಸಾಚಾರದ ಒಂದು ಕೆಟ್ಟ ರೂಪವೆಂದು ಮಹಾತ್ಮಾ ಗಾಂಧಿಯವರು ವ್ಯಾಖ್ಯಾನಿಸಿದ್ದರು. ‘ಹಿಂಸಾಚಾರ ಪೀಡಿತ’ ಸಮಾಜವು ಪಾರ್ಶ್ವವಾಯುವಿಗೆ ತುತ್ತಾಗುತ್ತದೆ.
‘ಬಡತನ’ ಮತ್ತು ಸಂಬಂಧಿತ ಸಂಕಟಗಳ ಜೀವ-ಜೀವನ, ಆರೋಗ್ಯ, ಭವಿಷ್ಯವನ್ನು ಅತ್ಯಂತ ತೀವ್ರವಾಗಿ ಕಾಡುತ್ತದೆ. ‘ಬಡತನ’ ನಮ್ಮ ನಾಡು, ದೇಶ ಮಾತ್ರವಲ್ಲ ಮೇಲೆ ಹೇಳಿದಂತೆ ನೆರೆಯ ಪಾಕಿಸ್ತಾನ, ಚೈನಾ, ಅಫ್ಘಾನಿಸ್ತಾನ ಎಲ್ಲಿದ್ದರೂ ಅಲ್ಲಿನ ಸಮೃದ್ಧಿಗೊಂದು ಸವಾಲು.
ದೇಹದ ಅಳತೆ ಗೊತ್ತಿಲ್ಲದೆ ಅಂಗಿ ಹೊಲಿಸಿದಂತೆ, ಜೀವನದ ಸಂಕೀರ್ಣ ಸನ್ನಿವೇಶ ಅರಿಯದೆ ಎಲ್ಲರಿಗೂ ಒಂದೇ ಬಗೆಯ ಪರಿಹಾರ ಒದಗಿಸಬಾರದು. ‘ಬದುಕು’ ಬದಲಿಸುವ ಪರಿಹಾರ ಕೈಗೊಳ್ಳಬೇಕು. ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡುಫ್ಲೋ ಅವರು ತಮ್ಮ Poor Economics ಕೃತಿಯಲ್ಲಿ ಬೃಹತ್ ಯೋಜನೆಗಳ ಮೂಲಕ ಬಡತನ ನಿವಾರಿಸುವ ಕ್ರಮಗಳನ್ನು ವಿರೋಧಿಸಿದ್ದಾರೆ. ದೊಡ್ಡ ಮಟ್ಟದ ಯೋಜನೆಗಳಿಂದ ‘ಬಡತನ’ ಹೋಗಲಾಡಿಸಲು ಸಾಧ್ಯವಿಲ್ಲ. ಬಡವರ ನೈಜ ಜೀವನ, ನೆಲದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಚಿಕ್ಕದಾಗಿ ಯೋಚಿಸುವ ಅಗತ್ಯವಿದೆ.
ನನ್ನಲ್ಲೊಂದು ಪ್ರಶ್ನೆ ಬಹು ವರ್ಷಗಳಿಂದ ಕಾಡುತ್ತಿದೆ. ಅದು ಚುನಾವಣಾ ಪ್ರಜಾಪ್ರಭುತ್ವದಲ್ಲಿ ಬಡವರಿಗೆ ಮೇಲುಗೈ ಸಾಧಿಸಲು ಸಾಧ್ಯವಾಗಿದೆಯೇ? ಜಾತಿ ಮತ್ತು ವರ್ಗವನ್ನು ಆಧರಿಸಿದ ಪೋಷಕ ಜಾಲಗಳು ಔಪಚಾರಿಕ ಪ್ರಜಾಪ್ರಭುತ್ವ ಸ್ಥಾಪಿಸಲು ಅನುವು ಮಾಡಿಕೊಟ್ಟಿವೆ. ಇದೇ ವಸ್ತುನಿಷ್ಠ ಪ್ರಜಾಪ್ರಭುತ್ವೀಕರಣಕ್ಕೆ ಅಡ್ಡಿಯುಂಟುಮಾಡುತ್ತಿದೆ.
ಇನ್ನೂ ಸ್ವಾತಂತ್ರ್ಯದ ಆರಂಭಿಕ ವರ್ಷಗಳಿಂದ ಇಲ್ಲಿಯವರೆಗೆ ಇಂದಿರಾ ಗಾಂಧಿ ಯುಗದಲ್ಲಿ ಮಾತ್ರ ‘ಸಮೂಹ ಪ್ರಜಾಪ್ರಭುತ್ವ ಮತ್ತು ಜನತಾವಾದದ ವಿಚಾರ’ಗಳು ಮುನ್ನೆಲೆಗೆ ಬಂದಿದ್ದವು. ಇದೀಗ ಸಿದ್ದರಾಮಯ್ಯ ಅವರ ಆಡಳಿತದಲ್ಲಿಯೂ ‘ಸಮೂಹ ಪ್ರಜಾಪ್ರಭುತ್ವ ಮತ್ತು ಜನತಾವಾದ’ ತೀವ್ರವಾಗಿ ಚರ್ಚೆಗೆ ಒಳಪಡುತ್ತಿದೆ.
ಇಂತಹದ್ದೊಂದು ಚರ್ಚೆ ‘ರಾಜಕೀಯ ಕದನ’ಕ್ಕೆ ನಾಂದಿ ಆಗಬಾರದು. ಸದ್ದು ಮಾಡುವ ‘ಸಾಮಾಜಿಕ ನೀತಿ’ಗಳು, ‘ದೊಡ್ಡದೊಡ್ಡ ಯೋಜನೆ’ಗಳು, ‘ಬೃಹತ್ ಗಾತ್ರದ ನಿಧಿ’ಯೂ ಬಡಜನರಿಗೆ ಬೇಡವೇಬೇಡ. ಸದ್ಯಕ್ಕೆ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಶಕ್ತಿಯಂತಹ ಕಾರ್ಯಕ್ರಮಗಳೇ ಸಾಕು. ಇವುಗಳ ಮೂಲಕ ‘ಬಡತನ’ ನಿರ್ಮೂಲನೆಗೆ ಪ್ರಯತ್ನಿಸಬೇಕಿದೆ. ಇವು ‘ಬಡವರ’ ಜೀವನದಲ್ಲಿ ಬೆಟ್ಟದಷ್ಟು ಬದಲಾವಣೆಯನ್ನು ಖಂಡಿತವಾಗಿಯೂ ತರುತ್ತವೆ.
ಹೀಗಾಗಿ ‘ಬಡತನ’ ಒಂದು ಅಸಹ್ಯ, ಶಾಪ ಎಂಬುದನ್ನು ನಾವು ಎಂದೆಂದಿಗೂ ಮರೆಯಬಾರದು. ನಮ್ಮ ದೇಶದಲ್ಲಿ ಮೂರರ ಒಂದು ಭಾಗದಷ್ಟು ಜನ ‘ಬಡತನ’ದ ರೇಖೆಯ ಕೆಳಗಿದ್ದಾರೆ. ದುರ್ಬಲರ ಬದುಕನ್ನು ಹಸನಾಗಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಇದಕ್ಕೆ ಗಟ್ಟಿಯಾದ ಹೆಜ್ಜೆ ಇಡುವ ಅಗತ್ಯವಿದೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ‘ಬಡತನ’ ನಿರ್ಮೂಲನೆಗೆ ಅಧಿಕಾರವಹಿಸಿಕೊಂಡ ದಿನವೇ ‘ಪಂಚ ಗ್ಯಾರಂಟಿ’ಗಳ ತಾತ್ವಿಕ ಆದೇಶ ಹೊರಡಿಸಿತ್ತು.
ಸರ್ಕಾರದ ಜನಪ್ರಿಯ ನೀತಿಗಳಿಗೆ ಜನ ಎಲ್ಲಿ ಮಾರುಹೋಗುತ್ತಾರೆಂಬ ಭೀತಿಯೂ ವಿರೋಧಪಕ್ಷಗಳಲ್ಲಿದ್ದಂತಿದೆ. ಇಂದಿರಾ ಗಾಂಧಿ ಅವರ ‘ಗರೀಭಿ ಹಠಾವೋ’ ಘೋಷಣೆ ನಂತರ, ದೇಶದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವುದು ಸಿದ್ದರಾಮಯ್ಯ ಅವರ ಭಾಗ್ಯ ಯೋಜನೆಗಳು ಮಾತ್ರ. ಹಾಗಂತ ಇತರರು ಅಧಿಕಾರದಲ್ಲಿದ್ದಾಗ ಬಡತನ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಿಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಇತರರು ಅಧಿಕಾರದಲ್ಲಿದ್ದಾಗ ‘ಬಡತನ’ ಅಳಿಸಲು ಶ್ರಮಿಸಿದ್ದರಾದರೂ, ಯಾವುದೇ ಮಹತ್ತರ ಬದಲಾವಣೆ ತರಲು ಸಾಧ್ಯವಾಗಿರುವುದಿಲ್ಲ.
ಐದು ಗ್ಯಾರಂಟಿಗಳ ಮೂಲಕ ‘ಬಡತನ’ವನ್ನು ನಿವಾರಿಸಲು ಸಣ್ಣ ಹೆಜ್ಜೆಯನ್ನಿಟ್ಟಿರುವ ಸರ್ಕಾರಕ್ಕೊಂದು ಸಲಹೆ ಇದೆ. ನಾಡಿನ ನಿರ್ವಸಿತರಿಗೊಂದು ಸೂರು, ಆರೋಗ್ಯ ರಕ್ಷಣೆಗಾಗಿ ಏಮ್ಸ್‌ನಂತಹ ಆಸ್ಪತ್ರೆ, ನೈರ್ಮಲ್ಯ ವ್ಯವಸ್ಥೆಯನ್ನು ಒದಗಿಸಿಕೊಡಲು ಮುಂದಾಗಬೇಕಿದೆ. ಜನಸಂಖ್ಯೆ ಸ್ಫೋಟ, ಶಿಕ್ಷಣದ ಕೊರತೆ ಮತ್ತು ನಿರುದ್ಯೋಗದಂತಹ ಅಂಶಗಳು ಕೆಳಸ್ತರದ ಜನರನ್ನು ಹೆಚ್ಚಾಗಿ ಬಾಧಿಸುತ್ತಿವೆ. ಇವೆಲ್ಲವನ್ನೂ ಸಮಗ್ರವಾಗಿ ಪರಿಗಣನೆಗೆ ತೆಗೆದುಕೊಂಡು ಜನಸಾಮಾನ್ಯರ ಸಂಕಷ್ಟಗಳನ್ನು ಮತ್ತು ಸಮಾಜದಲ್ಲಿರುವ ಅಸಮಾನತೆಯನ್ನು ತಗ್ಗಿಸುವಂತಹ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿ ಅವುಗಳ ಅನುಷ್ಠಾನಕ್ಕೆ ಸರ್ಕಾರ ಇನ್ನಷ್ಟು ಕೆಲಸ ಮಾಡಬೇಕಿದೆ.

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ, ಮನುಭಾರತ ಪುಸ್ತಕಗಳು ಪ್ರಕಟವಾಗಿದೆ.


