Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-8; ಭಾಗ-1)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-8; ಭಾಗ-1)

- Advertisement -
- Advertisement -

ಗಾನಿಯ ಮತ್ತು ಅವನ ಕುಟುಂಬ ವಾಸಿಸುತ್ತಿದ್ದ ಮನೆಯು ಆ ಕಟ್ಟಡದ ಮೂರನೇ ಮಹಡಿಯಲ್ಲಿತ್ತು, ಅಲ್ಲಿಗೆ ಹೋಗಬೇಕಾದರೆ ಸಣ್ಣದಾದ ಅಚ್ಚುಕಟ್ಟಾದ ಮೆಟ್ಟಿಲುಗಳನ್ನ ಹತ್ತಿ ಹೋಗಬೇಕಾಗಿತ್ತು. ಆ ಮನೆಯಲ್ಲಿ ಏಳು ಕೋಣೆಗಳಿದ್ದವು, ಸಾಕಷ್ಟು ಚೆನ್ನಾಗಿದ್ದ ವಸತಿ ಮತ್ತು ಈ ಮನೆ ಒಬ್ಬ ವರ್ಷಕ್ಕೆ ಎರಡು ಸಾವಿರ ರೂಬಲ್ಲುಗಳನ್ನ ಸಂಪಾದಿಸುತ್ತಿದ್ದ ಗುಮಾಸ್ತನಂತವನಿಗೆ ಸ್ವಲ್ಪ ಜಾಸ್ತಿಯೇ ಚೆನ್ನಾಗಿದೆ ಎಂದು ಯಾರೇ ಆದರೂ ಹೇಳಬಹುದಿತ್ತು. ಆ ಕಟ್ಟಡದಲ್ಲಿ ಕೆಲವು ಜನರಿಗೆ ಭೋಜನ ವಸತಿಗೆ ಬಾಡಿಗೆಗೆ ಕೊಡಬಹುದಾದಂತಹ ರೀತಿಯಲ್ಲಿ ಅದನ್ನ ವಿನ್ಯಾಸಗೊಳಿಸಲಾಗಿತ್ತು. ಗಾನಿಯಾನ ಇಷ್ಟಕ್ಕೆ ವಿರುದ್ಧವಾಗಿದ್ದರೂ ಕೂಡ, ಅವನ ತಾಯಿ ಮತ್ತು ಸೋದರಿ ವಾರ್ವರ ಅಡ್ರಲಿಯೊನೊವ್ನ ಅವರ ಒತ್ತಾಯದಿಂದ ಕೆಲವರಿಗೆ ಬಾಡಿಗೆಗೂ ಕೊಡಲಾಗಿತ್ತು. ವಾರ್ವರಳ ಬಹಳ ದಿನದ ಇಚ್ಚೆಯಂತೆ, ಇಡೀ ಕುಟುಂಬದ ಆದಾಯ ಸ್ವಲ್ಪ ಮಟ್ಟಿಗಾದರೂ ಹೆಚ್ಚಾಗುವಂತೆ ಪ್ರಯತ್ನಗಳನ್ನ ಮಾಡುವುದು, ಅದಕ್ಕೋಸ್ಕರ ಈ ವಸತಿಗಳನ್ನ ಬಾಡಿಗೆಗೆ ಕೊಡುವ ನಿರ್ಧಾರ ಕೈಗೊಂಡಿದ್ದರು. ಗಾನಿಯ ಈ ನಿರ್ಧಾರದ ಬಗ್ಗೆ ಅಸಂತುಷ್ಟನಾಗಿದ್ದ. ಅದು ಅವನ ಮರ್ಯಾದೆಗೆ ಧಕ್ಕೆ ತರುತ್ತದೆ ಎಂದು ಪರಿಗಣಿಸಿದ್ದ, ನಂತರ ಸಮಾಜದ ಹಲವು ವಲಯಗಳಲ್ಲಿ ಮುಖ ತೋರಿಸಲು ಹಿಂಜರಿಯುತ್ತಿದ್ದ; ಅದೂ ತನ್ನ ಭವಿಷ್ಯವನ್ನ ರೂಪಿಸಿಕೊಳ್ಳಲು ಓಡಾಡುತ್ತಿದ್ದ ಉನ್ನತಮಟ್ಟದ ಸಹವಾಸವಿರುತ್ತಿದ್ದ ಅವನ ಸಂಗಡಿಗರ ನಡುವೆ. ಕೀಳುಮಟ್ಟದ್ದು ಎಂದು ಅವನು ಪರಿಗಣಿಸಿದ್ದ ಈ ರೀತಿಯ ನಡೆಗಳು, ಅವನ ದೃಷ್ಟಿಯಲ್ಲಿ ಬಹಳಷ್ಟು ಅವಮಾನಕರವಾದವಾಗಿದ್ದು, ಅವನು ಭವಿಷ್ಯದಲ್ಲಿ ಉನ್ನತ ಸ್ಥಾನಗಳನ್ನು ತಲುಪುವ ಪ್ರಯತ್ನಗಳಿಗೆ ಹಿನ್ನಡೆಯಾಗಬಹುದು ಎಂದು ತಿಳಿದಿದ್ದ. ಈಗ ಅವನ ಮನಸ್ಸು ಸದಾಕಾಲ ಉದ್ರೇಕಗೊಂಡ ಸ್ಥಿತಿಯಲ್ಲಿಯೇ ಇರುತ್ತಿತ್ತು, ಅವನಲ್ಲಿ ಉಂಟಾಗುತ್ತಿದ್ದ ಅತಿಯಾದ ಕ್ರೋಧದ ಪ್ರಮಾಣಕ್ಕೂ ಮತ್ತು ಅದನ್ನುಂಟುಮಾಡುತ್ತಿದ್ದ ಕಾರಣಗಳಿಗೂ ಅಳತೆ ಮೀರಿದ ವ್ಯತ್ಯಾಸವಿರುತ್ತಿತ್ತು. ಅವನು ಈ ರೀತಿಯ ಬದುಕನ್ನ ಸಹಿಸಿಕೊಳ್ಳುತ್ತಿದ್ದಕ್ಕೆ ಇದ್ದ ಒಂದೇ ಕಾರಣವೆಂದರೆ, ಅವನ ಅಂತಃಸತ್ವದ ಜೊತೆಗೆ ಅವನಿಗಿದ್ದ ತಿಳಿಯಾದ ತಿಳಿವಳಿಕೆ, ಅದೇನೆಂದರೆ ಸದ್ಯದಲ್ಲೇ ಇದನ್ನೆಲ್ಲಾ ಬದಲಾಯಿಸಿಬಿಡುತ್ತೇನೆ ಎನ್ನುವ ನಂಬಿಕೆ ಮತ್ತು ಮುಂದೊಂದು ದಿನ ತನ್ನ ಇಷ್ಟದಂತೆಯೇ ಎಲ್ಲವೂ ನಡೆಯುತ್ತದೆ ಎನ್ನುವ ವಿಶ್ವಾಸ. ಆದರೂ ಇದನ್ನ ಸಾಕಾರಗೊಳಿಸುವುದರ ಬಗ್ಗೆ ಹುಡುಕಿಕೊಂಡಂತಹ ದಾರಿಗಳು ಮಾತ್ರ ಅವನನ್ನು ಇನ್ನೂ ಹೆಚ್ಚಿನ ಪ್ರಕ್ಷುಬ್ಧತೆಯ ಕಡೆಗೆ ಎಳೆದುಕೊಂಡು ಹೋಗುತ್ತಿದ್ದವು.

ಅವನ ವಸತಿ ಒಂದು ಓಣಿಯಂತಿದ್ದ ಮಾರ್ಗದಿಂದ ಬೇರ್ಪಟ್ಟಿತ್ತು, ಅದು ನೇರವಾಗಿ ಹಜಾರದ ಪ್ರವೇಶದ್ವಾರಕ್ಕೆ ಹೋಗುತ್ತಿತ್ತು. ಈ ಪ್ರವೇಶ ದಾರಿಯ ಇನ್ನೊಂದು ಕಡೆಯಲ್ಲಿ ಮೂರು ವಸತಿಗಳನ್ನು ಹೋಲುವ ರೂಮುಗಳಿದ್ದವು, ಅವುಗಳನ್ನು ಉನ್ನತ ಮೂಲಗಳಿಂದ ಶಿಫಾರಸನ್ನ ತಂದವರಿಗೆ ಮಾತ್ರ ಬಾಡಿಗೆಗೆ ಕೊಡಲಾಗುವುದೆಂದು ನಿರ್ಧರಿಸಲಾಗಿತ್ತು. ಈ ಪ್ರವೇಶ ಹಾದಿಯ ಕೊನೆಯಲ್ಲಿ, ಅಡಿಗೆಮನೆಗೆ ಹತ್ತಿರವಾಗಿದ್ದ ಇನ್ನೊಂದು ಪುಟ್ಟದಾದ ಕೋಣೆಯೂ ಇತ್ತು. ಇದನ್ನು ಜನರಲ್ ಇವಾಲ್ಜಿನ್‌ಗೆ ಕೊಡಲಾಗಿತ್ತು, ಮತ್ತು ಅವನೇ ಈ ಮನೆಯ ನಾಮಕಾವಸ್ತೆ ಯಜಮಾನ. ಅವನೊಂದು ದೊಡ್ಡ ಅಗಲವಾದ ಸೋಫಾದ ಮೇಲೆ ಮಲಗುತ್ತಿದ್ದ, ಮತ್ತು ಅವನಿಗೆ ಅಡುಗೆಮನೆಯ ಮೂಲಕ ಓಡಾಡುವ, ಹಿಂದಿನ ಮಹಡಿ ಮೆಟ್ಟಲುಗಳಲ್ಲಿ ಹತ್ತಿ ಇಳಿಯುವ ಅವಕಾಶ ಇತ್ತು. ಕೋಲಿಯ, ಗಾನಿಯಾನ ತಮ್ಮ, 13 ವರ್ಷದ ಶಾಲಾ ವಿದ್ಯಾರ್ಥಿ ಈ ಕೋಣೆಯನ್ನ ತಂದೆಯ ಜೊತೆಯಲ್ಲಿ ಹಂಚಿಕೊಂಡಿದ್ದ. ಅವನೂ ಕೂಡ ಅಲ್ಲಿದ್ದ ಒಂದು ಹಳೆಯ ಸೋಫಾದ ಮೇಲೆ ಮಲಗುತ್ತಿದ್ದ, ಅದೊಂದು ಚಿಕ್ಕದಾದ ಮಲಗಲು ಅನಾನುಕೂಲವಾದ ಜಾಗವಾದದ್ದರಿಂದ ಅದರ ಮೇಲೆ ಕಂಬಳಿಯೊಂದನ್ನು ಹೊದ್ದಿಸಲ್ಪಟ್ಟಿತ್ತು; ತನ್ನ ತಂದೆಯನ್ನ ಸದಾಕಾಲ ಗಮನಿಸುತ್ತಿರಬೇಕಾದ ಅವಶ್ಯಕತೆ ಬಹಳ ಇದ್ದಿದ್ದರಿಂದ ಕೋಲಿಯನ ಮುಖ್ಯ ಕರ್ತವ್ಯ ಅವರನ್ನು ನೋಡಿಕೊಳ್ಳುವುದಾಗಿತ್ತು.

ಮೂರು ರೂಮುಗಳಲ್ಲಿ ಪ್ರಿನ್ಸ್‌ಗೆ ಬಾಡಿಗೆಗೆ ಸಿದ್ಧಪಡಿಸಿದ್ದ ಮಧ್ಯದ ರೂಮನ್ನು ಕೊಡಲಾಯಿತು, ಮೊದಲನೆಯದರಲ್ಲಿ ಫ್ರೆಡಿಶೆಂಕೊ ಅನ್ನುವವನು ವಾಸವಾಗಿದ್ದ ಮತ್ತು ಮೂರನೆಯದು ಖಾಲಿ ಇತ್ತು.

ಆದರೆ ಗಾನಿಯ ಪ್ರಿನ್ಸ್‌ನನ್ನು ಮೊದಲು ತನ್ನ ಕುಟುಂಬ ವಾಸಿಸುವ ಮನೆಗೆ ಕರೆದುಕೊಂಡು ಹೋದ. ಈ ಮನೆಯಲ್ಲಿ ಮುಂದುಗಡೆ ಒಂದು ಸ್ವಾಗತ ಕೋಣೆಯಿತ್ತು ಮತ್ತು ಅದನ್ನ ಬೇಕಾದಾಗ ಡೈನಿಂಗ್ ಕೋಣೆಯನ್ನಾಗಿ ಬದಲಾಯಿಸಿಕೊಳ್ಳಬಹುದಾಗಿತ್ತು; ಒಂದು ಹಜಾರ, ಅದು ಬೆಳಗಿನ ಹೊತ್ತು ಹಜಾರವಾಗಿರುತ್ತಿತ್ತು ಮತ್ತು ಸಂಜೆಯ ವೇಳೆಗೆ ಗಾನಿಯಾನ ಓದುವ ಕೋಣೆಯಾಗಿಬಿಡುತ್ತಿತ್ತು ಮತ್ತು ರಾತ್ರೆಗೆ ಅವನ ಮಲಗುವ ಕೋಣೆ ಕೂಡ; ಕೊನೆಗೆ ನೀನ ಅಲೆಕ್ಸಂಡ್ರೊವ್ನಾಳ ಮತ್ತು ವಾರ್ವರ ಇಬ್ಬರ ಒಂದು ಸಣ್ಣ ಮಲಗುವ ಕೋಣೆ, ಅದನ್ನೂ ಅಮ್ಮ ಮಗಳು ಇಬ್ಬರೂ ಹಂಚಿಕೊಳ್ಳುತ್ತಿದ್ದರು.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇಡೀ ಪ್ರದೇಶ ಬಹಳ ಕಿಷ್ಕಿಂಧೆವಾಗಿತ್ತು ಮತ್ತು ಒಂದು ಪಾರ್ಟಿಯನ್ನ ಏರ್ಪಡಿಸುವುದಕ್ಕೂ ಕಷ್ಟಕರವಾಗಿತ್ತು. ಈ ರೀತಿಯ ಪರಿಸ್ಥಿತಿಯ ಬಗ್ಗೆ ಗಾನಿಯ ಆಗಾಗ್ಗೆ ಅಸಹನೆಗೊಂಡು ತನ್ನ ಹಲ್ಲನ್ನು ಕಡಿಯುತ್ತಿದ್ದ; ಅವನು ತನ್ನ ತಾಯಿಯ ಜೊತೆ ಸಹೃದಯತೆಯಿಂದ ಇರಲು ಹವಣಿಸುತ್ತಿದ್ದರೂ ಕೂಡ, ಆ ಮನೆಯ ಒಳಗಡೆಗೆ ಬಂದ ಯಾರಿಗೇ ಆದರೂ ಎದ್ದುಕಾಣಿಸುತ್ತಿದ್ದದ್ದು ಗಾನಿಯ ಆ ಕುಟುಂಬದಲ್ಲಿನ ಒಬ್ಬ ನಿರಂಕುಶ ಪ್ರಭು ಎಂದು.

ಸ್ವೆಟರ್ ಹೆಣೆಯುತ್ತಾ ಮತ್ತು ಇವಾನ್ ಪೆಟ್ರೊವಿಚ್ ಪ್ಟಿಟ್ಸಿನ್ ಎಂಬ ವ್ಯಕ್ತಿಯ ಜೊತೆ ಮಾತನಾಡುತ್ತಾ ನೀನ ಅಲೆಕ್ಸಂಡ್ರೊವ್ನ ಮತ್ತು ಅವಳ ಮಗಳು ಇಬ್ಬರೂ ಹಜಾರದಲ್ಲಿ ಕುಳಿತಿದ್ದರು.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-7; ಭಾಗ-3)

ಈ ಮನೆಯ ಯಜಮಾನಿಗೆ ಸುಮಾರು ಐವತ್ತು ವರ್ಷ ವಯಸ್ಸಾಗಿತ್ತು, ತೆಳ್ಳನೆಯ ಮುಖವನ್ನ ಹೊಂದಿದ್ದಳು ಮತ್ತು ಕಣ್ಣುಗಳ ಕೆಳಗೆ ಕಪ್ಪು ಗೆರೆಗಳು ಮೂಡಿದ್ದವು. ಅವಳು ದುಃಖದಿಂದಿರುವ ರೋಗಗ್ರಸ್ಥೆಯಂತೆ ಕಾಣುತ್ತಿದ್ದಳು; ಆದರೆ ಇವೆಲ್ಲದರ ಹೊರತಾಗಿಯೂ ಅವಳ ಮುಖದಲ್ಲಿನ ಸೌಮ್ಯ ಕಳೆ ಎದ್ದುಕಾಣುತ್ತಿತ್ತು. ಅವಳ ತುಟಿಗಳಿಂದ ಹೊರಟ ಮೊದಲನೆಯ ಮಾತಿನಿಂದಲೇ, ಅವಳೊಬ್ಬಳು ಗಂಭೀರವಾದ ಮತ್ತು ವಿಶಿಷ್ಟವಾಗಿ ನಿಷ್ಕಪಟ ಸ್ವಭಾವದ ಹೆಂಗಸು ಎಂದು ಯಾರು ಬೇಕಾದರೂ ನಿರ್ಧಾರಕ್ಕೆ ಬರುವಂತಿತ್ತು. ಅವಳ ದುಃಖಕರವಾದ ಮುಖಭಾವದ ಹೊರತಾಗಿಯೂ, ಅವಳನ್ನು ನೋಡಿದಾಗ, ಸಾಕಷ್ಟು ದೃಢತೆಯಿಂದಿರುವ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹೆಂಗಸು ಅವಳೆನ್ನುವುದು ತಿಳಿಯುತ್ತಿತ್ತು.

ಅವಳು ಸಾಧಾರಣವಾದ ಮತ್ತು ಸರಳವಾದ ಉಡುಗೆತೊಡುಗೆಯನ್ನು ತೊಟ್ಟಿದ್ದಳು, ಅದು ಗಾಢವಾದ ಬಣ್ಣದಿಂದ ಕೂಡಿರುತ್ತಿತ್ತು ಮತ್ತು ಅವಳ ವಯಸ್ಸಿಗೆ ತಕ್ಕಂತಿತ್ತು; ಅವಳ ಮುಖ ಮತ್ತು ಅವಳ ಹೊರನೋಟ, ಅವಳು ಹಿಂದೆಲ್ಲಾ ಒಳ್ಳೆಯ ದಿನಗಳನ್ನ ಕಂಡವಳು ಎಂಬುದನ್ನ ಸೂಚಿಸುತ್ತಿತ್ತು.

ವಾರ್ವರ ಇಪ್ಪತ್ತಮೂರು ಬೇಸಿಗೆಗಳನ್ನ ಕಂಡಂತಹ ಹುಡುಗಿ, ಸಾಧಾರಣ ಎತ್ತರ, ತೆಳ್ಳಗಿನ ದೇಹದ ಹುಡುಗಿ, ಆದರೆ ಅವಳ ಮುಖ ವಾಸ್ತವವಾಗಿ ಸುಂದರವಾಗಿಲ್ಲದಿದ್ದರೂ ಮೋಹಕ ಶಕ್ತಿಯನ್ನ ಹೊಂದಿದ ಹುಡುಗಿಯರ ಮುಖಗಳು ಇರುವ ಹಾಗೆಯೇ ಇತ್ತು; ಅದನ್ನ ಗಮನಿಸಿದವರು ಯಾರೇ ಆದರೂ ಕೂಡ ಆಕರ್ಷಿತರಾಗುವಂತಿತ್ತು.

ಅವಳು ಬಹಳಷ್ಟು ತನ್ನ ತಾಯಿಯಂತೆಯೇ ಇದ್ದಳು; ಅವಳ ಉಡುಗೆಯೂ ಕೂಡ ತಾಯಿ ತೊಡುತ್ತಿದ್ದ ಉಡುಗೆಯಂತೆಯೇ ಇತ್ತು, ಅಂದರೆ ಅದರ ಅರ್ಥ ಅವಳಿಗೆ ಆಧುನಿಕ ಉಡುಗೆತೊಡಿಗೆಗಳ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ ಎನ್ನುವುದು. ಅವಳ ಕಂದು ಬಣ್ಣದ ಕಣ್ಣುಗಳಲ್ಲಿನ ಅಭಿವ್ಯಕ್ತಿ, ಉಲ್ಲಾಸದಿಂದ ಮತ್ತು ಸೌಮ್ಯದಿಂದ ಇರುತ್ತಿತ್ತು; ಆ ರೀತಿ ಇಲ್ಲದಿರುವಾಗ, ಅಂದರೆ ಇತ್ತೀಚಿನ ದಿನಗಳಲ್ಲಿನಂತೆ, ಅದು ಸಂಪೂರ್ಣವಾಗಿ ಆಲೋಚನಾ ಮಗ್ನತೆಯಿಂದ ಮತ್ತು ಆತಂಕದಿಂದ ಕೂಡಿರುತ್ತಿತ್ತು. ಅವಳ ತಾಯಿಯಲ್ಲಿದ್ದಂತೆ ಅವಳಲ್ಲೂ ಕೂಡ ದೃಢತೆ ಮತ್ತು ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವ ಸ್ವಭಾವವನ್ನ ಅವಳ ಮುಖದಲ್ಲಿ ಕಾಣಬಹುದಿತ್ತು, ಆದರೆ ಅವಳಲ್ಲಿನ ಶಕ್ತಿ ನೀನ ಅಲೆಕ್ಸಂಡ್ರೊವ್ನಳಲ್ಲಿನಲ್ಲಿನದಕ್ಕಿಂತ ಹೆಚ್ಚು ಸಾಮರ್ಥ್ಯದಿಂದ ಕೂಡಿತ್ತು. ಅವಳು ಆಗಾಗ್ಗೆ ಸ್ತಿಮಿತವನ್ನ ಕಳೆದುಕೊಂಡು ಕೂಗಾಡುವ ಸ್ವಭಾವದವಳು ಮತ್ತು ಅವಳ ಸೋದರ ಗಾನಿಯಾ ಕೂಡ ಅವಳ ಬಗ್ಗೆ ಸ್ವಲ್ಪ ಭಯ ಪಡುತ್ತಿದ್ದ.

ಪ್ರಸಕ್ತದಲ್ಲಿ ಅಲ್ಲಿ ಭೇಟಿ ಮಾಡಲು ಬಂದಿದ್ದ ಪ್ಟಿಟ್ಸಿನ್ ಕೂಡ ಅವಳ ಬಗ್ಗೆ ಹೆದರುತ್ತಿದ್ದ. ಅವನು ಮೂವತ್ತು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಯುವಕ, ಸಾಧಾರಣವಾದ ಉಡುಗೆಯೇ ಆದರೂ, ಅದನ್ನೇ ಸದಭಿರುಚಿಯಿಂದ ತೊಟ್ಟಿದ್ದ. ಅವನ ನಡವಳಿಕೆಗಳು ಒಪ್ಪುವಂತಿದ್ದವು, ಆದರೆ ಅದು ಸ್ವಲ್ಪ ಜಾಸ್ತಿಯೇ ಅನ್ನುವ ರೀತಿಯಲ್ಲಿದ್ದವು. ಅವನ ಕಪ್ಪಗಿನ ಗಡ್ಡ ಅವನು ಯಾವುದೇ ಸರ್ಕಾರಿ ಕೆಲಸದಲ್ಲಿಲ್ಲ ಅನ್ನುವುದನ್ನ ಸೂಚಿಸುತ್ತಿತ್ತು. ಅವನು ಚೆನ್ನಾಗಿ ಮಾತನಾಡಬಲ್ಲವನಾಗಿದ್ದ, ಆದರೆ ಅವನ ಆದ್ಯತೆ ಮೌನವಾಗಿರುವುದಾಗಿತ್ತು. ಒಟ್ಟಾರೆಯಾಗಿ ಅವನು ಪ್ರಭಾವಶಾಲಿ ವ್ಯಕ್ತಿಯಾಗಿದ್ದ. ಅವನು ಸ್ಪಷ್ಟವಾಗಿ ವಾರ್ಯಳಿಂದ ಆಕರ್ಷಿತನಾಗಿದ್ದ, ಮತ್ತು ತನ್ನ ಭಾವನೆಗಳನ್ನು ರಹಸ್ಯವಾಗಿಡುವ ಪ್ರಯತ್ನವನ್ನೇನೂ ಮಾಡಿರಲಿಲ್ಲ. ಅವಳು ಅವನನ್ನು ಸ್ನೇಹಿತನ ರೀತಿಯಲ್ಲಿ ನಂಬುತ್ತಿದ್ದಳು, ಆದರೆ ಅವಳು ಯಾವುದೇ ರೀತಿಯಲ್ಲಿ ಇಲ್ಲಿಯವರೆಗೂ ಅವನಿಗೆ ಮತ್ತು ಅವನ ಭಾವನೆಗಳಿಗೆ ಉತ್ತೇಜನವನ್ನು ನೀಡಿರಲಿಲ್ಲ; ಅವಳ ಈ ನಿಲುವೇನೂ ಅವನ ಉತ್ಸಾಹವನ್ನ ಸ್ವಲ್ಪವೂ ಕುಗ್ಗಿಸಿರಲಿಲ್ಲ.

ನೀನ ಅಲೆಕ್ಸಂಡ್ರೊವ್ನಳಿಗೆ ಅವನೆಂದರೆ ಬಹಳ ಇಷ್ಟ, ಮತ್ತು ಅವನನ್ನು ಆಗಲೇ ಬಹಳ ಆಪ್ತನನ್ನಾಗಿ ಮಾಡಿಕೊಂಡಿದ್ದಳು. ಪ್ಟಿಟ್ಸಿನ್ ಎಲ್ಲರಿಗೂ ಚಿರಪರಿಚಿತ, ಅವನು ಲೇವಾದೇವಿ ವ್ಯವಹಾರದಲ್ಲಿ ತನ್ನನ್ನ ತೊಡಗಿಸಿಕೊಂಡಿದ್ದ, ಮತ್ತು ಒಳ್ಳೆಯ ಆಧಾರವನ್ನ ತೆಗೆದುಕೊಂಡು ಒಳ್ಳೆಯ ಬಡ್ಡಿ ದರದಲ್ಲಿ ಸಾಲ ಕೊಡುತ್ತಿದ್ದ. ಅವನು ಗಾನಿಯಾನ ಅತಿ ಹತ್ತಿರದ ಸ್ನೇಹಿತನಾಗಿದ್ದ.

ಗಾನಿಯ ಔಪಚಾರಿಕವಾಗಿ ಪ್ರಿನ್ಸ್‌ನನ್ನು ಪರಿಚಯ ಮಾಡಿಸಿಕೊಟ್ಟ ನಂತರ (ಅವನು ತನ್ನ ತಾಯಿಗೆ ಸಂಕ್ಷಿಪ್ತವಾಗಿ ಶುಭಾಶಯ ಹೇಳಿದ, ತನ್ನ ತಂಗಿಯ ಇರುವನ್ನೂ ಗಮನಕ್ಕೆ ತೆಗೆದುಕೊಳ್ಳದೇ, ಪ್ಟಿಟ್ಸಿನ್‌ನ ಜೊತೆ ತಕ್ಷಣ ಆಚೆಗೆ ಹೋದ), ನೀನ ಅಲೆಕ್ಸಂಡ್ರೊವ್ನ ಪ್ರಿನ್ಸ್‌ನನ್ನು ಸಂಬೋಧಿಸಿ ಕೆಲವು ಒಳ್ಳೆಯ ಮಾತುಗಳನ್ನು ಆಡಿದಳು; ಪ್ರಿನ್ಸ್‌ಗೆ ಮಧ್ಯದ ಕೋಣೆಯನ್ನ ತೋರಿಸುವಂತೆ ಆಗತಾನೆ ಅಲ್ಲಿಗೆ ಬಂದ ಕೊಲಿಯಾನಿಗೆ ಹೇಳಿದಳು.

ಕೊಲಿಯಾ ಸುಂದರವಾಗಿ ಕಾಣುತ್ತಿದ್ದ ಹುಡುಗ. ಅವನ ಮುಖಭಾವ ಸರಳವಾಗಿ ಏನನ್ನೊ ಹೇಳಿಕೊಳ್ಳುತ್ತಿರುವಂತೆ ಇತ್ತು; ಮತ್ತು ಅವನ ನಡೆನುಡಿ ಬಹಳ ಸಭ್ಯತೆಯಿಂದ ಮತ್ತು ಎಲ್ಲದರಲ್ಲೂ ತನ್ನನ್ನು ತಾನೇ ತೊಡಗಿಕೊಳಿಸುವಂತಹ ಸ್ವಭಾವದಿಂದ ಕೂಡಿತ್ತು.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ: ದಲಿತ ಬಾಲಕಿಯ ಸಜೀವ ದಹನ

0
ಬಯಲು ಶೌಚಾಲಯಕ್ಕೆ ತೆರಳಿದ್ದ 13 ವರ್ಷದ ದಲಿತ ಬಾಲಕಿಯನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಹರಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಬಲರಾಂಪುರ್ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ 13...