ಕಳೆದ ನಾಲ್ಕು ತಿಂಗಳಿನಿಂದ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಸಂಸತ್ತಿನಲ್ಲಿ ನಗುವುದು ಹಾಸ್ಯ ಚಟಾಕಿ ಹಾರಿಸುವುದು ಪ್ರಧಾನಿ ಹುದ್ದೆಯ ಘನತೆಗೆ ತಕ್ಕುದಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ವಾಗ್ದಾಳಿ ನಡೆಸಿದರು.
ಮಣಿಪುರ ವಿಚಾರವಾಗಿ ಎಐಸಿಸಿ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ”ಮಣಿಪುರ ಭಸ್ಮವಾಗುವುದನ್ನು ಪ್ರಧಾನಿ ಬಯಸಿದ್ದಾರೆ ಮತ್ತು ಅದಕ್ಕೆ ಅವರು ಅವಕಾಶ ನೀಡಿದ್ದಾರೆ. ನಿಜಕ್ಕೂ ಅಲ್ಲಿ ಹಿಂಸಾಚಾರ ತಡೆಯಲು ಬಯಸಿದಲ್ಲಿ ಅದಕ್ಕೆ ಬೇಕಾದ ಎಲ್ಲ ಅಸ್ತ್ರಗಳೂ ಕೇಂದ್ರ ಸರ್ಕಾರದ ಬಳಿ ಇವೆ. ಭಾರತ ಸೇನೆಯನ್ನು ಬಳಸಿಕೊಂಡು ಎರಡೇ ದಿನಗಳಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಎಲ್ಲ ಅತಿರೇಕಗಳಿಗೆ ಅಂತ್ಯ ಹಾಡಬಹುದು” ಎಂದಿದ್ದಾರೆ.
ಇದನ್ನೂ ಓದಿ: ಅವಿಶ್ವಾಸ ನಿರ್ಣಯದ ವೇಳೆ ಬೆತ್ತಲಾದ ಕುಂಭಕರ್ಣ: ಮೋದಿ ವಿರುದ್ಧ ಮತ್ತೆ ಗುಡುಗಿದ ನಟ ಕಿಶೋರ್
”ಮಹಿಳೆಯರು, ಮಕ್ಕಳು ನಿತ್ಯ ಸಾಯುತ್ತಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿವೆ. ಅದರೂ ಸಂಸತ್ತಿನ ಮಧ್ಯದಲ್ಲಿ ಕುಳಿತು ಪ್ರಧಾನಿ ನಗುತ್ತಾರೆ, ಹಾಸ್ತ ಚಟಾಕಿ ಹಾರಿಸುತ್ತಾರೆ. ಇದು ರಾಹುಲ್ ಗಾಂಧಿ, ಕಾಂಗ್ರೆಸ್ ಅಥವಾ ವಿರೋಧ ಪಕ್ಷಗಳ ಕುರಿತ ವಿಚಾರ ಅಲ್ಲ, ಭಾರತದ ಕುರಿತ ವಿಚಾರ. ಬಿಜೆಪಿಯ ಒಡೆದು ಆಳುವ ಮತ್ತು ಸುಡುವ ರಾಜಕಾರಣದಿಂದಾಗಿ ಮಣಿಪುರ ರಾಜ್ಯವನ್ನು ಅಸ್ತಿತ್ವವೇ ಇಲ್ಲದಂತೆ ಸರ್ವನಾಶ ಮಾಡುತ್ತಿದೆ” ಎಂದು ಕಿಡಿಕಾರಿದರು.
”ಅವಿಶ್ವಾಸದ ನಿರ್ಣಯ ಮೇಲೆ ಎರಡು ತಾಸು ಮಾತನಾಡಿದ ಪ್ರಧಾನಿ ಮೋದಿ ನಕ್ಕಿದ್ದು, ಹಾಸ್ಯ ಚಟಾಕಿ ಹಾರಿಸಿದ್ದು, ಘೋಷಣೆ ಕೂಗಿದ್ದು ನೋಡಿದೆ ಮಣಿಪುರ ಕಳೆದ ನಾಲ್ಕು ತಿಂಗಳಿನಿಂದ ಹೊತ್ತಿ ಉರಿಯುತ್ತಿದೆ ಎಂಬುದನ್ನು ಅವರು ಮರೆತಂತಿದೆ. ಮಣಿಪುರದಲ್ಲಿ ಹಿಂಸಾಚಾರ ತಾಂಡವವಾಡುತ್ತಿರುವಾಗ ಎರಡು ತಾಸು ಹಾಸ್ಯ ಮಾಡುವುದು ಪುಧಾನಿ ಹುದ್ದೆಗೆ ತಕ್ಕುದಲ್ಲ” ಎಂದು ಚಾಟಿ ಬೀಸಿದರು.
”ಮಣಿಪುರದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಹಬಾಳ್ವೆಯ ಭಾರತ ಪರಿಕಲ್ಪನೆಯನ್ನು ಬಿಜೆಪಿ ಕಗೊಲೆ ಮಾಡಿದೆ. ಇದೇ ಕಾರಣಕ್ಕೆ ಲೋಕಸಭೆಯಲ್ಲಿ ಭಾರತ ಮಾತೆಯ ಹತ್ಯೆಗೈಯಲಾಗಿದೆ ಎಂದು ಹೇಳಿದ್ದು, ಇದರಲ್ಲಿ ತಪ್ಪೇನಿದೆ?” ಎಂದು ರಾಹುಲ್ ಪ್ರಶ್ನೆ ಮಾಡಿದರು.


