ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಹಿರಿಯ ನಾಯಕ ಅಜಿತ್ ಪವಾರ್ ಅವರು ಸ್ವಪಕ್ಷಕ್ಕೆ ಬಿಗ್ ಶಾಕ್ ನೀಡಿದ್ದಾರೆ. ಬಿಜೆಪಿ-ಶಿವಸೇನಾ ಸರ್ಕಾರದ ಜೊತೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಕೈ ಜೋಡಿಸಿದ್ದಾರೆ. ಈ ಮೂಲಕ ಮಹಾ ಮೈತ್ರಿ ಸರ್ಕಾರಕ್ಕೆ ಎನ್‌ಸಿಪಿ ಪಡೆ ಬೆಂಬಲ ನೀಡಿದೆ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್ ಪವಾರ್ ಜುಲೈ 2ರಂದು ರಾಜಭವನದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನಿರಾಕರಿಸಿದ ಬೆನ್ನಲ್ಲೆ ಅಜಿತ್ ಪವಾರ್ ಅವರು ಭಾನುವಾರ ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ ಕೆಲವು ನಾಯಕರು ಮತ್ತು ಶಾಸಕರೊಂದಿಗೆ ಸಭೆ ನಡೆಸಿದ್ದಾರೆ.
ಈ ಮಧ್ಯೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ನಿವಾಸದಲ್ಲಿ ಎನ್‌ಸಿಪಿ ನಾಯಕರ ಸಭೆಯನ್ನು ಏಕೆ ಕರೆಯಲಾಗಿದೆ ಎಂಬ ವಿವರಗಳನ್ನು ಕೇಳಿದಾಗ, ಶರದ್ ಪವಾರ್ ಅವರು ಪ್ರತಿಕ್ರಿಯಿಸಿ, ”ಈ ಸಭೆಯನ್ನು ಏಕೆ ಕರೆಯಲಾಗಿದೆ ಎಂದು ನನಗೆ ನಿಖರವಾಗಿ ತಿಳಿದಿಲ್ಲ ಆದರೆ ವಿರೋಧ ಪಕ್ಷದ ನಾಯಕನಾಗಿರುತ್ತೇನೆ. ಅವರು (ಅಜಿತ್ ಪವಾರ್) ಶಾಸಕರ ಸಭೆಯನ್ನು ಕರೆಯುವ ಹಕ್ಕನ್ನು ಹೊಂದಿದ್ದಾರೆ. ಅವರು ಅದನ್ನು ನಿಯಮಿತವಾಗಿ ಮಾಡುತ್ತಾರೆ. ಈ ಸಭೆಯ ಬಗ್ಗೆ ನನಗೆ ಹೆಚ್ಚಿನ ವಿವರಗಳಿಲ್ಲ” ಎಂದು ಹೇಳಿದ್ದಾರೆ.
ಸಭೆಯಲ್ಲಿ ಹಲವು ನಾಯಕರ ಜೊತೆ ಚರ್ಚಿಸಿರುವ ಅಜಿತ್ ಪವಾರ್ ಅವರು ಆಡಳಿತ ಪಕ್ಷ ಏಕನಾಥ್ ಶಿಂಧೆ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಭೆ ಬಳಿಕ ನಾಯಕರ ಜೊತೆಗೆ ಅವರು ರಾಜಭವನಕ್ಕೆ ತಲುಪಿದ್ದಾರೆ. ರಾಜ್ಯಪಾಲರಿಗೆ ಶರದ್ ಪವಾರ್ ಅವರು ತಮ್ಮೊಂದಿಗೆ 29 ಶಾಸಕರ ಬೆಂಬಲ ಇರುವ ಬಗ್ಗೆ ಖಚಿತತೆಯ ಪತ್ರವನ್ನು ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಶರದ್ ಪವಾರ್ ವಿರುದ್ಧ ಸಿಡಿದೆದ್ಧಿರುವ ಅಜಿತ್ ಪವಾರ್, ಇದೀಗ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಬೆಂಬಲದ ಬೆನ್ನಲ್ಲೇ ಸಿಎಂ ಏಕನಾಥ್ ಶಿಂಧೆ, ದೇವೇಂದ್ರ ಫಡ್ನವಿಸ್ ಹಾಗೂ ಅಜಿತ್ ಪವಾರ್ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.
ಅಜಿತ್ ಪವಾರ್ ತಮ್ಮ ಬೆಂಬಲಿತ ಶಾಸಕರೊಂದಿಗೆ ರಾಜಭವನ ತೆರಳಿದ್ದರು. ಇದರೊಂದಿಗೆ ಪವಾರ್ ಮಹಾರಾಷ್ಟ್ರದ ಎನ್‌ಡಿಎ ಸರ್ಕಾರಕ್ಕೆ ಸೇರ್ಪಡೆಯಾದರು. ಎನ್‌ಸಿಪಿ ನಾಯಕ ಛಗನ್ ಭುಜಬಲ್ ಅವರು ಸಿಎಂ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ ಮಹಾರಾಷ್ಟ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇದರೊಂದಿಗೆ ಪವಾರ್ ಮಹಾರಾಷ್ಟ್ರದ ಎನ್‌ಡಿಎ ಸರ್ಕಾರವನ್ನು ಸೇರಿಕೊಂಡು ಮೂರನೇ ಬಾರಿಗೆ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದಾರೆ. ಮೂಲಗಳ ಪ್ರಕಾರ, ಅವರು 53 ಎನ್‌ಸಿಪಿ ಶಾಸಕರ ಪೈಕಿ 43 ಶಾಸಕರ ಬೆಂಬಲವನ್ನು ಹೊಂದಿದ್ದಾರೆ ಮತ್ತು ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಲಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಇತರ ಎನ್‌ಸಿಪಿ ನಾಯಕರಲ್ಲಿ ಪ್ರಫುಲ್ ಪಟೇಲ್, ಧನಂಜಯ್ ಮುಂಡೆ, ಅನಿಲ್ ಪಾಟೀಲ್ ಮತ್ತು ಅದಿತಿ ತತ್ಕರೆ ಸೇರಿದ್ದಾರೆ.
ಎನ್‌ಡಿಎ ಸರ್ಕಾರಕ್ಕೆ ಪವಾರ್ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಚಿವ ಸುಧೀರ್ ಮುಂಗಂತಿವಾರ್, ”40ಕ್ಕೂ ಹೆಚ್ಚು ಶಾಸಕರು ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ. ಬಹುತೇಕ ಸಂಪೂರ್ಣ ಎನ್‌ಸಿಪಿ ಸೇರಲಿದೆ” ಎಂದು ಹಯೇಳಿದ್ದಾರೆ.
”ಏಕತಾ ಸಭೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಮತ್ತು ಮೈತ್ರಿ ಮಾಡಿಕೊಳ್ಳುವ ಶರದ್ ಪವಾರ್ ಅವರ ಏಕಪಕ್ಷೀಯ ನಿರ್ಧಾರದಿಂದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರೊಂದಿಗೆ ರಾಜಭವನಕ್ಕೆ ತೆರಳಿದ್ದ ಕೆಲವು ಶಾಸಕರು ಅಸಮಾಧಾನಗೊಂಡಿದ್ದಾರೆ” ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.


