ರ‍್ಯಾಪಿಡೋ ಚಾಲಕನಿಗೆ ಅಡ್ಡಗಟ್ಟಿದ ಪ್ರತಿಭಟನಾಕಾರರು ಪ್ರಯಾಣಿಕನಿಗೆ ಮತ್ತು ಚಾಲಕನಿಗೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಚಾಲುಕ್ಯ ಸರ್ಕಲ್ ಫ್ಲೈಓವರ್ ಮೇಲೆ ಬರುತ್ತಿದ್ದ ರ‍್ಯಾಪಿಡೋ ಚಾಲಕನನ್ನು ತಡೆದು ಆಟೋ ಚಾಲಕರು ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಲು ಮುಂದಾದ ಪ್ರಯಾಣಿಕನಿಗೂ ಚಾಲಕರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರನ್ನು ಚದುರಿಸಿದ್ದಾರೆ. ಹಲ್ಲೆಗೊಳಗಾದವರನ್ನು ಅಲ್ಲಿಂದ ಕಳುಹಿಸಿದ್ದಾರೆ.
ಮೌರ್ಯ ಸರ್ಕಲ್‌ನಲ್ಲಿ ಟ್ಯಾಕ್ಸಿ ಚಾಲಕನಿಗೆ ಕೆಲವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ರ‍್ಯಾಪಿಡೋ ಚಾಲಕನನ್ನು ಸ್ಕೂಟರ್‌ನಿಂದ ಕೆಳಗಿಳಿಸಿ ಹಲ್ಲೆ ನಡೆಸಿ, ಸ್ಕೂಟರ್‌ನ್ನು ಹಾನಿಗೈದಿದ್ದಾರೆ.
ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ವತಿಯಿಂದ ಕಳೆದ ರಾತ್ರಿ 12 ಗಂಟೆಯಿಂದ ಇಂದು ರಾತ್ರಿ 12ರವೆರೆಗೆ ಬಂದ್ ಘೋಷಿಸಲಾಗಿತ್ತು. ಸರಕಾರ ಜಾರಿಗೊಳಿಸಿರುವ ‘ಶಕ್ತಿ ಯೋಜನೆ’ಯಿಂದ ಖಾಸಗಿ ಸಾರಿಗೆ ಉದ್ಯಮಕ್ಕಾಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು. ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು ಅಥವಾ ರಸ್ತೆ ತೆರಿಗೆ ರದ್ದು ಮಾಡಬೇಕು. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸಬೇಕು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಇಂದು ಬೆಂಗಳೂರು ಬಂದ್‍ಗೆ ಕರೆ ನೀಡಿತ್ತು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನಗರದ ಫ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿದ್ದ ಖಾಸಗಿ ವಾಹನ ಸಂಘಟನೆಗಳ ಸದಸ್ಯರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಭರವಸೆಗಳನ್ನು ಈಡೇರಿಸುವ ಭರವಸೆ ನೀಡಿದರು. ಈ ಹಿನ್ನೆಲೆ ಖಾಸಗಿ ಸಾರಿಗೆ ಒಕ್ಕೂಟ ಬಂದ್ ಕೈ ಬಿಟ್ಟಿದೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ರಾಮಲಿಂಗಾರೆಡ್ಡಿ ಅವರು, ಸಂಘಟನೆಗಳ ಬೇಡಿಕೆ ಆಲಿಸಿ ಬಳಿಕ ಮಾತನಾಡಿದ್ದು, ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟಗಳ ಬಹುತೇಕ ಬೇಡಿಕೆ ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.
ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ನಿಗಮ ಮಂಡಳಿಯನ್ನು ಮಾಡುತ್ತೇವೆ. ಅವರ ಸಮಸ್ಯೆಗಳು ಈ ಸರ್ಕಾರ ಬಂದಾಗಿನಿಂದ ಇರೋದಲ್ಲ ಹಿಂದಿನಿಂದಲೂ ಇದೆ. ಆದರೆ ಶಕ್ತಿ ಯೋಜನೆಯಿಂದ ಸಮಸ್ಯೆಯಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಓಲಾ-ಊಬರ್ ಕುರಿತ 4 ಕೇಸ್‌ಗಳು ಕೋರ್ಟ್‌ನಲ್ಲಿವೆ. ವಕೀಲರೊಂದಿಗೆ ಈ ಬಗ್ಗೆ ಚರ್ಚಿಸಿ ಬೇಗ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಇದರ ಜೊತೆ ಬೈಕ್ ಟ್ಯಾಕ್ಸಿ ಕೇಸ್ ಸಹ ಕೋರ್ಟ್‌ನಲ್ಲಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಇದನ್ನು ಓದಿ: ಬೆಂಗಳೂರು ಬಂದ್’ ವಾಪಸ್ ಪಡೆದ ಖಾಸಗಿ ವಾಹನ ಸಂಘಟನೆಗಳು


