ಮಂಗಳವಾರ ಸಂಸತ್ತಿನ ನೂತನ ಕಟ್ಟಡದಲ್ಲಿ ನಡೆದ ಮೊದಲ ದಿನದ ವಿಶೇಷ ಅಧಿವೇಶನದಲ್ಲಿ ಬಹುಕಾಲದ ಬೇಡಿಕೆಯ ಮಸೂದೆ ಮಂಡನೆಯಾಗಿದೆ. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸುವ ‘ನಾರಿ ಶಕ್ತಿ ವಂದನ ಅಧಿನಿಯಮ’ (ಮಹಿಳಾ ಮೀಸಲಾತಿ ಮಸೂದೆ) ಇದಾಗಿದೆ. ಈ ಮಸೂದೆಯ ಬಗ್ಗೆ ಇದೀಗ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
”ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಸ್ಥಾನಗಳನ್ನು ಮೀಸಲಿಡುವ ಮಸೂದೆಯಲ್ಲಿ ಇತರ ಹಿಂದುಳಿದ ವರ್ಗಗಳ ಮಹಿಳೆಯರ ಕೋಟಾವನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
”ಒಟ್ಟು ಮಹಿಳಾ ಸ್ಥಾನಗಳಲ್ಲಿ ಅರ್ಧದಷ್ಟು ಭಾಗವನ್ನು ಪರಿಶಿಷ್ಟ ಜಾತಿ/ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಿಗೆ, ಮುಸ್ಲಿಂ ಸಮುದಾಯದ ಹಿಂದುಳಿದ ಮಹಿಳೆಯರಿಗೆ ಮೀಸಲಿಡಬೇಕು” ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮಂಗಳವಾರ ಮುಂಜಾನೆ ಈ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಬಿಜೆಪಿ ಸರ್ಕಾರ ಲೋಕಸಭಲ್ಲಿ ಮಂಡಿಸಿದೆ. ಮಸೂದೆಯ ಅನ್ವಯ ಮುಂದಿನ 15 ವರ್ಷಗಳ ಅವಧಿಗೆ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟಿರುವ ಸ್ಥಾನಗಳಿಗೂ ಇದು ಅನ್ವಯಿಸುತ್ತದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಉಮಾಭಾರತಿ, ”ಮಹಿಳಾ ಮೀಸಲಾತಿ ಮಸೂದೆ ಮಂಡಿಸಿರುವ ಬಗ್ಗೆ ಸಂತಸವಿದೆ. ಆದರೆ ಇತರ ಹಿಂದುಳಿದ ವರ್ಗದವರಿಗೆ ಸ್ಥಾನ ಮೀಸಲಿಡದಿರುವುದು ಬೇಸರ ತಂದಿದೆ. ಇತರ ಹಿಂದುಳಿತ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಖಾತರಿಪಡಿಸದಿದ್ದರೆ, ಬಿಜೆಪಿ ಬಗ್ಗೆ ಅವರಿಗೆ ಇರುವ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಅವರು, ”ಶಾಸನಸಭೆಗಳಲ್ಲಿ ಶೇಕಡ 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನಿಗದಿಪಡಿಸುವುದು ವಿಶೇಷ ಹಕ್ಕು. ಈ ಶೇಕಡ 33ರಷ್ಟು ಸ್ಥಾನಗಳಲ್ಲಿ ಅರ್ಧದಷ್ಟನ್ನು ಎಸ್ಸಿ/ಎಸ್ಟಿ ಮತ್ತು ಇತರ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಿಡಬೇಕು” ಎಂದು ಒತ್ತಾಯಿಸಿದ್ದಾರೆ. ಪಂಚಾಯತ್ ರಾಜ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ವಿಶೇಷ ಮೀಸಲಾತಿಯ ಅವಕಾಶ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣೆಗೆ ಮೊದಲು ಮಹಿಳೆಯರನ್ನು ಮೂರ್ಖರನ್ನಾಗಿಸುವ ಮಸೂದೆ: ಎಎಪಿ


