ರಾಗಿಗುಡ್ಡದಲ್ಲಿ ಮಿಲಾದುನ್ನಬಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ಬಳಿಕ ನಡೆದ ಬೆಳವಣಿಗೆಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮುಸ್ಲಿಮ್ ಯುವಕ ಮೃತಪಟ್ಟಿದ್ದಾನೆ ಎಂದು ಹೇಳುವ ಧ್ವನಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಇದು ಸುಳ್ಳು, ಇಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾದ್ಯಮಗಳಿಗೆ ಸ್ಪಷ್ಟನೆ ನೀಡಿದ ಎಸ್ಪಿ ಮಿಥುನ್ ಕುಮಾರ್, ರಾಗಿಗುಡ್ಡದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿ ಕೊಡಬೇಡಿ. ಪೊಲೀಸರಿಂದ ಎನ್‌ಕೌಂಟರ್ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಮೆಸೇಜ್ ಹಾಕಿದವರ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದೆ ಎಂದು ತಿಳಿಸಿದರು.
ಇದಲ್ಲದೆ ರಾಗಿಗುಡ್ಡದಲ್ಲಿ ಮಿಲಾದುನ್ನಬಿ ಮೆರವಣಿಗೆ ವೇಳೆ ಒಮ್ನಿ ವಾಹನಗಳಲ್ಲಿ ಬಂದು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ ಎಸ್ಪಿ, ಒಮ್ನಿ ವಾಹನದಲ್ಲಿ ಬಂದವರು ದಾವಣಗೆರೆ ಜಿಲ್ಲೆ ನ್ಯಾಮತಿಯವರು. ವಾಹನದಲ್ಲಿ ಮುಸ್ಲಿಮರು ಮಾತ್ರವಲ್ಲ ಹಿಂದೂಗಳು ಇದ್ದರು. ಎಲ್ಲರೂ ಸ್ನೇಹಿತರು. ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ನೋಡಲು ಬಂದವರು ರಾಗಿಗುಡ್ಡಕ್ಕೂ ಬಂದಿದ್ದಾರೆ. ಅಲ್ಲಿ ಗಲಾಟೆ ಆರಂಭವಾಗುತ್ತಿದ್ದಂತೆ ಅವರೆಲ್ಲರೂ ಊರಿಗೆ ವಾಪಾಸ್ಸು ಹೋಗಿದ್ದಾರೆ ಎಂದು ಹೇಳಿದ್ದಾರೆ.
ಶಿವಮೊಗ್ಗದ ರಾಗಿಗುಡ್ಡದಲ್ಲಿ ಮೀಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಘಟನೆಯ ಬೆನ್ನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.
ನಿಷೇಧಾಜ್ಞೆ ಸಂದರ್ಭ ಐದು ಜನರಿಗಿಂತಲು ಹೆಚ್ಚು ಜನರು ಗುಂಪುಗೂಡುವುದು ಮತ್ತು ಓಡಾಡುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಮೆರವಣಿಗೆ, ಪ್ರತಿಭಟನೆ, ಸಭೆ, ಸಮಾರಂಭಗಳಿಗೆ ಅವಕಾಶ ನಿರಾಕರಿಸಲಾಗಿದೆ.
ಮಿಲಾದುನ್ನಬಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಮತ್ತು ನಗರದಲ್ಲಿ ಶಾಂತಿ ಮರುಸ್ಥಾಪನೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ: ಶಿವಮೊಗ್ಗ: ಮೀಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ


