”ಕನ್ನಡಿಗರ ಮೇಲೆ ಹಿಂದಿ ನುಡಿಯನ್ನು ಹೇರುವುದು ಕ್ರೌರ್ಯ. ಇದು ಮೋಸದಿಂದ ಕನ್ನಡ ಜನಾಂಗದ ಮೇಲೆ ಹೂಡಲಾಗಿರುವ ಪರೋಕ್ಷ ಯುದ್ಧ. ದೇಶ ಯಾವತ್ತಿಗೂ ಒಂದಾಗಿರಬೇಕೆಂದು ಬಯಸುವುದಾದರೆ ಹಿಂದಿ ಹೇರಿಕೆಯನ್ನು ಕೂಡಲೇ ನಿಲ್ಲಿಸಬೇಕು, ಹಿಂದಿ ಹೇರಿಕೆ ದೇಶದ ಐಕ್ಯತೆಗೆ ಮಾರಕವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿ ಹೇರಿಕೆ ವಿಚಾರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ”ಹಿಂದಿ ಹೇರಿಕೆಯ ಕ್ರೂರ ಪರಿಣಾಮಗಳನ್ನು ನಾವು ಈಗಾಗಲೇ ನಮ್ಮ ಬ್ಯಾಂಕು, ಅಂಚೆ ಕಚೇರಿಗಳಲ್ಲಿ, ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ, ಹೆದ್ದಾರಿಗಳಲ್ಲಿ ನೋಡುತ್ತಿದ್ದೇವೆ. ಹೀಗೇ ಬಿಟ್ಟರೆ ಹಿಂದಿಯಲ್ಲೇ ಮಾತನಾಡಬೇಕು ಎಂದು ಆದೇಶ ಹೊರಡಿಸಿದರೂ ಆಶ್ಚರ್ಯವಿಲ್ಲ. ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು” ಎಂದು ಎಚ್ಚರಿಸಿದ್ದಾರೆ.
”ನಾವು ಯಾವ ನುಡಿಯ ವಿರೋಧಿಗಳೂ ಅಲ್ಲ. ಅವರವರಿಗೆ ಅವರವರ ನುಡಿಗಳು ಹೆಚ್ಚು. ನಿಮ್ಮ ಮೇಲೆ ನಮ್ಮ ನುಡಿಯನ್ನು ನಾವು ಹೇರಿಲ್ಲ. ನಮ್ಮ ಮೇಲೆ ನಿಮ್ಮ ನುಡಿಯನ್ನು ಹೇರಬೇಡಿ. ನಮಗೆ ಇಷ್ಟವಾದ ನುಡಿ ಕಲಿಯುತ್ತೇವೆ. ಹಿಂದಿಯನ್ನೇ ಕಲಿಯಬೇಕು ಎಂಬ ಹೇರಿಕೆ ಮಾಡಬೇಡಿ” ಎಂದು ಕಿಡಿಕಾರಿದ್ದಾರೆ.
”ಭಾರತ ಸಂವಿಧಾನದಲ್ಲಿ ಹಿಂದಿ ನುಡಿಗೆ ನೀಡಿರುವ ಹೆಚ್ಚುಗಾರಿಕೆಯನ್ನು ನಿಲ್ಲಿಸಬೇಕು. ಹಿಂದಿಗೆ ಹೆಚ್ಚುಗಾರಿಕೆ ನೀಡುವುದೆಂದರೆ ಹಿಂದಿ ಭಾಷಿಕರಿಗೆ ಹೆಚ್ಚುಗಾರಿಕೆ ನೀಡುವುದು. ಹೀಗಾದಾಗ ಎಲ್ಲರೂ ಸಮಾನರೆಂಬ ಸಂವಿಧಾನದ ಮೂಲ ಆಶಯವೇ ಈಡೇರುವುದಿಲ್ಲ. ಎಲ್ಲ ನುಡಿಗಳೂ ಸಮಾನವಾಗಬೇಕು” ಎಂದು ಹೇಳಿದರು.
”ಒಕ್ಕೂಟ ಸರ್ಕಾರ ಇದೇ ರೀತಿ ಹಿಂದಿ ಹೇರಿಕೆ ಮುಂದುವರೆಸಿದರೆ ಭಾರತದ ಒಗ್ಗಟ್ಟಿನ ಬೇರೇ ಸಡಿಲವಾಗುತ್ತದೆ. ಈ ಹೇರಿಕೆಯಿಂದ ಹಿಂದಿಯೇತರರಲ್ಲಿ ಅಭದ್ರತಾ ಭಾವ ನೆಲೆಸುತ್ತಿದೆ. ಇದು ಒಳ್ಳೆಯ ಸೂಚನೆ ಅಲ್ಲ. ಭಾರತ ಒಂದಾಗಿರಬೇಕೆಂದರೆ ಎಲ್ಲರಿಗೂ ಸಮಾನ ಹಕ್ಕು ಅವಕಾಶಗಳಿರಬೇಕು” ಎಂದಿದ್ದಾರೆ.
”ಕನ್ನಡಿಗರ ಮೇಲೆ ಹಿಂದಿ ನುಡಿಯನ್ನು ಹೇರುವುದು ಕ್ರೌರ್ಯ. ಇದು ಮೋಸದಿಂದ ಕನ್ನಡ ಜನಾಂಗದ ಮೇಲೆ ಹೂಡಲಾಗಿರುವ ಪರೋಕ್ಷ ಯುದ್ಧ. ದೇಶ ಯಾವತ್ತಿಗೂ ಒಂದಾಗಿರಬೇಕೆಂದು ಬಯಸುವುದಾದರೆ ಹಿಂದಿ ಹೇರಿಕೆಯನ್ನು ಕೂಡಲೇ ನಿಲ್ಲಿಸಬೇಕು. ಹಿಂದಿಹೇರಿಕೆ ದೇಶದ ಐಕ್ಯತೆಗೆ ಮಾರಕ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ಕನ್ನಡಿಗರ ತೆರಿಗೆ ಹಣದಿಂದ ಹಿಂದಿ ದಿವಸ ಆಚರಣೆ ಎಷ್ಟು ಸರಿ? ಉತ್ತರದ ರಾಜ್ಯಗಳಲ್ಲಿ ಎಂದಾದರೂ ಕನ್ನಡ ದಿವಸವನ್ನು ಆಚರಿಸಿದ್ದಾರೆಯೇ? ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಯಾಕೆ? ಹಿಂದಿ ರಾಜ್ಯಗಳಲ್ಲಿ ಹಿಂದಿ ದಿವಸ ಆಚರಿಸಿಕೊಳ್ಳಿ. ಕನ್ನಡ ನಾಡಿನಲ್ಲಿ ನಿಮ್ಮ ಆಚರಣೆ ಬೇಕಿಲ್ಲ” ಎಂದು ವಿರೋಧ ವ್ಯಕ್ತಪಡಿಸಿದರು.
”ಹಿಂದಿ ಎಂಬುದು ಹಿಂದೂಸ್ತಾನಿ, ಉರ್ದು, ಪರ್ಶಿಯನ್, ಸಂಸ್ಕೃತ ನುಡಿಗಳಿಂದ ಸಂಕರಗೊಂಡ ಕೃತಕ ನುಡಿ. ಅದಕ್ಕೆ ಯಾವ ಇತಿಹಾಸವೂ ಇಲ್ಲ. ಅದಕ್ಕೊಂದು ಸಾಂಸ್ಕೃತಿಕ ಪರಂಪರೆಯೂ ಇಲ್ಲ. ನಮಗೆ ನಮ್ಮ ಶ್ರೀಮಂತ ಕನ್ನಡವೇ ರಾಷ್ಟ್ರನುಡಿ. ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
”ದಕ್ಷಿಣದ ರಾಜ್ಯಗಳಿಗೆ ಯಾವ ರೀತಿಯೂ ಸಂಬಂಧವಿಲ್ಲದ ಹಿಂದಿಯನ್ನು ಬಲವಂತವಾಗಿ ನಮ್ಮ ಶಿಕ್ಷಣದಲ್ಲಿ ತರಲಾಯಿತು. ಕನ್ನಡದ ಮಕ್ಕಳಿಗೆ ಬಲವಂತವಾಗಿ ಕಲಿಸಲಾಯಿತು. ಹಿಂದಿ ದೇಶದ ರಾಷ್ಟ್ರಭಾಷೆ ಎಂದು ಸುಳ್ಳು ಹೇಳಿಕೊಡಲಾಯಿತು. ಇಷ್ಟು ದೊಡ್ಡ ದ್ರೋಹವನ್ನು ಬ್ರಿಟಿಷರೂ ಮಾಡಿರಲಿಲ್ಲ” ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
”ಕನ್ನಡಿಗರು ಯಾವ ಕಾರಣಕ್ಕೆ ಕಡ್ಡಾಯವಾಗಿ ಹಿಂದಿ ಕಲಿಯಬೇಕು? ಉತ್ತರದ ರಾಜ್ಯಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸುತ್ತಿಲ್ಲ ಯಾಕೆ? ಇಷ್ಟನ್ನು ಅರ್ಥ ಮಾಡಿಕೊಂಡರೆ ಹಿಂದಿಹೇರಿಕೆಯ ಹುನ್ನಾರ ಅರ್ಥವಾಗುತ್ತದೆ. ನಮ್ಮನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡುವುದೇ ಹಿಂದಿ ಹೇರಿಕೆಯ ಸಂಚು” ಎಂದು ಹೇಳಿದ್ದಾರೆ.
”ಕನ್ನಡಿಗರಿಗೆ, ಕನ್ನಡ ನುಡಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಾವು ಯಾರ ಅಡಿಯಾಳೂ ಅಲ್ಲ. ನಮಗೆ ನಮ್ಮದೇ ಆದ ಸಂಸ್ಕೃತಿ ಪರಂಪರೆ ಇದೆ. ಹಿಂದಿ ನುಡಿಯ ಯಜಮಾನಿಕೆ ನಮಗೆ ಬೇಕಿಲ್ಲ. ಒಕ್ಕೂಟ ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಹಿಂದಿ ಹೇರಿಕೆ ನಿಲ್ಲಿಸಬೇಕು” ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಹಿಂದಿ ಕಲಿಕೆ ಬಗ್ಗೆ ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿಕೆ; ಹಿಂದಿ ಹೇರಿಕೆಗಾಗಿ ಇತಿಹಾಸವನ್ನೇ ತಿರುಚುವುದೇ?


