ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕುಸ್ತಿ ಫೆಡರೆಷನ್‌ನ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಅವರ ಸಹಾಯಕ ಕಾರ್ಯದರ್ಶಿ ವಿನೋದ್ ಥೋಮರ್‌ರವರಿಗೆ ದೆಹಲಿಯ ರೋಸ್ ಅವಿನ್ಯೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಈ ಹಿಂದೆ ನ್ಯಾಯಾಲಯವು ಆರೋಪಿಗೆ ಎರಡು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಇಂದು 25,000 ರೂ ಗಳ ಶ್ಯೂರಿಟಿಯೊಂದಿಗೆ ಷರತ್ತುಬದ್ಧ ಜಾಮೀನು ನೀಡಿದ್ದು, ಮುಂದಿನ ವಿಚಾರಣೆಯನ್ನು ಜುಲೈ 28ಕ್ಕೆ ಮೂಂದೂಡಿದೆ.
ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶವನ್ನು ತೊರೆಯಲು ಅವಕಾಶವಿಲ್ಲ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದಿಲ್ಲ ಅಥವಾ ಸಾಕ್ಷ್ಯವನ್ನು ಹಾಳುಮಾಡುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯವು ವಿಧಿಸಿದೆ.
ದೆಹಲಿ ಪೊಲೀಸರು ನಾವು ಜಾಮೀನು ನೀಡಬಾರದೆಂದು ವಿರೋಧಿಸುವುದಿಲ್ಲ ಜೊತೆಗೆ ಆರೋಪಿ ಕಸ್ಟಡಿಗೆ ಬೇಕೆಂದು ಕೇಳುವುದಿಲ್ಲ. ಜಾಮೀನು ನೀಡುವ ವಿಚಾರ ನ್ಯಾಯಾಲಯದ ವಿವೇಚನೆಗೆ ಬಿಟ್ಟಿದೆ ಎಂದಿದ್ದರು. ಹಾಗಾಗಿ ಬ್ರಿಜ್ ಭೂಷಣ್‌ರವರಗೆ ಜಾಮೀನು ದೊರೆತಿದೆ.
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ನಿರ್ಗಮಿತ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮತ್ತು ಅವರಿಗೆ ಶಿಕ್ಷೆ ನೀಡಲು ಅರ್ಹರಾಗಿದ್ದಾರೆ ಎಂದು ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಪೊಲೀಸರು ಸೆಕ್ಷನ್ 506 (ಅಪರಾಧ ಬೆದರಿಕೆ), 354 (ಮಹಿಳೆಯರ ಅತಿರೇಕದ ನಮ್ರತೆ); 354 ಎ (ಲೈಂಗಿಕ ಕಿರುಕುಳ); ಮತ್ತು ಚಾರ್ಜ್‌ಶೀಟ್‌ನಲ್ಲಿ 354 ಡಿ (ಹಿಂಬಾಲಿಸುವಿಕೆ) ಮತ್ತು ಒಂದು ಪ್ರಕರಣದಲ್ಲಿ ಸಿಂಗ್‌ನ ಕಿರುಕುಳವು “ಪುನರಾವರ್ತನೆಯಾಗಿದೆ ಮತ್ತು ಮುಂದುವರೆಯುತ್ತಿದೆ” ಎಂದು ಆರೋಪ ಮಾಡಲಾಗಿದೆ.
ಆರೋಪಪಟ್ಟಿಯ ಪ್ರಕಾರ, ಪೊಲೀಸರು 108 ಸಾಕ್ಷಿಗಳೊಂದಿಗೆ ಮಾತನಾಡಿದ್ದು, ಅವರಲ್ಲಿ ಕುಸ್ತಿಪಟುಗಳು, ಕೋಚ್‌ಗಳು ಮತ್ತು ರೆಫರಿಗಳು ಸೇರಿದಂತೆ 15 ಮಂದಿ ಕುಸ್ತಿಪಟುಗಳು ಮಾಡಿದ ಆರೋಪಗಳನ್ನು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಮಹಿಳಾ ಪತ್ರಕರ್ತೆ ಜೊತೆ ಅನುಚಿತವಾಗಿ ವರ್ತಿಸಿ, ಮೈಕ್ ಕಿತ್ತೆಸೆದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್


