ಕೇಂದ್ರ ಸರ್ಕಾರ ಎಫ್‌ಸಿಐ ಮೂಲಕ ಅಕ್ಕಿ ನೀಡಲು ಹಿಂದೇಟು ಹಾಕುತ್ತಿದೆ ಎಂದು ಸಿಎಂ ಸಿದ್ದರಾಮಯ್ಯನವರು ಆರೋಪಿಸಿದ ಬೆನ್ನಲ್ಲೇ, ಚುನಾವಣೆಗೆ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರು ಹೇಳಿದ್ದು ನಿಜವಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
“ಚುನಾವಣೆಗೆ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ದಾವರು ‘ರಾಜ್ಯದಲ್ಲಿ ಬಿಜೆಪಿ ಸೋತರೆ ಕೇಂದ್ರದಿಂದ ಬರುವ ಎಲ್ಲಾ ಯೋಜನೆಗಳನ್ನು ಕಡಿತಗೊಳಿಸಲಾಗುವುದು’ ಎಂದು ಹೇಳಿದ್ದರು. ಈಗ ಅದನ್ನೇ ಮಾಡುತ್ತಿದ್ದಾರೆ. ಇದನ್ನು ರಾಜಕೀಯ ಎಂದು ನಾನು ಈಗ ವ್ಯಾಖ್ಯಾನ ಮಾಡಲು ಹೋಗುವುದಿಲ್ಲ. ಬಿಜೆಪಿಯವರು ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಅವರು ಟೀಕೆ ಮಾಡಲಿ. ಅದಕ್ಕೂ ಮುನ್ನ ಬಿಜೆಪಿ ನಾಯಕರು ನಡ್ಡಾ ಅವರ ಹೇಳಿಕೆ ಬಗ್ಗೆ ಉತ್ತರ ನೀಡಲಿ” ಎಂದು ಡಿಕೆಶಿ ಹೇಳಿದ್ದಾರೆ.
ನಮ್ಮ ಸರ್ಕಾರದ ಅನ್ನಭಾಗ್ಯ ಯೋಜನೆಗಾಗಿ ಹೆಚ್ಚುವರಿ ತಲಾ 5 ಕೆ.ಜಿ ಅಕ್ಕಿ ವಿತರಣೆಗಾಗಿ ತಿಂಗಳಿಗೆ 2.28 ಲಕ್ಷ ಟನ್ ಅಕ್ಕಿ ನೀಡಲು ಒಪ್ಪಿದ್ದ ಭಾರತೀಯ ಆಹಾರ ನಿಗಮ ಈಗ ಹಿಂದೇಟು ಹಾಕಿದೆ. ನರೇಂದ್ರ ಮೋದಿ
ನೇತೃತ್ವದ ಭಾರತ ಸರ್ಕಾರವು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಅಕ್ಕಿ ಮಾರಾಟವನ್ನು ನಿಲ್ಲಿಸಲು ಎಫ್‌ಸಿಐಗೆ ಪತ್ರ ಬರೆದಿದೆ. ಇದಕ್ಕೆ ಬಿಜೆಪಿಯ ಬಡವರ ವಿರೋಧಿ ಧೋರಣೆಯೇ ಕಾರಣ. ಈ ಸಂಬಂಧ ಕೇಂದ್ರಕ್ಕೆ ಪ್ರತಿಭಟನಾ ಪತ್ರ ಬರೆಯಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಬಿಜೆಪಿಯನ್ನು ಅಧಿಕಾರಕ್ಕೆ ತರದಿದ್ದರೆ ಎಲ್ಲಾ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಬಿಜೆಪಿ ನಾಯಕರು ಚುನಾವಣಾ ಸಮಯದಲ್ಲಿ ಕನ್ನಡಿಗರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಎಫ್‌ಸಿಐಗೆ ಈ ಪತ್ರವು ಅದರ ಫಲಿತಾಂಶವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರವು ಜೂನ್ 9, 2023 ರಂದು ರಾಜ್ಯಕ್ಕೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ ಎಂದು ಭಾರತೀಯ ಆಹಾರ ನಿಗಮದ ಉಪ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿತ್ತು. ಭಾರತೀಯ ಆಹಾರ ನಿಗಮವು ರಾಜ್ಯದ ಮನವಿಯನ್ನು ಸ್ವೀಕರಿಸಿದೆ ಮತ್ತು ಜೂನ್ 12, 2023 ರ ದಿನಾಂಕದ ಪತ್ರದಲ್ಲಿ ರೂ. 3400/- ಪ್ರತಿ ಕ್ವಿಂಟಲ್ ದರದಲ್ಲಿ ಅಕ್ಕಿ ನೀಡಲು ಒಪ್ಪಿಗೆ ನೀಡಿತ್ತು. ಆದರೆ ಜೂನ್ 13 ರಂದು ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಮಾರದಂತೆ ನಿರ್ಬಂಧ ಹೇರಿದೆ ಎಂದು ಕಿಡಿಕಾರಿದ್ದಾರೆ.
In a desperate attempt to create problems for the implementation of Anna Bhagya 2.0, @narendramodi led Government of India writes to FCI to stop sale of rice to State under Open Market Sale Scheme.
Why is @narendramodi & @BJP4Karnataka against us giving 10 Kgs of free rice to… pic.twitter.com/OlclyUaTbF
— Siddaramaiah (@siddaramaiah) June 15, 2023
”ಭಾರತೀಯ ಆಹಾರ ನಿಗಮವು 7 ಲಕ್ಷ ಟನ್ ಅಕ್ಕಿ ಇಟ್ಟುಕೊಂಡು ಕೊಡುವುದಿಲ್ಲ ಎನ್ನುತ್ತಿದೆ. ಅನ್ನಭಾಗ್ಯ ಯೋಜನೆಯಿಂದ ಕಾಂಗ್ರೆಸ್‌ಗೆ ಒಳ್ಳೆಯ ಹೆಸರು ಬರುತ್ತದೆ. ಬಡವರ ಕಲ್ಯಾಣ ಆಗುತ್ತದೆ. ಅದನ್ನು ತಪ್ಪಿಸಬೇಕು ಎಂದೇ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ” ಎಂದು ಹೇಳಿದರು.
ನಿಗಮವು ನಮಗೆ ಅಕ್ಕಿ ಕೊಡುವುದಾಗಿ ತಿಳಿಸಿದ್ದರಿಂದಲೇ ನಾವು ಜುಲೈ 1 ರಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ತಲಾ 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ್ದೆವು. ಈಗ ಕೊಡುವುದಿಲ್ಲ ಎನ್ನುತ್ತಿದೆ. ಬೇರೆ ರಾಜ್ಯಗಳಿಂದ ಖರೀದಿಸಬೇಕಾಗಿದೆ. ತಮ್ಮ ಬಳಿ ಅಕ್ಕಿ ಇಲ್ಲ ಎಂದು ಪಂಜಾಬ್ ಹೇಳಿದೆ. ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ನೋಡೋಣ ಎಂದಿದ್ದಾರೆ. ಆ ರಾಜ್ಯಗಳ ಜತೆ ಮಾತುಕತೆಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಅಲ್ಲಿಗೆ ತೆರಳಲಿದ್ದಾರೆ” ಎಂದು ತಿಳಿಸಿದರು.
ಇದನ್ನೂ ಓದಿ:


