ಡಿಎಂಕೆ ನಾಯಕ ಹಾಗೂ ಸಿಎಂ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ‘ಸನಾತನ ಧರ್ಮ’ದ ಕುರಿತು ನೀಡಿದ ಹೇಳಿಕೆಗೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಮುಂಬೈನ ಮೀರಾ ರೋಡ್ ಪೊಲೀಸರು ಐಪಿಸಿ ಸೆಕ್ಷನ್ 153ಎ ಮತ್ತು 295ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿರುವ ಉದಯನಿಧಿ ಸ್ಟಾಲಿನ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿ ತಮಿಳುನಾಡಿನ ಬಿಜೆಪಿ ನಿಯೋಗವು ಮಂಗಳವಾರ ರಾಜ್ಯ ಪೊಲೀಸರಿಗೆ ಜ್ಞಾಪಕ ಪತ್ರವನ್ನು ನೀಡಿದೆ.
ಈ ಹಿಂದೆ ಚೆನ್ನೈನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ತಮಿಳುನಾಡಿನ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಉದಯನಿಧಿ ಅವರು ಸನಾತನ ಧರ್ಮದ ವಿರುದ್ಧ ವಾಗ್ದಾಳಿ ನಡೆಸಿದರು. ಸನಾತನ ಧರ್ಮ ಎನ್ನುವುದು “ಡೆಂಗ್ಯೂ, ಮಲೇರಿಯಾ, ಜ್ವರ ಮತ್ತು ಕರೋನಾ” ಇದ್ದಂತೆ ಅದನ್ನು ಕೇವಲ ವಿರೋಧಿಸಬಾರದು, ನಿರ್ಮೂಲನೆ ಮಾಡಬೇಕು ಎಂದು ಅವರು ಹೇಳಿದರು.
ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಗೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದ ಸಚಿವರಿಗೆ ಸೂಚಿಸಿದ ನಂತರ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಪ್ರಧಾನಿಯವರಿಂದ ಇಂತಹ ಪ್ರತಿಕ್ರಿಯೆಯನ್ನು ಕೇಳಲು ಬೇಸರವಾಗಿದೆ ಎಂದು ಹೇಳಿದ್ದರು.
”ಗೌರವಾನ್ವಿತ ಪ್ರಧಾನ ಮಂತ್ರಿಗಳು ಸರಿಯಾದ ಮಾಹಿತಿಗಳನ್ನು ಪಡೆಯಲು ಎಲ್ಲಾ ಮೂಲಗಳು ಅವರ ಬಳಿ ಇದ್ದಾಗಲೂ ಅವರು ಉದಯನಿಧಿಯವರ ಬಗ್ಗೆ ಹರಡಿರುವ ಸುಳ್ಳುಗಳನ್ನು ನಂಬಿಕೊಂಡು ಮಾತನಾಡುತ್ತಿದ್ದಾರೋ ಅಥವಾ ಅವರು ಎಲ್ಲವನ್ನೂ ತಿಳಿದುಕೊಂಡೇ ಹಾಗೆ ಮಾಡುತ್ತಾರೋ?” ಎಂದು ಸ್ಟಾಲಿನ್ ಪ್ರಶ್ನಿಸಿದ್ದರು.
ಪ್ರಧಾನ ಮಂತ್ರಿಯವರು ಭಾರತ ಮೈತ್ರಿಯಿಂದ ಗಲಿಬಿಲಿಗೊಂಡಿದ್ದಾರೆ ಎಂದು ಪ್ರತಿಪಾದಿಸಿದ ಸ್ಟಾಲಿನ್, ಬಿಜೆಪಿಯು ಸನಾತನ ಸಂಸ್ಥೆಯಲ್ಲಿನ ತಾರತಮ್ಯದ ಆಚರಣೆಗಳ ಬಗ್ಗೆ ನಿಜವಾದ ಕಾಳಜಿಯನ್ನು ಹೊಂದಿಲ್ಲ ಆದರೆ ಪ್ರತಿಪಕ್ಷಗಳ ಮೈತ್ರಿಯೊಳಗೆ ವಿಭಜನೆಯನ್ನು ಸೃಷ್ಟಿಸಲು ಹತಾಶವಾಗಿದೆ ಎಂದು ಹೇಳಿದರು. ಇದನ್ನು ರಾಜಕೀಯ ಗಿಮಿಕ್ ಎಂದು ಗುರುತಿಸಲು ರಾಜಕೀಯ ಪ್ರತಿಭೆ ಬೇಕಾಗಿಲ್ಲ ಎಂದು ಅವರು ಹೇಳಿದ್ದರು.
ತಮ್ಮ ಪುತ್ರ ಸಂಪುಟ ಸಹೋದ್ಯೋಗಿಯೂ ಆಗಿರುವ ಉದಯನಿಧಿ ಸ್ಟಾಲಿನ್ ಅವರ ‘ಸನಾತನ ಧರ್ಮ’ದ ಕುರಿತಾದ ಹೇಳಿಕೆಗಳನ್ನು ಸಿಎಂ ಎಂಕೆ ಸ್ಟಾಲಿನ್ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸನಾತನ ವಿವಾದ: ಪುತ್ರನ ಹೇಳಿಕೆ ಸಮರ್ಥಿಸಿಕೊಂಡ ಸ್ಟಾಲಿನ್, ಪ್ರಧಾನಿ ಪ್ರತಿಕ್ರಿಯೆಗೆ ಆಕ್ಷೇಪ


