Homeಕರ್ನಾಟಕಸಿದ್ದರಾಮಯ್ಯ ಸರ್ಕಾರದ ಬಜೆಟ್: ಅಭಿವೃದ್ಧಿಯ ನವವ್ಯಾಖ್ಯಾನ

ಸಿದ್ದರಾಮಯ್ಯ ಸರ್ಕಾರದ ಬಜೆಟ್: ಅಭಿವೃದ್ಧಿಯ ನವವ್ಯಾಖ್ಯಾನ

- Advertisement -
- Advertisement -

ಕಳೆದ ಮೇ ತಿಂಗಳಲ್ಲಿ ವಿಧಾನಸಭೆಯ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಕಾರಣದಿಂದಾಗಿ ಹಿಂದಿನ ಬಸವರಾಜ್ ಬೊಮ್ಮಾಯಿ ಸರ್ಕಾರ 2023ರ ಫೆಬ್ರವರಿ 17ರಂದು ಮಂಡಿಸಿದ್ದ 2023-24ನೆಯ ಸಾಲಿನ ಬಜೆಟ್ಟಿಗೆ ಬದಲಾಗಿ ಜುಲೈ 7ರಂದು ಪ್ರಸಕ್ತ ಹಣಕಾಸು ಮಂತ್ರಿಗಳು ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ರ ಹೊಸ ಬಜೆಟ್ಟನ್ನು ಮಂಡಿಸಿದ್ದಾರೆ. ಈ ಬಜೆಟ್ ರೂಪಿಸುವುದಕ್ಕೆ ಮತ್ತು ಪೂರ್ವ ಸಿದ್ಧತೆಗೆ ಇಂದಿನ ಸರ್ಕಾರಕ್ಕೆ ಹೆಚ್ಚು ಸಮಯಾವಕಾಶ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳಿಗೆ ಅಂದಾಜು ರೂ. 60,000 ಕೋಟಿ ಸಂಪನ್ಮೂಲವನ್ನು ಹೊಂದಾಣಿಕೆ ಮಾಡುವುದು ಸವಾಲಾಗಿ ಪರಿಣಮಿಸಿದೆ. ಗ್ಯಾರಂಟಿಗಳ ಹಣಕಾಸು ವೆಚ್ಚದ ಬಗ್ಗೆ ಕಾಂಗ್ರೆಸ್ ಪೂರ್ವಚಿಂತನೆ-ಪೂರ್ವಸಿದ್ಧತೆ ಮಾಡಿಕೊಂಡಿರಲಿಲ್ಲ ಎಂಬುದು ಚುನಾವಣೆಯಲ್ಲಿ ಗೆದ್ದ ನಂತರ ಅರಿವಿಗೆ ಬರುತ್ತಿದೆ. ಆದ್ದರಿಂದ ಸಿದ್ದರಾಮಯ್ಯ ಅವರಿಗೆ ಆರ್ಥಿಕವಾಗಿ ಮತ್ತು ವಿತ್ತೀಯವಾಗಿ ಶಿಸ್ತುಬದ್ಧವಾದ ಬಜೆಟ್ ಸಿದ್ಧಪಡಿಸುವುದು ಸಾಧ್ಯವಾಗಿಲ್ಲ. ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು ತಮ್ಮ ಸೈದ್ಧಾಂತಿಕ ನಿಲುವನ್ನು ಸ್ಪಷ್ಟವಾಗಿ ಘೋಷಿಸಿದ್ದಾರೆ. ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ತಮ್ಮ ಬಜೆಟ್ಟಿನ ಮೂಲ ಸೂತ್ರ ಎನ್ನುವುದನ್ನು ಸಾರಿಹೇಳಿದ್ದಾರೆ. ಒಂದು ರೀತಿಯಲ್ಲಿ ಸಮತೋಲನದ ಬಜೆಟ್ಟನ್ನು ಮಂಡಿಸಿದ್ದಾರೆ. ಈಗ ಬಜೆಟ್ಟಿನಲ್ಲಿ ಸಾರಿರುವ ಉದ್ದೇಶಗಳನ್ನು ನಿರ್ವಹಿಸುವುದಕ್ಕೆ ಕಸರತ್ತು ನಡೆಸಬೇಕಾಗಿದೆ.

ಬಜೆಟ್ಟಿನ ಸ್ಥೂಲ ಚಿತ್ರ

ರಾಜ್ಯದ ಸಿದ್ದರಾಮಯ್ಯ ಅವರ 2023-24ನೆಯ ಸಾಲಿನ ಬಜೆಟ್ ಗಾತ್ರ ರೂ.327747 ಕೋಟಿ. ಇದು ಸದರಿ ವರ್ಷದ ಜಿಎಸ್‌ಡಿಪಿಯ ಶೇ.14.4ರಷ್ಟಾಗುತ್ತದೆ. ಇದು 2022-23ರಲ್ಲಿನ ಬಜೆಟ್ ಗಾತ್ರವು ಅಂದಿನ ಜಿಎಸ್‌ಡಿಪಿಯ (ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್) ಶೇ.12.18ರಷ್ಟಿತ್ತು. ರಾಜ್ಯದ 2022-23ರ ರೆವಿನ್ಯೂ ಕೊರತೆ ಮತ್ತು ವಿತ್ತೀಯ ಕೊರತೆ ಸೇರಿ ಒಟ್ಟು ಕೊರತೆ ರೂ.67133 ಕೋಟಿ ಮತ್ತು ಇದು ಜಿಎಸ್‌ಡಿಪಿಯ ಶೇ.3.07ರಷ್ಟಾಗುತ್ತದೆ. ಪ್ರಸ್ತುತ 2023-24ರಲ್ಲಿ ಈ ಕೊರತೆಯ ಮೊತ್ತ ರೂ.79168 ಕೋಟಿ ಮತ್ತು ಇದು ಸದರಿ ವರ್ಷದ ಜಿಎಸ್‌ಡಿಪಿಯ ಶೇ.3.09 ರಷ್ಟಾಗುತ್ತದೆ. ಇಲ್ಲಿ ಗ್ಯಾರಂಟಿಗಳ ಹಿನ್ನೆಲೆಯಲ್ಲಿಯೂ ಸಿದ್ದರಾಮಯ್ಯನವರು ವಿತ್ತೀಯ ಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.

ಸಾರ್ವತ್ರಿಕ ಮೂಲ ಆದಾಯ (ಯುಬಿಐ) ಪ್ರಣಾಳಿಕೆಯನ್ನು ಗ್ಯಾರಂಟಿಗಳ ಮೂಲಕ ಸಿದ್ದರಾಮಯ್ಯ ಅವರು ಜಾರಿಗೊಳಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಸರಿಸುಮಾರು 1.3 ಕೋಟಿ ಕುಟುಂಬಗಳಿಗೆ ಮಾಸಿಕ ರೂ. 4 ಸಾವಿರದಿಂದ ರೂ. 5 ಸಾವಿರ ಮೂಲ ಆದಾಯ ದೊರೆಯುವ ಸಾಧ್ಯತೆಯಿದೆ. ಇದು ಸಣ್ಣ ಸಾಧನೆಯಲ್ಲ. ಅಭಿವೃದ್ಧಿಯ ಒಂದು ಹೊಸ ಸಂಕ್ರಮಣವನ್ನು ಕರ್ನಾಟಕ ಇಂದು ಅನುಭವಿಸುತ್ತಿದೆ. ಗ್ಯಾರಂಟಿಗಳ ನಿರ್ವಹಣೆಯಲ್ಲಿ ತಪ್ಪುಗಳಾಗಬಹುದು, ಅವುಗಳ ಅನುಷ್ಠಾನದಲ್ಲಿ ವಿಳಂಬವಾಗಬಹುದು, ಅವು ಜನರಿಗೆ ತಲುಪುವಲ್ಲಿ ಸಮಸ್ಯೆಗಳಾಗಬಹುದು ಮತ್ತು ಅವುಗಳಿಗೆ ಸಮಯಕ್ಕೆ ಸರಿಯಾಗಿ ಹಣಕಾಸನ್ನು ಒದಗಿಸುವುದು ಸರ್ಕಾರಕ್ಕೆ ಕಷ್ಟವಾಗಬಹುದು. ಅನೇಕ ಹರಕು-ಮುರುಕು ಬಾಯಿಗಳು, ಹೊಟ್ಟೆ ತುಂಬಿದವರು, ಬ್ರಾಹ್ಮಣ್ಯಕ್ಕೆ ಬಲಿಯಾದವರು ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕತೆ ಮುಳುಗಿ ಹೋಗುತ್ತದೆ (ಉದಾ: ದಿವಾಳಿಯಾಗುತ್ತದೆ ಎಂದ ಡಾ. ಗುರುರಾಜ್ ಕರ್ಜಗಿ, ಬಿಬೇಕ್ ಒಬೆರಾಯ್ ಮುಂತಾಗಿ), ತೆರಿಗೆದಾರರ ಹಣವನ್ನು ಬಡವರಿಗೆ ನೀಡಲಾಗುತ್ತದೆ (ಟಿ. ವಿ. ಮೋಹನದಾಸ್ ಪೈ), ರಾಜ್ಯದ ಮುಂದಿನ ಪೀಳಿಗೆ ಮೇಲೆ ಸಾಲದ ಹೊರೆಯನ್ನು ಹೊರಿಸಲಾಗುತ್ತದೆ (ರಾಜೀವ್ ಚಂದ್ರಶೇಖರ) ಮುಂತಾದವರ ಮಾತುಗಳಿಗೆ ಯಾವ ಕವಡೆ ಕಿಮ್ಮತ್ತನ್ನೂ ನೀಡುವ ಅಗತ್ಯವಿಲ್ಲ. ದೇಶದ ಬಂಡವಾಳಶಾಹಿಗಳೇ ದೇಶದ ಸಂಪತ್ತಿನ ಸೃಷ್ಟಿಕರ್ತರು ಎಂಬ ಪ್ರಧಾನಮಂತ್ರಿ ಅವರ ಹುಂಬ ಮಾತನ್ನು ನಂಬಿ ಇವರೆಲ್ಲ ಹೀಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ದುಡಿಮೆಯ ಬಗ್ಗೆ, ಬೆವರಿನ ಬಗ್ಗೆ, ಕಷ್ಟಸಹಿಷ್ಣುತೆಯ ಬಗ್ಗೆ ಅರಿವಿಲ್ಲವದರು ಮಾತ್ರ ಹೀಗೆ ಗ್ಯಾರಂಟಿಗಳನ್ನು ಹಳಿಯಬಹುದು. ಇವರೆಲ್ಲ ಸನಾತನ+ಆರ್ಥಿಕ ಅಸಮಾನತೆಯ ಆರಾಧಕರು. ಗ್ಯಾರಂಟಿಗಳು ಮೂರು ಮುಕ್ಕಾಲು ಪಾಲು ಶೂದ್ರರನ್ನು ಮತ್ತು ದಲಿತರನ್ನು ಸಬಲಗೊಳಿಸುತ್ತದೆ ಎಂಬುದು ಇವರೆಲ್ಲರ ವಿಕೃತ ಮಾತುಗಳಿಗೆ ಮೂಲ ಕಾರಣವಾಗಿದೆ.

ಸಂಪನ್ಮೂಲ ಸಂಗ್ರಹಕ್ಕೆ ಮಿತಿ

ರಾಜ್ಯದ ಹಣಕಾಸು ಸಂಪನ್ಮೂಲಕ್ಕೆ ಮಿತಿಯಿದೆ. ಏಕೆಂದರೆ ಅಪಾರ ಸಂಪನ್ಮೂಲವನ್ನು ತಂದುಕೊಡುತ್ತಿದ್ದ ತೆರಿಗೆ ವ್ಯವಸ್ಥೆಯನ್ನು ಜಿಎಸ್‌ಟಿಯ ಮೂಲಕ ಒಕ್ಕೂಟ ಸರ್ಕಾರ 2016ರಲ್ಲಿ ಬಹುತೇಕ ತನ್ನ ವಶ ಮಾಡಿಕೊಂಡಿದೆ. ತೆರಿಗೆ ವಿಷಯದಲ್ಲಿ ರಾಜ್ಯದ ಅಧಿಕಾರ-ಸಾಮರ್ಥ್ಯವು ಸೀಮಿತವಾಗಿದೆ. ಅದರ ಬಳಿಯಿರುವ ತೆರಿಗೆಗಳು ಐದು: ಮೋಟಾರು ವಾಹನ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ತೆರಿಗೆ, ಅಬಕಾರಿ ಸುಂಕ, ವಾಣಿಜ್ಯ ತೆರಿಗೆ ಮತ್ತು ಇತರ ತೆರಿಗೆಗಳು. ಈ ಐದು ತೆರಿಗೆಗಳ ಮೂಲಕ 2023-24ರಲ್ಲಿ ನಿರೀಕ್ಷಿಸಿರುವ ರಾಜಸ್ವ ರೂ.164653 ಕೋಟಿ. ಇದು ರಾಜ್ಯದ ಜಿಎಸ್‌ಡಿಪಿಯ ಶೇ.7.05ರಷ್ಟಾಗುತ್ತದೆ. ಇವೆಲ್ಲವೂ ಗರಿಷ್ಟ ಮಟ್ಟವನ್ನು ಮುಟ್ಟಿವೆ. ಇವುಗಳನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ಅವಕಾಶ ಕಡಿಮೆ.

ಒಕ್ಕೂಟದಿಂದ ರಾಜ್ಯಕ್ಕೆ ಮಹಾ ಅನ್ಯಾಯ

ರಾಜ್ಯದ ಬಜೆಟ್ಟಿಗೆ ಮತ್ತೊಂದು ಮುಖ್ಯ ಮೂಲ ಒಕ್ಕೂಟ ಸರ್ಕಾರ ಮಾಡುವ ಸಂಪನ್ಮೂಲ ವರ್ಗಾವಣೆ. ರಾಜ್ಯಕ್ಕೆ ಒಕ್ಕೂಟವು ಎರಡು ರೀತಿಯಲ್ಲಿ ಸಂಪನ್ಮೂಲವನ್ನು ವರ್ಗಾಯಿಸುತ್ತದೆ. ಒಂದು, ಒಕ್ಕೂಟ ತೆರಿಗೆ ರಾಶಿಯಲ್ಲಿ ಸಂವಿಧಾನಾತ್ಮಕವಾಗಿ ರಾಜ್ಯಕ್ಕೆ ಪಾಲು ಮತ್ತು ಎರಡನೆಯದು ಒಕ್ಕೂಟ ಪ್ರಾಯೋಜಿತ ಮತ್ತು ಒಕ್ಕೂಟ ವಲಯ ಯೋಜನೆಗಳು. ತೆರಿಗೆ ರಾಶಿಯ ಪಾಲಿನಲ್ಲಿ ರಾಜ್ಯಕ್ಕೆ 2018-19ರಲ್ಲಿ ದೊರೆತ ಹಣ ರೂ. 35894 ಕೊಟಿ. ಇದು 2023-24ರಲ್ಲಿ ರೂ. 37252 ಕೋಟಿಯಾಗಿದೆ. ಇಲ್ಲಿನ ಏರಿಕೆ ಪ್ರಮಾಣ ಶೇ.3.78. ಆದರೆ ಇದೇ ಅವಧಿಯಲ್ಲಿ ಒಕ್ಕೂಟ ರಾಜಸ್ವವು ರೂ.24.61 ಲಕ್ಷ ಕೋಟಿಯಿಂದ ರೂ.33.61 ಲಕ್ಷ ಕೋಟಿಗೆ ಏರಿದೆ. ಇಲ್ಲಿ ಬೆಳವಣಿಗೆ ಶೇ.36.55. ಇಲ್ಲಿನ ವ್ಯತ್ಯಾಸವನ್ನು ಗಮನಿಸಬೇಕು. ಅನುದಾನದಲ್ಲಿ ಒಕ್ಕೂಟವು ರಾಜ್ಯಕ್ಕೆ ಹೆಚ್ಚು ನೀಡಬಹುದು. ಆದರೆ ಇದರಲ್ಲಿ ಒಕ್ಕೂಟವು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಈ ಬಾಬ್ತು 2017-18ರಲ್ಲಿ ನೀಡಿದ್ದ ಮೊತ್ತ ರೂ.15394 ಕೋಟಿ. ಆದರೆ 2023-24ರಲ್ಲಿ ಅದು ನೀಡುತ್ತಿರುವುದು ರೂ.13005 ಕೋಟಿ. ಇಲ್ಲಿನ ಕಡಿತ ಶೇ.(-)15.52. ಇದಲ್ಲದೆ ಜಿಎಸ್‌ಟಿ ನಿರ್ವಹಣೆಗೆ ಸಂಬಂಧಿಸಿದಂತೆ ಅದರ ಪರಿಹಾರವನ್ನು 2022ರ ಜುಲೈನಲ್ಲಿ ನಿಲ್ಲಿಸಲಾಗಿದೆ. ಜಿಎಸ್‌ಟಿ ಬೆಳವಣಿಗೆಯು ಶೇ.14ಕ್ಕಿಂತ ಕಡಿಮೆಯಾದರೆ ಅದನ್ನು ಒಕ್ಕೂಟ ತುಂಬಿಕೊಡಬೇಕು. ಇದನ್ನು ಒಕ್ಕೂಟ ಪಾಲಿಸುತ್ತಿಲ್ಲ. ಜಿಎಸ್‌ಟಿ ವರ್ಗಾವಣೆಯಲ್ಲಿ ರಾಜ್ಯವು 2023-24ರಲ್ಲಿ ಕಳೆದುಕೊಳ್ಳುತ್ತಿರುವ ಮೊತ್ತ ರೂ.26954 ಕೋಟಿ. ಇದೇ ರೀತಿಯಲ್ಲಿ 2022-23ರಲ್ಲಿ ಒಕ್ಕೂಟವು ಸೆಸ್ ಮತ್ತು ಸರ್‌ಚಾರ್ಜ್ ಮೂಲಕ ಸಂಗ್ರಹಿಸಿಕೊಂಡದ್ದು ರೂ.520570 ಕೋಟಿ. ಇದನ್ನು ರಾಜ್ಯಗಳ ಜೊತೆಯಲ್ಲಿ ಹಂಚಿಕೊಳ್ಳುತ್ತಿಲ್ಲ. ಇದರಲ್ಲಿ ರಾಜ್ಯಕ್ಕಾದ ನಷ್ಟ ರೂ.7780 ಕೋಟಿ.

ಇದನ್ನೂ ಓದಿ: ಕಾನೂನಿನ ಕೈಗಳಿಗೆ ಇನ್ನಷ್ಟು ಬಲ ನೀಡಲಾಗುವುದು – ಮುಖ್ಯಮಂತ್ರಿ ಸಿದ್ದರಾಮಯ್ಯ

ಇವೆಲ್ಲಕ್ಕೂ ಮುಕುಟವಿಟ್ಟಂತೆ ಹಣಕಾಸು ಆಯೋಗಗಳ ಶಿಫಾರಸ್ಸಿನಂತೆ ಒಕ್ಕೂಟವು ತನ್ನ ವಾರ್ಷಿಕ ತೆರಿಗೆ ರಾಶಿಯಲ್ಲಿ ಶೇ.41ರಷ್ಟನ್ನು ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು. ಆದರೆ ಅದು ಮಾಡುತ್ತಿಲ್ಲ. ಒಕ್ಕೂಟ 2023-24ನೆಯ ಸಾಲಿನ ಒಟ್ಟು ತೆರಿಗೆ ರಾಶಿ ರೂ.33.61 ಲಕ್ಷ ಕೋಟಿ. ಇದರಲ್ಲಿ ಶೇ.41 ಅಂದರೆ ರೂ.13.78 ಲಕ್ಷ ಕೋಟಿ. ಆದರೆ ಅದು ವರ್ಗಾಯಿಸುತ್ತಿರುವುದು ರೂ.10.21 ಲಕ್ಷ ಕೋಟಿ. ಇಲ್ಲಿ ರಾಜ್ಯಗಳಿಗೆ ನಷ್ಟ ರೂ.3.56 ಲಕ್ಷ ಕೋಟಿ.

ಗ್ಯಾರಂಟಿಗಳಿಗೆ ಒಕ್ಕೂಟದ ಒರಟು ಶತ್ರುತ್ವ ಧೋರಣೆ

ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳು ಮಾನವ ಅಭಿವೃದ್ಧಿಯ ಸಾಧನಗಳಾಗಿವೆ ಎಂಬುದು ಅನೇಕ ಅಧ್ಯಯನ ಮತ್ತು ಅನುಭವಗಳಿಂದ ತಿಳಿದು ಬಂದಿದೆ. ಇವುಗಳನ್ನು ಬಿಟ್ಟಿ, ಪುಗಸಟ್ಟೆ, ಫ್ರೀ, ಉಚಿತ ಮುಂತಾದ ರೀತಿಯಲ್ಲಿ ಅಣಕವಾಡುವವರು ಉಳ್ಳವರು ಮತ್ತು ಮೇಲು ಜಾತಿಗೆ ಸೇರಿದವರು ಮತ್ತು ಮೇಲು ಜಾತಿಗಳನ್ನು ಅನುಕರಣೆ ಮಾಡಲು ಪ್ರಯತ್ನಿಸುತ್ತಿರುವ ಕೆಲವು ಶೂದ್ರ-ದಲಿತ ವ್ಯಕ್ತಿಗಳು. ಕೆಲವು ಮುಗ್ಧ ಬಡವರು ಕೂಡ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡುತ್ತಲಿದ್ದಾರೆ. ಇದೊಂದು ಮಾನಸಿಕ ರೋಗ. ಮನೋವಿಜ್ಞಾನ ನೆಲೆಯಿಂದ ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಗ್ಯಾರಂಟಿಗಳ ಆರ್ಥಿಕ ಅಭಿವೃದ್ಧಿಯ ಪಾತ್ರವನ್ನು ಕೆಳಗಿನೊಂದು ಮ್ಯಾರ್ಟಿಕ್ಸ್ ಮೂಲಕ ತೋರಿಸಬಹುದು

ಗ್ಯಾರಂಟಿಗಳ ಮೇಲಿನ ವೆಚ್ಚ -> ಆರ್ಥಿಕತೆಯಲ್ಲಿ ಸಮಗ್ರ ಬೇಡಿಕೆಯಲ್ಲಿ ಏರಿಕೆ -> ಮಾರುಕಟ್ಟೆಯಲ್ಲಿ ಹೆಚ್ಚಿನ ಸರಕು-ಸೇವೆಗಳ ಮಾರಾಟ-ಖರೀದಿ -> ಉತ್ಪಾದನೆ ಹೆಚ್ಚಿಸಲು ಬಂಡವಾಳ ಹೂಡಿಕೆ-> ಉದ್ಯೋಗದಲ್ಲಿ ಏರಿಕೆ -> ಜಿಎಸ್‌ಡಿಪಿಯ ತೀವ್ರ ಬೆಳವಣಿಗೆ.

ಗ್ಯಾರಂಟಿಗಳ ಮೂಲದಲ್ಲಿನ ಈ ಆರ್ಥಿಕ ಸಿದ್ಧಾಂತವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕಳೆದ 6-8 ವರ್ಷಗಳಿಂದ ಭಾರತದ ನಿರುದ್ಯೋಗಕ್ಕೆ, ಬಡತನಕ್ಕೆ, ಹಸಿವಿಗೆ, ಅಪೌಷ್ಟಿಕತೆಗೆ, ಆರ್ಥಿಕತೆಯ ಮಂದ ಬೆಳವಣಿಗೆಗೆ ಅಮರ್ತ್ಯ ಸೆನ್, ಜೀನ್ ಡ್ರೀಜ್, ಸಿ. ರಂಗರಾಜನ್, ಅರವಿಂದ ಸುಬ್ರಮಣಿಯನ್, ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡುಫ್ಲೋ ಮುಂತಾದವರು ನೀಡುತ್ತಿದ್ದ ಸಲಹೆಯೆಂದರೆ ಸಮಗ್ರ ಬೇಡಿಕೆಯನ್ನು ಬಲಪಡಿಸಬೇಕು ಮತ್ತು ಜನರ ಕೈಯಲ್ಲಿ ಹೆಚ್ಚುಹೆಚ್ಚು ವರಮಾನ ದೊರೆಯುವಂತೆ ಮಾಡಬೇಕು ಎಂಬುದಾಗಿತ್ತು. ಗ್ಯಾರಂಟಿಗಳನ್ನು ಇಂತಹ ಸೈದ್ಧಾಂತಿಕ ಅರಿವಿನಿಂದ ರಾಜ್ಯದ ಕಾಂಗ್ರೆಸ್ ರೂಪಿಸಿರಲಿಕ್ಕಿಲ್ಲ. ಆದರೆ ಅದರ ಮೂಲದಲ್ಲಿ ಈ ಆರ್ಥಿಕ ಅಭಿವೃದ್ಧಿ ಪ್ರಣಾಳಿಕೆಯಿದೆ ಎಂಬುದನ್ನು ನಾವು ಗುರುತಿಸುವ ಅಗತ್ಯವಿದೆ.

ರಾಜ್ಯಕ್ಕೆ ಸಂಪನ್ಮೂಲ ವರ್ಗಾವಣೆಯಲ್ಲಿ ಒಕ್ಕೂಟ ಸರ್ಕಾರವು ವಿಶೇಷವಾಗಿ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯದ ಹಿನ್ನೆಲೆಯಲ್ಲಿ ಮತ್ತು ಗ್ಯಾರಂಟಿಗಳ ಮೂಲದಲ್ಲಿನ ಆರ್ಥಿಕ ಅಭಿವೃದ್ಧಿ ಪ್ರಣಾಳಿಕೆ ಚೌಕಟ್ಟಿನಲ್ಲಿ ರಾಜ್ಯದ ಬಜೆಟ್ ಮತ್ತು ಹಣಕಾಸು ಸ್ಥಿತಿಗತಿಯನ್ನು ಚರ್ಚಿಸಬೇಕಾಗಿದೆ.

ರಾಜ್ಯದ ಹಣಕಾಸು ಸ್ಥಿತಿಯ ಒಂದು ಚಿತ್ರ

ರಾಜ್ಯದ ಹಣಕಾಸು ಸ್ಥಿತಿಯು ಅಭದ್ರವಾಗಿಲ್ಲದಿದ್ದರೂ ಅನೇಕ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಇದಕ್ಕೆ ಒಂದು ಉದಾಹರಣೆಯೆಂದರೆ ವಿದ್ಯುತ್ ಕ್ಷೇತ್ರ (ಮುಂದೆ ಇದರ ವಿವರ ನೀಡಲಾಗಿದೆ). ರಾಜ್ಯದ 2023-24ರ ಒಟ್ಟು ತೆರಿಗೆ ರಾಜಸ್ವ ರೂ. 225910 ಕೋಟಿ. ಇದರಲ್ಲಿ ಸಂಬಳ, ಪಿಂಚಣಿ, ಬಡ್ಡಿ ಪಾವತಿ, ಆಡಳಿತ ವೆಚ್ಚ ರೂ.134875 ಕೋಟಿ. ಇದಲ್ಲದೆ ಸಬ್ಸಿಡಿ, ಸಾಮಾಜಿಕ ಭದ್ರತೆ ಪಿಂಚಣಿ, ವೇತನೇತರ ಅನುದಾನ ಮತ್ತು ಸ್ಥಳೀಯ ಸರ್ಕಾರಗಳಿಗೆ ಹಣಕಾಸು ವರ್ಗಾವಣೆ ವೆಚ್ಚ ರೂ.71570 ಕೊಟಿ. ಒಟ್ಟು ರೆವಿನ್ಯೂ ವೆಚ್ಚ ರೂ. 206445 ಕೋಟಿ. ರಾಜಸ್ವದಲ್ಲಿ ಉಳಿಯುವುದು ರೂ. 19465 ಕೋಟಿ.

ಇನ್ನು ಬಂಡವಾಳ ವೆಚ್ಚಕ್ಕೆ ಸಾಲವನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಈ ಸಾಲ ಗ್ಯಾರಂಟಿಗಳಿಂದಾಗಿ ಉಂಟಾಗಿದೆ ಎಂದು ಭಾವಿಸಿದರೆ ಅದು ತಪ್ಪು. ರಾಜ್ಯವು 2022-23ರ ಬಜೆಟ್ಟಿನಲ್ಲಿ ’ಗ್ಯಾರಂಟಿಗಳಿಲ್ಲದೆ’ ಎತ್ತಿದ್ದ ಸಾಲ ರೂ. 72000 ಕೋಟಿ. ಇದು ಆ ವರ್ಷದ ಜಿಎಸ್‌ಡಿಪಿಯ ಶೇ.3.81ರಷ್ಟಾಗುತ್ತದೆ. ಈಗ ಸಿದ್ದರಾಮಯ್ಯನವರು 2023-24ರಲ್ಲಿ ಎತ್ತುತ್ತಿರುವ ’ಗ್ಯಾರಂಟಿ ಸೇರಿ’ ಸಾಲ ರೂ.85818 ಕೋಟಿ. ಇದು ಸದರಿ ವರ್ಷದ ಜಿಎಸ್‌ಡಿಪಿಯ ಶೇ.3.67ರಷ್ಟಾಗುತ್ತದೆ. ವರ್ಷದಿಂದ ವರ್ಷಕ್ಕೆ ಸಹಜವಾಗಿ ಏರಿಕೆಯಾಗುವ ಕ್ರಮ ಇದಾಗಿದೆ. ಇದರಲ್ಲಿ ಆರ್ಥಿಕತೆಯನ್ನು ಮುಳುಗಿಸುವ-ದಿವಾಳಿಯೆಬ್ಬಿಸುವ ಆತಂಕಕ್ಕೆ ಯಾವ ಆಧಾರವೂ ಇಲ್ಲ. ಕರ್ನಾಟಕ ಆರ್ಥಿಕತೆಗೆ ಅಪಾಯ-ಆತಂಕಕಾರಿ ಸ್ಥಿತಿ ಎದುರಾದರೆ ಅದು ಒಕ್ಕೂಟ ಮಾಡುವ ಶಾಸನಬದ್ಧ-ಸಂವಿಧಾನಬದ್ಧ ಹಣಕಾಸು ವರ್ಗಾವಣೆಯಲ್ಲಿ ಆಗುತ್ತಿರುವ ಅನ್ಯಾಯದಿಂದಲೇ ವಿನಾ ರಾಜ್ಯ ಸರ್ಕಾರದ ಆರ್ಥಿಕ ನೀತಿಗಳಿಂದ ಅಥವಾ ಗ್ಯಾರಂಟಿಗಳಿಂದಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ವಿದ್ಯುತ್ ಕ್ಷೇತ್ರದಲ್ಲಿನ ಹಣಕಾಸು ದುಸ್ಥಿತಿ

ನಮ್ಮ ಆರ್ಥಿಕತೆಯ ಒಂದು ಪ್ರಮುಖ ವಲಯವೆಂದರೆ ವಿದ್ಯುತ್ ವಲಯ. ಈ ವಲಯವು ಎಸ್ಕಾಮ್‌ಗಳ ನಿರ್ವಹಣೆ, ವಿದ್ಯುತ್ ಖರೀದಿ, ಗ್ರಾಹಕರಿಂದ ಶುಲ್ಕ ವಸೂಲಿ, ಡಿಸ್ಟ್ರಿಬ್ಯೂಷನ್ ಮತ್ತು ಟ್ರಾನ್ಸ್‌ಮಿಷನ್ ಲಾಸ್ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತರಿದೆ. ಪ್ರಸ್ತುತ ವಿದ್ಯುತ್ ಖರೀದಿ ಬಾಕಿ ರೂ.16323 ಕೋಟಿಯಿದೆ. ಎಸ್ಕಾಮುಗಳು ಪಾವತಿಸಬೇಕಾದ ಸಾಲ ರೂ.30554 ಕೋಟಿಯಿದೆ. ಇವುಗಳಲ್ಲಿನ ನಷ್ಟ ರೂ.14413 ಕೋಟಿ. ಈಗ ಗೃಹಲಕ್ಷ್ಮಿಯನ್ನು ಗ್ಯಾರಂಟಿಗಳ ಭಾಗವಾಗಿ ಘೋಷಿಸುವಾಗ ಕಾಂಗ್ರೆಸ್ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗಿತ್ತು. ಗೃಹಜ್ಯೋತಿಯಲ್ಲಿ 200 ಯುನಿಟ್‌ಗಳಿಗೆ ಬದಲಾಗಿ 100 ಯುನಿಟ್‌ಗಳಿಗೆ ಉಚಿತ ವಿದ್ಯುತ್ ನೀಡಬಹುದಾಗಿತ್ತು ಅಥವಾ ಬಿಪಿಎಲ್ ಕುಟುಂಬಗಳಿಗೆ ಮತ್ತು ಕೃಷಿ ಪಂಪ್‌ಸೆಟ್ಟುಗಳಿಗೆ ಮಾತ್ರ ಇದನ್ನು ನೀಡಬಹುದಾಗಿತ್ತು. ಒಟ್ಟು ವಿದ್ಯುತ್ ಬಳಕೆಯಲ್ಲಿ ಕೌಟುಂಬಿಕ ವಿದ್ಯುತ್ ಬಳಕೆಯ ಪ್ರಮಾಣ ಶೇ.23ರಷ್ಟಿದೆ. ರಾಜ್ಯದಲ್ಲಿನ ಒಟ್ಟು ವಿದ್ಯುತ್ ಬಳಕೆಯಲ್ಲಿ ಕೃಷಿಯ ಪಾಲು ಶೇ.40. ರಾಜ್ಯದಲ್ಲಿ 2022ರಲ್ಲಿ 25 ಲಕ್ಷ ಕೃಷಿ ಪಂಪ್‌ಸೆಟ್ಟುಗಳಿವೆ ಎನ್ನಲಾಗಿದೆ. ಇವು ವಾರ್ಷಿಕ 28000 ದಶಲಕ್ಷ ಯುನಿಟ್ ವಿದ್ಯುತ್ ಬಳಸುತ್ತವೆ. ಇಲ್ಲಿ ವಿದ್ಯುತ್ ಬಳಕೆಯ ಕಾರ್ಯಕ್ಷಮತೆಯು ಅತ್ಯಂತ ಕೆಳಮಟ್ಟದಲ್ಲಿದೆ.

ಈ ಎಲ್ಲ ಅಂಶಗಳನ್ನು ಗೃಹಜ್ಯೋತಿ ಗ್ಯಾರಂಟಿಯಲ್ಲಿ ಸರ್ಕಾರ ಎಚ್ಚರಿಕೆ ವಹಿಸಬೇಕಾಗಿತ್ತು.

ಒಕ್ಕೂಟ ತತ್ವ ಮತ್ತು ಕರ್ನಾಟಕ ಹಣಕಾಸು ನಿರ್ವಹಣೆ ಹಾಗೂ ಅಭಿವೃದ್ಧಿ

ಈಗಾಗಲೆ ಅಂಕಿಅಂಶಗಳ ಮೂಲಕ ತೋರಿಸಿರುವಂತೆ ಕರ್ನಾಟಕಕ್ಕೆ ಒಕ್ಕೂಟ ಸರ್ಕಾರವು ಅನ್ಯಾಯ ಮಾಡುತ್ತಿದೆ. ಸಂವಿಧಾನಾತ್ಮಕ ನಿಯಮದ ಪ್ರಕಾರ ದೇಶದ ಅಭಿವೃದ್ಧಿ, ಅಲ್ಲಿನ ಬಡತನ ನಿವಾರಣೆ, ಉದ್ಯೋಗ ಸೃಷ್ಟಿಸುವುದು, ಬೆಲೆ ಏರಿಕೆಯನ್ನು ತಡೆಯುವುದು ಮುಂತಾದವು ರಾಜ್ಯದ ಜವಾಬ್ದಾರಿ ಹೇಗೋ ಅದೇ ರೀತಿಯಲ್ಲಿ ಒಕ್ಕೂಟದ ಹೊಣೆಗಾರಿಕೆಯಾಗಿದೆ. ಈ ಬಗ್ಗೆ ಒಕ್ಕೂಟ ಸರ್ಕಾರವು ರಾಜ್ಯ ಸರ್ಕಾರಗಳ ನೆರವಿಗೆ ನಿಲ್ಲಬೇಕು. ಆದರೆ ಇಂದು ಒಕ್ಕೂಟ ಸರ್ಕಾರವು ರಾಜ್ಯಗಳ ಅಭಿವೃದ್ಧಿಗೆ ನೆರವಾಗುವುದಕ್ಕೆ ಬದಲಾಗಿ ಎಲ್ಲ ಅಧಿಕಾರಗಳನ್ನು ತನ್ನಲ್ಲಿ ಕೇಂದ್ರೀಕರಿಸಿಕೊಳ್ಳುವಲ್ಲಿ ನಿರತವಾಗಿದೆ. ಕರ್ನಾಟಕವನ್ನು (ಕೇರಳ, ತಮಿಳುನಾಡು ರಾಜ್ಯಗಳನ್ನೂ ಕೂಡ) ಒಕ್ಕೂಟವು ಶತ್ರುವಿನಂತೆ ಕಾಣುತ್ತಿದೆ. ಹಣಕಾಸು ಸಂಪನ್ಮೂಲವನ್ನು ರಾಜ್ಯಗಳಿಗೆ ವರ್ಗಾವಣೆ ಮಾಡುವಲ್ಲಿ ಒಕ್ಕೂಟವು ಸಂವಿಧಾನಾತ್ಮಕ ಒಕ್ಕೂಟ ಧರ್ಮವನ್ನು ಪಾಲಿಸುತ್ತಿಲ್ಲ. ದೇಶದ 2020-21ರ ಜಿಡಿಪಿಯಲ್ಲಿ ಕರ್ನಾಟಕದ ಜಿಎಸ್‌ಡಿಪಿಯು ಪಾಲು ಶೇ.9.16. ರಾಜ್ಯಗಳ ಅಭಿವೃದ್ಧಿ ಕುಂಟಿತಗೊಂಡರೆ ಜಿಡಿಪಿಯ ಬೆಳವಣಿಗೆಯು ಕುಂಟಿತಗೊಳ್ಳುತ್ತದೆ. ಇಂದು ಕರ್ನಾಟಕದ ಆರ್ಥಿಕತೆಯು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇದಕ್ಕೆ ಕಾರಣ ರಾಜ್ಯದ ಹಣಕಾಸು ನಿರ್ವಹಣೆ ಅಥವಾ ಅಭಿವೃದ್ಧಿ ನಿರ್ವಹಣೆಯಲ್ಲಿನ ವೈಫಲ್ಯವಲ್ಲ. ಇದರ ಮೂಲದಲ್ಲಿ 2013-14ರಿಂದ ಒಕ್ಕೂಟವು ಅನುಸರಿಸುತ್ತಿರುವ ಸಂವಿಧಾನ ವಿರೋಧಿ ಹಣಕಾಸು ವರ್ಗಾವಣೆ ಕ್ರಮಗಳು ಕಾರಣವಾಗಿದೆ. ಈಗ ಸಿದ್ದರಾಮಯ್ಯ ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ಗ್ಯಾರಂಟಿಗಳು ರಾಜ್ಯದ ಕೂಲಿಕಾರರ, ರೈತರ, ಮಹಿಳೆಯರ, ದಲಿತರ, ಸಣ್ಣ-ಪುಟ್ಟ ವ್ಯಾಪಾರಿಗಳ, ಅಲ್ಪಸಂಖ್ಯಾತರ ಬದುಕನ್ನು ಸ್ವಲ್ಪ ಮಟ್ಟಿಗಾದರೂ ಸಮೃದ್ಧಗೊಳಿಸುತ್ತವೆ. ಆ ಮೂಲಕ ಆರ್ಥಿಕತೆಯ ಸ್ಥಿತಿಯನ್ನು ಉತ್ತಮಪಡಿಸುತ್ತವೆ.

ಕೊನೆಯದಾಗಿ ಕರ್ನಾಟಕದ ಬಹುದೊಡ್ಡ ಸಮಸ್ಯೆಯೆಂದರೆ ಅಡಳಿತ-ನಿರ್ವಹಣೆ ವ್ಯವಸ್ಥೆಗಳಲ್ಲಿನ ವೈಫಲ್ಯ. ಗ್ಯಾರಂಟಿಗಳು ಆಡಳಿತದಲ್ಲಿ ಕಾರ್ಯಕ್ಷಮತೆಯನ್ನು ಬಯಸುತ್ತವೆ. ಗ್ಯಾರಂಟಿಗಳ ನಿರ್ವಹಣೆಯಲ್ಲಿ ಹಳಿತಪ್ಪಿದರೆ ಹಣಕಾಸು ಸಮಸ್ಯೆಗಳು ಆರ್ಥಿಕ ಅಭಿವೃದ್ಧಿಗೆ ಕಂಟಕವಾಗುವ ಸಾಧ್ಯತೆಯಿದೆ. ಈಗ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ಟಿನ ದೊಡ್ಡ ಕೊರತೆಯೆಂದರೆ ಪ್ರಾದೇಶಿಕ ಅಸಮಾನತೆಯ ಬಗೆಗಿನ ನಿರ್ಲಕ್ಷ್ಯ. ಇದು ಎಷ್ಟು ದೊಡ್ಡ ಸಮಸ್ಯೆಯಾಗಿದೆಯೆಂದರೆ ನೀತಿ ಆಯೋಗ ಪ್ರಕಟಿಸಿರುವ ಬಹುಮುಖಿ ಬಡತನ (ಮಲ್ಟಿಡೈಮೆಂಷನಲ್ ಪಾವರ್ಟಿ) ವರದಿ ಪ್ರಕಾರ ಯಾದಗಿರಿ ಗ್ರಾಮೀಣ ಜನಸಂಖ್ಯೆಯಲ್ಲಿ ಬಹುಮುಖಿ ಬಡವರ ಪ್ರಮಾಣ ಶೇ.48.37, ರಾಯಚೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ಬಹುಮುಖಿ ಬಡವರ ಪ್ರಮಾಣ ಶೇ.40.50. ಈ ಜಿಲ್ಲೆಗಳಲ್ಲಿನ ಮಹಿಳೆ ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ಅನುಕ್ರಮವಾಗಿ ಶೇ.57.3 ಮತ್ತು ಶೇ.76. ಇವುಗಳ ಬಗ್ಗೆ ಸರ್ಕಾರಗಳಲ್ಲಿ ದಿವ್ಯ ನಿರ್ಲಕ್ಷ್ಯವಿದೆ. ನಿರುದ್ಯೋಗ ಸಮಸ್ಯೆಯೂ ಗಂಭೀರವಾಗಿದೆ. ಗ್ಯಾರಂಟಿಗಳು ಇವುಗಳನ್ನು ಶಮನ ಮಾಡಬಹುದೇ ವಿನಾ ದಮನ ಮಾಡಲಾರವು. ಇದರ ಜೊತೆಗೆ ಪ.ಜಾ. ಮತ್ತು ಪ.ಪಂ. ಉಪಯೋಜನೆಗಳಿಗೆ ರೂ.34000 ಕೋಟಿ ಅನುದಾನ ಪ್ರಕಟಿಸಲಾಗಿದೆ. ಆದರೆ ಇವುಗಳ ಮೌಲ್ಯಮಾಪನವು ದೊಡ್ಡ ಪ್ರಮಾಣದಲ್ಲಿ ನಡೆಯಬೇಕು. ಇವುಗಳಿಂದ ದಲಿತರ-ಆದಿವಾಸಿಗಳ ಬದುಕು ಎಷ್ಟರಮಟ್ಟಿಗೆ ಉತ್ತಮಗೊಂಡಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಈ ಎಲ್ಲ ಸಂಗತಿಗಳ ಬಗ್ಗೆ ಮುಂದಿನ ಬಜೆಟ್ಟಿನಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಗಮನ ನೀಡುತ್ತದೆ ಎಂಬ ಭರವಸೆ ನಮ್ಮದಾಗಿದೆ.

ಡಾ. ಟಿ. ಆರ್. ಚಂದ್ರಶೇಖರ್

ಟಿ. ಆರ್. ಚಂದ್ರಶೇಖರ್
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...