Homeಮುಖಪುಟರಾಜಸ್ಥಾನ: ಗೆಹ್ಲೋಟ್‌ ಜೊತೆಗಿನ ಭಿನ್ನಾಭಿಪ್ರಾಯ ಮರೆತು ಒಟ್ಟಿಗೆ ಚುನಾವಣೆ ಎದುರಿಸುತ್ತೇವೆ; ಸಚಿನ್‌ ಪೈಲಟ್‌

ರಾಜಸ್ಥಾನ: ಗೆಹ್ಲೋಟ್‌ ಜೊತೆಗಿನ ಭಿನ್ನಾಭಿಪ್ರಾಯ ಮರೆತು ಒಟ್ಟಿಗೆ ಚುನಾವಣೆ ಎದುರಿಸುತ್ತೇವೆ; ಸಚಿನ್‌ ಪೈಲಟ್‌

- Advertisement -
- Advertisement -

ರಾಜಸ್ತಾನ ಕಾಂಗ್ರೆಸ್ ನಾಯಕರಲ್ಲಿನ ಕಿತ್ತಾಟಕ್ಕೆ ಇದೀಗ ಬ್ರೇಕ್ ಬಿದ್ದಿದ್ದು, ಅಶೋಕ್‌ ಗೆಹ್ಲೋಟ್‌ ಅವರೊಂದಿಗಿನ ಭಿನ್ನಾಭಿಪ್ರಾಯವನ್ನು ಮರೆಯುವುದಾಗಿ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಶನಿವಾರ ಹೇಳಿದ್ದಾರೆ. ಸಾಮೂಹಿಕ ನಾಯಕತ್ವವೇ ವಿಧಾನಸಭೆ ಚುನಾವಣೆಗೆ ಮುಂದಿರುವ ಏಕೈಕ ಮಾರ್ಗ ಎಂದಿದ್ದಾರೆ.

ಕೆಲದ ದಿನಗಳ ಹಿಂದಿನಿಂದ ಅಶೋಕ್‌ ಗೆಹ್ಲೋಟ್‌ ಹಾಗೂ ಸಚಿನ್‌ ಪೈಲಟ್‌ ನಡುವಿನ ಕಿತ್ತಾಟ ಕಾಂಗ್ರೆಸ್ ನಾಯಕರನ್ನು ಚಿಂತೆಗೀಡು ಮಾಡಿತ್ತು. ಆದರೆ ಇದೀಗ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಲಹೆ ಮೇರೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರೊಂದಿಗಿನ ಭಿನ್ನಾಭಿಪ್ರಾಯವನ್ನು ಮರೆಯುವುದಾಗಿ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಶನಿವಾರ ಹೇಳಿದ್ದು, ಸಾಮೂಹಿಕ ನಾಯಕತ್ವವೇ ವಿಧಾನಸಭೆ ಚುನಾವಣೆಗೆ ಮುಂದಿರುವ ಏಕೈಕ ಮಾರ್ಗ ಎಂದಿದ್ದಾರೆ. ಪಕ್ಷದ ನಿರ್ಣಾಯಕ ರಾಜಸ್ಥಾನ ಚುನಾವಣಾ ಕಾರ್ಯತಂತ್ರದ ಸಭೆಯ ಕೆಲವೇ ದಿನಗಳಲ್ಲಿ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

”ಎಲ್ಲವನ್ನು  ಕ್ಷಮಿಸಿ, ಹಳೆಯದನ್ನು ಮರೆತು ಮುಂದೆ ಸಾಗಿ ಎಂದು ಖರ್ಗೆ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ. ”ಅಶೋಕ್ ಗೆಹ್ಲೋಟ್ ಜಿ ನನಗಿಂತ ಹಿರಿಯರು, ಅವರಿಗೆ ಹೆಚ್ಚು ಅನುಭವವಿದೆ, ಅವರ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿಗಳಿವೆ. ನಾನು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ, ನಾನು ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದೆ. ಇಂದು ಅವರು ಮುಖ್ಯಮಂತ್ರಿ (ಗೆಹ್ಲೋಟ್). ಆದ್ದರಿಂದ ಅವರು ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾವಿಸುತ್ತೇನೆ” ಎಂದು ಸಚಿನ್‌ ಪೈಲಟ್‌ ಹೇಳಿದ್ದಾರೆ.

”ಸ್ವಲ್ಪ ಆಚೆ ಈಚೆ ಆದರೆ ಅದು ದೊಡ್ಡ ಸಮಸ್ಯೆಯಲ್ಲ. ಏಕೆಂದರೆ ಯಾವುದೇ ವ್ಯಕ್ತಿಗಿಂತ ಪಕ್ಷ ಮತ್ತು ಸಾರ್ವಜನಿಕರೇ ಮುಖ್ಯ. ನನಗೂ ಇದು ಅರ್ಥವಾಗಿದೆ ಮತ್ತು ಅವರಿಗೂ ಅರ್ಥವಾಗಿದೆ” ಎಂದು ಹೇಳಿದ್ದಾರೆ.

ಹಿಂದಿನ ವಸುಂಧರಾ ರಾಜೇ ಸರ್ಕಾರದ ಭ್ರಷ್ಟಾಚಾರದಂತಹ ವಿಷಯಗಳ ಬಗ್ಗೆ ತನಿಖೆ ನಡೆಸದೇ ಇರುವುದಕ್ಕಾಗಿ ಗೆಹ್ಲೋಟ್ ಸರ್ಕಾರವನ್ನು ಟೀಕಿಸಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಪೈಲಟ್, ”ಆ ಸಮಯ ಕಳೆದು ಹೋಗಿದೆ, ಅದು ಮತ್ತೆ ಬರುವುದಿಲ್ಲ, ನಾವು ಭವಿಷ್ಯದ ಬಗ್ಗೆ ಚಿಂತಿಸಬೇಕು ಎಂದು ಖರ್ಗೆ ಹೇಳಿದ್ದಾರೆ” ಎಂದು ಉತ್ತರಿಸಿದ್ದಾರೆ.

ಸಭೆ ಬಳಿಕ ಕಾಂಗ್ರೆಸ್, ಒಗ್ಗಟ್ಟಿನಿಂದ ಇದ್ದರೆ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಪ್ರತಿಪಾದಿಸಿತು. ಅದೇ ವೇಳೆ ಶಿಸ್ತು ಕಾಪಾಡದ ಮತ್ತು ಪಕ್ಷದ ವೇದಿಕೆಯ ಹೊರಗೆ ಮಾತನಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಎಂದಿಗೂ ಘೋಷಿಸುವುದಿಲ್ಲ ಎಂಬ ಕಾಂಗ್ರೆಸ್ ಸಂಘಟನೆಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ, ಪೈಲಟ್ ”ವೇಣುಗೋಪಾಲ್ ಜಿ ಅವರು ಹೇಳಿದ್ದು ತಪ್ಪಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಪ್ರತಿ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಅದು ವೈಯಕ್ತಿಕವಾಗಿರುವ ಸ್ಪರ್ಧೆಯಲ್ಲ. 2018ರಲ್ಲಿ ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದೆ. ನಾವು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದಾಗ ಎಕ್ಸ್, ವೈ, ಝಡ್ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಹೇಳಿರಲಿಲ್ಲ. ಅದು ಚುನಾವಣೆಯ ನಂತರದ ನಿರ್ಧಾರ” ಎಂದು ಉತ್ತರಿಸಿದರು.

ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರಿಗೆ ಜೀವಾವಧಿ ಶಿಕ್ಷೆ..!: ಮಸೂದೆ ಅಂಗೀಕಾರಕ್ಕೆ ಮುಂದಾದ ರಾಜಸ್ಥಾನ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read