G20 ಶೃಂಗಸಭೆಯನ್ನು ಭಾರತವು ಅಂತರಾಷ್ಟ್ರೀಯ ಪ್ರಭಾವವನ್ನು ಹೆಚ್ಚಿಸಲು ಒಂದು ಅವಕಾಶವಾಗಿ ಬಳಸಬೇಕು ಎಂದು ಚೀನಾ ಹೇಳಿದೆ. ಇಂಡಿಯಾ-ಭಾರತ್ ಮರು ನಾಮಕರಣ ಚರ್ಚೆ ಮಧ್ಯೆ ನಡೆಯುತ್ತಿರುವ G20 ಶೃಂಗಸಭೆ ಬಗ್ಗೆ ಈ ರೀತಿ ಚೀನಾ ಪ್ರತಿಕ್ರಿಯಿಸಿದೆ.
ಚೀನಾ, ತನ್ನ ಮುಖವಾಣಿ ಗ್ಲೋಬಲ್ ಟೈಮ್ಸ್ ಮೂಲಕ, ಹೆಸರು ಬದಲಾವಣೆಗಿಂತ ಭಾರತವು ತನ್ನ ಆರ್ಥಿಕ ವ್ಯವಸ್ಥೆಯನ್ನು ಸಮಗ್ರವಾಗಿ ಸುಧಾರಿಸಬಹುದೇ ಎಂಬುವುದು ಮುಖ್ಯವಾದುದು ಎಂದು ಚೀನಾ ಹೇಳಿದೆ.
ಕ್ರಾಂತಿಕಾರಿ ಸುಧಾರಣೆ ಇಲ್ಲದೆ ಭಾರತ ಕ್ರಾಂತಿಕಾರಿಯಾಗಿ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಭಾರತವು ಹೆಚ್ಚುತ್ತಿರುವ ಜಾಗತಿಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬಹುದು ಮತ್ತು ಇದನ್ನು ಬೆಳವಣಿಗೆಗೆ ಪ್ರೇರಕ ಶಕ್ತಿಯಾಗಿ ಪರಿವರ್ತಿಸಬಹುದು ಎಂದು ಚೀನಾ ಹೇಳಿದೆ.
ಜಿ20 ಶೃಂಗಸಭೆಯ ಔತಣಕೂಟಕ್ಕೆ ಸಂಬಂಧಿಸಿ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲಿಗೆ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಬರೆಯಲಾಗಿತ್ತು. ಇದು ದೇಶದ ಹೆಸರು ಬದಲಾವಣೆ ಮಾಡಲಾಗುತ್ತದೆ ಎಂಬ ಚರ್ಚೆಯನ್ನು ದೇಶದಲ್ಲಿ ಹುಟ್ಟು ಹಾಕಿತ್ತು.
ಇದರ ಬೆನ್ನಲ್ಲೇ ಮುಂಬರುವ G20 ಶೃಂಗಸಭೆಯ ಮೇಲೆ ಜಗತ್ತಿನ ಗಮನ ಕೇಂದ್ರೀಕೃತವಾಗಿರುವ ಸಮಯದಲ್ಲಿ ದೆಹಲಿಯು ಜಗತ್ತಿಗೆ ಏನನ್ನು ಹೇಳಲು ಬಯಸುತ್ತದೆ? ಎಂದು ಚೀನಾ ಕೇಳಿದೆ.
ಇದಲ್ಲದೆ, ಇತ್ತೀಚೆಗೆ ಕೆಲವು ಚೀನೀ ಕಂಪನಿಗಳ ಮೇಲೆ ಭಾರತ ನಿರ್ಬಂಧ ವಿಧಿಸಿರವ ಬಗ್ಗೆ ಪ್ರತಿಕ್ರಿಯಿಸಿದ ಚೀನಾ, ಭಾರತವು ತನ್ನ ಮಾರುಕಟ್ಟೆಯನ್ನು ಜಗತ್ತಿಗೆ ಸಂಪೂರ್ಣವಾಗಿ ತೆರೆಯುವಲ್ಲಿ ಹಿಂಜರಿಯುತ್ತಿದೆ. ಆದರೆ 1947ರ ನಂತರದ ಇತಿಹಾಸವು ಭಾರತವು ಪ್ರತಿ ಬಾರಿ ಸುಧಾರಣೆ ಮತ್ತು ಆರ್ಥಿಕ ಉದಾರೀಕರಣವನ್ನು ಉತ್ತೇಜಿಸುತ್ತದೆ ಎಂದು ಹೇಳುತ್ತದೆ. ಆರ್ಥಿಕ ಬೆಳವಣಿಗೆಗೆ ಬಲವಾದ ಪ್ರಚೋದನೆಯನ್ನು ನಿಡುತ್ತಿದೆ ಎಂದು ಹೇಳಿದೆ.
ಭಾರತವು ತನ್ನ ಆರ್ಥಿಕತೆಯನ್ನು ಸುಧಾರಿಸಲು, ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಮತ್ತು ವಿದೇಶಿ ಹೂಡಿಕೆದಾರರಿಗೆ ನ್ಯಾಯಯುತ ವ್ಯಾಪಾರ ವಾತಾವರಣವನ್ನು ಒದಗಿಸಲು G20 ಅಧ್ಯಕ್ಷ ಸ್ಥಾನವನ್ನು ಬಳಸಿಕೊಳ್ಳಬೇಕು ಮತ್ತು ಕ್ರಮೇಣ ಈ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಚೀನಾ ಹೇಳಿದೆ.
ಇದನ್ನು ಓದಿ: ಕೇಂದ್ರದ ಬಿಜೆಪಿ ಸರಕಾರ ಬಡವರ ವಿರೋಧಿ, ಅವರಿಗೆ ಮಾನವೀಯತೆ ಇಲ್ಲ: ಸಿಎಂ ಸಿದ್ದರಾಮಯ್ಯ


