Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-7; ಭಾಗ-3)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-7; ಭಾಗ-3)

- Advertisement -
- Advertisement -

ಗಾನಿಯಾ ಗೊಂದಲಗೊಂಡು, ಸಿಟ್ಟಾಗಿ, ಉಗ್ರನಾಗಿ ತನ್ನ ಆ ಭಾವಚಿತ್ರವನ್ನ ತೆಗೆದುಕೊಂಡ ಮತ್ತು ಪ್ರಿನ್ಸ್‌ನ ಕಡೆಗೆ ತನ್ನ ಮುಖದಲ್ಲಿ ಅಸಹ್ಯಕರವಾದ ರೀತಿಯಲ್ಲಿ ನಗುವನ್ನ ಸೂಸುತ್ತಾ ಮುಖ ತಿರುಗಿಸಿಕೊಂಡ.

“ಪ್ರಿನ್ಸ್” ಅವನು ಹೇಳಿದ, “ನಾನೀಗ ತಕ್ಷಣ ಮನೆಗೆ ಹೋಗುತ್ತಿದ್ದೇನೆ. ನೀನು ನಮ್ಮ ಜೊತೆ ವಾಸಿಸುವುದರ ಬಗ್ಗೆ ನಿನ್ನ ಮನಸ್ಸನ್ನು ಬದಲಾಯಿಸದೇ ಇದ್ದರೆ, ಬಹುಶಃ ನೀನು ನನ್ನ ಜೊತೆಯಲ್ಲಿಯೇ ಬರುತ್ತೀಯ ಯೋಚಿಸು. ನನ್ನ ನಂಬಿಕೆಯ ಪ್ರಕಾರ ನಿನಗೆ ವಿಳಾಸ ತಿಳಿದಿಲ್ಲ?”

“ಒಂದು ನಿಮಿಷ ಇರು ಪ್ರಿನ್ಸ್,” ತಾನು ಕುಳಿತಲ್ಲಿಂದ ಇದ್ದಕ್ಕಿದ್ದಂತೆ ಎದ್ದು ನಿಂತ ಅಗ್ಲಾಯ ಹೇಳಿದಳು, “ನನ್ನ ಆಲ್ಬಮ್ಮಿನಲ್ಲಿ ನೀನು ಮೊದಲು ಏನನ್ನಾದರೂ ಬರೆದುಕೊಡು, ಬರೆದುಕೊಡುತ್ತೀಯ ತಾನೆ? ನೀನೊಬ್ಬ ಪ್ರತಿಭಾವಂತ ಕ್ಯಾಲಿಗ್ರಾಫಿಸ್ಟ್ ಎಂದು ತಂದೆ ಹೇಳುತ್ತಾರೆ; ಒಂದೇ ನಿಮಿಷದಲ್ಲಿ ನನ್ನ ಪುಸ್ತಕವನ್ನ ತರುತ್ತೇನೆ.” ಅವಳು ರೂಮಿನಿಂದ ಆಚೆಗೆ ಹೋದಳು.

“ಸರಿ, ಗುಡ್ ಬೈ ಪ್ರಿನ್ಸ್,” ಅಡಲೈಡ ಹೇಳಿದಳು, “ನಾನೂ ಕೂಡ ಈಗ ಹೋಗಬೇಕು.” ಅವಳು ಪ್ರಿನ್ಸ್‌ನ ಕೈಯ್ಯನ್ನು ವಿಶ್ವಾಸಪೂರ್ವಕವಾಗಿ ಅದುಮಿದಳು ಮತ್ತು ರೂಮಿನಿಂದ ಆಚೆಗೆ ಹೋಗುವಾಗ ಅವನಿಗೆ ಸ್ನೇಹಪರವಾದ ಮುಗುಳ್ನಗೆಯೊಂದನ್ನ ಬೀರಿದಳು. ಅವಳು ಗಾನಿಯ ಕಡೆಗೆ ಅಂತಹ ಗಮನವನ್ನೇನೂ ಹರಿಸಲಿಲ್ಲ.

“ಇದೆಲ್ಲವೂ ನೀನೇ ಮಾಡಿದ ಕೆಲಸ ಪ್ರಿನ್ಸ್,” ಎಲ್ಲರೂ ಹೋದ ನಂತರ ಅವನ ಕಡೆಗೆ ತಿರುಗಿಕೊಂಡು ಗಾನಿಯ ಹೇಳಿದ, “ಇದೆಲ್ಲಾ ನಿನ್ನದೇ ಕಿತಾಪತಿ ಸರ್! ನೀನು ಅವರಿಗೆಲ್ಲಾ ನಾನು ಮದುವೆಯಾಗಲು ಹೊರಟಿದ್ದೇನೆಂಬ ಸುದ್ದಿಯನ್ನ ಹರಡಿದ್ದೀಯ!” ಎಂದು ಅವಸವಸರವಾಗಿ ಪಿಸುಮಾತಿನಲ್ಲಿ ಹೇಳಿದ; ಅವನ ಕಣ್ಣುಗಳಲ್ಲಿ ಕ್ರೋಧ ತುಂಬಿಕೊಂಡಿತ್ತು ಮತ್ತು ಮುಖ ಹೊತ್ತಿಕೊಂಡು ಉರಿಯುತ್ತಿರುವಂತಿತ್ತು. “ನೀನೊಬ್ಬ ನಾಚಿಕೆಯಿಲ್ಲದ ಬಾಯಿಬಡುಕ!”

“ನಾನು ಭರವಸೆಯಿಂದ ಹೇಳುತ್ತಿದ್ದೇನೆ, ನೀನು ಭ್ರಮೆಯಲ್ಲಿದ್ದೀಯ” ಶಾಂತತೆಯಿಂದ ಮತ್ತು ನಯವಾಗಿ ಪ್ರಿನ್ಸ್ ಹೇಳಿದ, “ನನಗೆ ನೀನು ಮದುವೆಯಾಗುತ್ತಿದ್ದೀಯ ಅನ್ನುವುದೇ ತಿಳಿದಿಲ್ಲ.”

“ನಾನು ಮತ್ತು ಜನರಲ್ ಅದರ ಬಗ್ಗೆ ಮಾತನಾಡುತ್ತಿರುವುದನ್ನ ನೀನು ಕೇಳಿಸಿಕೊಂಡೆ. ಎಲ್ಲವೂ ಇಂದು ನಸ್ಟಾಸಿಯ ಫಿಲಿಪೊವ್ನಳ ಮನೆಯಲ್ಲಿ ನಿರ್ಧಾರವಾಗುತ್ತದೆ ಎಂದು ನಾನು ಹೇಳಿದ್ದನ್ನು ನೀನು ಕೇಳಿಸಿಕೊಂಡೆ ಮತ್ತು ನೀನು ಇಲ್ಲಿಗೆ ಬಂದು ಅದನ್ನ ಬಡಬಡಿಸಿಬಿಟ್ಟೆ. ನೀನಿದನ್ನ ನಿರಾಕರಿಸಿದರೆ ಸುಳ್ಳು ಹೇಳುತ್ತಿದ್ದೀಯ ಎಂದರ್ಥ. ಇನ್ನ್ಯಾರೂ ಇದನ್ನ ಹೇಳಿರುವುದಕ್ಕೆ ಸಾಧ್ಯವಿಲ್ಲ. ದೇವರಿಗೇ ಗೊತ್ತು, ನಿನ್ನನ್ನು ಬಿಟ್ಟು ಇನ್ನು ಯಾರೂ ಕೂಡ ಇದನ್ನ ಹೇಳಿರುವುದಕ್ಕೆ ಸಾಧ್ಯವಿಲ್ಲ ಎಂದು. ಆ ಮುದುಕಿಯೇ ಅದರ ಬಗ್ಗೆ ನನಗೆ ಸುಳಿವು ಕೊಡಲಿಲ್ಲವೇ?”

“ಅವಳು ನಿನಗೆ ಸುಳಿವು ಕೊಟ್ಟಿದ್ದರೆ, ಅವಳಿಗೆ ಯಾರು ಹೇಳಿದರು ಅನ್ನುವುದನ್ನ ನೀನು ಕಂಡುಹಿಡಿಯುವುದು ಸೂಕ್ತ, ಖಂಡಿತವಾಗಿಯೂ ನಾನದರ ಬಗ್ಗೆ ಒಂದು ಮಾತನ್ನೂ ಕೂಡ ಆಡಲಿಲ್ಲ ಎಂದು ಪ್ರಿನ್ಸ್ ಉತ್ತರಿಸಿದ.

“ನಾನು ಕೊಟ್ಟ ಕಾಗದವನ್ನ ನೀನವಳಿಗೆ ತಲುಪಿಸಿದೆಯಾ? ಏನಾದರೂ ಉತ್ತರ ಕೊಟ್ಟಿದ್ದಾಳೆಯೇ?” ಗಾನಿಯ ಅವನ ಮಾತಿಗೆ ಅಡ್ದಿ ಮಾಡಿ ಕೇಳಿದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-7; ಭಾಗ-1)

ಅದೇ ಸಮಯಕ್ಕೆ ಸರಿಯಾಗಿ ಅಗ್ಲಾಯ ವಾಪಸ್ಸು ಬಂದಳು ಮತ್ತು ಅವನ ಪ್ರಶ್ನೆಗೆ ಉತ್ತರಿಸುವುದಕ್ಕೆ ಪ್ರಿನ್ಸ್‌ಗೆ ಸಮಯವೇ ಸಿಗಲಿಲ್ಲ.

“ಇಲ್ಲಿದೆ ನೋಡು ಪ್ರಿನ್ಸ್,” ಅವಳು ಹೇಳಿದಳು, “ಇದೇ ನನ್ನ ಆಲ್ಬಮ್. ಈಗ ಒಂದು ಪುಟವನ್ನ ಆರಿಸಿಕೊಂಡು ಏನನ್ನಾದರೂ ಬರೆದುಕೊಡು, ಬರೆದುಕೊಡುತ್ತೀಯ ತಾನೆ? ಇಲ್ಲೊಂದು ಪೆನ್ ಇದೆ, ಹೊಸದು; ನಿನಗೆ ಸ್ಟೀಲ್ ಪೆನ್ ಪರವಾಗಿಲ್ಲವಾ? ನಾನು ಕೇಳಲ್ಪಟ್ಟಿದ್ದು ನೀವು, ಕ್ಯಾಲಿಗ್ರಾಫರ್‌ಗಳು ಸ್ಟೀಲ್ ಪೆನ್ನನ್ನು ಇಷ್ಟಪಡುವುದಿಲ್ಲ ಎಂದು.”

ಪ್ರಿನ್ಸ್ ಜೊತೆಯಲ್ಲಿ ಸಂಭಾಷಿಸುತ್ತಿರುವಾಗ ಅಗ್ಲಾಯ ಗಾನಿಯಾ ರೂಮಿನಲ್ಲಿರುವುದನ್ನೂ ಕೂಡ ಗಮನಿಸದಂತೆ ಇದ್ದಳು. ಪ್ರಿನ್ಸ್ ಪೆನ್‌ಅನ್ನು ಸಿದ್ಧಪಡಿಸಿಕೊಂಡು, ಒಂದು ಪುಟವನ್ನ ಹುಡುಕಿ, ಬರೆಯುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿರುವಾಗಲೇ, ಗಾನಿಯ ಅಗ್ಲಾಯ ನಿಂತಿದ್ದ ಪ್ರಿನ್ಸ್‌ನ ಬಲಗಡೆಗಿದ್ದ ಫೈರ್‌ಪ್ಲೇಸ್ ಬಳಿ ಬಂದ, ಮತ್ತು ನಡುಗುವ, ಒಡೆದು ಹೋದಂತಹ ಉಚ್ಚಾರಣೆಯಿಂದ ಅಗ್ಲಾಯಳ ಕಿವಿಯಲ್ಲಿ ಹೇಳಿದ, “ಒಂದೇ ಪದ, ಒಂದೇ ಒಂದು ಮಾತು ನಿನ್ನಿಂದ ಬಂದರೆ ನಾನು ಬಚಾವಾಗುತ್ತೇನೆ” ಎಂದು.

ಪ್ರಿನ್ಸ್ ತೀವ್ರವಾಗಿ ತಿರುಗಿ ಅವರಿಬ್ಬರ ಕಡೆಗೂ ನೋಡಿದ. ಗಾನಿಯಾನ ಮುಖದಲ್ಲಿ ಸಂಪೂರ್ಣವಾದ ಹತಾಶೆ ಕಾಣುತ್ತಿತ್ತು; ಅವನು ಆ ಮಾತುಗಳನ್ನ ಪ್ರಜ್ಞಾಹೀನನಾಗಿ ಮತ್ತು ಆ ಕ್ಷಣದಲ್ಲಿ ನುಗ್ಗಿ ಬಂದ ಉದ್ವೇಗದಲ್ಲಿ ಹೇಳಿದಂತೆ ಅನಿಸುತ್ತಿತ್ತು.

ಕೆಲವೇ ಸಮಯದ ಹಿಂದೆ ಪ್ರಿನ್ಸ್ ಸಂದೇಶವನ್ನ ಕೊಟ್ಟಾಗ ಇದ್ದ ಸಮಚಿತ್ತತೆಯಿಂದ ಮತ್ತು ವಿಸ್ಮಯದಿಂದಲೇ ಅಗ್ಲಾಯ ಅವನ ಕಡೆಗೆ ಕೆಲ ಕ್ಷಣಗಳಕಾಲ ದಿಟ್ಟಿಸಿ ನೋಡಿದಳು; ಅವಳ ನಿಶ್ಚಲ ವಿಸ್ಮಯ ಮತ್ತು ಎದ್ದು ಕಾಣುವ ರೀತಿಯಲ್ಲಿ ಕಂಡ, ಅವನು ಕಿವಿಯಲ್ಲಿ ಅವಳಿಗೆ ಹೇಳಿದ್ದುದರ ಬಗ್ಗೆ ಅರ್ಥವಾಗಲೇ ಇಲ್ಲ ಅನ್ನುವ ಅವಳ ಮುಖಭಾವ, ಗಾನಿಯಾನನ್ನು ಸೀದ ಅವನ ಬಗ್ಗೆ ತಿರಸ್ಕಾರ ವ್ಯಕ್ತಪಡಿಸಿದಾಗ ಆಗುವುದಕ್ಕಿಂತ ಜಾಸ್ತಿ ತೀವ್ರತೆಯಿಂದ ಧೃತಿಗೆಡಿಸಿತು.

“ನಾನೇನನ್ನು ಬರೆಯಲಿ?” ಪ್ರಿನ್ಸ್ ಕೇಳಿದ.

“ನಾನು ನಿನಗೆ ಹೇಳಿ ಬರೆಸುತ್ತೇನೆ,” ಅಗ್ಲಾಯ ಟೇಬಲ್ಲಿನ ಬಳಿಬರುತ್ತಾ ಹೇಳಿದಳು. “ಈಗ ನೀನು ತಯಾರಾಗಿದ್ದೀಯ? ಹೀಗೆ ಬರಿ, ’ನಾನು ಚೌಕಾಸಿ ಮಾಡುವಂತಹ ಕೆಳಮಟ್ಟಕೆ ಇಳಿಯುವುದಿಲ್ಲ!’ ಈಗ ನಿನ್ನ ಹೆಸರನ್ನು ಮತ್ತು ತಾರೀಖನ್ನ ನಮೂದಿಸು. ಈಗ ಅದನ್ನ ನನಗೆ ತೋರಿಸು.”

ಪ್ರಿನ್ಸ್ ಆಲ್ಬಮ್ಮನ್ನು ಅವಳ ಕೈಗಿತ್ತ.

“ದೊಡ್ಡಕ್ಷರಗಳು! ಎಷ್ಟು ಮನೋಹರವಾಗಿ ನೀನದನ್ನ ಬರೆದಿದ್ದೀಯ! ಸ್ವಲ್ಪ ಇರು,” ಅವಳು ಹೇಳಿದಳು, “ಸುಮ್ಮನೆ ನಿನ್ನ ಬಳಿ ಇಟ್ಟುಕೊಳ್ಳುವುದಕ್ಕೆ ನಾನು ನಿನಗೆ ಏನನ್ನೊ ಕೊಡಬೇಕು. ನನ್ನ ಜೊತೆಯಲ್ಲಿ ಬಾ, ಬರುತ್ತೀಯ ತಾನೆ?”

ಪ್ರಿನ್ಸ್ ಅವಳನ್ನು ಹಿಂಬಾಲಿಸಿದ. ಡೈನಿಂಗ್ ರೂಮಿನ ಬಳಿ ಬಂದಾಗ ಅವಳು ನಿಂತುಕೊಂಡಳು.

“ಇದನ್ನ ಓದು,” ಅವನಿಗೆ ಗಾನಿಯಾನ ಸಂದೇಶದ ಕಾಗದವನ್ನ ಕೊಡುತ್ತಾ ಹೇಳಿದಳು.

ಪ್ರಿನ್ಸ್ ಅವಳ ಕೈಯಿಂದ ತೆಗೆದುಕೊಂಡ, ಆದರೆ ಅವಳ ಕಡೆಗೆ ದಿಗ್ಭ್ರಮೆಯಿಂದ ನೋಡಿದ.

“ಓ! ನನಗೆ ಗೊತ್ತು ನೀನದನ್ನ ಓದಿಲ್ಲ ಎಂದು, ನೀನೆಂದೂ ಆ ಮನುಷ್ಯನ ತಪ್ಪು ನಡೆಗೆ ಜೊತೆಗಾರನಾಗಲಾರೆ. ಇದನ್ನ ಓದು, ನೀನದನ್ನ ಓದಲೇಬೇಕೆನ್ನುವುದು ನನ್ನ ಇಚ್ಛ”

ಈ ಕಾಗದವನ್ನ ಬಹಳ ಆತುರದಿಂದ ಬರೆದದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.

“ನನ್ನ ಭವಿಷ್ಯವನ್ನ ಇಂದು ನಿರ್ಧರಿಸಲಾಗುತ್ತದೆ” (ಹೀಗೆ ಶುರುವಾಗಿತ್ತು), “ನಿನಗೆ ಗೊತ್ತಲ್ಲಾ ಹೇಗೆ ಎನ್ನುವುದು. ಈ ದಿನ ನಾನು ಮುಂದೆಂದೂ ಬದಲಾಯಿಸಲಾಗದಂತಹ ನನ್ನ ಒಪ್ಪಿಗೆಯನ್ನ ಕೊಡಬೇಕಿದೆ. ನನಗೆ ನಿನ್ನ ಸಹಾಯವನ್ನ ಕೇಳುವ ಯಾವ ಹಕ್ಕೂ ಇಲ್ಲ, ನಾನು ಯಾವುದೇ ರೀತಿಯ ಭರವಸೆಗಳಲ್ಲಿ ಮುಳುಗುವ ಸಾಹಸ ಮಾಡುವುದಿಲ್ಲ; ಆದರೆ ನೀನು ಒಂದೇ ಒಂದು ಮಾತನ್ನ ಆಡಿದರೆ, ಆ ಮಾತು ನನ್ನ ಜೀವನದ ಕತ್ತಲೆಯನ್ನ ಬೆಳಗಿಸುತ್ತದೆ, ಮತ್ತು ನನ್ನ ಮುಂದಿನ ದಿನಗಳಿಗೆ ದಾರಿದೀಪವಾಗುತ್ತದೆ. ಆ ರೀತಿಯ ಮತ್ತೊಂದು ಪದವನ್ನ ಹೇಳು, ಮತ್ತು ನನ್ನನ್ನು ಸಂಪೂರ್ಣ ವಿನಾಶದಿಂದ ಉಳಿಸು. ನೀನು ನನಗೆ ಇಷ್ಟು ಹೇಳು ’ಎಲ್ಲವನ್ನೂ ಮುಗಿಸಿಬಿಡು ಎಂದು!’ ನಾನು ಅದನ್ನು ಈ ದಿನವೇ ಮಾಡುತ್ತೇನೆ. ಈ ಒಂದು ಮಾತನ್ನ ಹೇಳುವುದಕ್ಕೆ ನಿನಗೇನು ಖರ್ಚಾಗುತ್ತದೆ? ಆ ರೀತಿ ನೀನು ಹೇಳುವುದರಿಂದ, ನನ್ನ ಬಗ್ಗೆ ನಿನಗಿರುವ ಸಹಾನುಭೂತಿಯ ಸಂಕೇತ ಅದಾಗುತ್ತದೆ, ಮತ್ತು ನಿನ್ನ ಕರುಣೆಯದೂ ಕೂಡ; ಬರೀ ಇಷ್ಟೆ, ಇಷ್ಟೇ ಹೆಚ್ಚಿಗೆ ಏನೂ ಅಲ್ಲ. ನಾನು ಯಾವುದೇ ಭರವಸೆಯನ್ನ ನಿನ್ನಿಂದ ಪಡೆಯುವ ಸಾಹಸ ಮಾಡುವುದಿಲ್ಲ, ಕಾರಣ ಆ ಯೋಗ್ಯತೆ ನನಗಿಲ್ಲ. ಈ ಒಂದು ಮಾತನ್ನ ನೀನು ಹೇಳಿದರೆ ನನ್ನ ಕ್ರಾಸ್‌ಅನ್ನು ಸಂತೋಷದಿಂದ ತೆಗೆದುಕೊಂಡು ನನ್ನ ಬಡತನದ ಜೊತೆಯ ಹೋರಾಟಕ್ಕೆ ಪುನಃ ಹಿಂದಿರುಗುತ್ತೇನೆ. ನಾನು ಚಂಡಮಾರುತವನ್ನ ಎದುರಿಸುವುದರಲ್ಲಿಯೇ ಸಂತೋಷದಿಂದ ಇರುತ್ತೇನೆ. ನಾನು ಇನ್ನೂ ಹೆಚ್ಚಿನ ಶಕ್ತಿಯಿಂದ ಮೇಲೇಳುತ್ತೇನೆ.

“ನನಗೆ ಈ ಸಹಾನುಭೂತಿ ಬಿಟ್ಟು ಇನ್ನೇನೂ ಬೇಡ, ಬರೀ ಸಹಾನುಭೂತಿಯ ಒಂದೇ ಪದವನ್ನ ಉತ್ತರದ ರೂಪವಾಗಿ ಕಳುಹಿಸು, ನಾನು ನಿನಗೆ ಪ್ರಮಾಣ ಮಾಡಿ ಹೇಳುತ್ತೇನೆ; ಮತ್ತೆ ಓ! ಈ ಹತಾಶೆಯಿಂದ ಉಂಟಾದ ನನ್ನ ದಿಟ್ಟತನದ ಬಗ್ಗೆ, ಒಬ್ಬ ಮುಳುಗುತ್ತಿರುವ ಮನುಷ್ಯನ ಬಗ್ಗೆ, ಯಾರು ಮುಳುಗಿ ಹೋಗಿ ನೀರಿನ ತಳದಲ್ಲಿ ಕಣ್ಮರೆಯಾಗುವುದರಿಂದ ಬಚಾವಾಗಲು ಈ ಕಟ್ಟಕಡೆಯ ಪ್ರಯತ್ನವನ್ನ ಮಾಡುತ್ತಿದ್ದಾನೊ ಅವನ ಬಗ್ಗೆ ಕೋಪಗೊಳ್ಳ ಬೇಡ.

“ಗವ್ರಿಲ.”

ಪ್ರಿನ್ಸ್ ಕಾಗದವನ್ನ ಓದಿ ಮುಗಿಸಿದ ಮೇಲೆ ತುಚ್ಚೀಕರಿಸುವವಳಂತೆ ಅಗ್ಲಾಯ ಹೇಳಿದಳು “ಈ ಮನುಷ್ಯ ನನಗೆ ಭರವಸೆ ನೀಡುತ್ತಾನೆ. ಆ ಪದಗಳು ’ಎಲ್ಲವನ್ನೂ ಮುಗಿಸಿಬಿಡು’ ಅನ್ನುವುದು ನನ್ನನ್ನು ಯಾವುದಕ್ಕೂ ಬದ್ಧಳನ್ನಾಗಿ ಮಾಡುವುದಿಲ್ಲ ಮತ್ತು ಅವನೇ ಅದರ ಬಗ್ಗೆ ಲಿಖಿತವಾಗಿ ಭರವಸೆಯನ್ನ ಕೊಡುತ್ತಾನೆ, ಈ ಕಾಗದದಲ್ಲಿ. ಅವನು ಎಷ್ಟು ಚಾಕಚಕ್ಯತೆಯಿಂದ ಕೆಲವು ಪದಗಳ ಕೆಳಗೆ ಅಡಿಗೆರೆಗಳನ್ನು ಹಾಕಿದ್ದಾನೆ ಅನ್ನುವುದನ್ನ ಗಮನಿಸು ಮತ್ತು ಎಷ್ಟು ಒರಟಾಗಿ ಕೆಲವು ಮರೆಮಾಡಿದ ಆಲೋಚನೆಗಳಿಗೆ ಮೆರುಗನ್ನು ಕೊಡುತ್ತಾನೆ. ಅವನಿಗೆ ತಿಳಿಯಬೇಕಾದದ್ದು, ಅವನು ’ಎಲ್ಲವನ್ನೂ ಮುಗಿಸಿಬಿಟ್ಟಿದ್ದರೆ’ ನನಗೊಂದೂ ಮಾತನ್ನೂ ಹೇಳದೆ, ನನ್ನ ವಿಷಯದಲ್ಲಿ ಯಾವುದೇ ಭರವಸೆಯೂ ಇಲ್ಲದೇ, ಬಹುಶಃ ಆಗ ನಾನು ನನ್ನ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುತ್ತೇನೆ ಮತ್ತು ಅವನ ಸ್ನೇಹವನ್ನೂ ಒಪ್ಪಿಕೊಳ್ಳಬಹುದಿತ್ತು. ಅವನಿಗೆ ತಿಳಿಯಬೇಕಾದದ್ದು ಏನೆಂದರೆ ಅವನ ಆತ್ಮ ಬಹಳ ನೀಚತನದಿಂದ ಕೂಡಿದೆಯೆಂದು. ಅವನಿಗೆ ಗೊತ್ತು, ತನಗೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು; ಅದು ಅವನಿಗೆ ಗೊತ್ತಿದ್ದರೂ ಭರವಸೆಯನ್ನ ಅರಸುತ್ತಾನೆ. ಅವನಿಗೆ ಅವನನ್ನೇ ನಂಬಲಾಗುತ್ತಿಲ್ಲ ಮತ್ತು ಒಂದು ಲಕ್ಷ ರೂಬಲ್ಲುಗಳನ್ನ ಬಿಟ್ಟುಬಿಡುವುದಕ್ಕಿಂತ ಮುಂಚೆ ಅವನು ನನ್ನಿಂದ ಭರವಸೆಯನ್ನ ಕೇಳುತ್ತಾನೆ. ಆ ಹಿಂದಿನ ಪದಗಳ ಬಗ್ಗೆ, ಅಂದರೆ ’ನನ್ನ ಜೀವನದಲ್ಲಿನ ಕತ್ತಲೆಯಿಂದ ಕೂಡಿದ ರಾತ್ರಿಯನ್ನು ಬೆಳಗುತ್ತೀಯ’ ಅನ್ನುವುದರ ಬಗ್ಗೆ ಹೇಳಬೇಕೆಂದರೆ ಅವನೊಬ್ಬ ಸಾಧಾರಣವಾದ ನಿರ್ಲಜ್ಜ ಸುಳ್ಳುಗಾರ. ನಾನು ಸುಮ್ಮನೆ ಒಮ್ಮೆ ಅವನ ಬಗ್ಗೆ ಕರುಣೆಯನ್ನ ತೋರಿಸಿದ್ದೆ. ಆದರೆ ಅವನೊಬ್ಬ ಅಧಿಕಪ್ರಸಂಗಿ ಮತ್ತು ನಾಚಿಕೆಗೇಡಿನ ಮನುಷ್ಯ. ಅವನು ಆ ಕ್ಷಣದಲ್ಲೇ ಆಸೆ ಪಡಲು ಪ್ರಾರಂಭಿಸಿದ. ನನಗದರ ಅರಿವಾಯಿತು. ಅವನು ಅಂದಿನಿಂದ ನನ್ನನ್ನು ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದ; ಅವನಿನ್ನೂ ನನಗಾಗಿ ಹಂಬಲಿಸುತ್ತಿದ್ದಾನೆ. ಸರಿ, ಇಲ್ಲಿಗೇ ಎಲ್ಲಾ ಸಾಕು. ಈ ಕಾಗದವನ್ನ ತೆಗೆದುಕೊಂಡು ಹೋಗಿ, ನಮ್ಮ ಮನೆಯನ್ನ ಬಿಟ್ಟ ಮೇಲೆ ಅವನಿಗೆ ವಾಪಸ್ಸು ಕೊಡು, ಅದಕ್ಕಿಂತಲೂ ಮುಂಚೆ ಖಂಡಿತವಾಗಿಯೂ ಕೊಡಬೇಡ.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ ಶತಮೂರ್ಖ (ಅಧ್ಯಾಯ-6; ಕೊನೆಯ ಭಾಗ)

“ನಾನು ನಿನ್ನ ಉತ್ತರದ ಬಗ್ಗೆ ಏನನ್ನು ಹೇಳಲಿ?”

“ಖಂಡಿತವಾಗಿಯೂ ಏನನ್ನೂ ಹೇಳಬೇಡ! ಅದೊಂದೇ ಅತ್ಯುತ್ತಮವಾದ ಉತ್ತರ. ನೀನೀಗ ಅವನ ಮನೆಯಲ್ಲೇ ವಾಸಿಸುತ್ತೀಯ ಅನ್ನುವುದು ನಿಜವೇ?”

“ಹೌದು, ನಿನ್ನ ತಂದೆಯೇ ಕರುಣೆಯಿಂದ ನನ್ನ ಹೆಸರನ್ನು ಶಿಫಾರಸ್ಸು ಮಾಡಿದರು.”

“ಅಂದರೆ ಅವನ ಬಗ್ಗೆ ಹುಷಾರು, ನಾನು ನಿನಗೆ ಎಚ್ಚರಿಕೆಯನ್ನ ಕೊಡುತ್ತಿದ್ದೇನೆ. ಈ ಕಾಗದವನ್ನ ವಾಪಸ್ಸು ತೆಗೆದುಕೊಂಡು ಹೋಗಿದ್ದಕ್ಕೆ ಅವನು ನಿನ್ನನ್ನು ಅಷ್ಟು ಸುಲಭಕ್ಕೆ ಕ್ಷಮಿಸುವುದಿಲ್ಲ.”

ಅಗ್ಲಾಯ ಪ್ರಿನ್ಸ್‌ನ ಕೈಯ್ಯನ್ನು ಮೆಲ್ಲಗೆ ಒತ್ತಿ ರೂಮಿನಿಂದ ಆಚೆಗೆ ಹೋದಳು. ಅವಳ ಮುಖ ಗಂಭೀರವಾಗಿತ್ತು ಮತ್ತು ಗಂಟಿಕ್ಕಿಕೊಂಡಿತ್ತು; ಅವಳು ಅವನಿಗೆ ಬಾಗಿಲಿನ ಬಳಿ ವಿದಾಯ ಹೇಳುವಾಗ ಸ್ವಲ್ಪವೂ ನಗಲಿಲ್ಲ.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...