‘ಸನಾತನ ಧರ್ಮವೊಂದೇ ಧರ್ಮ, ಉಳಿದೆಲ್ಲವು ಪಂಗಡಗಳು ಮತ್ತು ಪೂಜಾ ವಿಧಾನಗಳಿಗೆ ಮಾತ್ರ’ ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿವಾದ ಸೃಷ್ಟಿಸಿದ್ದಾರೆ.
ಗೋರಖನಾಥ ದೇಗುಲದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ”ಸನಾತನ ಧರ್ಮವೊಂದೇ ಧರ್ಮ, ಉಳಿದೆಲ್ಲ ಪಂಗಡಗಳು ಮತ್ತು ಆರಾಧನಾ ವಿಧಾನಗಳು, ಸನಾತನವು ಮಾನವೀಯತೆಯ ಧರ್ಮವಾಗಿದ್ದು, ಅದರ ಮೇಲೆ ದಾಳಿ ನಡೆಸಿದರೆ ಅದು ಜಗತ್ತಿನಾದ್ಯಂತ ಮಾನವೀಯತೆಗೆ ಬಿಕ್ಕಟ್ಟು ಸೃಷ್ಟಿಸುತ್ತದೆ” ಎಂದು ಹೇಳಿದ್ದಾರೆ.
ಇತ್ತೀಚೆಗೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಡೆಂಗ್ಯೂಗೆ ಹೋಲಿಸಿ ನೀಡಿದ ಹೇಳಿಕೆಯ ನಂತರ ಸಿಎಂ ಯೋಗಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
”ಸಣ್ಣ ಮನಸ್ಸಿನವರಿಗೆ ಇದರ ಅಗಾಧತೆ ಅರ್ಥವಾಗುವುದಿಲ್ಲ ಮತ್ತು ಅದನ್ನು ಅರ್ಥಮಾಡಿಕೊಳ್ಳಲು ಹೆಣಗಾಡುತ್ತಾರೆ” ಎಂದು ಸಿಎಂ ಯೋಗಿ ಹೇಳಿದ್ದಾರೆ.
ಉದಯನಿಧಿ ಸ್ಟಾಲಿನ್ ಹೇಳಿಕೆ
ಸನಾತನ ಧರ್ಮ ಎಂಬುದು ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಟೀಕಿಸಿದ್ದರು. ಹೇಗೆ ಈ ರೋಗಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲವೂ ಅದನ್ನು ಬುಡಸಮೇತ ನಿರ್ಮೂಲನೆ ಮಾಡಬೇಕೋ ಹಾಗೆಯೇ ಸನಾತನ ಧರ್ಮವನ್ನು ವಿರೋಧಿಸಿ ಪ್ರಯೋಜನವಿಲ್ಲ ಅದನ್ನು ಇಲ್ಲದಂತೆ ಮಾಡಬೇಕು ಎಂದು ಹೇಳಿದ್ದರು. ಈ ಹೇಳಿಕೆಯು ದೇಶಾದ್ಯಂತ ಗದ್ದಲವನ್ನು ಸೃಷ್ಟಿ ಮಾಡಿತ್ತು.
ಉದಯ್ ನಿಧಿ ಸ್ಟಾಲಿನ್ ಹೇಳಿಕೆಗೆ ಬಿಜೆಪಿ ನಾಯಕರು ಮುಗಿಬಿದ್ದು ಟೀಕೆ ಮಾಡಿದರು. ಹಲವುಕಡೆಗಳಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದರು. ಆದರೆ ಉದಯನಿಧಿ ಸ್ಟಾಲಿನ್ ಅವರು ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ.
ಇದನ್ನೂ ಓದಿ: ‘ಸನಾತನ ಧರ್ಮ ನಿರ್ಮೂಲನೆ’: ಉದಯನಿಧಿ ಸ್ಟಾಲಿನ್‌ಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂ


