Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ ಶತಮೂರ್ಖ (ಅಧ್ಯಾಯ-6; ಕೊನೆಯ ಭಾಗ)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ ಶತಮೂರ್ಖ (ಅಧ್ಯಾಯ-6; ಕೊನೆಯ ಭಾಗ)

- Advertisement -
- Advertisement -

“ಮರುದಿನ ಬೆಳಿಗ್ಗೆ ಅವರು ಬಂದು ಮೇರಿ ಸತ್ತು ಹೋದಳು ಎಂಬ ಸುದ್ದಿಯನ್ನ ನನಗೆ ಮುಟ್ಟಿಸಿದರು. ಮಕ್ಕಳನ್ನು ಈಗ ತಡೆಯಲಸಾಧ್ಯವಾಯಿತು; ಅವರು ಹೋಗಿ ಅವಳ ಶವಪೆಟ್ಟಿಗೆಯನ್ನು ಸಂಪೂರ್ಣವಾಗಿ ಹೂವುಗಳಿಂದ ಮುಚ್ಚಿದರು ಮತ್ತು ಅರಳುತ್ತಿರುವ ಹೂವಿನ ಗುಚ್ಚವನ್ನ ಅವಳ ತಲೆಯ ಬಳಿ ಇಟ್ಟರು. ಪಾದ್ರಿ ಪಾಪದ ಹೆಣ್ಣಿನ ಬಗ್ಗೆ ಇನ್ನ್ಯಾವುದೇ ಅವಮಾನಿಸುವ ಮಾತುಗಳನ್ನ ಆಡಲಿಲ್ಲ; ಆದರೆ ಅಂತ್ಯಕ್ರಿಯೆಯ ಸಮಯದಲ್ಲಿ ಬಹಳ ಕಮ್ಮಿ ಜನ ಇದ್ದರು. ಆದಾಗ್ಯೂ ಶವಪೆಟ್ಟಿಗೆಯನ್ನು ಹೊರುವ ಸಮಯ ಬಂದಾಗ, ಎಲ್ಲಾ ಮಕ್ಕಳೂ ತಾವೇ ಹೊತ್ತುಕೊಂಡು ಹೋಗುತ್ತೇವೆಂದು ನುಗ್ಗಿದರು. ಖಂಡಿತವಾಗಿಯೂ ಅವರುಗಳೇ ಆ ಕೆಲಸವನ್ನು ಮಾಡಲು ಸಾಧ್ಯವಿರಲಿಲ್ಲ, ಆದರೆ ಅವರು ಸಹಾಯ ಮಾಡುತ್ತೇವೆಂದು ಒತ್ತಾಯಿಸಿದರು; ಪಕ್ಕದಲ್ಲಿ ಮತ್ತು ಹಿಂದಗಡೆ ದುಃಖಿಸುತ್ತಾ ನಡೆದುಕೊಂಡು ಹೋದರು.

“ಅವರು ಅವಳ ಸಮಾಧಿಯ ಸುತ್ತಮುತ್ತಲೆಲ್ಲಾ ಗುಲಾಬಿಯ ಗಿಡಗಳನ್ನು ನೆಟ್ಟರು ಮತ್ತು ಪ್ರತಿದಿನ ಆ ಗಿಡಗಳನ್ನ ಮತ್ತು ಹೂಗಳನ್ನ ಪೋಷಿಸುತ್ತಿದ್ದರು; ಮೇರಿಯ ಸಮಾಧಿ ಸ್ಥಳವನ್ನ ಎಷ್ಟು ಸಾಧ್ಯವೊ ಅಷ್ಟು ಸುಂದರವಾಗಿಡಲು ಪ್ರಯತ್ನಿಸಿದರು. ಈಗ ಮಕ್ಕಳ ತಂದೆತಾಯಿಯಂದಿರು, ಅದರಲ್ಲೂ ಹಳ್ಳಿಯ ಪಾದ್ರಿ ಮತ್ತು ಉಪಾಧ್ಯಾಯ ಇವರುಗಳು ನನ್ನ ಜೊತೆ ವೈಮನಸ್ಯವನ್ನ ಕಟ್ಟಿಕೊಂಡಿದ್ದರು. ನಾನು ಮಕ್ಕಳ ಜೊತೆ ಇನ್ನು ಮುಂದೆ ಮಾತನಾಡುವುದಿಲ್ಲ ಮತ್ತು ಬೆರೆಯುವುದಿಲ್ಲ ಮತ್ತು ಅವರನ್ನು ಭೇಟಿಯಾಗುವುದೂ ಇಲ್ಲ ಎಂದು ಪ್ರೊ ಸ್ಕ್ನೀಡರ್ ಈಗ ವಿಧಿಯಿಲ್ಲದೇ ಅವರಿಗೆಲ್ಲಾ ನನ್ನ ಪರವಾಗಿ ಆಶ್ವಾಸನೆ ಕೊಡಬೇಕಾಯಿತು; ಆದರೆ ನಾವು ದೂರದಿಂದಲೇ ಸಂಕೇತಗಳ ಮೂಲಕ ಸಂವಹಿಸುತ್ತಿದ್ದೆವು ಮತ್ತು ಅವರು ಮಧುರವಾದ ಸಣ್ಣ ಸಂದೇಶಗಳನ್ನ ಬರೆದು ನನಗೆ ಕಳುಹಿಸುತ್ತಿದ್ದರು. ನಂತರದಲ್ಲಿ ಈ ಪುಟ್ಟ ಆತ್ಮಗಳ ಜೊತೆ ನಾನು ಇನ್ನೂ ಹತ್ತಿರದವನಾದೆ, ಆದರೆ ಆಗಲೂ ಕೂಡ ಅವರೆಲ್ಲ ನನ್ನನ್ನು ಈ ಮಟ್ಟದಲ್ಲಿ ಇಷ್ಟಪಡುತ್ತಿದ್ದದ್ದು ನನಗೆ ಬಹಳ ಆತ್ಮೀಯ ಸಂಗತಿಯಾಗಿತ್ತು.

“ನಾನು ಮಕ್ಕಳಿಗೆ ನನ್ನ ವಿನಾಶಕಾರೀ ’ವಿಧಾನಗಳಿಂದ ದೊಡ್ಡ ಹಾನಿಯನ್ನೇ ಉಂಟು ಮಾಡಿದೆ ಎಂದು ಪ್ರೊ ಸ್ಕ್ನೀಡರ್ ಹೇಳಿದರು; ಎಷ್ಟು ಅಸಂಬದ್ಧವಾದದ್ದು! ಅವರ ಪ್ರಕಾರ ವಿಧಾನ ಅಂದರೆ ಏನು ಅರ್ಥ? ನಂತರ ನಾನು ಅಲ್ಲಿಂದ ಬಿಟ್ಟು ಬರುವ ಸಮಯದಲ್ಲಿ ನಾನೂ ಕೂಡ ಒಂದು ಮಗು ಇದ್ದಂತೆ ಎಂದು ನಂಬಿದ್ದೇನೆ ಎಂದು ಅವನು ಹೇಳಿದರು. ’ನಿನ್ನ ರೂಪ ಮತ್ತು ಮುಖ ವಯಸ್ಸಾದವನಂತೆ ಇದೆ’ ಎಂದು ಹೇಳಿದ ಅವರು, ’ಆದರೆ ನಿನ್ನ ಆತ್ಮಕ್ಕೆ ಮತ್ತು ಸ್ವಭಾವಕ್ಕೆ ಸಂಬಂಧಪಟ್ಟಂತೆ, ಮತ್ತು ಬಹುಶಃ ಬುದ್ಧಿಯು ಕೂಡ, ನೀನು ಸಂಪೂರ್ಣವಾಗಿ ಒಂದು ಮಗುವಿನ ಹಾಗೆಯೇ ಮತ್ತು ಸದಾಕಾಲವೂ ಹಾಗೆಯೇ ಇರುತ್ತೀಯ, ನಿನ್ನ ಅರವತ್ತನೇ ವಯಸ್ಸಿನಲ್ಲೂ ಕೂಡ’ ಎಂದರು. ನಾನು ಇದನ್ನು ಕೇಳಿ ತುಂಬಾ ನಕ್ಕೆ; ಅವರು ಹೇಳಿದ್ದು ಎಷ್ಟೊಂದು ಅಪ್ರಸ್ತುತ ಎಂಬ ಕಾರಣಕ್ಕೆ. ಆದರೆ ನಿಜಾಂಶವೆಂದರೆ ನಾನು ದೊಡ್ಡವರ ಸಹವಾಸದಲ್ಲಿ ಇರಲು ಅಷ್ಟೊಂದು ಬಯಸುವುದಿಲ್ಲ, ಮತ್ತು ಮಕ್ಕಳ ಸಂಘದಲ್ಲಿರಲು ಯಾವಾಗಲೂ ಇಷ್ಟ ಪಡುತ್ತೇನೆ. ನನ್ನ ಬಗ್ಗೆ ಜನ ಎಷ್ಟೇ ಕರುಣೆಯಿಂದ ಇದ್ದರೂ, ನನಗೆ ಅವರುಗಳ ಮಧ್ಯೆ ಅಷ್ಟೊಂದು ನೆಮ್ಮದಿಯಿಂದ ಇರಲಾಗುವುದಿಲ್ಲ ಮತ್ತು ಯಾವಾಗಲೂ ನನ್ನ ಪುಟ್ಟ ಸಹಚರರ ಬಳಿಗೆ ಬೇಗ ಹಿಂತಿರುಗಲು ತವಕಪಡುತ್ತಿರುತ್ತೇನೆ. ಆಗ ನನ್ನ ಸಹಚರರು ಯಾವಾಗಲೂ ಮಕ್ಕಳೇ ಆಗಿದ್ದರು, ಅದಕ್ಕೆ ಕಾರಣ ನಾನೇ ಒಂದು ಮಗುವಿನಂತೆ ಎಂಬುದಲ್ಲ, ಪುಟ್ಟ ಸಂಗತಿಗಳು ನನ್ನನ್ನು ಬಹಳವಾಗಿ ಆಕರ್ಷಿಸುತ್ತಿದ್ದದ್ದು. ನನ್ನ ಸ್ವಿಟ್ಜರ್ಲೆಂಡಿನ ವಾಸದಲ್ಲಿನ ಮೊದಲನೆಯೇ ದಿನ, ನಾನೊಬ್ಬನೇ ಬಹಳ ವಿಷಣ್ಣತೆಯಿಂದ ಅಲೆದಾಡುತ್ತಿದ್ದೆ ಮತ್ತು ಶಾಲೆಯ ಬಿಟ್ಟ ನಂತರ ಆಚೆಗೆ ಗಲಾಟೆ ಮಾಡುತ್ತಾ ಮಕ್ಕಳು ನುಗ್ಗಿ ಬರುವುದನ್ನ ನಾನು ಅಕಸ್ಮಾತ್ತಾಗಿ ನೋಡಿದೆ; ಅವರ ಸ್ಲೇಟ್‌ಗಳು ಬ್ಯಾಗುಗಳು ಮತ್ತು ಪುಸ್ತಕಗಳ ಜೊತೆಯಲ್ಲಿ, ಅವರ ಆಟಪಾಠಗಳು, ನಗು ಮತ್ತು ಕಿರುಚಾಟಗಳನ್ನೂ ಕಂಡೆ. ನನ್ನ ಆತ್ಮ ನನ್ನಿಂದ ಅವರ ಕಡೆಗೆ ಓಡಿಹೋಯಿತು. ಅವರ ಪುಟ್ಟಪುಟ್ಟ ಹೆಜ್ಜೆಗಳು ಅಷ್ಟೊಂದು ತ್ವರಿತವಾಗಿ ಚಲಿಸುತ್ತಿರುವುದನ್ನ ಅಲ್ಲಿಯೇ ನಿಂತುಕೊಂಡು ಸಂತೋಷದಿಂದ ನಗುತ್ತಾ ವೀಕ್ಷಿಸಿದೆ. ಹುಡುಗಿಯರು ಹುಡುಗರು, ಜೋರಾಗಿ ನಗುತ್ತಾ, ಕೂಗಾಡುತ್ತಾ; ಮತ್ತು ಮನೆಗೆ ಹೋಗುತ್ತಿದ್ದಾಗಲೇ ಅವರಲ್ಲಿ ಅನೇಕರು ಪರಸ್ಪರ ಕಚ್ಚಾಡಿ ನಂತರ ಪುನಃ ರಾಜಿ ಮಾಡಿಕೊಳ್ಳುತ್ತಾ ಆಗಾಗ್ಗೆ ಅಳುತ್ತಾ ಮತ್ತು ಆಟವಾಡುತ್ತಾ ಹೋಗುವುದನ್ನ ಕಂಡೆ. ಅವರುಗಳನ್ನ ನೋಡುವಾಗ ನನ್ನ ತಾಪತ್ರಯ ಸಂಕಷ್ಟಗಳನ್ನೆಲ್ಲಾ ಮರೆತುಬಿಟ್ಟಿದ್ದೆ. ನಂತರ ಈ ಎಲ್ಲಾ ಮೂರು ವರ್ಷಗಳಲ್ಲೂ, ಯಾತಕ್ಕೆ ಜನ ತಮ್ಮನ್ನು ತಾವೇ ಹಿಂಸಿಸಿಕೊಳ್ಳುತ್ತಾರೆ ಅನ್ನುವುದನ್ನ ನಾನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದೆ. ನಾನೊಂದು ಮಗುವಾಗಿ ಅಲ್ಲಿ ನನ್ನ ಜೀವನವನ್ನ ಕಳೆದೆ ಮತ್ತು ಈ ಪುಟ್ಟ ಹಳ್ಳಿಯನೆಂದೂ ಬಿಟ್ಟು ಹೋಗಬಾರದೆಂದು ನಾನಂದುಕೊಂಡಿದ್ದೆ; ಖಂಡಿತವಾಗಿಯೂ, ನಾನು ರಷ್ಯಗೆ ಹಿಂದಿರುಗುತ್ತೇನೆಂದು ಕನಸು ಮನಸಿನಲ್ಲೂ ಅಂದುಕೊಂಡೇ ಇರಲಿಲ್ಲ. ನಂತರ, ಇನ್ನು ಮುಂದೆ ಸ್ಕ್ನೀಡರ್‌ಗೆ ನನ್ನನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಎನ್ನುವ ನಿಜಾಂಶವನ್ನ ನಾನು ಗುರುತಿಸಿದೆ. ನಂತರವೆ ಒಂದು ಪ್ರ್ರಮುಖವಾದ ಘಟನೆ ಸಂಭವಿಸಿ, ನನ್ನನ್ನು ಖುದ್ದಾಗಿ ವಾಪಸ್ಸು ಹೋಗಲು ಸ್ಕ್ನೀಡರ್ ತಾವೇ ಒತ್ತಾಯಿಸಿದರು. ಅದು ಯಾತಕ್ಕೆ ಅನ್ನುವುದರ ಬಗ್ಗೆ ಈಗ ನಾನು ಸರಿಯಾಗಿ ತಿಳಿದುಕೊಳ್ಳಲು ಸಾಧ್ಯವೇ ನೋಡಬೇಕು. ಬಹುಶಃ ನನ್ನ ಜೀವನ ಈಗ ಬದಲಾವಣೆಯನ್ನ ಕಾಣಲಿದೆ; ಆದರೆ ಮುಖ್ಯವಾದದ್ದು ಅದಲ್ಲ. ಮುಖ್ಯವಾದದ್ದೇನೆಂದರೆ ಈಗಾಗಲೇ ಸಂಪೂರ್ಣ ಬದಲಾವಣೆ ನನ್ನಲ್ಲಿ ಉಂಟಾಗಿರುವುದು. ನಾನು ಅನೇಕ ಸಂಗತಿಗಳನ್ನು ಹಿಂದೆ ಬಿಟ್ಟು ಬಂದಿದ್ದೀನಿ, ಬಹಳಷ್ಟನ್ನ. ಅವೆಲ್ಲಾ ನನ್ನಿಂದಾಚೆಗೆ ದೂರಕ್ಕೆ ಹೊರಟುಹೋಗಿವೆ. ನನ್ನ ಪ್ರಯಾಣದ ಸಮಯದಲ್ಲಿ ನನಗೆ ನಾನೇ ಹೀಗೆ ಹೇಳಿಕೊಂಡೆ, ’ನಾನೀಗ ಪುರುಷರ ಪ್ರಪಂಚಕ್ಕೆ ಕಾಲಿಡುತ್ತಿದ್ದೇನೆ. ನನಗಷ್ಟೊಂದು ತಿಳಿದಿಲ್ಲ. ಆದರೆ, ಬಹುಶಃ ನನಗೊಂದು ಹೊಸ ಜೀವನ ಪ್ರಾರಂಭವಾಗಿದೆ.’ ನಾನು ಪ್ರಾಮಾಣಿಕನಾಗಿರುತ್ತೇನೆಂದು ಮತ್ತು ನನ್ನ ಕೆಲಸಗಳನ್ನ ನಿರ್ವಹಿಸುವಲ್ಲಿ ದೃಢತೆಯಿಂದ ಇರುತ್ತೇನೆಂದು ನಿಶ್ಚಯಿಸಿದೆ. ಬಹುಶಃ ನನ್ನ ಜೀವನದ ಪ್ರಯಾಣದಲ್ಲಿ ನನಗೆ ಸಂಕಷ್ಟಗಳು ಮತ್ತು ಅಡೆತಡೆಗಳು ಎದುರಾಗಬಹುದು, ಮತ್ತು ನಿರಾಸೆಗಳು ಉಂಟಾಗಬಹುದು, ಆದರೆ ಎಲ್ಲರ ಜೊತೆಯಲ್ಲೂ ಸಭ್ಯತೆಯಿಂದ ಮತ್ತು ಶ್ರದ್ಧೆಯಿಂದ ನಡೆದುಕೊಳ್ಳುತ್ತೇನೆ ಎಂದು ನಾನು ಸಂಕಲ್ಪ ಮಾಡಿದ್ದೇನೆ; ಇದಕ್ಕಿಂತ ಹೆಚ್ಚಾಗಿ ನನ್ನಿಂದ ಏನನ್ನೂ ಅಪೇಕ್ಷಿಸುವುದು ಸಾಧ್ಯವಿಲ್ಲ. ಜನರು ಅವರಿಷ್ಟ ಪಟ್ಟರೆ ನನ್ನನ್ನು ಮಗು ಎಂದು ಪರಿಗಣಿಸಬಹುದು. ನನ್ನನ್ನು ಶತಮೂರ್ಖ ಎಂದು ಆಗಾಗ್ಗೆ ಕರೆಯಲಾಗಿದೆ, ಮತ್ತು ಒಂದು ಹಂತದಲ್ಲಿ ನಾನೆಷ್ಟು ಅನಾರೋಗ್ಯದಿಂದ ಬಳಲುತ್ತಿದ್ದೆನೆಂದರೆ ಹತ್ತಿರಹತ್ತಿರ ಒಬ್ಬ ಮೂರ್ಖನಷ್ಟೇ ಕೆಟ್ಟ ಸ್ಥಿತಿಯಲ್ಲಿದ್ದೆ; ಆದರೆ ಈಗ ನಾನು ಮೂರ್ಖನಲ್ಲ. ನನ್ನನ್ನು ಹಾಗೆ ಪರಿಗಣಿಸಿದ್ದಾರೆ ಎನ್ನುವುದು ನನಗೆ ಅರಿವಾಗಿರುವ ಕಾರಣದಿಂದ ಅದು ಹೇಗೆ ನಾನೊಬ್ಬ ಶತಮೂರ್ಖನಾಗುತ್ತೇನೆ?

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-6; ಭಾಗ-1)

“ನಾನು ಬರ್ಲಿನ್‌ನನ್ನು ಹಾದುಹೋಗುತ್ತಿದ್ದಾಗ ಆ ಪುಟ್ಟ ಆತ್ಮಗಳಿಂದ ನನಗೆ ಪತ್ರವೊಂದು ಬಂತು, ಆಗಲೇ ನಾನು ಅವರನ್ನೆಷ್ಟು ಪ್ರೀತಿಸುತ್ತಿದ್ದೆ ಎಂಬ ಅರಿವು ನನಗಾಗಿದ್ದು. ಆ ಒಂದು ಮೊದಲನೇ ಪತ್ರವನ್ನ ಸ್ವೀಕರಿಸಿದಾಗ ಬಹಳ ಬಹಳ ನೋವುಂಟಾಯಿತು. ಅವರು ನನ್ನನ್ನು ಬೀಳ್ಕೊಡುವಾಗ ಅದೆಷ್ಟು ಖಿನ್ನತೆಯಿಂದ ಇದ್ದರು! ಒಂದು ತಿಂಗಳ ಹಿಂದಿನಿಂದ ಅವರು ನಾನು ಹೊರಟುಹೋಗುವುದರ ಬಗ್ಗೆ ದುಃಖದಿಂದ ಮಾತನಾಡಿಕೊಳ್ಳುತ್ತಿದ್ದರು; ಮತ್ತು ಜಲಪಾತದ ಬಳಿ, ಒಂದು ಸಂಜೆ, ನಾವು ಆ ರಾತ್ರಿಗೆ ಪರಸ್ಪರ ವಿದಾಯ ಹೇಳಿದಾಗ, ಅವರೆಲ್ಲಾ ನನ್ನನ್ನು ಹಿಂದೆಂದಿಗಿಂತಲೂ ಅತ್ಯಂತ ಬಿಗಿಯಾಗಿ ಅಪ್ಪಿಕೊಂಡು ನನ್ನನ್ನು ಭಾವುಕತೆಯಿಂದ ಚುಂಬಿಸಿದರು. ನಾನೊಬ್ಬನೇ ಇದ್ದಾಗ ಆಗಿಂದಾಗ್ಗೆ ಅವರಲ್ಲಿ ಯಾರಾದರೂ ಒಬ್ಬರು ಹಾಜರಾಗುತ್ತಿದ್ದರು, ಬರೀ ಒಂದು ಮುತ್ತು ಕೊಟ್ಟು ತಬ್ಬಿಕೊಳ್ಳುವುದಕ್ಕೋಸ್ಕರ, ನನ್ನ ಮೇಲೆ ಅವರಿಗಿದ್ದ ಪ್ರೀತಿಯನ್ನ ಪ್ರಕಟಿಸುವುದಕ್ಕೋಸ್ಕರ. ಅವರ ಇಡೀ ಸಮೂಹ ನನ್ನ ಜೊತೆಯಲ್ಲಿ ಊರಿನಿಂದ ಒಂದು ಮೈಲಿ ದೂರದಲ್ಲಿದ್ದ ರೈಲ್ವೇ ಸ್ಟೇಶನ್ನಿಗೆ ಬಂದಿತು ಮತ್ತು ಪದೇಪದೇ ಅವರಲ್ಲಿ ಒಬ್ಬರಲ್ಲ ಒಬ್ಬರು ಅಲ್ಲಲ್ಲೇ ನಿಂತು ಅವರ ಬಾಹುಗಳಿಂದ ನನ್ನನ್ನು ಆಲಂಗಿಸುತ್ತಿದ್ದರು, ಮತ್ತು ಎಲ್ಲಾ ಪುಟ್ಟ ಹುಡುಗಿಯರು ಅಳದೆ ಇರಲು ಎಷ್ಟೇ ಕಷ್ಟಪಟ್ಟರೂ. ತಮ್ಮ ಕಂಠದಲ್ಲೇ ಕಣ್ಣೀರು ಸುರಿಯುತ್ತಿದ್ದರು. ರೈಲು ಹೊರಡುತ್ತಿದ್ದಂತೆ ಅವರೆಲ್ಲಾ ಸಾಲಾಗಿ ನಿಂತು ಕೈ ಬೀಸುತ್ತಾ ’ಹುರ್ರಾ’ ಅಂತ ಕೂಗುತ್ತಿದ್ದುದನ್ನ ಅವರೆಲ್ಲಾ ದೂರದಲ್ಲಿ ಮರೆಯಾಗುವವರೆಗೂ ನಾನು ನೋಡುತ್ತಲೇ ಇದ್ದೆ.

“ನಾನು ನಿಮಗೆ ವಿಶ್ವಾಸದಿಂದ ಹೇಳುತ್ತೇನೆ, ನಾನು ಈಗಷ್ಟೇ ಒಳಗೆ ಬಂದ ತಕ್ಷಣ, ನಿಮ್ಮ ದಯಾಪರ ಮುಖಗಳನ್ನು ನೋಡಿದಾಗ, (ನನಗೆ ಮುಖಗಳನ್ನ ಓದುವುದು ಚೆನ್ನಾಗಿ ಗೊತ್ತು) ಆ ವಿದಾಯ ಹೇಳಿದ ಗಳಿಗೆಯ ನಂತರ ಮೊದಲ ಬಾರಿಗೆ ನನ್ನ ಹೃದಯದಲ್ಲಿನ ಭಾರವನ್ನ ಇಳಿಸಿದಂತೆ ಭಾಸವಾಯಿತು. ನನಗನಿಸುತ್ತದೆ ನಾನೂ ಕೂಡ ಅದೃಷ್ಟವಂತನಾಗಿ ಹುಟ್ಟಿದವರಲ್ಲಿ ಒಬ್ಬ ಎಂದು, ನನ್ನ ಸಂಪರ್ಕಕ್ಕೆ ಬಂದವರ ಮುಖವನ್ನ ನೋಡಿದಾಗ ನನ್ನಲ್ಲಿ ಉಂಟಾಗುವ ಭಾವನೆಯೆಂದರೆ ಅವರನ್ನ ಪ್ರೀತಿಸಬೇಕು ಎನ್ನುವುದು. ಈ ಒಂದು ಅವಕಾಶ ಎಲ್ಲರಿಗೂ ದೊರಕುವುದಿಲ್ಲ. ಆದಕ್ಕೇ ರೈಲುಗಾಡಿಯಿಂದ ಇಳಿದ ತಕ್ಷಣದಲ್ಲೇ ನಾನು ನಿಮ್ಮನ್ನ ನೋಡುವ ಅವಕಾಶ ಒದಗಿಬಂದಿತು!

“ನನಗೆ ಗೊತ್ತು ಈ ರೀತಿ ಒಬ್ಬರಲ್ಲಿ ಉಂಟಾದ ಭಾವನೆಯ ಬಗ್ಗೆ ಇನ್ನೊಬ್ಬರು ಮಾತನಾಡುವುದು ನಾಚಿಕೆಯ ವಿಷಯ ಎನ್ನುವುದು; ಆದರೂ ನಾನು ಈ ರೀತಿ ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ ಮತ್ತು ತೃಣಮಾತ್ರದಷ್ಟೂ ನಾನು ನಾಚಿಗೆ ಪಟ್ಟುಕೊಳ್ಳುತ್ತಿಲ್ಲ ಅಥವ ಹಿಂಜರಿಯುತ್ತಿಲ್ಲ. ನಾನೊಬ್ಬ ಸ್ವಭಾವತಃ ಬೇರೊಬ್ಬರ ಜೊತೆ ಬೆರೆಯುವಂತಹ ಮನುಷ್ಯನಲ್ಲ, ಮತ್ತು ಮುಂದಿನ ಸಾಕಷ್ಟು ಸಮಯ ನಾನು ಬಂದು ನಿಮ್ಮನ್ನ ಕಾಣದೇ ಇರಬಹುದಾದ ಸಾಧ್ಯತೆಗಳಿವೆ; ಅದೊಂದು ಕಾರಣಕ್ಕೋಸ್ಕರ ನನ್ನ ಬಗ್ಗೆ ಕೆಟ್ಟ ಭಾವನೆಯನ್ನ ಬೆಳೆಸಿಕೊಳ್ಳಬೇಡಿ. ಹಾಗೆ ಮಾಡುವುದು ನಾನು ನಿಮ್ಮ ಸಮಾಜಕ್ಕೆ ಬೆಲೆ ಕೊಡುತ್ತಿಲ್ಲ ಅನ್ನುವ ಕಾರಣಕ್ಕಲ್ಲ; ಮತ್ತು ನೀವೆಂದೂ ನಾನು ಯಾವುದೊ ವಿಷಯಕ್ಕೆ ಅಸಂತೋಷಗೊಂಡಿದ್ದೇನೆ ಅಂತಲೂ ಅಂದುಕೊಳ್ಳಬಾರದು.

“ನೀವು ನಿಮ್ಮ ಮುಖಗಳ ಬಗ್ಗೆ ಕೇಳಿದಿರಿ ಮತ್ತು ಅದರಲ್ಲಿ ನಾನೇನನ್ನು ಓದಬಹುದು ಎಂದು; ನಾನು ಅತ್ಯಂತ ಸಂತೋಷದಿಂದ ಹೇಳುತ್ತೇನೆ, ನೀನು ಅಡೆಲೈಡ ಇವಾನೊವ್ನ, ಬಹಳ ಸಂತೋಷಕರವಾದ ಮುಖವನ್ನ ಹೊಂದಿದ್ದೀಯ; ಮೂರೂ ಜನರಿಗಿಂತ ನಿನ್ನ ಮುಖ ಹೆಚ್ಚು ಸಹಾನುಭೂತಿಯನ್ನ ತೋರಿಸುವಂತಹದ್ದು. ನಿನ್ನ ಸಹಜ ಸೌಂದರ್ಯದ ಬಗ್ಗೆ ಏನನ್ನು ಹೇಳಿದರೂ ಅದು ಕಮ್ಮಿಯೇ. ಯಾರೇ ಆದರೂ ನಿನ್ನ ಮುಖವನ್ನ ನೋಡಿ ತಮ್ಮಲ್ಲಿ ತಾವೇ ಹೇಳಿಕೊಳ್ಳುವುದು, ’ಅವಳ ಮುಖ ದಯಾಪರ ಸಿಸ್ಟರ್‌ಳ ಮುಖದಂತಿದೆ’ ಎಂದು. ನೀನು ಸರಳ ಸ್ವಭಾವದ ಮತ್ತು ಸಂತಸದಿಂದಿರುವ ವ್ಯಕ್ತಿ, ಆದರೆ ನೀನು ಇನ್ನೊಬ್ಬರ ಹೃದಯದ ಒಳಗೆ ಹೊಕ್ಕಿ ಬಹಳ ಬೇಗ ಅದರೊಳಗನ್ನು ಕಾಣುವವಳು. ನಾನು ನಿನ್ನ ಮುಖದಲ್ಲಿ ಕಾಣುವುದು ಅದನ್ನೇ.

“ನಿನ್ನದೂ ಕೂಡ, ಅಲೆಕ್ಸಾಂಡ್ರ ಇವಾನೊವ್ನ, ಬಹಳ ಸುಂದರವಾದ ಮುಖ; ಆದರೆ ನಿನ್ನಲ್ಲಿ ಯಾವುದೋ ರಹಸ್ಯವಾದ ದುಃಖವಿರಬಹುದು ಅಂತ ಅನಿಸುತ್ತದೆ. ನಿನ್ನ ಹೃದಯ ಅನುಮಾನವಿಲ್ಲದೇ ಕರುಣಾಮಯಿ ಮತ್ತು ಒಳ್ಳೆಯ ಸ್ವಭಾವದಿಂದ ಕೂಡಿದೆ, ಆದರೆ ನೀನು ಸದಾಕಾಲ ಉಲ್ಲಾಸದಿಂದ ಇರುವುದಿಲ್ಲ. ನಿನ್ನ ಮುಖದಲ್ಲಿ ಯಾವಾಗಲೂ ಅನುಮಾನದ ಛಾಯೆ ಕಾಣುತ್ತಿರುತ್ತದೆ, ಅಂದರೆ ಬಾಂಬಿನಿಂದ ನಾಶವಾದ ಜರ್ಮನಿಯ ಡ್ರೆಸ್ಡಿನ್ ನಗರದ ಹೋಬಿನ್ ಎಂಬ ಕಲಾವಿದ ರಚಿಸಿದ ಮದೊನ್ನ ಎಂಬ ಕಲಾಕೃತಿಯಂತೆ. ನಿನ್ನ ಮುಖದ ಬಗ್ಗೆ ಅಷ್ಟು ಮಾತ್ರ ಹೇಳುತ್ತೇನೆ. ನಾನು ಸರಿಯಾಗಿ ಊಹಿಸಿದ್ದೇನೆಯೇ?

“ನಿನ್ನ ಮುಖದ ಬಗ್ಗೆ ಹೇಳಬೇಕೆಂದರೆ ಲಿಜಬೆಥ ಪ್ರೊಕೊಫಿಯೆವ್ನ (ಎಪಾಂಚಿನ್‌ನ ಹೆಂಡತಿ), ನಾನು ಬರೀ ಆ ರೀತಿ ಯೋಚಿಸುತ್ತಿರುವುದು ಮಾತ್ರವಲ್ಲ, ಆದರೆ ನನಗೆ ಸಂಪೂರ್ಣವಾಗಿ ಖಚಿತವಾಗಿದೆ, ನೀನೊಬ್ಬಳು ಪರಿಪೂರ್ಣವಾದ ಮಗು, ಎಲ್ಲದರಲ್ಲೂ, ಎಲ್ಲದರಲ್ಲೂ ಕೂಡ, ಅಂದರೆ ಒಳ್ಳೆಯದರಲ್ಲಿಯೂ ಮತ್ತು ಕೆಟ್ಟದರಲ್ಲಿಯೂ ಮತ್ತು ನಿನ್ನ ವಯಸ್ಸಿನ ಹೊರತಾಗಿಯೂ. ಹಾಗೆ ಹೇಳಿದ್ದಕ್ಕೆ ನನ್ನ ಬಗ್ಗೆ ಕೋಪಗೊಳ್ಳಬೇಡ; ಮಕ್ಕಳ ಬಗ್ಗೆ ನನಗೆ ಯಾವ ರೀತಿಯ ಭಾವನೆ ಇದೆಯೆಂದು ನನಗೆ ಗೊತ್ತು. ನನ್ನ ಆತ್ಮದ ಸರಳತೆಯ ಕಾರಣದಿಂದ ನಾನು ಹೀಗೆ ಲೋಕಾಭಿರಾಮವಾಗಿ ಹೇಳುತ್ತಿದ್ದೇನೆಂದುಕೊಳ್ಳಬೇಡ. ಓ ಪ್ರೀತಿ ಪಾತ್ರಳೇ ಇಲ್ಲ, ಯಾವುದೇ ಕಾರಣಕ್ಕೂ ಹಾಗಲ್ಲ! ಬಹುಶಃ ನನ್ನ ಕಾಣ್ಕೆಯಲ್ಲಿ ನನ್ನದೇ ಆದ ಒಂದು ಆಳವಾದ ಘನ ವಸ್ತುವುದೆ.”

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...